ಪಂಚತಂತ್ರ – ಅಪರೀಕ್ಷಿತಕಾರಕ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

Panchatantra Book

[ಪಂಚತಂತ್ರ ಮುಖಪುಟ, ತಂತ್ರ 1. ಮಿತ್ರಭೇದ, ತಂತ್ರ 2. ಮಿತ್ರಸಂಪ್ರಾಪ್ತಿ, ತಂತ್ರ 3. ಕಾಕೋಲೂಕೀಯ, ತಂತ್ರ 4. ಲಬ್ಧಪ್ರಣಾಶ, ತಂತ್ರ 5. ಅಪರೀಕ್ಷಿತಕಾರಕ]

ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದ ಮೊದಲನೆಯ ನುಡಿ ಹೀಗಿದೆ – “ಸರಿಯಾಗಿ ನೋಡದ, ಸರಿಯಾಗಿ ತಿಳಿಯದ, ಸರಿಯಾಗಿ ಕೇಳದ ಮತ್ತು ಸರಿಯಾಗಿ ಪರಿಶೀಲಿಸದ ಕಾರ್ಯವನ್ನು ಕ್ಷೌರಿಕನು ಹೇಗೆ ಮಾಡಿದನೋ ಹಾಗೆ ಮನುಷ್ಯನು ಮಾಡಬಾರದು”

panchatantra-aparikshitakaraka-wm

ಧನಲೋಭಿಯಾದ ಬ್ರಾಹ್ಮಣಕುಮಾರನು ನಿಧಿಯನ್ನು ಹುಡುಕುತ್ತಾ ದಾರಿತಪ್ಪಿ ತಲೆಯಲ್ಲಿ ಚಕ್ರವನ್ನು ಹೊತ್ತವನ ಬಳಿ ನೀರಿಗಾಗಿ ಕೇಳುತ್ತಿರುವುದು – ಚಿತ್ರ – Kum. Drashti Piyusha Patel

ಅಪರೀಕ್ಷಿತಕಾರಕದ ಕಥೆಯು ಹೀಗೆ ಕೇಳಿಬರುತ್ತದೆ – ದಕ್ಷಿಣದೇಶದಲ್ಲಿ ಪಾಟಲೀಪುತ್ರ ಎಂಬ ನಗರವಿದೆ. ಅಲ್ಲಿ ಮಣಿಭದ್ರ ಎಂಬ ಶ್ರೇಷ್ಠಿಯು (ವ್ಯಾಪಾರಿ) ವಾಸಿಸುತ್ತಿದ್ದನು. ಅವನು ಧರ್ಮ, ಅರ್ಥ, ಕಾಮ ಹಾಗೂ ಮೋಕ್ಷಗಳ ನಿಮಿತ್ತವಾಗಿ ಕೆಲಸಗಳನ್ನು ಮಾಡುತ್ತಿದ್ದರೂ ಕೂಡ ವಿಧಿವಶದಿಂದ ಧನವನ್ನು ಕಳೆದುಕೊಂಡನು. ಹಣವನ್ನು ಕಳೆದುಕೊಂಡು ಉಂಟಾದ ಅಪಮಾನದಿಂದ ಅವನು ಬಹಳ ದುಃಖಗೊಂಡನು.

ಒಮ್ಮೆ ರಾತ್ರಿ ಮಲಗಿಕೊಂಡು ಅವನು ಚಿಂತಿಸಿದನು – “ಈ ಬಡತನಕ್ಕೆ ಧಿಕ್ಕಾರವಿರಲಿ. ಉತ್ತಮ ಚರಿತ್ರೆ, ಪವಿತ್ರತೆ, ಸಹನೆ, ಸೌಜನ್ಯ, ಮಧುರನುಡಿ – ಇವೆಲ್ಲವೂ ಹಣವಿಲ್ಲದವನಲ್ಲಿ ಶೋಭಿಸುವುದಿಲ್ಲ. ಪುರುಷನು ಧನರಹಿತನಾದಾಗ ಆತನ ಗೌರವ, ದರ್ಪ, ಕೌಶಲ, ಭ್ರಾಂತಿ ಮತ್ತು ಸದ್ಬುದ್ಧಿ – ಇವೆಲ್ಲವೂ ಒಮ್ಮೆಲೇ ನಾಶವಾಗುತ್ತವೆ. ವಸಂತ ಋತುವಿನ ಗಾಳಿಯ ಚಲನೆಯಿಂದ ಹೇಗೆ ಶಿಶಿರ ಋತುವಿನ ಶೋಭೆಯು ಕ್ರಮೇಣ ನಾಶವಾಗುತ್ತದೆಯೋ, ಹಾಗೇ ಬುದ್ಧಿವಂತನ ಬುದ್ಧಿಯೂ ಕೂಡ ದಾರಿದ್ರ್ಯ ಬಂದಾಗ ಕುಟುಂಬಪೋಷಣೆಯ ಚಿಂತೆಯಿಂದ ಪ್ರತಿದಿನವೂ ಕ್ಷೀಣಿಸುತ್ತದೆ. ಮಹಾಬುದ್ಧಿವಂತನಾದವನ ಬುದ್ಧಿಯೂ ಕೂಡ ಸತತವಾಗಿ ತುಪ್ಪ, ಉಪ್ಪು, ಎಣ್ಣೆ, ಅಕ್ಕಿ, ವಸ್ತ್ರ, ಇಂಧನ ಮುಂತಾದವುಗಳ ಚಿಂತೆಯಿಂದ ನಾಶವಾಗುತ್ತದೆ. ಧನವಿಲ್ಲದವನ ಮನೆಯು ಅಂದವಾಗಿದ್ದರೂ ನಕ್ಷತ್ರಗಳಿಲ್ಲದ ಆಕಾಶದಂತೆ, ಒಣಗಿದ ಸರೋವರದಂತೆ, ಭಯಂಕರವಾದ ಸ್ಮಶಾನದಂತೆ ಅಪ್ರಿಯವಾಗಿರುತ್ತದೆ. ನೀರಿನಲ್ಲಿ ಮೂಡಿ ಕೂಡಲೇ ನಾಶಹೊಂದುವ ನೊರೆಯಂತೆ ಹಣವಿಲ್ಲದವರು ಎದುರಿಗೆ ನಿಂತಿದ್ದರೂ ಯಾರ ಗಮನಕ್ಕೂ ಬರುವುದಿಲ್ಲ. ಲೋಕದಲ್ಲಿ ಜನರು ಸತ್ಕುಲಜಾತ, ಬುದ್ಧಿವಂತ ಹಾಗೂ ಸಜ್ಜನನನ್ನು ಬಿಟ್ಟು, ಈ ಯಾವ ಗುಣಗಳೂ ಇಲ್ಲದ ಧನಿಕನಲ್ಲಿ, ಕಲ್ಪತರುವಿನಲ್ಲಿ ಅನುರಕ್ತರಾಗುವಂತೆ ಅನುರಕ್ತರಾಗುತ್ತಾರೆ. ಈ ಲೋಕದಲ್ಲಿ ಪೂರ್ವಜನ್ಮದ ಪುಣ್ಯಫಲಗಳು ವ್ಯರ್ಥ ಏಕೆಂದರೆ ವಿದ್ಯಾವಂತರು ಹಾಗೂ ಉತ್ತಮಕುಲಜಾತರೂ ಕೂಡ ಯಾರಲ್ಲಿ ಹಣವಿದೆಯೋ ಅವರ ದಾಸರಾಗುತ್ತಾರೆ. ಇಷ್ಟಬಂದ ಹಾಗೆ ಮತ್ತು ವ್ಯರ್ಥವಾಗಿ ಗರ್ಜನೆಯನ್ನು ಮಾಡುತ್ತಿರುವ ಸಮುದ್ರವನ್ನು ‘ಇದು ನೀಚವಾದದ್ದು’ ಎಂದು ಲೋಕವು ಹೇಳುವುದಿಲ್ಲ. ಹಾಗೆಯೇ ಧನಿಕರು ಏನೆಲ್ಲಾ ಅನುಚಿತವನ್ನು ಮಾಡಿದರೂ ಅವರು ಪ್ರಶಂಸನೀಯರೆ.”

ಹೀಗೆ ಯೋಚಿಸಿ ಮಣಿಭದ್ರನು ಮತ್ತೆ ಚಿಂತಿಸಿದನು – “ಆದ್ದರಿಂದ ನಾನು ಉಪವಾಸಮಾಡಿ ಪ್ರಾಣವನ್ನು ತ್ಯಜಿಸುವೆನು. ಈ ವ್ಯರ್ಥ ಜೀವನದಿಂದೇನು ಪ್ರಯೋಜನ ?”

ಹೀಗೆ ನಿಶ್ಚಯವನ್ನು ಮಾಡಿ ಮಲಗಿದನು. ಆಗ ಅವನಿಗೆ ಕನಸಿನಲ್ಲಿ ಪದ್ಮನಿಧಿಯು (ಸಂಪತ್ತನ್ನು ಕರುಣಿಸುವ ಒಂದು ಧನದೇವ ವಿಶೇಷ) ಜೈನಸಂನ್ಯಾಸಿಯ ರೂಪದಲ್ಲಿ ದರ್ಶನವನ್ನು ಕೊಟ್ಟು ನುಡಿದನು – “ಎಲೈ ಶ್ರೇಷ್ಠಿ, ವೈರಾಗ್ಯವನ್ನು ಹೊಂದಬೇಡ. ನಾನು ನಿನ್ನ ಪೂರ್ವಜರು ಸಂಪಾದಿಸಿದ ಪದ್ಮವೆಂಬ ನಿಧಿ. ಈ ವೇಷದಲ್ಲಿಯೇ ನಾನು ಬೆಳಗ್ಗೆ ನಿನ್ನ ಮನೆಗೆ ಬರುವೆನು. ಆಗ ನೀನು ದೊಣ್ಣೆಯಿಂದ ನನ್ನ ತಲೆಗೆ ಹೊಡೆಯಬೇಕು. ಆಗ ನಾನು ಚಿನ್ನಮಯವಾಗಿ ಅಕ್ಷಯನಿಧಿಯಾಗುವೆನು.”

ಬೆಳಗ್ಗೆ ಎದ್ದು ಸ್ವಪ್ನದ ವಿಚಾರದ ಬಗ್ಗೆ ಚಿಂತಿಸತೊಡಗಿದನು – “ಈ ಕನಸು ನಿಜವಾಗುತ್ತದೋ ಅಥವಾ ಸುಳ್ಳಾಗುತ್ತದೋ ಗೊತ್ತಿಲ್ಲ. ಅಥವಾ ಇದು ಅವಶ್ಯವಾಗಿ ಸುಳ್ಳೇ ಆಗಬಹುದು ಏಕೆಂದರೆ ನಾನು ಹಗಲುರಾತ್ರಿ ಕೇವಲ ದುಡ್ಡಿನ ಬಗ್ಗೆಯೇ ಚಿಂತಿಸುತ್ತಿರುತ್ತೇನೆ. ರೋಗಗ್ರಸ್ತ, ಶೋಕಪೀಡಿತ, ಚಿಂತಾಗ್ರಸ್ತ, ಕಾಮಪೀಡಿತ ಮತ್ತು ನಶೆಯಲ್ಲಿರುವ ಮನುಷ್ಯನ ಕನಸು ಫಲಿಸುವುದಿಲ್ಲವೆಂದು ಹೇಳುತ್ತಾರೆ.”

ಈ ಮಧ್ಯೆ ಅವನ ಹೆಂಡತಿ ಕಾಲುಗಳಗೆ ಮದರಂಗಿಯನ್ನು ಹಚ್ಚಿಸಿಕೊಳ್ಳಲು ಕರೆದಿದ್ದ ಕ್ಷೌರಿಕನು ಬಂದನು. ಅಷ್ಟರಲ್ಲಿ ಸ್ವಪ್ನದಲ್ಲಿ ಹೇಳಿದಂತೆ ಒಬ್ಬ ಜೈನ ಸಂನ್ಯಾಸಿಯು ಕೂಡ ಬಂದನು.

ಸಂನ್ಯಾಸಿಯನ್ನು ನೋಡಿ ಸಂತೋಷದಿಂದ ಮಣಿಭದ್ರನು ಮರದ ಕೋಲಿನಿಂದ ಅವನ ತಲೆಗೆ ಹೊಡೆದನು. ಅವನು ದೇಹವೆಲ್ಲಾ ಚಿನ್ನವಾಗಿ ನೆಲದ ಮೇಲೆ ಬಿದ್ದನು. ಆಗ ಶ್ರೇಷ್ಠಿಯು ಚಿನ್ನವನ್ನು ಮನೆಯಲ್ಲಿ ಭದ್ರಗೊಳಿಸಿ, ಕ್ಷೌರಿಕನನ್ನು ಉಪಚರಿಸಿ ಹೇಳಿದನು – “ನಾನು ಕೊಡುವ ಈ ಧನವನ್ನು ಮತ್ತು ವಸ್ತ್ರವನ್ನು ತೆಗೆದುಕೋ, ಎಲೈ ಭದ್ರನೇ, ಈ ವೃತ್ತಾಂತವನ್ನು ಯಾರಿಗೂ ಹೇಳಬೇಡ”

ಕ್ಷೌರಿಕನು ತನ್ನ ಮನೆಗೆ ಹೋಗಿ ಚಿಂತಿಸಿದನು – “ನಿಜವಾಗಿಯೂ ಈ ಎಲ್ಲಾ ದಿಗಂಬರರು ತಲೆಗೆ ಕೋಲಿನಲ್ಲಿ ಹೊಡೆದಾಗ ಚಿನ್ನವಾಗುವರು. ಆದ್ದರಿಂದ ನಾನು ಬೆಳಗ್ಗೆಯೇ ಅನೇಕರನ್ನು ಆಹ್ವಾನಿಸಿ ತಲೆಗೆ ಕೋಲಿನಿಂದ ಹೊಡೆಯುವೆನು. ಅವರೆಲ್ಲರೂ ಸುವರ್ಣಮಯರಾದಾಗ ನಾನು ತುಂಬಾ ಚಿನ್ನವನ್ನು ಪಡೆಯುವೆನು.”

ಹೀಗೆ ಯೋಚಿಸುತ್ತಾ ಬಹಳ ಕಷ್ಟದಿಂದ ರಾತ್ರಿಯನ್ನು ಕಳೆದನು. ಬೆಳಗ್ಗೆ ಎದ್ದು ದಪ್ಪವಾದ ದೊಣ್ಣೆಯನ್ನು ಸಿದ್ಧಪಡಿಸಿಟ್ಟು ಜೈನವಿಹಾರಕ್ಕೆ ತೆರಳಿ, ಜೈನಮುನಿಗೆ ಮೂರು ಪ್ರದಕ್ಷಿಣೆ ಹಾಕಿ ಮಂಡಿಯೂರಿ ನಮಸ್ಕರಿಸಿ, ಉತ್ತರೀಯದಿಂದ ತನ್ನ ಬಾಯನ್ನು ಮುಚ್ಚಿಕೊಂಡು ಜೋರಾಗಿ ಈ ಶ್ಲೋಕವನ್ನು ಪಠಿಸಿದನು – “ಚೌಳುಮಣ್ಣಿನಲ್ಲಿ (ಉಪ್ಪುಮಿಶ್ರಿತ ಮಣ್ಣು) ಹಾಕಿದ ಬೀಜವು ಹೇಗೆ ಮೊಳಕೆಯೊಡೆಯುವುದಿಲ್ಲವೋ ಹಾಗೆ ಎಂದೂ ಮನಸ್ಸಿನಲ್ಲಿ ಕಾಮೋತ್ಪತ್ತಿಯಾಗದ, ಕೇವಲ ಜ್ಞಾನದಲ್ಲೇ ನಿರತರಾದ ಜಿನಮುನಿಗಳಿಗೆ ಜಯವಾಗಲಿ. ಜಿನಮುನಿಯನ್ನು ಸ್ತುತಿಸುವ ನಾಲಿಗೆಯೇ ನಿಜವಾದ ನಾಲಿಗೆ, ಜಿನನಲ್ಲಿ ಲೀನವಾಗಿರುವ ಚಿತ್ತವೇ ನಿಜವಾದ ಚಿತ್ತವಿದ್ದಂತೆ, ಜಿನನನ್ನು ಪೂಜಿಸುವ ಕರಗಳೇ ಶ್ಲಾಘನೀಯವು.”

ಹೀಗೆ ಸ್ತುತಿಸಿ ಪ್ರಧಾನ ಜಿನ ಸಂನ್ಯಾಸಿಯ ಬಳಿಗೆ ಹೋಗಿ ಅಡ್ಡಬಿದ್ದು “ನಮಸ್ಕಾರ, ವಂದಿಸುವೆನು.” ಎಂದು ಹೇಳಿ ‘ಧರ್ಮವೃದ್ಧಿಯಾಗಲಿ’ ಎಂಬ ಆಶೀರ್ವಾದವನ್ನು ಪಡೆದು ಅನುಗ್ರಹಮಾಲೆ ಹಾಗೂ ವ್ರತದೀಕ್ಷೆಯನ್ನು ಪಡೆದು, ಉತ್ತರೀಯದಲ್ಲಿ ಗಂಟುಕಟ್ಟಿಕೊಂಡು ವಿನಯಪೂರ್ವಕವಾಗಿ ನುಡಿದನು – “ಪೂಜ್ಯನೇ, ಇಂದಿನ ಭೋಜನವನ್ನು  ಎಲ್ಲಾ ಮುನಿಗಳೊಂದಿಗೆ ನನ್ನ ಮನೆಯಲ್ಲಿ ಮಾಡಿರಿ”

ಮುನಿಯು ನುಡಿದನು – “ಎಲೈ ಭಕ್ತನೇ, ಧರ್ಮವನ್ನು ಬಲ್ಲವನಾಗಿ ಹೀಗೇಕೆ ನುಡಿಯುವೆ ? ನಾವು ಬ್ರಾಹ್ಮಣರಿಗೆ ಸಮಾನರೇನು ನಮ್ಮನ್ನು ಹೀಗೆ ಆಮಂತ್ರಿಸಲು ? ನಾವು ಯಾವಾಗಲೂ ಊಟದ ಸಮಯದಲ್ಲಿ ಅಲೆಯುತ್ತಾ ಯಾರಾದರೂ ಜಿನಭಕ್ತನು ಕಾಣಿಸಿದರೆ ಅವನ ಮನೆಗೆ ಹೋಗುವೆವು. ಆತನು ಬಹಳ ಒತ್ತಾಯ ಮಾಡಿದರೆ ದೇಹಕ್ಕೆ ಬೇಕಾಗುವಷ್ಟು ಆಹಾರವನ್ನು ಮಾತ್ರ ತೆಗೆದುಕೊಳ್ಳುವೆವು. ಆದ್ದರಿಂದ ಈಗ ಹೋಗು, ಮತ್ತೆಂದೂ ಹೀಗೆ ನುಡಿಯಬೇಡ”

ಅದನ್ನು ಕೇಳಿ ಕ್ಷೌರಿಕ – “ಪೂಜ್ಯನೆ, ನಾನು ನಿಮ್ಮ ಧರ್ಮವನ್ನು ಬಲ್ಲೆ. ನಿಮ್ಮನ್ನು ಅನೇಕ ಭಕ್ತರು ಆಹ್ವಾನಿಸುತ್ತಾರೆ. ಅಲ್ಲದೆ ನಾನು ಪುಸ್ತಕಗಳನ್ನು ಮುಚ್ಚಲು ಬಳಸುವ ಅನೇಕ ಬಹುಮೂಲ್ಯವಾದ ವಸ್ತ್ರಗಳನ್ನು ಸಂಗ್ರಹಿಸಿದ್ದೇನೆ. ಮತ್ತು ಪುಸ್ತಕಗಳನ್ನು ಬರೆಯುವ ಲೇಖಕರಿಗೆ ಕೊಡಲು ಹಣವನ್ನು ಸಂಗ್ರಹಿಸಿಟ್ಟಿದ್ದೇನೆ. ಆದ್ದರಿಂದ ನೀವು ಸಮಯೋಚಿತವಾದುದನ್ನು ಮಾಡಿರಿ”

ನಂತರ ಕ್ಷೌರಿಕನು ಮನೆಗೆ ತೆರಳಿದನು. ಅವನು ಕಗ್ಗಲಿಮರದ ದೊಣ್ಣೆಯನ್ನು ಸಿದ್ಧಪಡಿಸಿಕೊಂಡು, ದ್ವಾರದ ಎರಡೂ ಬಾಗಿಲುಗಳನ್ನು ಮುಚ್ಚಿಕೊಂಡು ಮಧ್ಯಾಹ್ನದ ಸಮಯದಲ್ಲಿ ಮತ್ತೆ ಜಿನವಿಹಾರದ ದ್ವಾರದಲ್ಲಿ ನಿಂತು ಕ್ರಮವಾಗಿ ಹೊರಗೆ ಬರುತ್ತಿದ್ದ ಸಂನ್ಯಾಸಿಗಳನ್ನು ಆಗ್ರಹದಿಂದ ಮನೆಗೆ ಬರಲು ಪ್ರಾರ್ಥಿಸಿಕೊಂಡನು. ಅವರು ವಸ್ತ್ರ ಹಾಗೂ ಧನದ ಲೋಭದಿಂದ ಪರಿಚಿತ ಭಕ್ತರನ್ನು ಬಿಟ್ಟು ಸಂತೋಷದಿಂದ ಅವನ ಹಿಂದೆ ಹೊರಟರು.

ಈ ಕೆಲ ನುಡಿಗಳು ಈ ಸಂದರ್ಭಕ್ಕೆ ಸೂಕ್ತವಾಗಿವೆ – ಏಕಾಂಗಿಯಾಗಿ, ಮನೆಯನ್ನು ಬಿಟ್ಟಿರುವ, ಕೈಯನ್ನೇ ಭಿಕ್ಷಾಪಾತ್ರೆಯಾಗಿ ಬಳಸುವ, ದಿಗಂಬರನಾದವನನ್ನೂ ಕೂಡ ಈ ಲೋಕದಲ್ಲಿ ಲೋಭದಿಂದ ವಶಪಡಿಸಿಕೊಳ್ಳಬಹುದು ಎಂಬ ಕೌತುಕವನ್ನು ನೋಡು! ಮನುಷ್ಯನಿಗೆ ವಯಸ್ಸಾದಾಗ ಕೂದಲುಗಳು ಹಣ್ಣಾಗುತ್ತವೆ, ಹಲ್ಲುಗಳು ಉದುರುತ್ತವೆ ಮತ್ತು ದೃಷ್ಟಿಯು ಮಾಸುತ್ತದೆ ಆದರೆ ಲೊಭ ಮಾತ್ರ ಎಂದಿಗೂ ಯೌವನಾವಸ್ಥೆಯಲ್ಲಿಯೇ ಇರುತ್ತದೆ.

ನಂತರ ಅವರನ್ನು ಮನೆಯೊಳಗೆ ಕರೆದೊಯ್ದು, ಬಾಗಿಲನ್ನು ಗಟ್ಟಿಯಾಗಿ ಮುಚ್ಚಿ, ದೊಣ್ಣೆಯಿಂದ ಅವರ ತಲೆಗೆ ಹೊಡೆದನು. ಅವರಲ್ಲಿ ಕೆಲವರು ಸತ್ತು ಹೋದರು, ಮತ್ತೆ ಕೆಲವರ ತಲೆ ತುಂಡಾಯಿತು ಮತ್ತು ಅವರು ಅರಚಿಕೊಳ್ಳಲು ಪ್ರಾರಂಭಿಸಿದರು.

ಅವರ ಆಕ್ರಂದನವನ್ನು ಕೇಳಿ ನಗರರಕ್ಷಕನು ಹೇಳಿದನು – “ಎಲೈ ಭಟರೆ, ನಗರಮಧ್ಯದಲ್ಲಿ ಏನಿದು ಮಹಾ ಕೋಲಾಹಲ ? ಹೋಗಿ ನೋಡಿ”

ಅವರೆಲ್ಲರೂ ಅವನ ಆದೇಶದಂತೆ ಅವನೊಂದಿಗೆ ಆ ಮನೆಗೆ ಓಡಿಬಂದು ನೋಡಿದಾಗ ದೇಹವೆಲ್ಲಾ ರಕ್ತಮಯವಾಗಿ ಓಡಿಹೋಗುತ್ತಿದ್ದ ದಿಗಂಬರರನ್ನು ನೋಡಿ ಏನಿದೆಂದು ಕೇಳಿದರು. ಆಗ ಅವರು ಕ್ಷೌರಿಕನು ಮಾಡಿದ ಎಲ್ಲವನ್ನೂ ಹೇಳಿದರು. ಭಟರು ಕ್ಷೌರಿಕನನ್ನು ಬಂಧಿಸಿ ಬದುಕುಳಿದ ಸಂನ್ಯಾಸಿಗಳೊಂದಿಗೆ ನ್ಯಾಯಾಲಯಕ್ಕೆ ಕರೆದೊಯ್ದರು.

ನ್ಯಾಯಾಧೀಶರು ಕ್ಷೌರಿಕನನ್ನು ಕೇಳಿದರು – “ಎಂತಹ ದುಷ್ಕೃತ್ಯವನ್ನು ಮಾಡಿರುವೆ ?”

ಕೌರಿಕನು  “ಏನು ಮಾಡಲಿ ? ಶ್ರೇಷ್ಠಿ ಮಣಿಭದ್ರನ ಮನೆಯಲ್ಲೂ ಹೀಗೆಯೇ ಮಾಡಿದ್ದನ್ನು ನೋಡಿದೆ” ಎಂದು ಹೇಳಿ ಮಣಿಭದ್ರದ ಮನೆಯಲ್ಲಿ ನೋಡಿದೆಲ್ಲವನ್ನೂ ಹೇಳಿದನು.

ಆಗ ಅವರು ಮಣಿಭದ್ರನನ್ನು ಕರೆಸಿ ಕೇಳಿದರು – “ಎಲೈ ಶ್ರೇಷ್ಠಿಯೇ, ನೀನು ಯಾರಾದರೂ ಜಿನಸಂನ್ಯಾಸಿಯನ್ನು ಕೊಂದೆಯಾ ? “

ಆಗ ಅವನು ತನ್ನ ಮನೆಯಲ್ಲಾದ ಜಿನಮುನಿಯ ವೃತ್ತಾಂತವನ್ನು ನಿವೇದಿಸಿಕೊಂಡನು. ಆಗ ನ್ಯಾಯಾಧೀಶರು ಹೇಳಿದರು – “ವಿಚಾರಿಸದೇ ಕೆಲಸವನ್ನು ಮಾಡಿದ ಈ ದುಷ್ಟಾತ್ಮ ಕ್ಷೌರಿಕನನ್ನು ಶೂಲಕ್ಕೇರಿಸಿರಿ”

ಹಾಗೆ ಮಾಡಿದ ಮೇಲೆ ಅವರು ಮತ್ತೆ ನುಡಿದರು – “ಸರಿಯಾಗಿ ನೋಡದ, ಸರಿಯಾಗಿ ತಿಳಿಯದ, ಸರಿಯಾಗಿ ಕೇಳದ ಮತ್ತು ಸರಿಯಾಗಿ ಪರಿಶೀಲಿಸದ ಕಾರ್ಯವನ್ನು ಕ್ಷೌರಿಕನು ಹೇಗೆ ಮಾಡಿದನೋ ಹಾಗೆ ಮನುಷ್ಯನು ಮಾಡಬಾರದು

ಮಣಿಭದ್ರ ಅದು ಏಕೆಂದು ಕೇಳಿದಾಗ ಆ ಧರ್ಮಾಧಿಕಾರಿಗಳು ಬ್ರಾಹ್ಮಣಿ – ಮುಂಗುಸಿಯ ಕಥೆಯನ್ನು ಹೇಳಿದರು.

ಕಥೆಯನ್ನು ಮುಗಿಸಿದ ಧರ್ಮಾಧಿಕಾರಿಗಳು – “ಆದ್ದರಿಂದಲೇ ನಾವು ಸರಿಯಾಗಿ ನೋಡದ, ಸರಿಯಾಗಿ ತಿಳಿಯದ… ಎಂಬುದಾಗಿ ಹೇಳಿದ್ದು” ಎಂದರು.

ಮಣಿಭದ್ರ ಹೇಳಿದನು – “ನೀವು ಹೇಳಿದ್ದು ಸತ್ಯ, ನೀವು ಸರಿಯಾಗಿ ಉಪದೇಶವನ್ನು ಮಾಡಿದಿರಿ. ಈಗ ನನಗೆ ಮನೆಗೆ ಹೋಗಲು ಅನುಮತಿಯನ್ನು ನೀಡಿರಿ.”

ಧರ್ಮಾಧಿಕಾರಿಗಳು – “ನಿನ್ನ ಮನೆಗೆ ಹೋಗು, ಆದರೆ ಏಕಾಂಗಿಯಾಗಿ ಹೋಗಬೇಡ. ಸ್ವಾದಿಷ್ಟವಾದುದನ್ನು ಒಬ್ಬನೇ ತಿನ್ನಬಾರದು. ಎಲ್ಲರೂ ಮಲಗಿರುವಾಗ ಒಬ್ಬನೇ ಎದ್ದಿರಬಾರದು. ಒಬ್ಬನೇ ಯಾತ್ರೆಯನ್ನು ಮಾಡಬಾರದು ಮತ್ತು ಒಂದು ವಿಚಾರದ ಬಗ್ಗೆ ಒಬ್ಬನೇ ವಿಚಾರಮಾಡಬಾರದು. ಅಂಜುಬುರುಕನಾದರೂ ಮತ್ತೊಬ್ಬನನ್ನು ಕರೆದುಕೊಂಡು ಹೋಗುವುದು ದಾರಿಯಲ್ಲಿ ಕ್ಷೇಮಕರವಾಗಿರುತ್ತದೆ. ಏಡಿಯು ತನ್ನನ್ನು ಕರೆದುಕೊಂಡು ಹೋದ ಬ್ರಾಹ್ಮಣನ ಜೀವವನ್ನು ರಕ್ಷಿಸಿತು.”

ಮಣಿಭದ್ರನು ಅದೇನೆಂದು ಕೇಳಲು ಧರ್ಮಾಧಿಕಾರಿಗಳು ಬ್ರಾಹ್ಮಣ ಮತ್ತು ಏಡಿಯ ಕಥೆಯನ್ನು ಹೇಳಿದರು.

ಕಥೆಯನ್ನು ಮುಗಿಸಿದ ಧರ್ಮಾಧಿಕಾರಿಗಳು – “ಆದ್ದರಿಂದಲೇ ನಾವು ಅಂಜುಬುರುಕನಾದರೂ ಮತ್ತೊಬ್ಬನನ್ನು ಕರೆದುಕೊಂಡು … ಎಂಬುದಾಗಿ ಹೇಳಿದ್ದು” ಎಂದರು.

ಮಣಿಭದ್ರನು ಅವರ ಉಪದೇಶವನ್ನು ಕೇಳಿ, ಅವರ ಅನುಮತಿಯನ್ನು ಪಡೆದು, ಒಬ್ಬ ಸಹಾಯಕನೊಂದಿಗೆ ತನ್ನ ಮನೆಗೆ ಹೋಗಿ ಬಹಳ ಕಾಲ ಭೋಗಗಳನ್ನು ಅನುಭವಿಸುತ್ತಾ ಸುಖದಿಂದ ಇದ್ದನು.

*** ಇಲ್ಲಿಗೆ ವಿಷ್ಣುಶರ್ಮವಿರಚಿತ ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕವು ಸಂಪೂರ್ಣವಾಯಿತು ***

One Response to ಪಂಚತಂತ್ರ – ಅಪರೀಕ್ಷಿತಕಾರಕ

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: