5-1-ಬ್ರಾಹ್ಮಣಿ – ಮುಂಗುಸಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ದೇವಶರ್ಮ ಎಂಬ ಬ್ರಾಹ್ಮಣನು ವಾಸಿಸುತ್ತಿದ್ದನು. ಅವನ ಹೆಂಡತಿ ಗರ್ಭವತಿಯಾಗಿ ಮಗನನ್ನು ಹೆತ್ತಳು. ಅದೇ ದಿನ ಒಂದು ಮುಂಗುಸಿಯು ಮರಿಯನ್ನು ಹೆತ್ತು ಸತ್ತುಹೋಯಿತು. ಪುತ್ರನ ಮೇಲಿನ ಅನುರಾಗವುಳ್ಳ ಅವಳು ಆ ಮುಂಗುಸಿಯ ಮರಿಗೂ ಕೂಡ ಎದೆಹಾಲನ್ನು ಕುಡಿಸಿ, ಅಭ್ಯಂಗ ಸ್ನಾನ ಮುಂತಾದವುಗಳನ್ನು ಮಾಡಿ ಪೋಷಿಸಿದಳು. ಆದರೆ ಮುಂಗುಸಿಯಲ್ಲಿ ಅವಳು ನಂಬಿಕೆಯನ್ನು ಇಟ್ಟಿರಲಿಲ್ಲ. ಎಲ್ಲಾ ಸ್ನೇಹಗಳಿಗಿಂತ ತನ್ನ ಪುತ್ರನ ಸ್ನೇಹವು ಹೆಚ್ಚಾಗಿರುತ್ತದೆ. ಹಾಗಾಗಿ ಅವಳು ನಿರಂತರ ಹೀಗೆ ಶಂಕಿಸುತ್ತಿದ್ದಳು – “ಎಂದಾದರೂ ಈ ಮುಂಗುಸಿಯು ತನ್ನ ಜಾತಿಯ ಸ್ವಭಾವಕ್ಕನುಗುಣವಾಗಿ ನನ್ನ ಮಗನಿಗೆ ಕಚ್ಚುವುದು ಮುಂತಾದ ಅನಿಷ್ಟವನ್ನು ಮಾಡಬಹುದು.”

ಪುತ್ರನು ಕೆಟ್ಟವನಾಗಿರಲಿ, ವಿನಯವಿಲ್ಲದವನಾಗಿರಲಿ, ಕುರೂಪನಾಗಿರಲಿ, ಮೂರ್ಖನಾಗಿರಲಿ ಅಥವಾ ದುರ್ವ್ಯಸನಿಯಾಗಿರಲಿ, ಮನುಷ್ಯರಿಗೆ ತಮ್ಮ ಪುತ್ರನು ಸದಾ ಮನಸ್ಸಿಗೆ ಆನಂದದಾಯಕನಾಗಿರುತ್ತಾನೆ. ಗಂಧದ ಸ್ಪರ್ಶವು ಎಲ್ಲರಿಗೂ ತಂಪನ್ನುಂಟುಮಾಡುತ್ತದೆಂದು ಲೋಕವು ಹೇಳುತ್ತದೆ. ಆದರೆ ಪುತ್ರನ ಮೈ ಸ್ಪರ್ಶವು ಗಂಧಕ್ಕಿಂತ ತಂಪು. ಮಿತ್ರರ, ತಂದೆಯ, ಹಿತೈಷಿಗಳ ಅಥವಾ ಪಾಲಕರ ಸ್ನೇಹ ಬಂಧನಕ್ಕಿಂತ ಜನರು ಪುತ್ರನ ಸ್ನೇಹ ಬಂಧನವನ್ನು ಬಯಸುತ್ತಾರೆ.

ಒಮ್ಮೆ ಅವಳು ಮಗನನ್ನು ಹಾಸಿಗೆಯಲ್ಲಿ ಮಲಗಿಸಿ ನೀರಿನ ಬಿಂದಿಗೆಯನ್ನು ತೆಗೆದುಕೊಂಡು ಗಂಡನಿಗೆ ಹೇಳಿದಳು – “ಬ್ರಾಹ್ಮಣನೇ, ನೀರಿಗಾಗಿ ನಾನು ಸರೋವರಕ್ಕೆ ಹೋಗುತ್ತೇನೆ. ಮುಂಗುಸಿಯಿಂದ ಪುತ್ರನನ್ನು ರಕ್ಷಿಸು”. ಅವಳು ಹೋದನಂತರ ಬ್ರಾಹ್ಮಣನು ಮನೆಯನ್ನು ಖಾಲಿ ಬಿಟ್ಟು ಭಿಕ್ಷಾಟನೆಗಾಗಿ ಎಲ್ಲಿಗೋ ಹೋದನು. ಈ ಮಧ್ಯೆ ವಿಧಿವಶದಿಂದ ಕೃಷ್ಣಸರ್ಪವೊಂದು ಬಿಲದಿಂದ ಹೊರಗೆ ಬಂತು. ಮುಂಗುಸಿಯು ಹಾವು ತನ್ನ ಸಹಜ ವೈರಿಯೆಂದು ತಿಳಿದು, ಸೋದರನನ್ನು ರಕ್ಷಿಸಲು ಸರ್ಪದ ಜೊತೆ ಕಾಳಗವನ್ನು ಮಾಡಿ ಅದನ್ನು ತುಂಡು ಮಾಡಿತು.

ನಂತರ ಬಾಯೆಲ್ಲಾ ರಕ್ತಮಯವಾದ ಮುಂಗುಸಿಯು ತಾನು ಮಾಡಿದ ಕಾರ್ಯವನ್ನು ತಾಯಿಗೆ ತಿಳಿಸಲು ಆನಂದದಿಂದ ಅವಳ ಎದುರಿಗೆ ಹೋಯಿತು. ತಾಯಿಯು ಮುಂಗುಸಿಯ ರಕ್ತದಿಂದ ಕೂಡಿದ ಬಾಯಿಯನ್ನು ನೋಡಿ ಶಂಕಿಸಿ ‘ಈ ದುಷ್ಟ ಖಂಡಿತವಾಗಿಯೂ ನನ್ನ ಮಗನನ್ನು ತಿಂದಿದೆ’ ಎಂದು ಯೋಚಿಸಿ ಕೋಪದಿಂದ ಅದರ ಮೇಲೆ ನೀರಿನ ಬಿಂದಿಗೆಯನ್ನು ಎಸೆದಳು. ಹೀಗೆ ಮುಂಗುಸಿಯನ್ನು ಕೊಂದು ಅಳುತ್ತಾ ಅವಳು ಮನೆಗೆ ಬಂದಾಗ ಅವಳ ಮಗನು ಹಿಂದೆ ಮಲಗಿದ್ದಂತೆಯೇ ಅಲ್ಲಿಯೇ ಮಲಗಿದ್ದನು. ಸಮೀಪದಲ್ಲಿ ಕೃಷ್ಣಸರ್ಪವು ತುಂಡಾಗಿ ಬಿದ್ದಿರುವುದನ್ನು ನೋಡಿ ಪುತ್ರನನ್ನು ಕೊಂದ ಶೋಕದಿಂದ ಎದೆ ಬಡಿದುಕೊಳ್ಳಲಾರಂಭಿಸಿದಳು.

ಬ್ರಾಹ್ಮಣನು ಭಿಕ್ಷೆಯನ್ನು ಸಂಪಾದಿಸಿ ಹಿಂದಿರುಗಿ ಬಂದು ನೋಡಿದಾಗ ಪುತ್ರಶೋಕದಿಂದ ಬ್ರಾಹ್ಮಣಿಯು ಪ್ರಲಾಪಿಸಿದಳು – “ಎಲೈ ಲೋಭಿಯೇ, ಲೋಭದ ವಶದಿಂದ ನೀನು ನನ್ನ ಮಾತನ್ನು ನೆರವೇರಿಸಲಿಲ್ಲ. ಈಗ ಪುತ್ರನು ಸತ್ತ ರೂಪದಲ್ಲಿರುವ ವೃಕ್ಷದ ಫಲವನ್ನು ಅನುಭವಿಸು. ಅಥವಾ ಈ ನುಡಿಯು ಯೋಗ್ಯವಾಗಿದೆ – ‘ಅತಿಲೋಭವನ್ನು ಮಾಡಬಾರದು, ಆದರೆ ಲೋಭವನ್ನು ಬಿಡಲೂ ಬಾರದು. ಅತಿಲೋಭದಿಂದ ಕೂಡಿದವನ ತಲೆಯಲ್ಲಿ ಚಕ್ರವು ತಿರುಗುತ್ತದೆ’”

ಬ್ರಾಹ್ಮಣನು ಅದೇನೆಂದು ಕೇಳಲು ಅವಳು ಲೋಭದಿಂದ ಕೂಡಿದ ಚಕ್ರಧರನ ಕಥೆಯನ್ನು ಹೇಳಿದಳು.

ಕಥೆಯನ್ನು ಮುಗಿಸಿದ ಬ್ರಾಹ್ಮಣಿಯು ಮತ್ತೆ ಬ್ರಾಹ್ಮಣನಿಗೆ ಹೇಳಿದಳು – “ನೀನು ಕೂಡ ಅತಿಯಾದ ಲೋಭದಿಂದ ನಾನು ಹೇಳಿದ ಮಾತನ್ನು (ಮಗುವನ್ನು ನೋಡಿಕೊಂಡಿರು ಎಂದು ಅವಳು ಗಂಡನಿಗೆ ಹೇಳಿ ಹೋಗಿದ್ದಳು) ಕೇಳಲಿಲ್ಲ. ಆದ್ದರಿಂದಲೇ ಈ ರೀತಿಯ ಪರಿಸ್ಥಿತಿಯುಂಟಾಯಿತು. ಆದ್ದರಿಂದಲೇ ನಾನು ಅತಿಲೋಭವನ್ನು ಮಾಡಬಾರದು… ಎಂಬುದಾಗಿ ಹೇಳಿದ್ದು.

ಅದನ್ನು ಕೇಳಿ ದೇವಶರ್ಮನು ಹೇಳಿದನು – “ಯಾರ ಮನೆಯಲ್ಲಿ ತಿನ್ನಲು ಏನೂ ಇಲ್ಲವೋ ಅವನು ಜೀವನಾಧಾರಕ್ಕಾಗಿ ಭಿಕ್ಷಾಟನೆಯನ್ನು ಮಾಡಿದರೆ ಅದು ಅತಿಲೋಭಕ್ಕೆ ಕಾರಣವಾಗಲಾರದು. ಪರೀಕ್ಷಿಸಿದೇ ಕೆಲಸವನ್ನು ಮಾಡಿದವಳು ನೀನೇ. ಬಹಳ ಸಮಯದಿಂದ ಪುತ್ರನಂತೆ ಸ್ನೇಹದಿಂದ ನೋಡಿದ, ಸುಖದಿಂದ ಮಲಗಿದ್ದ ನಮ್ಮ ಮಗನನ್ನು ಕೃಷ್ಣಸರ್ಪದಿಂದ ಕಾಪಾಡಿದ ಈ ಮುಂಗುಸಿಯನ್ನು ಏನನ್ನೂ ವಿಚಾರಿಸದೆಯೇ ಕೂಡಲೇ ಕೊಂದು ಹಾಕಿದ ನೀನು ಮಾಡಬಾರದ ಕೆಲಸವನ್ನು ಮಾಡಿಬಿಟ್ಟೆ.”

ಅವಳು ಗಂಡನ ಮಾತನ್ನು ಕೇಳಿ ಅಪರೀಕ್ಷಿತಕಾರಕದ ದೋಷವನ್ನು ಅರಿತು ಮುಂಗುಸಿಗಾಗಿ ಸಂತಾಪಿಸಿ ಬಹಳ ಕಾಲ ಅತ್ತಳು.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: