5-1-1-ಲೋಭದಿಂದ ಕೂಡಿದ ಚಕ್ರಧರನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ನಾಲ್ಕು ಬ್ರಾಹ್ಮಣ ಪುತ್ರರು ಪರಸ್ಪರ ಗೆಳೆತನದಿಂದ ಕೂಡಿ ವಾಸಿಸುತ್ತಿದ್ದರು. ಅವರು ಬಡತನದಿಂದ ಬಳಲಿ ಹೀಗೆ ವಿಚಾರ ಮಾಡಿದರು – “ಅಯ್ಯೋ! ಈ ದಾರಿದ್ರ್ಯಕ್ಕೆ ಧಿಕ್ಕಾರವಿರಲಿ. ಧನಹೀನನಾಗಿ ಬಂಧುಜನಗಳ ಮಧ್ಯೆ ವಾಸಿಸುವುದಕ್ಕಿಂತ, ಹುಲಿ ಆನೆಗಳಿರುವ, ಜನರಿಲ್ಲದೆ ಅನೇಕ ಕಂಟಕಗಳಿರುವ ವನದಲ್ಲಿ ಹುಲ್ಲಿನ ಹಾಸಿಗೆಯಲ್ಲಿ ಮಲಗುತ್ತಾ ನಾರುಬಟ್ಟೆಯನ್ನುಟ್ಟು ಇರುವುದೇ ಮೇಲು. ಹಣವಿಲ್ಲದವನು ಸರಿಯಾಗಿ ಒಡೆಯನ ಸೇವೆಯನ್ನು ಮಾಡಿದರೂ ಒಡೆಯನು ಅವನನ್ನು ದ್ವೇಷಿಸುತ್ತಾನೆ. ಬಾಂಧವರು ಕೂಡಲೇ ಆತನನ್ನು ಬಿಟ್ಟು ತೆರಳುವರು. ಆತನ ಸದ್ಗುಣಗಳು ಶೋಭಿಸುವುದಿಲ್ಲ. ಪುತ್ರರೂ ಆತನನ್ನು ತ್ಯಜಿಸುವರು. ಆತನ ಆಪತ್ತುಗಳು ವರ್ಧಿಸುವವು. ಉತ್ತಮ ಕುಲದಲ್ಲಿ ಜನಿಸಿದ ಒಳ್ಳೆಯವಳಾದ ಹೆಂಡತಿಯೂ ಆತನನ್ನು ಸೇವಿಸುವುದಿಲ್ಲ. ನ್ಯಾಯಮಾರ್ಗದಲ್ಲಿ ನಡೆಯುವ ಮಿತ್ರರೂ ಕೂಡ ಆತನನ್ನು ಬಿಟ್ಟು ಹೋಗುವರು. ಮನುಷ್ಯನು ಶೂರನಾಗಲಿ, ಸುಂದರನಾಗಲಿ, ಸುಭಗನಾಗಲಿ, ಉತ್ತಮ ಮಾತುಗಾರನಾಗಲಿ, ಶಸ್ತ್ರಶಾಸ್ತ್ರಗಳನ್ನು ಬಲ್ಲವನಾಗಲಿ, ಹಣವಿಲ್ಲದೆ ಯಶಸ್ಸು ಮತ್ತು ಗೌರವವನ್ನು ಈ ಲೋಕದಲ್ಲಿ ಎಂದಿಗೂ ಪಡೆಯುವುದಿಲ್ಲ. ಅದೇ ಇಂದ್ರಿಯಗಳು, ಅದೇ ಹೆಸರು, ಎಲ್ಲೆಡೆ ಹರಿಯುವ ಅದೇ ಬುದ್ಧಿ ಮತ್ತು ಅದೇ ಮಾತು – ಆದರೆ ಮನುಷ್ಯನಿಗೆ ಧನದ ಸೌಕರ್ಯವಿಲ್ಲದಿದ್ದರೇ ಅವೆಲ್ಲಾ ಬೇರೆಯಾಗಿಬಿಡುತ್ತವೆ (ಅಂದರೆ ಅವನು ಉಪೇಕ್ಷೆಗೆ ಒಳಗಾಗುತ್ತಾನೆ ಎಂದರ್ಥ) ಎಂಬದೇ ಒಂದು ವಿಚಿತ್ರ. ಆದ್ದರಿಂದ ಹಣಸಂಪಾದನೆಗಾಗಿ ಎಲ್ಲಿಗಾದರೂ ಹೋಗೋಣ.”

ಹೀಗೆ ಸಮಾಲೋಚಿಸಿ ಅವರು ಮಿತ್ರ ಬಾಂಧವರು ಇರುವ ತಮ್ಮ ದೇಶ, ಊರು ಹಾಗೂ ಮನೆಯನ್ನು ಬಿಟ್ಟು ಹೊರಟರು.

ಹೀಗೊಂದು ಉಕ್ತಿಯಿದೆ – “ಯಾರ ಮನಸ್ಸು ಚಿಂತೆಯಿಂದ ವ್ಯಾಕುಲಗೊಂಡಿದೆಯೋ ಅವನು ಸತ್ಯವನ್ನು ತ್ಯಜಿಸುತ್ತಾನೆ, ಬಂಧುವರ್ಗವನ್ನು ಬಿಡುತ್ತಾನೆ, ಜನನಿ ಹಾಗೂ ಜನ್ಮಭೂಮಿಯನ್ನು ಹಾಗೂ (विदेशमभीष्टलोकं ಎಂಬದುದರ ಪ್ರಕಾರ) ಪ್ರಿಯವಾದ ಸ್ಥಾನವನ್ನು ತ್ಯಜಿಸಿ ವಿದೇಶಕ್ಕೆ ತೆರಳುತ್ತಾನೆ. (विदेशमनिष्टलोकं ಎಂಬ ಪಾಠಾಂತರದ ಪ್ರಕಾರ ಇಷ್ಟಜನರಿಲ್ಲದ ವಿದೇಶಕ್ಕೆ ತೆರಳುತ್ತಾನೆ ಎಂದು) ”

ಹೀಗೆ ಹೋಗುತ್ತಿದ್ದಾಗ ಅವಂತೀ ನಗರವನ್ನು ತಲುಪಿದರು. ಅಲ್ಲಿ ಶಿಪ್ರಾನದಿಯಲ್ಲಿ ಮಿಂದು ಅಲ್ಲಿದ್ದ ಮಹಾಕಾಲನಿಗೆ ನಮಿಸಿ ಹೋಗುತ್ತಿದ್ದಾಗ ಭೈರವಾನಂದ ಎಂಬ ಯೋಗಿಯನ್ನು ನೋಡಿದರು. ಅವನಿಗೆ ಬ್ರಾಹ್ಮಣೋಚಿತ ವಿಧಿಯಿಂದ ಸತ್ಕರಿಸಿ ಅವನೊಂದಿಗೆ ಅವನ ಮಠಕ್ಕೆ ಹೋದರು. ಯೋಗಿಯು ಅವರನ್ನು ಕೇಳಿದನು – “ನೀವು ಎಲ್ಲಿಂದ ಬಂದಿರುವಿರಿ ? ಎಲ್ಲಿಗೆ ಹೋಗಿತ್ತಿದ್ದೀರಿ ? ಏನು ಕಾರ್ಯ ? “

ಆಗ ಬ್ರಾಹ್ಮಣ ಪುತ್ರರು ಹೇಳಿದರು – “ನಾವು ಧನದ ಸಿದ್ಧಿಗಾಗಿ ಯಾತ್ರೆಯನ್ನು ಮಾಡುತ್ತಿದ್ದೇವೆ. ಆದ್ದರಿಂದ ಎಲ್ಲಿ ಹಣ ಅಥವಾ ಸಾವು ಪ್ರಾಪ್ತವಾಗುವುದೋ ಅಲ್ಲಿಗೆ ಹೋಗುತ್ತಿದ್ದೇವೆ. ಇದು ನಮ್ಮ ನಿಶ್ಚಯ. ಸಂದರ್ಭ ಬಂದಾಗ ತಮ್ಮ ಶರೀರವನ್ನು ಪಣಕ್ಕಿಡುವ ಸಾಹಸಿ ಪುರುಷರಿಗೆ, ಸಿಗಲು ಕಷ್ಟವಾದ ದ್ರವ್ಯರಾಶಿಯು ದೊರೆಯುತ್ತದೆ. ಆಕಾಶದಿಂದ ಯಾವಾಗಲಾದರೊಮ್ಮೆ ಮಳೆಯು ಸುರಿಯುತ್ತದೆ, ಆದರೆ ಭೂಮಿಯನ್ನು ಅಗೆದರೆ ಪಾತಳದಿಂದ ಕೂಡ ನೀರನ್ನು ಪಡೆಯಬಹುದು. ಭಾಗ್ಯವೇ ಮೇಲು ಎಂದು ಚಿಂತಿಸಬೇಕಿಲ್ಲ, ಪುರುಷಪ್ರಯತ್ನವೂ ಪ್ರಬಲವಾದುದು. ಇಷ್ಟಾರ್ಥ ಸಿದ್ಧಿಯಾಗುವುದು ಪುರುಷಪ್ರಯತ್ನದಿಂದಲೇ. ಭಾಗ್ಯವೆಂದು ಯಾವುದನ್ನು ಹೇಳುವೆಯೋ ಅದು ಕೂಡ ಅದೃಷ್ಟವೆಂಬ ಪುರುಷಗುಣವೇ. ತಮ್ಮ ಪ್ರಾಣವನ್ನು ತೃಣಕ್ಕೆ ಸಮಾನವೆಂದು ಪರಿಗಣಿಸುವ ಸಾಹಸಿಗರ ನಡವಳಿಕೆ ಹಾಗೂ ಉದಾರಹೃದಯಿಗಳ ನಡವಳಿಕೆ ಲೋಕಸಾಮಾನ್ಯ ನಡವಳಿಕೆಗಿಂತ ಹೆಚ್ಚಿನದೆಂದು ನೋಡಲಾಗುತ್ತದೆ. ಶರೀರಕ್ಕೆ ಕ್ಲೇಶವನ್ನು ಕೊಡದೆ ಸುಲಭವಾಗಿ ಸುಖವು ಲಭ್ಯವಾಗುವುದಿಲ್ಲ. ಮಧುಸೂದನನಿಗೆ ಸಮುದ್ರಮಂಥನವನ್ನು ಮಾಡಿ ಆಯಾಸ ಹೊಂದಿದ ಬಾಹುಗಳಿಂದ ಮಾತ್ರ ಲಕ್ಷ್ಮಿಯನ್ನು ಆಲಿಂಗಿಸಿಕೊಳ್ಳುವಂತಾಯಿತು. ಚತುರ್ಮಾಸ ಪರ್ಯಂತ ಸತತವಾಗಿ ನಿದ್ರಿಸುವ ವಿಷ್ಣು ನರಸಿಂಹನ ಪತ್ನಿಯಾದ ಲಕ್ಷ್ಮಿಯೇ ಚಂಚಲಳಾಗಿದ್ದಾಗ ಇನ್ನು ಪುರುಷಪ್ರಯತ್ನವನ್ನು ತ್ಯಜಿಸಿದ ಮಾನವರ ಪಾಡೇನು ? ಎಲ್ಲಿಯವರೆಗೆ ಮನುಷ್ಯನು ಪೌರುಷವನ್ನು ತೋರುವುದಿಲ್ಲವೋ, ಅಲ್ಲಿಯವರೆಗೆ ಅವನಿಗೆ ವಿಜಯಶ್ರೀ ಪ್ರಾಪ್ತವಾಗುವುದಿಲ್ಲ. ಸೂರ್ಯನು ತುಲಾ ರಾಶಿಯನ್ನು ಏರಿದ ಮೇಲೆಯೇ ಮೇಘರಾಶಿಗಳ ಮೇಲೆ ಜಯವನ್ನು ಸಾಧಿಸುತ್ತಾನೆ. ಆದ್ದರಿಂದ ಧನಾರ್ಜನೆಗಾಗಿ ನಮಗೆ ಪಾತಾಳಪ್ರವೇಶ, ಯಕ್ಷಿಣಿಯ ವಶೀಕರಣ, ಬೇತಾಳಗಳ ವಶೀಕರಣಕ್ಕೆ ಸ್ಮಶಾನ ವಾಸ, ನರಮಾಂಸದ ವಿಕ್ರಯ ಅಥವಾ ಸಿದ್ಧ ಗುಳಿಗೆಗಳ ನಿರ್ಮಾಣ ಮುಂತಾದ ಧನಾರ್ಜನೆಯ ಉಪಾಯಗಳಲ್ಲಿ ಒಂದನ್ನು ನಮಗೆ ತಿಳಿಸಿರಿ. ನಿಮಗೆ ಅದ್ಭುತವಾದ ಶಕ್ತಿಯಿದೆಯೆಂದು ಕೇಳಿದೆವು. ನಾವು ಕೂಡ ಅತ್ಯಂತ ಸಾಹಸಿಗರು. ಮಹಾತ್ಮರ ಕಾರ್ಯವನ್ನು ಮಹಾತ್ಮರೇ ಸಾಧಿಸಲು ಶಕ್ತರು. ಸಮುದ್ರವಲ್ಲದೆ ಬೇರೆ ಯಾರು ತಾನೆ ಬಡವಾಗ್ನಿಯನ್ನು ಧರಿಸಲು ಶಕ್ತರು ?”

ಭೈರವಾನಂದನು ಅವರ ಸಿದ್ಧಿಗಾಗಿ ಅತಿ ಲಾಭಕರವಾದ ನಾಲ್ಕು ಸಿದ್ಧ ಬತ್ತಿಗಳನ್ನು ಮಾಡಿ ಅವರಿಗೆ ಕೊಟ್ಟು ಹೇಳಿದನು – “ಹಿಮಾಲಯದ ಕಡೆಗೆ ಹೋಗಿ. ಅಲ್ಲಿ ಯಾವ ಪ್ರದೇಶದಲ್ಲಿ ಬತ್ತಿಗಳು ಬೀಳುವುದೋ ಅಲ್ಲಿ ನಿಶ್ಚಯವಾಗಿಯೂ ನಿಧಿಯನ್ನು ಪಡೆಯುವಿರಿ. ಆ ಸ್ಥಾನವನ್ನು ಅಗೆದು ನಿಧಿಯನ್ನು ಪಡೆದು ಹಿಂದಿರುಗಿ ಬನ್ನಿ.”

ಅದರಂತೆ ಅವರು ಹೋಗುತ್ತಿದ್ದಾಗ ಅವರಲ್ಲಿ ಒಬ್ಬನ ಕೈಯಲ್ಲಿದ್ದ ಬತ್ತಿಯು ಬಿತ್ತು. ಆನಂತರ ಅವನು ಅಲ್ಲಿ ಅಗೆದು ನೋಡಿದಾಗ ಭೂಮಿಯು ತಾಮ್ರಮಯವಾಗಿತ್ತು. ಆಗ ಅವನು – “ಓಹೋ! ಮನಸ್ಸಿಗೆ ಬಂದಷ್ಟು ತಾಮ್ರವನ್ನು ತೆಗೆದುಕೊಳ್ಳಿ” ಎಂದನು.

ಉಳಿದವರು – “ಏ ಮೂಢ! ಇದರಿಂದೇನು ಮಾಡಲು ಸಾಧ್ಯ ? ಇದನ್ನು ಎಷ್ಟು ಒಯ್ದರೂ ಬಡತನವು ಕಳೆಯದು, ಆದ್ದರಿಂದ ಏಳು, ಮುಂದೆ ಹೋಗೋಣ”

ಆಗ ಮೊದಲನೆಯವನು “ನೀವೆಲ್ಲಾ ಹೋಗಿ, ನಾನು ಮುಂದೆ ಹೋಗುವುದಿಲ್ಲ” ಎಂದು ನುಡಿದು ಇಚ್ಛೆ ಬಂದಷ್ಟು ತಾಮ್ರವನ್ನು ತೆಗೆದುಕೊಂಡು ಹಿಂದಿರುಗಿದನು.

ಆ ಮೂವರು ಮುಂದೆ ಹೋದರು. ಸ್ವಲ್ಪ ದೂರ ನಡೆದಾಗ ಮುಂದಿದ್ದವನ ಬತ್ತಿಯು ಬಿತ್ತು. ಅವನು ಬಿದ್ದ ಜಾಗದಲ್ಲಿ ಅಗೆದಾಗ ಭೂಮಿಯು ಬೆಳ್ಳಿಮಯವಾಗಿತ್ತು. ಸಂತೋಷಗೊಂಡ ಅವನು – “ಬೇಕಾದಷ್ಟು ಬೆಳ್ಳಿಯನ್ನು ತೆಗೆದುಕೊಳ್ಳಿ, ಮುಂದೆ ಹೋಗುವುದು ಬೇಡ”

ಉಳಿದವರು – “ಹಿಂದೆ ಭೂಮಿಯು ತಾಮ್ರಮಯವಾಗಿತ್ತು, ನಂತರ ಬೆಳ್ಳಿಯಿಂದ ಕೂಡಿತ್ತು, ಮುಂದೆ ಖಂಡಿತವಾಗಿಯೂ ಚಿನ್ನಮಯವಾಗಿರುತ್ತದೆ. ಇದನ್ನು ಹೆಚ್ಚು ಕೊಂಡೊಯ್ಯುವುದರಿಂದ ಬಡತನ ನಿವಾರಣೆಯಾಗುವುದಿಲ್ಲ.  ಆದ್ದರಿಂದ ಮುಂದೆ ಹೋಗೋಣ.”

ಹೀಗೆ ಹೇಳಿ ಅವರಿಬ್ಬರು ಮುನ್ನೆಡೆದರು. ಎರಡನೆಯವನು ತನ್ನ ಶಕ್ತಿಗನುಸಾರ ಬೆಳ್ಳಿಯನ್ನು ತೆಗೆದುಕೊಂಡು ಹಿಂದಿರುಗಿದನು.

ಅವರಿಬ್ಬರು ಹೋಗುತ್ತಿದ್ದಾಗ ಒಬ್ಬನ ಬತ್ತಿಯು ಬಿದ್ದುಹೋಯಿತು. ಅವನು ಸಂತೋಷಗೊಂಡು ಬಿದ್ದ ಕಡೆ ಭೂಮಿಯನ್ನು ಅಗೆದಾಗ ಚಿನ್ನವು ಕಾಣಿಸಿದಾಗ – “ಬೇಕಾದಷ್ಟು ಚಿನ್ನವನ್ನು ತೆಗೆದುಕೋ. ಚಿನ್ನಕ್ಕಿಂತ ಉತ್ತಮವಾದುದು ಯಾವುದೂ ಇರುವುದಿಲ್ಲ.” ಎಂದನು.

ಇನ್ನೊಬ್ಬ – “ಮೂಢ! ನಿನಗೇನೂ ತಿಳಿದಿಲ್ಲ. ಮೊದಲು ತಾಮ್ರ, ನಂತರ ಬೆಳ್ಳಿ, ಮತ್ತೆ ಚಿನ್ನ. ಆದ್ದರಿಂದ ಇನ್ನೂ ಮುಂದೆ ರತ್ನಗಳು ಇರುತ್ತವೆ. ಒಂದು ರತ್ನದಿಂದಲೇ ನಮ್ಮ ದಾರಿದ್ರ್ಯವು ಕಳೆಯುವುದು. ಆದ್ದರಿಂದ ಏಳು, ಮುಂದೆ ಹೋಗೋಣ. ಭಾರವಾಗಿರುವ ಹೆಚ್ಚು ಚಿನ್ನದಿಂದೇನು ಪ್ರಯೋಜನ ?”

ಅದಕ್ಕೆ ಮತ್ತೊಬ್ಬನು ಹೇಳಿದನು – “ನೀನು ಹೋಗು, ನಾನು ಇಲ್ಲಿಯೇ ಇದ್ದು ನಿನಗಾಗಿ ಕಾಯುವೆನು”

ಹಾಗೇ ಮಾಡಲಾಗಿ ಅವನು ಏಕಾಂಗಿಯಾಗಿ ಹೋಗುತ್ತಾ ಸೂರ್ಯನ ತಾಪದಿಂದ ಶರೀರವೆಲ್ಲಾ ಬಳಲಿದವನಾಗಿ, ಮತ್ತು ಬಾಯಾರಿದವನಾಗಿ ಸಿದ್ಧಿಮಾರ್ಗವನ್ನು ಬಿಟ್ಟು ಅಲ್ಲಿಲ್ಲಿ ಅಲೆಯತೊಡಗಿದನು. ಹಾಗೆ ಅಲೆಯುತ್ತಿದ್ದ ಅವನು ಒಂದು ಸ್ಥಳದಲ್ಲಿ ಮೈಯೆಲ್ಲಾ ರಕ್ತಸಿಕ್ತನಾದ, ತಲೆಯಲ್ಲಿ ತಿರುಗುತ್ತಿರುವ ಚಕ್ರವನ್ನು ಹೊತ್ತಿರುವ ಮನುಷ್ಯನೊಬ್ಬನನ್ನು ನೋಡಿದನು. ಬೇಗ ಅವನ ಬಳಿಗಿ ಹೋಗಿ – “ಎಲೈ, ಯಾರು ನೀನು ? ಇದೇನು ತಿರುಗುತ್ತಿರುವ ಚಕ್ರವು ನಿನ್ನ ತಲೆಯ ಮೇಲೆ ? ಇಲ್ಲೆಲ್ಲಾದರೂ ನೀರು ಸಿಗುವುದೋ ಎಂದು ತಿಳಿಸು, ಬಹಳ ಬಾಯಾರಿಕೆಯಾಗಿದೆ” ಎಂದನು.

ಹೀಗೆ ಹೇಳಿದ ಕೂಡಲೇ ಆ ವ್ಯಕ್ತಿಯ ತಲೆಯಲ್ಲಿದ್ದ ಚಕ್ರವು ಬ್ರಾಹ್ಮಣನ ತಲೆಗೆ ಬಂದು ಸೇರಿಕೊಂಡಿತು. ಆಗ ಅವನು – “ಇದು ಯಾವಾಗ ತಲೆಯಿಂದ ಇಳಿಯುವುದೋ ತಿಳಿಸು, ತುಂಬಾ ನೋವಾಗುತ್ತಿದೆ”

ಆ ವ್ಯಕ್ತಿ ಹೇಳಿದನು – “ಯಾವಾಗ ನಿನ್ನಂತೆ ಯಾರಾದರೂ ಸಿದ್ಧಿ ಬತ್ತಿಯನ್ನು ಹಿಡಿದುಕೊಂಡು ನಿನ್ನನ್ನು ಮಾತನಾಡಿಸುವನೋ ಆಗ ಅದು ಅವನ ತಲೆಗೆ ಹೋಗಿ ಸೇರುತ್ತದೆ.”

ಬ್ರಾಹ್ಮಣ – “ನೀನು ಎಷ್ಟು ಸಮಯದಿಂದ ಹೀಗೆಯೇ ನಿಂತಿರುವೆ ?”

ಅವನು – “ಈಗ ಭೂಮಂಡಲದ ರಾಜನಾರು ?”

ಬ್ರಾಹ್ಮಣ – “ವೀಣಾವತ್ಸರಾಜ”

ಅವನು – “ಎಷ್ಟು ಕಾಲವಾಯಿತೋ ನನಗೆ ತಿಳಿದಿಲ್ಲ. ಆದರೆ ಯಾವಾಗ ರಾಮನು ರಾಜನಾಗಿದ್ದನೋ ಆಗ ನಾನು ಬಡತನದಿಂದ ಬಳಲಿ ಸಿದ್ಧಿಬತ್ತಿಯನ್ನು ಹಿಡಿದುಕೊಂಡು ಈ ದಾರಿಯಲ್ಲಿ ಬಂದೆ. ಆಗ ನನ್ನಂತೆ ಮತ್ತೊಬ್ಬ ಈ ಚಕ್ರವನ್ನು ಹೊತ್ತಿದ್ದನು. ಅವನನ್ನು ನೋಡಿ ಮಾತನಾಡಿಸಿದಾಗ ನನ್ನ ತಲೆಗೆ ಇದು ಬಂತು.”

ಬ್ರಾಹ್ಮಣ – “ಭದ್ರ, ಹೀಗೆ ನಿಂತಿದ್ದ ನಿನಗೆ ಭೋಜನ ಹಾಗೂ ನೀರು ಹೇಗೆ ಪ್ರಾಪ್ತವಾಗುತ್ತಿತ್ತು ?”

ಅವನು – “ಕುಬೇರನು ನಿಧಿಯನ್ನು ಕದಿಯಲು ಬರುವ ಸಿದ್ಧರನ್ನು ಹೆದರಿಸಲು ಈ ಚಕ್ರವು ತಲೆಗೆ ಅಂಟಿಕೊಳ್ಳುವ ಭಯವನ್ನು ಉಂಟುಮಾಡಿರುವನು, ಹಾಗಾಗಿ ಯಾರೂ ಇಲ್ಲಿಗೆ ಬರುವುದಿಲ್ಲ. ಯಾರಾದರೂ ಬಂದಲ್ಲಿ ಅವರು ಹಸಿವು, ನೀರಡಿಕೆ ಮತ್ತು ನಿದ್ರೆಯಿಂದ ಮುಕ್ತರಾಗಿ, ಮುಪ್ಪು ಮರಣಗಳಿಲ್ಲದೆ ಕೇವಲ ವೇದನೆಯನ್ನು ಅನುಭವಿಸುವರು. ಈಗ ನನಗೆ ಮನೆಗೆ ಹೋಗಲು ಅನುಮತಿಯನ್ನು ಕೊಡು”

ಹೀಗೆ ಹೇಳಿ ಅವನು ಹೊರಟುಹೋದನು. ನಂತರ ಚಿನ್ನವನ್ನು ಪಡೆದ ಮೂರನೆಯ ಬ್ರಾಹ್ಮಣಪುತ್ರನು ನಾಲ್ಕನೆಯವವನನ್ನು ಹುಡುಕುತ್ತಾ ಅವನ ಹೆಜ್ಜೆಗಳನ್ನು ಅನುಸರಿಸುತ್ತಾ ಕಾಡಿನ ಒಳಗೆ ಬಂದಾಗ, ರಕ್ತಮಯ ಶರೀರವುಳ್ಳ ನಾಲ್ಕನೆಯ ಬ್ರಾಹ್ಮಣ ಪುತ್ರನು ತಲೆಯಲ್ಲಿ ತಿರುಗುತ್ತಿರುವ ತೀಕ್ಷ್ಣವಾದ ಚಕ್ರವನ್ನು ಹೊತ್ತು ಕುಳಿತಿದ್ದನ್ನು ನೋಡಿದನು. ಅವನ ಸಮೀಪಕ್ಕೆ ಹೋಗಿ ಕಣ್ಣೀರಿಟ್ಟು ಹೇಳಿದನು – “ಭದ್ರ, ಏನಿದು ?”

ಚಕ್ರಧಾರಿ ಹೇಳಿದನು – “ಇದು ವಿಧಿಯ ಆಜ್ಞೆ”

ಮೂರನೆಯ ಬ್ರಾಹ್ಮಣ – “ಅದು ಹೇಗೆ ? ಇದರ ಕಾರಣವನ್ನು ತಿಳಿಸು”

ಆಗ ಚಕ್ರಧಾರಿ ಬ್ರಾಹ್ಮಣ ಚಕ್ರದ ಸಂಪೂರ್ಣ ವೃತ್ತಾಂತವನ್ನು ಹೇಳಿದನು. ಆಗ ಮೂರನೆಯ ಬ್ರಾಹ್ಮಣನು ಅವನನ್ನು ನಿಂದಿಸುತ್ತಾ – “ಅನೇಕ ಬಾರಿ ನಾನು ತಡೆದರೂ ನೀನು ನನ್ನ ಮಾತನ್ನು ಕೇಳಲಿಲ್ಲ. ಈಗೇನು ಮಾಡಲು ಸಾಧ್ಯ ? ವಿದ್ಯಾವಂತನಾದರೂ, ಕುಲೀನನಾದರೂ ನೀನು ಬುದ್ಧಿಯಿಲ್ಲದವನು. ಅಥವಾ ಹೀಗೊಂದು ಉಕ್ತಿಯಿದೆ – ಬುದ್ಧಿಯೇ ಶ್ರೇಷ್ಠ, ವಿದ್ಯೆಯಲ್ಲ. ವಿದ್ಯೆಗಿಂತ ಬುದ್ಧಿಯೇ ಉತ್ತಮ. ಸಿಂಹಕ್ಕೆ ಜೀವವನ್ನು ಕೊಟ್ಟವರಂತೆ ಬುದ್ಧಿಹೀನರು ನಾಶವಾಗುತ್ತಾರೆ

ಚಕ್ರಧರನು ಅದು ಹೇಗೆಂದು ಕೇಳಲು ಸುವರ್ಣಸಿದ್ಧಿಯು ಸಿಂಹವನ್ನು ಜೀವಂತಗೊಳಿಸಿದ ಮೂರ್ಖ ಬ್ರಾಹ್ಮಣರ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿಯು “ಆದ್ದರಿಂದಲೇ ನಾನು ಬುದ್ಧಿಯೇ ಶ್ರೇಷ್ಠ, ವಿದ್ಯೆಯಲ್ಲ ಎಂದು ಹೇಳಿದ್ದು. ಅಲ್ಲದೆ ಶಾಸ್ತ್ರಗಳಲ್ಲಿ ಕೌಶಲವನ್ನು ಉಳ್ಳವರಾಗಿ, ಆದರೆ ಲೋಕವ್ಯವಹಾರವನ್ನು ತಿಳಿಯದವರೆಲ್ಲರೂ ಮೂರ್ಖಪಂಡಿತರಂತೆ ಅಪಹಾಸ್ಯಕ್ಕೊಳಗಾಗುತ್ತಾರೆ.” ಎಂದನು

ಚಕ್ರಧರನು ಅದೇನೆಂದು ಕೇಳಲು ಸುವರ್ಣಸಿದ್ಧಿಯು ನಾಲ್ಕು ಮೂರ್ಖಪಂಡಿತರ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿ ಸುವರ್ಣಸಿದ್ಧಿಯು ಹೇಳಿದನು – “ನೀನು ಲೋಕವ್ಯವಹಾರವನ್ನು ತಿಳಿಯದೆ ನಾನು ತಡೆಯುತ್ತಿದ್ದರೂ ಕೇಳದಿದ್ದರಿಂದ ಇಂಥ ಸ್ಥಿತಿಯನ್ನು ತಲುಪಿದೆ. ಆದ್ದರಿಂದಲೇ ನಾನು ಶಾಸ್ತ್ರಗಳಲ್ಲಿ ಕೌಶಲವನ್ನು ಉಳ್ಳವರಾಗಿ … ಎಂಬುದಾಗಿ ಹೇಳುವುದು.

ಅದನ್ನು ಕೇಳಿ ಚಕ್ರಧರನು ಹೇಳಿದನು – “ಅದು ನನ್ನ ದುರವಸ್ಥೆಗೆ ಸರಿಯಾದ ಕಾರಣವಲ್ಲ. ದೈವವು ಪ್ರತಿಕೂಲವಾಗಿದ್ದಲ್ಲಿ ಅತಿ ಬುದ್ಧಿವಂತರೂ ನಾಶವಾಗಿಹೋಗುವರು. ದೈವವು ಅನುಕೂಲವಗಿದ್ದರೆ ಮಂದಬುದ್ಧಿಯವರೂ ಕೂಡ ಅಲ್ಲೇ ಯಾವಾಗಲೂ ಆನಂದದಿಂದಿರುವರು. ರಕ್ಷಣೆಯಿಲ್ಲದವನು ದೈವರಕ್ಷೆಯಿದ್ದರೆ ಬದುಕುತ್ತಾನೆ, ಉತ್ತಮ ರಕ್ಷಣೆಯಿದ್ದವನು ದೈವಕೃಪೆಯಿಲ್ಲದಿದ್ದರೆ ನಾಶವಾಗುತ್ತಾನೆ. ಕಾಡಿನಲ್ಲಿ ಬಿಟ್ಟ ಅನಾಥನು ದೈವಕೃಪೆಯಿಂದ ಬದುಕುತ್ತಾನೆ, ದೈವಕೃಪೆಯಿಲ್ಲದಿದ್ದಾಗ ಏಷ್ಟೇ ಪ್ರಯತ್ನಪಟ್ಟರೂ ಮನೆಯಲ್ಲಿದ್ದರೂ ಕೂಡ ನಾಶವಾಗುತ್ತಾನೆ. ಒಂದು ಕಥೆಯಲ್ಲಿ ಹೀಗೆ ಒಂದು ನುಡಿಯಿದೆ – ಭದ್ರೆ, ಶತಬುದ್ಧಿಯು ತಲೆಯಮೇಲಿದ್ದಾನೆ, ಸಹಸ್ರಬುದ್ಧಿಯು ನೇತಾಡುತ್ತಿದ್ದಾನೆ, ಏಕಬುದ್ಧಿಯಾದ ನಾನು ಶುದ್ಧ ನೀರಿನಲ್ಲಿ ಆಡುತ್ತಿದ್ದೇನೆ

ಸುವರ್ಣಸಿದ್ಧಿಯು ಅದೇನೆಂದು ಕೇಳಿದಾಗ ಚಕ್ರಧರನು ಮೀನು ಹಾಗೂ ಕಪ್ಪೆಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಚಕ್ರಧರನು – “ಬುದ್ಧಿಯೇ ವಿದ್ಯೆಗಿಂತ ಶ್ರೇಷ್ಠ ಇತ್ಯಾದಿಯಾಗಿ ನೀನು ಏನು ಹೇಳಿದೆಯೋ ಅದರ ಬಗ್ಗೆ ನನ್ನ ಅಭಿಪ್ರಾಯ ಹೀಗಿದೆ: ಕೇವಲ ಬುದ್ಧಿಯಿಂದ ಕಾರ್ಯಸಾಧನವಾಗುತ್ತದೆಂದು ಹೇಳಲಾಗುವುದಿಲ್ಲ.”

ಸುವರ್ಣಸಿದ್ಧಿ – “ಹಾಗಿದ್ದರೂ ಕೂಡ ಮಿತ್ರನು ಹೇಳಿದ್ದನ್ನು ಪಾಲಿಸದೇ ಇರಬಾರದು. ಆದರೇನು ಮಾಡುವುದು ? ನಾನು ತಡೆದರೂ ಲೋಭದಿಂದ ಹಾಗೂ ವಿದ್ಯೆಯ ಅಹಂಕಾರದಿಂದ ನೀನು ನಿಲ್ಲಲಿಲ್ಲ. ಹೀಗೊಂದು ಮಾತಿದೆ – ಆಗಲಿ ಮಾಮ, ನಾನು ಹಾಡಬೇಡ ಎಂದರೂ ಕೇಳಲಿಲ್ಲ. ಈಗ ನಿನ್ನ ಹಾಡಿನ ಪುರಸ್ಕಾರವಾಗಿ ಈ ಅಪೂರ್ವವಾದ ಮಣಿಯು ನಿನ್ನ ಕುತ್ತಿಗೆಗೆ ಕಟ್ಟಲ್ಪಟ್ಟಿದೆ.”

ಚಕ್ರಧರನು ಅದೇನೆಂದು ಕೇಳಿದಾಗ ಸುವರ್ಣಸಿದ್ಧಿಯು ಹಾಡುವ ಕತ್ತೆ ಹಾಗೂ ನರಿಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿಯು – “ನಾನು ತಡೆದರೂ ನೀನು ನಿಲ್ಲಲಿಲ್ಲ. ಹೀಗೊಂದು ಉಕ್ತಿಯಿದೆ – ಯಾರಲ್ಲಿ ಸ್ವಂತ ಬುದ್ಧಿಯಿಲ್ಲವೋ ಮತ್ತು ಯಾರು ಮಿತ್ರನು ಹೇಳಿದ್ದನ್ನು ಕೇಳುವುದಿಲ್ಲವೋ ಅವನು ಮಂಥರಕ ನೇಕಾರನಂತೆ ಸತ್ತುಹೋಗುತ್ತಾನೆ.

ಚಕ್ರಧರನು ಅದೇನೆಂದು ಕೇಳಲು ಸುವರ್ಣಸಿದ್ಧಿಯು ಮಂಥರಕ ನೇಕಾರನ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿ -”ಆದ್ದರಿಂದಲೇ ನಾನು ಯಾರಲ್ಲಿ ಸ್ವಂತ ಬುದ್ಧಿಯಿಲ್ಲವೋ ಎಂಬುದಾಗಿ ಹೇಳಿದ್ದು”

ಚಕ್ರಧರ – “ಇದು ಸತ್ಯವೇ, ಎಲ್ಲಾ ಜನರೂ ನಂಬಿಕೆಗೆ ಅರ್ಹವಲ್ಲದ ಆಶಾಪಿಶಾಚಿಯ ಸುಳಿಗೆ ಸಿಲುಕಿ ಅಪಹಾಸ್ಯಕ್ಕೊಳಗಾಗುತ್ತಾರೆ. ಅಥವಾ ಯಾರೋ ಈ ಮಾತನ್ನು ಸರಿಯಾಗಿಯೇ ಹೇಳಿದ್ದಾರೆ – ಬಂದಿಲ್ಲದ ಮತ್ತು, ಸಂಭವವಿಲ್ಲದ ಚಿಂತೆಯನ್ನು ಯಾರು ಮಾಡುತ್ತಾರೋ, ಅವನು ಬಿಳಿಯ ಬಣ್ಣದವನಾಗಿ ಸೋಮಶರ್ಮನ ತಂದೆಯಂತೆ ನಿದ್ರಿಸುತ್ತಾನೆ.

ಸುವರ್ಣಸಿದ್ಧಿಯು ಅದೇನೆಂದು ಕೇಳಿದಾಗ ಚಕ್ರಧರನು ಸೋಮಶರ್ಮನ ತಂದೆಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಚಕ್ರಧರನು – “ಆದ್ದರಿಂದಲೇ ನಾನು ಬಂದಿಲ್ಲದ ಮತ್ತು ಸಂಭವವಿಲ್ಲದ ಚಿಂತೆಯನ್ನು… ಎಂಬುದಾಗಿ ಹೇಳಿದ್ದು” ಎಂದನು.

ಸುವರ್ಣಸಿದ್ಧಿ – “ಸತ್ಯವೇ, ಇದರಲ್ಲಿ ನಿನ್ನ ದೋಷವೇನು ? ಲೋಭದಿಂದ ಮೋಸಗೊಂಡ ಎಲ್ಲರೂ ದುಃಖಕ್ಕೊಳಗಾಗುತ್ತಾರೆ. ಹೀಗೊಂದು ಉಕ್ತಿಯಿದೆ – ಯಾರು ಚಂಚಲತೆಯಿಂದ ಮುಂದಾಗುವ ಪರಿಣಾಮವನ್ನು ಯೋಚಿಸದೇ ಕೆಲಸವನ್ನು ಮಾಡುವರೋ, ಅವನು ಚಂದ್ರಭೂಪತಿಯಂತೆ ಆಪತ್ತನ್ನು ಹೊಂದುವನು.”

ಚಕ್ರಧರನು ಅದು ಹೇಗೆಂದು ಕೇಳಿದಾಗ ಸುವರ್ಣಸಿದ್ಧಿಯು ಮಂಗದಿಂದ ತೊಂದರೆಗೊಳಗಾದ ಚಂದ್ರಭೂಪತಿಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿಯು – “ಆದ್ದರಿಂದಲೇ ನಾನು ಯಾರು ಚಂಚಲತೆಯಿಂದ ಮುಂದಾಗುವ ಪರಿಣಾಮವನ್ನು … ಎಂಬುದಾಗಿ ಹೇಳಿದ್ದು” ಎಂದನು.

ಸುವರ್ಣಸಿದ್ಧಿಯು ಮುಂದುವರೆಸುತ್ತಾ – “ಎಲೈ ಮಿತ್ರ, ಇನ್ನು ಹೊರಡಲು ಅನುಮತಿ ಕೊಡು, ಮನೆಗೆ ಹೋಗುವೆನು”

ಚಕ್ರಧರ – “ಭದ್ರ, ಆಪತ್ಕಾಲಕ್ಕಾಗಿಯೇ ಧನ ಹಾಗೂ ಸ್ನೇಹವನ್ನು ಸಂಗ್ರಹಿಸುವರು. ನನ್ನನ್ನು ಈ ಪರಿಸ್ಥಿತಿಯಲ್ಲಿ ಬಿಟ್ಟು ಎಲ್ಲಿಗೆ ಹೋಗುವೆ ? ಯಾರು ನಿಷ್ಠುರತೆಯಿಂದ ಆಪತ್ತಿನಲ್ಲಿರುವ ಮಿತ್ರನನ್ನು ಬಿಟ್ಟು ಹೋಗುವನೋ ಅಂತಹ ಪಾಪಿಷ್ಟ ಕೃತಘ್ನನು ನಿಸ್ಸಂದೇಹವಾಗಿ ನರಕಕ್ಕೆ ಹೋಗುವನು.”

ಸುವರ್ಣಸಿದ್ಧಿ – “ನೀನು ಹೇಳುವುದು ಸತ್ಯ. ಹೋಗಬೇಕಾದ ಜಾಗಕ್ಕೆ ಹೋಗಲು ಶಕ್ತಿಯಿದ್ದರೆ ಸರಿ. ಆದರೆ ಇದಾದರೋ ಮನುಷ್ಯರಿಗೆ ಹೋಗಲು ಸಾಧ್ಯವಾಗದ ಸ್ಥಳ. ನಿನ್ನನ್ನು ಬಿಡಿಸಲು ಯಾರಿಗೂ ಶಕ್ತಿಯಿಲ್ಲ. ಅಲ್ಲದೆ ತಿರುಗುವ ಚಕ್ರದ ವೇದನೆಯಿಂದ ನಿನ್ನ ಮುಖವಿಕಾರವನ್ನು ನೋಡುತ್ತಿದ್ದರೆ ‘ಬೇಗ ಇಲ್ಲಿಂದ ಹೋಗಿಬಿಡಬೇಕು, ಇಲ್ಲದಿದ್ದರೆ ನನಗೂ ಏನಾದರೂ ಅನರ್ಥವಾಗಬಹುದು’ ಎಂಬ ಚಿಂತಿಯುಂಟಾಗುತ್ತಿದೆ. ಹೀಗೊಂದು ಮಾತು ಕಥೆಯಲ್ಲಿ ಬರುತ್ತದೆ – ಎಲೈ ವಾನರ, ನಿನ್ನ ಮುಖದಲ್ಲಿ ಯಾವ ರೀತಿಯ ಕಳೆಯು ತೋರುತ್ತಿದೆಯೋ ಅದರಿಂದ ನೀನು ವಿಕಾಲನ ವಶದಲ್ಲಿರುವೆ ಎಂದು ತಿಳಿಯುತ್ತದೆ. ಹೀಗಿದ್ದಾಗ ಓಡಿ ಹೋದವನು ಬದುಕುಳಿಯುತ್ತಾನೆ.”

ಚಕ್ರಧರನು ಅದೇನೆಂದು ಕೇಳಿದಾಗ ಸುವರ್ಣಸಿದ್ಧಿಯು ವಿಕಾಲ ರಾಕ್ಷಸ – ವಾನರ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿಯು – “ನನ್ನನ್ನು ಕಳಿಸು, ನಾನು ಮನೆಗೆ ಹೋಗುವೆನು. ನೀನು ಇಲ್ಲಿದ್ದು ನಿನ್ನ ಲೋಭದ ಫಲವನ್ನು ಅನುಭವಿಸು.”

ಚಕ್ರಧರ – “ನನ್ನ ಲೋಭವು ಇದಕ್ಕೆ ಕಾರಣವಲ್ಲ. ಮನುಷ್ಯರಿಗೆ ಶುಭಾಶುಭ ಫಲಗಳು ಭಾಗ್ಯದ ಅನುಸಾರ ಸಿಗುತ್ತವೆ. ಯಾರಿಗೆ ತ್ರಿಕೂಟ ಪರ್ವತವೇ ಕೋಟೆಯಾಗಿತ್ತೋ, ಸಮುದ್ರವೇ ದುರ್ಗದ ಸೀಮೆಯಾಗಿತ್ತೋ, ಯೋಧರಾದ ರಾಕ್ಷಸರಿದ್ದರೋ, ಕುಬೇರನಿಗಿಂತ ಅಧಿಕ ಸಂಪತ್ತಿತ್ತೋ, ಶುಕ್ರಾಚಾರ್ಯನಿಂದಲೇ ನೀತಿಶಾಸ್ತ್ರವು ಹೇಳಿಕೊಡಲ್ಪಟ್ಟಿತ್ತೋ ಅಂತಹ ರಾವಣನು ದೈವವಶದಿಂದ ನಾಶವಾದನು. ಒಬ್ಬ ಕುರುಡ, ಒಬ್ಬ ಕುಬ್ಜ ಹಾಗೂ ಒಬ್ಬಳು ಮೂರು ಸ್ತನಗಳನ್ನುಳ್ಳ ರಾಜಕನ್ಯೆಯು ದೈವವು ಅನುಕೂಲವಾಗಿದ್ದಾಗ ಕೆಟ್ಟ ಕೆಲಸವನ್ನು ಮಾಡಿ ಕೂಡ ಸಫಲತೆಯನ್ನು ಪಡೆದರು.”

ಸುವರ್ಣಸಿದ್ಧಿಯು ಅದೇನೆಂದು ಕೇಳಲು ಚಕ್ರಧರನು ಕುರುಡ, ಕುಬ್ಜ ಹಾಗೂ ಮೂರುಸ್ತನಗಳುಳ್ಳ ರಾಜಕನ್ಯೆಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಚಕ್ರಧರನು – “ಆದ್ದರಿಂದಲೇ ನಾನು ಒಬ್ಬ ಕುರುಡ, ಒಬ್ಬ ಕುಬ್ಜ… ಎಂಬುದಾಗಿ ಹೇಳಿದ್ದು.” ಎಂದನು.

ಸುವರ್ಣಸಿದ್ಧಿಯು ಹೇಳಿದನು – “ಸತ್ಯವೇ, ದೈವವು ಅನುಕೂಲವಾಗಿದ್ದರೆ ಎಲ್ಲವೂ ಕಲ್ಯಾಣವಾಗುತ್ತದೆ. ಆದರೂ ಸತ್ಪುರುಷರ ಮಾತನ್ನು ಕೇಳಬೇಕು. ಅದಲ್ಲದೆ ಈ ರೀತಿ ವರ್ತಿಸಬಾರದು. ಹಾಗೆ ವರ್ತಿಸಿದವನು ನಿನ್ನಂತೆ ನಾಶವಾಗಿಹೋಗುತ್ತಾನೆ. ಒಂದುಗೂಡಿ ಕೆಲಸವನ್ನು ಮಾಡದವರು ಒಂದೇ ಹೊಟ್ಟೆ ಮತ್ತು ಎರಡು ಕುತ್ತಿಗೆಗಳಿದ್ದು ಭಿನ್ನವಾಗಿ ಆಹಾರವನ್ನು ತಿನ್ನುವ ಭಾರುಂಡ ಪಕ್ಷಿಯಂತೆ ನಾಶವಾಗುತ್ತಾರೆ.”

ಚಕ್ರಧರನು ಅದೇನೆಂದು ಕೇಳಲು ಸುವರ್ಣಸಿದ್ಧಿಯು ಒಂದು ಹೊಟ್ಟೆ ಮತ್ತು ಎರಡು ಕುತ್ತಿಗೆಗಳುಳ್ಳ ಭಾರುಂಡದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸುವರ್ಣಸಿದ್ಧಿಯು – “ಆದ್ದರಿಂದಲೇ ನಾನು ಒಂದುಗೂಡಿ ಕೆಲಸವನ್ನು ಮಾಡದವರು… ಎಂಬುದಾಗಿ ಹೇಳಿದ್ದು” ಎಂದನು.

ಚಕ್ರಧರ – “ನೀನು ಹೇಳಿದ್ದು ಸತ್ಯ. ನಿನ್ನ ಮಾತನ್ನು ಕೇಳದೆ ನಿನ್ನನ್ನು ಬಿಟ್ಟು ಒಬ್ಬನೇ ಬಂದ ನಾನು ಈ ದುಃಖವನ್ನು ಅನುಭವಿಸುತ್ತಿದ್ದೇನೆ. ನೀನು ಮನೆಗೆ ಹೋಗು.”

ಅದನ್ನು ಕೇಳಿ ಸುವರ್ಣಸಿದ್ಧಿಯು ಅವನ ಅನುಮತಿಯನ್ನು ಪಡೆದು ಮನೆಗೆ ಹೋದನು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: