5-1-1-2-ನಾಲ್ಕು ಮೂರ್ಖಪಂಡಿತರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ನಾಲ್ಕು ಬ್ರಾಹ್ಮಣರು ಪರಸ್ಪರ ಮೈತ್ರಿಯನ್ನು ಬೆಳೆಸಿಕೊಂಡು ವಾಸಿಸುತ್ತಿದ್ದರು. ಬಾಲ್ಯದಲ್ಲಿಯೇ ಅವರ ಮನಸ್ಸಿಗೆ  “ನಾವು ಬೇರೆ ದೇಶಕ್ಕೆ ಹೋಗಿ ವಿದ್ಯಾರ್ಜನೆಯನ್ನು ಮಾಡಬೇಕು” ಎಂದು ಅನಿಸಿತ್ತು. ಹಾಗೆ ಒಂದು ದಿನ ಅವರೆಲ್ಲರೂ ಪರಸ್ಪರ ನಿಶ್ಚಯಿಸಿ ವಿದ್ಯಾರ್ಜನೆಗಾಗಿ ಕಾನ್ಯಕುಬ್ಜಕ್ಕೆ ಹೋದರು. ಅಲ್ಲಿ ಪಾಠಶಾಲೆಯಲ್ಲಿ ಓದುತ್ತಿದ್ದರು. ಹೀಗೆ ಹನ್ನೆರಡು ವರ್ಷಗಳ ಕಾಲ ಏಕಾಗ್ರತೆಯಿಂದ ಓದಿ ಅವರೆಲ್ಲರೂ ವಿದ್ಯಾಕುಶಲರಾದರು. ನಂತರ ಆ ನಾಲ್ಕು ಬ್ರಾಹ್ಮಣರು ಒಟ್ಟಿಗೆ ವಿಚಾರ ಮಾಡಿದರು – “ನಾವು ಸಕಲ ವಿದ್ಯಾಪಾರಂಗತರು. ಹಾಗಾಗಿ ಉಪಾಧ್ಯಾಯರನ್ನು ಧನಾದಿಗಳಿಂದ ಸಂತೋಷಗೊಳಿಸಿ ನಮ್ಮ ದೇಶಕ್ಕೆ ಹೋಗೋಣ.” ಹೀಗೆ ವಿಚಾರಮಾಡಿ ಉಪಾಧ್ಯಾಯರನ್ನು ಸಂತೋಷಗೊಳಿಸಿ, ಅವರ ಅನುಮತಿಯನ್ನು ಪಡೆದು, ಪುಸ್ತಕಗಳನ್ನು ತೆಗೆದುಕೊಂಡು ಹೊರಟು ಸ್ವಲ್ಪ ದೂರ ಹೋದಾಗ ಎರಡು ದಾರಿಗಳು ಸಿಕ್ಕಿ ಅವರು ಅಲ್ಲೇ ಕುಳಿತುಬಿಟ್ಟರು.

ಅವರಲ್ಲಿ ಒಬ್ಬ – “ಯಾವ ದಾರಿಯಲ್ಲಿ ಹೋಗೋಣ ?”

ಈ ಮಧ್ಯೆ ಆ ಪಟ್ಟಣದಲ್ಲಿ ಒಬ್ಬ ವ್ಯಾಪಾರಿಯ ಮಗನು ಸತ್ತುಹೋಗಿದ್ದನು. ಅವನನ್ನು ಸುಡಲು ಜನಸಮೂಹವು ಒಂದು ಮಾರ್ಗದಲ್ಲಿ ಹೋಯಿತು. ಆ ನಾಲ್ವರಲ್ಲಿ ಒಬ್ಬನು ಪುಸ್ತಕವನ್ನು ನೋಡಿ “ಮಹಾಜನರು ಹೋದದ್ದೇ ಮಾರ್ಗ (महाजनो येन गतः स पन्थाः)” ಎಂದು ಓದಿ “ಆದ್ದರಿಂದ ಮಹಾಜನರು ಹೋದ ಮಾರ್ಗದಲ್ಲೇ ಹೋಗೋಣ” ಎಂದನು.

ಆ ಪಂಡಿತರು ಜನಸಮೂಹವನ್ನು ಹಿಂಬಾಲಿಸಿ ನಡೆದಾಗ ಸ್ಮಾಶಾನದಲ್ಲಿ ಒಂದು ಕತ್ತೆಯನ್ನು ನೋಡಿದರು. ಆಗ ಎರಡನೆಯವನು ಪುಸ್ತಕವನ್ನು ತೆಗೆದು ನೋಡಿ “ಉತ್ಸವದ ಸಮಯದಲ್ಲಿ, ಕಷ್ಟಕಾಲದಲ್ಲಿ, ಕ್ಷಾಮವುಂಟಾದಾಗ, ಶತ್ರುಗಳು ಮುತ್ತಿದಾಗ, ರಾಜದ್ವಾರದಲ್ಲಿ ಅಥವಾ ಸ್ಮಶಾನದಲ್ಲಿ ಯಾರು ನಿಂತಿರುತ್ತಾರೋ ಅವರೇ ಬಾಂಧವರು (उत्सवे व्यसने प्राप्ते दुर्भिक्षे शत्रुसङ्कटे । राजद्वारे श्मशाने च यस्तिष्ठति स बान्धवाः ॥)” ಎಂಬ ಶ್ಲೋಕ ಓದಿ “ಓಹೋ, ಇದು ನಮ್ಮ ಬಂಧು” ಎಂದು ನುಡಿದನು. ಆಗ ಒಬ್ಬನು ಅದರ ಕುತ್ತಿಗೆಯನ್ನು ಆಲಿಂಗಿಸಿದರೆ ಮತ್ತೊಬ್ಬನು ಅದರ ಪಾದಗಳನ್ನು ತೊಳೆದನು.

ನಂತರ ಅವರು ದಾರಿಯನ್ನು ನೋಡುತ್ತಾ ನಿಂತಿದ್ದಾಗ ಒಂದು ಒಂಟೆಯು ಕಾಣಿಸಿತು.

ಅವರಲ್ಲೊಬ್ಬ ಇದೇನೆಂದು ನುಡಿಯಲು ಮೂರನೆಯವನು ಪುಸ್ತಕವನ್ನು ತೆಗೆದು “ಧರ್ಮದ ವೇಗ ತೀವ್ರವಾದುದು (धर्मस्य त्वरिता गतिः)” ಎಂದು ಓದಿ “ಇದು ಖಂಡಿತವಾಗಿಯೂ ಧರ್ಮವೇ ಆಗಿರಬೇಕು” ಎಂದನು.

ನಾಲ್ಕನೆಯವನು “ಇಷ್ಟವನ್ನು ಧರ್ಮದೊಂದಿಗೆ ಸೇರಿಸಬೇಕು (इष्टं धर्मेण योजयेत्)” ಎಂದು ಓದಿ “ಆದ್ದರಿಂದ ನಮಗೆ ಇಷ್ಟನಾದ ನಮ್ಮ ಬಾಂಧವನನ್ನು (ಕತ್ತೆಯನ್ನು) ಈ ಧರ್ಮದೊಂದಿಗೆ (ಒಂಟೆಯೊಂದಿಗೆ) ಸೇರಿಸಬೇಕು” ಎಂದನು.

ನಂತರ ಅವರು ಕತ್ತೆಯನ್ನು ಒಂಟೆಯ ಕೊರಳಿಗೆ ಕಟ್ಟಿದರು. ಅದನ್ನು ನೋಡಿದ ಯಾರೋ ಕತ್ತೆಯ ಒಡೆಯನಾದ ಅಗಸನಿಗೆ ತಿಳಿಸಿದರು. ಅದನ್ನು ಕೇಳಿ ಅವನು ಮೂರ್ಖ ಪಂಡಿತರನ್ನು ಹೊಡೆಯಲು ಬಂದಾಗ ಅವರು ಓಡಿಹೋದರು.

ಹಾಗೆ ಹೋದ ಅವರು ಸ್ವಲ್ಪ ಮುಂದೆ ಹೋದಾಗ ಒಂದು ನದಿಯು ಎದುರಾಯಿತು. ನದಿಯ ನೀರಿನಲ್ಲಿ ಒಂದು ಮುತ್ತುಗದ ಎಲೆಯು ತೇಲಿಕೊಂಡು ಬರುತ್ತಿರುವುದನ್ನು ನೋಡಿದ ಅವರಲ್ಲಿ ಒಬ್ಬ “ಬರುತ್ತಿರುವ ಎಲೆಯು ನಮ್ಮನ್ನು ದಾಟಿಸುತ್ತದೆ (आगमिष्यति यत्पत्रं तदस्मांस्तारयिष्यति)” ಎಂದನು. ಹೀಗೆ ಹೇಳಿ ಅವನು ಅದರ ಮೇಲೆ ಹಾರಿ ನದಿಯ ಧಾರೆಯಲ್ಲಿ ತೇಲಿ ಹೋಗುತ್ತಿದ್ದಾಗ, ಅವನನ್ನು ನೋಡಿದ ಪಂಡಿತನು ಅವನ ಜುಟ್ಟಿನ ತುದಿಯನ್ನು ಹಿಡಿದುಕೊಂಡು ಹೇಳಿದನು – “ಸರ್ವನಾಶವು ಎದುರಾದಾಗ ಪಂಡಿತನಾದವನು ಅರ್ಧವನ್ನು ಬಿಡುತ್ತಾನೆ ಮತ್ತು ಅರ್ಧದಿಂದಲೇ ಕೆಲಸವನ್ನು ಸಾಧಿಸಿಕೊಳ್ಳುತ್ತಾನೆ, ಸರ್ವನಾಶವನ್ನು ಸಹಿಸಲು ಕಷ್ಟ(सर्वनाशे समुत्पन्ने अर्धं त्यजति पण्डितः । अर्धेन कुरुते कार्यं सर्वनाशो हि दुःसहः॥ ”. ಹೀಗೆ ಹೇಳಿ ಅವನ ತಲೆಯನ್ನು ತುಂಡರಿಸಿದನು.

ನಂತರ ಅವರು ಮುಂದೆ ಹೋದಾಗ ಒಂದು ಗ್ರಾಮವು ಎದುರಾಯಿತು. ಗ್ರಾಮವಾಸಿಗಳು ಅವರನ್ನು ಭೋಜನಕ್ಕಾಗಿ ಪ್ರತ್ಯೇಕವಾಗಿ ಬೇರೆ ಬೇರೆ ಮನೆಗಳಿಗೆ ಕರೆದೊಯ್ದರು. ಮೊದಲನೆಯವನಿಗೆ ತುಪ್ಪ ಸಕ್ಕರೆಯಿಂದ ಕೂಡಿದ ಜಿಲೇಬಿಯನ್ನು ತಿನ್ನಲು ಕೊಟ್ಟರು. ಆಗ ಪಂಡಿತನು ಯೋಚಿಸಿ – “ಉದ್ದವಾದ ಹಗ್ಗದಿಂದ ನಾಶ (दीर्घसूत्रो विनश्यति)” ಎಂದು ಹೇಳಿ ಊಟವನ್ನು ಬಿಟ್ಟು ಹೊರಟನು.

ಎರಡನೆಯವನಿಗೆ ಮಂಡಿಗೆಯನ್ನು ಕೊಟ್ಟರು. ಅವನು – “ಅತ್ಯಂತ ವಿಸ್ತಾರವಾಗಿರುವುದಕ್ಕೆ ಹೆಚ್ಚು ಆಯುಷ್ಯವಿರುವುದಿಲ್ಲ (अतिविस्तारविस्तीर्णं तद्भवेन्न चिरायुषम्)” ಎಂದು ನುಡಿದು ಊಟವನ್ನು ಬಿಟ್ಟು ನಡೆದನು.

ಮೂರನೆಯವನಿಗೆ ವಡೆಯನ್ನು ಕೊಟ್ಟರು. ಅವನು “ತೂತಿರುವುದರಲ್ಲಿ ಬಹಳ ಆಪತ್ತಿರುತ್ತದೆ (छिद्रेष्वनर्था बहुलीभवन्ति)” ಎಂದು ನುಡಿದು ನಡೆದನು.

ಹೀಗೆ ಆ ಮೂವರು ಪಂಡಿತರು ಹಸಿವಿನಿಂದ ಬಳಲಿದವರಾಗಿ ಜನರ ಅಪಹಾಸ್ಯಕ್ಕೆ ಗುರಿಯಾಗಿ ತಮ್ಮ ದೇಶಕ್ಕೆ ಹೋದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: