5-1-1-5-ಮಂಥರಕ ನೇಕಾರನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕದಲ್ಲಿ ಬರುತ್ತದೆ. ಅಪರೀಕ್ಷಿತಕಾರಕದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಮಂಥರಕ ಎಂಬ ನೇಕಾರನು ವಾಸಿಸುತ್ತಿದ್ದನು. ಒಮ್ಮೆ ವಸ್ತ್ರಗಳನ್ನು ನೇಯುತ್ತಿದ್ದಾಗ ನೇಯ್ಗೆಗೆ ಬೇಕಾಗುವ ಎಲ್ಲಾ ಮರದ ಸಲಕರಣೆಗಳೂ ತುಂಡಾದವು. ಆಗ ಅವನು ಒನಕೆಯನ್ನು ತೆಗೆದುಕೊಂಡು ಕಟ್ಟಿಗೆಗಾಗಿ ಕಾಡಿಗೆ ಹೋದನು. ಅವನು ಅಲೆಯುತ್ತಾ ಸಮುದ್ರದ ದಡಕ್ಕೆ ಬಂದಾಗ ಅಲ್ಲೊಂದು ಅಗರಿನ ಮರವನ್ನು ನೋಡಿದನು. ಆಗ ಅವನು ಚಿಂತಿಸಿದನು – “ಈ ದೊಡ್ಡ ವೃಕ್ಷದಿಂದ ನೇಯ್ಗೆಗೆ ಬೇಕಾಗುವ ಅನೇಕ ಸಲಕರಣೆಗಳನ್ನು ಮಾಡಬಹುದು.” ಹೀಗೆ ನಿರ್ಧರಿಸಿ ಅದರ ಮೇಲೆ ಒನಕೆಯನ್ನು ಬೀಸಿದನು.

ಆ ಮರದಲ್ಲಿ ಒಂದು ದೇವತೆಯು ಆಶ್ರಯವನ್ನು ಪಡೆದಿತ್ತು. ಅದು ಅವನಿಗೆ ಹೇಳಿತು – “ನಾನು ಆಶ್ರಯಿಸಿರುವ ಈ ವೃಕ್ಷವನ್ನು ಖಂಡಿತವಾಗಿಯೂ ರಕ್ಷಿಸಬೇಕು. ಏಕೆಂದರೆ ಸಮುದ್ರದ ಅಲೆಗಳ ಹಾಗೂ ತಣ್ಣಗಿನ ಗಾಳಿಯ ಸ್ಪರ್ಶದ ಮಹಾಸುಖವನ್ನು ಇಲ್ಲಿ ನಾನು ಅನುಭವಿಸುತ್ತಿದ್ದೇನೆ.”

ನೇಕಾರ – “ನಾನೇನು ಮಾಡಲಿ ? ಮರದ ಸಾಮಾಗ್ರಿಗಳಿಲ್ಲದಿದ್ದರೆ ನನ್ನ ಕುಟುಂಬ ಜನರು ಹಸಿವಿನಿಂದ ಬಳಲುತ್ತಾರೆ. ಹಾಗಾಗಿ ಇಲ್ಲಿಂದ ಬೇರೆಡೆಗೆ ಹೋಗು, ನಾನು ಇದನ್ನು ಕಡಿಯುವೆನು.”

ದೇವತೆ – “ನಿನ್ನಲ್ಲಿ ಸಂತೋಷಗೊಂಡಿರುವೆ, ಆದ್ದರಿಂದ ಏನಾದರೂ ಇಷ್ಟವಾದುದನ್ನು ಪ್ರಾರ್ಥಿಸಿಕೋ, ಈ ಮರವನ್ನು ಉಳಿಸು.”

ನೇಕಾರ – “ಹಾಗಾದರೆ ನಾನು ಮನೆಗೆ ಹೋಗಿ ಹೆಂಡತಿ ಮಿತ್ರರನ್ನು ಕೇಳಿ ಬರುವೆನು, ಆಗ ನೀನು ಕೊಡಬೇಕು”

ದೇವತೆಯು ಹಾಗೆಯೇ ಆಗಲೆಂದು ಹೇಳಿದಾಗ ಅವನು ಸಂತೋಷಗೊಂಡು ಮನೆಯ ಕಡೆಗೆ ನಡೆದು ಗ್ರಾಮವನ್ನು ಪ್ರವೇಶಿಸಿದಾಗ ಅವನ ಮಿತ್ರ ಕ್ಷೌರಿಕನನ್ನು ನೋಡಿದನು. ಅವನಿಗೆ ದೇವತೆಯ ಮಾತುಗಳನ್ನು ತಿಳಿಸಿ ಹೇಳಿದನು – “ಮಿತ್ರ, ಒಂದು ದೇವತೆಯು ನನ್ನಲ್ಲಿ ಪ್ರಸನ್ನಗೊಂಡಿದೆ, ಏನನ್ನು ಪ್ರಾರ್ಥಿಸಿಕೊಳ್ಳಲಿ ಎಂದು ನಿನ್ನನ್ನು ಕೇಳಲು ಬಂದೆ”

ಕ್ಷೌರಿಕ – “ಭದ್ರ, ಹಾಗಿದ್ದರೆ ರಾಜ್ಯವನ್ನು ಕೇಳು. ನೀನು ರಾಜನಾಗಿ ನಾನು ಮಂತ್ರಿಯಾಗಿರುತ್ತೇನೆ. ನಾವಿಬ್ಬರೂ ಇಹಪರದಲ್ಲೂ ಸುಖವನ್ನು ಅನುಭವಿಸೋಣ. ನಿತ್ಯವೂ ದಾನವನ್ನು ಮಾಡುವ ರಾಜನು ಈ ಲೋಕದಲ್ಲಿ ಕೀರ್ತಿಯನ್ನು ಗಳಿಸಿ, ನಂತರ ಪುಣ್ಯದ ಪ್ರಭಾವದಿಂದ ಸ್ವರ್ಗದಲ್ಲಿ ದೇವತೆಗಳೊಂದಿಗೆ ಸುಖವನ್ನು ಅನುಭವಿಸುತ್ತಾನೆ.”

ನೇಕಾರ – “ಸರಿ, ಆದರೆ ಒಮ್ಮೆ ಹೆಂಡತಿಯನ್ನು ಕೇಳುತ್ತೇನೆ”

ಕ್ಷೌರಿಕ – “ಭದ್ರ, ಸ್ತ್ರೀಯರೊಂದಿಗೆ ಮಂತ್ರಾಲೋಚನೆಯು ಶಾಸ್ತ್ರಸಮ್ಮತವಲ್ಲ ಏಕೆಂದರೆ ಅವರು ಅಲ್ಪಬುದ್ಧಿಯುಳ್ಳವರು. ಬುದ್ಧಿವಂತರು ನಾರಿಯರಿಗೆ ಭೋಜನ, ವಸ್ತ್ರಾದಿಗಳನ್ನು, ಋತುಕಾಲದಲ್ಲಿ ಸಂಗಮ ಸುಖವನ್ನು ಮತ್ತು ಆಭರಣಗಳನ್ನು ನೀಡಬೇಕು, ಅವರೊಂದಿಗೆ ಮಂತ್ರಾಲೋಚನೆಯನ್ನು ಮಾಡಬಾರದು. ಯಾವ ಮನೆಯಲ್ಲಿ ನಾರಿಯ, ವಂಚಕರ ಅಥವಾ ಬಾಲಕರ ಆಡಳಿತವಿರುತ್ತದೋ ಆ ಮನೆಯು ನಾಶವಾಗುತ್ತದೆಂದು ಶುಕ್ರಾಚಾರ್ಯನೇ ಹೇಳಿದ್ದಾನೆ. ಎಲ್ಲಿಯವರೆಗೆ ಪುರುಷನು ಹೆಂಡತಿಯ ಮಾತನ್ನು ಕೇಳುವುದಿಲ್ಲವೋ, ಅಲ್ಲಿಯವರೆಗೆ  ಅವನು ಸುಪ್ರಸನ್ನನ್ನಾಗಿ ಮತ್ತು ಗುರುಜನರಲ್ಲಿ ಅನುರಕ್ತನಾಗಿ ಇರುತ್ತಾನೆ. ಈ ನಾರಿಯರು ಸ್ವಾರ್ಥಪರರಾಗಿದ್ದು ಕೇವಲ ತಮ್ಮ ಹಿತದಲ್ಲೇ ಮಗ್ನರಾಗಿರುವರು. ತಮ್ಮ ಸುಖವನ್ನಲ್ಲದೆ ಅವರಿಗೆ ಬೇರೆಯಾರು ಪ್ರಿಯರಲ್ಲ, ತಮ್ಮ ಮಗನೂ ಕೂಡ ಪ್ರಿಯನಲ್ಲ.”

ನೇಕಾರ – “ಆದರೂ ಅವಳನ್ನು ಕೇಳಬೇಕು ಏಕೆಂದರೆ ಅವಳು ಪತಿವ್ರತೆ. ಅಲ್ಲದೆ ಅವಳನ್ನು ಕೇಳದೆ ನಾನೇನು ಮಾಡುವುದಿಲ್ಲ.”

ಹೀಗೆ ಅವನಿಗೆ ಹೇಳಿ ಬೇಗನೆ ಹೋಗಿ ಹೆಂಡತಿಗೆ ಹೇಳಿದನು – “ಪ್ರಿಯೆ, ಇಂದು ಒಂದು ದೇವತೆ ನನ್ನಲ್ಲಿ ಪ್ರಸನ್ನಗೊಂಡಿದೆ. ನಾನು ಕೇಳಿದ್ದನು ಅದು ಕೊಡುವುದು. ಆದ್ದರಿಂದ ನಿನ್ನನ್ನು ಕೇಳಲು ಬಂದಿರುವೆನು. ಏನನ್ನು ಕೇಳಿಕೊಳ್ಳಲಿ ಎಂದು ತಿಳಿಸು. ನನ್ನ ಕ್ಷೌರಿಕ ಮಿತ್ರನು ರಾಜ್ಯವನ್ನು ಕೇಳು ಎಂದು ಹೇಳುತ್ತಿದ್ದಾನೆ.”

ಹೆಂಡತಿ – “ಆರ್ಯಪುತ್ರ, ಕ್ಷರಿಕನಿಗೇನು ಬುದ್ಧಿ ? ಅವನ ಮಾತನ್ನು ನಡೆಸಬಾರದು. ಹೊಗಳುವವರೊಂದಿಗೆ, ಸ್ತುತಿಪಾಠಕರೊಂದಿಗೆ, ನೀಚ ಕ್ಷೌರಿಕರೊಂದಿಗೆ, ಬಾಲಕರೊಂದಿಗೆ ಅಥವಾ ಹಸಿದವರೊಂದಿಗೆ ಬುದ್ಧಿವಂತನು ಮಂತ್ರಾಲೋಚನೆಯನ್ನು ಮಾಡಬಾರದೆಂದು ಹೇಳಿದ್ದಾರೆ. ಅಲ್ಲದೆ ರಾಜ್ಯವನ್ನು ನಡೆಸುವುದು ಅತ್ಯಂತ ಕಷ್ಟಕರವಾದುದು. ಸಂಧಿ, ಯುದ್ಧ, ಆಸನ, ಆಶ್ರಯ, ದ್ವೈಧೀಭಾವ ಮುಂತಾದವುಗಳು ಎಂದೂ ಮನುಷ್ಯನಿಗೆ ಸುಖವನ್ನು ಕೊಡಲಾರವು. ರಾಜ್ಯಾಭಿಷೇಕವಾದಾಗಲೇ ಬುದ್ಧಿಯು ವಿಪತ್ತುಗಳ ಬಗ್ಗೆ ಚಿಂತಿಸಲಾರಂಭಿಸಬೇಕು. ಏಕೆಂದರೆ ರಾಜ್ಯಾಭಿಷೇಕದ ಸಮಯದಲ್ಲಿ ಅಭಿಷೇಕ ಮಾಡುವ ಮಡಕೆಯು ಕೇವಲ ನೀರನ್ನು ಮಾತ್ರವಲ್ಲದೆ, ಆಪತ್ತುಗಳನ್ನೂ ಕೂಡ ಸುರಿಸುತ್ತದೆ. ರಾಮನ ವನವಾಸ, ಬಲಿಯ ಬಂಧನ, ಪಾಂಡುಸುತರ ವನವಾಸ, ಯದುಗಳ ಪರಸ್ಪರ ಯುದ್ಧದಿಂದ ಮರಣ, ನಳರಾಜನ ರಾಜ್ಯನಿರ್ಗಮನ, ವಸಿಷ್ಠಶಾಪದಿಂದ ಸೌದಸನಿಂದ ರಾಕ್ಷಸಯೋನಿಯ ಪ್ರವೇಶ, ಕಾರ್ತವೀಯಾರ್ಜುನನ ವಧೆ, ರಾವಣನ ನಾಶ – ಇವೆಲ್ಲವೂ ರಾಜ್ಯಕ್ಕಾಗಿಯೇ ಆದವು ಎಂಬುದನ್ನು ಅರಿತು ಬುದ್ಧಿವಂತನು ರಾಜ್ಯವನ್ನು ಇಚ್ಛಿಸಬಾರದು.”

ನೇಕಾರ – “ನೀನು ನಿಜವನ್ನೇ ನುಡಿದೆ. ಏನನ್ನು ಕೇಳಿಕೊಳ್ಳಲೆಂದು ತಿಳಿಸು”

ಹೆಂಡತಿ – “ನೀನು ನಿತ್ಯವೂ ಒಂದು ವಸ್ತ್ರವನ್ನು ಮಾಡುತ್ತೀಯೆ. ಅದರಿಂದ ನಮ್ಮ ಕುಟುಂಬದ ನಿರ್ವಹಣೆಯಾಗುತ್ತದೆ. ಈಗ ನೀನು ನಿನಗಾಗಿ ಮತ್ತೆರಡು ಭುಜಗಳನ್ನು ಮತ್ತು ಇನ್ನೊಂದು ತಲೆಯನ್ನು ಬೇಡಿಕೊ. ಇದರಿಂದ ಹಿಂದೆಯಿಂದ ಮತ್ತು ಮುಂದೆಯಿಂದ ಒಮ್ಮೆಗೆ ಎರಡು ವಸ್ತ್ರಗಳನ್ನು ಮಾಡಬಹುದು. ಮೊದಲಿನ ವಸ್ತ್ರದ ಹಣದಿಂದ ಹಿಂದಿನಂತೆ ಮನೆಗಾಗಿ ಸಂಪಾದನೆಯನ್ನು ಮಾಡಬಹುದು. ಎರಡನೆಯದರಿಂದ ಬಂದ ಹಣದಿಂದ ವಿಶೇಷ ಕಾರ್ಯಗಳನ್ನು ಮಾಡಬಹುದು. ಹೀಗೆ ಸುಖವಾಗಿ ನಿನ್ನ ಜನರ ಮಧ್ಯೆ ಗೌರವದಿಂದ ಕಾಲವನ್ನು ಕಳೆಯಬಹುದು. ಇಹಪರ ಲೋಕಗಳಲ್ಲಿಯೂ ಸುಖವು ಪ್ರಾಪ್ತವಾಗುವುದು.”

ಅದನ್ನು ಕೇಳಿ ಹರ್ಷದಿಂದ ನೇಕಾರನು ಹೇಳಿದನು – “ಪ್ರತಿವತೇ, ಸರಿಯಾಗಿಯೇ ಹೇಳಿದೆ. ಹಾಗೆಯೇ ಮಾಡುವೆನು, ಇದೇ ನನ್ನ ನಿರ್ಧಾರ”

ಆನಂತರ ಅವನು ಹೋಗಿ ದೇವತೆಯನ್ನು ಪ್ರಾರ್ಥಿಸಿಕೊಂಡನು – “ನನಗೆ ಇಷ್ಟಪಟ್ಟದ್ದನ್ನು ಕೊಡುವುದಾದರೆ ನನಗೆ ಎರಡನೆಯ ಭುಜಗಳನ್ನು ಹಾಗೂ ಮತ್ತೊಂದು ತಲೆಯನ್ನು ಕೊಡು.”

ಹೀಗೆ ಹೇಳಿದ ಕೂಡಲೇ ಅವನು ಎರಡು ತಲೆಗಳು ಮತ್ತು ನಾಲ್ಕು ಭುಜಗಳುಳ್ಳವನಾದನು. ಸಂತೋಷಗೊಂಡು ಮನೆಗೆ ಬಂದಾಗ ಜನರು ಇವನೊಬ್ಬ ರಾಕ್ಷಸನೆಂದು ಭಾವಿಸಿ ಕೋಲು ಕಲ್ಲುಗಳಿಂದ ಹೊಡೆದು ಸಾಯಿಸಿದರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: