ಕಥಾಮುಖ

ಶಾಸ್ತ್ರಕರ್ತೃವಿನ ಪ್ರಾರ್ಥನೆ

ಬ್ರಹ್ಮ, ರುದ್ರ, ಕುಮಾರ, ಹರಿ, ವರುಣ, ಯಮ, ಅಗ್ನಿ, ಇಂದ್ರ, ಕುಬೇರ, ಸೂರ್ಯಚಂದ್ರರು, ಸರಸ್ವತೀ, ಸಮುದ್ರದೇವತೆ, ನಾಲ್ಕು ಯುಗಗಳು, ಪರ್ವತಗಳು, ವಾಯು, ಭೂಮಿ, ಸರ್ಪಸ್ಗಳು, ಸಿದ್ಧರು, ನದಿಗಳು, ಅಶ್ವಿನೀಕುಮಾರರು, ಲಕ್ಷ್ಮೀ, ಅಸುರರ ಮಾತೆ ದಿತಿ, ಅದಿತಿಸುತರಾದ ದೇವತೆಗಳು, ಚಂಡಿಕಾ ಮಾತೆಯರು, ವೇದಗಳು, ತೀರ್ಥಕ್ಷೇತ್ರಗಳು, ಯಜ್ಞಗಳು, ಶಿವಗಣ, ವಸುಗಳು, ಮುನಿಗಳು, ನವಗ್ರಹಗಳು – ಇವೆಲ್ಲವೂ ನಿತ್ಯವೂ ನಮ್ಮನ್ನು ಕಾಪಾಡಲಿ. ಮನು, ಬೃಹಸ್ಪತಿ, ಶುಕ್ರಾಚಾರ್ಯ, ಪರಾಶರ, ಅವನ ಮಗ ವ್ಯಾಸ, ಚಾಣಕ್ಯ ಹಾಗೂ ನ್ಯಾಯಶಾಸ್ತ್ರಗಳನ್ನು ರಚಿಸಿದ ಇತರ ವಿದ್ವಾಂಸರಿಗೆ ನನ್ನ ನಮನ.

ಜಗತ್ತಿನಲ್ಲಿ ಲಭ್ಯವಿರುವ ಸಕಲ ಅರ್ಥಶಾಸ್ತ್ರಗಳ ಸಾರವನ್ನು ಪರಿಶೀಲಿಸಿ ವಿಷ್ಣುಶರ್ಮನು ಐದು ತಂತ್ರಗಳಿಂದ ಕೂಡಿದ ಈ ಸುಮನೋಹರವಾದ ಶಾಸ್ತ್ರವನ್ನು ರಚಿಸಿರುವನು.

ಪಂಚತಂತ್ರದ ಹಿನ್ನಲೆ ಕಥೆ

ಆ ಪಂಚತ್ರಂತ್ರ ಶಾಸ್ತ್ರವು ಪರಂಪರಾಗತವಾಗಿ ಹೀಗೆ ಕೇಳಿಬರುತ್ತಿದೆ – ದಕ್ಷಿಣಾತ್ಯದೇಶದಲ್ಲಿ ಮಹಿಲಾರೋಪ್ಯವೆಂಬ ನಗರವಿದೆ. ಅಲ್ಲಿ ದಾನದಲ್ಲಿ ಕಲ್ಪವೃಕ್ಷಕ್ಕೆ ಸಮನಾದ, ದೊಡ್ಡ ದೊಡ್ಡ ರಾಜರ ಕಿರೀಟದಲ್ಲಿರುವ ರತ್ನಗಳ ಕಿರಣಗಳಿಂದ ಪಾದಪೂಜೆಯನ್ನು ಪಡೆಯುತ್ತಿದ್ದ (ಅಂದರೆ ಸಕಲ ರಾಜರ ಗೌರವಕ್ಕೆ ಪಾತ್ರನಾಗಿದ್ದ ಎಂದರ್ಥ), ಸಕಲಕಲಾಪಾರಂಗತನಾದ ಅಮರಶಕ್ತಿಯೆಂಬ ರಾಜನಿದ್ದನು. ಅವನಿಗೆ ಬಹುಶಕ್ತಿ, ಉಗ್ರಶಕ್ತಿ ಹಾಗೂ ಅನಂತಶಕ್ತಿ ಎಂಬ ಹೆಸರಿನ ಅತ್ಯಂತ ಮೂರ್ಖರಾದ ಮೂವರು ಮಕ್ಕಳಿದ್ದರು.

ಶಾಸ್ತ್ರಜ್ಞಾನವನ್ನು ತಿಳಿಯದ ಅವರನ್ನು ಕಂಡು ರಾಜನು ತನ್ನ ಸಚಿವರನ್ನು ಕರೆದು ಹೇಳಿದನು – “ಸಚಿವರೇ, ನಿಮ್ಮೆಲ್ಲರಿಗೂ ತಿಳಿದ ಹಾಗೆ ಈ ನನ್ನ ಮಕ್ಕಳು ಶಾಸ್ತ್ರಜ್ಞಾನವನ್ನು ಅರಿಯದ ಅವಿವೇಕಿಗಳು. ಇವರನ್ನು ನೋಡುತ್ತಿದ್ದರೆ ನನಗೆ ಮಹತ್ರಾಜ್ಯಸಂಪತ್ತಿದ್ದರೂ ಸುಖವಿಲ್ಲದಂತಾಗಿದೆ. ಮೂರ್ಖ ಮಕ್ಕಳಿರುವುದಕ್ಕಿಂತ ಮಕ್ಕಳಿಲ್ಲದ್ದಿದ್ದರೂ ಅಥವಾ ಸತ್ತುಹೋಗಿದ್ದರೂ ಉತ್ತಮ, ಏಕೆಂದರೆ ಮಕ್ಕಳಿಲ್ಲದ ದುಃಖ ಮತ್ತು ಮಕ್ಕಳು ಸತ್ತ ದುಃಖ ಸ್ವಲ್ಪಕಾಲ ಮಾತ್ರ ಇರುತ್ತದೆ. ಆದರೆ ಬದುಕಿರುವ ಮೂರ್ಖ ಮಕ್ಕಳಿಂದ ನಿತ್ಯವೂ ದುಃಖಪಡಬೇಕಾಗುತ್ತದೆ. ಮಗನು ರೂಪವಂತನಾಗಿ ಹಾಗೂ ಧನವಂತನಾಗಿ ಆದರೆ ಮೂರ್ಖನಾಗಿ ಹುಟ್ಟುವುದಕ್ಕಿಂತ ಗರ್ಭಪಾತವೋ, ಋತುಕಾಲದಲ್ಲಿ ಹೆಂಡತಿಯೊಡನೆ ಕೂಡದಿರುವುದೋ, ಹುಟ್ಟಿ ಸತ್ತುಹೋಗುವುದೋ, ಹೆಣ್ಣಾಗಿ ಹುಟ್ಟುವುದೋ, ಹೆಂಡತಿಗೆ ಮಕ್ಕಳಾಗದಿರುವುದೋ ಅಥವಾ ಮಗುವು ಗರ್ಭದಿಂದ ಹೊರಗೆ ಬರದೇ ಇರುವದೋ – ಇದು ಯಾವುದಾದರೂ ಒಳಿತು. ಹೇಗೆ ಕರುವನ್ನು ನೀಡದ ಮತ್ತು ಹಾಲನ್ನೂ ಕೊಡದ ಹಸುವಿನಿಂದ ಏನೂ ಪ್ರಯೋಜನವಿಲ್ಲವೋ ಹಾಗೆ ಬುದ್ಧಿವಂತನಲ್ಲದ ಮತ್ತು ವಿನಯಶೀಲನಲ್ಲದ ಮಗನಿಂದ ಏನೂ ಪ್ರಯೋಜನವಿಲ್ಲ. ಸತ್ಕುಲದಲ್ಲಿ ಮೂರ್ಖ ಮಗನು ಹುಟ್ಟುವುದಕ್ಕಿಂತ ಮಗನ ಮರಣವೇ ಒಳ್ಳೆಯದು ಏಕೆಂದರೆ ಅಂತಹ ಮೂರ್ಖನು ವಿದ್ಯಾವಂತರ ಮುಂದೆ ಮಿಂಡನ ಮಗನಂತೆ ನಾಚಿಕೆಯಿಂದಲೇ ಬದುಕಬೇಕಾಗುತ್ತದೆ. ಗುಣವಂತರನ್ನು ಉಲ್ಲೇಖಿಸುವ ಸಂದರ್ಭದಲ್ಲಿ ಯಾರ ಹೆಸರನ್ನು ಸಂಭ್ರಮದಿಂದ ತೆಗೆದುಕೊಳ್ಳಲಾಗುವುದಿಲ್ಲವೋ, ಅಂತವನ ತಾಯಿಯನ್ನು ಪುತ್ರವತೀ ಎನ್ನುವುದಾದರೆ, ಇನ್ನು ಬಂಜೆಯೆಂದು ಯಾರನ್ನು ಕರೆಯಬೇಕು ?

ಆದ್ದರಿಂದ ಈ ನನ್ನ ಮಕ್ಕಳ ಬುದ್ಧಿಯನ್ನು ವಿಕಸನಗೊಳಿಸುವ ಏನಾದರೂ ಉಪಾಯವಿದ್ದಲ್ಲಿ ಹೇಳಿ. ಇಲ್ಲಿ ನನ್ನ ಆಶ್ರಯದಲ್ಲೇ ಐದುನೂರು ಪಂಡಿತರಿರುವರು. ಹಾಗಾಗಿ ನನ್ನ ಮನೋರಥವು ಸಿದ್ಧಿಸುವಂತೆ ಮಾಡಿ”

ಅದರಲ್ಲಿ ಒಬ್ಬ ಸಚಿವನು ಹೇಳಿದನು – “ವ್ಯಾಕರಣವನ್ನು ಕಲಿಯಲು ಹನ್ನೆರಡು ವರ್ಷಗಳು ಬೇಕು. ನಂತರ ಮನುಸ್ಮೃತಿ ಮುಂತಾದ ಧರ್ಮಶಾಸ್ತ್ರಗಳು, ಚಾಣಕ್ಯನ ಅರ್ಥಶಾಸ್ತ್ರ ಮುಂತಾದವುಗಳು, ವಾತ್ಸಾಯನನ ಕಾಮಶಾಸ್ತ್ರ ಮುಂತಾದವುಗಳನ್ನು ಕಲಿಯಬೇಕು, ಆಗ ಸರಿಯಾದ ಉಪದೇಶವಾಗುತ್ತದೆ.” ಆಗ ಅವರಲ್ಲಿ ಸುಮತಿಯೆಂಬ ಸಚಿವನು ನುಡಿದನು – “ಈ ಜೀವನವು ಶಾಶ್ವತವಲ್ಲ ಮತ್ತು ಈ ಶಾಸ್ತ್ರಗಳನ್ನೆಲ್ಲಾ ದೀರ್ಘಕಾಲದಿಂದ ಅಭ್ಯಾಸಮಾಡಬೇಕು. ಆದ್ದರಿಂದ ಶಾಸ್ತ್ರವನ್ನು ಸಂಕ್ಷೇಪದಲ್ಲಿ ಇವರಿಗೆ ಬೋಧಿಸುವುದಕ್ಕಾಗುತ್ತದೆಯೇ ಎಂದು ವಿಚಾರಮಾಡಬೇಕು. ವ್ಯಾಕರಣ ಮುಂತಾದ ಶಾಸ್ತ್ರಗಳಿಗೆ ಕೊನೆಯೆಂಬುದಿಲ್ಲ, ಅಲ್ಲದೇ ಇರುವ ನಮ್ಮ ಕಡಿಮೆ ಆಯಸ್ಸಿನಲ್ಲಿ ವಿಘ್ನಗಳು ಹಲವಾರು. ಹಾಗಾಗಿ ಹಂಸಗಳು ಹಾಲನ್ನು ನೀರಿನಿಂದ ಬೇರ್ಪಡಿಸಿ ಹೇಗೆ ಕುಡಿಯುತ್ತವೆಯೋ ಹಾಗೆ ಶಾಸ್ತ್ರಗಳಲ್ಲಿ ಸತ್ವವಿಲ್ಲದ್ದನ್ನು ಬಿಟ್ಟು ಕೇವಲ ಸಾರಮಾತ್ರವನ್ನು ತಿಳಿದುಕೊಳ್ಳಬೇಕು. ಇಲ್ಲಿ ಸಕಲಶಾಸ್ತ್ರಪಾರಂಗತನಾದ, ವಿದ್ಯಾರ್ಥಿಸಮುದಾಯದಲ್ಲಿ ಹೆಸರುವಾಸಿಯಾದ ವಿಷ್ಣುಶರ್ಮನೆಂಬ ಬ್ರಾಹ್ಮಣನಿದ್ದಾನೆ. ಈ ಪುತ್ರರನ್ನು ಅವನಲ್ಲಿಗೆ ಕಳಿಸಿ. ಆತನು ಖಂಡಿತವಾಗಿಯೂ ಬೇಗನೆ ಇವರನ್ನು ಬುದ್ಧಿವಂತನ್ನನಾಗಿ ಮಾಡುವನು.”

ರಾಜನು ವಿಷ್ಣುಶರ್ಮನನ್ನು ಕರೆಸಿ ಹೇಳಿದನು – “ಎಲೈ ಪೂಜ್ಯನೇ, ಇವರಿಗೆ ಶೀಘ್ರದಲ್ಲೇ ಅರ್ಥಶಾಸ್ತ್ರದಲ್ಲಿ ಕುಶಲತೆ ಬರುವಂತೆ ಮಾಡಿ ನನ್ನನ್ನು ಅನುಗ್ರಹಿಸು. ಹಾಗೆ ಮಾಡಿದ್ದಲ್ಲಿ ನಿನ್ನನ್ನು ನೂರು ಗ್ರಾಮಗಳ ಅಧಿಪತಿಯನ್ನಾಗಿ ಮಾಡುತ್ತೇನೆ.”

ಆಗ ವಿಷ್ಣುಶರ್ಮನು ಆ ರಾಜನಿಗೆ ಹೇಳಿದನು – “ದೇವ, ನನ್ನ ಸತ್ಯನುಡಿಗಳನ್ನು ಕೇಳಿ. ನೂರುಗ್ರಾಮಗಳಿಗಾಗಿ ನಾನು ವಿದ್ಯೆಯನ್ನು ಮಾರುವುದಿಲ್ಲ. ಆದರೂ ನಿಮ್ಮ ಈ ಮಕ್ಕಳನ್ನು ಆರು ತಿಂಗಳುಗಳಲ್ಲಿ ನೀತಿಶಾಸ್ತ್ರಜ್ಞರನ್ನಾಗಿ ಮಾಡದಿದ್ದಲ್ಲಿ ನನ್ನ ನಾಮತ್ಯಾಗವನ್ನು ಮಾಡುವೆನು. ಹೆಚ್ಚೇಕೆ ? ಈ ನನ್ನ ಪ್ರತಿಜ್ಞೆಯನ್ನು ಕೇಳಿ – ನಾನು ಧನಲೋಭಿಯಲ್ಲ, ಇಂದ್ರಿಯಸುಖವನ್ನು ಬಯಸದ ಎಂಭತ್ತು ವರ್ಷಗಳಾದ ನನಗೆ ಈ ಹಣದಿಂದೇನು ಪ್ರಯೋಜನ ? ನಿನ್ನ ಪ್ರಾರ್ಥನೆಯನ್ನು ಅನುಗ್ರಹಿಸಲು ವಿದ್ಯಾಚಮತ್ಕಾರವನ್ನು ಮಾಡುತ್ತೇನೆ. ಈ ದಿನವನ್ನು ಬರೆದಿಡು, ಆರು ತಿಂಗಳುಗಳಲ್ಲಿ ನಿನ್ನ ಮಕ್ಕಳನ್ನು ನೀತಿಶಾಸ್ತ್ರದಲ್ಲಿ ಅತಿಕೌಶಲರನ್ನಾಗಿ ಮಾಡದಿದ್ದರೆ, ನನ್ನನು ನೀನು ದೇವಲೋಕದ ಕಡೆಗೆ ಕಳಿಸಬಹುದು”

ಸಚಿವರೊಡನೆ ರಾಜನು ಬ್ರಾಹ್ಮಣನ ಆ ಅಸಾಧಾರಣವಾದ ಪ್ರತಿಜ್ಞೆಯನ್ನು ಕೇಳಿ ವಿಸ್ಮಯ ಹಾಗೂ ಸಂತೋಷಗೊಂಡು ಆದರಪೂರ್ವಕವಾಗಿ ಮಕ್ಕಳನ್ನು ಅವನಿಗೆ ಒಪ್ಪಿಸಿ ಅತ್ಯಂತ ನಿಶ್ಚಿಂತೆಯಿಂದ ಇದ್ದನು.

ವಿಷ್ಣುಶರ್ಮನು ಅವರನ್ನು ಕರೆದುಕೊಂಡು ಹೋಗಿ, ಅವರಿಗಾಗಿ ಮಿತ್ರಭೇದ, ಮಿತ್ರಸಂಪ್ರಾಪ್ತಿ, ಕಾಕೋಲೂಕೀಯ, ಲಬ್ಧಪ್ರಣಾಶ ಮತ್ತು ಅಪರೀಕ್ಷಿತಕಾರಕ ಎಂಬ ಐದು ತಂತ್ರಗಳನ್ನು ರಚಿಸಿ ಆ ರಾಜಕುಮಾರರಿಗೆ ಪಾಠಮಾಡಿದನು. ಅವರು ಕೂಡ ಆ ತಂತ್ರಗಳನ್ನು ಅಭ್ಯಾಸಮಾಡಿ ಆರು ತಿಂಗಳಿನಲ್ಲಿ ಅವನು ಹೇಳಿದಂತೆ ನಿಪುಣರಾದರು. ಅಂದಿನಿಂದ ಆ ನೀತಿಶಾಸ್ತ್ರವು ಪಂಚತಂತ್ರವೆಂಬ ಹೆಸರಿನಿಂದ ಬಾಲಬೋಧನೆಗಾಗಿ ಜಗತ್ತಿನಲ್ಲಿ ಪ್ರಸಿದ್ಧವಾಯಿತು. ಹೆಚ್ಚೇಕೆ ? ಯಾರು ನಿತ್ಯ ಈ ನೀತಿಶಾಸ್ತ್ರವನ್ನು ಅಧ್ಯಯನ ಮಾಡುವರೋ ಅವರು ಇಂದ್ರನಿಂದ ಕೂಡ ಸೋಲನ್ನು ಕಾಣಲಾರರು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: