3-1-ಕಾಗೆ – ಗೂಬೆಗಳ ವೈರತ್ವದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಮ್ಮೆ ಹಂಸ, ಗಿಳಿ, ಬಕ, ಕೋಗಿಲೆ, ಚಾತಕ, ಗೂಬೆ, ಪಾರಿವಾಳ, ಕೋಳಿ ಮುಂತಾದ ಪಕ್ಷಿಗಳು ಒಂದುಗೂಡಿ ಉದ್ವೇಗದಿಂದ ಮಂತ್ರಾಲೋಚನೆಯಲ್ಲಿ ತೊಡಗಿದವು – “ನಮ್ಮ ರಾಜನಾದರೋ ಗರುಡ ಹಾಗೂ ಅವನು ವಿಷ್ಣುಭಕ್ತ. ಅವನು ಎಂದೂ ನಮ್ಮ ಬಗ್ಗೆ ಚಿಂತಿಸುವುದಿಲ್ಲ. ಅಲ್ಲದೆ ನಿತ್ಯವೂ ಬೇಟೆಗಾರನ ವಶಕ್ಕೆ ಸಿಲುಕುವ ನಮ್ಮನ್ನು ಕಾಪಾಡುವುದೂ ಇಲ್ಲ. ಹಾಗಾಗಿ ಅವನು ರಾಜನಾಗಿ ಏನು ತಾನೆ ಪ್ರಯೋಜನ ? ಯಾವಾಗಲೂ ಶತ್ರುಗಳಿಂದ ತೊಂದರೆಗೊಳಗಾಗಿ ಭಯಗೊಂಡಿರುವ ಪ್ರಾಣಿಗಳನ್ನು ರಕ್ಷಿಸದ ರಾಜ ಯಮನೇ ಸರಿ. ರಾಜನು ಪ್ರಜೆಗಳ ಸರಿಯಾದ ರಕ್ಷಣೆಯನ್ನು ಮಾಡದಿದ್ದರೆ, ಅಂಬಿಗನಿಲ್ಲದ ದೋಣಿಯು ಸಮುದ್ರದಲ್ಲಿ ಮುಳುಗಿಹೋಗುವಂತೆ ಪ್ರಜೆಗಳು ಆಪತ್ತಿಗೆ ಸಿಲುಕುವರು. ಉಪದೇಶವನ್ನು ಮಾಡದ ಆಚಾರ್ಯ, ಅಧ್ಯಯನ ಮಾಡದ ಋತ್ವಿಜ, ರಕ್ಷಣೆಯನ್ನು ಮಾಡದ ರಾಜ, ಅಪ್ರಿಯವನ್ನು ನುಡಿಯುವ ಹೆಂಡತಿ, ಗ್ರಾಮವಾಸವನ್ನೇ ಬಯಸುವ ಗೋಪಾಲಕ (ಗೋಪಾಲಕನು ಗೋವುಗಳನ್ನು ಮೇಯಿಸಲು ಗ್ರಾಮದ ಹೊರಗೆ ಕರೆದುಕೊಂಡು ಹೋಗಬೇಕು) ಹಾಗೂ ವನವಾಸವನ್ನು ಬಯಸುವ ಕ್ಷೌರಿಕ (ಅಥವಾ ನಾಯಿಂದ) – ಈ ಆರು ಮಂದಿಯನ್ನು ಸಮುದ್ರದಲ್ಲಿ ತುಂಡಾದ ನೌಕೆಯನ್ನು ತ್ಯಜಿಸುವಂತೆ ತ್ಯಜಿಸಿ ಬಿಡಬೇಕು. ಆದ್ದರಿಂದ ಸರಿಯಾಗಿ ವಿಚಾರ ಮಾಡಿ ಬೇರೆ ಯಾರನ್ನಾದರೂ ರಾಜನನ್ನಾಗಿ ಮಾಡಬೇಕು.”

ಆಗ ಶುಭವಾದ ಆಕಾರವುಳ್ಳ ಗೂಬೆಯನ್ನು ನೋಡಿ ಎಲ್ಲರೂ ಹೇಳಿದರು – “ಈ ಗೂಬೆಯು ನಮ್ಮ ರಾಜನಾಗುವನು, ರಾಜಾಭಿಷೇಕಕ್ಕೆ ಬೇಕಾದ ಸಾಮಾಗ್ರಿಗಳನ್ನು ತನ್ನಿರಿ.” ಆನಂತರ ವಿವಿಧ ಪವಿತ್ರ ನದಿಗಳ ನೀರು ತರಲ್ಪಡಲು, 108 ಮೂಲಿಕೆಗಳು ಸಂಗ್ರಹಿಸಲ್ಪಡಲು, ಸಿಂಹಾಸನವು ಸ್ಥಾಪಿಸಲ್ಪಡಲು, ಸಪ್ತದ್ವೀಪಸಮುದ್ರಪರ್ವತಗಳಿಂದ ಕೂಡಿದ ಭೂಮಂಡಲವು ಅಲಂಕರಿಸಲ್ಪಡಲು, ಹುಲಿಚರ್ಮಗಳು ಹಾಸಲ್ಪಡಲು, ಸುವರ್ಣಕಲಶಗಳು ನೀರಿನಿಂದ, ದೀಪಗಳು ಎಣ್ಣೆಯಿಂದ ಮತ್ತು ವಾದ್ಯಗಳು ಶಬ್ದದಿಂದ ತುಂಬಲ್ಪಡಲು, ಮಂಗಳಸಾಮಾಗ್ರಿಗಳು ಸಿದ್ಧಗೊಂಡಿರಲು, ಸ್ತುತಿಪಾಠಕರು ಸ್ತುತಿಸುತ್ತಿರಲು, ಬ್ರಾಹ್ಮಣರು ಒಟ್ಟುಗೂಡಿ ವೇದಘೋಷವನ್ನು ಮಾಡುತ್ತಿರಲು, ಯುವತಿಯರು ಹಾಡುತ್ತಿರಲು, ಕೃಕಾಲಿಕೆಯೆಂಬ (ಕೃಕಾಲಿಕಾ – ಒಂದು ಪಕ್ಷಿವಿಶೇಷ) ಪಟ್ಟದ ರಾಣಿಯು ಬಂದಿರಲು, ಅಭಿಷೇಕಕ್ಕಾಗಿ ಗೂಬೆಯು ಸಿಂಹಾಸನದಲ್ಲಿ ಕುಳಿತುಕೊಳ್ಳಲು ಹೊರಟಿರಲು, ಎಲ್ಲಿಂದಲೋ ಒಂದು ಕಾಗೆಯು ಅಲ್ಲಿಗೆ ಬಂತು.

ಕಾಗೆಯು ಯೋಚಿಸಿತು – “ಓಹೋ! ಸಕಲ ಪಕ್ಷಿಗಳೂ ಸೇರಿರುವ ಏನಿದು ಮಹೋತ್ಸವ ?”

ಕಾಗೆಯನ್ನು ನೋಡಿದ ಇತರ ಪಕ್ಷಿಗಳು ಪರಸ್ಪರ ಹೇಳಿಕೊಂಡವು – “ಪಕ್ಷಿಗಳಲ್ಲಿ ಕಾಗೆಯು ಬುದ್ಧಿವಂತನೆಂದು ಹೇಳುತ್ತಾರೆ. ಆದ್ದರಿಂದ ಇದರ ಮಾತನ್ನೂ ಕೂಡ ಕೇಳೋಣ. ಮನುಷ್ಯರಲ್ಲಿ ನಾಪಿತನು (ನಾಪಿತ – ಕ್ಷೌರಿಕ ಅಥವಾ ಕ್ಷತ್ರಿಯನಿಂದ ಶೂದ್ರಸ್ತ್ರೀಯಲ್ಲಿ ಹುಟ್ಟಿದವನು), ಪಕ್ಷಿಗಳಲ್ಲಿ ಕಾಗೆಯು, ಕೋರೆಹಲ್ಲುಗಳುಳ್ಳ ಪ್ರಾಣಿಗಳಲ್ಲಿ (ಅಂದರೆ ಮಾಂಸಾಹಾರಿ ಪ್ರಾಣಿಗಳಲ್ಲಿ) ನರಿ ಮತ್ತು ತಪಸ್ವಿಗಳಲ್ಲಿ ಶ್ವೇತಾಂಬರ ಭಿಕ್ಷು (ಜೈನ ಭಿಕ್ಷು) ಅತ್ಯಂತ ಧೂರ್ತ (ಅಥವಾ ಚತುರ) ಎಂದು ಪರಿಗಣಿಸಲ್ಪಡುತ್ತಾರೆ. ಅಲ್ಲದೆ, ಹಲವು ಜನರೊಂದಿಗೆ ಹಲವು ರೀತಿಯಲ್ಲಿ ವಿಚಾರಿಸಲ್ಪಟ್ಟ ಹಾಗೂ ವಿದ್ವಾಂಸರಿಂದ ಯೋಚಿಸಲ್ಪಟ್ಟು ಸರಿಯಾಗಿ ನಿರೂಪಿಸಲ್ಪಟ್ಟ ನೀತಿಪ್ರಯೋಗಗಳು ಎಂದಿಗೂ ವಿಫಲವಾಗುವುದಿಲ್ಲ.”

ಕಾಗೆಯು ಸಮೀಪಕ್ಕೆ ಬಂದು ಹೇಳಿತು – “ಏಕೆ ಇಷ್ಟೊಂದು ಜನ ಸೇರಿದ್ದೀರಿ ? ಮಹೋತ್ಸವವೇ ?”

ಪಕ್ಷಿಗಳು ಹೇಳಿದವು – “ಕಾಗೆಯೇ, ಪಕ್ಷಿಗಳಿಗೆ ರಾಜನಿಲ್ಲ. ಆದ್ದರಿಂದ ಈ ಗೂಬೆಯನ್ನು ಪಕ್ಷಿಗಳ ರಾಜನನ್ನಾಗಿ ಅಭಿಷೇಕ ಮಾಡಲು ಸಮಸ್ತ ಪಕ್ಷಿಗಳೂ ನಿರ್ಧರಿಸಿವೆ. ಸರಿಯಾದ ಸಮಯಕ್ಕೆ ಬಂದಿರುವ ನೀನೂ ಕೂಡ ನಿನ್ನ ಅಭಿಪ್ರಾಯವನ್ನು ತಿಳಿಸು.”

ಕಾಗೆಯು ಜೋರಾಗಿ ನಕ್ಕು ನುಡಿಯಿತು – “ಅಯ್ಯೋ, ಇದು ಸರಿಯಲ್ಲ, ನವಿಲು, ಹಂಸ, ಕೋಗಿಲೆ, ಚಕ್ರವಾಕ, ಗಿಳಿ, ಕಾರಂಡವ (ಹಂಸ ಜಾತಿಯ ಪಕ್ಷಿ), ಹಾರೀತ (ಪಾರಿವಾಳ ಜಾತಿಯ ಪಕ್ಷಿ), ಸಾರಸ (ನೀರು ಹಕ್ಕಿ) ಮೊದಲಾದ ಮುಖ್ಯವಾದ ಪಕ್ಷಿಗಳಿರುವಾಗ ಹಗಲಿನಲ್ಲಿ ಕುರುಡಾದ, ಭಯಂಕರ ಮುಖವುಳ್ಳ ಈ ಗೂಬೆಗೆ ರಾಜ್ಯಾಭಿಷೇಕವನ್ನು ಮಾಡುತ್ತಿರುವಿರಿ. ಇದು ಸರಿಯಲ್ಲವೆಂದೇ ನನ್ನ ಮತ. ಕೋಪವಿಲ್ಲದ ಸಮಯದಲ್ಲೇ ಈ ಗೂಬೆಯ ಮೂಗು ವಕ್ರವಾಗಿದೆ, ಕಣ್ಣುಗಳು ಕುಟಿಲತೆಯಿಂದ ಕೂಡಿದೆ ಹಾಗೂ ಕ್ರೂರವಾಗಿ ನೋಡಲು ಅಪ್ರಿಯವಾಗಿದೆ. ಇನ್ನು ಕೋಪಗೊಂಡರೆ ಇದು ಹೇಗೆ ಕಾಣಿಸಬಹುದು ? ಸ್ವಭಾವದಿಂದಲೇ ರೌದ್ರ, ಅತಿ ಉಗ್ರ ಹಾಗೂ ಕಠೋರವಾದಿಯಾಗಿರುವ ಈ ಗೂಬೆಯನ್ನು ರಾಜನನ್ನಾಗಿ ಮಾಡಿದರೆ ಏನು ತಾನೆ ಸಿದ್ಧಿಸುತ್ತದೆ ? ಅಲ್ಲದೆ ಸ್ವಾಮಿ ಗರುಡನು ಇರುವಾಗಲೇ ಈ ಹಗಲು ಕುರುಡನನ್ನು ಹೇಗೆ ತಾನೆ ರಾಜನನ್ನಾಗಿ ಮಾಡುತ್ತೀರಿ ? ಒಂದು ವೇಳೆ ಇವನು ಗುಣವಂತನಾದರೂ ಒಬ್ಬ ರಾಜನಿರುವಾಗ ಮತ್ತೊಬ್ಬನನ್ನು ರಾಜನಾಗಿ ಮಾಡುವುದು ಸೂಕ್ತವಲ್ಲ. ತೇಜಸ್ವಿಯಾದ ಒಬ್ಬ ರಾಜನಿದ್ದರೆ ಭೂಮಿಯ ಹಿತವಾಗುತ್ತದೆ. ಅನೇಕ ರಾಜರಿದ್ದಲ್ಲಿ ಅದು ಪ್ರಳಯಕಾಲದಲ್ಲಿ ಪ್ರಕಾಶಿಸುತ್ತಿರುವ ಸೂರ್ಯರಂತೆ ವಿಪತ್ತಿಗೆ ಕಾರಣವಾಗುತ್ತದೆ. ಗರುಡನ ನಾಮಮಾತ್ರದಿಂದ ನೀವು ಶತ್ರುಗಳಿಗೆ ಅಗಮ್ಯರಾಗುತ್ತೀರಿ. ಏಕೆಂದರೆ ಮಹಾದುಷ್ಟರ ಮುಂದೆ ಕೂಡ ಸ್ವಾಮಿಯ ನಾಮೋಚ್ಛಾರಣೆಯಿಂದ ಆ ಕ್ಷಣವೇ ಕ್ಷೇಮವುಂಟಾಗುತ್ತದೆ. ಮಹಾಪುರುಷರ ಹೆಸರನ್ನು ಹೇಳುವುದರಿಂದ ಕೂಡ ಲಾಭವುಂಟಾಗುತ್ತದೆ. ಚಂದ್ರನ ಹೆಸರನ್ನು ಹೇಳಿಕೊಂಡು ಮೊಲಗಳು ಸುಖವಾಗಿ ವಾಸಿಸುತ್ತಿದ್ದವು.”

ಅದೇನೆಂದು ಪಕ್ಷಿಗಳು ಕೇಳಿದಾಗ ಕಾಗೆಯು ಮೊಲ ಹಾಗು ಗಜೇಂದ್ರನ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಕಾಗೆಯು – “ಆದ್ದರಿಂದಲೇ ನಾನು ಹೇಳುವುದು – ‘ದೊಡ್ಡವರ ಹೆಸರನ್ನು ತೆಗೆದುಕೊಳ್ಳುವುದರಿಂದ… ಎಂದು”

ಕಾಗೆಯು ಮುಂದುವರೆಸುತ್ತಾ – “ತನ್ನ ಜೀವದ ಮೇಲೆ ಆಸೆಯಿರುವವರು ನೀಚನನ್ನು, ಆಲಸಿಯನ್ನು, ಹೇಡಿಯನ್ನು ವ್ಯಸನಕ್ಕೊಳಗಾದವನನ್ನು, ಕೃತಘ್ನನನ್ನು, ಬೆನ್ನ ಹಿಂದೆ ನುಡಿಯುವವನನ್ನು ಎಂದಿಗೂ ರಾಜನನ್ನಾಗಿ ನಿಯೋಜಿಸಬಾರದು. ಹಿಂದೆ ಒಮ್ಮೆ ಮೊಲ ಮತ್ತು ಕಪಿಂಜಲನೆಂಬ ಗುಬ್ಬಿಯು ನ್ಯಾಯಕ್ಕಾಗಿ ನೀಚನಾದ ರಾಜನನ್ನು ಆಶ್ರಯಿಸಿ ಇಬ್ಬರೂ ನಾಶವಾಗಿ ಹೋದವು.”

ಪಕ್ಷಿಗಳು ಅದೇನೆಂದು ಕೇಳಲು ಕಾಗೆಯು ಮೊಲ – ಕಪಿಂಜಲ ಕಥೆಯನ್ನು ಹೇಳಿತು.

ಮುಂದುವರೆಸುತ್ತಾ ಕಾಗೆಯು – “ಆದ್ದರಿಂದಲೇ ನಾನು ಹೇಳುವುದು – ‘ನೀಚನಾದ ರಾಜನನ್ನು ಆಶ್ರಯಿಸಿ…’ ಎಂಬುದಾಗಿ. ನೀವೂ ಕೂಡ ಈ ಹಗಲು ಕುರುಡ, ನೀಚ ಗೂಬೆಯನ್ನು ರಾಜನನ್ನಾಗಿಸಿ, ರಾತ್ರಿಯಲ್ಲಿ ನೋಡಲಾರದೆ, ಮೊಲ, ಕಪಿಂಜಲರಂತೆ ನಾಶವಾಗಿ ಹೋಗುವಿರಿ. ಆದ್ದರಿಂದ ಸರಿಯಾಗಿ ತಿಳಿದುಕೊಂಡು ಅದರಂತೆ ಮಾಡಿರಿ.”

ಕಾಗೆಯ ಮಾತನ್ನು ಕೇಳಿದ ಇತರ ಪಕ್ಷಿಗಳು “ಕಾಗೆಯು ಸರಿಯಾದುದನ್ನೇ ಹೇಳಿದೆ” ಮತ್ತು “ರಾಜನ ಬಗ್ಗೆ ಮತ್ತೊಮ್ಮೆ ಒಂದುಗೂಡಿ ನಿರ್ಧರಿಸೋಣ” ಎನ್ನುತ್ತಾ ತಮಗೆ ಬೇಕಾದ ದಿಕ್ಕಿಗೆ ಹಾರಿದವು. ಕೇವಲ ಕೃಕಾಲಿಕೆ (ಪಟ್ಟದ ರಾಣಿ) ಯೊಂದಿಗೆ ಅಭಿಷೇಕಕ್ಕಾಗಿ ಭದ್ರಾಸನದಲ್ಲಿ ಕುಳಿತುಕೊಂಡ ಹಗಲುಗುರುಡನಾದ ಗೂಬೆ ಉಳಿದುಕೊಂಡಿತು.

ಗೂಬೆ – “ಯಾರಿರುವರು ಅಲ್ಲಿ ? ಇನ್ನೂ ನನ್ನ ಅಭಿಷೇಕವನ್ನು ಮಾಡುವುದಿಲ್ಲವೇ ?”

ಅದನ್ನು ಕೇಳಿದ ಕೃಕಾಲಿಕೆಯು – “ಭದ್ರ, ನಿನ್ನ ಅಭಿಷೇಕಕ್ಕೆ ಈ ಕಾಗೆಯು ವಿಘ್ನವನ್ನು ತಂದೊಡ್ಡಿತು. ತಮಗೆ ಇಚ್ಛೆ ಬಂದ ದಿಕ್ಕಿಗೆ ಎಲ್ಲಾ ಪಕ್ಷಿಗಳೂ ಹಾರಿಹೋದವು. ಕೇವಲ ಈ ಕಾಗೆಯೊಂದೇ ಯಾವುದೋ ಕಾರಣದಿಂದ ಉಳಿದುಕೊಂಡಿದೆ. ನೀನು ಬೇಗನೆ ಏಳು, ನಿನ್ನ ಆಶ್ರಯಸ್ಥಾನಕ್ಕೆ ನಿನ್ನನ್ನು ತಲುಪಿಸುವೆನು”

ಅದನ್ನು ಕೇಳಿದ ಗೂಬೆಯು ದುಃಖದಿಂದ ಕಾಗೆಗೆ ಹೇಳಿತು – “ಎಲೈ ದುಷ್ಟನೇ, ನಾನು ನಿನಗೇನು ಅಪಕಾರ ಮಾಡಿದ್ದೆ ಎಂದು ನನ್ನ ರಾಜ್ಯಾಭಿಷೇಕವನ್ನು ತಪ್ಪಿಸಿದೆ ? ಇಂದಿನಿಂದ ನಮ್ಮಿಬ್ಬರ ವಂಶದವರಿಗೆ ಹಗೆತನವು ಪ್ರಾರಂಭವಾಯಿತು. ಬಾಣಗಳಿಂದ ಮಾಡಿದ ಗಾಯವು ವಾಸಿಯಾಗುತ್ತದೆ, ಖಡ್ಗದಿಂದ ತುಂಡರಿಸಿದರೂ ಒಂದುಗೂಡುತ್ತದೆ ಆದರೆ ಭೀಷಣವಾದ ಹಾಗೂ ದುರ್ವಾಕ್ಯಗಳಿಂದ ಕೂಡಿದ ಮಾತಿನಿಂದ ಆದ ಗಾಯವು ಎಂದೂ ಮಾಸುವುದಿಲ್ಲ.”

ಹೀಗೆ ಹೇಳಿದ ಗೂಬೆಯು ಕೃಕಾಲಿಕೆಯೊಂದಿಗೆ ತನ್ನ ಸ್ಥಾನಕ್ಕೆ ಹೋಯಿತು.

ಆಗ ಭಯದಿಂದ ವ್ಯಾಕುಲಗೊಂಡ ಕಾಗೆಯು ಚಿಂತಿಸಿತು – “ಅಯ್ಯೋ, ಕಾರಣವಿಲ್ಲದೆ ವೈರತ್ವವನ್ನು ಗಳಿಸಿದೆ. ಎಂಥ ಕೆಲಸ ಮಾಡಿಬಿಟ್ಟೆ. ದೇಶಕಾಲಕ್ಕೆ ಸರಿಯಲ್ಲದ, ಭವಿಷ್ಯದಲ್ಲಿ ತೊಂದರೆಗೆ ಕಾರಣವಾಗುವ, ಅಪ್ರಿಯವಾದ, ತನ್ನ ಸಣ್ಣತನವನ್ನು ಪ್ರಕಾಶಿಸುವ, ಅಕಾರಣವಾದ ಮಾತು ಕೇವಲ ಮಾತಲ್ಲ, ಅದು ವಿಷವೇ ಸರಿ. ಬಲಿಷ್ಠನಾದರೂ ಬುದ್ಧಿವಂತನಾದವನು ತಾನಾಗಿಯೇ ಶತ್ರುತ್ವವನ್ನು ತೊಂದುಕೊಳ್ಳುವುದಿಲ್ಲ. ನನ್ನಲ್ಲಿ ವೈದ್ಯನಿದ್ದಾನೆ ಎಂದು ಯಾರು ತಾನೆ ಕಾರಣವಿಲ್ಲದೆ ವಿಷವನ್ನು ತಿನ್ನುವರು ? ಪಂಡಿತನಾದವನು ಸಭೆಯಲ್ಲಿ ಬೇರೆಯವರಿಗೆ ಅಪವಾದ ಬರುವಂಥ ಯಾವುದೇ ಮಾತನ್ನು ನುಡಿಯಬಾರದು. ಬೇರೆಯವರಿಗೆ ದುಃಖವನ್ನು ಕೊಡುವ ಸತ್ಯವನ್ನಾದರೂ ಕೂಡ ನುಡಿಯಬಾರದು. ಯಾರು ಸ್ನೇಹಿತರೊಂದಿಗೆ ಮತ್ತು ಆಪ್ತರೊಂದಿಗೆ ಸರಿಯಾಗಿ ವಿಚಾರಮಾಡಿ, ತನ್ನ ಬುದ್ಧಿಯಿಂದ ಕೂಡ ವಿಚಾರಮಾಡಿ ಕಾರ್ಯವನ್ನು ಕೈಗೊಳ್ಳುವನೋ ಅಂತಹ ಬುದ್ಧಿವಂತನು ಸಂಪತ್ತು ಹಾಗೂ ಯಶಸ್ಸನ್ನು ಹೊಂದುವನು.”

ಹೀಗೆ ಯೋಚಿಸಿ ಕಾಗೆಯೂ ಹೊರಟುಹೋಯಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: