3-1-2-ಮೊಲ – ಕಪಿಂಜಲ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಹಿಂದೆ ನಾನು (ಅಂದರೆ ಈ ಕಥೆಯನ್ನು ಹೇಳುತ್ತಿರುವ ಕಾಗೆ) ಒಂದು ಮರದಲ್ಲಿ ವಾಸವಾಗಿದ್ದೆ. ಮರದ ಕೆಳಗೆ ಪೊಟರೆಯಲ್ಲಿ ಕಪಿಂಜಲನೆಂಬ ಗುಬ್ಬಿಯು ವಾಸಿಸುತ್ತಿತ್ತು. ಯಾವಾಗಲೂ ಸೂರ್ಯಾಸ್ತದ ವೇಳೆಯಲ್ಲಿ ನಾವಿಬ್ಬರೂ ಮರಳಿ ಬಂದು ಅನೇಕ ಸುಭಾಷಿತ ಗೋಷ್ಠಿಗಳನ್ನೂ, ದೇವರ್ಷಿ, ಬ್ರಹ್ಮರ್ಷಿ, ರಾಜರ್ಷಿಗಳ ಪುರಾಣಕಥೆಗಳನ್ನು ಹೇಳಿಕೊಳ್ಳುತ್ತಾ, ನಾವು ಅಲೆಯುವಾಗ ನೋಡಿದ ಕುತೂಹಲಕಾರಿ ವಿಚಾರಗಳ ಬಗ್ಗೆ ಮಾತನಾಡುತ್ತಾ, ಪರಮಸುಖವನ್ನು ಅನುಭವಿಸುತ್ತಾ ಕಾಲವನ್ನು ಕಳೆಯುತ್ತಿದ್ದೆವು. ಹೀಗೆ ಒಮ್ಮೆ ಕಪಿಂಜಲ ಗುಬ್ಬಿಯು ಆಹಾರವನ್ನು ಹುಡುಕುತ್ತಾ ಬೇರೆ ಗುಬ್ಬಿಗಳೊಂದಿಗೆ ಪಕ್ವವಾದ ಬತ್ತವು ಬೆಳೆದಿರುವ ಪ್ರದೇಶಕ್ಕೆ ಹೋಯಿತು. ರಾತ್ರಿಯಾದರೂ ಅದು ಬಾರದಿದ್ದಾಗ ನಾನು ಮನಸ್ಸಿನಲ್ಲಿ ಉದ್ವೇಗಗೊಂಡು ಅದರ ವಿಯೋಗದ ದುಃಖದಿಂದ ಚಿಂತಿಸಿದೆನು – “ಅಯ್ಯೋ, ಕಪಿಂಜಲ ಇಂದು ಏಕೆ ಬರಲಿಲ್ಲ ? ಯಾವುದಾದರೂ ಬಲೆಯಲ್ಲಿ ಸಿಕ್ಕಿಕೊಂಡಿತೋ ? ಅಥವಾ ಯಾರಾದರೂ ಕೊಂದರೆ ? ಅದು ಕುಶಲವಾಗಿದ್ದಲ್ಲಿ ನನ್ನನ್ನು ಬಿಟ್ಟು ಇರುತ್ತಿರಲಿಲ್ಲ.” ಹೀಗೆ ಚಿಂತಿಸುತ್ತಿದ್ದು ಅನೇಕ ದಿನಗಳು ಕಳೆದುಹೋಯಿತು. ಆನಂತರ ಒಮ್ಮೆ ಶೀಘ್ರಗ ಎಂಬ ಹೆಸರಿನ ಮೊಲವೊಂದು ಸೂರ್ಯಾಸ್ತದ ಸಮಯದಲ್ಲಿ ಬಂದು ಆ ಪೊಟರೆಯನ್ನು ಹೊಕ್ಕಿತು. ನಾನೂ ಕೂಡ ಕಪಿಂಜಲ ಬರದೆ ನಿರಾಶೆಯನ್ನು ಹೊಂದಿದ್ದರಿಂದ ಅದನ್ನು ತಡೆಯಲಿಲ್ಲ.

ಮತ್ತೊಂದು ದಿನ ಬೆಳಗ್ಗೆ ಭತ್ತವನ್ನು ತಿಂದು ಕೊಬ್ಬಿದ ತನುವುಳ್ಳ ಕಪಿಂಜಲ ಗುಬ್ಬಿಯು ತನ್ನ ಆಶ್ರಯಸ್ಥಾನವನ್ನು ಸ್ಮರಿಸಿಕೊಂಡು ವಾಪಸ್ಸು ಬಂತು. ಹೀಗೊಂದು ನುಡಿಯಿದೆ – ಜೀವಿಗಳಿಗೆ ಬಡತನವಿದ್ದರೂ ತನ್ನ ದೇಶದಲ್ಲಿ, ತನ್ನ ಊರಿನಲ್ಲಿ ಹಾಗೂ ತನ್ನ ಮನೆಯಲ್ಲಿ ಎಂತಹ ಸೌಖ್ಯವು ಸಿಗುವುದೋ, ಅಂತಹ ಸೌಖ್ಯ ಸ್ವರ್ಗದಲ್ಲೂ ಸಿಗುವುದಿಲ್ಲ. ಗುಬ್ಬಿಯು ಪೊಟರೆಯಲ್ಲಿರುವ ಮೊಲವನ್ನು ನೋಡಿ ಆಕ್ಷೇಪಿಸಿ ನುಡಿಯಿತು – “ಎಲೈ ಮೊಲವೇ, ನೀನು ಮಾಡಿದ್ದು ಸರಿಯಲ್ಲ. ನನ್ನ ವಾಸಸ್ಥಾನವನ್ನು ಪ್ರವೇಶಿಸಿದ್ದೀಯೆ, ಕೂಡಲೆ ಹೊರಗೆ ಹೋಗು”

ಮೊಲ – “ಇದು ನಿನ್ನ ಮನೆಯಲ್ಲ, ನನ್ನದೇ ಮನೆ. ಏಕೆ ಕಠೋರವಾದ ಸುಳ್ಳನ್ನು ಆಡುವೆ ? ಕೊಳ, ಬಾವಿ, ಸರೋವರ, ದೇವಾಲಯ, ವೃಕ್ಷ – ಇವುಗಳನ್ನು ಒಮ್ಮೆ ತ್ಯಜಿಸಿದ (ದಾನ ಮಾಡಿದ) ಮೇಲೆ ಮತ್ತೆ ಅದರ ಮೇಲೆ ಒಡೆತನವನ್ನು ಮಾಡಲು ಬರುವುದಿಲ್ಲ. ಯಾರು ಒಂದು ಕ್ಷೇತ್ರವನ್ನು ಹತ್ತು ವರ್ಷಗಳ ಕಾಲ ಪ್ರತ್ಯಕ್ಷವಾಗಿ ಅನುಭವಿಸುವರೋ, ಅಲ್ಲಿ ಅನುಭವಿಸಿದ್ದೇ ಅವರ ಒಡೆತನಕ್ಕೆ ಪ್ರಮಾಣ. ಅದಕ್ಕೆ ಮತ್ಯಾವ ಸಾಕ್ಷೀ ಅಥವಾ ಲಿಖಿತ ಆಧಾರಗಳು ಬೇಕಿಲ್ಲ. ಮನುಷ್ಯರಲ್ಲಿ ಈ ನ್ಯಾಯವನ್ನು ಮುನಿಗಳು ತಿಳಿಸಿದ್ದಾರೆ. ಪಶುಪಕ್ಷಿಗಳಲ್ಲಿಯೂ ಇದೇ ನ್ಯಾಯವನ್ನು ಅನುಸರಿಸಬೇಕು. ಆದ್ದರಿಂದ ಇದು ನನ್ನ ಮನೆ, ನಿನ್ನದಲ್ಲ.”

ಕಪಿಂಜಲ – “ಸ್ಮೃತಿಯನ್ನು (ಧರ್ಮಶಾಸ್ತ್ರವನ್ನು) ಪ್ರಮಾಣವಾಗಿ ನೀನು ಹೇಳುವುದಾದರೆ, ನನ್ನ ಜೊತೆ ಬಾ, ಧರ್ಮಶಾಸ್ತ್ರವನ್ನು ಬಲ್ಲವನನ್ನೇ ಕೇಳೋಣ, ಅವನು ಮನೆಯನ್ನು ಯಾರಿಗೆ ಕೊಡುತ್ತಾನೇ ಅದು ಅವನದೇ ಆಗಲಿ.”

ಅವರಿಬ್ಬರು ಹಾಗೆ ಮಾಡಿದಾಗ ನಾನು (ಕಥೆ ಹೇಳುತ್ತಿರುವ ಕಾಗೆ) – ‘ಇಲ್ಲೇನಾಗುವುದು ? ಈ ನ್ಯಾಯವನ್ನು ನಾನು ನೋಡಬೇಕು’  ಎಂದು ಚಿಂತಿಸಿ ಅವರನ್ನು ಅನುಸರಿಸಿದೆ. ಆಮೇಲೆ ತೀಕ್ಷ್ಣದಂಷ್ಟ್ರನೆಂಬ ಕಾಡುಬೆಕ್ಕು ಅವರಿಬ್ಬರ ವಿವಾದವನ್ನು ಕೇಳಿಸಿಕೊಂಡು ಮಾರ್ಗದಲ್ಲಿರುವ ನದೀತೀರವನ್ನು ತಲುಪಿ ಕೈಯಲ್ಲಿ ದರ್ಬೆಯನ್ನು ಹಿಡಿದು, ಕಣ್ಣುಗಳನ್ನು ಮುಚ್ಚಿ, ಭುಜಗಳನ್ನು ಮೇಲೆ ಮಾಡಿ, ಒಂಟಿಕಾಲಿನಲ್ಲಿ ಸುರ್ಯಾಭಿಮುಖವಾಗಿ ನಿಂತು, ಹೀಗೆ ಧರ್ಮೋಪದೇಶವನ್ನು ಮಾಡಿತು – “ಅಯ್ಯೋ, ಈ ಸಂಸಾರ ಸಾರರಹಿತವಾದುದು, ಪ್ರಾಣವು ಕ್ಷಣಿಕವಾದುದು, ಪ್ರಿಯಜನರ ಸಮಾಗಮವು ಕನಸ್ಸಿನಂತೆ ಮಿಥ್ಯವು, ಈ ಕುಟುಂಬವು ಇಂದ್ರಜಾಲದಂತೆ ಮಿಥ್ಯ, ಆದ್ದರಿಂದ ಧರ್ಮವನ್ನು ಬಿಟ್ಟು ಬೇರೆ ಗತಿಯಿಲ್ಲ. ಶರೀರವು ಶಾಶ್ವತವಲ್ಲ, ಸಂಪತ್ತು ಶಾಶ್ವತವಲ್ಲ, ಪ್ರತಿದಿನವೂ ಮೃತ್ಯುವು ಸಮೀಪಕ್ಕೆ ಬರುತ್ತದೆ, ಹಾಗಾಗಿ ಧರ್ಮಸಂಪಾದನೆಯನ್ನು ಮಾಡಬೇಕು. ಧರ್ಮವನ್ನು ಬಿಟ್ಟವನಿಗೂ ದಿನಗಳು ಕಳೆದುಹೋಗುತ್ತವೆ (ಅಂದರೆ ಅವನೂ ಜೀವಿಸುತ್ತಾನೆ). ಆದರೆ ಅವನ ಜೀವನ ಲೋಹಕಾರನ ತೊಗಲಿನ ಚೀಲದಂತೆ ಉಸಿರು ತೆಗೆದುಕೊಳ್ಳುತ್ತಿದ್ದರೂ ಸತ್ತಂತೆ. ತನ್ನ ಗುಪ್ತಾಂಗವನ್ನು ಮುಚ್ಚಿಕೊಳ್ಳಲೂ ಸಾಮರ್ಥ್ಯವಿಲ್ಲದ ಮತ್ತು ನೊಣ ಸೊಳ್ಳೆಗಳನ್ನು ನಿವಾರಿಸಿಕೊಳ್ಳಲಾಗದ ನಾಯಿಯ ಬಾಲದಂತೆ ಧರ್ಮಶೂನ್ಯವಾದ ಪಾಂಡಿತ್ಯವು ವ್ಯರ್ಥವು. ಧರ್ಮವಿಮುಖರಾದವರು ಧಾನ್ಯಗಳಲ್ಲಿ ಅಂತಃಸಾರವಿಲ್ಲದ ಧಾನ್ಯದಂತೆ, ಪಕ್ಷಿಗಳಲ್ಲಿ ಪೂತಿಕದಂತೆ (ತುಚ್ಛವಾದ ಪಕ್ಷಿವಿಶೇಷ) ಮತ್ತು ಪ್ರಾಣಿಗಳಲ್ಲಿ ಸೊಳ್ಳೆಯಂತೆ ನಿಂದನೀಯರು. ಮರಗಳಿಗಿಂತ ಅದರಲ್ಲಿ ಬೆಳೆಯುವ ಫಲಪುಷ್ಪಗಳು ಶ್ರೇಷ್ಠ, ಮೊಸರಿಗಿಂತ ಅದರಿಂದ ಮುಂದೆ ಬರುವ ತುಪ್ಪ ಶ್ರೇಷ್ಠ, ಹಿಂಡಿಗಿಂತ ಎಣ್ಣೆ ಶ್ರೇಷ್ಠ, ಹಾಗೆಯೇ ಮನುಷ್ಯನಿಗಿಂತ ಧರ್ಮವೇ ಶ್ರೇಷ್ಠ. (ಭಾರ ಹೊರುವುದು ಇತ್ಯಾದಿ ಕೆಲಸಗಳ ಮೂಲಕ) ಪಶುಗಳು ಹೇಗೆ ಬೇರೆಯವರ ಕಾರ್ಯಕ್ಕಾಗಿಯೇ ಜೀವಿಸುತ್ತವೆಯೋ ಹಾಗೆ ಧರ್ಮಹೀನರು ಕೇವಲ ಮಲಮೂತ್ರ ವಿಸರ್ಜನೆ ಹಾಗೂ ಆಹಾರ ಸೇವನೆಗಾಗಿಯೇ ಸೃಷ್ಟಿಸಲ್ಪಡುತ್ತಾರೆ. ನೀತಿಶಾಸ್ತ್ರಜ್ಞರು ಎಲ್ಲಾ ಕಾರ್ಯಗಳಲ್ಲಿ ಸ್ಥಿರತೆಯನ್ನು ಪ್ರಶಂಸಿಸುತ್ತಾರೆ. ಅನೇಕ ವಿಘ್ನಗಳಿಂದ ಕೂಡಿದ ಧರ್ಮದ ಗತಿಯು ವೇಗವಾಗಿರುತ್ತದೆ. ಎಲೈ ಮನುಷ್ಯರೇ, ನಿಮಗೆ ಧರ್ಮವನ್ನು ಸಂಕ್ಷೇಪವಾಗಿ ತಿಳಿಸುತ್ತೇನೆ, ವಿಸ್ತಾರದಿಂದೇನು ಪ್ರಯೋಜನ ? ಸಂಕ್ಷೇಪವಾಗಿ ಹೇಳುವುದಾದರೆ ಪರೋಪಕಾರವು ಪುಣ್ಯಕ್ಕಾಗಿ ಮತ್ತು ಪರಪೀಡನೆಯು ಪಾಪಕ್ಕಾಗಿ ಇರುವಂಥದ್ದು.  ಧರ್ಮದ ಸರ್ವಸ್ವವನ್ನು ಹೇಳುತ್ತೇನೆ. ಅದನ್ನು ಕೇಳಿ ಮನಸ್ಸಿಗೆ ತಂದುಕೊಳ್ಳಿ. ತನಗೆ ಪ್ರತಿಕೂಲವಾದ ಕೆಲಸವನ್ನು ಬೇರೆಯವರ ವಿಷಯದಲ್ಲೂ ಮಾಡಬಾರದು.”

ಬೆಕ್ಕಿನ ಆ ರೀತಿಯ ಧರ್ಮೋಪದೇಶವನ್ನು ಕೇಳಿ ಮೊಲವು ಹೇಳಿತು – “ಎಲೈ ಕಪಿಂಜಲ, ಈ ನದೀ ತೀರದಲ್ಲಿ ಧರ್ಮವಾದಿಯಾದ ತಪಸ್ವಿಯಿದ್ದಾನೆ, ಅವನನ್ನೇ ಕೇಳೋಣ.”

ಕಪಿಂಜಲ – “ಇವನು ನಮ್ಮ ಸ್ವಾಭಾವಿಕ ಶತ್ರು, ಆದ್ದರಿಂದ ದೂರದಿಂದಲೇ ಕೇಳೋಣ. (ನಮ್ಮನ್ನು ನೋಡಿ) ಆತನ ವ್ರತಭಂಗವಾಗಬಹುದು.”

ದೂರದಿಂದಲೇ ಅವರು ಹೇಳಿದರು – ”ಎಲೈ ತಪಸ್ವಿಯೇ, ಧರ್ಮೋಪದೇಶಕನೇ, ನಮ್ಮಿಬ್ಬರಲ್ಲಿ ವಿವಾದವುಂಟಾಗಿದೆ. ಧರ್ಮಶಾಸ್ತ್ರದ ರೀತಿಯಿಂದ ಅದನ್ನು ಬಗೆಹರಿಸು. ಯಾರು ದೋಷಿಯೋ ಅವನನ್ನು ನೀನು ತಿನ್ನಬಹುದು.”

ಬೆಕ್ಕು – “ಭದ್ರರೇ, ಹಾಗೆ ನುಡಿಯಬೇಡಿ, ನರಕಕ್ಕೆ ಬೀಳುವ ಮಾರ್ಗದಿಂದ ನಾನು ನಿವೃತ್ತನಾಗಿದ್ದೇನೆ. ಅಹಿಂಸೆಯೇ ಧರ್ಮಮಾರ್ಗವು. ಧರ್ಮವು ಅಹಿಂಸೆಯಿಂದ ಕೂಡಿದೆ ಎಂದು ಸತ್ಪುರುಷರು ಹೇಳಿರುವರು, ಹಾಗಾಗಿ ಹೇನು, ತಿಗಣೆ ಹಾಗೂ ನೊಣಗಳನ್ನೂ ಕೂಡ ರಕ್ಷಿಸಬೇಕು. ನಿರ್ದಯಿಯಾದವನು ಕ್ರೂರ ಪ್ರಾಣಿಗಳನ್ನು ಕೊಂದರೂ ಅವನಿಗೆ ಘೋರ ನರಕವು ಪ್ರಾಪ್ತವಾಗುವುದು, ಇನ್ನು ಸಾಧುಪ್ರಾಣಿಗಳನ್ನು ಕೊಂದರೆ ಹೇಳುವುದೇನಿದೆ ? ಅಲ್ಲದೆ ಯಜ್ಞಕಾರ್ಯದಲ್ಲಿ ಪಶುಗಳನ್ನು ಬಲಿಕೊಡುವ ಯಾಜ್ಞಿಕರು ವೇದದ ಪರಮಾರ್ಥವನ್ನು ತಿಳಿಯದ ಮೂಢರೇ ಸರಿ. ‘ಅಜೈರ್ಯಷ್ಟವ್ಯಂ’ – ಅಜದಿಂದ ಯಜ್ಞವನ್ನು ಮಾಡಬೇಕು ಎನ್ನುವ ವಾಕ್ಯದಲ್ಲಿ ಅಜ ಎಂದರೆ ಪ್ರಾಣಿಯಾದ ಆಡು ಅಲ್ಲ ಬದಲಾಗಿ ಏಳುವರ್ಷಗಳ ಹಳೆಯ ಧಾನ್ಯ ಎಂದು. ಮರಗಳನ್ನು ಕಡಿದು, ಪಶುಗಳನ್ನು ಕೊಂದು, ರಕ್ತದ ಕೆಸರನ್ನು ಮಾಡುವವರು ಸ್ವರ್ಗಕ್ಕೆ ಹೋಗುವುದಾದರೆ, ನರಕಕ್ಕೆ ಯಾರು ತಾನೆ ಹೋಗಬೇಕು ? ಆದ್ದರಿಂದ ನಿಮ್ಮನ್ನು ತಿನ್ನುವುದಿಲ್ಲ, ಆದರೆ ಸೋಲು ಗೆಲುವುಗಳ ನಿರ್ಣಯವನ್ನು ಮಾಡುತ್ತೇನೆ. ನಾನು ವೃದ್ಧನಾಗಿರುವುದರಿಂದ ದೂರ ನಿಂತು ನೀವು ಮಾತನಾಡುವುದನ್ನು ಸರಿಯಾಗಿ ಕೇಳಿಸಿಕೊಳ್ಳಲಾರೆನು. ಆದ್ದರಿಂದ ನನ್ನ ಬಳಿಗೆ ಬಂದು ನನ್ನ ಮುಂದೆ ನಿಮ್ಮ ವಿವಾದವನ್ನು ಹೇಳಿರಿ. ಅದಕ್ಕೆ ಉಚಿತವಾದ ನ್ಯಾಯವನ್ನು ಕೊಡುವೆನು. ಹೀಗೆ ಮಾಡುವುದರಿಂದ ನನಗೆ ಪರಲೋಕದ ಬಾಧೆ ತಪ್ಪುತ್ತದೆ. ಅಭಿಮಾನದಿಂದ ಅಥವಾ ಲೋಭದಿಂದ ಅಥವಾ ಕ್ರೋಧದಿಂದ ಅಥವಾ ಭಯದಿಂದ ಯಾರು ನ್ಯಾಯವಲ್ಲದ್ದನ್ನು ನುಡಿಯುವನೋ ಅಂತವನು ನರಕಕ್ಕೆ ಹೋಗುವನು. ಪಶುಗಳ ವಿವದದಲ್ಲಿ ಸುಳ್ಳನ್ನು ನುಡಿದರೆ ಐದು ಮನುಷ್ಯರನ್ನು ಕೊಂದಷ್ಟು ಪಾಪ ಬರುತ್ತದೆ. ಗೋವುಗಳ ವಿವಾಧದಲ್ಲಿ ಹತ್ತು, ಕನ್ಯಾಸಂಬಂಧಿ ವಿವಾದದಲ್ಲಿ ನೂರು ಹಾಗೂ ಮನುಷ್ಯರ ವಿವದದಲ್ಲಿ ಸಾವಿರ ಮನುಷ್ಯರನ್ನು ಕೊಂಡಷ್ಟು ಪಾಪವು ಬರುತ್ತದೆ. ಸಭಾಮಧ್ಯೆ ಕುಳಿತು ಸ್ಫುಟವಾಗಿ ನ್ಯಾಯವನ್ನು ನುಡಿಯಲಾಗದವನು, ದೂರದಿಂದಲೇ ಸಭೆಯನ್ನು ತ್ಯಜಿಸಿಬಿಡಬೇಕು ಅಥವಾ ಸತ್ಯವನ್ನು ನುಡಿಯಬೇಕು. ಆದ್ದರಿಂದ ನನ್ನಲ್ಲಿ ವಿಶ್ವಾಸವಿಟ್ಟು ಕಿವಿಯ ಬಳಿಬಂದು ಸ್ಪಷ್ಟವಾಗಿ ನುಡಿಯಿರಿ.”

ಕಾಗೆ – “ಹೆಚ್ಚೇನು ಹೇಳುವುದು, ಆ ನೀಚನಲ್ಲಿ ವಿಶ್ವಾಸವಿಟ್ಟು ಅವರಿಬ್ಬರು ಅದರ ಬಳಿ ಹೋದರು. ಆಗ ಅದು ಒಮ್ಮೆಗೆ ಒಂದನ್ನು ಕಾಲಿನಿಂದ ಹಿಡಿದು ಮತ್ತೊಂದನ್ನು ಗರಗಸದಂತಿರುವ ಹಲ್ಲುಗಳಿಂದ ಕಚ್ಚಿ ಹಿಡಿಯಿತು. ಅವೆರಡೂ ಪ್ರಾಣಕಳೆದುಕೊಂಡು ಬೆಕ್ಕಿನಿಂದ ಭಕ್ಷಿಸಲ್ಪಟ್ಟವು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: