3-13-ಕಪ್ಪೆ ಮತ್ತು ಕೃಷ್ಣಸರ್ಪದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ವರುಣಪರ್ವತದ ಸಮೀಪದ ಒಂದು ಪ್ರದೇಶದಲ್ಲಿ ವಯಸ್ಸಾದ ಮಂದವಿಷ ಎಂಬ ಕೃಷ್ಣಸರ್ಪವೊಂದಿತ್ತು. ಅದು ಒಮ್ಮೆ  “ಆಯಾಸವಿಲ್ಲದೇ ಹೇಗೆ ಆಹಾರವನ್ನು ಪಡೆಯಲಿ ?” ಎಂದು ಯೋಚಿಸಿ ಅನೇಕ ಕಪ್ಪೆಗಳಿರುವ ಒಂದು ಜಲಾಶಯವನ್ನು ತಲುಪಿ ಧೃತಿಗೆಟ್ಟಂತೆ ನಟಿಸುತ್ತಾ ನಿಂತಿತು. ಆಗ ನೀರಿನ ಒಳಗಿದ್ದ ಒಂದು ಕಪ್ಪೆಯು ಸರ್ಪವನ್ನು ಕೇಳಿತು – “ಮಾಮ, ಏಕಿಂದು ಎಂದಿನಂತೆ ಆಹಾರಕ್ಕಾಗಿ ಅಲೆಯುತ್ತಿಲ್ಲ ?”

ಸರ್ಪ – “ಭದ್ರ, ಅದೃಷ್ಟಹೀನನಾದ ನನಗೆ ಆಹಾರದ ಬಯಕೆ ಎಲ್ಲಿಂದ ? ಇಂದು ರಾತ್ರೆ ಪ್ರಾರಂಭವಾದಾಗ ಆಹಾರಕ್ಕಾಗಿ ಹುಡುಕುತ್ತಿದ್ದಾಗ ಒಂದು ಕಪ್ಪೆಯು ಕಾಣಿಸಿತು. ಅದನ್ನು ಹಿಡಿಯಲು ಪ್ರಯತ್ನಿಸಿದೆ. ಅದಾದರೋ ನನ್ನನ್ನು ನೋಡಿ ಜೀವಭಯದಿಂದ ಓಡುತ್ತಾ ಸ್ವಾಧ್ಯಾಯದಲ್ಲಿ ತೊಡಗಿದ್ದ ಬ್ರಾಹ್ಮಣನ ಸಂದಿಯಲ್ಲಿ ಹೊಕ್ಕು ನನಗೆ ಕಾಣದಂತಾಯಿತು. ಅಷ್ಟರಲ್ಲಿ ನೀರಿನಲ್ಲಿ ನಿಂತಿದ್ದ ಒಬ್ಬ ಬ್ರಾಹ್ಮಣಕುಮಾರನ ಹೆಬ್ಬೆರಳನ್ನು ಕಪ್ಪೆಯೆಂದು ಭ್ರಮಿಸಿ ಕಚ್ಚಿದೆ. ಅವನು ಆ ಕ್ಷಣವೇ ಸತ್ತು ಹೋದನು. ಆಗ ಅವನ ತಂದೆ ದುಃಖದಿಂದ ನನ್ನನ್ನು ಹೀಗೆ ಶಪಿಸಿದ – ‘ದುರಾತ್ಮನೇ, ನಿರಪರಾಧಿಯಾದ ನನ್ನ ಮಗನನ್ನು ಕಚ್ಚಿದೆ, ಈ ದೋಷದಿಂದ ನೀನು ಕಪ್ಪೆಗಳ ವಾಹನವಾಗುವೆ ಮತ್ತು ಅವರು ಅನುಗ್ರಹಿಸುವ ಆಹಾರದಿಂದಲೇ ಬದುಕುವೆ.’ ಆದ್ದರಿಂದ ಈಗ ನಿಮ್ಮ ವಾಹನವಾಗಿ ಇಲ್ಲಿಗೆ ಬಂದಿರುವೆ.”

ಆ ಕಪ್ಪೆಯು ಈ ಸುದ್ದಿಯನ್ನು ಇತರ ಕಪ್ಪೆಗಳಿಗೆ ತಿಳಿಸಿತು ಮತ್ತು ಅವುಗಳೆಲ್ಲವೂ ಸಂತೋಷಗೊಂಡು ಜಾಲಪಾದ ಎಂಬ ಕಪ್ಪೆಗಳ ರಾಜನಿಗೆ ತಿಳಿಸಿದವು. ಜಾಲಪಾದ ರಾಜ ಮಂತ್ರಿಗಳೊಂದಿಗೆ ‘ಇದು ಅತ್ಯದ್ಭುತ’ ಎಂದು ಭಾವಿಸಿ ಸಂಭ್ರಮದಿಂದ ಜಲಾಶಯದಿಂದ ಹೊರಬಂದು ಮಂದವಿಷ ಸರ್ಪದ ಹೆಡೆಯನ್ನೇರಿ ಕುಳಿತಿತು. ಉಳಿದ ಕಪ್ಪೆಗಳೂ ಕೂಡ ರಾಜ ಮಾಡಿದಂತೆ ತಾವೂ ಕೂಡ ಸರ್ಪದ ಬೆನ್ನು ಹತ್ತಿ ಕುಳಿತವು. ಹೆಚ್ಚೇಕೆ ? ಅದರ ಬೆನ್ನ ಮೇಲೆ ಸ್ಥಳ ಸಿಗದಿದ್ದ ಕಪ್ಪೆಗಳು ಅದರ ಹಿಂದೆ ಓಡುತ್ತಿದ್ದವು. ಮಂದವಿಷ ಸರ್ಪವು ಅವುಗಳನ್ನು ಸಂತೋಷಗೊಳಿಸಲು ಅನೇಕ ರೀತಿಯ ನಡೆಗಳನ್ನು ಪ್ರದರ್ಶಿಸಿತು. ಸರ್ಪದ ಅಂಗಸ್ಪರ್ಶದ ಸುಖವನ್ನು ಹೊಂದಿದ ಜಾಲಪಾದ ಹೇಳಿತು – “ಮಂದವಿಷ ಸರ್ಪದ ಮೇಲೆ ಕುಳಿತು ಹೋಗುವ ಸುಖವು ಆನೆ, ಕುದುರೆ, ರಥ, ಪಲ್ಲಕ್ಕಿ ಅಥವಾ ನೌಕೆಯಲ್ಲಿ ಕುಳಿತು ಹೋಗುವ ಸುಖಕ್ಕಿಂತ ಹೆಚ್ಚು.”

ಮತ್ತೊಂದು ದಿನ ಮಂದವಿಷ ಹಾವು ಕಪಟದಿಂದ ಮೆಲ್ಲಮೆಲ್ಲಗೆ ಹೋಗುತ್ತಿತ್ತು. ಅದನ್ನು ನೋಡಿದ ಜಾಲಪಾದ ಕಪ್ಪೆ ಹೇಳಿತು – “ಭದ್ರ, ಮಂದವಿಷ, ಎಂದಿನಂತೆ ಇಂದು ಸರಿಯಾಗಿ ಏಕೆ ಒಯ್ಯುತ್ತಿಲ್ಲ ?”

ಮಂದವಿಷ – “ದೇವ, ಇಂದು ಆಹಾರದ ಅಭಾವದಿಂದ ಹೊರಲು ಶಕ್ತಿಯಿಲ್ಲ.”

ಜಾಲಪಾದ – “ಭದ್ರ, ಹಾಗಾದರೆ ಸಣ್ಣ ಕಪ್ಪೆಗಳನ್ನು ತಿನ್ನು”

ಅದನ್ನು ಕೇಳಿ ಸರ್ವಾಂಗ ಸಂತೋಷಗೊಂಡ ಮಂದವಿಷ ಸರ್ಪವು ಸಂಭ್ರಮದಿಂದ ಹೇಳಿತು – “ಕಪ್ಪೆಯ ಅನುಗ್ರಹದಿಂದಲೇ ಆಹಾರಪ್ರಾಪ್ತಿಯೆಂಬುದೇ ನನಗೆ ಬ್ರಾಹ್ಮಣನ ಶಾಪವಾಗಿತ್ತು. ನಿಮ್ಮ ಈ ಆಜ್ಞೆಯಿಂದ ಸಂತೋಷಗೊಂಡಿದ್ದೇನೆ.”

ಹೀಗೆ ಅದು ನಿರಂತರವಾಗಿ ಕಪ್ಪೆಗಳನ್ನು ತಿನ್ನುತ್ತಿದ್ದು ಕೆಲವೇ ದಿನಗಳಲ್ಲಿ ಬಲಿಷ್ಠವಾಯಿತು. ಹರ್ಷದಿಂದ ತನ್ನಲ್ಲೇ ನಕ್ಕು ಹೀಗೆ ಹೇಳಿಕೊಂಡಿತು – “ಕಪಟದಿಂದ ವಶಮಾಡಿಕೊಂಡ ಈ ವಿವಿಧ ಕಪ್ಪೆಗಳನ್ನು ಹೀಗೆ ತಿನ್ನುತ್ತಿದ್ದರೆ ಇನ್ನೆಷ್ಟು ದಿನಗಳಲ್ಲಿ ಅವು ಮುಗಿಯದೇ ಇರಬಹುದು ?”

ಜಾಲಪಾದ ಕಪ್ಪೆಯು ಮಂದವಿಷ ಹಾವಿನ ಕೃತಕ ಮಾತುಗಳಿಂದ ಮೋಹಿತವಾಗಿ ಅದರ ಕಪಟತನವನ್ನು ತಿಳಿಯಲಿಲ್ಲ.

ಒಮ್ಮೆ ಬೇರೊಂದು ದೊಡ್ಡ ಕೃಷ್ಣಸರ್ಪವು ಆ ಪ್ರದೇಶಕ್ಕೆ ಬಂತು. ಕಪ್ಪೆಗಳನ್ನು ಹೊತ್ತು ತಿರುಗುವ ಮಂದವಿಷವನ್ನು ನೋಡಿ ಅದು ಆಶ್ಚರ್ಯಗೊಂಡು ಹೇಳಿತು – “ಮಿತ್ರ, ನಮ್ಮ ಆಹಾರವಾದ ಈ ಕಪ್ಪೆಗಳನ್ನು ಏಕೆ ಹೊರುತ್ತಿರುವೆ ? ಇದು ಸರಿಯಲ್ಲ.”

ಮಂದವಿಷ – “ಕಪ್ಪೆಗಳಿಂದ ವಾಹನವನ್ನಾಗಿ ಮಾಡಲ್ಪಟ್ಟಿದ್ದೇನೆಂದು ನಾನು ಚೆನ್ನಾಗಿ ಬಲ್ಲೆ. ಆದರೆ ತುಪ್ಪದಿಂದ ಕುರುಡನಾದ ಬ್ರಾಹ್ಮಣನು ಹೇಗೋ ಹಾಗೆ ಸ್ವಲ್ಪಕಾಲ ಕಾಯುವೆನು

ಆ ಕೃಷ್ಣಸರ್ಪವು ಅದು ಏನೆಂದು ಕೇಳಲು ಮಂದವಿಷ ಸರ್ಪವು ತುಪ್ಪದಿಂದ ಕುರುಡನಾದ ಬ್ರಾಹ್ಮಣನ ಕಥೆಯನ್ನು ಹೇಳಿತು.

ಕಥೆಯನ್ನು ಹೇಳಿದ ಮಂದವಿಷ ಸರ್ಪವು – “ಆದ್ದರಿಂದಲೇ ಕಪ್ಪೆಗಳನ್ನು ಹೊರುತ್ತಿದ್ದೇನೆಂದು ನಾನು ಚೆನ್ನಾಗಿ ಬಲ್ಲೆ … ಎಂಬುದಾಗಿ ಹೇಳಿದ್ದು” ಎಂದಿತು.

ನಂತರ ಮಂದವಿಷ ಸರ್ಪವು ಮತ್ತೆ ಒಳಗೇ ನಕ್ಕು – “ವಿವಿಧ ಕಪ್ಪೆಗಳನ್ನು ಹೀಗೆ ತಿನ್ನುತ್ತಿದ್ದರೆ …” ಎಂದು ಹೇಳಿಕೊಂಡಿತು.

ಆಗ ಜಾಲಪಾದ ಕಪ್ಪೆಯು ಅದನ್ನು ಕೇಳಿಸಿಕೊಂಡು, ಚಿಂತೆಗೊಂಡು, ಸರ್ಪವು ಏನು ಹೇಳಿತೆಂದು ಸರಿಯಾಗಿ ತಿಳಿಯದೆ ಸರ್ಪವನ್ನು ಕೇಳಿತು – “ಭದ್ರ, ಏನಿದು ವ್ಯತಿರಿಕ್ತವಾದ ಮಾತನ್ನು ನುಡಿಯುತ್ತಿರುವೆ ? “

ತನ್ನ ಇಂಗಿತವನ್ನು ಮುಚ್ಚಿಡಲು ಸರ್ಪವು “ಏನಿಲ್ಲವಲ್ಲ” ಎಂದು ಹೇಳಿತು.

ಕಪಟವಾಕ್ಯಗಳಿಂದ ಮೋಸಗೊಂಡಿದ್ದ ಜಾಲಪಾದ ಕಪ್ಪೆಯು ಅದರ ದುಷ್ಟ ಆಶಯವನ್ನು ತಿಳಿಯಲಿಲ್ಲ. ಹೆಚ್ಚೇಕೆ ? ಸರ್ಪವು ಎಲ್ಲ ಕಪ್ಪೆಗಳನ್ನೂ ತಿಂದು ಬೀಜಮಾತ್ರವೂ ಉಳಿಯದಂತೆ ಕಪ್ಪೆಗಳನ್ನು ನಾಶಮಾಡಿತು.

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: