3-4-ಬ್ರಾಹ್ಮಣ ಹಾಗೂ ಸರ್ಪದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಹರಿದತ್ತನೆಂಬ ಬ್ರಾಹ್ಮಣನಿದ್ದನು. ಸದಾ ಲಾಭವಿಲ್ಲದ ಕೃಷಿಯನ್ನು ಮಾಡುತ್ತಾ ಅವನ ಸಮಯ ಕಳೆಯುತ್ತಿತ್ತು. ಒಮ್ಮೆ ಬೇಸಿಗೆಯ ದಿನದಂದು ಬಿಸಿಲಿನಿಂದ ಬಳಲಿದ ಅವನು ತನ್ನ ಹೊಲದಲ್ಲಿದ್ದ ಮರದ ನೆರಳಿನಲ್ಲಿ ಒರಗಿಕೊಂಡಿದ್ದಾಗ ಹುತ್ತದ ಮೇಲೆ ದೊಡ್ಡ ಹೆಡೆಯನ್ನು ಬಿಚ್ಚಿದ್ದ ಹಾವನ್ನು ನೋಡಿ ಚಿಂತಿಸಿದನು – “ಇದು ಖಂಡಿತವಾಗಿಯೂ ಕ್ಷೇತ್ರದೇವತೆ, ಇದನ್ನು ನಾನು ಎಂದೂ ಪೂಜಿಸಿಲ್ಲ. ಹಾಗಾಗಿಯೇ ನನ್ನ ಕೃಷಿಕಾರ್ಯವೂ ವಿಫಲವಾಗುತ್ತಿದೆ. ಆದ್ದರಿಂದ ಇಂದು ಇದರ ಪೂಜೆಯನ್ನು ಮಾಡುವೆನು.”

ಹೀಗೆ ನಿರ್ಧರಿಸಿದ ಅವನು ಎಲ್ಲಿಂದಲೋ ಹಾಲನ್ನು ಬೇಡಿಕೊಂಡು ಬಂದು ಅದನ್ನು ಪ್ರಾತೆಯಲ್ಲಿ ತುಂಬಿಸಿ ಹುತ್ತದ ಬಳಿಗೆ ಬಂದು ಹೇಳಿದನು – “ಎಲೈ ಕ್ಷೇತ್ರಪಾಲ, ನೀನು ಇಲ್ಲಿ ವಾಸಿಸುತ್ತಿರುವೆ ಎಂದು ನನಗೆ ಇಂದಿನವರೆಗೆ ತಿಳಿದಿರಲಿಲ್ಲ. ಹಾಗಾಗಿ ಪೂಜೆಯನ್ನು ಮಾಡಲಿಲ್ಲ. ಆದ್ದರಿಂದ ಈಗ ಕ್ಷಮಿಸು.”

ಹೀಗೆ ಹೇಳಿ ಹಾಲನ್ನು ಕೊಟ್ಟು ಮನೆಯ ಕಡೆಗೆ ತೆರಳಿದನು. ಬೆಳಗ್ಗೆ ಬಂದು ನೋಡಿದಾಗ ಪಾತ್ರೆಯಲ್ಲಿ ಒಂದು ನಾಣ್ಯವಿತ್ತು. ಹೀಗೆ ಪ್ರತಿದಿನವೂ ಏಕಾಂಗಿಯಾಗಿ ಹೋಗಿ ಹಾವಿಗೆ ಹಾಲನ್ನು ಕೊಡುತ್ತಿದ್ದನು ಹಾಗೂ ನಾಣ್ಯವನ್ನು ತೆಗೆದುಕೊಳ್ಳುತ್ತಿದ್ದನು.

ಒಂದು ದಿನ ಹುತ್ತಕ್ಕೆ ಹಾಲನ್ನು ತೆಗೆದುಕೊಂಡು ಹೋಗಲು ಮಗನನ್ನು ನಿಯೋಜಿಸಿ ಬ್ರಾಹ್ಮಣನು ಬೇರೆ ಗ್ರಾಮಕ್ಕೆ ಹೋದನು. ಮಗ ಹಾಲನ್ನು ಅಲ್ಲಿಗೆ ತೆಗೆದುಕೊಂಡು ಹೋಗಿ, ಅಲ್ಲಿಟ್ಟು ಮತ್ತೆ ಮನೆಗೆ ಬಂದನು. ಮರುದಿನ ಮತ್ತೆ ಹೋಗಿ ನಾಣ್ಯವನ್ನು ನೋಡಿ, ಅದನ್ನು ತೆಗೆದುಕೊಂಡು ಚಿಂತಿಸಿದನು – “ಖಂಡಿತವಾಗಿಯೂ ಈ ಹುತ್ತದಲ್ಲಿ ಸುವರ್ಣನಾಣ್ಯಗಳಿವೆ. ಈ ಸರ್ಪವನ್ನು ಕೊಂದು ಎಲ್ಲಾ ನಾಣ್ಯಗಳನ್ನೂ ಒಮ್ಮೆಗೇ ಪಡೆಯುವೆನು”

ಹಾಗೆ ನಿರ್ಧರಿಸಿದ ಅವನು ಮತ್ತೊಂದು ದಿನ ಹಾಲನ್ನು ಕೊಡುವಾಗ ಸರ್ಪದ ತಲೆಗೆ ಕೋಲಿನಿಂದ ಹೊಡೆದನು. ಅದೃಷ್ಟದಿಂದ ಪ್ರಾಣವನ್ನು ಕಳೆದುಕೊಳ್ಳದ ಆ ಸರ್ಪವು ರೋಷದಿಂದ ತೀವ್ರವಾದ ವಿಷವನ್ನುಳ್ಳ ಹಲ್ಲುಗಳಿಂದ ಅವನನ್ನು ಕಚ್ಚಿತು. ಅವನು ಕೂಡಲೇ ಸತ್ತುಹೋದನು. ಆತನ ಬಂಧುಗಳು ಹೊಲದಿಂದ ಸ್ವಲ್ಪ ದೂರದಲ್ಲೇ ಚಿತೆಯನ್ನು ಸಿದ್ಧಗೊಳಿಸಿ ಆತನ ಸಂಸ್ಕಾರವನ್ನು ಮಾಡಿದರು.

ಮರುದಿನ ಮರಳಿ ಬಂದ ಆತನ ತಂದೆಗೆ ಬಂಧುಗಳು ಮಗನು ಸತ್ತ ಕಾರಣವನ್ನು ತಿಳಿಸಿದಾಗ ಅವನು ಹಾವು ಮಾಡಿದ್ದೇ ಸರಿಯೆಂದು ಸಮರ್ಥಿಸಿಕೊಂಡು ಹೇಳಿದನು – “ತನಗೆ ಶರಣಾಗಿ ಬಂದ ಪ್ರಾಣಿಗಳನ್ನು ಯಾರು ಅನುಗ್ರಹಿಸುವುದಿಲ್ಲವೋ, ಪದ್ಮವನದಲ್ಲಿರುವ ಹಂಸಗಳಂತೆ ಅವನ ಎಲ್ಲಾ ಸೌಕರ್ಯಗಳೂ ನಾಶವಾಗುತ್ತವೆ”

ಜನರು ಅದು ಹೇಗೆಂದು ಕೇಳಲು ಬ್ರಾಹ್ಮಣನು ಸ್ವರ್ಣಹಂಸ, ಸ್ವರ್ಣಪಕ್ಷಿ ಹಾಗೂ ರಾಜನ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಬ್ರಾಹ್ಮಣನು – “ಆದ್ದರಿಂದಲೇ ನಾನು ಹೇಳುವುದು, ತನಗೆ ಶರಣಾಗಿ ಬಂದ ಪ್ರಾಣಿಗಳನ್ನು… ಇತ್ಯಾದಿ ಎಂದು”

ಹೀಗೆ ನುಡಿದ ಬ್ರಾಹ್ಮಣನು ಬೆಳಗ್ಗೆ ಮತ್ತೆ ಹಾಲನ್ನು ತೆಗೆದುಕೊಂಡು ಹುತ್ತದ ಬಳಿ ಹೋಗಿ ಜೋರಾಗಿ ಸರ್ಪದ ಸ್ತುತಿಯನ್ನು ಮಾಡಿದನು. ಬಹಳ ಕಾಲದನಂತರ ಸರ್ಪವು ಹುತ್ತದ ಬಿಲದ ದ್ವಾರದಲ್ಲಿದ್ದುಕೊಂಡೇ ಹೇಳಿತು – “ನೀನು ಪುತ್ರಶೋಕವನ್ನು ಬಿಟ್ಟು (ನಾಣ್ಯದ) ಲೋಭದಿಂದ ಇಲ್ಲಿಗೆ ಬಂದಿರುವೆ. ಇಂದಿನಿಂದ ನಮ್ಮಿಬ್ಬರ ಸ್ನೇಹವು ಉಚಿತವಲ್ಲ. ಯೌವನದ ಮದದಿಂದ ನಿನ್ನ ಮಗ ನನಗೆ ಹೊಡೆದನು ಹಾಗೂ ನಾನು ಅವನಿಗೆ ಕಚ್ಚಿದೆನು. ಕೋಲಿನ ಪೆಟ್ಟನ್ನು ನಾನು ಹೇಗೆ ಮರೆಯಲಿ ಹಾಗೂ ಪುತ್ರವಿಯೋಗದ ದುಃಖವನ್ನು ನೀನು ಹೇಗೆ ಮರೆಯುತ್ತೀಯೆ ?”

ಹೀಗೆ ನುಡಿದು ಬೆಲೆಬಾಳುವ ವಜ್ರದ ಮಣಿಯನ್ನು ಅವನಿಗೆ ಕೊಟ್ಟು, ಇನ್ನು ಮುಂದೆ ಇಲ್ಲಿಗೆ ಬರಬೇಡ ಎಂದು ಮತ್ತೆ ಹೇಳಿ ಹುತ್ತದ ಒಳಗೆ ಹೋಯಿತು. ಬ್ರಾಹ್ಮಣನು ಮಣಿಯನ್ನು ತೆಗೆದುಕೊಂಡು ಪುತ್ರನ ಬುದ್ಧಿಯನ್ನು ನಿಂದಿಸುತ್ತಾ ತನ್ನ ಮನೆಗೆ ಹೋದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: