3-5-ಪಾರಿವಾಳ ಮತ್ತು ಬೇಟೆಗಾರನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ನೀಚನಾದ, ಪ್ರಾಣಿಗಳಿಗೆ ಯಮಸದೃಶನಾದ, ದಾರುಣನಾದ ಬೇಟೆಗಾರನೊಬ್ಬ ಮಹಾರಣ್ಯದಲ್ಲಿ ಅಲೆಯುತ್ತಿದ್ದನು. ಅವನಿಗಾರೂ ಮಿತ್ರ, ಬಾಂಧವರು ಅಥವಾ ಸಂಬಂಧಿಗಳು ಇರಲಿಲ್ಲ. ಅವನ ಘೋರವಾದ ಕಾರ್ಯಗಳನ್ನು ನೋಡಿ ಅವನನ್ನು ಎಲ್ಲರೂ ತ್ಯಜಿಸಿದ್ದರು. ಯಾರು ನಿಷ್ಠುರನು, ದುರಾತ್ಮನು ಹಾಗೂ ಪ್ರಾಣಿಗಳ ಪ್ರಾಣನಾಶಕನಾಗಿರುವನೋ, ಅವನು ಜೀವಿಗಳಿಗೆ ಕ್ರೂರಪ್ರಾಣಿಗಳಂತೆ ಉದ್ವೇಗಜನಕನಾಗಿರುತ್ತಾನೆ. ಆ ಬೇಟೆಗಾರನು ಪಂಜರ, ಬಲೆ ಮತ್ತು ಕೋಲನ್ನು ತೆಗೆದುಕೊಂಡು ನಿತ್ಯವೂ ವನಕ್ಕೆ ಹೋಗಿ ಎಲ್ಲಾ ಪ್ರಾಣಿಗಳನ್ನೂ ಹಿಂಸಿಸುತ್ತಿದ್ದನು.

ಒಮ್ಮೆ ವನದಲ್ಲಿ ಅಲೆಯುತ್ತಿದ್ದ ಅವನಿಗೆ ಹೆಣ್ಣು ಪಾರಿವಾಳವೊಂದು ಕೈವಶವಾಯಿತು.  ಅದನ್ನು ಅವನು ಪಂಜರದಲ್ಲಿ ಇರಿಸಿಕೊಂಡನು. ಆಗ ಅರಣ್ಯದ ಎಲ್ಲಾ ದಿಕ್ಕುಗಳು ಮೋಡಗಳಿಂದ ಕಪ್ಪಾಗಿ ಪ್ರಳಯಕಾಲದಂತೆ ಗಾಳಿಯಿಂದ ಕೂಡಿದ ಭಾರೀ ಮಳೆಯಾಯಿತು. ಆಗ ಅವನು ತ್ರಾಸಗೊಂಡು ಸಣ್ಣಗೆ ನಡುಗುತ್ತಾ ರಕ್ಷಣೆಯನ್ನು ಹುಡುಕುತ್ತಾ ಒಂದು ಮರದ ಬಳಿಗೆ ಬಂದನು. ಸಲ್ಪಕಾಲದ ನಂತರ ಆಕಾಶವು ನಿರ್ಮಲವಾಗಲು ಅವನು ವೃಕ್ಷವನ್ನು ತಲುಪಿ ಹೇಳಿದನು – “ಇಲ್ಲಿ ಯಾರಿದ್ದಾರೋ ಅವರಿಗೆ ಶರಣಾಗಿ ಬಂದಿದ್ದೇನೆ, ಚಳಿಯಿಂದ ಪೀಡಿತನಾದ ಮತ್ತು ಹಸಿವಿನಿಂದ ಬಳಲಿದ ನನ್ನನ್ನು ಅವರೇ ರಕ್ಷಿಸಲಿ”

ಆ ಮರದ ಕೊಂಬೆಯಲ್ಲಿ ಬಹುಕಾಲದಿಂದ ವಾಸವಾಗಿದ್ದ ಗಂಡು ಪಾರಿವಾಳವೊಂದು ತನ್ನ ಹೆಂಡತಿಯ ವಿಯೋಗದ ಕಾರಣದಿಂದ ಅತ್ಯಂತ ದುಃಖದಿಂದ – “ಭಾರೀ ಮಳೆ ಬಂತು, ನನ್ನ ಪ್ರಿಯೆ ಬರಲಿಲ್ಲ. ಅವಳಿಲ್ಲದ ಈ ನನ್ನ ಮನೆ ಶೂನ್ಯವೆನಿಸುತ್ತದೆ. ಪತಿವ್ರತೆಯಾದ, ಪತಿಯ ಪ್ರಾಣಳಾದ, ಪತಿಯ ಹಿತದಲ್ಲೇ ಆಸಕ್ತಳಾಗಿರುವ ನನ್ನ ಹೆಂಡತಿಯಂತೆ ಹೆಂಡತಿಯನ್ನುಳ್ಳ ಪುರುಷನೇ ಈ ಭೂಮಿಯಲ್ಲಿ ಧನ್ಯನು. ಕೇವಲ ಮನೆಯನ್ನು ಮನೆಯೆನ್ನುವುದಿಲ್ಲ. ಗೃಹಿಣೀ ಗೃಹಮುಚ್ಛ್ಯತೆ, ಅಂದರೆ ಗೃಹಿಣಿಯಿದ್ದರೇ ಮಾತ್ರ ಅದು ಮನೆಯೆನಿಸುತ್ತದೆ. ಗೃಹಿಣಿಯಿಲ್ಲದ ಮನೆಯನ್ನು ಕಾಡಿಗೆ ಸಮವೆಂದು ಭಾವಿಸತಕ್ಕದ್ದು.” ಎಂದು ಹೇಳಿಕೊಂಡಿತು.

ಪಂಜರದಲ್ಲಿದ್ದ ಪಾರಿವಾಳದ ಹೆಂಡತಿಯು ತನ್ನ ಪತಿಯ ಈ ಮಾತುಗಳನ್ನು ಕೇಳಿ ಸಂತೋಷಗೊಂಡು ಹೀಗೆ ಹೇಳಿತು – “ಗಂಡನಿಗೆ ಹೆಂಡತಿಯ ವಿಷಯದಲ್ಲಿ ಸಂತೋಷವಿಲ್ಲದಿದ್ದರೆ, ಅವಳು ಹೆಂಡತಿಯೇ ಅಲ್ಲ. ಗಂಡನು ಸಂತೋಷಗೊಂಡಲ್ಲಿ ಸರ್ವ ದೇವತೆಗಳೂ ಆಕೆಯ ವಿಷಯದಲ್ಲಿ ಸಂತೋಷಗೊಳ್ಳುತ್ತಾರೆ.  ಹೆಂಡತಿಯ ವಿಷಯದಲ್ಲಿ ಗಂಡನಿಗೆ ಸಂತೋಷವಿಲ್ಲದಿದ್ದರೆ, ಅಂತಹ ಹೆಂಡತಿ ಬೆಂಕಿಯಲ್ಲಿ ಸುಟ್ಟುಹೋದ ಪುಷ್ಪಗುಚ್ಛದಿಂದ ಕೂಡಿದ ಬಳ್ಳಿಯಂತೆ. ತಂದೆಯಾಗಲಿ, ಸೋದರನಾಗಲಿ ಅಥವಾ ಪುತ್ರನೇ ಆಗಲಿ, ಎಲ್ಲರೂ ಮಿತವಾದ ಸುಖಾರ್ಥಗಳನ್ನು ಕೊಡುತ್ತಾರೆ. ಅಪರಿಮಿತವಾಗಿ ಕೊಡುವ ಗಂಡನನ್ನು ಯಾರು ತಾನೇ ಪೂಜಿಸುವುದಿಲ್ಲ.”

ಮುಂದುವರೆಸುತ್ತಾ ಆ ಹೆಣ್ಣು ಪಾರಿವಾಳ – “ಎಲೈ ಕಾಂತ, ನಾನು ಹೇಳುವ ಹಿತವಚನವನ್ನು ಏಕಾಗ್ರತೆಯಿಂದ ಕೇಳು. ಆಸರೆಯನ್ನು ಕೇಳಿ ಬಂದವನನ್ನು ಪ್ರಾಣವನ್ನು ಕೊಟ್ಟಾದರೂ ಅವಶ್ಯವಾಗಿ ರಕ್ಷಿಸಬೇಕು. ಚಳಿಯಿಂದ ಹಾಗೂ ಹಸಿವಿನಿಂದ ಬಳಲಿದ ಈ ಬೇಡನು ನಿನ್ನ ವಾಸಸ್ಥಾನವನ್ನು ಆಶ್ರಯಿಸಿ ಮಲಗಿದ್ದಾನೆ. ಆತನನ್ನು ಸತ್ಕರಿಸು. ಸಂಜೆ ಬಂದ ಅತಿಥಿಯನ್ನು ಯಥಾಶಕ್ತಿ ಸತ್ಕರಿಸದಿದ್ದರೆ ಅತಿಥಿಯು ತನ್ನ ಪಾಪವನ್ನು ಕೊಟ್ಟು ಮನೆಯವನ ಪುಣ್ಯವನ್ನು ತೆಗೆದುಕೊಂಡು ಹೋಗುತ್ತಾನೆಂಬ ಮಾತಿದೆ. ನನ್ನ ಪ್ರಿಯೆಯನ್ನು ಬಂಧಿಸಿದನೆಂದು ನೀನು ಇವನ ಮೇಲೆ ದ್ವೇಷವನ್ನು ಮಾಡಬಾರದು. ನಾನಾದರೋ ನನ್ನ ಪೂರ್ವಕೃತ ಕರ್ಮಗಳಿಂದ ಬಂಧಿತಳಾಗಿದ್ದೇನಷ್ಟೆ. ದಾರಿದ್ರ್ಯ, ರೋಗ, ದುಃಖ, ಬಂಧನ, ವ್ಯಸನ ಮುಂತಾದವುಗಳು ಜೀವಿಗಳಿಗೆ ತಾವು ಮಾಡಿದ ಅಪರಾಧವೆಂಬ ವೃಕ್ಷದ ಫಲಗಳಿದ್ದಂತೆ. ಆದ್ದರಿಂದ ನೀನು ನನ್ನ ಬಂಧನದಿಂದ ಉಂಟಾದ ದ್ವೇಷವನ್ನು ಬಿಟ್ಟು, ಧರ್ಮದಲ್ಲಿ ಮನಸ್ಸನ್ನು ಸ್ಥಿರವಾಗಿಸಿ ಇವನನ್ನು ಯೋಗ್ಯವಾಗಿ ಸತ್ಕರಿಸು.”

ಅವಳ ಈ ಧರ್ಮ ಹಾಗೂ ಯುಕ್ತಿಯಿಂದ ಕೂಡಿದ ಮಾತುಗಳನ್ನು ಕೇಳಿದ ಗಂಡು ಪಾರಿವಾಳವು ಬೇಡನ ಬಳಿಗೆ ಬಂದು ವಿನಮ್ರವಾಗಿ ಹೇಳಿತು – “ಭದ್ರ, ನಿನಗೆ ಸ್ವಾಗತ, ನಿನಗೆ ಏನು ಸೇವೆಯನ್ನು ಮಾಡಲಿ ? ಸಂತಾಪವನ್ನು ಮಾಡದೆ ಇದು ನಿನ್ನ ಮನೆಯೆಂದೇ ತಿಳಿ. ?”

ಅದರ ಆ ಮಾತನ್ನು ಕೇಳಿದ ಪಕ್ಷಿಹಂತಕನಾದ ಬೇಡನು – “ಪಾರಿವಾಳವೇ, ಅತಿಯಾದ ಚಳಿಯಿದೆ. ಇದರಿಂದ ನನ್ನನ್ನು ರಕ್ಷಿಸು.”

ಪಾರಿವಾಳವು ಹೋಗಿ ಕೆಂಡವನ್ನು ತಂದು ಒಣಗಿದ ಎಲೆಗಳಿಂದ ಬೇಗನೆ ಬೆಂಕಿಯನ್ನು ಹೊತ್ತಿಸಿತು. ಬೆಂಕಿಯನ್ನು ಚೆನ್ನಾಗಿ ಹೊತ್ತಿಸಿ ಶರಣಾಗತನಾಗಿ ಬಂದ ಬೇಡನಿಗೆ ಹೇಳಿತು – “ನಿನ್ನ ದೇಹವನ್ನು ಸರಿಯಾಗಿ ಒಣಗಿಸಿಕೋ. ಕಾಡುಪ್ರಾಣಿಗಳಾದ ನಾವೆಲ್ಲ ದೈವಯೋಗದಿಂದ ದೊರಕಿದ ವಸ್ತುಗಳಿಂದಲೇ ಜೀವನ ಸಾಗಿಸುತ್ತೇವೆ. ನಿನ್ನ ಹಸಿವನ್ನು ಇಂಗಿಸಬಲ್ಲ ಯಾವ ಸಂಪತ್ತೂ ನನ್ನ ಬಳಿಯಿಲ್ಲ. ಕೆಲವರು ಸಾವಿರ ಜನರಿಗೆ, ಕೆಲವರು ನೂರು ಹಾಗೂ ಕೆಲವರು ಹತ್ತು ಜನರಿಗೆ ಅನ್ನವನ್ನು ನೀಡಿ ಪಾಲಿಸಬಲ್ಲರು. ಆದರೆ ಪಾಪಿಷ್ಟ ಹಾಗೂ ನೀಚನಾದ ನನಗೆ ನನ್ನ ಹಸಿವನ್ನು ಇಂಗಿಸಿಕೊಳ್ಳುವುದೇ ಕಷ್ಟ. ಯಾರಿಗೆ ಒಬ್ಬ ಅತಿಥಿಗೆ ಅನ್ನವನ್ನು ನೀಡಲು ಶಕ್ತಿಯಿಲ್ಲವೋ, ಅನೇಕ ಸಂಕಟಗಳಿರುವ ಅಂತವನ ಮನೆಯಲ್ಲಿ ವಾಸಿಸುವುದರಿಂದೇನು ಪ್ರಯೋಜನ ? ಆದ್ದರಿಂದ ದುಃಖಗಳಿಂದ ಕೂಡಿದ ಈ ಶರೀರವು ಮತ್ತೊಮ್ಮೆ ಭಿಕ್ಷಾರ್ಥಿಯು ಬಂದಾಗ ಇಲ್ಲ ಎಂದು ಹೇಳಲಾಗದಂತೆ ಮಾಡುವೆನು (ಅಂದರೆ ಪ್ರಾಣತ್ಯಾಗ ಮಾಡುವೆನು ಎಂದರ್ಥ). “

ಹೀಗೆ ಬೇಡನನ್ನಲ್ಲದೇ ತನ್ನನ್ನೇ ನಿಂದಿಸಿಕೊಳ್ಳುತ್ತಾ ಮತ್ತೆ ಹೇಳಿತು – “ಸ್ವಲ್ಪ ಸಮಯ ಇರು, ನಿನ್ನ ಹಸಿವನ್ನು ನೀಗಿಸುವೆನು”

ಹೀಗೆ ಹೇಳಿದ ಧರ್ಮಾತ್ಮನಾದ ಆ ಪಾರಿವಾಳವು ಪ್ರಸನ್ನವಾದ ಮನಸ್ಸಿನಿಂದ ಅಗ್ನಿಗೆ ಪ್ರದಕ್ಷಿಣೆಯನ್ನು ಮಾಡಿ ಅದು ತನ್ನ ಮನೆಯೋ ಎಂಬಂತೆ ಅಗ್ನಿಯನ್ನು ಪ್ರವೇಶಿಸಿತು.

ಆಗ ಆ ಬೇಡನು ಪಾರಿವಾಳವು ಬೆಂಕಿಯಲ್ಲಿ ಬಿದ್ದದ್ದನ್ನು ನೋಡಿ ಕರುಣೆಯಿಂದ ನೊಂದು ಹೀಗೆ ಹೇಳಿದನು – “ಪಾಪವನ್ನು ಮಾಡುವವನಿಗೆ ಖಂಡಿತವಾಗಿಯು ತನ್ನ ಮೇಲೆ ಪ್ರೀತಿಯಿರುವುದಿಲ್ಲ. ಏಕೆಂದರೆ ತಾನು ಮಾಡಿದ ಪಾಪವನ್ನು ತಾನೇ ಅನುಭವಿಸಬೇಕು. ನಾನು ದುಷ್ಟಬುದ್ಧಿಯುಳ್ಳವನು ಹಾಗೂ ಪಾಪವನ್ನು ಮಾಡುವುದರಲ್ಲೇ ನಿರತನಾದವನು. ಆದ್ದರಿಂದ ಮಹಾಘೋರವಾದ ನರಕದಲ್ಲಿ ಬೀಳುವೆನೆಂಬುದರಲ್ಲಿ ಸಂಶಯವಿಲ್ಲ. ತನ್ನ ಮಾಂಸವನ್ನು ನನಗೆ ಕೊಡುವುದರ ಮೂಲಕ ಖಂಡಿತವಾಗಿಯೂ ಈ ಪಾರಿವಾಳವು ಈ ನಿರ್ದಯನ ಮುಂದೆ ಉತ್ತಮವಾದ ಉದಾಹರಣೆಯನ್ನು ಪ್ರದರ್ಶಿಸಿದೆ. ಬೇಸಿಗೆಯು ಅಲ್ಪನೀರಿನಿಂದ ಹೇಗೆ ಬಳಲಿಸುತ್ತದೆಯೋ ಹಾಗೆ ನಾನೂ ಕೂಡ ಇಂದಿನಿಂದ ನನ್ನ ದೇಹವನ್ನು ಸಕಲ ಭೋಗಗಳು ಇಲ್ಲದೆಯೇ ಬಳಲಿಸುವೆನು. ಚಳಿಗಾಳಿ ಮತ್ತು ಬಿಸಿಲನ್ನು ಸಹಿಸಿಕೊಂಡು ಕೃಶಾಂಗನಾಗಿ, ಸ್ನಾನ ಮುಂತಾದವುಗಳನ್ನು ಬಿಟ್ಟು, ಅನೇಕ ರೀತಿಯ ಉಪವಾಸಗಳಿಂದ ಉತ್ತಮವಾದ ಧರ್ಮವನ್ನು ಆಚರಿಸುವೆನು.”

ಆನಂತರ ಬೇಡನು ಕೋಲು, ಜಾಲ, ಬಲೆ ಮತ್ತು ಪಂಜರವನ್ನು ತುಂಡುಮಾಡಿ ಭಯಗೊಂಡ ಪಾರಿವಾಳವನ್ನು ಮುಕ್ತಗೊಳಿಸಿದನು. ಬೇಡನಿಂದ ಬಿಡಲ್ಪಟ್ಟ ಹೆಣ್ಣು ಪಾರಿವಾಳವು ಬಿಂಕಿಯಲ್ಲಿ ಬಿದ್ದ ತನ್ನ ಪತಿಯನ್ನು ಕಂಡು ದುಃಖ ಮತ್ತು ಕಾತುರತೆಯಿಂದ ಆಲಾಪಿಸಿತು – “ಸ್ವಾಮಿ, ನೀನಿಲ್ಲದ ಬಾಳಿನಿಂದೇನು ಪ್ರಯೋಜನ ? ದೀನಳಾದ ಪತಿಹೀನಳಾದ ನಾರಿಯು ಬದುಕುವುದರಿಂದೇನು ಫಲ ? ಮನಸ್ಸಿನ ದರ್ಪ, ಅಹಂಕಾರ, ಉತ್ತಮ ಕುಲದವಳಾದ್ದರಿಂದ ಬಂಧುಗಳಿಂದ ಸಿಗುವ ಮಾನ್ಯತೆ, ದಾಸಜನರಲ್ಲಿ ಪ್ರಭುತ್ವ – ಇವೆಲ್ಲಾ ವಿಧವೆಯಾಗುವುದರಿಂದ ಕಳೆದುಹೋಗುತ್ತದೆ.”

ಹೀಗೆ ಹಲವು ರೀತಿಯಲ್ಲಿ ದೈನ್ಯದಿಂದ, ಬಹಳ ದುಃಖದಿಂದ ವಿಲಾಪಿಸಿ ಪತಿವ್ರತಿಯಾದ ಪಾರಿವಾಳವು ಉರಿಯುತ್ತಿರುವ ಅದೇ ಅಗ್ನಿಯನ್ನು ಪ್ರವೇಶಿಸಿತು. ಆಗ ದಿವ್ಯವಸ್ತ್ರ ಹಾಗೂ ದಿವ್ಯಾಭರಣಗಳಿಂದ ಭೂಷಿತವಾದ ಅದು ವಿಮಾನದಲ್ಲಿ ಇರುವ ತನ್ನ ಪತಿಯನ್ನು ಕಂಡಿತು. ಗಂಡು ಪಾರಿವಾಳವು ಕೂಡ ದಿವ್ಯಶರೀರಿಯಾಗಿ ಹೀಗೆ ಹೇಳಿತು – “ಎಲೈ ಶೋಭನಳೇ, ನನ್ನನ್ನು ಅನುಸರಿಸಿ ಒಳ್ಳೆಯದನ್ನೇ ಮಾಡಿದೆ. ಗಂಡನನ್ನು ಅನುಸರಿಸುವವಳು ಮನುಷ್ಯನ ದೇಹದ ಮೇಲಿರುವ ಮೂರುವರೆ ಕೋಟಿ ರೋಮಗಳಷ್ಟು ವರ್ಷ ಸ್ವರ್ಗದಲ್ಲಿರುವಳು.”

ಹಿಂದೆ ಮಾಡಿದ ಪುಣ್ಯದ ಫಲದಿಂದ ಆ ದಿವ್ಯಶರೀರಿಗಳಾದ ಪಾರಿವಾಳಗಳು ಹಗಲಿರುಳು ಸುಖವನ್ನನುಭವಿಸುತ್ತಿದ್ದವು.

ಶೋಕದಿಂದ ಕೂಡಿದ ಬೇಡನು ಪ್ರಾಣಿಹಿಂಸೆಯನ್ನು ಬಿಟ್ಟು ಬಹಳ ಪಶ್ಚಾತ್ತಾಪವನ್ನನುಭವಿಸುತ್ತಾ ಘೋರವಾದ ಅರಣ್ಯದಲ್ಲಿ ವಾಸಿಸುತ್ತಿದ್ದನು. ಅಲ್ಲಿ ಕಾಳ್ಗಿಚ್ಚಿನ ಬೆಂಕಿಯನ್ನು ನೋಡಿ ವಿರಕ್ತನಾಗಿ ಅದನ್ನು ಪ್ರವೇಶಿಸಿದನು. ಅವನ ಪಾಪಗಳೆಲ್ಲವೂ ಸುಟ್ಟುಹೋಗಿ ಅವನು ಸ್ವರ್ಗಸುಖವನ್ನು ಪಡೆದನು.”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: