3-8-ಹುತ್ತದಲ್ಲಿದ್ದ ಸರ್ಪದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ದೇವಶಕ್ತಿಯೆಂಬ ರಾಜನಿದ್ದನು. ಅವನ ಮಗನ ಹೊಟ್ಟೆಯಲ್ಲಿ ಹಾವೊಂದು ವಾಸಿಸುತ್ತಿದ್ದರಿಂದ ಪ್ರತಿದಿನವೂ ಅವನ ಪ್ರತಿ ಅಂಗವೂ ಕ್ಷೀಣಿಸುತ್ತಿತ್ತು. ಅನೇಕ ಉಪಚಾರಗಳಿಂದಲೂ, ನುರಿತ ವೈದ್ಯರು ಉತ್ತಮವಾದ ಶಾಸ್ತ್ರಗಳಲ್ಲಿ ತಿಳಿಸಿದ ಔಷಧಿಗಳಿಂದ ಮಾಡಿದ ಚಿಕಿತ್ಸೆಯಿಂದಲೂ ಅವನು ಆರೋಗ್ಯವನ್ನು ಹೊಂದಲಿಲ್ಲ. ವೈರಾಗ್ಯದಿಂದ ರಾಜಪುತ್ರನು ದೇಶಾಂತರ ಹೋದನು. ಒಂದು ನಗರದಲ್ಲಿ ಭಿಕ್ಷಾಟನೆಯನ್ನು ಮಾಡುತ್ತಾ ದೊಡ್ಡ ದೇವಾಲಯವೊಂದರಲ್ಲಿ ಕಾಲ ಕಳೆಯುತ್ತಿದ್ದನು.

ಆ ನಗರಕ್ಕೆ ಬಲಿಯೆಂಬ ಹೆಸರಿನ ರಾಜನಿದ್ದನು. ಅವನಿಗೆ ಯೌವನಾವಸ್ಥೆಗೆ ಬಂದ ಎರಡು ಹೆಣ್ಣು ಮಕ್ಕಳಿದ್ದರು. ಅವರು ಪ್ರತಿದಿನ ತಂದೆಯ ಪಾದಗಳ ಸಮೀಪಕ್ಕೆ ಬಂದು ನಮಸ್ಕರಿಸುತ್ತಿದ್ದರು. ಅದರಲ್ಲಿ ಒಬ್ಬಳು – “ಯಾರ ಕೃಪೆಯಿಂದ ಎಲ್ಲ ಸುಖವು ಲಭಿಸುತ್ತದೆಯೋ ಅಂತಹ ಮಹರಾಜನಿಗೆ ಜಯವಾಗಲಿ” ಎನ್ನುತ್ತಿದಳು. ಎರಡನೆಯವಳು – “ಮಾಡಿದ್ದುಣ್ಣೋ ಮಹಾರಾಜ” ಎನ್ನುತ್ತಿದ್ದಳು.

ಅದನ್ನು ಕೇಳಿ ಕೋಪಗೊಂಡ ರಾಜನು – “ಎಲೈ ಮಂತ್ರಿ, ಈ ದುರ್ವಾಕ್ಯವನ್ನಾಡುವ ಕುಮಾರಿಯನ್ನು ಯಾರಾದರೂ ಪರದೇಶಿಗೆ ಮದುವೆ ಮಾಡಿ ಕೊಡು, ತಾನು ಪಡೆದುದನ್ನು ಅವಳು ಅನುಭವಿಸಲಿ” ಎಂದನು. ಹಾಗೆಯೇ ಆಗಲೆಂದು ಮಂತ್ರಿಗಳು ಅವಳನ್ನು ಅಲ್ಪಪರಿವಾರದೊಂದಿಗೆ ದೇವಾಲಯದಲ್ಲಿ ಆಶ್ರಯ ಪಡೆದಿದ್ದ ರಾಜಪುತ್ರನಿಗೆ ಕೊಟ್ಟರು. ಅವಳಾದರೋ ಹರ್ಷಗೊಂಡು ಆ ಪತಿಯನ್ನು ದೇವನೆಂದು ಸ್ವೀಕರಿಸಿ ಬೇರೆ ದೇಶಕ್ಕೆ ಹೋದಳು. ದೂರದಲ್ಲಿರುವ ಒಂದು ನಗರದ ಸರೋವರದ ತೀರದಲ್ಲಿ ನಿವಾಸವನ್ನು ಹೂಡಿ ಅದಕ್ಕೆ ರಾಜಪುತ್ರನನ್ನು ಕಾವಲಿಗೆ ಬಿಟ್ಟು, ತುಪ್ಪ, ಎಣ್ಣೆ, ಉಪ್ಪು, ಅಕ್ಕಿ ಮುಂತಾದವುಗಳನ್ನು ಖರೀದಿಸಲು ಸ್ವಯಂ ತಾನೇ ಪರಿವಾರದವರೊಂದಿಗೆ ನಗರಕ್ಕೆ ಹೋದಳು. ಎಲ್ಲವನ್ನೂ ಖರೀದಿಸಿ ಬಂದು ನೋಡಿದಾಗ ರಾಜಪುತ್ರನು ಒಂದು ಹುತ್ತದ ಮೇಲೆ ತಲೆಯನ್ನಿಟ್ಟು ಮಲಗಿದ್ದನು. ಅವನ ಹೊಟ್ಟೆಯಲ್ಲಿದ ಹಾವು ಅವನ ಬಾಯಿಯಿಂದ ಹೊರಗೆ ತನ್ನ ಹೆಡೆಯನ್ನು ಹಾಕಿ ವಾಯುಸೇವನೆಯನ್ನು ಮಾಡುತ್ತಿತ್ತು. ಆ ಹುತ್ತದ ಬಿಲದಿಂದ ಮತ್ತೊಂದು ಸರ್ಪವು ಹಾಗೆಯೇ ಹೊರಗೆ ಬಂದು ವಾಯುಸೇವನೆಯನ್ನು ಮಾಡುತ್ತಿತ್ತು.

ಆ ಸರ್ಪಗಳು ಪರಸ್ಪರ ನೋಡಿಕೊಂಡು ಕ್ರೋಧದಿಂದ ಕಣ್ಣನ್ನು ಕೆಂಪಗೆ ಮಾಡಿಕೊಂಡವು ಹಾಗೂ ಹುತ್ತದ ಹಾವು ಹೇಳಿತು – “ಎಲೈ ದುರಾತ್ಮನೇ, ಏಕೆ ಸರ್ವಾಂಗ ಸುಂದರನಾದ ರಾಜಪುತ್ರನನ್ನು ಹೀಗೆ ಪೀಡಿಸುತ್ತಿದ್ದೀಯೆ ?”

ಬಾಯಲ್ಲಿದ್ದ ಹಾವು ಹೇಳಿತು – “ನೀನು ಕೂಡ ಈ ಹುತ್ತದಲ್ಲಿರುವ ಚಿನ್ನ ತುಂಬಿರುವ ಎರಡು ಕಲಶಗಳನ್ನು ಏಕೆ ಮಲಿನ ಮಾಡುತ್ತಿರುವೆ ?”

ಹೀಗೆ ಇಬ್ಬರೂ ಮತ್ತೊಬ್ಬರ ರಹಸ್ಯವನ್ನು ಹೊರಹಾಕಿದವು.

ಹುತ್ತದಲ್ಲಿದ್ದ ಹಾವು ಮತ್ತೆ ಹೇಳಿತು – “ಎಲೈ ದುರಾತ್ಮನೇ, ನಿನ್ನ ನಿವಾರಣೆಗೆ ಔಷಧಿಯನ್ನು ಬಲ್ಲವರು ಯಾರೂ ಇಲ್ಲವೆಂದು ತಿಳಿದಿರುವೆಯಾ ? ರುಬ್ಬಿದ ಹಳೆಯ ಕರಿ ಸಾಸಿವೆಯ ಗಂಜಿಯನ್ನು ಕುಡಿಯುವುದರಿಂದ ನಿನ್ನ ನಾಶವಾಗುತ್ತದೆ.

ಹೊಟ್ಟೆಯಲ್ಲಿದ್ದ ಹಾವು – “ನಿನ್ನ ನಾಶದ ಔಷಧಿಯನ್ನು ಯಾರೂ ತಿಳಿದಿಲ್ಲವೇನು ? ಬಿಸಿಯಾದ ಎಣ್ಣೆ ಅಥವಾ ಅತಿ ಬಿಸಿಯಾದ ನೀರಿನಿಂದ ನಿನ್ನ ವಿನಾಶವಾಗುವುದು.”

ರಾಜಕನ್ಯೆಯು ಹೀಗೆ ಹಾವುಗಳೆರಡು ಮತ್ತೊಬ್ಬರ ರಹಸ್ಯವನ್ನು ಬಯಲು ಮಾಡುತ್ತಿದ್ದ ಮಾತುಗಳನ್ನು ಮರದ ನೆರಳಿನಲ್ಲಿ ನಿಂತು ಕೇಳಿಸಿಕೊಂಡು ಅದರಂತೆಯೇ ಮಾಡಿದಳು. ಪತಿಯನ್ನು ಸ್ವಸ್ಥನನ್ನಾಗಿಸಿ, ಹುತ್ತದಲ್ಲಿದ್ದ ಚಿನ್ನವನ್ನು ತೆಗೆದುಕೊಂಡು ಅವಳು ತನ್ನ ರಾಜ್ಯದ ಕಡೆಗೆ ಹೊರಟಳು. ತಂದೆತಾಯಿಗಳಿಂದ ಉಪಚರಿಸಲ್ಪಟ್ಟು ತಾನು ಪಡೆದುಬಂದ ಭಾಗ್ಯವನ್ನು ಅನುಭವಿಸುತ್ತಾ ಸುಖದಿಂದ ಇದ್ದಳು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: