3-9-ಬಡಗಿಯ ಹೆಂಡತಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದಲ್ಲಿ ಬರುತ್ತದೆ. ಕಾಕೋಲೂಕೀಯದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ವೀರವರನೆಂಬ ಬಡಗಿಯಿದ್ದನು. ಅವನ ಹೆಂಡತಿ ಕಾಮದಮನೀ. ಅವಳಾದರೋ ಹಾದರಗಿತ್ತಿ ಮತ್ತು ಜನರ ಅಪವಾದಕ್ಕೆ ಒಳಗಾಗಿದ್ದಳು. ವೀರವರನು ಅವಳನ್ನು ಪರೀಕ್ಷಿಸಲು ಯೋಚಿಸಿದನು – “ನಾನು ಇವಳ ಪರೀಕ್ಷೆಯನ್ನು ಮಾಡಬೇಕು. ಏಕೆಂದರೆ ಒಂದುವೇಳೆ ಅಗ್ನಿಯು ತಂಪಾದರೆ, ಚಂದ್ರನು ಉಷ್ಣತೆಯನ್ನು ಹೊಂದಿದರೆ ಅಥವಾ ದುರ್ಜನರು ಹಿತವನ್ನು ಮಾಡುವುದಾದರೆ, ಆಗ ಸ್ತ್ರೀಯರು ಸತಿಯಾಗಬಲ್ಲರು ಎಂದು ಹೇಳುವರು. ವೇದಗಳಲ್ಲಿ ಮತ್ತು ಶಾಸ್ತ್ರಗಳಲ್ಲಿ ಕಾಣಸಿಗದ್ದು ಹಾಗೂ ಕೇಳಲ್ಪಡದ್ದನ್ನು ಬ್ರಹ್ಮಾಂಡದ ಮಧ್ಯದಲ್ಲಿರುವುದನ್ನೂ ಜನರು ತಿಳಿದುಕೊಂಡು ಬಿಡುತ್ತಾರೆ (ಅಂದರೆ ಈಕೆ ವ್ಯಭಿಚಾರಿಣಿ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ).”

ಹೀಗೆ ನಿಶ್ಚಯಿಸಿ ಹೆಂಡತಿಗೆ ಹೇಳಿದನು – “ಪ್ರಿಯೆ, ಬೆಳಗ್ಗೆ ನಾನು ಬೇರೆ ಗ್ರಾಮಕ್ಕೆ ಹೋಗುತ್ತೇನೆ, ಅಲ್ಲಿ ಕೆಲವು ದಿನಗಳು ಇರುತ್ತೇನೆ. ನನಗೆ ಮಾರ್ಗದಲ್ಲಿ ತಿನ್ನಲು ಯೋಗ್ಯವಾದುದನ್ನು ಮಾಡಿಕೊಡು.”

ಅವಳು ಆ ಮಾತನ್ನು ಕೇಳಿ ಹರ್ಷಗೊಂಡು ಉತ್ಸಾಹದಿಂದ ಎಲ್ಲಾ ಕೆಲಸಗಳನ್ನು ಬಿಟ್ಟು ಸಕ್ಕರೆ, ತುಪ್ಪ ಹಾಕಿದ ಅನ್ನವನ್ನು ಮಾಡಿದಳು. ಮೋಡಕವಿದಿರುವಾಗ, ಗಾಢಾಂಧಕಾರವಿರುವಾಗ, ಮಳೆಯು ಸುರಿಯುತ್ತಿರಲು, ಪತಿಯು ಬೇರೆ ಊರಿಗೆ ಹೋಗಿದ್ದಾಗ, ಕುಲಟೆಯರಿಗೆ(ಸೂಳೆಯರಿಗೆ) ಅತ್ಯಂತ ಸಂತೋಷವಾಗುತ್ತದೆ ಎಂಬ ಮಾತು ಸರಿಯಾಗಿಯೇ ಇದೆ.

ಉಷಾಕಾಲದಲ್ಲಿ ಎದ್ದು ಅವನು ತನ್ನ ಮನೆಯಿಂದ ಹೊರಟನು. ಅವನು ಹೊರಟದ್ದನ್ನು ನೋಡಿ ಅವನ ಹೆಂಡತಿಯು ಹಸನ್ಮುಖಿಯಾಗಿ ಅಲಂಕಾರಾದಿಗಳನ್ನು ಮಾಡಿಕೊಂಡು ಹೇಗೋ ದಿನವನ್ನು ಕಳೆದಳು. ಸಂಜೆ ತನಗೆ ಮುಂಚೆಯೇ ಪರಿಚಿತನಿದ್ದ ವಿಟಪುರುಷನ (ಜಾರ, ವಿಷಯಲಂಪಟ) ಮನೆಗೆ ಹೋಗಿ – “ನನ್ನ ದುರಾತ್ಮನಾದ ಗಂಡನು ಬೇರೆ ಗ್ರಾಮಕ್ಕೆ ಹೋಗಿದ್ದಾನೆ. ಜನರೆಲ್ಲಾ ಮಲಗಿದ ಮೇಲೆ ನೀನು ನನ್ನ ಮನೆಗೆ ಬಾ” ಎಂದಳು.

ಈ ಮಧ್ಯೆ, ಬಡಗಿಯು ದಿನವನ್ನು ಅರಣ್ಯದಲ್ಲಿ ಕಳೆದು, ಸಂಜೆಗೆ ಮನೆಗೆ ಬಂದು, ಹಿಂದಿನ ಬಾಗಿಲಿನಿಂದ ಒಳಹೊಕ್ಕು ಮಂಚದ ಕೆಳಗೆ ಅಡಗಿ ಕುಳಿತನು. ನಂತರ ಅವಳ ಮಿತ್ರನಾದ ದೇವದತ್ತನು ಬಂದು ಅದೇ ಮಂಚದಲ್ಲಿ ಕುಳಿತುಕೊಂಡನು. ಅದನ್ನು ನೋಡಿ ರೋಷಗೊಂಡ ಬಡಗಿಯು ಚಿಂತಿಸಿದನು – “ಎದ್ದು ಹೋಗಿ ಇವನನ್ನು ಕೊಂದುಬಿಡಲೇ ? ಅಥವಾ ಇಬ್ಬರೂ ಮಲಗಿದ್ದಾಗ ಅನಾಯಾಸದಿಂದ ಇಬ್ಬರನ್ನೂ ಕೊಲ್ಲಲೇ ? ಅಥವಾ ಇವಳ ವ್ಯವಹಾರ ಏನೆಂದು ನೋಡುವೆನು ಮತ್ತು ಇವಳು ಅವನೊಂದಿಗೆ ಮಾಡುವ ಸಂಭಾಷಣೆಯನ್ನು ಕೇಳಿಸಿಕೊಳ್ಳುವೆನು.

ನಂತರ ಅವಳು ಮನೆಯ ಬಾಗಿಲನ್ನು ಶಬ್ದವಾಗದಂತೆ ಮುಚ್ಚಿ ಮಂಚವನ್ನೇರಿ ಕುಳಿತಳು. ಹತ್ತಿ ಕುಳಿತುಕೊಳ್ಳುವಾಗ ಅವಳ ಪಾದಗಳು ಕೆಳಗಿದ್ದ ಗಂಡನ ದೇಹಕ್ಕೆ ತಗಲಿದವು. ಆಗ ಅವಳು ಚಿಂತಿಸಿದಳು – “ಇವನು ಖಂಡಿತವಾಗಿಯೂ ನನ್ನನ್ನು ಪರೀಕ್ಷಿಸಲು ಬಂದಿರುವ  ದುಷ್ಟ ಬಡಗಿಯೇ ಇರಬೇಕು. ಇವನಿಗೆ ಸ್ತ್ರೀ ಚರಿತ್ರೆಯ ವಿಶೇಷವನ್ನು ತೋರುವೆನು. (ಅಂದರೆ ಸ್ತ್ರೀಯರ ಕಾಲೋಚಿತವಾದ ಬುದ್ಧಿಪ್ರಯೋಗವನ್ನು ತೋರುವೆನೆಂದರ್ಥ)

ಅವಳು ಹೀಗೆ ಯೋಚಿಸುತ್ತಿರಲು ದೇವದತ್ತನು ಅವಳನ್ನು ಸ್ಪರ್ಶಿಸಲು ಉತ್ಸುಕನಾದನು. ಆಗ ಅವಳು ಕೈಮುಗಿದುಕೊಂಡು ಹೀಗೆ ನುಡಿದಳು – “ಎಲೈ ಮಹಾನುಭಾವನೇ, ನಾನು ಪತಿವ್ರತೆ ಹಾಗೂ ಮಾಹಾಸತಿಯಾದ್ದರಿಂದ ನೀನು ನನ್ನ ಶರೀರವನ್ನು ಸ್ಪರ್ಶಿಸಬಾರದು. ಇಲ್ಲದಿದ್ದರೆ ನಿನ್ನನ್ನು ಸುಟ್ಟು ಭಸ್ಮ ಮಾಡಿಬಿಡುವೆನು.”

ದೇವದತ್ತ – “ಹಾಗಿದ್ದಲ್ಲಿ ನನ್ನನ್ನು ಏಕೆ ಕರೆದಿರುವೆ ?”

ಬಡಗಿಯ ಹೆಂಡತಿ – “ಏಕಾಗ್ರಚಿತ್ತನಾಗಿ ಕೇಳು. ಇಂದು ಬೆಳಗ್ಗೆ ನಾನು ದೇವದರ್ಶನಕ್ಕಾಗಿ ಚಂಡಿಕಾ ದೇವಸ್ಥಾನಕ್ಕೆ ಹೋಗಿದ್ದೆ. ಅಲ್ಲಿ ಹೀಗೆ ಆಕಾಶದಿಂದ ಅಶರೀರವಾಣಿಯಾಯಿತು – ‘ಮಗಳೇ, ನೀನು ನನ್ನ ಭಕ್ತೆ, ಆದರೇನು ಮಾಡಲಿ ? ಆರು ತಿಂಗಳುಗಳ ನಂತರ ವಿಧಿನಿಯಮದಂತೆ ನೀನು ವಿಧವೆಯಾಗುವೆ.’

ಆಗ ನಾನು – ‘ದೇವಿ, ನೀನು ತೊಂದರೆಯನ್ನು ಹೇಗೆ ಬಲ್ಲೆಯೋ ಅದಕ್ಕೆ ಪರಿಹಾರವನ್ನೂ ಬಲ್ಲೆ. ನನ್ನ ಪತಿಯು ನೂರು ವರ್ಷಗಳ ಕಾಲ ಬದುಕುವಂಥ ಉಪಾಯವೇನಾದರೂ ಇದೆಯೇ ?’

ಆಗ ದೇವಿಯು ಹೇಳಿದಳು – ‘ಉಪಾಯವಿದ್ದರೂ ಇಲ್ಲದಂತೆಯೇ, ಏಕೆಂದರೆ ಪರಿಹಾರವು ನಿನ್ನ ಅಧೀನದಲ್ಲೇ ಇದೆ’.

ಅದನ್ನು ಕೇಳಿದ ನಾನು – ‘ದೇವಿ, ನನ್ನ ಪ್ರಾಣಗಳನ್ನು ಕೊಡುವುದು ಪರಿಹಾರವಾದರೆ ತಿಳಿಸು, ಅದನ್ನು ಮಾಡುವೆನು’.

ಆಗ ದೇವಿಯು ನುಡಿದಳು – “ನೀನು ಇಂದು ಪರಪುರುಷನೊಡನೆ ಮಂಚವನ್ನು ಏರಿ ಒಮ್ಮೆ ಅವನನ್ನು ತಬ್ಬಿಕೊಂಡರೆ ನಿನ್ನ ಗಂಡನಿಗೆ ಬರುವ ಅಪಮೃತ್ಯುವು ಅವನಿಗೆ ಸಲ್ಲುತ್ತದೆ. ನಿನ್ನ ಗಂಡನು ನೂರು ವರ್ಷ ಬದುಕುವನು.’

ಆದ್ದರಿಂದ ನಿನ್ನನ್ನು (ಅಂದರೆ ಪರಪುರುಷನನ್ನು) ಕರೆದಿರುವೆನು. ಈಗ ನೀನು ಇಚ್ಛೆಬಂದಂತೆ ಮಾಡು, ದೇವರ ಮಾತು ಎಂದಿಗೂ ಸುಳ್ಳಾಗುವುದಿಲ್ಲ. “

ಆಗ ಒಳಗೊಳಗೇ ನಗುತ್ತಾ ಆ ಪರಪುರುಷನು ಪ್ರಸನ್ನನಾಗಿ ಆ ಸಮಯಕ್ಕೆ ಸರಿಯಾದ ಕಾರ್ಯವನ್ನು (ಆಲಿಂಗನ, ಚುಂಬನಾದಿ) ಮಾಡಿದನು. ಅವಳ ಮಾತನ್ನು ಕೇಳಿದ ಮೂರ್ಖ ಬಡಗಿಯು ರೋಮಾಂಚನಗೊಂಡು ಮಂಚದ ಕೆಳಗಿನಿಂದ ಹೊರಬಂದು ಅವಳಿಗೆ ಹೇಳಿದನು – “ಎಲೈ ಪತ್ರಿವ್ರತೇ, ಎಲೈ ಕುಲನಂದಿನೀ, ನೀನೇ ಧನ್ಯಳು. ನಾನು ದುರ್ಜನರ ಮಾತಿನಿಂದ ನಿನ್ನನ್ನು ಶಂಕಿಸಿ ನಿನ್ನ ಪರೀಕ್ಷೆಮಾಡುವ ಸಲುವಾಗಿ ಬೇರೆ ಗ್ರಾಮಕ್ಕೆ ಹೋಗುವ ನೆಪವನ್ನು ಮಾಡಿ ಮಂಚದ ಕೆಳಗೆ ಅಡಗಿ ಕುಳಿತ್ತಿದ್ದೆ. ಬಾ ನನ್ನನ್ನು ಆಲಿಂಗಿಸು. ತನ್ನ ಪತಿಯಲ್ಲಿ ಭಕ್ತಿಯನ್ನಿಡುವ ಪತ್ನಿಯಲ್ಲಿ ನೀನೇ ಪ್ರಮುಖಳು. ಕಷ್ಟವಾದ ವ್ರತವನ್ನು ಪರಪುರುಷನೊಂದಿಗೆ ಪಾಲಿಸಿರುವೆ. ನನ್ನ ಆಯಸ್ಸನ್ನು ವೃದ್ಧಿಸಿದೆ ಮತ್ತು ಅಪಮೃತ್ಯುವನ್ನು ಕೂಡ ಕಳೆದೆ.”

ಹೀಗೆ ನುಡಿದು ಪ್ರೀತಿಯಿಂದ ಅವಳನ್ನು ತಬ್ಬಿಕೊಂಡು ಅವಳನ್ನು ಹೆಗಲಮೇಲೆ ಕೂರಿಸಿಕೊಂಡು ದೇವದತ್ತನಿಗೆ ಹೇಳಿದನು – “ಎಲೈ ಮಹಾನುಭಾವನೆ, ನೀನು ಇಲ್ಲಿಗೆ ಬಂದದ್ದು ನನ್ನ ಪುಣ್ಯವೇ ಸರಿ. ನಿನ್ನ ಕೃಪೆಯಿಂದ ನನಗೆ ನೂರುವರ್ಷಗಳ ಆಯುಷ್ಯ ದೊರೆಯಿತು. ನೀನು ಕೂಡ ನನ್ನನ್ನು ಆಲಿಂಗಿಸಿ ನನ್ನ ಹೆಗಲನ್ನೇರು.”

ಈ ರೀತಿ ನುಡಿಯುತ್ತಾ ಬಲವಂತವಾಗಿ ದೇವದತ್ತನನ್ನು ತಬ್ಬಿಕೊಂಡು ಹೆಗಲ ಮೇಲೆ ಕೂರಿಸಿಕೊಂಡನು. ನಂತರ ನೃತ್ಯವನ್ನು ಮಾಡುತ್ತಾ – “ಎಲೈ ಮಹಾವ್ರತವನ್ನು ಹೊತ್ತ ಶ್ರೇಷ್ಠನೇ, ನೀನು ನನಗೆ ಉಪಕಾರವನ್ನು ಮಾಡಿರುವೆ.” ಹೀಗೆ ನುಡಿದು ಹೆಗಲಿನಿಂದ ಇಳಿಸಿ ತನ್ನ ಪರಿಚಯಸ್ಥರ ಮನೆ ಬಾಗಿಲಿಗೆ ಹೋದಾಗಲೆಲ್ಲಾ ತನ್ನ ಹೆಂಡತಿಯ ಹಾಗೂ ಆ ಪರಪುರುಷನ ಗುಣಗಾನವನ್ನು ಮಾಡಿದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: