ಪಂಚತಂತ್ರ – ಮಿತ್ರಭೇದ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

Panchatantra Book

[ಪಂಚತಂತ್ರದ ಕಥಾಮುಖವನ್ನು ಮೊದಲು ಇಲ್ಲಿ ಓದಿ ನಂತರ ಈ ಪುಟದಲ್ಲಿರುವ ಮಿತ್ರಭೇದವನ್ನು ಓದಿರಿ. ಪಂಚತಂತ್ರ ಮುಖಪುಟ, ತಂತ್ರ 1. ಮಿತ್ರಭೇದ, ತಂತ್ರ 2. ಮಿತ್ರಸಂಪ್ರಾಪ್ತಿ, ತಂತ್ರ 3. ಕಾಕೋಲೂಕೀಯ, ತಂತ್ರ 4. ಲಬ್ಧಪ್ರಣಾಶ, ತಂತ್ರ 5. ಅಪರೀಕ್ಷಿತಕಾರಕ]

ಕಥೆಯ ಸಾರಾಂಶ

ಒಂದು ಕಾಡಿನಲ್ಲಿ, ಒಮ್ಮೆ ಸಿಂಹ ಹಾಗೂ ಎತ್ತಿಗೂ ಗಾಢವಾದ ಸ್ನೇಹವುಂಟಾಗಿರಲು, ದುಷ್ಟನಾದ ಹಾಗೂ ಅತಿಲೋಭಿಯಾದ ನರಿಯಿಂದ ಆ ಸ್ನೇಹವು ನಾಶಮಾಡಲ್ಪಟ್ಟಿತು.

panchatantra-mitrabheda-wm

ಮಿತ್ರಭೇದದ ಕೊನೆಯ ದೃಶ್ಯ – ಪಿಂಗಲಕ ಸಿಂಹದಿಂದ ಸಂಜೀವಕ ಎತ್ತಿನ ಹತ್ಯೆ ಹಾಗೂ ಮರೆಯಲ್ಲಿ ನಿಂತು ಕರಟಕ-ದಮನಕ ನರಿಗಳು ನೋಡುತ್ತಿರುವುದು. ಚಿತ್ರ – Kum. Drashti Piyusha Patel

ಧನಾರ್ಜನೆಯ ಉಪಾಯಗಳು

ದಕ್ಷಿಣದೇಶದ ಮಹಿಲಾರೋಪ್ಯವೆಂಬ ನಗರದಲ್ಲಿ ಧರ್ಮಮಾರ್ಗದಲ್ಲಿ ಧನಾರ್ಜನೆ ಮಾಡಿ ಶ್ರೀಮಂತನಾಗಿರುವ ವರ್ಧಮಾನಕನೆಂಬ ವ್ಯಾಪಾರಿಯಿದ್ದನು. ಒಮ್ಮೆ ರಾತ್ರಿ ಹಾಸಿಗೆಯಲ್ಲಿ ಒರಗಿಕೊಂಡಿದ್ದ ಆತನಿಗೆ ಇನ್ನೂ ಹೆಚ್ಚು ಹಣ ಸಂಪಾದಿಸಬೇಕೆಂಬ ಮನಸ್ಸಾಯಿತು. ಆದರ ಬಗ್ಗೆ ಆತನು ಹೀಗೆ ಚಿಂತಿಸಲಾರಂಭಿಸಿದನು –

“ಹಣದಿಂದ ದೊರಕಲಾಗದ ವಸ್ತುವು ಯಾವುದೂ ಇಲ್ಲ. ಹಾಗಾಗಿ ಬುದ್ಧಿವಂತನಾದವನು ಪ್ರಯತ್ನಪೂರ್ವಕವಾಗಿ ಹಣವನ್ನು ಮಾತ್ರ ಗಳಿಸಬೇಕು. ಯಾರ ಬಳಿ ಹಣವಿರುತ್ತದೋ ಅವನ ಬಳಿ ಮಿತ್ರರು ಮತ್ತು ಬಾಂಧವರು ಇರುತ್ತಾರೆ. ಜಗತ್ತಿನಲ್ಲಿ ಹಣವಿದ್ದವನನ್ನು ಜನರು ಪುರುಷನೆಂದು ಹಾಗೂ ಪಂಡಿತನೆಂದು ಪರಿಗಣಿಸುತ್ತಾರೆ. ಹಣವನ್ನು ಕೇಳಲು ಹೋದಾಗ ಧನಿಕರ ಬಗ್ಗೆ ಯಾಚಕರು ಹೊಗಳದ ವಿದ್ಯೆಯಿಲ್ಲ, ದಾನವಿಲ್ಲ, ಕಲೆಯಿಲ್ಲ ಹಾಗೂ ಶೌರ್ಯವಿಲ್ಲ. ಈ ಲೋಕದಲ್ಲಿ ಸಂಬಂಧವಿಲ್ಲದವರೂ ಕೂಡ ಹಣವಂತರ ಸಂಬಂಧಿಗಳೆನಿಸಿಬಿಡುತ್ತಾರೆ ಮತ್ತು ಬಡವರಲ್ಲಿ ಅವರ ಸ್ವಜನರೂ ದುರ್ಜನರಂತೆ ನಡೆದುಕೊಳ್ಳುತ್ತಾರೆ. ಪರ್ವತದಿಂದ ನದಿಗಳು ಹೇಗೆ ಹುಟ್ಟುತ್ತವೆಯೋ, ಹಾಗೆ ವಿವಿಧ ರೀತಿಯಲ್ಲಿ ಸಂಪಾದಿಸಲ್ಪಟ್ಟು ವೃದ್ಧಿಯಾದ ಹಣದಿಂದ ಎಲ್ಲಾ ಕಾರ್ಯಗಳೂ ಸಿದ್ಧಿಸುತ್ತವೆ. ಧನದ ಪ್ರಭಾವ ಹೇಗೆಂದರೆ ಹಣವಿರುವ ಅಯೋಗ್ಯರೂ ಪೂಜಿಸಲ್ಪಡುತ್ತಾರೆ, ಹತ್ತಿರ ಹೋಗಬಾರದಂತವರ ಬಳಿಗೂ ಜನರು ಹೋಗುತ್ತಾರೆ ಹಾಗೂ ಗೌರವಕ್ಕೆ ಯೋಗ್ಯವಲ್ಲದವರೂ ಕೂಡ ಗೌರವಿಸಲ್ಪಡುತ್ತಾರೆ. ಆಹಾರದಿಂದ ಇಂದ್ರಿಯಗಳು ಹೇಗೆ ಸಾಮರ್ಥ್ಯವನ್ನು ಪಡೆಯುತ್ತವೆಯೋ, ಹಾಗೆ ಹಣದಿಂದ ಸಕಲ ಕಾರ್ಯಗಳೂ ಸಾಧ್ಯವಾಗುತ್ತದೆ. ಆದ್ದರಿಂದ ಹಣವನ್ನು ಎಲ್ಲದಕ್ಕೂ ಸಾಧನವೆಂದು ಹೇಳುತ್ತಾರೆ. ಧನವನ್ನು ಬಯಸುವವನು ಅದಕ್ಕಾಗಿ ಸ್ಮಶಾನಕ್ಕಾದರೂ ಹೋಗುತ್ತಾನೆ. ಅದರೆ ಅವನೇ ಮರಣಹೊಂದಿದ ಜನ್ಮಕೊಟ್ಟವರನ್ನು ದೂರದಿಂದಲೇ ತ್ಯಜಿಸಿ ಹೋಗುತ್ತಾನೆ. ವಯಸ್ಸಾದ ಪುರುಷರು ಹಣವೊಂದಿದ್ದರೆ ಅವರು ತರುಣರಂತೆ ಆದರೆ ಬಡವರು ವಯಸ್ಸಿದ್ದರೂ ವೃದ್ಧರಂತೆ.

ಹಣವನ್ನು ಪುರುಷರು ಆರು ಉಪಾಯಗಳಿಂದ ಗಳಿಸಬಹುದು – ಭಿಕ್ಷೆಯಿಂದ, ರಾಜನ ಸೇವೆಯಿಂದ, ಕೃಷಿಕಾರ್ಯದಿಂದ, ವಿದ್ಯೆಯನ್ನು ಪಡೆಯುವುದರಿಂದ, ಲೇವಾದೇವಿಯಿಂದ ಮತ್ತು ವ್ಯಾಪಾರದಿಂದ. ಅನೇಕ ಜನರು ಭಿಕ್ಷಾಟನೆ ಮಾಡುವುದರಿಂದ ಅದರಲ್ಲಿ ಸಂಪಾದನೆ ಹೆಚ್ಚಿಲ್ಲ. ರಾಜನ ಸೇವೆಮಾಡಿದರೂ ಆತ ಸರಿಯಾಗಿ ಹಣದ ವಿತರಣೆ ಮಾಡುವುದಿಲ್ಲ. ಕೃಷಿಮಾಡುವುದು ಕಷ್ಟಕರವು. ಗುರುವಿನಲ್ಲಿ ವಿನಯದಿಂದ ವಿದ್ಯೆ ಕಲಿಯುವುದು ಸುಲಭವಲ್ಲ. ಲೇವಾದೇವಿ ವ್ಯವಹಾರದಲ್ಲಿ ಬೇರೆಯವರ ಕೈಯಲ್ಲಿದ್ದ ಹಣವು ಕರಗುವುದರಿಂದ ದಾರಿದ್ರ್ಯವು ಬರಬಹುದು. ಆದ್ದರಿಂದ ವ್ಯಾಪಾರಮಾಡುವುದೇ ಉತ್ತಮವಾದ ಮಾರ್ಗವೆಂದು ತಿಳಿಯುತ್ತೇನೆ. ವಿಕ್ರಯಿಸಲ್ಪಡುವ ವಸ್ತುಗಳ ಸಂಗ್ರಹವೇ ಧನಾರ್ಜನೆಗಿರುವ ಉತ್ತಮವಾದ ಉಪಾಯವು. ಬೇರೆಲ್ಲಾ ಉಪಾಯವು ಸಂಶಯಾತ್ಮಕವಾಗಿ ತೋರುತ್ತವೆ.

ಧನಾರ್ಜನೆಗೆ ಏಳು ವಿಧವಾದ ವಾಣಿಜ್ಯ ಕ್ರಮಗಳಿವೆ – ೧. ಗ್ರಂಧಿಕವ್ಯವಹಾರ (ಸುಗಂಧಾದಿಗಳನ್ನು ಮಾರುವುದು), ೨. ನಿಕ್ಷೇಪಪ್ರವೇಶ (ಅಡವಿಟ್ಟುಕೊಳ್ಳುವ ವ್ಯವಹಾರ), ೩. ಗೋಷ್ಠಿಕಕರ್ಮ (ಹೈನುಗಾರಿಕೆ ಸಂಘಗಳ ಮೂಲಕ ವ್ಯಾಪಾರ ಮುಂತಾದವುಗಳು), ೪. ಪರಿಚಿತಗ್ರಾಹಕಾಗಮ (ಗ್ರಾಹಕರನ್ನು ಮತ್ತೆ ಮತ್ತೆ ತಮ್ಮಲ್ಲಿ ಬರುವಂತೆ ಮಾಡಿ ವ್ಯಾಪಾರವನ್ನು ವೃದ್ಧಿಸಿಕೊಳ್ಳುವುದು), ೫. ಮಿಥ್ಯಾಕ್ರಯಕಥನ (ಅಲ್ಪ ಮೂಲ್ಯದ ವಸ್ತುಗಳನ್ನು ಹೆಚ್ಚಿನ ಬೆಲೆಗೆ ಮಾರುವುದು), ೬. ಕೂಟತುಲಾಮಾನ (ತೂಕದಲ್ಲಿ ಮೋಸ), ೭. ಸರಕುಗಳನ್ನು ಬೇರೆ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಮಾರುವುದು.

ಸರಕುಗಳಲ್ಲಿ ಉತ್ತಮವಾದುದು ಗ್ರಂಧಿಕೆ ಸರಕುಗಳು. ಏಕೆಂದರೆ ಅವುಗಳನ್ನು ಕಡಿಮೆ ಬೆಲೆಯಲ್ಲಿ ಕೊಂಡು ನೂರರಷ್ಟು ಅಧಿಕ ಬೆಲೆಯಲ್ಲಿ ಮಾರಬಹುದು. ತನ್ನಲ್ಲಿ ಸಾಮಾನನ್ನು  ಅಡವಿಟ್ಟವನು ಸತ್ತು ಹೋದರೆ ನಿನಗೆ ಪ್ರಸಾದವನ್ನು ಅರ್ಪಿಸುತ್ತೇನೆ ಎಂದು ಲೇವಾದೇವಿ ವ್ಯಾಪರಿಯು ದೇವರನ್ನು ಕೋರಿಕೊಳ್ಳೂತ್ತಾನೆ. ಗೋಷ್ಠಿಕಕರ್ಮದಲ್ಲಿ ಇರುವ ವ್ಯಾಪಾರಿಯು ತನೆಗೆ ಸಂಪತ್ಭರಿತವಾದ ಭೂಮಿಯೇ ಸಿಕ್ಕಿರುವಾಗ ಬೇರೇನು ಬೇಕು ಎಂದು ಸಂತೋಷದಿಂದ ಚಿಂತಿಸುತ್ತಾನೆ. ಪರಿಚಿತನಾದ ಗ್ರಾಹಕನು ಬಂದರೆ ಧನಲೋಭಿಯಾದ ವ್ಯಾಪಾರಿಯು ಪುತ್ರನ ಜನನವಾದಷ್ಟು ಸಂತೋಷದಿಂದ ಅವನನ್ನು ನೋಡುತ್ತಾನೆ. ಒಂದು ಕಡೆಯ ಸರಕುಗಳನ್ನು ಬೇರೆ ದೇಶದಲ್ಲಿ ಮಾರುವ ವ್ಯಾಪರಿಗಳು ದ್ವಿಗುಣ ಅಥವಾ ತ್ರುಗುಣದಷ್ಟು ಲಾಭವನ್ನು ಮಾಡುತ್ತಾರೆ.”

ಸಂಜೀವಕನ ವನಪ್ರವೇಶ

ಹೀಗೆ ಯೋಚಿಸಿದ ಅವನು ಒಂದು ಶುಭದಿನದಂದು, ಗುರುಹಿರಿಯರ ಆಶೀರ್ವಾದದೊಂದಿಗೆ ಮಥುರಾನಗರದಲ್ಲಿ ಮಾರಬೇಕಿರುವ ಸರಕುಗಳನ್ನು ತನ್ನ ಗಾಡಿಗೆ ಏರಿಸಿ ಹೊರಟನು. ಆ ಗಾಡಿಗೆ ತನ್ನ ಮನೆಯಲ್ಲೇ ಹುಟ್ಟಿಬೆಳೆದ ಸಂಜೀವಕ – ನಂದಕರೆಂಬ ಎರಡು ಎತ್ತುಗಳನ್ನು ಕಟ್ಟಿದ್ದನು..

ಯಮುನಾತೀರದಲ್ಲಿ ವ್ಯಾಪಾರಿಗಳ ಸಾರ್ಥವು ಚಲಿಸುತ್ತಿದ್ದಾಗ, ಸಂಜೀವಕನ ಕಾಲುಗಳು ಕೆಸರಿನಲ್ಲಿ ಸಿಕ್ಕಿ ಆತನು ಬಿದ್ದುಬಿಟ್ಟನು. ಗಾಡಿಯನ್ನು ಎಳೆಯಲು ಅಸಮರ್ಥನಾದ ಅವನ ಪರಿಸ್ಥಿತಿಗೆ ಮರುಗಿ ವರ್ಧಮಾನಕನು ಮೂರು ರಾತ್ರಿಗಳು ಅಲ್ಲೇ ತಂಗಿದನು. ಆಗ ಸಾರ್ಥದಲ್ಲಿದ್ದ ಇತರ ವ್ಯಾಪಾರಿಗಳು ಆತನಿಗೆ ಹೇಳಿದರು – “ಎಲೈ ಶ್ರೇಷ್ಠೀ, ಏನಿದು ಹೀಗೆ ಒಂದು ಎತ್ತಿಗೋಸ್ಕರ ಹುಲಿಸಿಂಹಗಳಿರಿವ ಈ ಅಪಾಯಕಾರಿಯಾದ ಅಡವಿಯಲ್ಲಿ ಇಡೀ ಸಾರ್ಥವನ್ನೇ ಸಂಕಟಕ್ಕೀಡುಮಾಡಿರುವೆ ? ಬುದ್ಧಿವಂತನಾದವನು ಸ್ವಲ್ಪಕ್ಕೋಸ್ಕರ ಹೆಚ್ಚಿನದನ್ನು ಕಳೆದುಕೊಳ್ಳುವುದಿಲ್ಲ. ಆದ್ದರಿಂದ ಹೆಚ್ಚಿನದಕ್ಕಾಗಿ ಸ್ವಲ್ಪವನ್ನು ಬಿಟ್ಟುಬಿಡುವುದೇ ಜಾಣತನವು.”

ಅವರ ಮಾತುಗಳನ್ನು ಒಪ್ಪಿ ವರ್ಧಮಾನಕನು ಸಂಜೀವಕನ ರಕ್ಷಣೆಗಾಗಿ ಜನರನ್ನು ನೇಮಿಸಿ ಸಾರ್ಥದೊಂದಿಗೆ ಅಲ್ಲಿಂದ ಹೊರಟನು. ಅಪಾಯಕಾರಿಯಾದ ಆ ಅರಣ್ಯದಲ್ಲಿ ಇರಲಿಚ್ಛಿ ಸದ ಆ ರಕ್ಷಕರು ಸಂಜೀವಕನನ್ನು ಅಲ್ಲೇ ಬಿಟ್ಟು, ಸಾರ್ಥವನ್ನು ಸೇರಿಕೊಂಡು ವರ್ಧಮಾನಕನಿಗೆ ಹೇಳಿದರು – “ಸ್ವಾಮೀ, ಸಂಜೀವಕನು ಸತ್ತುಹೋದನು. ನಿಮಗೆ ಆತ್ಮೀಯನಾಗಿದ್ದ ಅವನಿಗೆ ಅಗ್ನಿ ಸಂಸ್ಕಾರ ಮಾಡಿದೆವು”. ಅದನ್ನು ಕೇಳಿದ ವರ್ಧಮಾನಕನು ಕೃತಜ್ಞತೆಯಿಂದ ಸಂಜೀವಕನಿಗೆ ವೃಷೋತ್ಸರ್ಗ ಮುಂತಾದ ಅಪರಕ್ರಿಯೆಗಳನ್ನು ಮಾಡಿದನು.

ಆಯಸ್ಸು ಗಟ್ಟಿಯಿದ್ದ ಸಂಜೀವಕನು, ಯಮುನಾನೀರಿನಿಂದ ಮಿಶ್ರಿತವಾದ ತಂಪಾದ ಗಾಳಿಯ ಬೀಸುವಿಕೆಯಿಂದ ಚೇತರಿಸಿಕೊಂಡವನಾಗಿ, ಅಲ್ಲಿಂದ ಹೇಗೋ ಎದ್ದು ಯಮುನಾತೀರವನ್ನು ತಲುಪಿದನು. ಅಲ್ಲಿ ಪಚ್ಚೆಹರಳಿನಂತ ಎಳೆಹುಲ್ಲಿನ ಮೇಲ್ಭಾಗವನ್ನು ತಿನ್ನುತ್ತಾ ಕೆಲವು ದಿನಗಳ ನಂತರ ಶಿವನ ನಂದಿಯಂತೆ ದಷ್ಟಪುಷ್ಟ ಹಾಗೂ ಬಲವಂತನಾದನು. ಪ್ರತಿದಿನವೂ ಹುತ್ತದ ತುದಿಗಳನ್ನು ಕೊಂಬುಗಳಿಂದ ಛೇದಿಸ್ಸುತ್ತಾ ಗರ್ಜಿಸುತ್ತಾ ವಾಸವಾಗಿದ್ದನು. ಈ ಒಂದು ಸೂಕ್ತಿಯು ಸರಿಯಾಗಿಯೇ ಇದೆ – ರಕ್ಷಣೆಯಿಲ್ಲದವನು ದೈವರಕ್ಷೆಯಿದ್ದರೆ ಬದುಕುತ್ತಾನೆ, ಉತ್ತಮ ರಕ್ಷಣೆಯಿದ್ದವನು ದೈವಕೃಪೆಯಿಲ್ಲದಿದ್ದರೆ ನಾಶವಾಗುತ್ತಾನೆ. ಕಾಡಿನಲ್ಲಿ ಬಿಟ್ಟ ಅನಾಥನು ದೈವಕೃಪೆಯಿಂದ ಬದುಕುತ್ತಾನೆ, ದೈವಕೃಪೆಯಿಲ್ಲದಿದ್ದಾಗ ಏಷ್ಟೇ ಪ್ರಯತ್ನಪಟ್ಟರೂ ಮನೆಯಲ್ಲಿದ್ದರೂ ಕೂಡ ನಾಶವಾಗುತ್ತಾನೆ.

ಪಿಂಗಲಕನಿಂದ ವ್ಯೂಹರಚನೆ

ಹೀಗೆ ಒಂದು ದಿನ ಪಿಂಗಲಕನೆಂಬ ಬಾಯಾರಿದ ಸಿಂಹವೊಂದು ತನ್ನ ಮೃಗಪರಿವಾರದೊಡನೆ ನೀರು ಕುಡಿಯಲು ಯಮುನಾತೀರಕ್ಕೆ ಬಂದನು. ಆಗ ಸಂಜೀವಕನ ಗಂಭೀರವಾದ ಕೂಗನ್ನು ದೂರದಿಂದಲೇ ಕೇಳಿ ಪಿಂಗಲಕನು, ವ್ಯಾಕುಲಹೃದಯದವನಾಗಿ ಭಯಗೊಂಡರೂ ಅದನ್ನು ತೋರ್ಪಡಿಸದೆ ಒಂದು ಆಲದ ಮರದ ಕೆಳಗೆ ನಾಲ್ಕು ಮಂಡಲಗಳುಳ್ಳ ವ್ಯೂಹರಚನೆಯನ್ನು ಮಾಡಿ ಕುಳಿತುಕೊಂಡನು. ಅವನ ಚತುರ್ಮಂಡಲ ವ್ಯೂಹ ಹೀಗಿತ್ತು – ಮಧ್ಯ ಸಿಂಹ, ನಂತರದ ಸುತ್ತಿನಲ್ಲಿ ಅನುಯಾಯಿಗಳು ಅಂದರೆ ಮಂತ್ರಿಗಳು ಮುಂತಾದವರು, ಅವರ ಸುತ್ತ ಮಧ್ಯಮವರ್ಗದ ಸೇವಕರು, ಕೊನೆಯ ಸುತ್ತಿನಲ್ಲಿ ಗೂಢಾಚಾರರು, ಸೈನಿಕರು ಮುಂತಾದವರು.

ಕರಟಕ ದಮನಕರ ಮಂತ್ರಾಲೋಚನೆ

ಪಿಂಗಲಕನಿಗೆ  ಅಧಿಕಾರಭ್ರಷ್ಟರಾದ ಮಂತ್ರಿಪುತ್ರರಾದ ಕರಟಕ-ದಮನಕರೆಂಬ ಇಬ್ಬರು ನರಿಗಳು ಅನುಯಾಯಿಗಳಾಗಿದ್ದರು. ಅವರಿಬ್ಬರು ತಮ್ಮಲ್ಲೇ ಮಂತ್ರಾಲೋಚನೆಯಲ್ಲಿ ತೊಡಗಿದರು. ದಮನಕನು ಹೇಳಿದನು – “ಎಲೈ ಮಂಗಳಕರ ಕರಟಕನೇ, ಈ ನಮ್ಮ ಸ್ವಾಮಿ ಪಿಂಗಲಕನು ನೀರುಕುಡಿಯಲು ಯಮುನಾತೀರಕ್ಕೆ ಹೋದವನು, ಬಾಯಾರಿದ್ದರೂ ನೀರು ಕುಡಿಯದೆ ಹಿಂದಿರುಗಿ ಬಂದು ವ್ಯೂಹರಚನೆಯನ್ನು ಮಾಡಿ ದುಃಖತಪ್ತನಾಗಿ ಈ ಆಲದ ಮರದ ಕೆಳಗೆ ಕುಳಿತಿರುವನು. ಇದು ಯಾವ ಕಾರಣಕ್ಕಾಗಿ ?”

ಕರಟಕ ಹೇಳಿದನು – “ಮಂಗಳಕರನೇ, ಈ ವ್ಯಾಪಾರದಿಂದ (ಸಂಬಂಧ ಪಡದ ವ್ಯವಹಾರದಿಂದ) ನಮಗೇನು ? ಏಕೆಂದರೆ ಹೀಗೆ ಹೇಳಲ್ಪಟ್ಟಿದೆ – ಯಾವ ಮನುಷ್ಯನು ತನಗೆ ಸಂಬಂಧಿಸದ ವ್ಯಾಪಾರದಲ್ಲಿ ಮೂಗು ತೂರಿಸುವನೋ, ಆತನು (ಮರದಿಂದ) ಬೆಣೆಯನ್ನು ಕಿತ್ತ ಮಂಗದಂತೆ ಸಾವನ್ನಪ್ಪುತ್ತಾನೆ.

ದಮನಕನು ಅದು ಹೇಗೆಂದು ಕೇಳಲು, ಕರಟಕನು ಬೆಣೆಯನ್ನು ಕಿತ್ತ ಮಂಗನ ಕಥೆಯನ್ನು ಹೇಳಿದನು.

ಮುಂದುವರೆಸುತ್ತಾ ಕರಟಕ – “ಆದ್ದರಿಂದಲೇ ನಾನು ಹೇಳುವುದು – ಸಂಬಂಧಿಸದ ವ್ಯಾಪಾರದಲ್ಲಿ ತಲೆ ಹಾಕಬಾರದೆಂದು. ನಾವು ತಿಂದು ಉಳಿದ ಆಹಾರವು ಇನ್ನೂ ಇದೆಯಲ್ಲವೇ ? ನಮಗೇಕೀ ವ್ಯವಹಾರ ?” ಎಂದನು.

ದಮನಕನು – “ನಿನ್ನ ಯೋಚನೆ ಕೇವಲ ಆಹಾರವನ್ನು ಕುರಿತಷ್ಟೇಯೇನು ? ಬುದ್ಧಿವಂತರು ಮಿತ್ರರಿಗೆ ಉಪಕಾರ ಮಾಡಲು ಮತ್ತು ಶತ್ರುಗಳನ್ನು ನಿಗ್ರಹದಲ್ಲಿಡಲು ರಾಜಾಶ್ರಯವನ್ನು ಬಯಸುತ್ತಾರೆಯೇ ಹೊರತು, ಕೇವಲ ತಮ್ಮ ಹೊಟ್ಟೆಯನ್ನು ತುಂಬಿಸಿಕೊಳ್ಳುವುದಕ್ಕಲ್ಲ. ಯಾರ ಬದುಕಿನಿಂದ ಹಲವರು ಸುಖವಾಗಿ ಬದುಕುತ್ತಾರೋ ಅಂತವನ ಬದುಕು ಸಾರ್ಥಕ. ಕೇವಲ ಹೊಟ್ಟೆಗಾಗಿ ಬದುಕುವುದಾದರೆ, ಪಕ್ಷಿಗಳೂ ಕೂಡ ತಮ್ಮ ಕೊಕ್ಕಿನಿಂದ ಹೊಟ್ಟೆ ತುಂಬಿಸಿಕೊಳ್ಳುದಿಲ್ಲವೇ ? ಅದರಲ್ಲೇನು ವಿಶೇಷವಿಲ್ಲ. ಯಾವನು ಅಲ್ಪಕಾಲವಾದರೂ ಸಹ ವಿಜ್ಞಾನ, ಶೌರ್ಯ, ಐಶ್ವರ್ಯಾದಿ ಗುಣಗಳಿಂದ ಕೂಡಿ ಬದುಕುವನೋ ಅವನು ನಿಜವಾಗಿಯೂ ಬದುಕಿದವನು ಎಂದು ಪ್ರಾಜ್ಞರು ಹೇಳುವರು. ಯಾವ ಮನುಷ್ಯನು ತನ್ನಲ್ಲಿ, ಇತರರಲ್ಲಿ, ಬಂಧುವರ್ಗದಲ್ಲಿ, ದೀನರಲ್ಲಿ, ಸೇವಕವರ್ಗದಲ್ಲಿ ದಯೆಯಿಂದ ನಡೆಯುವುದಿಲ್ಲವೋ, ಆತನು ಬದುಕಿದ ಫಲವಾದರೂ ಏನು ? ಕಾಗೆಯೂ ಕೂಡ ಬಲಿರೂಪದಲ್ಲಿ ಬಂದ ಆಹಾರವನ್ನು ತಿಂದು ಚಿರಕಾಲ ಬದುಕುತ್ತದೆ.

ಸಣ್ಣ ನದಿಯೊಂದು ಅಲ್ಪವೃಷ್ಟಿಯಾದರೂ ಕೂಡ ಬೇಗನೆ ತುಂಬಿಕೊಳ್ಳುವುದು, ಇಲಿಯ ಬೊಗಸೆ ಸಣ್ಣದಿರುವುದು, ಹಾಗೆಯೇ ಉದ್ಯೋಗಶೀಲನಲ್ಲದವನು ಅಲ್ಪದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಾನೆ. ಯಾರು ವಂಶದ ಅಗ್ರಧ್ವಜದಂತೆ ಉನ್ನತಿಯನ್ನು ಪಡೆಯುವುದಿಲ್ಲವೋ, ಆತನ ಬಾಳು ವ್ಯರ್ಥ ಹಾಗೂ ಕೇವಲ ತಾಯಿಯ ಯೌವನವನ್ನು ಹಾಳುಮಾಡಲು ಉಂಟಾದ ಬಾಳಿನಂತೆ. ನಿರಂತರವಾಗಿ ಬದಲಾಗುತ್ತಿರುವ ಸಂಸಾರದಲ್ಲಿ, ಹುಟ್ಟಿದವನು ಸಾಯುತ್ತಾನೆ, ಸತ್ತವನು ಹುಟ್ಟುತ್ತಾನೆ. ಯಾರು ಎಲ್ಲರಿಗಿಂತ ಅಧಿಕ ಸಂಪತ್ತಿನಿಂದ ಬಾಳುವನೋ, ಆತನು ಗುರುತಿಸಲ್ಪಡುತ್ತಾನೆ. ಏಕೆಂದರೆ, ನದಿಯಲ್ಲಿ ಸ್ನಾನಮಾಡಲು ಬಂದ ಜನರು ಜಾರಿಬೀಳುವ ಸಂದರ್ಭದಲ್ಲಿ ಆಧಾರಕ್ಕಾಗಿ ನದೀತೀರದಲ್ಲಿ ಬೆಳೆದ ಹುಲ್ಲನ್ನು ಹಿಡಿದುಕೊಂಡಾಗ, ಆ ಹುಲ್ಲಿನ ಜನ್ಮವು ಸಾರ್ಥಕವಾಗುತ್ತದೆ. ಉನ್ನತವಾದ ಮಟ್ಟದಲ್ಲಿ ನಡೆಯುತ್ತಾ ಜನರ ಕಷ್ಟಗಳನ್ನು ನಿವಾರಿಸುವ ಸಜ್ಜನರು ಲೋಕದಲ್ಲಿ  ನೀರನ್ನು ತುಂಬಿಕೊಂಡಿರುವ ಮೋಡದಂತೆ ವಿರಳವೇ ಸರಿ. ಮಹಾತ್ಮರಿಗೇ ಗುರುವಾಗಬಲ್ಲವರನ್ನು ಹೆರುವ ತಾಯಿಯ ಗರ್ಭವನ್ನು ವಿದ್ವಾಂಸರು ಸದಾ ನೆನೆಸಿಕೊಳ್ಳುವರು.  ಹಾಗೆಯೇ, ಯಾರು ಶಕ್ತನಾಗಿದ್ದೂ, ತನ್ನ ಶಕ್ತಿಯನ್ನು ಪ್ರಕಟಗೊಳಿಸುವುದಿಲ್ಲವೋ, ಆತನು ತಿರಸ್ಕಾರಕ್ಕೊಳಗಾಗುತ್ತಾನೆ. ಕಟ್ಟಿಗೆಯ ಅಂತರ್ಭಾಗದಲ್ಲಿ ಅಗ್ನಿಯಿದ್ದರೂ, ಅದು ಉರಿಯುತ್ತಿಲ್ಲದಿದ್ದಲ್ಲಿ, ಜನರು ಅದನ್ನು ದಾಟಿಕೊಂಡೇ ನಡೆಯುತ್ತಾರೆ.”

ಕರಟಕ ಹೇಳಿದನು – “ನಮಗೆ ಇಲ್ಲಿ ಗೌರವವೇ ಇಲ್ಲ. ಹಾಗಾಗಿ ಇಲ್ಲಿ ನಮ್ಮ ವ್ಯವಹಾರದಿಂದ ಏನು ಪ್ರಯೋಜನ ? ತನಗೆ ಪ್ರಾಧಾನ್ಯವಿಲ್ಲದಿದ್ದಾಗ ಹಾಗೂ ಕೇಳಲ್ಪಡದಿದ್ದಾಗ ಯಾವ ಮೂರ್ಖನು ರಾಜನ ಎದುರಿನಲ್ಲಿ ಮಾತನಾಡುತ್ತಾನೋ, ಆತನು ಅಗೌರವವನ್ನು ಪಡೆಯುವುದಲ್ಲದೇ, ಅಪಹಾಸ್ಯಕ್ಕೆ ಕೂಡ ಒಳಗಾಗುತ್ತಾನೆ. ಎಲ್ಲಿ ಮಾತನಾಡಿದ್ದಕ್ಕೆ ಫಲವಿದೆಯೋ ಅಲ್ಲಿ ಮಾತನಾಡಬೇಕು. ಬಿಳಿ ವಸ್ತ್ರದ ಮೇಲಾದ ಕಲೆಯು ಹೇಗೆ ಚಿರಸ್ಥಾಯಿಯಾಗಿ ಉಳಿಯುತ್ತದೆಯೋ ಹಾಗೆ.”

ದಮನಕ ಹೇಳಿದನು – “ಹಾಗೆ ಹೇಳಬೇಡ, ರಾಜನ ಸೇವೆಯಲ್ಲಿರುವ ಅಪ್ರಧಾನನು ಪ್ರಧಾನನೆನಿಸಿಕೊಳ್ಳುವನು ಮತ್ತು ರಾಜಸೇವಾವೃತ್ತಿಯನ್ನು ಕಳೆದುಕೊಂಡ ಪ್ರಮುಖನೂ ಕೂಡ ಅಪ್ರಧಾನನೆನೆಸಿಕೊಳ್ಳುವನು. ಲತೆಗಳು ಮತ್ತು ಯುವತಿಯರು ಹೇಗೆ ಪಕ್ಕದಲ್ಲಿರುವುದನ್ನು ಆಶ್ರಯಿಸಿ ನಿಲ್ಲುತ್ತಾರೋ, ಹಾಗೆ ರಾಜನು ತನ್ನ ಹತ್ತಿರದಲ್ಲಿರುವ ಕಾರಣದಿಂದ ವಿದ್ಯಾಹೀನನನ್ನು, ನೀಚಕುಲದವನನ್ನು ಹಾಗೂ ಸಂಸ್ಕಾರವಿಲ್ಲದವನನ್ನೂ ಕೂಡ ಆಶ್ರಯಿಸುತ್ತಾನೆ. ರಾಜನಿಗೆ ಯಾವುದರಿಂದ ಕೋಪಬರುವುದು ಹಾಗೂ ಯಾವಾಗ ಆತನು ಪ್ರಸನ್ನಗೊಳ್ಳುವನೆಂದು ಅರಿತ ಸೇವಕರು ರಾಜನಿಂದ ಒಮ್ಮೆ ತಳ್ಳಲ್ಪಟ್ಟರೂ ನಿಧಾನವಾಗಿ ಏಳಿಗೆಯನ್ನು ಹೊಂದುತ್ತಾರೆ. ವಿದ್ಯಾವಂತರಿಗೆ, ಮಹತ್ವಾಕಾಂಕ್ಷಿಗಳಿಗೆ, ಕಲಾವಿದರಿಗೆ, ಪರಾಕ್ರಮಿಗಳಿಗೆ, ಸೇವಾವೃತ್ತಿಪರರಾದವರಿಗೆ ರಾಜನನ್ನು ಬಿಟ್ಟರೆ ಬೇರೆ ಆಶ್ರಯವಿಲ್ಲ. ಯಾರು ಜಾತಿ ಮುಂತಾದ ಕಾರಣಗಳಿಂದ ರಾಜನನ್ನು ಪುರಸ್ಕರಿಸುವುದಿಲ್ಲವೋ ಅವರಿಗೆ ಬದುಕಿರುವವರೆಗೆ ಭಿಕ್ಷಾಟನೆಯೇ ಪ್ರಾಯಶ್ಚಿತ್ತವೆಂದು ಹೇಳಲಾಗಿದೆ. ಯಾರು ರಾಜನು ದುರಾತ್ಮನು ಹಾಗೂ ದುರಾರಾಧ್ಯನೆಂದು ಹೇಳುವರೋ ಅವರು ತಮ್ಮ ಅಲಕ್ಷ್ಯ, ಆಲಸ್ಯ ಮತ್ತು ಜಡಸ್ವಭಾವವನ್ನು ಪ್ರದರ್ಶಿಸುತ್ತಿರುವರಷ್ಟೆ. ಸರ್ಪ, ವ್ಯಾಘ್ರ, ಗಜ, ಸಿಂಹ ಮುಂತಾದ ಕಾಡು ಪ್ರಾಣಿಗಳನ್ನು ಕೂಡ ಉಪಾಯದಿಂದ ವಶಪಡಿಸಿಕೊಳ್ಳಬಹುದು, ಇನ್ನು ಜಾಗರೂಕತೆಯಿಂದಿರುವವರಿಗೆ  ಹಾಗೂ ಬುದ್ಧಿವಂತರಿಗೆ ರಾಜನನ್ನು ವಶಪಡಿಸಿಕೊಳ್ಳುವುದು ಎಷ್ಟರ ಮಾತು ? ರಾಜನನ್ನು ಆಶ್ರಯಿಸಿಯೇ ವಿದ್ವಾಂಸನು ಉತ್ತಮ ಗತಿಯನ್ನು ಪಡೆಯುತ್ತಾನೆ. ಚಂದನವೃಕ್ಷವು ಮಲಯಪರ್ವತದಲ್ಲಲ್ಲದೇ ಬೇರೆ ಕಡೆ ಬೆಳೆಯುವುದೇ ? ಶ್ವೇತಛತ್ರಗಳು, ಸುಂದರವಾದ ಅಶ್ವಗಳು, ಮದ್ದಾನೆಗಳು – ಇವೆಲ್ಲವೂ ಕೂಡ ರಾಜನು ಬಯಸಿದರೆ ದೊರೆಯುತ್ತವೆ.”

ಕರಟಕ ಹೇಳಿದನು – “ಹಾಗಾದರೆ ನೀನು ಏನು ಮಾಡಬೇಕೆಂದು ಯೋಚಿಸಿರುವೆ ? “

ದಮನಕ ಹೇಳಿದನು – “ಇಂದು ನಮ್ಮ ಸ್ವಾಮಿ ಪಿಂಗಲಕ ಹಾಗೂ ಆತನ ಪರಿವಾರವು ಭಯಗೊಂಡಿದ್ದಾರೆ. ಹಾಗಾಗಿ ಆತನ ಬಳಿಗೆ ಹೋಗಿ ಭಯದ ಕಾರಣವನ್ನು ತಿಳಿದು, ಸಂಧಿ (ಮೈತ್ರಿ), ವಿಗ್ರಹ (ಯುದ್ಧ), ಯಾನ (ಆಕ್ರಮಣ), ಆಸನ (ದುರ್ಗದ ಆಶ್ರಯ) ಸಂಶ್ರಯ (ಪ್ರಬಲನಾದ ಮಿತ್ರನ ಆಶ್ರಯ), ದ್ವೈಧೀಭಾವ (ಶತ್ರುಗಳಲ್ಲಿ ಭೇದ) – ಈ ಉಪಾಯಗಳಲ್ಲಿ ಒಂದನ್ನು ಪ್ರಯೋಗಿಸಿ ಕಾರ್ಯ ಸಾಧಿಸಿತ್ತೇನೆ.”

ಕರಟಕ ಹೇಳಿದನು – “ಸ್ವಾಮಿಯು ಭಯಗ್ರಸ್ತನಾಗಿರುವನೆಂದು ನೀನು ಹೇಗೆ ತಿಳಿದೆ ?”

ದಮನಕ ಹೇಳಿದನು – “ಇದರಲ್ಲಿ ತಿಳಿಯುವುದೇನಿದೆ ? ಮಾತಿನಲ್ಲಿ ಹೇಳಿದರೆ ಪಶುಗಳಿಗೂ ಸಹ ತಿಳಿಯುತ್ತದೆ. ರಾಜನು ಹೇಳದಿದ್ದರೂ ಕೂಡ ಆತನ ಇಂಗಿತವನ್ನು ಅರಿತು ಗಜಾಶ್ವಗಳು ಆತನನ್ನು ಹೊತ್ತುಕೊಂಡು ಹೋಗುತ್ತವೆ. ಅದೇ ರೀತಿ ಪಂಡಿತರು ಪರರ ಇಂಗಿತವನ್ನು ಹೇಳದಿದ್ದರೂ ತಿಳಿಯುವರು. ಒಬ್ಬ ಮನುಷ್ಯನಲ್ಲಿ ಆತನ ಕಣ್ಣು, ಮುಖ ಹಾಗೂ ಇತರ ಅವಯವಗಳಲ್ಲಿ ತೋರ್ಪಡುವ ಭಾವವಿಕಾರವನ್ನು ನೋಡಿಯೇ ಆತನ ಮನಸ್ಸಿನ ಇಂಗಿತವನ್ನು ತಿಳಿಯಬಹುದು. ಆದ್ದರಿಂದ ನಾನು ಈಗ ರಾಜನಿಗೆ ಒದಗಿ ಬಂದಿರುವ ಭಯವನ್ನು ನನ್ನ ಬುದ್ಧಿಪ್ರಭಾವದಿಂದ ಹೋಗಲಾಡಿಸಿ, ಆತನನ್ನು ನನ್ನ ವಶಕ್ಕೆ ಮಾಡಿಕೊಂಡು ಕಳೆದುಕೊಂಡಿರುವ ಮಂತ್ರಿಪದವಿಯನ್ನು ಮತ್ತೆ ಪಡೆಯುವೆನು.”

ಕರಟಕ – “ನಿನಗೆ ಸೇವಾಧರ್ಮವೇ ತಿಳಿದಿಲ್ಲ, ಮತ್ತೆ ರಾಜನನ್ನು ಹೇಗೆ ವಶಪಡಿಸಿಕೊಳ್ಳುವೆ ?”

ದಮನಕ – “ಏನು ನನಗೆ ಸೇವಾಧರ್ಮ ತಿಳಿದಿಲ್ಲವೇ ? ಹಿಂದೆ ನಾನು ಬಾಲ್ಯದಲ್ಲಿ ತಂದೆಯೊಂದಿಗೆ ಆಡಿತ್ತಿದ್ದಾಗ, ಆತನ ಬಳಿ ನೀತಿಶಾಸ್ತ್ರವನ್ನು ತಿಳಿದುಕೊಳ್ಳಲು ಅನೇಕ ಜನರು ಬರುತ್ತಿದ್ದರು. ಆಗ ತಂದೆಯವರು ತಿಳಿಸುತ್ತಿದ್ದ ಸೇವಾಧರ್ಮದ ಸಾರವು ನನಗೆ ಇನ್ನೂ ನೆನಪಿದೆ, ಹೇಳುತ್ತೇನೆ ಕೇಳು –

ದಮನಕನಿಂದ ಸೇವಾವೃತ್ತಿಯ ವಿವರಣೆ

ಶೂರರು, ವಿದ್ಯಾವಂತರು ಮತ್ತು ಸೇವಾವೃತ್ತಿಯಲ್ಲಿ ನಿಪುಣರು – ಈ ಮೂವರೂ ಭೂಮಿಯಲ್ಲಿ ಚಿನ್ನದಪುಷ್ಪವನ್ನು ಅರುಳುವಂತೆ ಮಾಡಬಲ್ಲರು, ಅಂದರೆ ಮಹತ್ಸಂಪಾದನೆ ಮಾಡಬಲ್ಲರು. ರಾಜಾಶ್ರಯವನ್ನು ಬಯಸುವ ವಿದ್ವಾಂಸನು, ರಾಜನಿಗೆ ಆಪ್ತನಾದ ಹಾಗೂ ಪ್ರಭುಹಿತನಿರತನಾದ ಸೇವಕನನ್ನು ಆಶ್ರಯಿಸಬೇಕಾಗುತ್ತದೆ. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಉಳುವುದು ಹೇಗೆ ವ್ಯರ್ಥವೋ ಹಾಗೆ ಒಬ್ಬನ ಗುಣಗಳನ್ನು ಅರಿಯಲಾರದವನನ್ನು ಪಂಡಿತನು ಆಶ್ರಯಿಸುವುದಿಲ್ಲ. ಯಾರು ಧನಸಂಪತ್ತು ಇಲ್ಲದವನಾಗಿದ್ದರೂ ಸೇವಾಯೋಗ್ಯವಾದ ಗುಣವುಳ್ಳವನಾಗಿರುತ್ತಾನೋ, ಆತನಲ್ಲಿ ಸೇವಾವೃತ್ತಿಯನ್ನು ಮಾಡಬಹುದು. ಏಕೆಂದರೆ ಸೇವಾಮನೋಭಾವವುಳ್ಳವನು ಕಾಲಾನಂತರದಲ್ಲಿ ಜೀವನ ಪೂರ್ತಿ ಉತ್ತಮ ಫಲಗಳನ್ನು ಪಡೆಯುತ್ತಾನೆ. ಒಂದು ವೇಳೆ ಪಂಡಿತನಿಗೆ ಒಣಗಿದ ಮರದ ಕಾಷ್ಠದಂತೆ ಒಂದುಕಡೆ ಇರುವ ಪರಿಸ್ಥಿತಿ ಒದಗಿದ್ದರೂ, ಹಸಿವಿನಿಂದ ಬಳಲಿದ್ದರೂ, ಆತ್ಮಜ್ಞಾನವಿಹೀನನಾದ ರಾಜನ ಬಳಿ ಸೇವಾವೃತ್ತಿಯನ್ನು ಮಾಡಬಾರದು. ಜಿಪುಣನೂ ಹಾಗೂ ಕಠೋರನುಡಿಯವನೂ ಆದ ರಾಜನನ್ನು ದ್ವೇಷಿಸುವ ಬದಲು ರಾಜನು ಸೇವೆಗೆ ಯೋಗ್ಯನೇ ಅಥವಾ ಅಯೋಗ್ಯನೇ ಎಂದು ತಿಳಿಯದ ಸೇವಕನು ತನ್ನನ್ನು ತಾನೇ ದ್ವೇಷಿಸುವುದುತ್ತಮ.  ಯಾವ ರಾಜನ ಆಶ್ರಯದಲ್ಲಿ ಹಸಿವು ನೀಗುವುದಿಲ್ಲವೋ, ಅಂತವನನ್ನು ಫಲಪುಷ್ಪಗಳುಳ್ಳ ಅರ್ಕವೃಕ್ಷವನ್ನು(ಎಕ್ಕದ ಗಿಡ ಅಥವಾ ಹರಳು ಗಿಡ) ಹೇಗೆ ಉಪೇಕ್ಷಿಸುತ್ತಾರೋ ಹಾಗೆ ತ್ಯಜಿಸಿಬಿಡಬೇಕು. ರಾಜನಿಗೆ ತೋರುವ ಗೌರವಾದಿಗಳನ್ನು ರಾಜಮಾತೆಗೆ, ರಾಣಿಗೆ, ರಾಜಕುಮಾರನಿಗೆ, ಮುಖ್ಯಮಂತ್ರಿಗೆ, ಪುರೋಹಿತನಿಗೆ ಹಾಗೂ ಕೊನೆಗೆ ರಾಜನ ದ್ವಾರಪಾಲಕನಿಗೂ ತೋರಿಸಬೇಕು. ಕೃತ್ಯಾಕೃತ್ಯಗಳ ವಿವೇಕವುಳ್ಳವನೂ ಹಾಗೂ ರಾಜನು ಆದೇಶಿಸಿದಾಗ “ಚಿರಕಾಲ ಬಾಳು” ಎನ್ನುತ್ತಾ ನಿಸ್ಸಂಶಯವಾಗಿ ಕೆಲಸ ಮಾಡುವವನು ರಾಜನಿಗೆ ಪ್ರಿಯನೆನಿಸಿಕೊಳ್ಳುತ್ತಾನೆ. ರಾಜನಿಂದ ದೊರೆತ ಹಣವನ್ನು ಉತ್ತಮರೀತಿಯಲ್ಲಿ ಬಳಕೆ ಮಾಡುತ್ತಾ ಹಾಗೂ ರಾಜನು ಕೊಟ್ಟ ವಸ್ತ್ರವನ್ನು ಆತನ ಎದುರಿನಲ್ಲಿಯೇ ಧರಿಸಿ ನಡೆಯುವನೋ, ಅವನು ರಾಜನಿಗೆ ಪ್ರಿಯನಾಗುತ್ತಾನೆ. ಯಾರು ಅಂತಃಪುರದವರೊಡನೆ ಹಾಗೂ ರಾಣಿಯರೊಂದಿಗೆ ರಹಸ್ಯ ಮಂತ್ರಾಲೋಚನೆಯನ್ನು ಮಾಡುವುದಿಲ್ಲವೋ, ಅಂತವನು ರಾಜನಿಗೆ ಪ್ರಿಯನಾಗುತ್ತಾನೆ.ಯಾರು ದ್ಯೂತವನ್ನು ಯಮದೂತನಂತೆ, ಮದ್ಯವನ್ನು ಹಾಲಾಹಲವಿಷದಂತೆ ಹಾಗೂ ರಾಣಿಯರನ್ನು ಕುರೂಪಿಗಳಂತೆ ನೋಡುವನೋ ಅವನು ರಾಜನಿಗೆ ಪ್ರಿಯವಾಗುತ್ತಾನೆ. ಮಹಾರಾಜನಿಗೆ ತಾನು ಯಾವಾಗಲೂ ಪ್ರಿಯನಾಗಿದ್ದೇನೆಂದು ಅರಿತಿದ್ದರೂ, ಕಷ್ಟದ ಪರಿಸ್ಥಿತಿಗಳಲ್ಲಿ, ಯಾವನು ಮರ್ಯಾದೆಯನ್ನು ಉಲ್ಲಂಘಿಸಿವುದಿಲ್ಲವೋ, ಆತನು ರಾಜನಿಗೆ ಪ್ರಿಯನಾಗಿರುತ್ತಾನೆ. ರಾಜನು ಯಾರನ್ನು ಇಷ್ಟಪಡುತ್ತಾನೋ ಅವರನ್ನು ಇಷ್ಟಪಡುತ್ತಾ, ರಾಜನು ದ್ವೇಷಿಸಿದವರನ್ನು ಯಾರು ದ್ವೇಷಿಸುತ್ತಾನೋ, ಅಂತವನು ರಾಜನಿಗೆ ಪ್ರಿಯನಾಗುತ್ತಾನೆ. ರಾಜನ ಮಾತಿಗೆ ಎದುರಾಡದೆ ಹಾಗು ಆತನ ಎದುರು ಜೋರಾಗಿ ನಗದವನು ರಾಜನಿಗೆ ಪ್ರಿಯನಾಗುತ್ತಾನೆ. ಯಾರು ಯುದ್ಧದ ಸಂದರ್ಭದಲ್ಲಿ ಭಯವಿಲ್ಲದೆ ಯುದ್ಧಭೂಮಿಯನ್ನೇ ತನ್ನ ಮನೆಯಂತೆ ತಿಳಿಯುವನೋ, ಪ್ರವಾಸದ ವೇಳೆಯಲ್ಲಿ ಪರದೇಶವನ್ನೇ ತನ್ನ ಸ್ವದೇಶದಂತೆ ಕಾಣುವನೋ, ಅವನು ರಾಜನಿಗೆ ಪ್ರಿಯನಾಗುತ್ತಾನೆ. ರಾಜನ ಹೆಂಡತಿಯರೊಂದಿಗೆ ಸ್ನೇಹಮಾಡದವನು, ಅವರನ್ನು ನಿಂದಿಸದವನು ಹಾಗೂ ಅವರೊಡನೆ ಜಗಳದಲ್ಲಿ ತೊಡಗದವನು ರಾಜನಿಗೆ ಪ್ರಿಯನಾಗುತ್ತಾನೆ.”

ಕರಟಕ – “ಹಾಗಾದರೆ ನೀನು ರಾಜನಲ್ಲಿಗೆ ಹೋಗಿ ಮೊದಲು ಏನು ಹೇಳಬೇಕೆಂದಿರುವೆಯೋ ಅದನ್ನು ತಿಳಿಸು.”

ದಮನಕ – “ಉತ್ತಮವಾದ ಮಳೆಯಿದ್ದಲ್ಲಿ ಬಿತ್ತ ಬೀಜವು ಬಲಿತು ಮತ್ತೊಂದು ಬೀಜವು ಹುಟ್ಟುವುದಿಲ್ಲವೇ, ಅದೇ ರೀತಿ ಪರಸ್ಪರ ವಾರ್ತಾಲಾಪದ ಸಂದರ್ಭದಲ್ಲಿ ಮಾತುಗಳು ಹೊರಡುತ್ತವೆ. ಅಪಾಯದ ಕಾರಣದಿಂದ ಮುಂದೆ ಬರಬಹುದಾದ ಆಪತ್ತನ್ನು ಅಥವಾ ಉಪಾಯದ ಕಾರಣದಿಂದ ಆಗಬಹುದಾದ ಸಿದ್ಧಿಯನ್ನು ಬುದ್ಧಿವಂತರಾದ ನೀತಿಶಾಸ್ತ್ರಜ್ಞರು ತಮ್ಮ ಮುಂದೆ ನಡೆಯುತ್ತಿದೆಯೋ ಎಂಬಂತೆ ಸ್ಪಷ್ಟವಾಗಿ ವರ್ಣಿಸುತ್ತಾರೆ. ಕೆಲವರಿಗೆ ಗಿಳಿಯಂತೆ ಮಾತು ಬಾಯಿಯಲ್ಲೇ ಇರುತ್ತದೆ, ಕೆಲವರಿಗೆ ಮಾತು ಹೃದಯಲ್ಲಿರುತ್ತದೆ ಆದರೆ ಬಾಯಿಗೆ ಬರುವುದಿಲ್ಲ ಆದರೆ ಮತ್ತೆ ಕೆಲವರಿಗೆ ಹೃದಯದಲ್ಲಿ ಹಾಗೂ ಬಾಯಿಯಲ್ಲೂ ಕೂಡ ಮಧುರವಾದ ಸೂಕ್ತಿಗಳಂತೆ ಮಾತು ಹೊರಡುತ್ತದೆ. ಅನುಚಿತವಾದ ಕಾಲದಲ್ಲಿ ನಾನು ನುಡಿಯುವುದಿಲ್ಲ.ನನ್ನ ತಂದೆಯವರೊಂದಿಗೆ ಬಾಲ್ಯದಲ್ಲಿ ಆಡುವ ಸಂದರ್ಭದಲ್ಲಿ ನೀತಿಯ ಸಾರವನ್ನು ಅವರಿಂದ ಕೇಳಿದ್ದೇನೆ. ಅನುಚಿತವಾದ ಕಾಲದಲ್ಲಿ ಬೃಹಸ್ಪತಿಯೂ ಕೂಡ ನುಡಿದರೂ, ಅವನು ಅತ್ಯಂತ ಅಪಮಾನ ಹಾಗೂ ತಿರಸ್ಕಾರಕ್ಕೆ ಒಳಗಾಗುತ್ತಾನೆ.”

ಕರಟಕ – “ರಾಜನನ್ನು ಒಲಿಸಿಕೊಳ್ಳುವುದು ಪರ್ವತಾರೋಹಣ ಮಾಡಿದಷ್ಟೇ ಕಷ್ಟಕರವಾದದ್ದು. ಏಕೆಂದರೆ, ಪರ್ವತವು ಹೇಗೆ ಕ್ರೂರಮೃಗಗಳಿಂದ ಕೂಡಿ, ಎತ್ತರತಗ್ಗುಗಳಿಂದ ದುರ್ಗಮವಾಗಿ, ಕಲ್ಲುಮುಳ್ಳುಗಳಿಂದ ಕಠಿಣವಾಗಿ ಏರಲು ಅಸಾಧ್ಯವಾಗಿದೆಯೋ, ಅದೇ ರೀತಿ ರಾಜನೂ ಕೂಡ ದುಷ್ಟಜನರೂ, ಉಪಾಯಬಲ್ಲವರೂ ಹಾಗು ಕಪಟಿಗಳಿಂದ ಸುತ್ತುವರಿಯಲ್ಪಟ್ಟಿರುತ್ತಾನೆ. ಹಾಗಾಗಿ ಆತನನ್ನು ತಲುಪುವುದು ಕಷ್ಟಕರವು. ರಾಜರು ಹಾವುಗಳಂತೆ ಭೋಗವಿಲಾಸಿಗಳು, ಕವಚ ಧರಿಸಿರುವವರು, ವಕ್ರಸ್ವಭಾವದವರು, ಕ್ರೂರಿಗಳು, ಅತೀವ ದುಷ್ಟರು ಹಾಗು ಮಂತ್ರಗಳಿಗೆ ವಶವಾಗುವವರು. ಹಾವುಗಳು ಹೇಗೆ ಎರಡು ನಾಲಿಗೆಗಳನ್ನು ಹೊಂದಿರುತ್ತವೆಯೋ, ಕ್ರೂರಕಾರ್ಯಗಳನ್ನು ಮಾಡುತ್ತವೆಯೋ, ಬಿಲವನ್ನನುಸರಿಸಿ ನಡೆಯುತ್ತವೆಯೋ, ದೂರದಿಂದಲೇ ಗ್ರಹಿಸುತ್ತವೆಯೋ ಹಾಗೆ ರಾಜರೂ ಕೂಡ ಒಮ್ಮೊಮ್ಮೆ ಒಂದೊಂದು ರೀತಿ ನುಡಿಯುವ ಎರಡು ನಾಲಿಗೆಯುಳ್ಳವರು, ಕ್ರೂರಕಾರ್ಯಗಳನ್ನು ಮಾಡುವವರು, ಇತರರ ದೋಷಗಳನ್ನು ಅನುಸರಿಸಿ ನಡೆಯುವವರು ಹಾಗೂ ದೂರದರ್ಶಿಯಾಗಿರುತ್ತಾರೆ. ತನಗೆ ಪ್ರಿಯರೇ ಆದರೂ ಸ್ವಲ್ಪ ಅಪಕಾರವನ್ನು ಮಾಡಿದರೂ ರಾಜನು ಅಂತಹ ಪಾಪಿಗಳನ್ನು ಅಗ್ನಿಯಲ್ಲಿ ಪತಂಗಗಳು ಹೇಗೆ ಸುಟ್ಟುಹೋಗುತ್ತವೆಯೋ ಹಾಗೆ ನಾಶಮಾಡಿಬಿಡುತ್ತಾನೆ. ಎಲ್ಲರಿಂದಲೂ ಆರಾಧಿಸಲ್ಪಡುವ ಬ್ರಹ್ಮತೇಜಸ್ಸುಳ್ಳ ರಾಜಪದವಿಯು ದೊರೆಯುವುದು ಕಷ್ಟಕರವು. ಸ್ವಲ್ಪ ಅಪಕಾರವನ್ನು ಮಾಡಿದವನನ್ನೂ ಕೂಡ ಅದು ದಂಡಿಸುತ್ತದೆ. ರಾಜಲಕ್ಷ್ಮೀಯನ್ನು ಪಡೆದುಕೊಳ್ಳುವುದು ಕಷ್ಟ, ಪಡೆದುಕೊಂಡದ್ದನ್ನು ಉಳಿಸಿಕೊಳ್ಳುವುದೂ ಕಷ್ಟ. ನೀರು ಹರಿದುಹೋಗದಂತೆ ಪಾತ್ರೆಯಲ್ಲಿ ರಕ್ಷಿಸುವ ಹಾಗೆ ರಾಜಲಕ್ಷ್ಮೀಯನ್ನು ಜಾಗ್ರತೆಯಿಂದ ಚಿರಕಾಲ ರಕ್ಷಿಸಿಕೊಳ್ಳಬೇಕು.

ದಮನಕ – “ಸತ್ಯ, ಆದರೆ, ಯಾರ ಭಾವ ಹೇಗಿರುತ್ತದೋ, ಅದಕ್ಕೆ ತಕ್ಕಂತೆ ನಡೆದುಕೊಳ್ಳುತ್ತ, ಬುದ್ಧಿವಂತನಾದವನು ಅವರ ಅಂತರಂಗವನ್ನು ಪ್ರವೇಶಿಸಿ ಬೇಗನೆ ಅವರನ್ನು ತನ್ನ ವಶಕ್ಕೆ ತಂದುಕೊಳ್ಳುವನು.ಒಡೆಯನ ಮನಸ್ಸಿಗನುಗುಣವಾಗಿ ನಡೆಯುವುದೇ ಸೇವಕನಿಗೆ ಉತ್ತಮವಾದುದು. ಯಾರು ನಿರಂತರ ಒಡೆಯನನ್ನು ಅನುಸರಿಸುತ್ತಾನೋ, ಅಂತವನು ರಾಕ್ಷಸನನ್ನೂ ಕೂಡ ಪಶಪಡಿಸಿಕೊಳ್ಳಬಲ್ಲನು. ರಾಜನು ಕೋಪದಲ್ಲಿದ್ದಾಗ ಆತನನ್ನು ಹೊಗಳುವುದು, ಆತನು ಇಷ್ಟಪಡುವವರಲ್ಲಿ ಪ್ರೇಮಪೂರ್ವಕ ವ್ಯವಹಾರ, ಆತನ ವಿರೋಧಿಗಳಲ್ಲಿ ವಿರೋಧ, ಆತನ ದಾನದ ಪ್ರಶಂಸೆ – ಇವುಗಳಿಂದ ಮಂತ್ರತಂತ್ರಗಳಿಲ್ಲದೇ ರಾಜನು ವಶವಾಗುವನು.”

ಕರಟಕ – “ಹಾಗಿದ್ದರೆ ನಿನ್ನ ದಾರಿಯು ಶುಭಕರವಾಗಿರಲಿ, ನೀನು ಯೋಚಿಸಿರುವುದನ್ನು ಅನುಷ್ಠಾನಗೊಳಿಸು.”

ದಮನಕನೂ ಆತನಿಗೆ ವಂದಿಸಿ, ಪಿಂಗಲಕನ ಬಳಿಗೆ ಹೊರಟನು.

ಭಯಗ್ರಸ್ಥ ಪಿಂಗಲಕನೊಂದಿಗೆ ದಮನಕನ ಸಂವಾದ

ತನ್ನ ಬಳಿಗೆ ಬರುತ್ತಿರುವ ದಮನಕನನ್ನು ಕಂಡ ಪಿಂಗಲಕನು ದ್ವಾರಪಾಲಕನಿಗೆ ಹೇಳಿದನು – “ಅಡ್ಡ ದಂಡವನ್ನು ಸರಿಸು, ಇವನು ನಮ್ಮ ದೀರ್ಘಕಾಲ ಮಂತ್ರಿಯಾದವನ ಪುತ್ರ ದಮನಕ, ಈತನಿಗೆ ಇಲ್ಲಿಗೆ ನಿರ್ಬಂಧವಿಲ್ಲದ ಪ್ರವೇಶವಿದೆ. ಇವನು ದ್ವಿತೀಯಮಂಡಲದಲ್ಲಿ ಇರಲು ಯೋಗ್ಯನಾದವನು”. ಅದರಂತೆಯೇ ದಮನಕನು ಒಳಗೆ ಪ್ರವೇಶಿಸಿ, ಪಿಂಗಲಕನಿಗೆ ನಮಸ್ಕರಿಸಿ ನಿರ್ದಿಷ್ಟವಾದ ಆಸನದಲ್ಲಿ ಕುಳಿತನು. ಪಿಂಗಲಕನು ವಜ್ರಸದೃಶವಾದ ಉಗುರುಗಳುಳ್ಳ ತನ್ನ ಬಲಗೈಯನ್ನು ಮುಂದೆಮಾಡಿ ಸತ್ಕಾರಪೂರ್ವಕವಾಗಿ ನುಡಿದನು – “ಕುಶಲವೇ ? ತುಂಬಾ ದಿನಗಳ ನಂತರ ಬಂದಿರುವೆ, ಏನು ಸಮಾಚಾರ ? “

ದಮನಕ – “ನಮ್ಮಂತವರಿಂದ ಏನೂ ಪ್ರಯೋಜನವಿಲ್ಲದಿದ್ದರೂ, ಸಮಯೋಚಿತವಾದ ಸ್ವಲ್ಪ ಮಾತನ್ನು ಆಡಬೇಕಿದೆ. ಏಕೆಂದರೆ ಉತ್ತಮ, ಮಧ್ಯಮ, ಅಧಮರೆಲ್ಲರಿಂದ ರಾಜನಿಗೆ ಪ್ರಯೋಜನವಿದೆ. ರಾಜನಿಗೆ ಹಲ್ಲುಗಳ ಮಧ್ಯೆ ಕೊಳೆ ತೆಗೆಯಲು ಅಥವಾ ಕಿವಿಯನ್ನು ತುರಿಸಿಕೊಳ್ಳಲು ಹುಲ್ಲುಕಡ್ಡಿಯ ಅವಶ್ಯಕತೆಯಿರುವಾಗ ಹಸ್ತಪಾದಗಳುಳ್ಳ ಮನುಷ್ಯನಿಂದ ಉಪಯೋಗವಿದೆ ಎಂದು ಪ್ರತ್ಯೇಕ ಹೇಳಬೇಕೇನು ? ನಾವಾದರೋ ರಾಜನಿಗೆ ವಂಶಪರಂಪರೆಯಿಂದ ಸೇವಕರಾಗಿದ್ದೇವೆ, ಕಷ್ಟಸಮಯದಲ್ಲೂ ಆತನ ಬೆನ್ನಹಿಂದೆ ಇರುವವರು. ಹೀಗಿದ್ದರೂ ನಮ್ಮ ಅಧಿಕಾರ ನಮಗೆ ದೊರೆಯದಿರುವುದು ಸ್ವಾಮಿಗಳಾದ ನಿಮಗೆ ಯೋಗ್ಯವಾದುದಲ್ಲ. ಸೇವಕರನ್ನು ಹಾಗೂ ಆಭರಣಗಳನ್ನು ಸರಿಯಾದ ಸ್ಥಾನದಲ್ಲೇ ನಿಯೋಜಿಸಬೇಕು, ನಾನು ರಾಜನೆಂದು ತಲೆಯಲ್ಲಿರಬೇಕಾದ ಚೂಡಾಮಣಿಯನ್ನು ಕಾಲಿನಲ್ಲಿ ಧರಿಸಲಾಗುತ್ತದೆಯೇ ? ಗುಣಗಳನ್ನು ಅರಿಯಲಾರದ ರಾಜನು ಸಿರಿವಂತನಾದರೂ, ಕುಲೀನನಾದರೂ, ಪರಂಪರೆಯಿಂದ ಬಂದವನಾದರೂ, ಸೇವಕರು ಆತನನ್ನು ಅನುಸರಿಸುವುದಿಲ್ಲ. ಭೃತ್ಯರು ರಾಜನನ್ನು ಮೂರು ಕಾರಣಗಳಿಂದ ತ್ಯಜಿಸುತ್ತಾರೆ – ಸಮಾನರಲ್ಲದ ಎಲ್ಲರನ್ನೂ ಸಮಾನರಾಗಿ ಪರಿಗಣಿಸುವುದು, ಸಮಾನರನ್ನು ಸತ್ಕರಿಸುವಾಗ ಒಬ್ಬನನ್ನು ಸತ್ಕರಿಸದೇ ಇರುವುದು ಹಾಗೂ ಸರಿಯಾದ ಸ್ಥಾನದಲ್ಲಿ ನಿಯೋಜಿಸಿಕೊಳ್ಳದಿರುವುದು.ಯಾವ ರಾಜನು ಅವಿವೇಕತನದಿಂದ ಉತ್ತಮ ಪದವಿಯ ಯೋಗ್ಯತೆಯುಳ್ಳ ಭೃತ್ಯನನ್ನು ನೀಚ ಅಥವಾ ಅಧಮ ಸ್ಥಾನದಲ್ಲಿರುಸುತ್ತಾನೋ, ಅಂತವನ ಬಳಿ ಸೇವಕನು ನಿಲ್ಲುವುದಿಲ್ಲ. ಅದು ರಾಜನ ದೋಷವೇ ಹೊರತು ಸೇವಕನದ್ದಲ್ಲ. ಸುವರ್ಣಾಭರಣಗಳ ಮಧ್ಯದಲ್ಲಿರಬೇಕಾದ ಮಣಿಯನ್ನು ಗಾಜಿನ ಆಭರಣಗಳ ಮಧ್ಯೆ  ಪೋಣಿಸಿದರೆ, ಆ ಮಣಿಗೆ ದುಃಖವಾಗುವುದಿಲ್ಲ ಅಥವಾ ಅದು ಶೋಭಿಸದೆ ಇರುವುದಿಲ್ಲ. ಅದಕ್ಕೆ ಹೊರತಾಗಿ ಹಾಗೆ ಯೋಜಿಸಿದವನು ನಿಂದೆಗೆ ಪಾತ್ರನಾಗುತ್ತಾನೆ.”

“‘ಚಿರಕಾಲಾನಂತರ ದರ್ಶನ’ ಎಂದು ತಾವು ಕೇಳಿದಿರಿ, ಅದರ ಬಗ್ಗೆ ಹೇಳುತ್ತೇನೆ ಕೇಳಿ. ಎಲ್ಲಿ ಬಲ ಹಾಗೂ ಎಡಗೈ ಮಧ್ಯೆ ವ್ಯತ್ಯಾಸವಿಲ್ಲವೋ, ಅಂತಹ ಪ್ರದೇಶದಲ್ಲಿ ಗತಿಯಿರುವ ಯಾವ ಬುದ್ಧಿವಂತನಾದರೂ ಇರುತ್ತಾನೆಯೇ ? ಬುದ್ಧಿಭ್ರಮಣೆಯಾಗಿರುವ ಯಾವ ರಾಜನು ಗಾಜಿನಲ್ಲಿ ಮತ್ತು ಮಣಿಯಲ್ಲಿ ವ್ಯತ್ಯಾಸ ತಿಳಿಯಲಾರನೋ, ಅಂತವನ ಬಳಿ ಯಾವ ಸೇವಕನೂ ಕೂಡ ಹೆಸರು ಮಾತ್ರಕ್ಕೂ ಇರಲಾರ.  ಎಲ್ಲಿ ರತ್ನ ಪರೀಕ್ಷಕರು ಇಲ್ಲವೋ, ಆ ದೇಶದಲ್ಲಿ ಸಮುದ್ರದಲ್ಲಿ ಸಿಕ್ಕಿದ ಉತ್ತಮ ರತ್ನಗಳಿಗೆ ಬೆಲೆಯಿಲ್ಲ. ಗೊಲ್ಲರ ದೇಶದಲ್ಲಿ ಚಂದ್ರಕಾಂತ ಮಣಿಯನ್ನು ಕೂಡ ಗೋಪಾಲಕರು ಮೂರು ಕಾಸಿಗೆ ಮಾರುವರು. ಎಲ್ಲಿ ಲೋಹಿತಮಣಿಗೂ ಪದ್ಮರಾಗಮಣಿಗೂ ಅಂತರವಿಲ್ಲವೋ, ಅಂತಹ ಕಡೆ ರತ್ನವಿಕ್ರಯವನ್ನು ಮಾಡುತ್ತಾರೇನು ? ಎಲ್ಲಿ ಸ್ವಾಮಿಯು ಎಲ್ಲಾ ಸೇವಕರೂ ಸಮಾನರೆಂದು ವ್ಯತ್ಯಾಸವಿಲ್ಲದೆ ನಡೆಯುವನೋ, ಅಲ್ಲಿ ಉದ್ಯಮದಲ್ಲಿ ಸಾಮರ್ಥ್ಯವಿರುವವರ ಉತ್ಸಾಹವು ಕ್ಷೀಣಿಸುತ್ತದೆ. ರಾಜನಿಲ್ಲದೆ ಸೇವಕರಿಲ್ಲ ಹಾಗೂ ಸೇವಕರಿಲ್ಲದೆ ರಾಜನಿಲ್ಲ. ಅವರ ವ್ಯವಹಾರವು ಪರಸ್ಪರ ಅವಲಂಭಿತವಾಗಿರುತ್ತದೆ. ಚಕ್ರದಲ್ಲಿ ಹೇಗೆ ಕಡ್ಡಿಗಳೂ ಹಾಗು ನಾಭಿಯು (ಮಧ್ಯಬಿಂದು ಪ್ರದೇಶ) ಒಂದಕ್ಕೊಂದು ಆಧರಸಿ ನಿಂತಿವೆಯೋ, ಹಾಗೆ ಸೇವಕರೂ ಮತ್ತು ರಾಜನು ವೃತ್ತಿ ಚಕ್ರದಲ್ಲಿ ಪರಸ್ಪವ ಅವಲಂಭಿಗಳಾಗಿದ್ದಾರೆ. ಶಿರಸ್ಸಿನಲ್ಲಿ ಧರಿಸಿರುವ ಕೇಶರಾಶಿಯನ್ನು ಆರೈಕೆಯಿಂದ ನೋಡಿಕೊಂಡರೂ ಉದುರಿಹೋಗುತ್ತವೆ, ಇನ್ನು ಸೇವಕರ ಮಾತೇನು ? ರಾಜನು ಸಂತೋಷಗೊಂಡಲ್ಲಿ ಸೇವಕನಿಗೆ ಹಣವನ್ನು ಮಾತ್ರ ನೀಡುತ್ತಾನೆ. ಆದರೆ ಸಂಮಾನಮಾತ್ರದಿಂದ ಸೇವಕನು ರಾಜನಿಗೆ ತನ್ನ ಪ್ರಾಣವನ್ನಾದರೂ ಕೊಟ್ಟು ಉಪಕಾರ ಮಾಡುತ್ತಾನೆ. ಇದನ್ನು ತಿಳಿದು ರಾಜನು ಕಾರ್ಯಕುಶಲರೂ, ಉತ್ತಮಕುಲಜಾತರೂ, ಶೌರ್ಯಸಂಯುಕ್ತರೂ, ಶಕ್ತರೂ, ಭಕ್ತರೂ, ವಂಶಪರಂಪರೆಯಲ್ಲಿ ಬಂದವರೂ ಆದ ಸೇವಕರನ್ನು ಯೋಗ್ಯವಾಗಿ ನಡೆಸಿಕೊಳ್ಳಬೇಕು. ಯಾರು ಕಷ್ಟಸಾಧ್ಯವಾದ ಹಾಗೂ ರಾಜನಿಗೆ ಹಿತವಾದ ಕೆಲಸವನ್ನು ಮಾಡಿ ಲಜ್ಜೆಯಿಂದ ಅದನ್ನು ಹೇಳಿಕೊಳ್ಳಲಾರನೋ, ಅಂತವನಿಂದಲೇ ರಾಜನು ಸಹಾಯ ಪಡೆಯುತ್ತಾನೆ. ಯಾರಿಗೆ ನಿಶ್ಶಂಕೆಯಿಂದ ಕೆಲಸದ ಜವಾಬ್ದಾರಿಯನ್ನು ಕೊಡಲು ಸಾಧ್ಯವೋ, ಅವನೇ ನಿಜವಾದ ಸೇವಕ, ಅಂತವನು ಮತ್ತೊಬ್ಬ ಹೆಂಡತಿ ಇದ್ದಹಾಗೆ. ಯಾರು ಕರೆಯದಿದ್ದರೂ ದ್ವಾರದಲ್ಲಿ ಸದಾ ನಿಂತಿದ್ದು, ಕೇಳಲ್ಪಟ್ಟಾಗ ಮಾತ್ರ ಮಿತವಾದ ಸತ್ಯವನ್ನು ನುಡಿಯುತ್ತಾನೋ, ಅವನೇ ಮಹಾರಜನ ಭೃತ್ಯನಾಗಲು ಅರ್ಹನು. ರಾಜನು ಆದೇಶಿಸದಿದ್ದರೂ ಕೂಡ ಆತನಿಗೆ ಒದಗಿರುವ ಹಾನಿಯನ್ನು ನೋಡಿ ಅದನ್ನು ನೀಗಿಸಲು ಪ್ರಯತ್ನಿಸುವನೋ, ಅವನೇ ಮಹಾರಾಜನ ಭೃತ್ಯನಾಗಲು ಅರ್ಹನು. ಯಾವನು ರಾಜನು ಹೊಡೆದರೂ, ಬೈದರೂ, ದಂಡಿಸಿದರೂ ರಾಜನ ಬಗ್ಗೆ ಕೆಟ್ಟದ್ದನ್ನು ಚಿಂತಿಸುವುದಿಲ್ಲವೋ, ಅವನು ಮಹಾರಾಜನ ಭೃತ್ಯನಾಗಲು ಅರ್ಹನು. ಯಾರು ಸಂಮಾನಿಸಿದಾಗ ಹಿಗ್ಗದೆ, ಅಪಮಾನಿಸಿದಾಗ ಕುಗ್ಗದೆ ತನ್ನ ಮುಖವಿಕಾರಗಳನ್ನು ತೋರ್ಪಡಿಸುವುದಿಲ್ಲವೋ, ಅವನು ಮಹಾರಾಜನ ಭೃತ್ಯನಾಗಲು ಅರ್ಹನು. ಯಾರು ಹಸಿವು, ನಿದ್ರೆ, ಶೀತೋಷ್ಣಗಳನ್ನು ಸಹಿಸಿಕೊಳ್ಳಬಲ್ಲನೋ ಅವನು ಮಹರಾಜನ ಭೃತ್ಯನಾಗಲು ಅರ್ಹನು. ಯಾರು ಯುದ್ಧ ಸನ್ನಿಹಿತವಾಗಿದೆಯೆಂದು ಕೇಳಿದರೂ ಪ್ರಸನ್ನಮುಖನಾಗೇ ಇರುವನೋ, ಅವನು ಮಹಾರಾಜನ ಭೃತ್ಯನಾಗಲು ಅರ್ಹನು. ಯಾರನ್ನು ಅಧಿಕಾರದಲ್ಲಿ ನಿಯೋಜಿಸಿದಾಗ ಶುಕ್ಲಪಕ್ಷದ ಚಂದ್ರನಂತೆ ರಾಜ್ಯದ ಸೀಮೆಯು ಬೆಳೆಯುವುದೋ, ಅವನು ಮಹಾರಾಜನ ಭೃತ್ಯನಾಗಲು ಅರ್ಹನು. ಯಾರ ಆಡಳಿತದಲ್ಲಿ ಬೆಂಕಿಯಲ್ಲಿರುವ ಚರ್ಮದಂತೆ ರಾಜ್ಯದ ಸೀಮೆಯು ಕರಗುತ್ತದೆಯೋ, ಅಂತವನನ್ನು ತ್ಯಜಿಸಬೇಕು.”

“ಮತ್ತೆ, ಇವನೊಬ್ಬ ನರಿಯೆಂದು ನನ್ನನ್ನು ತಾವು ಉಪೇಕ್ಷಿಸಿದರೆ, ಅದು ಯುಕ್ತವಲ್ಲ. ಏಕೆಂದರೆ ರೇಶ್ಮೆಯು ಹುಳುವಿನಿಂದ, ಚಿನ್ನವು ಕಲ್ಲಿನಿಂದ,ಗರಿಕೆಯು ಗೋವಿನ ರೋಮಗಳಿಂದ, ಕಮಲವು ಕೆಸರಿನಿಂದ, ಚಂದ್ರನು ಸಮುದ್ರದಿಂದ, ನೀಲೋತ್ವಲವು ಸೆಗಣಿಯಿಂದ, ಅಗ್ನಿಯು ಕಟ್ಟಿಗೆಯಿಂದ, ಮಣಿಯು ಹಾವಿನ ಹೆಡೆಯಿಂದ, ಗೋರೋಚನವು ಗೋಪಿತ್ತದಿಂದ ದೊರೆಯುತ್ತದೆ. ಹೀಗೆ ಗುಣವಂತರು ತಮ್ಮ ಗುಣದಿಂದ ಪ್ರಕಶಿಸುತ್ತಾರೆಯೇ ಹೊರತು, ತಮ್ಮ ಜನ್ಮದಿಂದಲ್ಲ. ಮನೆಯಲ್ಲೇ ಹುಟ್ಟಿದ ತೊಂದರೆಕೊಡುವ ಇಲಿಯನ್ನು ಕೊಲ್ಲಬೇಕು. ಅದಕ್ಕಾಗಿ ಹೊರಗಿನಿಂದಾರೂ ಬೆಕ್ಕನ್ನು ತಂದು ಆಹಾರವನ್ನು ಕೊಟ್ಟು ಸಾಕಬೇಕಾಗುತ್ತದೆ. ಮರಕೆಲಸಕ್ಕೆ ಒದಗದ ಎಷ್ಟೇ ಮರದ ಕಾಷ್ಠಗಳನ್ನು ಶೇಖರಿಸಿದರೂ ಹೇಗೆ ಉಪಯೋಗವಿಲ್ಲವೋ ಹಾಗೆ ಮೂರ್ಖಜನರನ್ನು ಕಲೆಹಾಕಿದರೆ ಪ್ರಯೋಜನವಿಲ್ಲ. ಅಸಮರ್ಥನಾದ ಭಕ್ತನಿಂದ ಹಾಗೂ ಅಪಕಾರಿಯಾದ ಶಕ್ತನಿಂದ ಏನು ಪ್ರಯೋಜನ ? ಭಕ್ತನೂ ಹಾಗೂ ಶಕ್ತನೂ ಆಗಿರುವ ನನ್ನನ್ನು ತಾವು ಉಪೇಕ್ಷಿಸಬಾರದು.”

ಪಿಂಗಲಕ – “ಹಾಗೆಯೇ ಆಗಲಿ, ನೀನು ಸಮರ್ಥನಾಗಿರಲಿ ಅಥವ ಅಸಮರ್ಥನಾಗಿರಲಿ. ಬಹಳಕಾಲದಿಂದ ನಮ್ಮಲ್ಲಿ ಮಂತ್ರಿಯಾದವನ ಮಗನಾಗಿದ್ದೀಯೆ. ಹಾಗಾಗಿ ಏನು ಹೇಳಬೇಕೋ ಅದನ್ನು ನಿಸ್ಸಂಕೋಚವಾಗಿ ಹೇಳು.”

ದಮನಕ – ಒಂದು ನಿವೇದನೆಯಿದೆ. ರಾಜನ ಅಲ್ಪವಾದ ಕಾರ್ಯವೇ ಆಗಿದ್ದರೂ ಅದನ್ನು ಸಭಾಮಧ್ಯದಲ್ಲಿ ನುಡಿಯಬಾರದೆಂದು ಬೃಹಸ್ಪತಿಯೇ ಹೇಳಿದ್ದಾನೆ. ಆದ್ದರಿಂದ ಏಕಾಂತದಲ್ಲಿ ಹೇಳಬೇಕು. ಆರು ಕಿವಿಗಳಿಗೆ ಬಿದ್ದ ರಹಸ್ಯವು ಭೇದವಾಗುತ್ತದೆ, ನಾಲ್ಕು ಕಿವಿಗಳಿಗೆ ಸೀಮಿತವಾದದ್ದು ರಹಸ್ಯವಾಗಿ ಉಳಿಯುತ್ತದೆ. ಆದ್ದರಿಂದ ಬುದ್ಧಿವಂತನು ಪ್ರಯತ್ನಪೂರ್ವಕವಾಗಿ ಆರು ಕಿವಿಗಳುಳ್ಳ ಮಂತ್ರಾಲೋಚನೆಯನ್ನು ಮಾಡುವುದಿಲ್ಲ.”

ಆಗ ಪಿಂಗಲಕನ ಅಭಿಪ್ರಾಯವನ್ನರಿತ ಹುಲಿ, ಚಿರತೆ, ತೋಳ ಮುಂತಾದ ಪ್ರಾಣಿಗಳು ತಕ್ಷಣವೇ ಸಭೆಯಿಂದ ದೂರ ಹೋದರು. ಆಗ ದಮನಕ ಹೇಳಿದನು – “ನೀರುಕುಡಿಯಲು ಹೋದ ಸ್ವಾಮಿಯು ಕುಡಿಯದೇ ಬಂದುಬಿಟ್ಟಿರಿ ಏತಕ್ಕೆ ?”.

ಪಿಂಗಲಕನು ತನ್ನ ಇಂಗಿತವನ್ನು ಪ್ರಕಟಪಡಿಸದೆ ಏನಿಲ್ಲವಲ್ಲ ಎಂದು ನಕ್ಕು ಹೇಳಿದನು.

ದಮನಕ – “ದೇವ, ಒಂದುವೇಳೆ ಹೇಳಬಾರದ ವಿಷಯವಿದ್ದರೆ ಹಾಗೆಯೇ ಇರಲಿ. ಕೆಲವು ವಿಷಯಗಳನ್ನು ಹೆಂಡತಿಯಿಂದಲೂ, ಕೆಲವನ್ನು ಸ್ವಜನರಿಂದಲೂ, ಕೆಲವನ್ನು ಸ್ನೇಹಿತರಿಂದಲೂ, ಕೆಲವನ್ನು ಮಕ್ಕಳಿಂದಲೂ ಗೋಪ್ಯವಾಗಿಡಬೇಕು. ಯಾವುದು ಹೇಳಬಹುದೇ ಅಥವಾ ಇಲ್ಲವೇ ಎಂಬುದನ್ನು ಪ್ರಾಜ್ಞನಾದವನು ಕಾರ್ಯದ ಮಹತ್ವವನ್ನು ನೋಡಿಕೊಂಡು ನಿರ್ಧರಿಸಬೇಕು.”

ಅದನ್ನು ಕೇಳಿ ಪಿಂಗಲಕನು ಹೀಗೆ ಯೋಚಿಸಿದನು –  “ಇವನು ಯೋಗ್ಯನಂತೆ ಕಾಣುವನು, ಹಾಗಾಗಿ ಇವನಲ್ಲಿ ನನ್ನ ಅಭಿಪ್ರಾಯವನ್ನು ತಿಳಿಸುವೆನು. ಒಳ್ಳೆಯ ಮಿತ್ರನಲ್ಲಿ, ಗುಣವಂತನಾದ ಸೇವಕನಲ್ಲಿ, ಅನುಕೂಲವಾಗಿರುವ ಪತ್ನಿಯಲ್ಲಿ, ಹೃದಯವಂತನಾದ ಒಡೆಯನಲ್ಲಿ ತನ್ನ ದುಃಖವನ್ನು ಹೇಳಿಕೊಂಡರೆ ಸುಖಿಯಾಗಬಹುದು.”  ಆನಂತರ ದಮನಕನಿಗೆ ಹೇಳಿದನು – ಎಲೈ ದಮನಕ, ದೂರದಿಂದ ಬರುತ್ತಿರುವ ಮಹತ್ತರವಾದ ಶಬ್ದವು ಕೇಳಿಸುತ್ತಿದೆಯೇ ?” ದಮನಕನು ಹೌದು ಎನ್ನಲು ಪಿಂಗಲಕನು ಹೇಳಿದನು – “ಶುಭಕರನೇ, ನಾನು ಈ ಕಾಡನ್ನು ಬಿಟ್ಟು ಹೊರಟುಹೋಗಬೇಕೆಂದಿರುವೆನು.” ದಮನಕನು ಏಕೆಂದು ಕೇಳಲು ಪಿಂಗಲಕನು – “ಏಕೆಂದರೆ ಈ ಕಾಡಿಗೆ ಅಪೂರ್ವವಾದ ಪ್ರಾಣಿಯೊಂದು ಬಂದಿದೆ, ಅದರದೇ ಆ ಮಾಹಾಶಬ್ದ. ಶಬ್ದಕ್ಕನುಗುಣವಾಗಿ ಅದರ ರೂಪವಿರಬಹುದು ಹಾಗೂ ರೂಪಕ್ಕನುಗುಣವಾಗಿ ಪರಾಕ್ರಮವಿರಬಹುದು.”

ದಮನಕ – “ಪ್ರವಾಹಕ್ಕೆ ಸೇತುವೆ ಒಡೆಯುವಂತೆ, ರಹಸ್ಯವು ಬಹಿರಂಗವಾಗುವಂತೆ, ಚಾಡಿಮಾತಿನಿಂದ ಸ್ನೇಹವು ಒಡೆಯುವಂತೆ ಕೇವಲ ಶಬ್ದಗಳಿಂದಲೇ ಹೇಡಿಯು ಹಾಳಾಗುತ್ತಾನೆ. ಕೇವಲ ಶಬ್ದವನ್ನು ಕೇಳಿ ಭಯಗೊಳ್ಳುವುದು ಯುಕ್ತವಲ್ಲ. ತಮ್ಮ ಪೂರ್ವಜರು ಸಂಪಾದಿಸಿರುವ, ಕಾಲಕ್ರಮವಾಗಿ ಬಂದಿರುವ ಈ ಕಾಡನ್ನು ಹೀಗೆ ಬಿಟ್ಟು ಹೋಗುವುದು ಸರಿಯಲ್ಲ. ಭೇರಿ, ವೇಣು, ವೀಣೆ, ಮೃದಂಗ, ತಾಳ, ನಗಾರಿ, ಶಂಖ, ಕಹಳೆ – ಇವುಗಳಿಂದ ಅನೇಕ ರೀತಿಯ ಶಬ್ದಗಳು ಹೊರಡುತ್ತವೆ, ಆದ್ದರಿಂದ ಕೇವಲ ಶಬ್ದಮಾತ್ರದಿಂದ ಹೆದರಬಾರದು. ಅತಿ ಭಯಂಕರವಾದ, ಕ್ರೂರಿಯಾದ ಶತ್ರುವು ಇದ್ದಾಗಲೂ, ಯಾವ ರಾಜನು ಧೈರ್ಯದಿಂದಿರುವನೋ ಅಂತವನು ಸೋಲನ್ನು ಹೊಂದುವುದಿಲ್ಲ. ಬ್ರಹ್ಮನೇ ಬಂದು ಭಯವನ್ನುಂಟುಮಾಡಿದರೂ ಧೀರನಾದವನ ಧೈರ್ಯವು ಕ್ಷೀಣಿಸುವುದಿಲ್ಲ. ಸರೋವರಗಳೆಲ್ಲವೂ ಒಣಗುವಷ್ಟು ಬಿಸಿಲಿನಲ್ಲೂ ಸಮುದ್ರವು ಉಕ್ಕುತ್ತಿರುತ್ತದೆ. ಯಾವನು ವಿಪತ್ತಿನಲ್ಲಿ ವಿಷಾದಿಸುವುದಿಲ್ಲವೋ, ಸಂಪತ್ತಿನಲ್ಲಿ ಸಂತೋಷಪಡುವುದಿಲ್ಲವೋ, ರಣರಂಗದಲ್ಲಿ ಕಂಗಾಲಾಗುವುದಿಲ್ಲವೋ, ಅಂತಹ ತ್ರಿಭುವನತಿಲಕಸದೃಶ ಮಗನನ್ನು ಹೆರುವ ತಾಯಿಯು ಅತಿವಿರಳ. ಶಕ್ತಿಯ ಕುಂದುವಿಕೆಯಿಂದ ನಮ್ರನಾದವನ, ಅಂತಃಸತ್ವವಿಲ್ಲದೆ ಹಗುರನಾಗಿರುವವನ, ಹಾಗೂ ಮಾನಹೀನನಾಗಿರುವ ಮನುಷ್ಯನ ಗತಿಯು ಹುಲ್ಲುಕಡ್ಡಿಗೆ ಸಮ. ತನ್ನ ಶಕ್ತಿಯಿಂದ ದೃಢತೆಯನ್ನು ಪಡೆಯದೆ, ಅನ್ಯರ ಶಕ್ತಿಯ ಸಹಾಯದಿಂದ ದೃಢತೆಯನ್ನು ಪಡೆದರೆ ಅದರಿಂದೇನೂ ಪ್ರಯೋಜನವಿಲ್ಲ, ಅದು ಕೇವಲ ಲಾಕ್ಷಾಭರಣದಂತೆ, ಧರಿಸಲು ಬರುವುದಿಲ್ಲ. ಆದ್ದರಿಂದ ಇದೆಲ್ಲವನ್ನೂ ತಿಳಿದು ಪ್ರಭುಗಳು ಧೈರ್ಯವನ್ನು ಹೊಂದಬೇಕು, ಕೇವಲ ಶಬ್ದಕ್ಕೆ ಹೆದರಬಾರದು.”

ಇದರಲ್ಲಿ ಮಾಂಸವು ತುಂಬಿದೆಯೆಂದು ತಿಳಿದಿದ್ದೆ, ಆದರೆ ಪ್ರವೇಶಿಸಿ ನೋಡಿದಾಗ ಕೇವಲ ಚರ್ಮ ಹಾಗೂ ಮರದ ಕಡ್ಡಿಗಳಿದ್ದವು” ಎಂದು ದಮನಕನು ದೃಷ್ಟಾಂತವೊಂದನ್ನು ಹೇಳಲು, ಪಿಂಗಳಕನು ಅದೇನೆಂದು ಕೇಳಿದನು. ಆಗ ದಮನಕನು ಗೋಮಾಯು ದುಂದುಭಿ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿ, “ಆದ್ದರಿಂದಲೇ ಕೇವಲ ಶಬ್ದಕ್ಕೆ ಹೆದರಬಾರದೆಂದು ನಾನು ಹೇಳುವುದು” ಎಂದನು.

ಪಿಂಗಲಕ – ನೋಡು, ನನ್ನ ಪರಿವಾರದವರೆಲ್ಲರೂ ಭಯವ್ಯಾಕುಲರಾಗಿ ಓಡಿಹೋಗಲು ಯೋಚಿಸುತ್ತಿರುವರು, ಹೀಗಿದ್ದಲ್ಲಿ ನಾನು ಹೇಗೆ ಧೈರ್ಯವನ್ನು ತಾಳಲಿ ?

ದಮನಕ – ಸ್ವಾಮಿ, ಅದು ಅವರ ತಪ್ಪಲ್ಲ ಏಕೆಂದರೆ ಭೃತ್ಯರೆಲ್ಲರೂ ಪ್ರಭುವನ್ನೇ ಅನುಸರಿಸುತ್ತಾರೆ. ಅಶ್ವ, ಶಸ್ತ್ರ, ಶಾಸ್ತ್ರ, ವೀಣಾ, ವಾಣಿ, ನರ, ನಾರೀ – ಇವರೆಲ್ಲರೂ ತಮ್ಮ ಒಡೆಯನ ಗುಣಕ್ಕನುಗುಣವಾಗಿ ಯೋಗ್ಯರೋ ಅಥವಾ ಅಯೋಗ್ಯರೋ ಆಗುತ್ತಾರೆ. ಆದ್ದರಿಂದ ನೀನು ಇಲ್ಲಿಯೇ ಧೈರ್ಯವಹಿಸಿ ನಿಲ್ಲು, ನಾನು ಆ ಶಬ್ದದ ಕಾರಣವನ್ನು ತಿಳಿದು ಬರುವೆನು. ನಂತರ ನಿನಗೆ ತೋಚಿದ ಹಾಗೆ ಮಾಡಬಹುದು.”

ಪಿಂಗಲಕ – “ನಿನಗೆ ಅಲ್ಲಿಗೆ ಹೋಗಲು ಉತ್ಸಾಹವಿದೆಯೇನು ?”

ದಮನಕ – ಸ್ವಾಮಿಯ ಆದೇಶವಾದಮೇಲೆ, ಒಳ್ಳೆಯ ಸೇವಕನಿಗೆ ಇದು ಮಾಡತಕ್ಕದ್ದು, ಇದು ಮಾಡತಕ್ಕದ್ದಲ್ಲ ಎಂದೇನಾದರು ಇದೆಯೇ ? ಸ್ವಾಮಿಯ ಆದೇಶವಾದಮೇಲೆ ಸದ್ಭೃತ್ಯನಿಗೆ ಭಯವುಂಟೇನು ? ಆತನು ಹಾವಿನ ಬಾಯನ್ನಾದರು ಪ್ರವೇಶಿಸುವನು ಅಥವ ದುಸ್ತರವಾದ ಸಮುದ್ರಕ್ಕಾದರು ಇಳಿಯುವನು.

ಪಿಂಗಲಕನು ನಿನ್ನ ದಾರಿಯು ಮಂಗಳಕರವಾಗಿರಲಿ ಎಂದು ಹರಸಲು, ದಮನಕನು ಅವನಿಗೆ ನಮಸ್ಕರಿಸಿ ಸಂಜೀವಕನು ಮಾಡಿದ ಶಬ್ದವನ್ನು ಅನುಸರಿಸುತ್ತಾ ಹೊರಟನು.

ಮಂತ್ರಿಪದವಿಯನ್ನು ಪಡೆಯುವುದರ ಬಗ್ಗೆ ಪಿಂಗಳಕನೊಂದಿಗೆ ದಮನಕನ ಒಪ್ಪಂದ

ದಮನಕನು ಹೊರಟ ಮೇಲೆ ಭಯದಿಂದ ವ್ಯಾಕುಲಗೊಂಡ ಪಿಂಗಲಕನು ಹೀಗೆ ಚಿಂತಿಸಿದನು – ‘ಅಯ್ಯೋ, ದಮನಕನ ಮೇಲೆ ವಿಶ್ವಾಸವಿರಿಸಿ ಆತನಲ್ಲಿ ನನ್ನ ಆತ್ಮಾಭಿಪ್ರಾಯವನ್ನು ಹೇಳಿಕೊಂಡದ್ದು ಸರಿಯಲ್ಲವೆನಿಸುತ್ತದೆ. ಎಷ್ಟಾದರೂ ಅಧಿಕಾರ ಕಳೆದುಕೊಂಡಿರುವ ಅವನು ಎರಡು ಕಡೆಯಿಂದಲೂ ಲಾಭವನ್ನು ಗಳಿಸಿ ನನ್ನ ಮೇಲೆ ದುಷ್ಟಬುದ್ಧಿ ಪ್ರಯೋಗಿಸಬಹುದು. ರಾಜನಿಂದ ಸಂಮಾನಿತರಾದವರು, ಅಪಮಾನಿತರಾದಾಗ ಕುಲೀನರಾದರೂ ರಾಜನನ್ನು ನಾಶಮಾಡಲು ಯತ್ನಿಸುವರು. ಆದ್ದರಿಂದ ದಮನಕನು ಏನು ಮಾಡುವನೆಂದು ತಿಳಿಯಲು ಬೇರೆ ಸ್ಥಳಕ್ಕೆ ಹೋಗಿ ನಿರೀಕ್ಷಿಸುವೆನು. ಆತನು ಆ ಪ್ರಾಣಿಯನ್ನು ಕರೆದುಕೊಂಡು ಬಂದು ನನ್ನನ್ನು ಕೊಲ್ಲಿಸಬಹುದು.ಬೇರೆಯವರಲ್ಲಿ ವಿಶ್ವಾಸವಿಡದವರು ದುರ್ಬಲರಾದರೂ ಬಲಿಷ್ಠರಿಂದಲೂ ಸೋಲನ್ನು ಕಾಣುವುದಿಲ್ಲ. ವಿಶ್ವಾಸವಿಡುವವರು ಬಲಿಷ್ಠರಾದರೂ, ದುರ್ಬಲರಿಂದ ಸೋಲಿಗೊಳಗಾಗುತ್ತಾರೆ. ಯಾರು ತನ್ನ ಸುಖ ಹಾಗೂ ಏಳಿಗೆಯನ್ನು ಬಯಸುತ್ತಾನೋ, ಅವನು ಬೃಹಸ್ಪತಿಯಂತೆ ಇನ್ನೊಬ್ಬರನ್ನು ನಂಬಬಾರದು. ಶತ್ರುವು ಶಪಥ ಮಾಡಿ ವಿಶ್ವಾಸಮೂಡಿಸಿದರೂ ಆತನನ್ನು ನಂಬಬಾರದು, ಇಂದ್ರನು ಶಪಥ ಮಾಡಿ ವೃತ್ರಾಸುರನ ವಿಶ್ವಾಸ ಗಳಿಸಿ ಆನಂತರ ರಾಜ್ಯಲೋಭದಿಂದ ಆತನನ್ನು ಕೊಂದನು. ಶತ್ರುವಿನಲ್ಲಿ ವಿಶ್ವಾಸವನ್ನು ಮೂಡಿಸದಿದ್ದರೆ ದೇವತೆಗಳಿಗೂ ಕೂಡ ಅವರನ್ನು ಸೋಲಿಸಲಾಗದು. ಕಶ್ಯಪಪತ್ನಿ ದಿತಿಗೆ ಇಂದ್ರನು ವಿಶ್ವಾಸ ಮೂಡಿಸಿ, ಅವಳ ಗರ್ಭವನ್ನು ಬಗೆದನು.’

ಹೀಗೆ ಯೋಚಿಸಿ ಪಿಂಗಲಕನು ಬೇರೆ ಸ್ಥಳಕ್ಕೆ ತೆರಳಿ ದಮನಕನ ಮಾರ್ಗವನ್ನು ನೋಡುತ್ತಾ ಏಕಾಂಗಿಯಾಗಿ ನಿಂತನು. ಇತ್ತ ದಮನಕನು ಸಂಜೀವಕನ ಬಳಿ ಹೋಗಿ, ಇದು ಕೇವಲ ಎತ್ತು ಎಂದು ಅರಿತು ಸಂತೋಷಗೊಂಡು ಹೀಗೆ ಯೋಚಿಸಿದನು – ‘ಓಹೋ! ಒಳ್ಳೆಯದೇ ಆಯಿತು. ಈ ಎತ್ತಿನ ಹಾಗೂ ಪಿಂಗಲಕನ ಮಧ್ಯೆ ಮೈತ್ರಿ-ವೈರದ ಮೂಲಕ ನಾನು ಪಿಂಗಲಕನನ್ನು ವಶಪಡಿಸಿಕೊಳ್ಳುವೆನು. ಮಂತ್ರಿಗಳು ಉತ್ತಮಕುಲದವರಾಗಿರಲಿ, ಆತ್ಮೀಯರಾಗಿರಲಿ, ರಾಜನು ಅವರ ಮಾತನ್ನು ಕಷ್ಟ ಬಂದಾಗ ಹಾಗೂ ದುಃಖದಲ್ಲಿ ಮಾತ್ರ ಕೇಳುವನು. ರಾಜನು ಸದಾ ತೊಂದರೆಯಲ್ಲಿದ್ದರೆ, ಮಂತ್ರಿಗಳಿಗೆ ಭಾಗ್ಯವಿದ್ದಂತೆ. ಆದ್ದರಿಂದ ಅವರು ರಾಜನು ಸದಾ ತೊಂದರೆಯಲ್ಲಿರಲೆಂದು ಬಯಸುವರು. ಆರೋಗ್ಯವಂತನು ಹೇಗೆ ವೈದ್ಯನನ್ನು ಸಂದಿಸುವುದಿಲ್ಲವೋ ಹಾಗೆ ತೊಂದರೆಗಳಿಲ್ಲದ ರಾಜನು ಮಂತ್ರಿಗಳನ್ನು ಬಯಸುವುದಿಲ್ಲ.”

ಹೀಗೆ ಚಿಂತಿಸುತ್ತಾ ದಮನಕನು ಪಿಂಗಲಕನ ಬಳಿಗೆ ನಡೆದನು. ಪಿಂಗಲಕನು ಆತನನ್ನು ನೋಡಿ, ತನ್ನ ದುಗುಡವನ್ನು ತೋರ್ಪಡಿಸದೆ, ಹಿಂದೆಯಿದ್ದಂತಯೇ ಕುಳಿತ್ತಿದ್ದನು. ದಮನಕನು ಬಂದು ನಮಸ್ಕರಿಸಿ ಕುಳಿತನು.

ಪಿಂಗಲಕ – “ಏನು ಆ ಪ್ರಾಣಿಯನ್ನು ನೋಡಿದೆಯಾ ?”

ದಮನಕ – “ಹೌದು, ತಮ್ಮ ಕೃಪೆಯಿಂದ”

ಪಿಂಗಲಕ – “ನಿಜವಾಗಿಯೂ ?”

ದಮನಕ – “ಏನು ರಾಜನ ಮುಂದೆ ಸುಳ್ಳು ನುಡಿಯಲಾದೀತೇ ? “ ಯಾವನು ದೇವರ ಮುಂದೆ ಹಾಗೂ ರಾಜನ ಮುಂದೆ ಸುಳ್ಳು ನುಡಿಯುವರೋ, ಅವನು ಮಹಾಪುರುಷನಾದರೂ ಬೇಗನೆ ನಾಶವಾಗುತ್ತಾನೆ. ರಾಜನು ಸರ್ವದೇವಸಮಾನನು ಎಂದು ಮನುವೇ ನುಡಿದಿರುವನು. ಹಾಗಾಗಿ ಆತನನ್ನು ದೇವರಂತೆ ನೋಡಬೇಕೇ ಹೊರತು ಬೇರೆ ರೀತಿಯಿಂದಲ್ಲ. ರಾಜನಲ್ಲಿ ದೇವನಿಗಿಂತ ಒಂದು ವಿಶೇಷವಿದೆ. ಶುಭಾಶುಭಗಳ ಫಲವನ್ನು ದೇವರು ಮುಂದಿನ ಜನ್ಮದಲ್ಲಿ ನೀಡಿದರೆ, ರಾಜನು ಇಲ್ಲೇ ಕೊಡುತ್ತಾನೆ.

ಪಿಂಗಲಕ – “ಅಥವಾ ನಿಜವಾಗಿಯೂ ನೀನು ಆ ಪ್ರಾಣಿಯನ್ನು ನೋಡಿರಬಹುದು. ಮಹಾತ್ಮರು ದೀನರ ಮೇಲೆ ಕೋಪಗೊಳ್ಳುವುದಿಲ್ಲ, ಹಾಗಾಗಿ ಅದು ನಿನ್ನನ್ನು ಕೊಲ್ಲಲಿಲ್ಲ ಅನಿಸುತ್ತದೆ. ಬಿರುಗಾಳಿಯು ಕೆಳಗೆ ಶಿರಬಾಗಿ ನಿಂತ ಹುಲ್ಲನ್ನು ಉರುಳಿಸುವುದಿಲ್ಲ. ಮಹಾತ್ಮರ ಸ್ವಭಾವವೇ ಹಾಗೆ, ತಮ್ಮ ಸರಿಸಮರೊಂದಿಗೆ ಮಾತ್ರ ಪರಾಕ್ರಮವನ್ನು ತೋರಿಸುತ್ತಾರೆ. ಮದಜಲವು ಸ್ರವಿಸುತ್ತಿರುವ ತನ್ನ ಗಂಡಸ್ಥಳದಲ್ಲಿ ಮತ್ತೇರಿದ ದುಂಬಿಗಳ ಕಾಲ್ತುಳಿತದಿಂದ ಆನೆಯು ತಾನು ಅತ್ಯಂತ ಬಲಶಾಲಿಯಾದರೂ ಕೋಪಗೊಳ್ಳುವುದಿಲ್ಲ. ತನಗೆ ಬಲದಲ್ಲಿ ಸಮರಾದವರೊಂದಿಗೆ ಮಾತ್ರ ಕೋಪಗೊಳ್ಳುತ್ತದೆ.”

ದಮನಕ – “ಆತನು ಮಹಾತ್ಮನೇ ಹೌದು, ನಾನು ಅಲ್ಪನೇ. ಹಾಗಿದ್ದರೂ ನೀವು ಹೇಳುವುದಾದರೆ, ಆತನನ್ನು ತಮ್ಮ ಸೇವಕನನ್ನಾಗಿ ನಿಯೋಜಿಸುತ್ತೇನೆ.”

ಪಿಂಗಲಕನು ನಿಟ್ಟುಸಿರು ಬಿಟ್ಟು – “ನಿನಗೆ ಇದು ಸಾಧ್ಯವೇ “ ಎಂದು ಕೇಳಿದಾಗ ದಮನಕನು – “ಬುದ್ಧಿಗೆ ಅಸಾಧ್ಯವಾದುದು ಯಾವುದಿದೆ ? ಯಾವ ಕಾರ್ಯವು ಶಸ್ತ್ರ, ಗಜಪಡೆ, ಅಶ್ವಪಡೆ ಹಾಗೂ ಸೈನಿಕರಿಂದ ಅಸಾಧ್ಯವೋ, ಅದನ್ನು ಬುದ್ಧಿಯಿಂದ ಸಾಧಿಸಬಹುದು.

ಪಿಂಗಲಕ – ನೀನು ಹೇಳಿದ್ದು ಸಾಧ್ಯವಾದರೆ, ನಿನ್ನನ್ನು ಅಮಾತ್ಯಪದವಿಗೆ ಏರಿಸುವೆನು. ಇಂದಿನಿಂದ ಅನುಗ್ರಹ-ನಿಗ್ರಹ ಕಾರ್ಯಗಳೆಲ್ಲವೂ ನಿನ್ನಿಂದಲೇ ಆಗುತ್ತದೆ ಎಂಬುದು ನಿಶ್ಚಿತ.

ದಮನಕನಿಂದ ಪಿಂಗಲಕ – ಸಂಜೀವಕನ ಮಧ್ಯೆ ಮೈತ್ರಿ ಸ್ಥಾಪನೆ

ಆನಂತರ ದಮನಕನು ಬೇಗನೆ ಸಂಜೇವಕನ ಬಳಿ ಹೋಗಿ ಆಕ್ಷೇಪಪೂರ್ವಕವಾಗಿ ಕರೆದನು – “ಏ ದುಷ್ಟ ಎತ್ತೇ, ಸ್ವಲ್ಪ ಈ ಕಡೆ ಬಾ! ಸ್ವಾಮಿ ಪಿಂಗಲಕನು ನಿನ್ನನ್ನು ಕರೆಸಿದ್ದಾನೆ. ಏಕೆ ಹೀಗೆ ನಿರ್ಭಯನಾಗಿ ಮತ್ತೆ ಮತ್ತೆ ಸುಮ್ಮನೆ ಕೂಗುತ್ತಿರುವೆ ?” ಆಗ ಸಂಜೀವಕನು ಪಿಂಗಲಕನು ಯಾರೆಂದು ಕೇಳಲು, ದಮನಕನು – “ಏನು ಸ್ವಾಮಿ ಪಿಂಗಲಕನಾರೆಂದು ನಿನಗೆ ತಿಳಿದಿಲ್ಲವೇ ? ಸ್ವಲ್ಪ ತಾಳು, ಗೊತ್ತಾಗುತ್ತದೆ. ಈಗ ಸಮಸ್ತ ಮೃಗಪರಿವಾರದೊಂದಿಗೆ ಪಿಂಗಲಕ ಪ್ರಭುವು ಆಲದ ಮರದ ಕೆಳಗೆ ಇರುವನು”. ಅದನ್ನು ಕೇಳಿ ತನ್ನ ಆಯಸ್ಸು ಮುಗಿಯಿತೆಂದು ತಿಳಿದು ಸಂಜೀವಕನು ತುಂಬ ಬೇಸರದಿಂದ ಹೇಳಿದನು – “ನೀನು ಸಜ್ಜನನೂ ಹಾಗೂ ಮಾತಿನಲ್ಲಿ ಜಾಣನಂತೆ ಕಾಣುತ್ತೀಯೆ, ನನ್ನನ್ನು ಪ್ರಭುವಿನ ಬಳಿಗೇ ಒಯ್ಯುವುದಾದರೆ, ನೀನು ಅವಶ್ಯವಾಗಿ ನನಗೆ ಅಭಯಪ್ರದಾನವನ್ನು ಮಾಡಿಸಬೇಕು”

ದಮನಕ – “ನೀನು ಸತ್ಯವನ್ನೇ ನುಡಿಯುತ್ತಿರುವೆ, ಅದು ನೀತಿಯುಕ್ತವೂ ಆಗಿದೆ. ಏಕೆಂದರೆ ಭೂಮಿಯ, ಸಾಗರದ ಅಥವಾ ಗಿರಿಯ ಎಲ್ಲೆಯನ್ನು ತಿಳಿಯಬಹುದು, ಆದರೆ ರಾಜನ ಅಂತರಂಗದಲ್ಲೇನಿದೆ ಎಂಬುದನ್ನು ಯಾರಿಂದಲಾದರು ತಿಳಿಯಲು ಸಾಧ್ಯವೇ ? ಹಾಗಾಗಿ ನೀನಿಲ್ಲಿಯೇ ಇರು, ನಾನು ಸೂಕ್ತಸಮಯದಲ್ಲಿ ರಾಜನನ್ನು ಮಾತನಾಡಿಸಿಕೊಂಡು ನಂತರ ನಿನ್ನನ್ನು ಕರೆದುಕೊಂಡುಹೋಗುವೆನು”. ಆನಂತರ ಪಿಂಗಲಕನ ಬಳಿ ಹೋಗಿ ಹೀಗೆ ನುಡಿದನು – “ಸ್ವಾಮೀ, ಅದು ಸಾಮಾನ್ಯವಾದ ಪ್ರಾಣಿಯಲ್ಲ, ಭಗವಾನ್ ಶಿವನ ವಾಹನ ನಂದಿಯೇ ಆಗಿದ್ದಾನೆ. ನಾನು ಕೇಳಿದಾಗ ಹೀಗೆ ಹೇಳಿದನು – ‘ನನ್ನ ಮೇಲೆ ಸಂತುಷ್ಟನಾದ ಮಹೇಶ್ವರನು ಕಾಳಿಂದೀಪ್ರದೇಶದಲ್ಲಿರುವ ಈ ಹುಲ್ಲಿನ ತುದಿಗಳನ್ನು ಮೇಯಲು ಆದೇಶಿಸಿರುವನು. ಹೆಚ್ಚು ಹೇಳುವುದೇನು ? ಭಗವಂತನು ನನಗೆ ವಿಹರಿಸಲು ಕೊಟ್ಟ ವನವಿದು’

ಪಿಂಗಲಕ ಭಯದಿಂದ ನುಡಿದನು – “ಇಂದು ನನಗೆ ಸರಿಯಾಗಿ ತಿಳಿಯಿತು, ಭಗವಂತನ ರಕ್ಷಣೆಯಿಲ್ಲದಿದ್ದಲ್ಲಿ ಹೀಗೆ ಸಸ್ಯಾಹಾರಿ ಪ್ರಾಣಿಗಳು ಭಯವಿಲ್ಲದೆ ಅಪಾಯಕಾರಿಯಾದ ವನದಲ್ಲಿ ಗರ್ಜಿಸುತ್ತಾ ಅಲೆಯಲಾದೀತೇ. ನೀನು ಆತನಿಗೆ ಏನು ಹೇಳಿದೆ ?”

ದಮನಕ – “ನಾನು ಹೀಗೆ ಹೇಳಿದೆ – ಈ ವನವು ಚಂಡಿಕಾದೇವಿಯ ವಾಹನವಾಗಿರುವ ನಮ್ಮ ಪ್ರಭುವಾದ ಪಿಂಗಲಕನೆಂಬ ಸಿಂಹದ್ದು. ಇಲ್ಲಿಗೆ ಬಂದಿರುವ ನೀನು ಅವನ ಪ್ರಿಯ ಅತಿಥಿಯಾಗಿರುವೆ. ಆದ್ದರಿಂದ ಆತನ ಬಳಿಗೆ ಹೋಗಿ, ಭ್ರಾತೃವಾತ್ಸಲ್ಯದಿಂದ ಭಕ್ಷಣಪಾನವಿಹಾರಗಳನ್ನು ಮಾಡುತ್ತಾ ಅವನೊಂದಿಗೆ ವಾಸವಾಗಿರು. ಅದಕ್ಕೆ ಆತನೂ ಒಪ್ಪಿ ಸಂತೋಷದಿಂದ – ಪ್ರಭುವಿನಿಂದ ನನಗೆ ಅಭಯಪ್ರದಾನ ಮಾಡಿಸಬೇಕು ಎಂದು ಹೇಳಿರುವನು. ಉಳಿದದ್ದು ತಮಗೆ ಬಿಟ್ಟದ್ದು”

ಪಿಂಗಲಕ – “ಮೆಚ್ಚಿದೆ ಬುದ್ಧಿವಂತನೇ, ಮೆಚ್ಚಿದೆ ಮಂತ್ರಿಶ್ರೇಷ್ಠನೇ, ಮೆಚ್ಚಿದೆ. ನನ್ನ ಮನಸ್ಸಿನಲ್ಲಿರುವುದನ್ನು ಅರಿತು ನುಡಿದಿರಿವೆ. ನಾನು ಅವನಿಗೆ ಈಗಲೇ ಅಭಯಪ್ರದಾನವನ್ನು ಮಾಡುತ್ತೇನೆ. ಆದರೆ ನನಗೂ ಕೂಡ ಆತನಿಂದ ಅಭಯದಕ್ಷಿಣೆಯನ್ನು ಬೇಡಿ ಬೇಗನೆ ಕರೆದುಕೊಂಡು ಬಾ. ಅಂತಃಸತ್ವವುಳ್ಳವರೂ, ಕುಟಿಲತೆಯಿಲ್ಲದವರೂ, ದೋಷವಿಲ್ಲದವರೂ ಹಾಗೂ ಚೆನ್ನಾಗಿ ಪರೀಕ್ಷಿಸಲ್ಪಟ್ಟವರೂ ಆದ ಮಂತ್ರಿಗಳು ಮಂದಿರಕ್ಕೆ ಸ್ತಂಭವು ಹೇಗೆ ಆಧಾರವೋ ಹಾಗೆ ರಾಜ್ಯಕ್ಕೆ ಆಧಾರವಾಗಿರುತ್ತಾರೆ. ಮಂತ್ರಿಗಳ ಬುದ್ಧಿವಂತಿಕೆ ಅಗಲಿದವರನ್ನು ಒಂದುಗೂಡಿಸುವಾಗಲೂ ಹಾಗೂ ವೈದ್ಯರ ಕುಶಲತೆ ಸನ್ನಿಪಾತಜ್ವರಕ್ಕೆ ಮದ್ದು ಮಾಡುವ ಸಂದರ್ಭದಲ್ಲಿ ತಿಳಿಯುತ್ತದೆ. ಬುದ್ಧಿವಂತಿಕೆಯು ಮಾಡುವ ಕಾರ್ಯದಿಂದ ತಿಳಿಯುತ್ತದೆಯೇ ಹೊರತು ಎಲ್ಲವೂ ಸರಿಯಾಗಿದ್ದಾಗ ಎಲ್ಲರೂ ಪಂಡಿತರೆ.”

ದಮನಕನು ಅವನಿಗೆ ನಮಿಸಿ ಸಂಜೀವಕನ ಬಳಿಗೆ ಹೋಗುತ್ತಾ ಸಂತೋಷದಿಂದ ಚಿಂತಿಸಿದನು – “ಓಹೋ, ಈಗ ಪ್ರಭುವು ಸಂತೋಷಗೊಂಡಿರುವನು, ನನ್ನ ಮಾತಿಗೆ ಬದ್ಧನಾಗಿದ್ದಾನೆ ಕೂಡ. ನನಗಿಂತ ಧನ್ಯನಾದವನು ಯಾರಿದ್ದಾನೆ ಈಗ ? ಚಳಿಗಾಲದಲ್ಲಿ ಬೆಂಕಿಯು, ಆಪ್ತರ ದರ್ಶನವು, ರಾಜಸಂಮಾನವು ಮತ್ತು ಕ್ಷೀರಭೋಜನವು ಅಮೃತಪಾನಕ್ಕೆ ಸಮಾನವು.” ಆನಂತರ ಸಂಜೀವಕನನ್ನು ತಲುಪಿ ವಿನಯದಿಂದ ಹೀಗೆ ಹೇಳಿದನು – “ಎಲೈ ಮಿತ್ರನೇ, ನಿನಗಾಗಿ ಪ್ರಭುವಿನಲ್ಲಿ ಪ್ರಾರ್ಥಿಸಿ ಅಭಯಪ್ರದಾನವನ್ನು ಗಳಿಸಿಕೊಂಡಿರುವೆ. ಆದ್ದರಿಂದ ನಿರ್ಭಯವಾಗಿ ಆತನ ಬಳಿಗೆ ಹೋಗಬಹುದು.  ಆದರೆ ನೀನು ರಾಜಾಶ್ರಯವನ್ನು ಪಡೆದ ಮೇಲೆ, ನನ್ನೊಂದಿಗೆ ಒಪ್ಪಂದದ ರೀತ್ಯಾ ವರ್ತಿಸಬೇಕು, ಗರ್ವಿತನಾಗಿ ಪ್ರಭುವಿನ ರೀತಿ ನನ್ನೊಂದಿಗೆ ವ್ಯವಹರಿಸಬಾರದು. ನಾನೂ ಕೂಡ (ನಿನ್ನ ಸೂಚನೆಯಂತೆ) ಮಂತ್ರಿಪದವಿಯಲ್ಲಿದ್ದುಕೊಂಡು ರಾಜ್ಯಭಾರ ಮಾಡುವೆನು. ಹೀಗೆ ಮಾಡಿದಲ್ಲಿ, ನಮ್ಮಿಬ್ಬರಿಗೂ ರಾಜ್ಯಲಕ್ಷ್ಮೀಯು ಒಲಿಯುವಳು. ಬೇಟೆಗಾರನ ಧರ್ಮವನ್ನಾಶ್ರಯಿಸಿ ರಾಜನನ್ನು ವಶದಲ್ಲಿಟ್ಟಿಕೊಳ್ಳಬಹುದು. ಇಬ್ಬರು ಬೇಟೆಗಾರರಿದ್ದಲ್ಲಿ, ಒಬ್ಬನು ಪ್ರಾಣಿಗಳನ್ನು ಅಡಗುತಾಣಗಳಿಂದ ಎಬ್ಬಿಸಿ, ಮತ್ತೊಬ್ಬ ಹೇಗೆ ಅವುಗಳನ್ನು ಬೇಟೆಯಡುತ್ತಾನೋ, ಹಾಗೆ ಇಬ್ಬರಿದ್ದಲ್ಲಿ ಒಬ್ಬನು ರಾಜನನ್ನು ಪ್ರಚೋದಿಸುತ್ತಾ, ಮತ್ತೊಬ್ಬ ಅದರಿಂದ ಲಾಭವನ್ನು ತೆಗೆದುಕೊಳ್ಳಬಹುದು. ಯಾರು ಗರ್ವದಿಂದ ರಾಜನ ಆಶ್ರಯದಲ್ಲಿರುವ ಉತ್ತಮ, ಮಧ್ಯಮ ಹಾಗೂ ಅಧಮ ವ್ಯಕ್ತಿಗಳನ್ನು ಗೌರವಿಸುವುದಿಲ್ಲವೋ, ಆತನು ದಂತಿಲನಂತೆ ತನ್ನ ಪದವಿಯನ್ನು ಕಳೆದುಕೊಳ್ಳುವನು

ಸಂಜೀವಕನು ಅದು ಹೇಗೆಂದು ಕೇಳಲು ದಮನಕನು ದಂತಿಲ – ಗೋರಂಭರ ಕಥೆಯನ್ನು ಹೇಳಿದನು.

ಆನಂತರ ಸಂಜೀವಕನು – “ಮಂಗಳಕರನೇ, ನೀನು ಹೇಳಿದ್ದು ಸರಿಯಾಗಿದೆ. ನೀನು ಹೇಳಿದಂತೆಯೇ ಮಾಡುತ್ತೇನೆ. ಹಾಗೆ ಹೇಳಲು ದಮನಕನು ಅವನನ್ನು ಪಿಂಗಲಕನ ಬಳಿಗೆ ಕರೆದುಕೊಂಡು ಬಂದು ನುಡಿದನು – “ಪ್ರಭು, ನಾನು ಕರೆತಂದ ಈತ ಸಂಜೀವಕನು. ಇನ್ನು ತಮ್ಮಿಷ್ಟದಂತೆ ನಡೆದುಕೊಳ್ಳಬಹುದು”. ಸಂಜೀವಕನೂ ಕೂಡ ಪಿಂಗಲಕನಿಗೆ ಆದರದಿಂದ ನಮಿಸಿ ವಿನಯಪೂರ್ವಕವಾಗಿ ನಿಂತುಕೊಂಡನು. ತುಂಬಿದ ಭುಜದ ಉಬ್ಬನ್ನು ಹೊಂದಿದ ಸಂಜೀವಕನನ್ನು ನೋಡಿ ಪಿಂಗಲಕನು ವಜ್ರಸದೃಶ ಉಗುರುಗಳುಳ್ಳ ತನ್ನ ಬಲಗೈಯನ್ನು ಮುಂದೆ ಮಾಡಿ ಸಂಮಾನಪೂರ್ವಕವಾಗಿ ಹೇಳಿದನು – “ಸೌಖ್ಯವೇ ? ಜನರಿಲ್ಲದ ಈ ಕಾಡಿಗೆ ಏಕೆ ಬಂದಿರುವೆ ?” ಆಗ ತಾನು ವ್ಯಾಪಾರಿ ವರ್ಧಮಾನಕನ ಸಾರ್ಥದಿಂದ ಬೇರ್ಪಟ್ಟು ಕಾಡಿನಲ್ಲೇ ಉಳಿದುಕೊಂಡ ತನ್ನ ಕಥೆಯನ್ನು ಹೇಳಿದನು. ಅದನ್ನು ಕೇಳಿ ಪಿಂಗಲಕನು ಆದರದಿಂದ ಹೇಳಿದನು – “ಮಿತ್ರ,, ಹೆದರಬೇಡ, ನನ್ನ ಭುಜಬಲದಿಂದ ರಕ್ಷಿತವಾಗಿರುವ ಈ ಅರಣ್ಯದಲ್ಲಿ ನೀನು ಇಚ್ಛೆ ಬಂದಹಾಗೆ ಇರಬಹುದು. ಅದಲ್ಲದೇ ನಿತ್ಯವೂ ನನ್ನ ಸಮೀಪದಲ್ಲೇ ಇರು. ಏಕೆಂದರೆ ಭಯಂಕರ ಮೃಗಗಳಿರುವ ಈ ಕಾಡಿನಲ್ಲಿರಲು ದೊಡ್ಡದೊಡ್ಡ ಪ್ರಾಣಿಗಳೇ ಹೆದರುತ್ತವೆ, ಇನ್ನು ಸಸ್ಯಾಹಾರಿಯಾದ ನಿನ್ನ ಪಾಡೇನು ?”

ಹೀಗೆ ಹೇಳಿ ಪಿಂಗಲಕನು ಸಕಲ ಮೃಗಪರಿವಾರದೊಂದಿಗೆ ಯಮುನಾತೀರವನ್ನು ತಲುಪಿ, ಯಥೇಷ್ಟವಾಗಿ ಪಾನಸ್ನಾನಾದಿಗಳನ್ನು ಮಾಡಿ ಅರಣ್ಯವನ್ನು ತಲುಪಿದನು. ಆನಂತರ ಕರಟಕ-ದಮನಕರಿಗೆ ರಾಜ್ಯಭಾರವನ್ನು ವಹಿಸಿ, ಸಂಜೀವಕನೊಂದಿಗೆ ಸುಭಾಷಿತಗೋಷ್ಠಿಗಳನ್ನು ಮಾಡುತ್ತಾ ಕಾಲಕಳೆಯುತ್ತಿದ್ದನು.

ಪಿಂಗಲಕನಿಂದ ರಾಜಧರ್ಮದ ನಿರ್ಲಕ್ಷ್ಯ

ಆಕಸ್ಮಿಕವಾಗಿಯಾದರೂ ಸಜ್ಜನರೊಂದಿಗೆ ಸಂಘವುಂಟಾದಲ್ಲಿ, ಅದು ಬಹಳ ಕಾಲ ಚಿರಸ್ಥಾಯಿಯಾಗಿ ಉಳಿಯುತ್ತದೆ, ಸಜ್ಜನರ ಮೈತ್ರಿಯನ್ನು ಉಳಿಸಿಕೊಳ್ಳಲು ವಿಶೇಷ ಪ್ರಯತ್ನವೂ ಬೇಕಾಗುವುದಿಲ್ಲ. ಮುಂಚೆಯೇ ಅನೇಕ ಶಾಸ್ತ್ರಗಳನ್ನು ಓದಿಕೊಂಡು ಬುದ್ಧಿವಂತನಾಗಿದ್ದ ಸಂಜೀವಕನು ಕೆಲವೇ ದಿನಗಳಲ್ಲಿ ಮಂದಬುದ್ಧಿಯುಳ್ಳ ಪಿಂಗಲಕನನ್ನು ಬುದ್ಧಿವಂತನನ್ನಾಗಿ ಮಾಡಿದನು. ಸ್ವಭಾವತಃ ಸಾಧುಪ್ರಾಣಿಯಾದ ಸಂಜೀವಕನು ಪಿಂಗಲಕನು ಅರಣ್ಯಧರ್ಮವನ್ನು ಮರೆತು ಗ್ರಾಮ್ಯಧರ್ಮವನ್ನು ಅಸುಸರಿಸುವಂತೆ ಮಾಡಿಬಿಟ್ಟನು. ಹೆಚ್ಚೇಕೆ – ಪ್ರತಿದಿನವೂ ಪಿಂಗಲಕ-ಸಂಜೀವಕರು ರಹಸ್ಯ ಮಂತ್ರಾಲೋಚನೆಯಲ್ಲಿ ತೊಡಗುತ್ತಿದ್ದರು. ಉಳಿದ ಎಲ್ಲ ಮೃಗಪರಿವಾರದವರೂ ದೂರಮಾಡಲ್ಪಟ್ಟರು. ಮಂತ್ರಿಗಳಾದ ಕರಟಕ-ದಮನಕರಿಗೂ ಕೂಡ ಅವರ ರಹಸ್ಯ ಮಂತ್ರಾಲೋಚನೆಯ ಸಮಯದಲ್ಲಿ ಪ್ರವೇಶವಿರಲಿಲ್ಲ. ಅದಲ್ಲದೇ ಸಿಂಹವು ಪರಾಕ್ರಮವನ್ನು ತೋರದೆ ಬೇಟೆಯಾಡುವುದನ್ನು ಬಿಟ್ಟದ್ದರಿಂದ ಎಲ್ಲಾ ಮೃಗಪರಿವಾರದವರೂ ಹಾಗೂ ನರಿಗಳು ಹಸಿವಿನಿಂದ ಪೀಡಿತಿರಾಗಿ ಒಂದೆಡೆ ಬಂದು ಸೇರಿದರು.

ಒಣಗಿದ ಮರವನ್ನು ಪಕ್ಷಿಗಳು ಹೇಗೆ ಬಿಟ್ಟುಹೋಗುತ್ತವೆಯೋ, ಹಾಗೆ ರಾಜನಿಂದ ಏನೂ ಪ್ರಯೋಜನವಿಲ್ಲದಿದ್ದಲ್ಲಿ, ಆತನು ಕುಲೀನನಾಗಿದ್ದರೂ, ಉತ್ತಮನಾಗಿದ್ದರೂ ಸೇವಕರು ಆತನನ್ನು ತ್ಯಜಿಸುವರು. ಹಿಂದೆ ರಾಜನಿಂದ ಪುರಸ್ಕೃತರಾದ, ಕುಲೀನರಾದ ಅಥವಾ ಆತನಲ್ಲಿ ಭಕ್ತಿಯುಳ್ಳವರಾದ ಸೇವಕರು ತಮಗೆ ರಾಜನ ಬಳಿ ವೃತ್ತಿಯ ಅವಕಾಶವಿಲ್ಲದಿದ್ದಲ್ಲಿ, ಆತನನ್ನು ಬಿಟ್ಟುಹೋಗುವರು. ಸೇವಕರ ವೃತ್ತಿವೇತನವನ್ನು ವಿಳಂಬವಿಲ್ಲದೆ ಕೊಡುವ ರಾಜನು ಸೇವಕರನ್ನು ಒಮ್ಮೊಮ್ಮೆ ಬೈದು ಹೆದರಿಸಿದರೂ ಆತನನ್ನು ಅವರು ಬಿಟ್ಟುಹೋಗುವುದಿಲ್ಲ. ರಾಜನ ಸೇವಕರು ಮಾತ್ರ ಹೀಗೆ ಇರುತ್ತಾರೆ ಎಂಬುದು ಸರಿಯಲ್ಲ. ಏಕೆಂದರೆ ಈ ಸಮಸ್ತ ಜಗತ್ತೇ ಒಬ್ಬರನೊಬ್ಬರು ಪರಸ್ಪರ ತಿಂದುಹಾಕಲು (ಅಥವಾ ತುಳಿದುಹಾಕಲು) ಸಾಮ, ದಾನ, ಭೇದ ದಂಡ ಮುಂತಾದ ಉಪಾಯಗಳಿಂದ ಚಿಂತಿಸುತ್ತಿರುತ್ತದೆ. ರಾಜರು ಜನಗಳ ಮೇಲೆ, ವೈದ್ಯರು ರೋಗಿಗಳ ಮೇಲೆ, ವ್ಯಾಪಾರಸ್ಥರು ಗ್ರಾಹಕರ ಮೇಲೆ, ಬುದ್ಧಿವಂತರು ದಡ್ಡರ ಮೇಲೆ, ಕಳ್ಳರು ಎಚ್ಚರಿಕೆಯಿಲ್ಲದವರ ಮೇಲೆ, ಭಿಕ್ಷುಕರು ಗೃಹಸ್ಥರ ಮೇಲೆ, ವೇಶ್ಯೆಯರು ಕಾಮುಕರ ಮೇಲೆ, ಶಿಲ್ಪಿಗಳು ಎಲ್ಲ ಜನರ ಮೇಲೆ ಹಗಲಿರುಳು ಸಮಾಧಿಸದೃಶವಾದ ಬಲೆಯನ್ನು ಬೀಸಿ ಅವರನ್ನು ತಮ್ಮ ವಶಕ್ಕೆ ತಂದುಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಇವರೆಲ್ಲರೂ ದೊಡ್ಡ ಮೀನುಗಳು ಸಣ್ಣ ಮೀನುಗಳನ್ನು ತಿಂದು ಬದುಕುವಂತೆ ಬೇರೆಯವರನ್ನು ಮೋಹಗೊಳಿಸಿ ಬದುಕುತ್ತಿರುತ್ತಾರೆ.

ಸರ್ಪಗಳು ಯಾರನ್ನು ಕಚ್ಚಲಿ ಎಂದು ಹಂಬಲಿಸುತ್ತಿರುತ್ತವೆ. ದುಷ್ಟರು ಯಾರಿಗೆ ತೊಂದರೆ ಕೊಡುವುದೆಂದು ಚಿಂತಿಸುತ್ತಿರುತ್ತಾರೆ. ಕಳ್ಳರು ಯಾರನ್ನು ದೋಚಲಿ ಎಂದು ಚಿಂತಿಸುತ್ತಿರುತ್ತಾರೆ. ಆದರೆ ಇವರೆಲ್ಲರ ಆಶಯವು ಪ್ರತಿಬಾರಿಯೂ ಫಲಿಸದಿರುವುದರಿಂದ ಈ ಜಗತ್ತು ಇನ್ನೂ ನಡೆಯುತ್ತಿದೆ. ಶಿವನ ಕಂಠದಲ್ಲಿರುವ ಸರ್ಪವು ಹಸಿದಾಗ ಗಣೇಶನ ವಾಹನವಾದ ಇಲಿಯನ್ನು ತಿನ್ನಲು ಬಯಸುತ್ತದೆ. ಕುಮಾರನ ವಾಹನವಾದ ಮಯೂರವು ಸರ್ಪವನ್ನು ತಿನ್ನಲು ಬಯಸುತ್ತದೆ. ಗಿರಿಸುತೆ ಪಾರ್ವತಿಯ ವಾಹನವಾದ ಸಿಂಹವು ಆ ಮಯೂರವನ್ನು ತಿನ್ನಲು ಬಯಸುತ್ತದೆ. ಈ ರೀತಿ ಕಲಹದ ವಾತಾವರಣ ಶಿವನ ಮನೆಯಲ್ಲೇ ಇದೆ, ಇನ್ನು ಬೇರೆ ಕಡೆಯಲ್ಲಿ ಇರಲಾರದೇ ? ಜಗತ್ತಿನ ಸ್ವರೂಪವಲ್ಲವೇ ಅಲ್ಲಿ ಕಾಣುವುದು ?

ಸ್ವಾಮೀಪ್ರಸಾದದಿಂದ ವಂಚಿತರಾದ ಕರಟಕ-ದಮನಕರ ಮಂತ್ರಾಲೋಚನೆ

ಆನಂತರ ರಾಜಾನುಗ್ರಹದಿಂದ ದೂರವಾಗಿ ಹಸಿವಿನಿಂದ ಬಳಲಿದವರಾಗಿ, ಕರಟಕ ದಮನಕರು ಮಂತ್ರಾಲೋಚನೆಯಲ್ಲಿ ತೊಡಗಿದರು.

ದಮನಕ – “ಎಲೈ ಕರಟಕ, ನಮ್ಮಿಬ್ಬರಿಗೂ ಇಲ್ಲಿ ಬೆಲೆಯಿಲ್ಲದಂತಾಗಿದೆ.. ಈ ಪಿಂಗಲಕನು ಸಂಜೀವಕನ ಮಾತಿನ ಮೋಡಿಗೆ ಸಿಲುಕಿ ತನ್ನ ಕರ್ತವ್ಯವನ್ನೇ ಮರೆತಿದ್ದಾನೆ. ಎಲ್ಲಾ ಪರಿಜನರೂ ಆತನಿಂದ ದೂರವಾಗಿಹೋಗಿದ್ದಾರೆ. ಈಗೇನು ಮಾಡೋಣ ?”

ಕರಟಕ – ಸ್ವಾಮಿಯು ಈಗ ನಿನ್ನ ಮಾತನ್ನು ಕೇಳದಿದ್ದರೂ, ಮಂತ್ರಿಯಾದ ನಿನ್ನ ಕರ್ತವ್ಯಕ್ಕಾಗಿ ಆತನಿಗೆ ಬುದ್ಧಿಮಾತನ್ನು ಹೇಳಬೇಕು. ವಿದುರನೂ ಕೂಡ ಇದೇ ರೀತಿ ಧೃತರಾಷ್ಟ್ರನಿಗೆ ನೀತಿಯನ್ನು ಬೋಧಿಸಿರುವನು. ಮದೋನ್ಮತ್ತಾನಾದ ರಾಜನಾಗಲೀ ಅಥವಾ ಆನೆಯಾಗಲೀ ದಾರಿತಪ್ಪಿದಾಗ ಅದರಿಂದ ನಿಂದನೆಗೆ ಒಳಗಾಗುವರು ಮಂತ್ರಿಗಳು ಹಾಗೂ ಮಾವುತರಷ್ಟೇ. ನೀನೇ ಆ ಹುಲ್ಲುತಿನ್ನುವ ಪ್ರಾಣಿಯನ್ನು ಪ್ರಭುವಿನ ಬಳಿಗೆ ಸೇರಿಸಿ, ನಿನ್ನ ಕೈಯಿಂದಲೇ ಸ್ವತಃ ಕೆಂಡವನ್ನು ಎಳೆದುಕೊಂಡಂತಾಯಿತು.

ದಮನಕ – ನೀನು ಹೇಳುವುದು ಸರಿಯೇ, ಇದು ನನ್ನದೇ ತಪ್ಪು, ಪ್ರಭುವಿನದ್ದಲ್ಲ. ಏಕೆಂದರೆ ನರಿಯು ಟಗರುಗಳ ಕಾಳಗದಿಂದ, ನಾವು ಆಷಾಢಭೂತಿಯಿಂದ ಹಾಗೂ ದೂತಿಯು ನೇಕಾರನಿಂದ ತೊಂದರೆಗೊಳಗಾದ ಒಂದು ಕಥೆಯಿದೆ. ಆದರೆ ಅವರೆಲ್ಲರೂ ಸ್ವಯಂಕೃತ ಅಪರಾಧದಿಂದಲೇ ತೊಂದರೆಗೊಳಗಾದರು ಎಂದು ತಿಳಿಸಿ ಆಷಾಢಭೂತಿ-ನರಿ-ದೂತಿಯ ಕಥೆಯನ್ನು ಹೇಳಿದನು.

ಕಥೆಯನ್ನು ಕೇಳಿದ ಕರಟಕನು – “ಹಾಗಾದರೆ, ಇಂತ ಸಂದರ್ಭದಲ್ಲಿ ನಾವೇನು ಮಾಡೋಣ ?” ಎಂದಾಗ ದಮನಕನು – “ಇಂತ ಸಮಯದಲ್ಲಿಯೂ ಕೂಡ ನನ್ನ ಬುದ್ಧಿ ಚುರುಕಾಗಿಯೇ ಇದೆ. ನನ್ನ ಬುದ್ಧಿಬಲದಿಂದ ಸಂಜೀವಕನನ್ನು ಪ್ರಭುವಿನಿಂದ ಬೇರ್ಪಡಿಸುತ್ತೇನೆ. ಬಿಲ್ಲುಗಾರನು ಪ್ರಯೋಗಿಸಿದ ಬಾಣವು ಯಾರನ್ನಾದರು ಕೊಲ್ಲುತ್ತದೋ ಇಲ್ಲವೋ, ಆದರೆ ಬುದ್ಧಿವಂತನ ಬುದ್ಧಿಯ ಪ್ರಯೋಗದಿಂದ ರಾಜನೂ ಸೇರಿದಂತೆ ರಾಷ್ಟ್ರವನ್ನೂ ನಾಶಮಾಡಬಹುದು. ಆದ್ದರಿಂದ ನಾನು ಕಪಟತಂತ್ರದ ಮೂಲಕ ಅವರ ಮೈತ್ರಿಯನ್ನು ನಾಶಮಾಡುತ್ತೇನೆ.”

ಕರಟಕ – “ಮಂಗಳಕರನೇ, ನಿನ್ನ ಈ ತಂತ್ರಪ್ರಯೋಗ ಪಿಂಗಲಕನಿಗೆ ಅಥವಾ ಸಂಜೀವಕನಿಗೆ ತಿಳಿದರೆ, ನಿನ್ನ ನಾಶ ಖಂಡಿತ.”

ದಮನಕ – “ಅಯ್ಯಾ, ಹೀಗೆ ನುಡಿಯಬೇಡ, ಬುದ್ಧಿವಂತನು ಆಪತ್ಕಾಲದಲ್ಲಿ, ಪ್ರತಿಕೂಲ ಪರಿಸ್ಥಿತಿಯಿದ್ದರೂ ಕೂಡ ಬುದ್ಧಿಯ ನೆರವನ್ನು ಪಡೆಯಲೇಬೇಕು. ಪ್ರಯತ್ನವನ್ನು ಬಿಡಬಾರದು. ಅಕಸ್ಮಾತ್ ಘುಣಾಕ್ಷರನ್ಯಾಯದಿಂದಾದರೂ ಬುದ್ಧಿಬಲದಿಂದ ಕಾರ್ಯಸಿದ್ಧಿಯಾಗಬಹುದು. (ಘುಣಾಕ್ಷರನ್ಯಾಯ – ಘುಣವೆಂಬ ಕೀಟವೊಂದು ಮರವನ್ನು ಕೊರೆಯುತ್ತಾ ಹೋಗುವಾಗ ಅದರಿಂದ ಮೂಡಿದ ಗೆರೆಯು ಕೆಲವೊಮ್ಮೆ ಅಕ್ಷರದ ರೂಪವನ್ನು ತಾಳುವುದುಂಟು! ಹೀಗಾಗಿ ಆಕಸ್ಮಿಕವಾಗಿಯಾದರೂ ಕಾರ್ಯ ಫಲಿಸಬಹುದು). ಪ್ರತಿಕೂಲದ ಕಾಲದಲ್ಲಿಯೂ ಧೈರ್ಯವನ್ನು ಬಿಡಬಾರದು, ಏಕೆಂದರೆ ಧೈರ್ಯವೊಂದಿದ್ದರೆ ಹೇಗಾದರೂ ಉತ್ತಮ ಸ್ಥಿತಿಯನ್ನು ಹೊಂದಬಹುದು. ಸಮುದ್ರದಲ್ಲಿ ಹಡಗು ಮುರಿದರೆ, ನಾವಿಕನು ಹೇಗಾದರೂ ಮಾಡಿ ತೀರವನ್ನು ಸೇರುವ ಪ್ರಯತ್ನವನ್ನು ಮಾಡುವುದಿಲ್ಲವೇ ? ಪ್ರಯತ್ನಶೀಲನಾಗಿರುವ ಪುರುಷಸಿಂಹನಿಗೆ ಲಕ್ಷ್ಮೀಯು ಒಲಿಯುವಳು ಆದರೆ ಹೇಡಿಗಳು ಅದೃಷ್ಟದಿಂದಲೇ ಎಲ್ಲವೂ ಪ್ರಾಪ್ತವಾಗುವುದು ಎಂದು ನುಡಿಯುತ್ತಾರೆ. ಅದೃಷ್ಟವನ್ನು ಅವಲಂಬಿಸದೆ, ಆತ್ಮಶಕ್ತಿಯಿಂದ ಕೆಲಸ ಮಾಡಿದಾಗ ಒಂದುವೇಳೆ ಕಾರ್ಯಸಿದ್ಧಿಯಾಗದಿದ್ದರೂ ಅದರಲ್ಲೇನು ದೋಷವಿಲ್ಲ. ಹಾಗಾಗಿ ನನ್ನ ಬುದ್ಧಿಯ ಪ್ರಭಾವದಿಂದ ಅವರಿಬ್ಬರಿಗೂ ತಿಳಿಯದಂತೆ ಅವರಿಬ್ಬರನ್ನು ಬೇರ್ಪಡಿಸುತ್ತೇನೆ. ಅದಲ್ಲದೇ ಸದಾ ಪ್ರಯತ್ನಶೀಲನಾಗಿರುವವನಿಗೆ ದೈವವೂ ಕೂಡ ಒಲಿಯುತ್ತದೆ. ಸರಿಯಾಗಿ ಯೋಚಿಸಿ ಮಾಡಿದ ಮೋಸದ ಜಾಲದಿಂದ ಬ್ರಹ್ಮನೂ ಕೂಡ ಬಿಡಿಸಿಕೊಂಡು ಬರಲಾರ. ಹಾಗೆ ಬೀಸಿದ ಬಲೆಯಿಂದ ವಿಷ್ಣುರೂಪವನ್ನು ಧರಿಸಿದ ನೇಕಾರನೊಬ್ಬನು ರಾಜಕನ್ಯೆಯನ್ನು ಹೇಗೆ ರಮಿಸಿದನೆಂಬ ಕಥೆಯನ್ನು ಕೇಳು”

ಆನಂತರ ದಮನಕನು ಮಿಥ್ಯಾವಿಷ್ಣು-ನೇಕಾರ ಕಥೆಯನ್ನು ಹೇಳಿದನು.

ಕಥೆಯನ್ನು ಕೇಳಿದ ಕರಟಕನು – “ಭದ್ರ, ನೀನು ಹೇಳುವುದು ಸರಿ, ಅದರೆ ನನಗೆ ತುಂಬಾ ಭಯವಾಗುತ್ತಿದೆ ಏಕೆಂದರೆ ಸಂಜೀವಕನು ಬುದ್ಧಿವಂತನು ಹಾಗೂ ಸಿಂಹವು ಕ್ರೂರಿಯು. ನೀನು ಬುದ್ಧಿಶಾಲಿಯಾದರೂ ಪಿಂಗಲಕನಿಂದ ಸಂಜೀವಕನನ್ನು ಬೇರ್ಪಡಿಸಲು ಸಮರ್ಥನಲ್ಲ ಎಂದೆನಿಸುತ್ತದೆ.

ದಮನಕ – “ತಮ್ಮಾ, ನಾನು ಅಸಮರ್ಥನಾದರೂ ಸಮರ್ಥನಾಗಿದ್ದೇನೆ. ಏಕೆಂದರೆ ಕಾಗೆಯು ಚಿನ್ನದ ಸರವನ್ನು ಕದ್ದ ಕಾರಣದಿಂದ ಕೃಷ್ಣಸರ್ಪವು ಹೇಗೆ ನಾಶವಾಯಿತೋ ಹಾಗೆ ಪರಾಕ್ರಮದಿಂದ ಯಾವುದು ಸಾಧ್ಯವಿಲ್ಲವೋ ಅದು ಉಪಾಯದಿಂದ ಸಾಧ್ಯ”

ಆನಂತರ ದಮನಕನು ಕಾಗೆ-ಚಿನ್ನದಹಾರ-ಕೃಷ್ಣಸರ್ಪದ ಕಥೆಯನ್ನು ಹೇಳಿದನು.

ಕೊನೆಯಲ್ಲಿ ದಮನಕನು- “ಆದ್ದರಿಂದ ಉಪಾಯದಿಂದ ಕೆಲಸ ಮಾಡಬೇಕೆಂದು ನಾನು ಹೇಳುವುದು, ಬುದ್ಧಿವಂತರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಏಕೆಂದರೆ ಬುದ್ಧಿವಂತನೇ ನಿಜವಾದ ಬಲಶಾಲಿಯೇ ಹೊರತು ಬುದ್ಧಿಯಿಲ್ಲದವನು ಎಂದೂ ಬಲಶಾಲಿಯಾಗಲಾರ. ಉದಾಹರಣೆಗೆ ಮದೋನ್ಮತ್ತನಾದ ಸಿಂಹವೊಂದು ಮೊಲದಿಂದ ಹೀಗೆ ಕೊಲ್ಲಲ್ಪಟ್ಟಿತು” ಎಂದು ನುಡಿದು ಸಿಂಹ-ಮೊಲದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ದಮನಕನು – “ನೀನು ಒಪ್ಪುವುದಾದರೆ, ಅಲ್ಲಿಗೆ ಹೋಗಿ ನನ್ನ ಬುದ್ಧಿಪ್ರಭಾವದಿಂದ ಮಿತ್ರಭೇದವನ್ನು ಮಾಡುವೆನು” ಎಂದನು.

ಕರಟಕ – “ಹಾಗೆಯೇ ಆಗಲಿ, ನಿನ್ನ ದಾರಿಯು ಶುಭಕರವಾಗಿರಲಿ, ನೀನು ಅಂದುಕೊಂಡಿರುವುದು ನೆರವೇರಲಿ”

ದಮನಕನಿಂದ ಪಿಂಗಲಕನಲ್ಲಿ ಮಿತ್ರಭೇದದ ಪ್ರಯೋಗ

ಆನಂತರ ಸಂಜೀವಕನಿಲ್ಲದಿರುವ ಸಮಯ ನೋಡಿ ದಮನಕನು ಪಿಂಗಲಕನನ್ನು ತಲುಪಿ, ಆತನಿಗೆ ವಂದಿಸಿ ಎದುರಿಗೆ ಕುಳಿತನು. ಪಿಂಗಲಕನು “ಏನು ಬಹಳ ಕಾಲ ಕಾಣಲೇ ಇಲ್ಲ” ಎಂದಾಗ,

ದಮನಕ – “ಸ್ವಾಮೀ ಸನ್ನಿಧಾನಕ್ಕೆ ನಮ್ಮಿಂದ ಏನು ಪ್ರಯೋಜನವಿಲ್ಲವೆಂದು ಬರಲಿಲ್ಲ. ಆದರೂ ರಾಜನ ವಿನಾಶವನ್ನು ಕಂಡು ಬೆಂದುಹೋದ ಮನಸ್ಸುಳ್ಳವನಾಗಿ ವ್ಯಾಕುಲತೆಯಿಂದ ಕೂಡಿದವನಾಗಿ ನಾನೇ ಸಯಂ ಮಾತನಾಡಲು ಬಂದಿರುವೆನು. ಮಾತು ಪ್ರಿಯವಾಗಿರಲಿ ಅಥವಾ ಅಪ್ರಿಯವಾಗಿರಲಿ, ಶುಭವಾಗಿರಲಿ ಅಥವಾ ಅಶುಭವಾಗಿರಲಿ, ರಾಜನು ಕೇಳದಿದ್ದರೂ ಆತನ ಹಿತವನ್ನು ಬಯಸುವವನು ಹೇಳಲೇ ಬೇಕು.”

ಆಗ ಅವನ ಅಭಿಪ್ರಾಯವನ್ನು ಅರಿತ ಪಿಂಗಲಕನು ಅವನಿಗೆ ಹೇಳಬೇಕಾಗಿರುವುದನ್ನು ಹೇಳಲು ತಿಳಿಸಿದನು

ದಮನಕ –  “ಸಂಜೀವಕನು ರಾಜದ್ರೋಹಿಯಾಗಿದ್ದಾನೆ. ನನ್ನಲ್ಲಿ ವಿಶ್ವಾಸವಿಟ್ಟು ಏಕಾಂತದಲ್ಲಿ ಹೀಗೆ ಹೇಳಿರುವನು – ಎಲೈ ದಮನಕ, ಪಿಂಗಲಕನ ಬಲಾಬಲಗಳನ್ನು ನಾನು ತಿಳಿದುಕೊಂಡಿದ್ದೇನೆ. ಇನ್ನು ಅವನನ್ನು ಕೊಂದು ಎಲ್ಲಾ ಪ್ರಾಣಿಗಳಿಗೂ ನಾನೇ ರಾಜನಾಗಿ, ನಿನ್ನನ್ನು ಮಂತ್ರಿಯನ್ನಾಗಿ ಮಾಡುತ್ತೇನೆ.”

ದಮನಕನ ವಜ್ರಪ್ರಹಾರದಂತಿರುವ ಆ ದಾರುಣವಾದ ಮಾತನ್ನು ಕೇಳಿ ಪಿಂಗಲಕನು ಮೋಹಪರವಶನಾಗಿ  ಏನನ್ನೂ ಹೇಳದಾದನು. ದಮನಕನು ಆತನ ಆ ಪರಿಸ್ಥಿತಿಯನ್ನು ನೋಡಿ ಹೀಗೆ ಚಿಂತಿಸಿದನು – “ಇವನು ಸಂಜೀವಕನಲ್ಲಿ ಅನುರಕ್ತನಾಗಿದ್ದಾನೆ. ಮಂತ್ರಿಯಾದ ಸಂಜೀವಕನಿಂದ ಇವನು ಖಂಡಿತವಾಗಿ ನಾಶಹೊಂದುವನು. ಏಕೆಂದರೆ – ರಾಜನು ಒಬ್ಬನೇ ಸಚಿವನಿಗೆ ಎಲ್ಲಾ ಅಧಿಕಾರವನ್ನು ಕೊಟ್ಟರೆ, ಆ ಸಚಿವನ ಅಹಂಕಾರವು ಹೆಚ್ಚಿ ಆ ಅಹಂಕಾರವೇ ತಾನು ರಾಜನ ದಾಸ್ಯದಲ್ಲಿ (ಸೇವೆಯಲ್ಲಿ) ಇರುವುದರ ಬಗ್ಗೆ ಬೇಸರವನ್ನು ಮೂಡಿಸುತ್ತದೆ. ಹೀಗೆ ಬೇಸರಗೊಂಡವನಲ್ಲಿ ತಾನು ಸ್ವಾತಂತ್ರನಾಗಬೇಕೆಂಬ ಬಯಕೆ ಮೂಡುತ್ತದೆ. ಆ ಬಯಕೆಯು ಕೊನೆಗೆ ರಾಜನ ಪ್ರಾಣಕ್ಕೇ ಕಂಟಕವಾಗುತ್ತದೆ.”

ಪಿಂಗಲಕನು ಹೇಗೋ ಸುದಾರಿಸಿಕೊಂಡು ಅವನಿಗೆ ಹೇಳಿದನು – “ಸಂಜೀವಕನು ನನ್ನ ಪ್ರಾಣಸಮಾನನಾದ ಸೇವಕ, ಆತನು ನನ್ನ ಮೇಲೆ ಹೇಗೆ ದ್ರೋಹ ಮಾಡುವನು “

ದಮನಕ – “ದೇವ, ಸೇವಕನು ಸದಾ ಸೇವಕನಾಗೇ ಇರುತ್ತಾನೆ ಎಂಬುದು ನಿಶ್ಚಿತವೇ ? ರಾಜನ ಯಾವ ಸೇವಕನು ತಾನೇ ಸಂಪತ್ತನು ಇಷ್ಟಪಡುವುದಿಲ್ಲ ? ಎಲ್ಲೆಡೆ ಕೇವಲ ಅಶಕ್ತರೇ ರಾಜನ ಸೇವೆಯಲ್ಲಿ ನಿಲ್ಲುತ್ತಾರೆ.

ಪಿಂಗಲಕ – “ಭದ್ರ, ಆದರೂ ಆತನ ಬಗ್ಗೆ ನನ್ನ ಮನಸ್ಸು ಇನ್ನೂ ಕಲುಷಿತಗೊಂಡಿಲ್ಲ. ಏಕೆಂದರೆ ಈ ಉಕ್ತಿಯು ಸರಿಯಾಗೇ ಇದೆ – ಅನೇಕ ದೋಷಗಳಿಂದ ಕೂಡಿದ್ದರೂ ಯಾರಿಗೆ ತಾನೇ ತನ್ನ ದೇಹ ಪ್ರಿಯವಾಗುವುದಿಲ್ಲ ? ವ್ಯತಿರಿಕ್ತವಾದ ಕೆಲಸಗಳನ್ನು ಮಾಡುತ್ತಿದ್ದರೂ, ಪ್ರಿಯನಾದವನು ಪ್ರಿಯನಾಗೇ ಇರುವನಲ್ಲವೇ ? “

ದಮನಕ – “ಆದ್ದರಿಂದಲೇ ಇಂತ ದೋಷವು ಉಂಟಾಗುತ್ತದೆ. ರಾಜನು ಯಾರ ಮೇಲೆ ಅತಿಯಾದ ಸ್ನೇಹವನ್ನು ತೋರುವನೋ,ಆತನು ಕುಲೀನನಾಗಿರಲಿ, ಇಲ್ಲದಿರಲಿ, ಆತನಿಗೆ ಸಂಪತ್ತು ಒಲಿಯುವುದು. ಅಲ್ಲದೇ, ಗುಣರಹಿತನಾದ ಸಂಜೀವಕನಲ್ಲಿ ಯಾವ ವಿಶೇಷ ಗುಣವಿದೆಯೆಂದು ತಾವು ಆತನನ್ನು ಹತ್ತಿರದಲ್ಲಿರಿಸಿಕೊಂಡಿದ್ದೀರ ? ಅಥವಾ ಮಹಾಕಾಯನಾದ ಇವನ ಸಹಾಯದಿಂದ ಶತ್ರುಗಳನ್ನು ಕೊಲ್ಲಬಹುದೆಂದು ನೀವು ಯೋಚಿಸಿದ್ದರೆ ಅದು ಸಾಧ್ಯವಿಲ್ಲ ಏಕೆಂದರೆ ಈತನು ಹುಲ್ಲು ತಿನ್ನುವ ಪ್ರಾಣಿ. ಸ್ವಾಮಿಯ ಶತ್ರುಗಳೆಲ್ಲಾ ಮಾಂಸಾಹಾರಿಗಳು. ಆದ್ದರಿಂದ ಶತ್ರುಗಳ ವಿಷಯದಲ್ಲೂ ಈತನ ಉಪಯೋಗವಿಲ್ಲ. ಆದ್ದರಿಂದ ಇವನ ಮೇಲೆ ದೋಷಾರೋಪಣೆ ಮಾಡಿ ಕೊಂದು ಬಿಡಬೇಕು.”

ಪಿಂಗಲಕ – “ಹಿಂದೆ ಸಭೆಯಲ್ಲಿ ಆತನು ಗುಣವಂತನೆಂದು ನೀನೇ ಹೇಳಿದ್ದೆ, ತಾನು ಆಡಿದ ಮಾತಿಗೆ ಭಂಗ ಬರಬಹುದೆಂಬ ಭಯವಿದ್ದವನು ಈಗ ಆತನ ದೋಷಗಳನ್ನು ತೋರಿಸುವುದು ಸರಿಯಲ್ಲ. ಅಲ್ಲದೆ ಆತನಿಗೆ ಅಭಯಪ್ರದಾನದ ವಚನವನ್ನು ನೀಡಿದ್ದೇನೆ. ಈಗ ನಾನೇ ಹೇಗೆ ಅವನನ್ನು ಕೊಲ್ಲಲಿ ? ಆತನು ಸರ್ವಥಾ ನಮ್ಮ ಮಿತ್ರನಾಗಿದ್ದಾನೆ, ಆತನಲ್ಲಿ ನನಗೇನು ಅಸಮಾಧಾನವಿಲ್ಲ.ತಾರಕಾಸುರನ ವಿಷಯದಲ್ಲಿ ಬ್ರಹ್ಮನಿಗೂ ಹೀಗೇ ಆಗಿತ್ತು. ತಾನೇ ನೆಟ್ಟು ಬೆಳೆಸಿದ ವಿಷವೃಕ್ಷವನ್ನು ತಾನೇ ಹೇಗೆ ಕಡಿಯಲು ಕಷ್ಟವಾಗುತ್ತದೆಯೋ ಹಾಗೆ ತನ್ನಿಂದಲೇ ಅಭಿವೃದ್ಧಿಹೊಂದಿದ ರಾಕ್ಷಸನನ್ನು ತಾನೇ ಕೊಲ್ಲುವುದು ಸರಿಯಲ್ಲವೆಂಬ ಭಾವನೆಯುಂಟಾಗಿತ್ತು. ಮೊದಲು ಆಪ್ತರಲ್ಲಿ ಪ್ರೀತಿ ತೋರಬಾರದು, ಪ್ರೀತಿ ತೊರಿಸಿದ ಮೇಲೆ ಅದನ್ನು ಉಳಿಸಿಕೊಳ್ಳಬೇಕು. ಮೊದಲು ಪ್ರೀತಿಯಿಂದ ಎತ್ತಿಕೊಂಡು ನಂತರ ಬಿಸಾಡುವುದು ನಾಚಿಕೇಡಿನ ವಿಷಯ. ಎಂದೂ ನೆಲದಲ್ಲೇ ಇದ್ದವನಿಗೆ ಈ ರೀತಿ ಬೀಳುವ ಭಯವಿರುವುದಿಲ್ಲ. ಉಪಕಾರವನ್ನು ತೆಗೆದುಕೊಂಡು ಒಳ್ಳೆಯವನಾಗಿರುವುದಲ್ಲಿ ಏನು ಹೆಚ್ಚುಗಾರಿಕೆಯಿಲ್ಲ. ಅದೇ ಅಪಕಾರಮಾಡಿದವರಿಗೂ ಯಾರು ಒಳ್ಳೆಯವನಾಗಿರುತ್ತಾನೋ ಆತನೇ ನಿಜವಾಗಿ ಉತ್ತಮನು. ಆದ್ದರಿಂದ ಸಂಜೀವಕನು ದ್ರೋಹಬುದ್ಧಿಯನ್ನು ತೋರಿದ್ದರೂ ನಾನು ಆತನಿಗೆ ಕೆಟ್ಟದು ಮಾಡಬಾರದು. “

ದಮನಕ – “ಪ್ರಭು, ದ್ರೋಹಮಾಡಿದವರನ್ನೂ ಕ್ಷಮಿಸುವುದು ರಾಜಧರ್ಮವಲ್ಲ. ತನಗೆ ಸರಿಸಮಾನವಾದ ಸಂಪತ್ತುಳ್ಳ, ಸರಿಸಮಾನವಾದ ಸಾಮರ್ಥ್ಯವುಳ್ಳ, ರಹಸ್ಯಗಳನ್ನು ಅರಿತ, ಉದ್ಯೋಗಶೀಲನಾದ, ಅರ್ಧರಾಜ್ಯವನ್ನು ಕಸಿದುಕೊಳ್ಳುವ ಸಾಮರ್ಥ್ಯವುಳ್ಳ ಭೃತ್ಯನನ್ನು (ಸೇವಕನನ್ನು) ರಾಜನು ಕೊಲ್ಲದೇ ಹೋದರೆ, ಆತನೇ ರಾಜನನ್ನು ಕೊಲ್ಲುವನು. ಅದಲ್ಲದೆ ಈತನ ಸ್ನೇಹದಿಂದ ನೀನು ಎಲ್ಲಾ ರಾಜಧರ್ಮವನ್ನೂ ಬಿಟ್ಟಿರುವೆ. ರಾಜಧರ್ಮವನ್ನು ಬಿಟ್ಟ ನಿನ್ನಲ್ಲಿ ಎಲ್ಲರೂ ಅಸಮಾಧಾನಗೊಂಡಿದ್ದಾರೆ. ಸಂಜೀವಕನು ಸಸ್ಯಾಹಾರಿ ಆದರೆ ನೀನು ಮತ್ತು ನಿನ್ನ ಪರಿವಾರದವರು ಮಾಂಸಾಹಾರಿಗಳು. ನೀನು ಹೀಗೆ ಬೇಟೆಯಾಡದೆ ಕುಳಿತರೆ ನಿನ್ನ ಪರಿಜನರಿಗೆ ಮಾಂಸವು ಹೇಗೆ ದೊರೆಯುವುದು ? ಮಾಂಸಾಹಾರ ದೊರಕದೆ ಅವರೆಲ್ಲರೂ ನಿನ್ನನ್ನು ಬಿಟ್ಟು ಹೋಗುವರು, ಆಗಲೂ ನಿನಗೇ ನಷ್ಟ. ಸಂಜೀವಕನ ಜೊತೆಗಿದ್ದರೆ ಮತ್ತೆ ನಿನಗೆ ಬೇಟೆಯಲ್ಲಿ ಮನಸ್ಸು ಬರುವುದಿಲ್ಲ. ಏಕೆಂದರೆ ರಾಜನು ಎಂತಹವರಿಂದ ಸೇವಿಸಲ್ಪಡುತ್ತಾನೋ ಮತ್ತು ಎಂತಹವರ ಸಹವಾಸದಲ್ಲಿ ಇರುತ್ತಾನೋ, ಆತನೂ ಅವರ ರೀತಿಯೇ ಆಗಿಹೋಗುವನು, ಇದರಲ್ಲಿ ಸಂದೇಹವೇ ಇಲ್ಲ. ಕಾದ ಕಬ್ಬಿಣದ ಮೇಲೆ ಬಿದ್ದ ನೀರಿನ ಹನಿಯು ಕಾಣದಂತೆ ಆರಿಹೋಗುತ್ತದೆ. ಅದೇ ಹನಿ ಕಮಲದ ದಳದ ಮೇಲೆ ಬಿದ್ದಾಗ ಮಣಿಯಂತೆ ಶೋಭಿಸುತ್ತದೆ. ಸ್ವಾತೀನಕ್ಷತ್ರದಲ್ಲಿ ಸಾಗರದ ಮುತ್ತಿನ ಚಿಪ್ಪಿನಲ್ಲಿ ಸೇರಿದ ಹನಿಯು ಮುತ್ತಾಗುತ್ತದೆ. ಹೀಗೆ ಮನುಷ್ಯನ ಅಧಮ, ಮಧ್ಯಮ, ಉತ್ತಮ ಗುಣಗಳು ಆತನ ಸಹವಾಸದಿಂದ ಉಂಟಾಗುತ್ತದೆ. ದುರ್ಯೋಧನನ ಸಂಘದಿಂದ ಹೇಗೆ ಭೀಷ್ಮನು ಗೋಹರಣದಲ್ಲಿ ಭಾಗಿಯಾದನೋ ಹಾಗೆ ದುಷ್ಟರ ಸಹವಾಸದಿಂದ ಸತ್ಪುರುಷರು ವಿಕೃತಿಯನ್ನು ಹೊಂದುವರು. ಆದ್ದರಿಂದಲೇ ಸಜ್ಜನರು ನೀಚರ ಸಂಘವನ್ನು ತ್ಯಜಿಸುತ್ತಾರೆ. ಒಬ್ಬರ ಸ್ವಭಾವವನ್ನು ತಿಳಿಯದೆ ಅವರಿಗೆ ಆಶ್ರಯವನ್ನು ಕೊಡಬಾರದು, ಕೊಟ್ಟರೆ ತಿಗಣೆಯ ತಪ್ಪಿನಿಂದ ಹೇನೊಂದು ಹೇಗೆ ನಾಶವಾಯಿತೋ ಹಾಗಾಗುತ್ತದೆ.”

ಆನಂತರ ದಮನಕನು ಹೇನು ಹಾಗೂ ತಿಗಣೆಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿ ದಮನಕನು – “ಇದನ್ನು ತಿಳಿದುಕೊಂಡು ನೀನು ಸಂಜೀವಕನನ್ನು ಕೊಲ್ಲು, ಇಲ್ಲದಿದ್ದರೆ ಆತನೇ ನಿನ್ನನ್ನು ಕೊಲ್ಲುವನು. ಯಾರು ತನ್ನವರನ್ನು ದೂರಮಾಡಿ, ಪರರನ್ನು ಹತ್ತಿರದಲ್ಲಿಟ್ಟುಕೊಳ್ಳುವನೋ, ಅವನು ಮೂರ್ಖ ಚಂಡರವನಂತೆ ನಾಶವಾಗುವನು”. ಅದಕ್ಕೆ ನಿದರ್ಶನವಾಗಿ ಚಂಡರವ ನರಿಯ ಕಥೆಯನ್ನು ಹೇಳಿದನು.

ಪಿಂಗಲಕ – “ಎಲೈ ದಮನಕನೆ, ಸಂಜೀವಕನು ನನ್ನ ಮೇಲೆ ದುಷ್ಟಬುದ್ಧಿಯುಳ್ಳವನಾಗಿದ್ದಾನೆ ಎಂಬುದಕ್ಕೆ ಏನು ಸಾಕ್ಷಿ ?”

ದಮನಕ – “ನನ್ನ ಮುಂದೆಯೇ ಆತನು ಬೆಳಗ್ಗೆ ನಿನ್ನನ್ನು ಕೊಲ್ಲುವೆನೆಂದು ನಿಶ್ಚಯಿಸಿಕೊಂಡಿರುವನು. ಅದಕ್ಕೆ ಪ್ರಮಾಣವೇನೆಂದರೆ ನಾಳೆ ಬೆಳಗ್ಗೆ ಅವನು ಕೋಪದಿಂದ ಕೆಂಪಾದ ಕಣ್ಣುಳ್ಳವನಾಗಿ, ನಡುಗುವ ತುಟಿಯುಳ್ಳವನಾಗಿ, ಅತ್ತಿತ್ತ ನೋಡುತ್ತಾ, ತನಗೆ ಅನುಚಿತವಾದ ಸ್ಥಳದಲ್ಲಿ ಕುಳಿತು ನಿನ್ನನ್ನು ಕ್ರೂರದೃಷ್ಟಿಯಿಂದ ನೋಡುತ್ತಾನೆ. ಇದನ್ನು ತಿಳಿದುಕೊಂಡು ಯಾವುದು ಸರಿಯೋ ಅದನ್ನು ಮಾಡು”

ದಮನಕನಿಂದ ಸಂಜೀವಕನಲ್ಲಿ ಮಿತ್ರಭೇದದ ಪ್ರಯೋಗ

ದಮನಕನು ಹೀಗೆ ಪಿಂಗಲಕನಿಗೆ ಹೇಳಿ, ಸಂಜೀವಕನ ಬಳಿಗೆ ಬಂದು ನಮಸ್ಕರಿಸಿ ಕುಳಿತುಕೊಂಡನು. ಉದ್ವೇಗದಿಂದ ಮೆಲ್ಲಗೆ ಬರುತ್ತಿರುವ ಅವನನ್ನು ನೋಡಿ ಸಂಜೀವಕನು ಆದರಪೂರ್ವಕವಾಗಿ ಅವನಿಗೆ ಹೇಳಿದನು – “ಎಲೈ ಮಿತ್ರನೇ, ಸ್ವಾಗತ, ಬಹು ದಿನಗಳನಂತರ ಬಂದಿರುವೆ, ಎಲ್ಲಾ ಸೌಖ್ಯವೇ ? ನೀನು ತಿಳಿಸಿದರೆ ನನ್ನ ಮನಗೆ ಬಂದಿರುವ ನಿನಗೆ ಕೊಡಲಾಗದ್ದನ್ನೂ ಕೂಡ ಕೊಡುವೆನು. ಏಕೆಂದರೆ ಯಾರ ಮನೆಗೆ ಯಾವುದಾದರೂ ಕೆಲಸಕ್ಕಾಗೆ ಮಿತ್ರರು ಬರುವರೋ, ಅಂತವರೇ ಈ ಲೋಕದಲ್ಲಿ ಧನ್ಯರು, ವಿವೇಕಿಗಳು ಹಾಗೂ ಸಭ್ಯರು.”

ದಮನಕ – “ಅಯ್ಯೋ! ಸೇವಕರಿಗೆಂಥ ಸುಖ ? ರಾಜನ ಸೇವಕರಾದವರಿಗೆ ತಮ್ಮ ಸಂಪತ್ತು ಪರಾಧೀನವಾಗಿರುತ್ತದೆ, ಸದಾ ಮನಸ್ಸಿನಲ್ಲಿ ಚಿಂತೆಯಿರುತ್ತದೆ ಮತ್ತು ತಮ್ಮ ಬದುಕಿನ ವಿಷಯದಲ್ಲೂ ಕೂಡ ವಿಶ್ವಾಸವಿರುವುದಿಲ್ಲ. ಸೇವಾವೃತ್ತಿಯಿಂದ ಧನ ಸಂಪಾದನೆ ಮಾಡಲಿಚ್ಛಿಸುವ ಸೇವಕರು ವಾಸ್ತವಿಕವಾಗಿ ತಮ್ಮ ಶರೀರದ ಸ್ವಾತಂತ್ರವನ್ನೇ ಕಳೆದುಕೊಂಡ ಮೂಢರಾಗಿರುವರು. ಜನ್ಮವೇ ಮೊದಲು ದುಃಖಕರವಾದದ್ದು, ನಂತರ ಬಡತನವು ಮತ್ತೊಂದು ದುಃಖ, ಅದರಲ್ಲೂ ಸೇವಾವೃತ್ತಿಯನ್ನಾಶ್ರಯಿಸುವುದು ಮಹಾದುಃಖಕರವು. ಅಯ್ಯೋ ಈ ದುಃಖ ಪರಂಪರೆಯೇ! ಮಹಾಭಾರತದಲ್ಲಿ ಬದುಕಿದ್ದೂ ಸತ್ತಂತೆ ಇರುವ ಐದು ಜನರನ್ನು ತಿಳಿಸಿದ್ದಾರೆ – ಬಡವ, ರೋಗಿ, ಮೂರ್ಖ, ಪರದೇಶವಾಸಿ ಹಾಗೂ ಸೇವಕ. ತನ್ನ ಇಚ್ಛೆಯಂತೆ ತಿನ್ನಲಾರದವನು, ಸುಖವಾದ ನಿದ್ರೆಯನ್ನು ಮಾಡಿ ಏಳದವನು, ನಿರ್ಭಯವಾಗಿ ಮಾತನಾಡಲಾರದ ಸೇವಕನ ಬಾಳೊಂದು ಬಾಳೇ ? ಸೇವಕನ ಪಾಡು ನಾಯಿಪಾಡಿದ್ದಂತೆ ಎಂದು ಸುಳ್ಳೇ ಹೇಳಿರುವರು ಏಕೆಂದರೆ ನಾಯಿಯಾದರೂ ಸ್ವಚ್ಛಂದವಾಗಿ ನಡೆಯುತ್ತದೆ ಆದರೆ ಸೇವಕನು ಸ್ವಾಮಿಯ ಆದೇಶದಿಂದಲೇ ನಡೆಯುತ್ತಾನೆ. ನೆಲದಲ್ಲಿ ಶಯನ, ಬ್ರಹ್ಮಚರ್ಯ, ಸಣ್ಣಗಿರುವ ದೇಹಪ್ರಕೃತಿ, ಮಿತವಾದ ಭೋಜನ – ಇವೆಲ್ಲವೂ ಸೇವಕನಿಗೂ ಹಾಗೂ ಯತಿಗೂ ಇರುವ ಸಮಾನ ಲಕ್ಷಣಗಳು. ಆದರೆ ಯತಿಯು ಇವುಗಳನ್ನು ಧರ್ಮಾರ್ಜನೆಗಾಗಿ ಮಾಡಿದರೆ, ಸೇವಕನು ಧನಾರ್ಜನೆಯೆಂಬ ಪಾಪಕಾರ್ಯಕ್ಕಾಗಿ ಮಾಡುತ್ತಾನೆ. ಧನಾರ್ಜನೆಗಾಗಿ ಸೇವಕನು ಶೀತ, ಬಿಸಿಲು ಮುಂತಾದ ಕಷ್ಟಗಳನ್ನು ಸಹಿಸುವನು. ಬದಲಾಗಿ ಸ್ವಲ್ಪ ಕಷ್ಟವನ್ನು ಧರ್ಮಾರ್ಜನೆಗಾಗಿ ಸಹಿಸಿದ್ದಲ್ಲಿ, ಆತನ ಕಷ್ಟಗಳೆಲ್ಲವೂ ಕಳೆಯುತ್ತವೆ. ಮೃದುವಾದ, ವೃತ್ತಾಕಾರವುಳ್ಳ, ಸಿಹಿಯಾದ, ಅಂದವಾಗಿರುವ ಮೋದಕವು ಸೇವಾವೃತ್ತಿಯಿಂದ ದೊರೆಯುವುದಾದಲ್ಲಿ, ಅದರಿಂದೇನು ಫಲ ?

ಇದನ್ನೆಲ್ಲ ಕೇಳಿ ಸಂಜೀವಕನು “ಹಾಗಾದರೆ ನೀನೇನು ಹೇಳಲು ಹೊರಟಿರುವೆ ?” ಎಂದಾಗ ದಮನಕನು – “ಸಚಿವರ ಮಂತ್ರಾಲೋಚನೆಯನ್ನು ಬಹಿರಂಗ ಮಾಡುವುದು ಉಚಿತವಲ್ಲ. ಯಾವ ಮಂತ್ರಿಯು ರಾಜನ ರಹಸ್ಯವಾದ ಮಂತ್ರಾಲೋಚನೆಯನ್ನು ಬಹಿರಂಗ ಮಾಡಿಬಿಡುವನೋ ಅವನು ರಾಜನ ಕೆಲಸವನ್ನು ಕೆಡಿಸುವನು ಹಾಗೂ ತಾನೂ ಸ್ವತಃ ನರಕಕ್ಕೆ ಹೋಗುವನು. ಯಾವ ಸಚಿವನು ರಾಜನ ಮಂತ್ರಾಲೋಚನೆಯನ್ನು ಬಯಲು ಮಾಡುವನೋ ಅವನು ರಾಜನನ್ನು ಶಸ್ತ್ರಪ್ರಯೋಗವಿಲ್ಲದೇ ಸಾಯಿಸಿದಂತೆ ಎಂದು ನಾರದನು ಹೇಳಿರುವನು. ಹಾಗಿದ್ದರೂ ನಾನು ನಿನ್ನ ಸ್ನೇಹಿತನಾಗಿರುವುದರಿಂದ ರಾಜನ ರಹಸ್ಯವೊಂದನ್ನು ಬಯಲುಮಾಡುತ್ತಿರುವೆನು ಏಕೆಂದರೆ ನೀನು ನನ್ನ ಮಾತಿನಂತೆ ಈ ರಾಜಕುಲದಲ್ಲಿ ವಿಶ್ವಾಸವಿರಿಸಿ ಬಂದಿರುವೆ. ಅದಲ್ಲದೆ ಮನುವಾಕ್ಯವೂ ಕೂಡ ಹೀಗಿದೆ – ಯಾರಾದರೂ ಒಬ್ಬನ ಮೇಲೆ ವಿಶ್ವಾಸವಿರಿಸಿದ್ದರಿಂದ ಸತ್ತುಹೋದರೆ ಆ ಸಾವಿನ ಹೊಣೆ ವಿಶ್ವಾಸವಿರಿಸಿದ್ದವನ ಮೇಲೇ ಬರುತ್ತದೆ. ಈಗ ಪಿಂಗಲಕನು ನಿನ್ನ ಮೇಲೆ ದುಷ್ಟಬುದ್ಧಿಯುಳ್ಳವನಾಗಿದ್ದಾನೆ. ಆತನೇ ನನಗೆ ಇಂದು ಏಕಾಂತದಲ್ಲಿ – ನಾಳೆ ಸಂಜೀವಕನನ್ನು ಕೊಂದು ಬಹಳ ಕಾಲದ ನಂತರ ನನ್ನ ಪರಿಜನರನ್ನು ತೃಪ್ತಿ ಪಡಿಸುತ್ತೇನೆ ಎಂದು ಹೇಳಿದ್ದಾನೆ. ನಾನಾದರೋ ಆತನಿಗೆ- ಸ್ವಾಮೀ, ಹೀಗೆ ಮಿತ್ರದ್ರೋಹದಿಂದ ಜೀವನ ನಡೆಸುವುದು ಸರಿಯಲ್ಲ, ಒಂದು ವೇಳೆ ಬ್ರಹ್ಮಹತ್ಯೆಯ ಪಾಪವನ್ನಾದರೂ ಪ್ರಾಯಶ್ಚಿತ್ತದಿಂದ ನಿವಾರಿಸಿಕೊಳ್ಳಬಹುದು ಆದರೆ ಮಿತ್ರದ್ರೋಹದ ದೋಷಕ್ಕೆ ಪರಿಹಾರವಿಲ್ಲ ಎಂದು ಹೇಳಿದೆನು. ಆಗ ಆತ ಕೋಪಿಸಿಕೊಂಡು – ಎಲೈ ದುಷ್ಟನೇ, ಸಂಜೀವಕನು ಸಸ್ಯಾಹಾರಿ, ನಾವಾದರೋ ಮಾಂಸಾಹಾರಿಗಳು, ಹೀಗೆ ನಮ್ಮಿಬ್ಬರಿಗೂ ಸಹಜವಾದ ಶತ್ರುತ್ವವಿದ್ದಲ್ಲಿ, ಶತ್ರುವನ್ನು ಹೇಗೆ ತಾನೇ ಉಪೇಕ್ಷಿಸಬಹುದು ? ಆದ್ದರಿಂದ ಸಾಮ, ಭೇದ ಮುಂತಾದ ಉಪಾಯಗಳ ಮೂಲಕ ಕೊಲ್ಲಬೇಕು. ಇದರಲ್ಲಿ ಏನೂ ದೋಷವಿಲ್ಲ. ಒಂದು ವೇಳೆ ಬೇರೆ ಉಪಾಯಗಳಿಂದ ಶತ್ರುನಾಶ ಸಾಧ್ಯವಾಗದೇ ಇದ್ದಾಗ, ತನ್ನ ಮಗಳನ್ನು ಮದುವೆ ಮಾಡಿಕೊಟ್ಟು ಆತನ ವಿಶ್ವಾಸಗಳಿಸಿ ನಂತರ ಆತನನ್ನು ಕೊಲ್ಲಬೇಕು.ಹೀಗೆ ಮಾಡಿದರೂ ಏನು ದೋಷವಿಲ್ಲ. ಶತ್ರುವಿನೊಂದಿಗೆ ಯುದ್ಧನಿರತನಾದ ಕ್ಷತ್ರಿಯನು ಏನು ಮಾಡಬಹುದು ಅಥವಾ ಏನು ಮಾಡಬಾರದು ಎಂದೆಲ್ಲಾ (ಕೃತ್ಯಾಕೃತ್ಯಗಳನ್ನು) ಪರಿಗಣಿಸುವಂತಿಲ್ಲ, ದ್ರೋಣಪುತ್ರನಾದ ಅಶ್ವತ್ಢಾಮನು ಮಲಗಿದ್ದ ಧೃಷ್ಟದ್ಯುಮ್ನನನ್ನು ಕೊಲ್ಲಲ್ಲಿಲ್ಲವೇ ?

ಹೀಗೆಲ್ಲಾ ನುಡಿದ ಪಿಂಗಲಕನ ಮನಸ್ಸನ್ನರಿತ ನಾನು ನಿನ್ನ ಬಳಿಗೆ ಬಂದಿರುವೆನು. ಈಗ ವಿಶ್ವಾಸದ್ರೋಹ ಮಾಡಿದ ದೋಷ ನನಗೆ ತಟ್ಟುವುದಿಲ್ಲ. ಈ ರಹಸ್ಯವನ್ನು ನಿನ್ನಲ್ಲಿ ತಿಳಿಸಿರುವೆನು, ಇನ್ನು ನಿನಗೆ ತೋಚಿದಂತೆ ಮಾಡು”

ಆಗ ಅವನ ವಜ್ರಾಘಾತದಂತಿರುವ ಮಾತನ್ನು ಕೇಳಿ ಸಂಜೀವಕನು ಮೂರ್ಛೆ ಹೋಗಿ, ಸ್ವಲ್ಪ ಸಮಯದ ಬಳಿಕ ಎಚ್ಚರಗೊಂಡು ವೈರಾಗ್ಯದಿಂದ ಹೀಗೆ ನುಡಿದನು – “ಎಲೈ ದಮನಕನೇ, ಈ ಮಾತು ಸರಿಯಾಗಿಯೇ ಇದೆ – ಪ್ರಾಯಶಃ ಹೆಂಗಸರು ದುರ್ಜನರನ್ನೇ ಬಯಸಿ ಹೋಗುತ್ತಾರೆ, ರಾಜನು ಮೈತ್ರಿಗೆ ಯೋಗ್ಯನಾಗಿರುವುದಿಲ್ಲ, ಜಿಪುಣನ ಬಳಿಯೇ ಹಣ ಸೇರುತ್ತದೆ ಹಾಗೂ ಮೋಡವು ಗಿರಿದುರ್ಗಗಳಲ್ಲಿಯೇ ಮಳೆ ಸುರಿಸುತ್ತದೆ. ರಾಜನ ಮನ್ನಣೆಗೆ ಪಾತ್ರನಾಗಿದ್ದೇನೆ ಎಂದು ತಿಳಿಯುವವನು ಮೂರ್ಖನೇ ಸರಿ, ಆತ ಕೊಂಬಿಲ್ಲದ ಎತ್ತು ಇದ್ದಂತೆ. ರಾಜನ ಬಳಿ ಸೇವೆಯಲ್ಲಿರುವುದಕ್ಕಿಂತ, ವನವಾಸಿಯಾಗಿರುವುದು ಅಥವಾ ಭಿಕ್ಷೆಬೇಡಿಕೊಂಡಿರುವುದು ಅಥವಾ ಕೂಲಿಕೆಲಸಮಾಡಿಕೊಂಡಿರುವುದು ಅಥವಾ ಅತಿಕಷ್ಟದಲ್ಲಿ ಜೀವನ ಮಾಡುವುದೇ ಉತ್ತಮ. ಆದ್ದರಿಂದ ಈ ಸಿಂಹದೊಂದಿಗೆ ಸ್ನೇಹ ಬೆಳೆಸಿ ನಾನು ತಪ್ಪು ಮಾಡಿಬಿಟ್ಟೆ. ಏಕೆಂದರೆ ಹಣದಲ್ಲಿ ಹಾಗೂ ಕುಲದಲ್ಲಿ ಸಮಾನರಾದವರ ಮಧ್ಯೆ ಸ್ನೇಹ ಸರಿಹೋಗುತ್ತದೆಯೇ ಹೊರತು ಅಸಮಾನರ ಮಧ್ಯೆಯಲ್ಲ. ಮೃಗಗಳು ತಮ್ಮ ಜಾತಿಯ ಮೃಗಗಳೊಂದಿಗೆ, ಹಸುಗಳು ಹಸುಗಳೊಂದಿಗೆ ಸ್ನೇಹವನ್ನು ಮಾಡುತ್ತವೆ. ಮೂರ್ಖರು ಮೂರ್ಖರೊಂದಿಗೆ, ಬುದ್ಧಿವಂತರು ಬುದ್ಧಿವಂತರೊಂದಿಗೆ ಸ್ನೇಹವನ್ನು ಮಾಡುತ್ತಾರೆ. ಸಮಾನ ಸ್ವಭಾವ ಹಾಗೂ ಆಸಕ್ತಿಯಿರುವವರೊಂದಿಗೆ ಮಾಡಿದ ಮೈತ್ರಿಯೇ ಸುಖಕರವು. ಹಾಗಾಗಿ ಒಂದು ವೇಳೆ ಪಿಂಗಲಕನ ಬಳಿಗೆ ಹೋಗಿ ಆತನನ್ನು ಸಂತೋಷಗೊಳಿಸಲು ಪ್ರಯತ್ನಿಸಿದರೂ ಆತ ಪ್ರಸನ್ನಗೊಳ್ಳಲಾರನು. ಕೋಪಕ್ಕೆ ಕಾರಣವಿದ್ದಲ್ಲಿ, ಆ ಕಾರಣ ದೂರವಾದೊಡನೆ ಖಂಡಿತವಾಗಿಯೂ ಕೋಪಶಮನವಾಗುತ್ತದೆ. ಆದರೆ ಕಾರಣವಿಲ್ಲದೆ ಕೋಪಗೊಂಡವನನ್ನು ಸಮಾಧಾನ ಮಾಡಲಾಗುತ್ತದೆಯೇ ? ರಾಜನ ಭಕ್ತರಾಗಿರಲಿ, ಪರೋಪಕಾರಿಗಳಾಗಿರಲಿ, ಸೇವಾವೃತ್ತಿಯಲ್ಲಿ ಚತುರರಾಗಿರಲಿ, ದ್ರೋಹವನ್ನು ಮಾಡದವರಾಗಿರಲಿ – ಏನೇ ಆಗಿದ್ದರೂ ಅವರಿಗೆ ಸಿದ್ಧಿಯು ಲಭಿಸುತ್ತದೆಯೋ ಇಲ್ಲವೋ ಹೇಳಲಾಗುವುದಿಲ್ಲ, ಆದರೆ ಅವರು ಸ್ವಲ್ಪ ಎಡವಿದರೂ ಕಷ್ಟಕ್ಕೊಳಗಾಗುತ್ತಾರೆ. ಹಾಗಾಗಿ ಸಮುದ್ರವನ್ನು ಆಶ್ರಯಿಸಿ ಬದುಕುವಂತೆ ರಾಜನನ್ನು ನಂಬಿ ಬದುಕುವ ಅವರ ಬಾಳು ಸದಾ ಅನಿಶ್ಚಿತತೆಯಿಂದ ಕೂಡಿರುತ್ತದೆ. ರಾಜನು ಒಂದೇ ಭಾವದಿಂದ ಯಾವಾಗಲೂ ವ್ಯವಹರಿಸುವುದಿಲ್ಲ. ಹಾಗಾಗಿ ಉತ್ತಮಭಾವನೆಯುಳ್ಳವರು ಮಾಡಿದ ಉಪಕಾರವೂ ನಿಂದನೆಗೆ ಒಳಗಾಗುತ್ತದೆ, ಹಾಗೆ ದುಷ್ಟರು ಮಾಡಿದ ಅಪಕಾರವೂ ಪ್ರೀತಿಪಾತ್ರವಾಗುತ್ತದೆ. ಹಾಗಾಗಿ ಯೋಗಿಗಳಿಗೇ ರಾಜನ ಮನಸ್ಸನ್ನು ಸುಲಭವಾಗಿ ತಿಳಿಯಲು ಕಷ್ಟವಾಗಿರುವಾಗ, ಇನ್ನು ರಾಜಾಶ್ರಯದಲ್ಲಿರುವ ಸೇವಕರ ಪಾಡೇನು ?

ಪಿಂಗಲಕನು ನನ್ನಲ್ಲಿ ಪ್ರೀತಿಯಿಂದ ಇರುವುದನ್ನು ಸಹಿಸದ ಆತನ ಸಮೀಪವರ್ತಿಗಳು ಯಾರೋ ನನ್ನಲ್ಲಿ ಆತನಿಗೆ ಕೋಪ ಬರುವಂತೆ ಮಾಡಿದ್ದಾರೆ. ಆದ್ದರಿಂದ ನಿರ್ದೋಷಿಯಾದ ನನ್ನ ಬಗ್ಗೆ ಆತನು ಈ ರೀತಿ ಹೇಳಿರುವನು. ಒಬ್ಬ ಸವತಿಯ ಏಳಿಗೆಯನ್ನು ಇತರ ಸವತಿಯರು ಹೇಗೆ ಸಹಿಸುವುದಿಲ್ಲವೋ ಹಾಗೆ  ಪ್ರಭುವು ಅನ್ಯರಲ್ಲಿ ಕೃಪೆತೋರುವುದನ್ನು ಸೇವಕರು ಸಹಿಸಲಾರರು. ಗುಣವಂತರು ರಾಜನ ಸಮೀಪದಲ್ಲಿದ್ದರೆ, ಗುಣಹೀನರು ಆತನ ಕೃಪೆಗೆ ಪಾತ್ರರಾಗುವುದಿಲ್ಲ. ರಾತ್ರಿಯಲ್ಲಿದ್ದ ದೀಪದ ಕಾಂತಿಯು ಸೂರ್ಯನು ಹುಟ್ಟಿದಾಗ ಹೇಗೆ ಮಾಸಿಹೋಗುತ್ತದೆಯೋ ಹಾಗೆ ಅತಿಶಯವಾದ ಗುಣವುಳ್ಳವರು ಸಮೀಪದಲ್ಲಿದ್ದರೆ, ಸಾಮಾನ್ಯ ಗುಣವಂತರ ಗುಣಗಳು ಮಾಸಿಹೋಗುತ್ತವೆ.

ದಮನಕ – “ಎಲೈ ಮಿತ್ರನೇ, ಹಾಗಿದ್ದರೆ ನನಗೇನೂ ಭಯವಿಲ್ಲ, ಪಿಂಗಲಕನು ದುರ್ಜನರ ಕಾರಣದಿಂದ ನಿನ್ನ ಮೇಲೆ ಕೋಪಗೊಂಡಿದ್ದರೂ, ನಿನ್ನ ಮಾತಿನ ಧಾಟಿಯಿಂದ ಆತನ ಕೋಪವು ಶಮನವಾಗುವುದು.”

ಸಂಜೀವಕ – “ನೀನು ಹೇಳಿದ್ದು ಸರಿಯಾಗಿಲ್ಲ, ದುರ್ಜನರು ಅಲ್ಪರಾದರೂ ಅವರೊಡನೆ ವಾಸಮಾಡುವುದು ತರವಲ್ಲ, ಏನಾದರೂ ಉಪಾಯ ಮಾಡಿ ಅವರು ಖಂಡಿತವಾಗಿಯೂ ಕೊಂದುಹಾಕುವರು. ಏಕೆಂದರೆ ಕಾಗೆಗಳೆಲ್ಲವೂ ಸೇರಿ ಒಂಟೆಯನ್ನು ಹೇಗೆ ನಾಶಮಾಡಿದವೋ ಹಾಗೆ ಹಲವು ನೀಚರಾದ ಹಾಗೂ ಮೋಸವನ್ನವಲಂಭಿಸಿ ಬದುಕುವ ಪಂಡಿತರು ವಿವೇಕವಿಲ್ಲದ ಕೆಲಸವನ್ನು ಮಾಡುವರು.

ನಂತರ ಸಂಜೀವಕನು ಒಂಟೆ ಕಾಕಾದಿ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿ ಸಂಜೀವಕ – “ಭದ್ರ, ಈ ನಿನ್ನ ರಾಜನು ಈಗ ನೀಚಜನರ ಸಹವಾಸದಲ್ಲಿದ್ದಾನೆ ಎಂದು ನನಗೆ ಮನದಟ್ಟಾಗಿದೆ, ಆದ್ದರಿಂದ ಒಳ್ಳೆಯವರ ಸಂಘವು ಆತನಿಗೆ ಸರಿಬರುವುದಿಲ್ಲ. ಹದ್ದುಗಳಿಂದ ಸುತ್ತುವರಿಯಲ್ಪಟ್ಟ ರಾಜಹಂಸವು ಹೇಗೆ ನಡೆದುಕೊಳ್ಳುವುದೋ ಹಾಗೆ ಕೆಟ್ಟವರ ಮಧ್ಯದಲ್ಲಿರುವ ರಾಜನೂ ಕೂಡ ಕೆಟ್ಟವನೇ ಆಗಿರುತ್ತಾನೆ ಮತ್ತು ಜನರು ಆತನನ್ನು ಅನುಸರಿಸುವುದಿಲ್ಲ. ಹದ್ದಿನ ಗುಣವಿರುವ ರಾಜನನ್ನು ಹಂಸಗಳಂತಿರುವ ಪರಿಜನರು ಸೇವಿಸುತ್ತಾರೆ, ಆದರೆ ಹದ್ದಿನ ಗುಣವಿರುವ ಪರಿಜನರು ಹಂಸದಂತಿರುವ ರಾಜನನ್ನಾದರೂ ತ್ಯಜಿಸಿಬಿಡುತ್ತಾರೆ. ಆದ್ದರಿಂದ ಖಂಡಿತವಾಗಿಯೂ ಯಾರೋ ದುರ್ಜನರೇ ರಾಜನಿಗೆ ನನ್ನಲ್ಲಿ ಕೋಪಬರುವಂತೆ ಮಾಡಿದ್ದಾರೆ, ಅದಕ್ಕೆ ಅವನು ಹೀಗೆ ನುಡಿಯುತ್ತಿರುವನು. ಅಥವಾ ಇದು ಹೀಗೇ ನಡೆಯುವುದು ಏಕೆಂದರೆ – ಮೃದುವಾದ ನೀರಿನ ನಿರಂತರ ಹೊಡೆತದಿಂದ ಪರ್ವತದ ಭಾಗಗಳೇ ಕರಗಿ ಹೋಗುತ್ತವೆ, ಇನ್ನು ನಿರಂತರವಾದ ಚಾಡಿಮಾತಿನಿಂದ ಮೃದುಮನಸ್ಸುಳ್ಳ ಮನುಷ್ಯರು ವಿಕಾರ ಹೊಂದುವುದಿಲ್ಲವೇ ? ಚಾಡಿ ಮಾತಿನಿಂದ ಹಾಳಾದ ಬಾಲಿಶ ಜನರು ಏನನ್ನು ತಾನೇ ಮಾಡಲಾರರು ? ದಿಗಂಬರ ಸಂನ್ಯಾಸಿಗಳಾಗಬಹುದು ಅಥವಾ ತಲೆಬುರುಡೆಯಲ್ಲಿ ಹೆಂಡವನ್ನು ಹಾಕಿಕೊಂಡು ಕುಡಿಯಲೂ ಬಹುದು. ಕಾಲಿನಿಂದ ತುಳಿಯಲ್ಪಟ್ಟರೂ, ದೊಣ್ಣೆಯಿಂದ ಹೊಡೆಯಲ್ಪಟ್ಟರೂ ಹಾವು ಯಾರನ್ನು ಹಲ್ಲಿನಿಂದ ಕಚ್ಚುವುದೋ ಅವನು ಮಾತ್ರ ಸಾಯುತ್ತಾನೆ. ಆದರೆ ಚಾಡಿಕೋರನಾದ ಮನುಷ್ಯನು ಒಬ್ಬನ ಕಿವಿಯನ್ನು ಸ್ಪರ್ಶಿಸಿ (ಅಂದರೆ ಚಾಡಿ ಹೇಳಿ) ಮತ್ತೊಬ್ಬನನ್ನು ಸಂಪೂರ್ಣವಾಗಿ ನಾಶಮಾಡಬಲ್ಲನು. ಹೀಗೆ ಒಬ್ಬನ ಕಿವಿಯನ್ನು ಕಚ್ಚಿ (ಅಂದರೆ ಚಾಡಿ ಹೇಳಿ) ಮತ್ತೊಬ್ಬನನ್ನು ಕೊಲ್ಲುವ ಈ ದುಷ್ಟರೂಪದ ಹಾವಿನ ಕೊಲ್ಲುವ ಕ್ರಮ ಎಂಥಾ ವಿಪರೀತವಾಗಿದೆ! ಹೀಗಿದ್ದಾಗ ನಾನೇನು ಮಾಡಬೇಕೆಂದು ಮಿತ್ರನಾದ ನಿನ್ನನ್ನೇ ಕೇಳುತ್ತಿದ್ದೇನೆ.”

ದಮನಕ – “ದೇಶಾಂತರ ಹೋಗುವುದೇ ಯೋಗ್ಯವೆನಿಸುತ್ತದೆ, ಈ ರೀತಿಯ ದುಷ್ಟರಾಜನ ಬಳಿ ಸೇವೆಯಲ್ಲಿರುವುದು ಉಚಿತವಲ್ಲ. ಗುರುವೇ ಆಗಿದ್ದರೂ ಅಹಂಕಾರದಿಂದ ಕೂಡಿದ್ದರೆ ಅಥವಾ ಯಾವ ಕಾರ್ಯ ಮಾಡತಕ್ಕದ್ದು ಯಾವುದು ಮಾಡತಕ್ಕದಲ್ಲವೆಂಬ ವಿವೇಕವಿರದಿದ್ದರೆ ಅಥವಾ ದುರ್ಮಾರ್ಗದಲ್ಲಿ ನಡೆಯುತ್ತಿದ್ದರೆ, ಅಂತವನನ್ನು ತ್ಯಜಿಸತಕ್ಕದ್ದೆಂದು ಹೇಳಲಾಗಿದೆ.”

ಸಂಜೀವಕ – “ಸ್ವಾಮಿಯು ನಮ್ಮಲ್ಲಿ ಕುಪಿತನಾಗಿದ್ದರೆ, ಬೇರೆ ಕಡೆಗೆ ಹೋಗಲಾಗುವುದಿಲ್ಲ, ಏಕೆಂದರೆ ಬೇರೆ ಕಡೆ ಹೋದರೂ ಶಾಂತಿಯಿರುವುದಿಲ್ಲ. ಬಲಾಢ್ಯರಿಗೆ ಅಪರಾಧವೆಸಗಿ ಬೇರೆಡೆ ಹೋಗಿ ನಾನು ದೂರದಲ್ಲಿದ್ದೇನೆ ಎಂದು ನಿಶ್ಚಿಂತೆಯಿಂದ ಇರಲಾಗುವುದಿಲ್ಲ. ಬುದ್ಧಿವಂತರ ತೋಳುಗಳು ಉದ್ದವಾಗಿರುತ್ತವೆ ಹಾಗೂ ಅವು ಅಪರಾಧಿಯನ್ನು ಕೊಲ್ಲದೆ ಬಿಡುವುದಿಲ್ಲ. ಆದ್ದರಿಂದ ಪಿಂಗಲಕನೊಂದಿಗೆ ಯುದ್ಧಮಾಡುವುದನ್ನು ಬಿಟ್ಟು ನನಗೆ ಬೇರೆ ಉಚಿತವಾದ ಮಾರ್ಗವಿಲ್ಲ. ಸ್ವರ್ಗವನ್ನು ಪಡೆಯಲು ಹಂಬಲಿಸುವವರು ತೀರ್ಥಯಾತ್ರೆಗಳಿಂದ, ತಪಸ್ಸಿನಿಂದ, ನೂರಾರು ರೀತಿಯ ದಾನಗಳಿಂದ ಅಥವಾ ಉತ್ತಮ ಕೆಲಸಗಳಿಂದ ಕೂಡ ಪಡೆಯಲಾಗದ ಸ್ವರ್ಗವನ್ನು ಸುಶೀಲರಾದ ಧೀರರು ರಣರಂಗದಲ್ಲಿ ಪ್ರಾಣವನ್ನು ಕಳೆದುಕೊಂಡಾಗ ಪಡೆದುಕೊಳ್ಳುವರು. ಯುದ್ಧದಲ್ಲಿ ಸತ್ತರೆ ವೀರಸ್ವರ್ಗ, ಉಳಿದರೆ ಉತ್ತಮವಾದ ಕೀರ್ತಿ – ಶೂರರಿಗೆ ಒದಗುವ ಈ ಎರಡು ಪ್ರಾಪ್ತಿಗಳು ದುರ್ಲಭವಾದವುಗಳು. ಹಣೆಯಿಂದ ಹರಿದ ರಕ್ತವು ಶೂರನ ಬಾಯಿಯನ್ನು ಹೊಕ್ಕಾಗ ಅದು ಸಂಗ್ರಾಮವೆಂಬ ಯಜ್ಞದಲ್ಲಿ ವಿಧಿವತ್ತಾಗಿ ಕುಡಿದ ಸೋಮಪಾನಕ್ಕೆ ಸಮ. ಹೋಮಗಳಿಂದ, ವಿಧಿವತ್ತಾಗಿ ಮಾಡಿದ ದಾನಗಳಿಂದ, ಸದ್ವಿಪ್ರರ ಆರಾಧನೆಯಿಂದ, ಭೂರೀ ದಕ್ಷಿಣೆಯನ್ನು ಕೊಟ್ಟು ಮಾಡಿದ ಯಜ್ಞಗಳಿಂದ, ತೀರ್ಥಾಶ್ರಮವಾಸಗಳಿಂದ, ನಿಯಮ ಹಾಗೂ ಚಾಂದ್ರಾಯಣ ಮುಂತಾದ ವ್ರತಗಳಿಂದ ಪುರುಷನು ಯಾವ ಫಲವನ್ನು ಪಡೆಯುವನೋ, ಅದನ್ನು ವೀರಸ್ವರ್ಗಹೊಂದಿದವನು ಆ ಕ್ಷಣದಲ್ಲೇ ಪಡೆಯುವನು.

ಇದನ್ನು ಕೇಳಿ ದಮನಕನು ಯೋಚಿಸಿದನು – “ಈ ದುರಾತ್ಮನು ಯುದ್ಧಮಾಡುವುದಾಗಿ ನಿಶ್ಚಯಿಸಿಕೊಂಡಂತೆ ಕಾಣುತ್ತದೆ. ಒಂದುವೇಳೆ ಈತ ತನ್ನ ಚೂಪಾದ ಕೊಂಬುಗಳಿಂದ ಸ್ವಾಮಿಯನ್ನು ತಿವಿದಲ್ಲಿ ಮಹಾ ಅನರ್ಥವಾಗಿ ಹೋಗುತ್ತದೆ. ಆದ್ದರಿಂದ ಇವನಿಗೆ ಮತ್ತೆ ಬುದ್ಧಿಹೇಳಿ ದೇಶಾಂತರ ಹೋಗುವಂತೆ ಮಾಡುವೆನು.” ನಂತರ ಸಂಜೀವಕನಿಗೆ ಹೇಳಿದನು – “ಎಲೈ ಮಿತ್ರ, ನೀನು ಹೇಳಿದ್ದು ಸರಿಯಾಗಿಯೇ ಇದೆ. ಆದರೆ ಪ್ರಭು ಹಾಗೂ ಸೇವಕನೊಡನೆ ಎಲ್ಲಿಯ ಸಂಗ್ರಾಮ ? ಶತ್ರುವಿನ ಬಲವನ್ನು ನೋಡಿ ತಾನು ಕೋಪಗೊಳ್ಳಬಾರದು, ಹೊರತಾಗಿ ತನ್ನ ಬಲವೃದ್ಧಿಯನ್ನು ಮಾಡಿಕೊಂಡು ಶರತ್ಕಾಲದ ಚಂದ್ರನಂತೆ ನಂತರ ಪ್ರಕಾಶಿಸಬೇಕು. ಶತ್ರುವಿನ ಪರಾಕ್ರಮವನ್ನು ತಿಳಿಯದೇ ಯಾವನು ವೈರತ್ವವನ್ನು ಆರಂಭಿಸುತ್ತಾನೋ ಅವನು ಸಮುದ್ರವು ಟಿಟ್ಟಿಭ ಪಕ್ಷಿಯಿಂದ ಸೋತಂತೆ ಸೋಲನ್ನು ಕಾಣುತ್ತಾನೆ.”

ಹೀಗೆ ನುಡಿದು ದಮನಕನು ಟಿಟ್ಟಿಭ – ಸಮುದ್ರ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ದಮನಕನು – “ಆದ್ದರಿಂದ ಪುರುಷನು ಪ್ರಯತ್ನವನ್ನು ಬಿಡಬಾರದು” ಎಂದನು.

ಅದನ್ನು ಕೇಳಿ ಸಂಜೀವಕನು ಮತ್ತೆ ದಮನಕನನ್ನೇ ಕೇಳಿದನು – “ಮಿತ್ರ, ಪಿಂಗಲಕನು ನನ್ನಲ್ಲಿ ದುಷ್ಟಬುದ್ಧಿಯುಳ್ಳವನಾಗಿದ್ದಾನೆ ಎಂದು ಹೇಗೆ ತಿಳಿದುಕೊಳ್ಳಲಿ ? ಇಲ್ಲಯವರೆಗೆ ನಮ್ಮಿಬ್ಬರ ಸ್ನೇಹದ ಮಾತುಕತೆಯಲ್ಲಿ ಆತನು ನನ್ನನ್ನು ಒಳ್ಳೆಯ ರೀತಿಯಿಂದಲೇ ನೋಡಿದ್ದಾನೆ. ಎಂದೂ ಅನ್ಯಥಾ ನೋಡಿಲ್ಲ. ಆದ್ದರಿಂದ ನನ್ನ ಆತ್ಮರಕ್ಷಣೆಗಾಗಿ ಆತನನ್ನು ಹೇಗೆ ಕೊಲ್ಲಬೇಕೆಂಬ ಉಪಾಯವನ್ನು ತಿಳಿಸು”

ದಮನಕ – “ಇದರಲ್ಲಿ ತಿಳಿಯುವುದೇನಿದೆ ? ಇದೇ ನಿನಗೆ ಪ್ರಮಾಣ – ಒಂದುವೇಳೆ ಆತನು ಕೆಂಪಾದ ಕಣ್ಣುಳ್ಳವನಾಗಿ, ಹುಬ್ಬುಗಂಟ್ಟಿಕ್ಕಿದ್ದರಿಂದ ಹಣೆಯಲ್ಲಿ ಮೂರು ಗೆರೆಗಳುಳ್ಳವಾನಾಗಿ, ತುಟಿಗಳನ್ನು ನಾಲಿಗೆಯಿಂದ ನೆಕ್ಕುತ್ತಾ ನಿನ್ನೆಡೆಗೆ ನೋಡುತ್ತಿದ್ದರೆ, ಅದು ದುಷ್ಟಬುದ್ಧಿಯೆಂದು ತಿಳಿಯಬಹುದು. ಇಲ್ಲದಿದ್ದರೆ ನಿನ್ನಲ್ಲಿ ಪ್ರಸನ್ನನಾಗೇ ಇದ್ದಾನೆ ಎಂದರ್ಥ. ಇನ್ನು ನನಗೆ ಅಪ್ಪಣೆ ಕೋಡು, ನನ್ನ ಮನೆಗೆ ಹೋಗುತ್ತೇನೆ. ನೀನು ಕೂಡ ಈ ರಹಸ್ಯದ ಮಂತ್ರಾಲೋಚನೆ ಹೊರಬೀಳದಂತೆ ನೋಡಿಕೊ. ರಾತ್ರಿಯೇ ಹೊರಡಲು ಸಾಧ್ಯವಾದರೆ, ದೇಶಾಂತರ ಹೊರಟುಹೋಗು. ಏಕೆಂದರೆ ಕುಲದ ಹಿತಕ್ಕಾಗಿ ಒಬ್ಬನನ್ನು ಬಿಡಬೇಕು, ಗ್ರಾಮದ ಹಿತಕ್ಕಾಗಿ ಕುಲವನ್ನು ಬಿಡಬೇಕು, ರಾಜ್ಯದ ಹಿತಕ್ಕಾಗಿ ಗ್ರಾಮವನ್ನು ಬಿಡಬೇಕು ಮತ್ತು ತನ್ನ ಹಿತಕ್ಕಾಗಿ ಈ ಲೋಕವನ್ನೇ ತ್ಯಜಿಸಬೇಕು. ಆಪತ್ಕಾಲಕ್ಕಾಗಿ ಹಣವನ್ನು ಕೂಡಿಡಬೇಕು, ಹಣವನ್ನು ಪೋಲು ಮಾಡದಂತೆ ಹೆಂಡತಿಯನ್ನು ರಕ್ಷಿಸಬೇಕು. ಧನ ಹಾಗೂ ಹೆಂಡತಿ ಇವುಗಳೆರಡರಿಂದಲೂ ಸತತವಾಗಿ ತನ್ನನ್ನು ರಕ್ಷಿಸಿಕೊಳ್ಳಬೇಕು. ಬಲವಂತನು ಎದುರುಗೊಂಡಾಗ ದೇಶತ್ಯಾಗ ಮಾಡುವುದೋ ಅಥವಾ ಆತನೊಡನೆ ಸಂಧಿಮಾಡಿಕೊಳ್ಳುವುದು ನೀತಿ. ಆದ್ದರಿಂದ ದೇಶತ್ಯಾಗ ಮಾಡಬೇಕು ಅಥವಾ ಸಾಮಾದಿ ಉಪಾಯಗಳಿಂದ ತನ್ನನ್ನು ರಕ್ಷಿಸಿಕೊಳ್ಳಬೇಕು. ಬುದ್ಧಿವಂತನಾದವನು ತನ್ನ ಪತ್ನೀಪುತ್ರರನ್ನು ತ್ಯಾಗಮಾಡಿಯಾದರೂ ತನ್ನನ್ನು ರಕ್ಷಿಸಿಕೊಳ್ಳಬೇಕು. ಪ್ರಾಣವೊಂದಿದ್ದರೆ ಎಲ್ಲವನ್ನೂ ಮತ್ತೆ ಪಡೆದುಕೊಳ್ಳಬಹುದು. ಬಲರಹಿತನಾದವನು ಒಳ್ಳೆಯದೋ ಅಥವಾ ಕೆಟ್ಟದ್ದೋ ಯಾವುದಾದರೊಂದು ಉಪಾಯದಿಂದ ತನ್ನನ್ನು ರಕ್ಷಿಸಿಕೊಳ್ಳಬೇಕು. ನಂತರ ಸಮರ್ಥನಾದ ಮೇಲೆ ಧರ್ಮಮಾರ್ಗದಲ್ಲಿ ನಡೆಯಬಹುದು. ಯಾರು ಪ್ರಾಣತ್ಯಾಗದ ಸಂದರ್ಭದಲ್ಲಿಯೂ ಧನ ಮುಂತಾದವುಗಳ ಬಗ್ಗೆ ಮೋಹಗೊಳ್ಳುತ್ತಾರೋ, ಅವರು ನಾಶವಾಗುತ್ತಾರೆ ಹಾಗೂ ಅವರ ಧನಾದಿಗಳೂ ನಾಶವಾಗುತ್ತವೆ.”

ಮಿತ್ರಭೇದೋಪಾಯವನ್ನು ರಚಿಸಿದ ನಂತರ ದಮನಕ ಕರಟಕರ ಸಂವಾದ

ಹೀಗೆ ಹೇಳಿ ದಮನಕನು ಕರಟಕನ ಬಳಿಗೆ ಹೋದನು. ಕರಟಕನು ಬರುತ್ತಿರುವ ಅವನನ್ನು ನೋಡಿ ನುಡಿದನು – “ಭದ್ರ, ನೀನು ಅಲ್ಲೇನು ಮಾಡಿದೆ ?”

ದಮನಕ – “ಭೇದನೀತಿಯ ಬೀಜವನ್ನು ಬಿತ್ತಿ ಬಂದಿರುವೆನು, ಅದರ ಫಲವು ದೇವರಿಟ್ಟಂತೆ ಆಗುತ್ತದೆ. ದೈವದ ಅನುಕೂಲವಿಲ್ಲದಿದ್ದಾಗಲೂ ಬುದ್ಧಿವಂತರು ಆತ್ಮದೋಷನಿವಾರಣೆಗಾಗಿ ಮತ್ತು ತಮ್ಮ ಮನಸ್ಸಿನ ಸಂತೋಷಕ್ಕಾಗಿ ಕೆಲಸವನ್ನು ಮಾಡುತ್ತಾರೆ. ಉದ್ಯೋಗಶೀಲನಾದ ಪುರುಷಸಿಂಹನಿಗೆ ಲಕ್ಷ್ಮೀಯು ಒಲಿಯುವಳು ಆದರೆ ಅದು ಕೇವಲ ಅದೃಷ್ಟವೆಂದು ಹೇಡಿಗಳು ನಂಬುತ್ತಾರೆ. ಅದೃಷ್ಟವನ್ನವಲಂಭಿಸದೆ ಪುರುಷನು ತನ್ನ ಆತ್ಮಶಕ್ತಿಯಿಂದ ಕೆಲಸಮಾಡಬೇಕು. ಹಾಗೆ ಪ್ರಯತ್ನಮಾಡಿಯೂ ಫಲ ದೊರಕದಿದ್ದಲ್ಲಿ ಏನೂ ದೋಷವಿಲ್ಲ.”

ಕರಟಕ – “ನೀತಿಬೀಜವನ್ನು ಹೇಗೆ ಬಿತ್ತಿದ್ದೀಯೆ ಎಂದು ತಿಳಿಸು ?”

ದಮನಕ – “ಅವರಿಬ್ಬರಿಗೂ ಸುಳ್ಳು ಹೇಳಿ ಅವರ ಮಧ್ಯೆ ಹೇಗೆ ಭೇದ ತಂದಿರುವೆನೆಂದರೆ, ಇನ್ನು ಮುಂದೆ ಅವರಿಬ್ಬರೂ ಒಂದೆಡೆ ಕೂತು ಮಂತ್ರಾಲೋಚನೆಯನ್ನು ಮಾಡುವುದನ್ನು ನೀನು ನೋಡಲಾರೆ.”

ಕರಟಕ – “ಅಯ್ಯೋ, ಹೃದಯದಲ್ಲಿ ಸ್ನೇಹವುಳ್ಳವರೂ ಹಾಗೂ ಸಂತೋಷದಿಂದಿರುವವರ ಮಧ್ಯೆ  ನೀನು ಕೋಪವನ್ನುಂಟುಮಾಡಿದ್ದು ಸರಿಯಲ್ಲ. ಏಕೆಂದರೆ ಪರಸ್ಪರ ವಿರೋಧವಿಲ್ಲದೆ ಸುಖವಾಗಿರುವವರನ್ನು ಯಾವನು ದುಃಖಮಾರ್ಗದಲ್ಲಿ ತಳ್ಳುವನೋ ಅವನು ನಿಸ್ಸಂಶವಾಗಿ ಜನ್ಮಜನ್ಮಾಂತರದಲ್ಲೂ ದುಃಖಿಯಾಗಿರುವನು. ಅದಲ್ಲದೇ ನೀನು ಭೇದವನ್ನುಂಟು ಮಾಡಿ ಸಂತೋಷಗೊಳ್ಳುವುದೂ ತರವಲ್ಲ ಏಕೆಂದರೆ ಎಲ್ಲರೂ ಅಪಕಾರ ಮಾಡುವುದರಲ್ಲಿ ನಿಸ್ಸೀಮರಾಗಿರುತ್ತಾರೆ, ಉಪಕಾರ ಮಾಡುವುದರಲ್ಲಲ್ಲ. ವಾಯುವಿನ ಶಕ್ತಿ ಹೇಗೆ ಮರವನ್ನು ಬೀಳಿಸುವುದಲ್ಲಿ ಉಪಯುಕ್ತವಾಗಿ ಅದನ್ನು ಮತ್ತೆ ನಿಲ್ಲಿಸುವುದರಲ್ಲಿ ಪ್ರಯೋಜನಕ್ಕೆ ಬರುವುದಿಲ್ಲವೋ ಹಾಗೆ ನೀಚರು ನಾಶಮಾಡುವುದಕ್ಕಾಗಿಯೇ ಪರೋಪಕಾರವನ್ನು ಮಾಡುತ್ತಾರೆಯೇ ಹೊರತು ಅವರನ್ನು ಉದ್ಧಾರ ಮಾಡುವುದಕ್ಕಲ್ಲ.”

ದಮನಕ – “ನೀನು ನೀತಿಶಾಸ್ತ್ರವನ್ನು ತಿಳಿದಿಲ್ಲ, ಆದ್ದರಿಂದ ಹೀಗೆಲ್ಲಾ ಮಾತನಾಡುತ್ತಿರುವೆ. ಆಗತಾನೇ ಚಿಗುರುತ್ತಿರುವ ಶತ್ರುವನ್ನು ಮತ್ತು ವ್ಯಾಧಿಯನ್ನು ಯಾರು ನಿವಾರಿಸಿಕೊಳ್ಳದೇ ಅವುಗಳನ್ನು ಬೆಳೆಯಲು ಬಿಡುತ್ತಾರೋ ಅವರು ಅವುಗಳಿಂದಲೇ ನಾಶಹೊಂದುತ್ತಾರೆ. ನಮ್ಮ ಮಂತ್ರಿ ಪದವಿಯನ್ನು ಕಬಳಿಸಿರುವ ಈ ಸಂಜೀವಕನು ನಮಗೆ ಶತ್ರುವಾಗಿರುವನು. ವಂಶಪರಂಪರಾಗತವಾಗಿ ಬಂದಿರುವ ಸ್ಥಾನವನ್ನು ಯಾರು ಕಸಿದುಕೊಳ್ಳುತ್ತಾರೋ ಅವರು ಪ್ರಿಯರಾಗಿದ್ದರೂ ಸಹಜ ಶತ್ರುವಾಗಿರುವುದರಿಂದ ಅವರನ್ನು ನಾಶಮಾಡಬೇಕು. ನಾನು ಉದಾಸೀನಭಾವದಿಂದ ಆತನಿಗೆ ಅಭಯಪ್ರದಾನವನ್ನು ಕೊಡಿಸಿದೆ ಆದರೆ ಅವನಿಂದ ನನ್ನ ಮಂತ್ರಿಪದವಿಯೇ ಕಳೆದುಹೋಯಿತು. ಸತ್ಪುರುಷನಾದವನು ತನ್ನ ಜಾಗಕ್ಕೆ ದುರ್ಜನನೊಬ್ಬನಿಗೆ ಪ್ರವೇಶ ಕೊಟ್ಟಲ್ಲಿ, ದುರ್ಜನನು ಆ ಸ್ಥಾನವನ್ನು ಬಯಸಿ ಅವನನ್ನೇ ನಾಶಮಾಡಿಬಿಡುವನು. ಆದ್ದರಿಂದ ಬುದ್ಧಿವಂತರಾದವರು ಅಧಮರಿಗೆ ಅವಕಾಶವನ್ನು ಕೊಡಬಾರದು, ಅಂತವನಿಗೆ ಮನೆಯಲ್ಲಿ ಸೇವಕನ ಸ್ಥಾನ ಕೊಟ್ಟರೂ ತಾನೇ ಮನೆಯ ಒಡೆಯನಂತೆ ವರ್ತಿಸುತ್ತಾನೆ ಎಂದು ತಿಳಿದವರು ಹೇಳಿದ್ದಾರೆ. ಹಾಗಾಗಿ ಸಂಜೀವಕನ ವಧೋಪಾಯವನ್ನು ರಚಿಸಿದ್ದೇನೆ, ಅದಾಗದಿದ್ದಲ್ಲಿ ಆತ ದೇಶತ್ಯಾಗವನ್ನಾದರೂ ಮಾಡುತ್ತಾನೆ. ಈ ವಿಷಯ ನಿನ್ನನ್ನು ಬಿಟ್ಟು ಬೇರಾರಿಗೂ ತಿಳಿದಿಲ್ಲ. ನಾನು ಸ್ವಾರ್ಥದಿಂದ ಕೈಗೊಂಡ ಈ ಕಾರ್ಯವು ಸೂಕ್ತವಾಗಿಯೇ ಇದೆ ಏಕೆಂದರೆ ಹೃದಯವನ್ನು ಕತ್ತಿಯಂತೆ ಹರಿತವಾಗಿಸಿ ಮಾತನ್ನು ಕಬ್ಬಿನರಸದಂತೆ ಸಿಹಿಯಾಗಿಸಿ, ಅಪಕಾರವೆಸಗಿದವರನ್ನು ಕೊಲ್ಲಬೇಕು, ಇದರಲ್ಲಿ ಸಂದೇಹ ಮಾಡಬಾರದು. ಅದಲ್ಲದೇ ಆತನು ಸತ್ತರೆ ನಮಗೆ ಭೋಜನವಾಗುತ್ತಾನೆ. ಹಾಗಾಗಿ ಆತನ ಮರಣದಿಂದ ಮೊದಲನೆಯದಾಗಿ ವೈರಸಾಧನೆಯಾಗುತ್ತದೆ, ನಂತರ ಮಂತ್ರಿಪದವಿ ದೊರೆಯುತ್ತದೆ ಹಾಗೂ ಕೊನೆಯದಾಗಿ ಭೋಜನದ ತೃಪ್ತಿ ಪ್ರಾಪ್ತವಾಗುತ್ತದೆ. ಹೀಗೆ ಮೂರು ರೀತಿಯ ಲಾಭಗಳಿರುವಾಗ ನೀನೇಕೆ ಮೌಢ್ಯದಿಂದ ನನ್ನನ್ನು ದೂಷಿಸುವೆ ? ಕಾಡಿನಲ್ಲಿದ್ದ ಚತುರಕನೆಂಬ ನರಿಯಂತೆ ಬುದ್ಧಿವಂತನು ಬೇರೆಯವರನ್ನು ಪೀಡಿಸುತ್ತಾ ತನ್ನ ಸ್ವಾರ್ಥವನ್ನು ಸಾಧಿಸಿಕೊಳ್ಳುತ್ತಾನೆ ಹಾಗೂ ಅವನ ರಹಸ್ಯ ವ್ಯವಹಾರವು ಯಾರಿಗೂ ತಿಳಿಯದಂತೆ ನೋಡಿಕೊಳ್ಳುತ್ತಾನೆ.”

ಹೀಗೆ ನುಡಿದು ದಮನಕನು ಸಿಂಹ ಮತ್ತು ನರಿಯ ಕಥೆಯನ್ನು ಹೇಳಿದನು.

ಸಂಜೀವಕ ಹಾಗೂ ಪಿಂಗಲಕನ ಮುಖಾಮುಖಿ

ದಮನಕನು ಹೊರಟಮೇಲೆ ಸಂಜೀವಕನು ಚಿಂತಿಸಿದನು -”ಅಯ್ಯೋ, ನಾನೇನು ಮಾಡಿಬಿಟ್ಟೆ, ? ಸಸ್ಯಾಹಾರಿಯಾಗಿ ಆ ಮಾಂಸಾಹಾರಿ ಸಿಂಹದ ಸಹಚರನಾಗಿಬಿಟ್ಟೆ. ಯಾರು ಹೋಗಬಾರದ ಕಡೆ ಹೋಗುತ್ತಾನೋ ಅಥವಾ ಅಯೋಗ್ಯನ ಸೇವೆಯನ್ನು ಮಾಡುತ್ತಾನೋ ಅವನು ಗರ್ಭವನ್ನು ಹೊತ್ತ ಹೇಸರಗತ್ತೆಯಂತೆ ಸಾವನ್ನಪ್ಪುತ್ತಾನೆ. ಆದ್ದರಿಂದ ಏನು ಮಾಡಲಿ ? ಎಲ್ಲಿಗೆ ಹೋಗಲಿ ? ನನಗೆ ಹೇಗೆ ಶಾಂತಿಯು ದೊರೆಯುವುದು ? ಅಥವಾ ಪಿಂಗಲಕನ ಬಳಿಗೇ ಹೋಗುತ್ತೇನೆ, ಶರಣಾಗತನಾಗಿ ಬಂದ ನನ್ನನ್ನು ಕೊಲ್ಲದೆ ಒಂದುವೇಳೆ ಉಳಿಸಬಹುದು. ಧರ್ಮಮಾರ್ಗದಲ್ಲಿ ನಡೆಯುತ್ತಿದ್ದಾಗ ಒಂದುವೇಳೆ ವಿಧಿವಶದಿಂದ ಕಷ್ಟಗಳು ಬಂದರೆ ಅದನ್ನು ವಿಶೆಷವಾದ ನೀತಿಯನ್ನನುಸರಿಸಿ ನಿವಾರಿಸಿಕೊಳ್ಳತಕ್ಕದ್ದು. ಬೆಂಕಿಯಿಂದ ಸುಟ್ಟಗಾಯಕ್ಕೆ ಬೆಂಕಿಯ ಶಾಖವೇ ಹಿತಕರವೆಂಬ ಪ್ರಸಿದ್ಧವಾದ ಲೋಕನುಡಿಯಿಲ್ಲವೇ ಹಾಗೆ. ಲೋಕದಲ್ಲಿನ ಜೀವಿಗಳು ತಮ್ಮ ನಿತ್ಯಕರ್ಮಗಳಿಗನುಗುಣವಾಗಿ ಶುಭಾಶುಭ ಫಲಗಳನ್ನು ಪಡೆಯುತ್ತಾರೆ. ಆದ್ದರಿಂದ ಏನು ಆಗಬೇಕೋ ಅದು ಆಗಿಯೇ ಆಗುತ್ತದೆ, ಇದರಲ್ಲಿ ಚಿಂತಿಸಿ ಫಲವಿಲ್ಲ. ಅದಲ್ಲದೆ ಬೇರೆ ಕಡೆ ಹೋದರೂ ಯಾವುದಾದರೂ ಮಾಂಸಾಹಾರಿಯಾದ ಕ್ರೂರಪ್ರಾಣಿಯಿಂದ ನನ್ನ ಸಾವು ಸಂಭವಿಸುಬಹುದು, ಹಾಗಿದ್ದಲ್ಲಿ ಈ ಸಿಂಹದಿಂದಲೇ ಪ್ರಾಣಹೋಗುವುದೇ ಉತ್ತಮ. ಆನೆಯು ಬೆಟ್ಟವನ್ನು ಗುದ್ದಾಡುವಾಗ ಆನೆಯ ದಂತಭಗ್ನವಾದರು ಅದು ಹೇಗೆ ಶ್ಲಾಘನೀಯವೋ ಹಾಗೆ ಉತ್ತಮರೊಂದಿಗೆ ಸ್ಪರ್ಧಿಸಿದಾಗ ತೊಂದರೆಗೊಳಗಾದರೆ ಅದು ಒಳ್ಳೆಯದೇ, ಮದಜಲದ ಆಸೆಯಿಂದ ಆನೆಯ ಬಳಿಗೆ ತೆರಳಿದ ದುಂಬಿಯು ಆನೆಯ ಕಿವಿಯ ಹೊಡೆತದಿಂದ ಸತ್ತಂತೆ, ನೀಚನೊಬ್ಬನು ಮಹಾತ್ಮನಿಂದ ನಾಶಹೊಂದಿದರೆ ಅದು ನೀಚನಿಗೆ ಶ್ಲಾಘನೀಯವೇ.”

ಹೀಗೆ ನಿಶ್ಚಯಿಸಿ ಸಂಜೀವಕನು ಎಡವುತ್ತಾ ಮೆಲ್ಲಗೆ ನಡೆಯುತ್ತಾ ಸಿಂಹವಿರುವ ಜಾಗವನ್ನು ತಲುಪಿದನು. ಅಲ್ಲಿ ದಮನಕನು ಮುಂಚೆಯೇ ತಿಳಿಸಿದ ಹಾಗೆ (ಕೆಂಪಾದ ಕಣ್ಣುಗಳುಳ್ಳ ಇತ್ಯಾದಿ) ಇರುವ ಪಿಂಗಲಕನನ್ನು ನೋಡಿ ಭಯಗೊಂಡು ಶರೀರವನ್ನು ಮುದುಡಿಕೊಂಡು ಸ್ವಲ್ಪ ದೂರದಲ್ಲೇ ಪಿಂಗಲಕನಿಗೆ ನಮಸ್ಕರಿಸದೇ ಕುಳಿತುಕೊಂಡನು. ಪಿಂಗಲಕನು ಆ ರೀತಿ ಬಂದು ಕುಳಿತ ಅವನನ್ನು ನೋಡಿ ದಮನಕನು ಹೇಳಿದೆಲ್ಲವೂ ಸರಿಯಾಗಿಯೇ ಇದೆ ಎಂದು ನಿಶ್ಚಯಿಸಿ ಕೋಪದಿಂದ ಅವನ ಮೇಲೆ ಎರಗಿದನು. ತನ್ನ ಬೆನ್ನಿನ ಮೇಲೆ ಸಿಂಹದ ಹರಿತವಾದ ಉಗುರುಗಳಿಂದ ಗಾಯವಾಗಲು, ಸಂಜೀವಕನು ಕೊಂಬುಗಳಿಂದ ಸಿಂಹದ ಹೊಟ್ಟೆಗೆ ಗಾಸಿಗೊಳಿಸಿ ಹೇಗೋ ಪಿಂಗಲಕನಿಂದ ಬಿಡಿಸಿಕೊಂಡು ಕೊಂಬುಗಳಿಂದ ಆತನನ್ನು ಕೊಲ್ಲುವ ಉದ್ದೇಶದಿಂದ ಯುದ್ಧಮಾಡಲು ಸಜ್ಜಾಗಿ ನಿಂತನು.

ಆಗ ಹೂವು ಬಿಟ್ಟ ಮುತ್ತುಗದ ಮರಗಳಂತೆ ಕಾಣುತ್ತಿರುವ, ಒಬ್ಬರನ್ನೊಬ್ಬರು ಕೊಲ್ಲಲು ಹವಣಿಸುತ್ತಿರುವ ಅವರನ್ನು ನೋಡಿ ಕರಟಕನು ದಮನಕನಿಗೆ ಹೇಳಿದನು – “ಎಲೈ ಮೂರ್ಖನೇ, ಇವರಿಬ್ಬರ ಮಧ್ಯೆ ವಿರೋಧವನ್ನು ತಂದಿಟ್ಟು ನೀನು ಸರಿಯಾದ ಕೆಲಸವನ್ನು ಮಾಡಲಿಲ್ಲ ಹಾಗೂ ನಿನಗೆ ನೀತಿತತ್ವವೇ ತಿಳಿದಿಲ್ಲ. ನೀತಿಯನ್ನು ಬಲ್ಲವರು ಹೀಗೆ ನುಡಿದಿದ್ದಾರೆ – ದಂಡಪ್ರಯೋಗದಿಂದ ಮತ್ತು ಅತಿಕಷ್ಟದಿಂದ ಸಾಧಿಸಬೇಕಾದ ಕಾರ್ಯಗಳನ್ನು ನೀತಿಕೋವಿದರಾದ ಮಂತ್ರಿಗಳು ಪ್ರೀತಿಯಿಂದ ಹಾಗೂ ಸಾಮದಾನಾದಿ ಉಪಾಯಗಳಿಂದ ಸಾಧಿಸಬಲ್ಲರು. ಯಾರು ಸಾರರಹಿತವೂ ಹಾಗೂ ಅಲ್ಪಫಲವುಳ್ಳ ಕಾರ್ಯಗಳನ್ನು ಸಾಧಿಸಲು ದಂಡೋಪಾಯಗಳನ್ನು ಬಳಸುವರೋ, ಅಂತಹ ಮಂತ್ರಿಗಳ ದುರ್ನೀತಿಯ ಪ್ರಯೋಗದಿಂದ ರಾಜನ ಐಶ್ವರ್ಯವು ತಕ್ಕಡಿಯಲ್ಲಿಟ್ಟಂತೆ ವಾಲುತ್ತಿರುತ್ತದೆ. ಒಂದುವೇಳೆ ಈ ಯುದ್ಧದಲ್ಲಿ ನಮ್ಮ ಪ್ರಭುವಿನ ನಾಶವಾದರೆ ನಿನ್ನ ಈ ಭೇದೋಪಾಯದಿಂದ ಏನು ಸಾಧಿಸಿದಂತಾಯಿತು ? ಒಂದು ವೇಳೆ ಸಂಜೀವಕನು ಸಾಯದಿದ್ದರೂ ಅದರಿಂದ ಕೂಡ ಪ್ರಭುವಿಗೆ ಪ್ರಾಣಾತಂಕ ಭಯವಿರುವುದು. ಆದ್ದರಿಂದ ಮೂಢನೇ, ನೀನು ಹೇಗೆ ಮಂತ್ರಿಪದವಿಯನ್ನು ಬಯಸುತ್ತೀಯೆ ? ಸಾಮೋಪಾಯದಿಂದ ಕಾರ್ಯಸಾಧನೆ ಮಾಡುವುದನ್ನು ನೀನು ತಿಳಿದಿಲ್ಲ. ದಂಡದಲ್ಲೇ ಆಸಕ್ತಿಯಿರುವ ನಿನ್ನ ಈ ಮನೋರಥವು ವ್ಯರ್ಥವು. ಬ್ರಹ್ಮನು ತಿಳಿಸಿರುವ ಸಾಮದಿಂದ ದಂಡದವರೆಗಿನ ಉಪಾಯಗಳಲ್ಲಿ ದಂಡವು ಪಾಪಯುಕ್ತವಾದುದು ಮತ್ತು ಅದರ ಪ್ರಯೋಗವು ಕೊನೆಯಲ್ಲಿ ಮಾಡತಕ್ಕದ್ದು ಎಂದು ಹೇಳಲಾಗಿದೆ. ಸಾಮದಿಂದ ಎಲ್ಲಿ ಸಿದ್ಢಿಯಾಗುವುದಿಲ್ಲವೋ ಅಲ್ಲಿ ಬುದ್ಧಿವಂತನು ದಂಡಪ್ರಯೋಗ ಮಾಡಬೇಕು. ಪಿತ್ತದೋಷವು ಸಕ್ಕರೆಯಿಂದ ಸರಿಹೋಗುವಾಗ ಕಹಿ ಪಡವಲಕಾಯಿಯ ರಸವನ್ನು ಬಳಸುವರೇ ? ತಿಳಿದವನು ಮೊದಲು ಸಾಮವನ್ನು ಪ್ರಯೋಗಿಸಬೇಕು. ಸಾಮದಿಂದಾಗುವ ಕಾರ್ಯಗಳು ಎಂದೂ ವಿಕಾರಗೊಳ್ಳುವುದಿಲ್ಲ. ದ್ವೇಷದಿಂದ ಉಂಟಾದ ತಾಪವು ಸಾಮದಿಂದ ಶಮನವಾಗುವುದೇ ಹೊರತು ಚಂದ್ರನಿಂದ, ಔಷಧಿಯಿಂದ, ಸೂರ್ಯನಿಂದ ಅಥವಾ ಅಗ್ನಿಯಿಂದ ಶಮನವಾಗುವುದಿಲ್ಲ.

ಹಾಗೆಯೇ ನೀನು ಮಂತ್ರಿಪದವಿಯನ್ನು ಬಯಸುತ್ತಿರುವುದೂ ಕೂಡ ಸರಿಯಲ್ಲ. ಏಕೆಂದರೆ ನೀನು ಮಂತ್ರಿಯ ಕರ್ತವ್ಯಗಳನ್ನು ತಿಳಿದಿಲ್ಲ. ಐದು ರೀತಿಯ ಮಂತ್ರಾಲೋಚನೆಯ ಕ್ರಮಗಳಿವೆ – ೧. ಕರ್ಮಾರಂಭದ ಕಾಲದಲ್ಲಿಯೇ ವಿಘ್ನಗಳ ಬಗ್ಗೆ ಆಲೋಚನೆ ೨. ಕಾರ್ಯಸಾಧನೆಗೆ ಬೇಕಾದ ಜನ ಹಾಗೂ ಧನ ಸಂಪತ್ತಿನ ಗಳಿಕೆ ೩. ಕಾರ್ಯಸಾಧನೆಗಾಗಿ ದೇಶ ಹಾಗೂ ಕಾಲದ ಸರಿಯಾದ ನಿರ್ಣಯ ೪. ಕಾರ್ಯಸಾಧನೆಗೆ ಒದಗಿದ ವಿಪತ್ತುಗಳ ಪರಿಹಾರ ೫. ಕಾರ್ಯಸಿದ್ಧಿ. ಈಗ ಸ್ವಾಮಿ ಹಾಗೂ ಅಮಾತ್ಯರಲ್ಲಿ ಒಬ್ಬರ ಅಥವಾ ಇಬ್ಬರ ನಾಶದ ಸಮಯವು ಬಂದಂತಿದೆ. ಆದ್ದರಿಂದ ನಿನ್ನಲ್ಲೇನಾದರೂ ಶಕ್ತಿಯಿದ್ದರೆ ಈಗ ಬಂದಿರುವ ಆಪತ್ತಿನಿಂದ ಹೇಗೆ ಪಾರಾಗುವುದೆಂದು ಚಿಂತಿಸು. ವಿರೋಧಿಗಳನ್ನು ಒಂದುಮಾಡುವುದರಲ್ಲೇ ಮಂತ್ರಿಗಳ ಬುದ್ಧಿಪರೀಕ್ಷೆಯಾವುದು. ಭಿನ್ನಸಂಧಾನದಲ್ಲಿ ಮಂತ್ರಿಯ ಕೌಶಲವು ಹಾಗೂ ಸನ್ನಿಪಾತಜ್ವರದಲ್ಲಿ ವೈದ್ಯನ ಕೌಶಲವು ತಿಳಿದುಬರುತ್ತದೆ, ಎಲ್ಲವೂ ಸರಿಯಾಗಿದ್ದಾಗ ಎಲ್ಲರೂ ಪಂಡಿತರೆ. ಆದರೆ ಮೂರ್ಖ, ನಿನ್ನಿಂದ ಭಿನ್ನಸಂಧಾನ ಸಾಧ್ಯವಿಲ್ಲ ಏಕೆಂದರೆ ನೀನು ವಿಪರೀತಬುದ್ಧಿಯುಳ್ಳವನಾಗಿದ್ದೀಯೆ. ಇಲಿಯು ಅನ್ನಪಾತ್ರೆಯನ್ನು ಬೀಳಿಸಲು ಮಾತ್ರ ತಿಳಿದಿದೆಯೇ ಹೊರತು ಅದನ್ನು ಮತ್ತೆ ಎತ್ತಿಡಲು ಹೇಗೆ ಅಶಕ್ತವೋ ಹಾಗೆ ನೀಚನು ಬೇರೆಯವರ ಕೆಲಸವನ್ನು ಹಾಳುಮಾಡುವುದನ್ನು ತಿಳಿದಿರುವನೇ ಹೊರತು ಉದ್ಧಾರಮಾಡುವುದನ್ನಲ್ಲ. ಅಥವಾ ಇದರಲ್ಲಿ ನಿನ್ನ ತಪ್ಪೇನಿಲ್ಲ, ನಿನ್ನಲ್ಲಿ ವಿಶ್ವಾಸವಿಟ್ಟ ಸ್ವಾಮಿಯ ದೋಷವಿದು. ರಾಜನು ಬುದ್ಧಿವಂತರು ಉಪದೇಶಿಸಿದ ಮಾರ್ಗದಲ್ಲಿ ನಡೆಯದೆ ನೀಚಜನರನ್ನು ಅನುಸರಿಸಿದರೆ, ಅವನು ದುರ್ಗಮವಾದ, ಹೊರಬರಲಾರದ, ಇಕ್ಕಟ್ಟಾದ ಶತ್ರುವಿನ ಪಂಜರವನ್ನು ಹೊಕ್ಕ ಕಷ್ಟವನ್ನು ಅನುಭವಿಸುತ್ತಾನೆ. ನೀನೇನಾದರು ಒಂದುವೇಳೆ ಪಿಂಗಲಕನ ಮಂತ್ರಿಯಾದರೆ ಬೇರೆ ಯಾವ ಒಳ್ಳೆಯಜನರು ಆತನ ಬಳಿ ಬರುವುದಿಲ್ಲ. ಪ್ರಸನ್ನವಾದ ಹಾಗೂ ಸಿಹಿಯಾದ ನೀರುಳ್ಳ ಆದರೆ ದುಷ್ಟ ಮೊಸಳೆಯುಳ್ಳ ಮಡುವಿಗೆ ಯಾರೂ ಇಳಿಯುವುದಿಲ್ಲವೋ ಹಾಗೆ ರಾಜನು ಅತಿಶಯ ಗುಣವಂತನಾದರೂ ಆತನ ಮಂತ್ರಿ ದುಷ್ಟನಾಗಿದ್ದರೆ ಅವನ ಬಳಿ ಯಾರು ಬರುವುದಿಲ್ಲ. ಹಾಗೆ ಉತ್ತಮ ಜನರಿಲ್ಲದ ರಾಜನೂ ಕೂಡ ನಾಶವಾಗಿಹೋಗುವನು. ಯಾವ ರಾಜರು ಭೃತ್ಯರೊಡನೆ ವಿಧವಿಧವಾದ ಸ್ವಾರಸ್ಯಕರವಾದ ಕಥಾಗೋಷ್ಠಿಗಳೊಂದಿಗೆ ಕಳೆಯುವರೋ ಹಾಗೂ ಬಿಲ್ಲುಬಾಣಗಳನ್ನು ಬಳಸುವ ಶ್ರಮವನ್ನೂ ಮಾಡುವುದಿಲ್ಲವೋ ಅವರ ಸಂಪತ್ತನ್ನು ಶತ್ರುಗಳು ಅನುಭವಿಸುತ್ತಾರೆ. ಆದ್ದರಿಂದ ಮೂರ್ಖನಿಗೆ ಉಪದೇಶ ಮಾಡಿ ಏನು ಉಪಯೋಗ ? ಅದರಿಂದ ದೋಷವೇ ಹೊರತು ಒಳ್ಳೆಯದಾಗುವುದಿಲ್ಲ. ನಮಸ್ಕರಿಸಲು ಯೋಗ್ಯವಲ್ಲದ ಮರದ ದಿಮ್ಮಿಗೆ ಯಾರೂ ನಮಿಸುವುದಿಲ್ಲ, ಕಲ್ಲಿಗೆ ಕ್ಷೌರಕರ್ಮವನ್ನು ಮಾಡುವುದಿಲ್ಲ, ಅಯೋಗ್ಯ ಶಿಷ್ಯನಿಗೆ ಯಾರೂ ಉಪದೇಶಿಸುವುದಿಲ್ಲ – ಇದನ್ನು ಸೂಚೀಮುಖನನ್ನು ನೋಡಿ ತಿಳಿಯಬೇಕು

ನಂತರ ಕರಟಕನು ಸೂಚೀಮುಖ-ವಾನರ ಕಥೆಯನ್ನು ಹೇಳಿದನು.

ತನ್ನ ಮಾತನ್ನು ಮುಂದುವರೆಸುತ್ತಾ ಕರಟಕ – “ಹಾಲನ್ನು ಕುಡಿದ ಸರ್ಪದ ವಿಷವು ಹೇಗೆ ಹೆಚ್ಚಾಗುತ್ತದೆಯೋ ಹಾಗೆ ಮೂರ್ಖರಿಗೆ ಉಪದೇಶ ಮಾಡಿದರೆ ಅವರ ಮೂರ್ಖತನವು ಹೆಚ್ಚುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಎಂಥೆಂಥವರಿಗೆಲ್ಲ ಉಪದೇಶ ಮಾಡಬಾರದು, ನೋಡು ಮೂರ್ಖ ಕೋತಿಯೊಂದು ಗುಬ್ಬಚ್ಚಿಗೆ ಮನೆಯಿಲ್ಲದಂತೆ ಮಾಡಿಬಿಟ್ಟಿತು.”

ಹೀಗೆ ಗುಬ್ಬಚ್ಚಿಯ ಬಗ್ಗೆ ತಿಳಿಸಲು ಕರಟಕನು ವಾನರ ಹಾಗೂ ಗುಬ್ಬಚ್ಚಿ ದಂಪತಿ ಕಥೆಯನ್ನು ಹೇಳಿದನು.

ಕರಟಕ – “ಆದ್ದರಿಂದ ಮೂರ್ಖನೇ, ಶಿಕ್ಷಣವನ್ನು ಪಡೆದರೂ ನೀನು ಸುಶಿಕ್ಷಿತನಾಗಲಿಲ್ಲ. ಅಥವಾ ಇದರಲ್ಲಿ ನಿನ್ನ ದೋಷವೇನೂ ಇಲ್ಲ ಏಕೆಂದರೆ ಸಜ್ಜನರಿಗೆ ಶಿಕ್ಷಣ ಕೊಟ್ಟರೆ ಒಳ್ಳೆಯ ಫಲವುಂಟೇ ಹೊರತು ದುರ್ಜನರಿಗಲ್ಲ. ಬಳಸಬಾರದ ಕಡೆ ಬಳಸಲ್ಪಟ್ಟ ಪಾಂಡಿತ್ಯದಿಂದ ಏನು ಲಾಭ ? ಕತ್ತಲಿನಿಂದ ಕೂಡಿದ ಮಡಿಕೆಯ ಒಳಗೆ ದೀಪವಿಟ್ಟರೆ ಏನು ಪ್ರಯೋಜನ ? ವ್ಯರ್ಥ ಪಾಂಡಿತ್ಯವನ್ನಾಶ್ರಯಿಸಿ ನನ್ನ ಮಾತನ್ನು ಕೇಳದ ನಿನಗೆ ಯಾವುದರಿಂದ ಶಾಂತಿದೊರೆಯುವುದೋ ಅದನ್ನೂ ನೀನು ತಿಳಿಯುತ್ತಿಲ್ಲ. ಖಂಡಿತವಾಗಿಯೂ ನೀನು ಅಪಜಾತನಾಗಿಬಿಟ್ಟೆ. ಶಾಸ್ತ್ರವನ್ನು ಬಲ್ಲವರು ನಾಲ್ಕು ವಿಧದ ಪುತ್ರರ ಬಗ್ಗೆ ಹೇಳಿದ್ದಾರೆ – ಜಾತ, ಅನುಜಾತ, ಅತಿಜಾತ ಹಾಗೂ ಅಪಜಾತ. ತಾಯಿಯಂತೆ ಗುಣವುಳ್ಳವನು ಜಾತನು, ತಂದೆಯಂತೆ ಗುಣವುಳ್ಳವನು ಅನುಜಾತನು, ತಂದೆಗಿಂತಲೂ ಅಧಿಕ ಗುಣಗಳನ್ನು ಹೊಂದಿದ ಮಗನು ಅತಿಜಾತನು ಹಾಗು ಅಧಮಾಧಮ ಪುತ್ರನು ಅಪಜಾನನೆಂದೆನಿಸಿಕೊಳ್ಳುತ್ತಾನೆ. ನೀನು ಹೀಗೆ ಅಪಜಾತನೆನಿಸಿಕೊಂಡು ಬಿಟ್ಟೆ. ಯುದ್ಧದಲ್ಲಿ ರುಂಡವು ಬೇರ್ಪಟ್ಟಾಗ ಮುಂಡವು ಹೇಗೆ ಕುಣಿಯುತ್ತದೆಯೋ ಹಾಗೆ ಬೇರೆಯವರ ವ್ಯಸನದಿಂದ ಸಂತೋಷಗೊಳ್ಳುತ್ತಿರುವ ದುಷ್ಟನು ತನ್ನ ನಾಶವನ್ನೇ ಗಣನೆಗೆ ತಂದುಕೊಳ್ಳುವುದಿಲ್ಲ. ಉದಾಹರಣೆಗೆ ನನಗೆ ಧರ್ಮಬುದ್ಧಿ ಮತ್ತು ಪಾಪಬುದ್ಧಿ ಎಂಬ ಇಬ್ಬರ ಬಗ್ಗೆ ಗೊತ್ತು. ಪಾಪಬುದ್ಧಿಯು ವ್ಯರ್ಥಪಾಂಡಿತ್ಯದಿಂದ ತನ್ನ ತಂದೆಯನ್ನೇ ಹೊಗೆಯಲ್ಲಿ ಸಿಲುಕಿಸಿ ಕೊಂದನು

ಕರಟಕನು ಇದನ್ನು ವಿವರಿಸಲು ಧರ್ಮಬುದ್ಧಿ ಮತ್ತು ಪಾಪಬುದ್ಧಿ ಕಥೆಯನ್ನು ಹೇಳಿದನು.

ಮುಂದುವರಿಸುತ್ತಾ ಕರಟಕ – “ಹೀಗೆ ಪಾಪಬುದ್ಧಿಯು ಉಪಾಯವನ್ನು ಹೂಡಿದನೇ ಹೊರತು, ಅಪಾಯವನ್ನು ಚಿಂತಿಸಲಿಲ್ಲ, ಹಾಗಾಗಿ ಅದರ ಫಲವನ್ನು ಪಡೆದನು. ಆದ್ದರಿಂದ ಮೂಢನೇ, ನೀನೂ ಕೂಡ ಉಪಾಯವನ್ನು ಚಿಂತಿಸಿದೆಯೇ ಹೊರತು ಅಪಾಯವನ್ನು ಚಿಂತಿಸಲಿಲ್ಲ. ಆದ್ದರಿಂದ ನೀನು ಪಾಪಿಷ್ಟನೇ ಹೊರತು ಸಜ್ಜನನಲ್ಲ. ಪ್ರಭುವಿಗೆ ಪ್ರಾಣಸಂಕಟವನ್ನು ತಂದಿಟ್ಟ ನಿನ್ನನ್ನು ನಾನು ಸರಿಯಾಗಿ ತಿಳಿದುಕೊಂಡೆ. ಸ್ವಯಂ ನೀನೇ ನಿನ್ನ ದುಷ್ಟತನ ಹಾಗು ಕುಟಿಲತೆಯನ್ನು ಪ್ರದರ್ಶಿಸಿಬಿಟ್ಟೆ. ನೀನು ಪ್ರಭುವನ್ನೇ ಈ ಪರಿಸ್ಥಿತಿಗೆ ದೂಡುವೆಯಾದಲ್ಲಿ ಇನ್ನು ನಮ್ಮಂತವರ ಪಾಡೇನು ? ಆದ್ದರಿಂದ ನೀನು ನನ್ನ ಬಳಿಯಿಂದ ತೊಲಗು.ಹೀಗೊಂದು ನುಡಿಯಿದೆ – ಎಲ್ಲಿ ಲೋಹಸಹಸ್ರದಿಂದ ಮಾಡಲ್ಪಟ್ಟ ತಕ್ಕಡಿಯನ್ನು ಇಲಿಗಳು ತಿನ್ನುತ್ತವೆಯೋ ಅಲ್ಲಿ ಬಾಲಕನೊಬ್ಬನನ್ನು ಗಿಡುಗವು ಹಿಡಿದುಕೊಂಡು ಹೋಗುವುದರಲ್ಲಿ ಸಂಶಯವೇ ಇಲ್ಲ.

ಆ ನುಡಿಯನ್ನು ವಿವರಿಸಲು ಕರಟಕನು ಲೋಹತಕ್ಕಡಿ ಹಾಗೂ ವ್ಯಾಪಾರಿಯ ಮಗನ ಕಥೆಯನ್ನು ಹೇಳಿದನು.

ಕರಟಕನು ಮುಂದುವರಿಸುತ್ತಾ – “ಆದ್ದರಿಂದ ಮೂರ್ಖನೇ, ಪಿಂಗಲಕನು ಸಂಜೀವಕನಲ್ಲಿ ಪ್ರಸನ್ನನಾಗಿರುವುದನ್ನು ಸಹಿಸದೆ ನೀನು ಹೀಗೆ ಮಾಡಿದೆ. ಪ್ರಾಯಶಃ ಸತ್ಕುಲಜಾತರನ್ನು ದುಷ್ಕುಲದಲ್ಲಿ ಹುಟ್ಟಿದವರು, ಐಶ್ವರ್ಯವಂತರನ್ನು ದುರ್ಭಾಗ್ಯವಂತರು, ದಾನಿಗಳನ್ನು ಜಿಪುಣರು, ಸರಳಜನರನ್ನು ದುಷ್ಟರು, ಸುಂದರಶರೀರವುಳ್ಳವರನ್ನು ಕುರೂಪಿಗಳು, ಸಂತೋಷದಲ್ಲಿರುವವರನ್ನು ದುಃಖದಲ್ಲಿರುವವರು, ನಾನಾಶಾಸ್ತ್ರಪರಿಣಿತರನ್ನು ಮೂರ್ಖರು ನಿಂದಿಸಿವುದು ಸಹಜವೇ. ಹಾಗೆಯೇ ಪಂಡಿತರು ಮೂರ್ಖರಿಂದ, ಶ್ರೀಮಂತರು ಬಡವರಿಂದ, ವ್ರತನಿರತರು ಪಾಪಿಗಳಿಂದ, ಕುಲಸ್ತ್ರೀಯರು ವ್ಯಭಿಚಾರಿಣಿಯರಿಂದ ದ್ವೇಷಿಸಲ್ಪಡುತ್ತಾರೆ. ಆದ್ದರಿಂದ ಮೂರ್ಖನೇ, ನೀನು ಹಿತವೆಂದೆಣಿಸಿ ಅಹಿತವನ್ನೇ ಮಾಡಿದೆ. ಹಿತವನ್ನು ಮಾಡುವ ಮೂರ್ಖನಿಗಿಂತ ಪಂಡಿತನಾದ ಶತ್ರುವೇ ಮೇಲು. ಒಂದು ಕಥೆಯಲ್ಲಿ ಮೂರ್ಖ ಮಂಗನಿಂದ ರಾಜನು ಕೊಲ್ಲಲ್ಪಟ್ಟನು ಮತ್ತು ಕಳ್ಳನಿಂದ ಬ್ರಾಹ್ಮಣರು ರಕ್ಷಿಸಲ್ಪಟ್ಟರು

ಹೀಗೆ ನುಡಿದು ಕರಟಕನು ನೃಪಸೇವಕ ವಾನರ, ಕಳ್ಳ ಹಾಗೂ ಬ್ರಾಹ್ಮಣರ ಕಥೆಯನ್ನು ಹೇಳಿದನು.

ಹೀಗೆ ಕರಟಕ-ದಮನಕರು ಸಂವಾದ ನಡೆಸುತ್ತಿರಲು, ಸಂಜೀವಕನು ಪಿಂಗಲಕನೊಡನೆ ಸ್ವಲ್ಪಕಾಲ ಯುದ್ಧಮಾಡಿದ ನಂತರ ಪಿಂಗಲಕನ ತೀಕ್ಷ್ಣವಾದ ಉಗುರುಗಳ ಘಾತದಿಂದ ಸತ್ತು ನೆಲಕ್ಕುರುಳಿದನು. ಅವನು ಸತ್ತದ್ದನ್ನು ಕಂಡು ಪಿಂಗಲಕನು ಅವನ ಗುಣಗಳನ್ನು ನೆನೆಸಿಕೊಂಡು ಹೃದಯತುಂಬಿಬಂದವನಾಗಿ ಹೀಗೆ ನುಡಿದನು – “ಅಯ್ಯೋ, ಸಂಜೀವಕನನ್ನು ಕೊಂದು ನಾನು ಪಾಪಯುಕ್ತವಾದ ಕೆಲಸವನ್ನು ಮಾಡಿಬಿಟ್ಟೆ ಏಕೆಂದರೆ ವಿಶ್ವಾಸಘಾತಕ್ಕಿಂತ ನೀಚಕೆಲಸವು ಮತ್ತೊಂದಿಲ್ಲ. ಮಿತ್ರದ್ರೋಹಿ, ಕೃತಘ್ನ, ಹಾಗೂ ವಿಶ್ವಾಸಘಾತಕರಾದ ಮನುಷ್ಯರು ಸೂರ್ಯಚಂದ್ರರಿರುವವರೆಗೆ ನರಕವಾಸವನ್ನನುಭವಿಸುವರು. ರಾಜನು ರಾಜ್ಯವನ್ನು ಕಳೆದುಕೊಂಡರೆ ನಾಶವಾಗುತ್ತಾನೆ ಹಾಗೂ ಉತ್ತಮ ಸೇವಕರನ್ನು ಕಳೆದುಕೊಂಡರೂ ನಾಶವಾಗುತ್ತಾನೆ. ಆದರೂ ಈ ಎರಡು ನಷ್ಟಗಳನ್ನು ಒಂದೇ ರೀತಿಯಲ್ಲಿ ನೋಡತಕ್ಕದ್ದಲ್ಲ ಏಕೆಂದರೆ ರಾಜ್ಯವನ್ನು ಮತ್ತೊಮ್ಮೆ ಸಂಪಾದಿಸಬಹುದು ಆದರೆ ಉತ್ತಮರಾದ ಭೃತ್ಯರನ್ನು ಪಡೆದುಕೊಳ್ಳುವುದು ಸುಲಭವಲ್ಲ. ಹಿಂದೆ ಸಭಾಮಧ್ಯದಲ್ಲಿ ಯಾವಾಗಲೂ ಸಂಜೀವಕನನ್ನು ಹೊಗಳುತ್ತಿದ್ದೆ, ಈಗ ಅವರೆಲ್ಲರಿಗೆ ಏನು ಹೇಳಲಿ ? ಸಭೆಯಲ್ಲಿ ಒಮ್ಮೆ ಒಬ್ಬನನ್ನು ಗುಣವಂತನೆಂದು ಹೇಳಿದಮೇಲೆ, ಮಾತಿಗೆ ತಪ್ಪುವ ಭಯವಿರುವುದರಿಂದ ಆತನ ದೋಷವನ್ನು ಹೇಳಬಾರದು.”

ಹೀಗೆ ಹಲವು ವಿಧದಲ್ಲಿ ಪ್ರಲಾಪಿಸುತ್ತಿರುವ ಪಿಂಗಲಕನ ಬಳಿಗೆ ಹೋಗಿ ದಮನಕನು ಹರ್ಷದಿಂದ ಹೇಳಿದನು – “ದ್ರೋಹಿ ಹಾಗೂ ಹುಲ್ಲುತಿನ್ನುವ ಸಂಜೀವಕನನ್ನು ಕೊಂದು ತಾವು ಈ ರೀತಿ ದುಃಖ ಪಡುವುದು ಹೇಡಿಗಳು ಅನುಸರಿಸುವ ಮಾರ್ಗದಂತಿದೆ. ಭೂಪಾಲರಿಗೆ ಇದು ಯೋಗ್ಯವಲ್ಲ. ತನ್ನ ಪ್ರಾಣಕ್ಕೇ ಅಪಾಯವನ್ನುಂಟು ಮಾಡುವವರು ತಂದೆಯಾಗಲಿ, ಸೋದರನಾಗಲಿ, ಪುತ್ರನಾಗಲಿ, ಹೆಂಡತಿಯಾಗಲಿ ಅಥವಾ ಮಿತ್ರನಾಗಲಿ, ಅವರನ್ನು ಕೊಲ್ಲಬೇಕು. ಇದರಲ್ಲಿ ಯಾವ ಪಾಪವೂ ಇಲ್ಲ. ದಯಾಳುವಾದ ರಾಜ, ಸರ್ವಭಕ್ಷಿಯಾದ ಬ್ರಾಹ್ಮಣ, ಲಜ್ಜಾರಹಿತ ಸ್ತ್ರೀ, ದುಷ್ಟನಾದ ಸಹಾಯಕ, ವಿರುದ್ಧವ್ಯವಹಾರ ಮಾಡುವ ಭೃತ್ಯ, ಎಚ್ಚರಿಕೆಯಿಲ್ಲದ ಅಧಿಕಾರಿ, ಕೃತಘ್ನ – ಇವರೆಲ್ಲರನ್ನೂ ತ್ಯಜಿಸಿಬಿಡಬೇಕು. ರಾಜನೀತಿಯು ವೇಶ್ಯೆಯಂತೆ ಹಲವು ವಿರೋಧಭಾವಗಳಿಂದ ಕೂಡಿದೆ. ವೇಶ್ಯೆಯು ಹೇಗೆ ಸತ್ಯ ಹಾಗೂ ಸುಳ್ಳು ಎರಡನ್ನೂ ನುಡಿಯುವಳೋ, ಕಠೋರ ಹಾಗೂ ಪ್ರಿಯನುಡಿಗಳನ್ನು ನುಡಿಯುವಳೋ, ಹಿಂಸೆ ಹಾಗು ದಯೆಯನ್ನು ತೋರುವಳೋ, ಧನಲೋಭೀ ಹಾಗೂ ದಾನಶೀಲಳಾಗಿರುವಳೋ, ಹೆಚ್ಚಾಗಿ ಸಂಪಾದಿಸಿ ಅಷ್ಟೇ ಹೆಚ್ಚಾಗಿ ಖರ್ಚುಮಾಡುವಳೋ ಹಾಗೆ ರಾಜನೀತಿಯು ಕೂಡ ವಿರೋಧಭಾವಗಳಿಂದ ಕೂಡಿರುತ್ತದೆ. ಮಹಾತ್ಮನಾಗಿದ್ದರೂ ಯಾರಿಗೂ ತೊಂದರೆ ಕೊಡದವನನ್ನು ಯಾರೂ ಗಣನೆಗೆ ತೆಗೆದುಕೊಳ್ಳುವುದಿಲ್ಲ. ಜನರು ಕಚ್ಚುವ ಹಾವನ್ನು ಪೂಜಿಸುತ್ತಾರೆಯೇ ಹೊರತು, ಹಾವನ್ನು ಕೊಲ್ಲುವ ಗರುಡನನ್ನಲ್ಲ. ಹಾಗೆಯೇ ಬುದ್ಧಿವಂತನಂತೆ ನುಡಿಯುತ್ತಿರುವೆ ಆದರೆ ಶೋಕಿಸಬಾರದ್ದಕ್ಕೆ ಶೋಕಿಸುತ್ತಿರುವೆ. ಬುದ್ಧಿವಂತರು ಎಂದಿಗೂ ಸತ್ತವರಿಗಾಗಲೀ ಅಥವಾ ಬದುಕಿರುವವರಿಗಾಗಲೀ ದುಃಖಿಸುವುದಿಲ್ಲ.”

ಹೀಗೆ ದಮನಕನ ಬುದ್ಧಿಮಾತುಗಳನ್ನು ಕೇಳಿ ಪಿಂಗಲಕನು ಸಂಜೀವಕನ ಶೋಕವನ್ನು ಬಿಟ್ಟು, ದಮನಕನನ್ನು ಮಂತ್ರಿಯನ್ನಾಗಿಸಿಕೊಂಡು ರಾಜ್ಯವನ್ನಾಳಿದನು.

*** ಇಲ್ಲಿಗೆ ವಿಷ್ಣುಶರ್ಮವಿರಚಿತ ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದವು ಸಂಪೂರ್ಣವಾಯಿತು ***

ಎರಡೆನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯನ್ನು ಇಲ್ಲಿ ಓದಬಹುದು

 

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: