1-10-ಒಂಟೆ ಕಾಕಾದಿ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ವನಪ್ರದೇಶದಲ್ಲಿ ಮದೋತ್ಕಟವೆಂಬ ಸಿಂಹವು ವಾಸಿಸುತ್ತಿತ್ತು. ಅದಕ್ಕೆ ಚಿರತೆ, ಕಾಗೆ ಹಾಗೂ ನರಿ ಅನುಯಾಯಿಗಳಾಗಿದ್ದರು. ಒಮ್ಮೆ ಕಾಡಿನಲ್ಲಿ ಅಲೆಯುತ್ತಿದ್ದ ಅವುಗಳು ವರ್ತಕರ ಗುಂಪಿನಿಂದ ದೂರವಾದ ಕ್ರಥನಕವೆಂಬ ಒಂಟೆಯನ್ನು ನೋಡಿದವು. ಆಗ ಸಿಂಹವು – “ಈ ಪ್ರಾಣಿಯನ್ನು ಹಿಂದೆಂದೂ ನೋಡಿಲ್ಲ, ಇದು ಅರಣ್ಯವಾಸಿಯೋ ಅಥವಾ ಗ್ರಾಮವಾಸಿಯೋ ಎಂದು ತಿಳಿದುಕೊಳ್ಳಿ” ಎಂದಾಗ ಕಾಗೆಯು – “ಪ್ರಭು, ಗ್ರಾಮವಾಸಿಯಾದ ಇದು ಒಂಟೆಯೆಂಬ ತಿನ್ನಲು ಯೋಗ್ಯವಾದ ಪ್ರಾಣಿ, ಆದ್ದರಿಂದ ಇದನ್ನು ಕೊಂದುಬಿಡಿ” ಎಂದಿತು. ಆ ಸಿಂಹವು – “ಮನೆಗೆ ಬಂದವರನ್ನು ನಾನು ಕೊಲ್ಲುವುದಿಲ್ಲ. ಏಕೆಂದರೆ ವಿಶ್ವಾಸದಿಂದ ಹಾಗೂ ನಿರ್ಭಯದಿಂದ ಮನೆಗೆ ಬಂದ ಶತ್ರುವನ್ನೂ ಕೂಡ ಕೊಂದರೆ ನೂರು ಬ್ರಾಹ್ಮಣರನ್ನು ಕೊಂದ ಪಾಪವು ಬರುತ್ತದೆ. ಆದ್ದರಿಂದ ಅಭಯಪ್ರದಾನವನ್ನು ಮಾಡಿ ನನ್ನ ಬಳಿಗೆ ಕರೆದುಕೊಂಡು ಬನ್ನಿ. ಅದು ಏಕೆ ಬಂದಿದೆಯೆಂದು ತಿಳಿದುಕೊಳ್ಳುವೆನು.”

ನಂತರ ಅದರ ಅನುಚರರು ಒಂಟೆಯಲ್ಲಿ ವಿಶ್ವಾಸಮೂಡಿಸಿ, ಅಭಯಪ್ರದಾನವನ್ನು ಮಾಡಿ ಮದೋತ್ಕಟನ ಬಳಿಗೆ ಕರೆದುಕೊಂಡು ಬಂದವು. ಒಂಟೆಯು ಸಿಂಹಕ್ಕೆ ನಮಿಸಿ ಕುಳಿತುಕೊಂಡಿತು. ಮತ್ತೆ ತನ್ನ ಬಗ್ಗೆ ಕೇಳಿದಾಗ, ತನ್ನ ಹೆಸರು ಹಾಗೂ ತಾನು ಹೇಗೆ ಸಾರ್ಥದಿಂದ ದೂರವಾದೆನೆಂಬ ವೃತ್ತಾಂತವನ್ನು ತಿಳಿಸಿತು.

ಸಿಂಹ – “ಎಲೈ ಕ್ರಥನಕ, ನೀನು ಮತ್ತೆ ಗ್ರಾಮಕ್ಕೆ ಹೋಗಿ ಬಾರವನ್ನು ಹೊರುವ ಕಷ್ಟಕ್ಕೆ ಸಿಲುಕಬೇಡ. ಇಲ್ಲಿಯೇ ಮರಕತ ಮಣಿಯಂತೆ ಇರುವ ಹುಲ್ಲಿನ ಅಗ್ರಭಾಗವನ್ನು ನಿರ್ಭಯವಾಗಿ ತಿನ್ನುತ್ತಾ ಸದಾ ನನ್ನ ಬಳಿಯೇ ಇರು.” ಒಂಟೆಯು ಹಾಗೆಯೇ ಆಗಲೆಂದು ಹೇಳಿ ಅವರೊಂದಿಗೆ ನಿರ್ಭಯವಾಗಿ ಅಲೆಯುತ್ತಾ ಸುಖದಿಂದ ಇತ್ತು.

ಹೀಗಿರಲು ಒಮ್ಮೆ ಸಿಂಹಕ್ಕೆ ಬಲಿಷ್ಠವಾದ ಆನೆಯೊಂದಿಗೆ ಯುದ್ಧವಾಯಿತು. ಆಗ ಒನಕೆಯಂತಿದ್ದ ಆನೆಯ ದಂತದ ಪ್ರಹಾರದಿಂದ ಸಿಂಹವು ಗಾಯಗೊಂಡು ಹೇಗೋ ಪ್ರಾಣವನ್ನು ಉಳಿಸಿಕೊಂಡಿತು. ಶರೀರದ ದೌರ್ಬಲ್ಯದಿಂದ ಅದಕ್ಕೆ ನಡೆಯಲಾಗದಂತೆ ಆಯಿತು. ಅದು ಬೇಟೆಯಾಡದ ಕಾರಣ ಅದರ ಅನುಯಾಯಿಗಳಾದ ಕಾಗೆ ಮುಂತಾದವುಗಳು ಹಸಿವಿನಿಂದ ಬಳಲಿ ದುಃಖ ಹೊಂದಿದವು. ಆಗ ಸಿಂಹವು ಅವುಗಳಿಗೆ – “ಎಲ್ಲಾದರೂ ಯಾವುದಾದರೂ ಪ್ರಾಣಿಯು ಸಿಗುತ್ತದೆಯೋ ಎಂದು ಹುಡುಕಿ, ನಾನು ಈ ಪರಿಸ್ಥಿತಿಯಲ್ಲೂ ಕೂಡ ಅದನ್ನು ಕೊಂದು ನಿಮಗೆ ಆಹಾರವನ್ನು ಒದಗಿಸುವೆನು.” ಎಂದಿತು.

ಆಗ ಅ ನಾಲ್ವರೂ ಪ್ರಾಣಿಗಾಗಿ ಹುಡುಕಲು ತೊಡಗಿ, ಎಲ್ಲಿಯೂ ಸಿಗದಿದ್ದಾಗ ಪರಸ್ಪರ ವಿಚಾರ ಮಾಡಿಕೊಂಡರು. ನರಿಯು ಹೇಳಿತು – “ಎಲೈ ಕಾಗೆ, ಹೆಚ್ಚು ಅಲೆಯುವುದರಿಂದೇನು ಪ್ರಯೋಜನ ? ನಮ್ಮ ಪ್ರಭುವಿನ ವಿಶ್ವಾಸದಲ್ಲಿ ಕ್ರಥನಕನೆಂಬ ಒಂಟೆಯಿದೆಯಲ್ಲವೇ ? ಅದನ್ನೇ ಕೊಂದು ತಿಂದು ಹಸಿವನ್ನು ನೀಗಿಸಿಕೊಳ್ಳೋಣ.”

ಕಾಗೆ – “ನೀನು ಹೇಳಿದ್ದು ಸರಿಯೇ, ಆದರೆ ರಾಜನು ಅದಕ್ಕೆ ಅಭಯಪ್ರದಾನವನ್ನು ಮಾಡಿರುವನು, ಹಾಗಾಗಿ ಅದನ್ನು ಕೊಲ್ಲಲು ಸಾಧ್ಯವಿಲ್ಲ.”

ನರಿ – “ಎಲೈ ಕಾಗೆಯೇ, ನಾನು ಸ್ವಾಮಿಯಲ್ಲಿ ವಿಜ್ಮಾಪಿಸಿಕೊಂಡು ಸ್ವಾಮಿಯೇ ಅದನ್ನು ಕೊಲ್ಲುವಂತೆ ಉಪಾಯ ಮಾಡುವೆನು. ನೀವೆಲ್ಲರೂ ಇಲ್ಲಿಯೇ ನಿಲ್ಲಿ, ನಾನು ಹೋಗಿ ರಾಜನ ಆಜ್ಞೆಯನ್ನು ಪಡೆದು ಬರುವೆನು.”

ಹೀಗೆ ಹೇಳಿ ಅದು ಬೇಗನೆ ಸಿಂಹದ ಬಳಿಗೆ ಹೋಗಿ ಹೇಳಿತು – “ಸ್ವಾಮೀ, ಸಂಪೂರ್ಣ ಕಾಡನ್ನು ಅಲೆದು ಬಂದೆವು, ಆದರೆ ಯಾವ ಪ್ರಾಣಿಯೂ ದೊರೆಯಲಿಲ್ಲ. ಈಗೇನು ಮಾಡುವುದು ? ಹಸಿವಿನಿಂದ ಒಂದು ಹೆಜ್ಜೆಯನ್ನು ಇಡಲು ಸಾಧ್ಯವಾಗುತ್ತಿಲ್ಲ. ತಾವು ಹಸಿದಿದ್ದೀರಿ, ಹಾಗಾಗಿ ತಮ್ಮ ಒಪ್ಪಿಗೆಯಿದ್ದಲ್ಲಿ ಕ್ರಥನಕನನ್ನು ಕೊಂದು ತಿನ್ನೋಣ”

ಸಿಂಹವು ಆ ದಾರುಣವಾದ ಮಾತನ್ನು ಕೇಳಿ ಕೋಪದಿಂದ – “ನೀಚ ಪಾಪಿಯೇ, ನಿನಗೆ ಧಿಕ್ಕಾರವಿರಲಿ, ಹೀಗೆ ಮತ್ತೊಮ್ಮೆ ನುಡಿದರೆ ನಿನ್ನನ್ನೇ ಕೊಲ್ಲುವೆನು. ಒಂಟೆಗೆ ಅಭಯಪ್ರದಾನವನ್ನು ಮಾಡಿದ ಮೇಲೆ ನಾನೇ ಅದನ್ನು ಹೇಗೆ ಕೊಲ್ಲಲಿ ? ಗೋದಾನ, ಭೂದಾನ ಅಥವಾ ಅನ್ನದಾನ – ಇವೆಲ್ಲಕ್ಕೆಂತ ಅಭಯಪ್ರದಾನವೇ ಶ್ರೇಷ್ಠವೆಂದು ಬಲ್ಲವರು ಹೇಳಿದ್ದಾರೆ.”

ಅದನ್ನು ಕೇಳಿದ ನರಿಯು – “ಸ್ವಾಮೀ, ಅಭಯಪ್ರದಾನವನ್ನು ಕೊಟ್ಟು ಹತ್ಯೆ ಮಾಡಿದರೆ ನಿಮಗೆ ದೋಷವು ಬರುತ್ತದೆ. ಆದರೆ ಒಂಟೆಯು ಭಕ್ತಿಯಿಂದ ತನ್ನ ಪ್ರಾಣವನ್ನು ತಮ್ಮ ಪಾದಗಳಲ್ಲಿ ಸ್ವಯಂ ಅರ್ಪಿಸಿಕೊಂಡರೆ ಅದರಲ್ಲಿ ದೋಷವಿಲ್ಲ. ಆದ್ದರಿಂದ ಅದು ಸ್ವಯಂ ಹತ್ಯೆಗೆ ಒಪ್ಪಿಕೊಂಡಲ್ಲಿ ಅದನ್ನು ಕೊಲ್ಲಬಹುದು. ಇಲ್ಲದಿದ್ದರೆ ನಮ್ಮಲ್ಲಿ ಒಬ್ಬನನ್ನು ಕೊಂದುಬಿಡಿ. ಹಸಿವಿನಿಂದ ನಿಮ್ಮ ಪರಿಸ್ಥಿತಿ ಈ ರೀತಿಯಾಗಿರುವಾದ ಸ್ವಾಮಿಗಾಗಿ ಉಪಯೋಗವಾಗದ ಈ ಪ್ರಾಣಗಳಿಂದದಾದರೂ ಏನು ಪ್ರಯೋಜನ ? ಅಲ್ಲದೆ ನಿಮಗೆ ಏನಾದರೂ ಆದರೆ, ಆಗಲೂ ಕೂಡ ನಾವು ಪ್ರಾಣತ್ಯಾಗವನ್ನು ಮಾಡಲೇಬೇಕು. ಕುಲದಲ್ಲಿ ಮುಖ್ಯನಾದವನನ್ನು ಎಲ್ಲಾ ಪ್ರಯತ್ನಗಳಿಂದ ರಕ್ಷಿಸಿಕೊಳ್ಳಬೇಕು. ಚಕ್ರದ ನಾಭಿಯು ತುಂಡಾದಾಗ ಚಕ್ರದ ಅರೆಕಾಲುಗಳು ಹೇಗೆ ಕಳಚಿಹೋಗುತ್ತದೆಯೋ ಹಾಗೆ ಕುಲಪ್ರಧಾನನು ನಾಶವಾದಲ್ಲಿ ಕುಲವೇ ನಾಶವಾಗುತ್ತದೆ.”

ಇದಕ್ಕೆ ಒಪ್ಪಿದ ಮದೋತ್ಕಟ “ನಿಮಗೆ ಸರಿಕಂಡಂತೆ ಮಾಡಿ” ಎಂದಾಗ ನರಿಯು ಕೂಡಲೇ ತೆರಳಿ ಅನುಯಾಯಿಗಳಿಗೆ ಹೇಳಿತು – “ಸ್ವಾಮಿಯ ಪರಿಸ್ಥಿತಿ ಗಂಭೀರವಾಗಿದೆ. ಆದ್ದರಿಂದ ಹೀಗೆ ಅಲೆಯುವುದರಿಂದ ಪ್ರಯೋಜನವಿಲ್ಲ. ಅವನಿಲ್ಲದೆ ನಮ್ಮನು ಯಾರು ರಕ್ಷಿಸುವರು ? ಹಸಿವಿನಿಂದ ಸಾಯುವ ಪರಿಸ್ಥಿತಿಗೆ ಬಂದಿರುವ ಅವನಿಗೆ ನಾವೇ ಹೋಗಿ ನಮ್ಮ ಶರೀರಗಳನ್ನು ಒಪ್ಪಿ ಸಿ ಋಣಮುಕ್ತರಾಗೋಣ. ಸೇವಕನು ಇದ್ದಂತೆಯೇ ರಾಜನಿಗೆ ವಿಪತ್ತು ಬಂದರೆ ಅಂತಹ ಸೇವಕನು ಬದಕಿದ್ದರೂ ನರಕಕ್ಕೆ ಹೋಗುವನು”

ನಂತರ ಅವರೆಲ್ಲರೂ ಕಣ್ಣೀರು ಸುರಿಸುತ್ತಾ ಮದೋತ್ಕಟ ಸಿಂಹದ ಬಳಿಬಂದು ಕುಳಿತವು. ಅವರನ್ನು ನೋಡಿ ಮದೋತ್ಕಟವು – “ಯಾವುದಾದರೂ ಪ್ರಾಣಿಯನ್ನು ನೋಡಿದಿರೇನು ? “ ಎಂದಾಗ ಅವರ ಮಧ್ಯದಿಂದ ಕಾಗೆಯು ಹೇಳಿತು – “ಎಲ್ಲಾ ಕಡೆ ಅಲೆದೆವು ಆದರೆ ಯಾವ ಪ್ರಾಣಿಯೂ ಕಾಣಲಿಲ್ಲ. ಆದ್ದರಿಂದ ಇಂದು ನನ್ನನ್ನೇ ತಿಂದು ತಮ್ಮ ಪ್ರಾಣರಕ್ಷಣೆಯನ್ನು ಮಾಡಿಕೊಳ್ಳಿ. ಇದರಿಂದ ಸ್ವಾಮಿಯ ಒಳಿತಾಗುತ್ತದೆ ಹಾಗೂ ನನಗೆ ಸ್ವರ್ಗಪ್ರಾಪ್ತಿಯಾಗುತ್ತದೆ. ಯಾವ ಸೇವಕನು ರಾಜನಿಗಾಗಿ  ಭಕ್ತಿಯಿಂದ ಪ್ರಾಣತ್ಯಾಗ ಮಾಡುವನೋ ಅವನು ಜರಾಮರಣಗಳಿಲ್ಲದ ಮುಕ್ತಿಯನ್ನು ಪಡೆಯುವನು.”

ಅದನ್ನು ಕೇಳಿ ಸಿಂಹ – “ನೀನು ಅಲ್ಪಕಾಯನು. ನಿನ್ನನ್ನು ತಿನ್ನುವುದರಿಂದ ನನ್ನ ಹಸಿವು ನೀಗುವುದಿಲ್ಲ. ಅಲ್ಲದೆ ಅದರಿಂದ ಒಂದು ದೋಷವುಂಟು. ಅಲ್ಪವಾದ ಕಾಗೆಯ ಮಾಂಸವನ್ನು, ಅದೂ ಕೂಡ ನಾಯಿ ತಿಂದು ಬಿಟ್ಟದ್ದನ್ನು ತಿನ್ನುವುದರಿಂದೇನು ಪ್ರಯೋಜನ ? ಅದರಿಂದ ತೃಪ್ತಿಯುಂಟಾಗುವುದಿಲ್ಲ. ನೀನು ಸ್ವಾಮಿಭಕ್ತಿಯನ್ನು ತೋರಿಸಿರುವೆ. ಹಾಗಾಗಿ ನೀನು ಋಣಮುಕ್ತನಾದೆ ಮತ್ತು ಇಹ ಹಾಗೂ ಪರಲೋಕಗಳಲ್ಲಿ ನಿನಗೆ ಉತ್ತಮ ಗತಿಯು ಪ್ರಾಪ್ತವಾಗುವುದು.” ಆಗ ನರಿಯು ಆದರಪೂರ್ವಕವಾಗಿ ನಮಿಸಿ – “ಸ್ವಾಮೀ, ನನ್ನನು ತಿಂದು ತಮ್ಮ ಹಸಿವನ್ನು ತೀರಿಸಿಕೊಂಡು ನನಗೆ ಇಹಪರ ಲೋಕಗಳಲ್ಲಿ ಉತ್ತಮ ಸ್ಥಾನವು ದೊರಕುವಂತೆ ಮಾಡಿರಿ. ಹಣದ ಮೂಲಕ ಕೊಂಡುಕೊಂಡ ಸೇವಕನ ಪ್ರಾಣವು ಸದಾ ಸ್ವಾಮಿಯ ಅಧೀನವಾಗಿರುತ್ತದೆ. ಆದ್ದರಿಂದ ಸೇವಕನನ್ನು ಕೊಲ್ಲುವುದರಿಂದ ಸ್ವಾಮಿಗೆ ಏನೂ ದೋಷ ಬರುವುದಿಲ್ಲ.” ಎಂದಿತು.

ಅದನ್ನು ಕೇಳಿದ ಚಿರತೆಯು – “ಓಹೋ! ನೀನು ಸರಿಯಾಗಿಯೇ ಹೇಳಿರುವೆ. ಆದರೆ ನೀನೂ ಕೂಡ ಅಲ್ಪಶರೀರಿ, ಸ್ವಜಾತಿಯವನು ಹಾಗೂ ಉಗುರುಗಳೇ ಆಯುಧವಾಗಿರುವ ನಿನ್ನನ್ನು ತಿನ್ನುವುದು ಸರಿಯಲ್ಲ. ಬುದ್ಧಿವಂತನು ಪ್ರಾಣವು ಕುತ್ತಿಗೆಗೆ ಬಂದರೂ(ಅಂದರೆ ಸಾಯುವ ಪರಿಸ್ಥಿತಿ ಬಂದರೂ) ಅಭಕ್ಷ್ಯವಾದುದನ್ನು ಭಕ್ಷಿಸಬಾರದು, ವಿಶೇಷವಾಗಿ ಅಂತಹ ಭಕ್ಷ್ಯವು ಸ್ವಲ್ಪವೇ ಇದ್ದಾಗ ಭಕ್ಷಿಸಲೇಬಾರದು. ಹಾಗೆ ಮಾಡಿದರೆ ಇಹಪರಗಳೆರಡೂ ನಷ್ಟವಾಗುವವು. ನೀನು ಎಷ್ಟು ಕುಲೀನನೆಂದು ತೋರಿಸಿಕೊಟ್ಟಿರುವೆ. ಅಥವಾ ಈ ಉಕ್ತಿಯು ಸರಿಯಾಗಿಯೇ ಇದೆ – ಪ್ರಾರಂಭದಲ್ಲಿ, ಮಧ್ಯದಲ್ಲಿ ಮತ್ತು ಕೊನೆಯಲ್ಲಿ ಕೂಡ (ಅಂದರೆ ಎಂದೆಂದಿಗೂ) ಕುಲೀನರು ತಮ್ಮ ಒಳ್ಳೆಯತನವನ್ನು ಬಿಟ್ಟು ನಡೆಯುವುದಿಲ್ಲ. ಆದ್ದರಿಂದಲೇ ರಾಜರು ಅಂತಹ ಕುಲೀನರನ್ನು ತಮ್ಮ ಬಳಿ ಇಟ್ಟುಕೊಳ್ಳುತ್ತಾರೆ. ಆದ್ದರಿಂದ ನೀನು ಈಗ ಪಕ್ಕಕ್ಕೆ ಸರಿ, ನಾನು ಪ್ರಭುವನ್ನು ನಿವೇದಿಸಿಕೊಳ್ಳುವೆನು.” ಎಂದಿತು.

ಚಿರತೆಯು ಮದೋತ್ಕಟ ಸಿಂಹಕ್ಕೆ ನಮಸ್ಕರಿಸಿ ಹೇಳಿತು – “ಸ್ವಾಮೀ, ಇಂದು ನನ್ನ ಪ್ರಾಣದಿಂದ ತಮ್ಮ ಪ್ರಾಣವನ್ನು ರಕ್ಷಿಸಿಕೊಳ್ಳಿ. ನನಗೆ ಅಕ್ಷಯವಾದ ಸ್ವರ್ಗವಾಸವು ಸಿಗಲಿ, ಭೂತಲದಲ್ಲಿ ನನ್ನ ಕೀರ್ತಿಯನ್ನು ಹೆಚ್ಚುಮಾಡಿ, ಈ ವಿಷಯದಲ್ಲಿ ಸಂದೇಹ ಮಾಡಬೇಡಿ. ಸ್ವಾಮಿಯನ್ನು ಅನುಸರಿಸುವ ಯಾವ ಭೃತ್ಯನು ಸ್ವಾಮಿಗಾಗಿ ತನ್ನ ಪ್ರಾಣಗಳನ್ನು ಕೊಡುವನೋ ಅವನಿಗೆ ಧರಣಿಯಲ್ಲಿ ಕೀರ್ತಿಯು ಹಾಗೂ ಅಕ್ಷಯವಾದ ಸ್ವರ್ಗವು ಪ್ರಾಪ್ತವಾಗುತ್ತದೆ.”

ಇದನ್ನೆಲ್ಲಾ ಕೇಳಿ ಕ್ರಥನಕ ಒಂಟೆಯು – “ಇವರೆಲ್ಲರೂ ಒಳ್ಳೆಯ ಮಾತುಗಳನ್ನಾಡಿರುವರು. ಯಾರನ್ನೂ ಸ್ವಾಮಿಯು ಕೊಲ್ಲಲಿಲ್ಲ. ಆದ್ದರಿಂದ ನಾನೂ ಕೂಡ ಸಂದರ್ಭೋಚಿತ ಮಾತನ್ನು ಆಡುವೆನು, ಈ ಮೂವರೂ ನನ್ನನ್ನು ಸಮರ್ಥಿಸುವರು” ಎಂದು ಯೋಚಿಸಿ ಚಿರತೆಗೆ ಹೇಳಿತು – “ನೀನು ಸತ್ಯವನ್ನೇ ನುಡಿದಿರುವೆ, ಆದರೆ ನೀನೂ ಕೂಡ ಉಗುರುಗಳನ್ನು ಆಯುಧವನ್ನಾಗಿ ಉಳ್ಳ ಪ್ರಾಣಿ. ಆದ್ದರಿಂದ ಸ್ವಾಮಿಯು ನಿನ್ನನ್ನು ಹೇಗೆ ತಿನ್ನಲು ಸಾಧ್ಯ ? ಆದ್ದರಿಂದ ಸರಿದು ನಿಲ್ಲು, ನಾನು ಸ್ವಾಮಿಯನ್ನು ಕೇಳಿಕೊಳ್ಳುವೆನು”.

ನಂತರ ಕ್ರಥನಕವು ಸಿಂಹಕ್ಕೆ ನಮಿಸಿ ಹೇಳಿತು – “ಸ್ವಾಮೀ, ಇವರಾರನ್ನೂ ನೀವು ತಿನ್ನಲಾಗದು. ಆದ್ದರಿಂದ ನನ್ನನ್ನು ತಿಂದು ಹಸಿವನ್ನು ನೀಗಿಸಿಕೊಳ್ಳಿ, ನನಗೆ ಇದರಿಂದ ಎರಡು ಲೋಕಗಳಲ್ಲಿಯೂ ಉತ್ತಮ ಸ್ಥಿತಿ ಪ್ರಾಪ್ತವಾಗಲಿ. ಯಜ್ಞಮಾಡುವವರೂ ಹಾಗೂ ಯೋಗಿಗಳು ಯಾವ ಗತಿಯನ್ನು ಪಡೆಯಲಾಗುವುದಿಲ್ಲವೋ ಅಂತಹ ಉತ್ತಮ ಗತಿಯನ್ನು ರಾಜನಿಗಾಗಿ ಪ್ರಾಣತೆತ್ತ ಸೇವಕೋತ್ತಮರು ಪಡೆಯುವರು.”

ಹೀಗೆ ಹೇಳಲು ನರಿ ಮತ್ತು ಚಿರತೆಯು ಒಂದೊಂದು ಕಡೆಯಿಂದ ಒಂಟೆಯ ಹೊಟ್ಟೆಯನ್ನು ಸೀಳಿಬಿಟ್ಟವು. ಕಾಗೆಯು ಅದರ ಕಣ್ಣುಗಳನ್ನು ಕುಕ್ಕಿ ತೆಗೆದುಬಿಟ್ಟಿತು. ನಂತರ ನೀಚ ಪಾಂಡಿತ್ಯವುಳ್ಳ ಆ ಪ್ರಾಣಿಗಳೆಲ್ಲಾ ಸೇರಿ ಒಂಟೆಯನ್ನು ತಿಂದವು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: