1-11-ಟಿಟ್ಟಿಭ – ಸಮುದ್ರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಸಮುದ್ರತೀರದ ಪ್ರದೇಶದಲ್ಲಿ ಟಿಟ್ಟಿಭ ಪಕ್ಷಿ ದಂಪತಿಗಳು ವಾಸಿಸುತ್ತಿದ್ದವು. ಕಾಲಾಂತರದಲ್ಲಿ ಋತುಸಮಯವು ಬಂದಾಗ ಟಿಟ್ಟಿಭೆಯು (ಹೆಣ್ಣು ಪಕ್ಷಿ) ಗರ್ಭವತಿಯಾಯಿತು. ಪ್ರಸವಕಾಲ ಪ್ರಾಪ್ತವಾದಾಗ ಅದು ಟಿಟ್ಟಿಭಕ್ಕೆ ಹೇಳಿತು – “ಎಲೈ ಪ್ರಿಯ, ನನ್ನ ಪ್ರಸವಕಾಲ ಸಮೀಪಿಸಿದೆ, ಆದ್ದರಿಂದ ನಾನು ಮೊಟ್ಟೆಗಳನ್ನಿಡಲು ತೊಂದರೆಯಿಲ್ಲದ ಸೂಕ್ತ ಜಾಗವನ್ನು ಹುಡುಕು”.

ಟಿಟ್ಟಿಭ – “ಭದ್ರೆ, ಈ ಸಮುದ್ರ ಪ್ರದೇಶವು ರಮಣೀಯವಾಗಿದೆ, ಇಲ್ಲಿಯೇ ಹೆರಿಗೆಕಾರ್ಯವನ್ನು ಮಾಡೋಣ”

ಟಿಟ್ಟಿಭೆ – “ಪೂರ್ಣಿಮೆಯ ದಿನದಂದು ಸಮುದ್ರದ ಅಲೆಗಳು ಮದಗಜವನ್ನು ಕೂಡ ಎಳೆದುಕೊಂಡು ಹೋಗುವಷ್ಟು ಜೋರಾಗಿರುತ್ತದೆ. ಆದ್ದರಿಂದ ಯೋಗ್ಯವಾದ ಬೇರೆ ಜಾಗವನ್ನು ಹುಡುಕು.”

ಅದನ್ನು ಕೇಳಿ ಟಿಟ್ಟಿಭವು ನಕ್ಕು ಹೇಳಿತು – “ಪ್ರಿಯೆ, ನೀನು ಹೇಳುತ್ತಿರುವುದು ಸರಿಯಲ್ಲ. ನನ್ನ ಸಂತತಿಯನ್ನು ಅಪಹರಿಸುವಷ್ಟು ಶಕ್ತಿ ಈ ಸಮುದ್ರಕ್ಕಿದೆಯೇನು ? ನೀನು ಈ ಮಾತನ್ನು ಕೇಳಿಲ್ಲವೇನು ? ಹೊಗೆಯಿಲ್ಲದೆ ಉರಿಯುತ್ತಿರುವ ಮಹಾಭಯಂಕರವಾದ ಅಗ್ನಿಯನ್ನು ಮೂಢಮನುಷ್ಯನು ಹೇಗೆ ಪ್ರವೇಶಿಸುವುದಿಲ್ಲವೋ ಹಾಗೆ ತಡೆಯಿಲ್ಲದೆ ಆಕಾಶದಲ್ಲಿ ಹಾರುವ ಹಕ್ಕಿಯನ್ನು ಯಾರು ತಾನೇ ತಡೆಯಬಲ್ಲರು ? ಮತ್ತಗಜದ ಕುಂಭಸ್ಥಳವನ್ನು ಬಗೆದ ಶ್ರಮದಿಂದ ನಿದ್ರಿಸುತ್ತಿರುವ ಅಂತಕನಂತಿರುವ ಸಿಂಹವನ್ನು ಯಮಲೋಕದ ದರ್ಶನವನ್ನು ಇಚ್ಛಿಸುವ ಯಾರು ತಾನೇ ಎಬ್ಬಿಸುವರು ? ಯಾರು ತಾನೇ ಸ್ವಯಂ ಯಮಲೋಕಕ್ಕೆ ತೆರಳಿ ನಿರ್ಭಯದಿಂದ ಯಮನಿಗೆ ‘ನಿನಗೆ ಶಕ್ತಿಯಿದ್ದರೆ ನನ್ನ ಪ್ರಾಣಗಳನ್ನು ಅಪಹರಿಸು’ ಎಂದು ಹೇಳುವರು. ಶೀತಲತೆಯಿಂದ ಕೂಡಿದ ಬೆಳಗ್ಗಿನ ಗಾಳಿಯಿಂದ ಶೀತಲತೆಯನ್ನು ದೂರಮಾಡುವ ಕಾರ್ಯವನ್ನು ಗುಣದೋಷಗಳ ವಿವೇಕವುಳ್ಳ ಮನುಷ್ಯನು ಮಾಡುವನೇ ? ಆದ್ದರಿಂದ ನಿಶ್ಚಿಂತೆಯಿಂದ ಇಲ್ಲೇ ಮೊಟ್ಟೆಗಳನ್ನು ಇಡು. ಏಕೆಂದೆರೆ ಸೋಲಿನ ಭಯದಿಂದ ಯಾರು ತನ್ನ ಸ್ವಸ್ಥಾನವನ್ನು ತ್ಯಜಿಸುವನೋ ಅಂತವನಿಗೆ ಜನ್ಮಕೊಟ್ಟ ತಾಯಿಯನ್ನು ಪುತ್ರವತೀ ಎಂದರೆ ಮತ್ತೆ ಯಾರನ್ನು ಬಂಜೆ ಎನ್ನಬೇಕು ?”

ಈ ಮಾತುಗಳನ್ನು ಕೇಳಿದ ಸಮುದ್ರವು ಚಿಂತಿಸಿತು – “ಓಹೋ! ಈ ಹುಳುವಿನಂತಿರುವ ಪಕ್ಷಿಗೆ ಎಂತಹ ಗರ್ವ! ಆಕಾಶವು ತುಂಡಾಗಿ ಬಿದ್ದರೆ ಹಿಡಿದುಕೊಳ್ಳುವೆನೆಂಬ ಭ್ರಾಂತಿಯಿಂದ ಕಾಲುಗಳನ್ನು ಮೇಲೆ ಮಾಡಿ ಮಲಗುವ ಟಿಟ್ಟಿಭಕ್ಕಿರುವಂತ ಗರ್ವವು ಬೇರೆಲ್ಲೂ ಕಾಣಸಿಗುವುದಿಲ್ಲ. ಆದ್ದರಿಂದ ಕುತೂಹಲಕ್ಕಾದರೂ ಇದರ ಮೊಟ್ಟೆಗಳನ್ನು ಅಪಹರಿಸಿ ಇದರ ಸಾಮರ್ಥ್ಯವನ್ನು ನೋಡಬೇಕು”

ಮೊಟ್ಟ್ಟೆಯಿಟ್ಟ ನಂತರ ಒಮ್ಮೆ ಟಿಟ್ಟಿಭ ದಂಪತಿಗಳು ಆಹಾರವನ್ನು ಹುಡುಕಲು ಹೋಗಿದ್ದಾಗ ಸಮುದ್ರವು ಅಲೆಗಳನ್ನು ಎಬ್ಬಿಸಿ ಅವುಗಳ ಮೊಟ್ಟೆಯನ್ನು ಅಪಹರಿಸಿತು. ಹಿಂದಿರುಗಿ ಬಂದಾಗ ಮೊಟ್ಟೆಗಳು ಇಲ್ಲದಿರುವುದನ್ನು ನೋಡಿದ ಟಿಟ್ಟಿಭೆಯು ಪ್ರಲಾಪಿಸುತ್ತಾ ಟಿಟ್ಟಿಭಕ್ಕೆ ಹೇಳಿತು  “ಎಲೈ ಮೂರ್ಖನೇ, ನಾನು ಮೊದಲೇ ಹೇಳಿದ್ದೆ. ಸಮುದ್ರದ ಅಲೆಗಳಿಂದ ಮೊಟ್ಟೆಯು ನಾಶವಾಗುವುದು, ಬೇರೆ ಕಡೆಗೆ ಹೋಗೋಣ ಎಂದು. ಆದರೆ ಮೌಢ್ಯದಿಂದ ಮತ್ತು ಅಹಂಕಾರದಿಂದ ನನ್ನ ಮಾತನ್ನು ನೀನು ಕೇಳಲಿಲ್ಲ. ಯಾರು ಹಿತವನ್ನು ಬಯಸುವ ಮಿತ್ರರ ಮಾತನ್ನು ಕೇಳುವುದಿಲ್ಲವೋ ಅವನು ಕಟ್ಟಿಗೆಯಿಂದ ಬಿದ್ದ ಆಮೆಯಂತೆ ನಾಶಹೊಂದುತ್ತಾನೆ

ಹೀಗಿ ಹೇಳಿದ ಟಿಟ್ಟಿಭೆಯು ಕಟ್ಟಿಗೆಯಿಂದ ಬಿದ್ದ ಆಮೆಯ ಕಥೆಯನ್ನು ಹೇಳಿತು.

ಮುಂದುವರೆಸುತ್ತಾ ಟಿಟ್ಟಿಭೆಯು – “ಅನಾಗತವಿಧಾತಾ (ಅಪಾಯವು ಬರುವ ಮೊದಲೇ ಪರಿಹಾರವನ್ನು ಹುಡುಕುವವನು) ಮತ್ತು ಪ್ರತ್ಯುಪನ್ನಮತಿ (ಅಪಾಯವು ಬಂದ ಕೂಡಲೇ ಪರಿಹಾರವನ್ನು ಹುಡುಕುವವನು) – ಈ ಇಬ್ಬರೂ ಸಂತೋಷದಿಂದ ಇರುವರು. ಆದರೆ ಯದ್ಭವಿಷ್ಯನು (ಆದದ್ದಾಗಲಿ ಎನ್ನುವವನು) ನಾಶಹೊಂದುವನು.” ಎಂದು ಹೇಳಿ ಮಿತ್ರರ ಮಾತನ್ನು ಕೇಳದೆ ಹಾಳಾದ ಮೂರು ಮೀನುಗಳ ಕಥೆಯನ್ನು ಹೇಳಿತು.

ಕಥೆಯನ್ನು ಕೇಳಿದ ಟಿಟ್ಟಿಭವು – “ನನ್ನನ್ನೇನು ಯದ್ಭವಿಷ್ಯನಂತೆ ಎಂದು ತಿಳಿದಿದ್ದೀಯೇ ? ಹೇಗೆ ನನ್ನ ಬುದ್ಧಿಪ್ರಭಾವದಿಂದ ಈ ದುಷ್ಟ ಸಮುದ್ರವನ್ನು ನನ್ನ ಕೊಕ್ಕುಗಳಿಂದ ಒಣಗಿಸಿಬಿಡುತ್ತೇನೆ ಎಂದು ನೋಡು” ಎಂದು ನುಡಿಯಿತು.

ಟಿಟ್ಟಿಭೆ – “ಓಹೋ! ಸಮುದ್ರದೊಂದಿಗೇನು ನಿನ್ನ ಯುದ್ಧ ? ಅದರ ಮೇಲೆ ಕೋಪವು ತರವಲ್ಲ. ಅತಿಯಾಗಿ ಉರಿಯುತ್ತಿರುವ ಮಣ್ಣಿನ ಪಾತ್ರೆಯು ಹೇಗೆ ತನ್ನನ್ನು ತಾನೇ ಸುಟ್ಟುಕೊಳ್ಳುತ್ತದೆಯೋ ಹಾಗೆ ದುರ್ಬಲ ಪುರುಷರ ಕೋಪವು ಅವರದೇ ವಿನಾಶಕ್ಕೆ ಕಾರಣವಾಗುತ್ತದೆ. ಯಾರು ತನ್ನ ಮತ್ತು ಶತ್ರುವಿನ ಶಕ್ತಿಯನ್ನು ತಿಳಿದುಕೊಳ್ಳದೆ ಕೇವಲ ಉತ್ಸಾಹದಿಂದ ಶತ್ರುಗಳನ್ನು ಎದುರಿಸುವನೋ ಆತನು ಬೆಂಕಿಗೆ ಬೀಳುವ ಪತಂಗದಂತೆ ನಾಶವಾಗಿಹೋಗುವನು.”

ಟಿಟ್ಟಿಭ – “ಪ್ರಿಯೆ, ಹಾಗೆ ಹೇಳಬೇಡ. ಯಾರಲ್ಲಿ ಉತ್ಸಾಹಶಕ್ತಿಯಿದೆಯೋ ಅವರು ಸಣ್ಣವರೇ ಆದರೂ ಬಲವಂತರನ್ನೂ ಕೂಡ ಆಕ್ರಮಣ ಮಾಡುತ್ತಾರೆ. ರಾಹುವು ಪೂರ್ಣಚಂದ್ರನ ಮೇಲೆ ಹೇಗೆ ಆಕ್ರಮಿಸುವನೋ ಹಾಗೆ ಕೋಪಗೊಂಡವನು ತನಗಿಂತ ವಿಶೇಷವಾದ ಶಕ್ತಿಯಿರುವ ಶತ್ರುವನ್ನು ಎದುರಿಸುವನು. ತನಗಿಂತ ಪ್ರಮಾಣದಲ್ಲಿ ದೊಡ್ಡದಿರುವ, ಗಂಡಸ್ಥಳದಿಂದ ಮದಜಲವು ಸುರಿಯುತ್ತಿರುವ ಆನೆಯ ತಲೆಯ ಮೇಲೆ ಸಿಂಹವು ತನ್ನ ಕಾಲುಗಳನ್ನಿಡುತ್ತದೆ. ಬಾಲಸೂರ್ಯನ ಕಿರಣಗಳು ಪರ್ವತಗಳ ಮೇಲೆ ಬೀಳುವುದಿಲ್ಲವೇ ? ತೇಜಸ್ಸಿನಿಂದ ಕೂಡಿದವರ ವಯಸ್ಸು ಪರಿಗಣನೆಗೆ ಬರುತ್ತದೆಯೇ ? ದೊಡ್ಡದಾದ ಆನೆಯನ್ನು ಚಿಕ್ಕದಾದ ಅಂಕುಶದಿಂದ ವಶಮಾಡಿಕೊಳ್ಳಲಾಗದೇ ? ಅಗಾಧವಾದ ಕತ್ತಲನ್ನು ಒಂದು ಸಣ್ಣ ದೀಪವು ಹೋಗಲಾಡಿಸುವುದಿಲ್ಲವೇ ? ಗಾತ್ರದಲ್ಲಿ ಸಣ್ಣದಾದ ಸಿಡಿಲಿನ ಹೊಡೆತದಿಂದ ಪರ್ವತಗಳು ಬಿದ್ದುಹೋಗುತ್ತವೆ. ಆದ್ದರಿಂದ ತೇಜಸ್ವಿಯಾದವನು ಬಲವಂತನಾಗಿ ಶೋಭಿಸುತ್ತಾನೆಯೇ ಹೊರತು ದೊಡ್ಡದಾದ ಆಕಾರದಿಂದೇನೂ ಪ್ರಯೋಜನವಿಲ್ಲ. ಆದ್ದರಿಂದ ನನ್ನ ಈ ಕೊಕ್ಕಿನಿಂದ ಈ ಸಮಸ್ತ ಸಮುದ್ರದ ಜಲವನ್ನು ಒಣಗಿಸಿಬಿಡುವೆನು.”

ಟಿಟ್ಟಿಭೆ – “ಕಾಂತ, ಈ ಸಮುದ್ರವನ್ನು ನಿತ್ಯವೂ ಒಂಭೈನೂರು ಉಪನದಿಗಳಿಂದ ಕೂಡಿದ ಗಂಗೆ ಹಾಗೂ ಒಂಭೈನೂರು ಉಪನದಿಗಳಿಂದ ಕೂಡಿದ ಸಿಂಧುವು ಪ್ರವೇಶಿಸುತ್ತವೆ. ಹೀಗೆ ಹದಿನೆಂಟು ನೂರು ನದಿಗಳು ಪ್ರವೇಶಿಸಿವ ಈ ಸಮುದ್ರವನ್ನು ಬಿಂದುಮಾತ್ರವನ್ನು ಹೊರಲು ಸಮರ್ಥವಿರುವ ನಿನ್ನೀ ಕೊಕ್ಕಿನಿಂದ ಹೇಗೆ ಒಣಗಿಸುವೆ ? ಆದ್ದರಿಂದ ನಂಬಲರ್ಹವಲ್ಲದ ಮಾತಿನಿಂದೇನು ಪ್ರಯೋಜನ ? “

ಟಿಟ್ಟಿಭ – “ಪ್ರಿಯೆ, ಉತ್ಸಾಹವೇ ಸಂಪತ್ತಿಗೆ ಮೂಲ, ಅಲ್ಲದೇ ನನ್ನ ಕೊಕ್ಕು ಲೋಹದಂತೆ ಕಠಿಣವಾಗಿದೆ. ದಿನರಾತ್ರಿಗಳು ಕೊನೆಯಿಲ್ಲದಂತಿವೆ. ಸಮುದ್ರವನ್ನು ಒಣಗಿಸುವುದು ಕಷ್ಟವೇನು ? ಎಲ್ಲಿಯವರೆಗೆ ಮನುಷ್ಯನು ಪೌರುಷವನ್ನು ತೋರುವುದಿಲ್ಲವೋ ಅಲ್ಲಿಯವರೆಗೆ ಅವನಿಗೆ ಉನ್ನತಪದವಿಯು ಪ್ರಾಪ್ತವಾಗುವುದಿಲ್ಲ. ತುಲಾ ರಾಶಿಯನ್ನು ತಲುಪಿದಾಗಲ್ಲವೇ ಸೂರ್ಯನು ಮೋಡಗಳನ್ನು ಗೆಲ್ಲುವುದು ?”

ಟಿಟ್ಟಿಭೆ – “ನೀನು ನಿಜವಾಗಿಯೂ ಸಮುದ್ರದೊಂದಿಗೆ ಯುದ್ಧದಲ್ಲಿ ತೊಡಗುವುದಾದರೆ, ಬೇರೆ ಪಕ್ಷಿಗಳನ್ನು ಕರೆದು ಮಿತ್ರರೊಂದಿಗೆ ಸೇರಿಕೊಂಡು ಯುದ್ಧವನ್ನು ಹೂಡು. ಹುಲ್ಲಿನಿಂದ ಮಾಡಿದ ಹಗ್ಗದಿಂದ ಹೇಗೆ ಆನೆಯನ್ನೂ ಕೂಡ ಕಟ್ಟಬಹುದೋ ಹಾಗೆ ದುರ್ಬಲರಾದವರು ಗುಂಪುಗೂಡಿದಾಗ ಅವರನ್ನು ಜಯಿಸುವುದು ಕಷ್ಟಕರವು. ಗುಬ್ಬಚ್ಚಿಯು ಮರಕುಟಿಕದೊಂದಿಗೆ ಸೇರಿತು, ನೊಣವು ಕಪ್ಪೆಯೊಂದಿಗೆ ಸೇರಿತು. ಇವರೆಲ್ಲರ ವಿರೋಧದಿಂದ ಆನೆಯೊಂದು ಸಾವನ್ನಪ್ಪಿತು.”

ಹೀಗೆ ನುಡಿದ ಟಿಟ್ಟಿಭೆಯು ಗುಬ್ಬಚ್ಚಿ ದಂಪತಿ ಹಾಗೂ ಆನೆಯ ಕಥೆಯನ್ನು ಹೇಳಿತು.

ಟಿಟ್ಟಿಭ – “ಭದ್ರೆ, ಹಾಗೆಯೇ ಆಗಲಿ. ಸ್ನೇಹಿತರೊಂದಿಗೆ ಸೇರಿ ಸಮುದ್ರವನ್ನು ಒಣಗಿಸುವೆನು”. ಹೀಗೆ ನಿರ್ಧರಿಸಿ ಬಕ, ಹಂಸ, ಮಯೂರ ಮೊದಲಾದ ಪಕ್ಷಿಗಳನ್ನು ಸೇರಿಸಿ – “ಬಂಧುಗಳೆ, ಸಮುದ್ರವು ನಮ್ಮ ಮೊಟ್ಟೆಗಳನ್ನು ಅಪಹರಿಸುವ ಮೂಲಕ ನಮಗೆ ದುಃಖವನ್ನುಂಟುಮಾಡಿದೆ. ಆದ್ದರಿಂದ ಈ ಸಮುದ್ರವನ್ನು ಒಣಗಿಸುವ ಉಪಾಯವನ್ನು ಯೋಚಿಸಿ” ಎಂದಿತು.

ಅವುಗಳೆಲ್ಲಾ ಮಂತ್ರಾಲೋಚನೆ ಮಾಡಿ ಹೀಗೆ ಹೇಳಿದವು – “ಸಮುದ್ರವನ್ನು ಒಣಗಿಸುವುದರಲ್ಲಿ ನಾವು ಶಕ್ತರಲ್ಲ, ಆದ್ದರಿಂದ ವ್ಯರ್ಥ ಪ್ರಯಾಸವೇಕೆ ? ಬಲವಿಲ್ಲದವನು ಗರ್ವದಿಂದ ಬಲಶಾಲಿಯಾದ ಶತ್ರುವಿನೊಂದಿಗೆ ಯುದ್ಧಕ್ಕೆ ತೆರಳಿದರೆ ದಂತಭಗ್ನವಾದ ಆನೆಯಂತೆ ಹಿಂದಿರುಗಬೇಕಾಗುತ್ತದೆ. ನಮ್ಮ ಸ್ವಾಮಿ ಗರುಡನಿದ್ದಾನೆ. ನಮ್ಮ ಈ ಅಪಮಾನದ ಕಾರಣವನ್ನು ಅವನಲ್ಲಿ ನಿವೇದಿಸಿಕೊಳ್ಳೋಣ. ಅವನು ತನ್ನವರ ಅಪಮಾನದಿಂದ ಕೋಪಗೊಂಡು ಶತ್ರುವಿನಲ್ಲಿ ಪ್ರತೀಕಾರವನ್ನು ಮಾಡುವನು. ಒಂದುವೇಳೆ ಅವನು ಉಪೇಕ್ಷೆ ಮಾಡಿದರೂ ಚಿಂತೆಯಿಲ್ಲ. ಏಕೆಂದರೆ ಹೃದಯಸಂಬಂಧವುಳ್ಳ ಮಿತ್ರನಲ್ಲಿ, ಗುಣವಂತನಾದ ಸೇವಕನಲ್ಲಿ, ಅನುಸರಿಸುವ ಪತ್ನಿಯಲ್ಲಿ ಅಥವಾ ಶಕ್ತಿಶಾಲಿಯಾದ ಸ್ವಾಮಿಯಲ್ಲಿ ದುಃಖವನ್ನು ನಿವೇದಿಸಿಕೊಂಡರೆ, ದುಃಖವು ಕಡಿಮೆಯಾಗುತ್ತದೆ. ಆದ್ದರಿಂದ ನಮ್ಮ ಸ್ವಾಮಿಯಾದ ಗರುಡನ ಬಳಿಗೆ ಹೋಗೋಣ”.

ನಂತರ ಅವುಗಳೆಲ್ಲಾ ದುಃಖದಿಂದ ಅಳುತ್ತಾ ಗರುಡನ ಬಳಿಗೆ ಹೋಗಿ ಕರುಣಾಸ್ವರದಿಂದ – “ಅನರ್ಥವಾಯಿತು! ಅನರ್ಥವಾಯಿತು! ನೀವು ನಮ್ಮ ಒಡೆಯನಾಗಿರುವಾಗ ಸುಶೀಲನಾದ ಈ ಟಿಟ್ಟಿಭದ ಮೊಟ್ಟೆಗಳನ್ನು ಸಮುದ್ರವು ಅಪಹರಿಸಿದೆ. ನಮ್ಮ ಪಕ್ಷಿಕುಲವು ನಾಶವಾಗಿಹೋಯಿತು. ಹೀಗೆಯೇ ಬಿಟ್ಟರೆ, ಬೇರೆಯವರನ್ನೂ ಕೂಡ ಸಮುದ್ರವು ಸ್ವೇಚ್ಛೆಯಿಂದ ಕೊಲ್ಲುತ್ತದೆ. ಒಬ್ಬನು ಮಾಡಿದ ಕೆಟ್ಟಕೆಲಸವನ್ನು ನೋಡಿ ಬೇರೆಯವರೂ ಕೂಡ ಅನುಸರಿಸುವರು. ಲೋಕವು ಮೌಢ್ಯದಿಂದ ಮುಂದೆ ಹೋಗುವವನನ್ನು ಅನುಸರಿಸುತ್ತದೆಯೇ ಹೊರತು ವಿಚಾರ ಮಾಡುವುದಿಲ್ಲ. ಕಪಟಿಗಳು, ಕಳ್ಳರು, ದುಷ್ಟರು ಮತ್ತು ಕ್ರೂರಿಗಳು ಕಪಟತೆ ಹಾಗೂ ಮೋಸದಿಂದ ಪ್ರಜೆಗಳನ್ನು ಪೀಡಿಸುತ್ತಾರೆ. ರಾಜನು ಅವರಿಂದ ಪ್ರಜೆಗಳನ್ನು ರಕ್ಷಿಸಬೇಕು. ಹೀಗೆ ರಕ್ಷಿಸಿದ ಪ್ರಜೆಗಳ ಧರ್ಮದ ಆರನೆಯ ಭಾಗ ರಾಜನಿಗೆ ಪ್ರಾಪ್ತವಾಗುತ್ತದೆ. ರಕ್ಷಿಸದಿದ್ದಲ್ಲಿ ಪ್ರಜೆಗಳ ಅಧರ್ಮದ ಆರನೆಯ ಭಾಗವು ರಾಜನಿಗೆ ಸೇರುತ್ತದೆ. ಪ್ರಜಾಪೀಡನೆಯ ಸಂತಾಪದಿಂದ ಉಂಟಾದ ಅಗ್ನಿಯು ರಾಜನ ಸಂಪತ್ತು, ಕುಲ ಹಾಗೂ ಆತನ ಪ್ರಾಣಗಳನ್ನು ಸುಟ್ಟ ಮೇಲೆಯೇ ಶಾಂತವಾಗುತ್ತದೆ. ರಾಜನು ಬಂಧುಗಳಿಲ್ಲದವರಿಗೆ ಬಂಧುವಿದ್ದಂತೆ, ಕಣ್ಣುಗಳಿಲ್ಲದವರಿಗೆ ಕಣ್ಣುಗಳಿದ್ದಂತೆ ಮತ್ತು ನ್ಯಾಯಮಾರ್ಗದಲ್ಲಿ ನಡೆಯುವವರಿಗೆ ತಂದೆತಾಯಿಗಳಿದ್ದಂತೆ. ಹೂವಾಡಿಗನು ಹೇಗೆ ಹೂವಿನ ಮೊಗ್ಗುಗಳನ್ನು ನೀರು ಹಾಕಿ ರಕ್ಷಿಸುವನೋ, ಫಲವನ್ನು ಬಯಸುವ ರಾಜನು ಹಾಗೆಯೇ ಪ್ರಜೆಗಳನ್ನು ದಾನ ಹಾಗು ಗೌರವಪ್ರದಾನಗಳಿಂದ ಪಾಲಿಸಬೇಕು. ಸೂಕ್ಷ್ಮವಾದ ಮೊಳಕೆಯೊಡೆದ ಬೀಜವನ್ನು ಪ್ರಯತ್ನದಿಂದ ರಕ್ಷಿಸಿಕೊಂಡಾಗ ಅದು ಮುಂದೆ ಮರವಾಗಿ ಹೇಗೆ ಫಲವನ್ನು ಕೊಡುತ್ತದೆಯೋ ಹಾಗೆ ಸರಿಯಾಗಿ ಸಂರಕ್ಷಿಸಲ್ಪಟ್ಟ ಪ್ರಜೆಗಳಿಂದ ಫಲವನ್ನು ನಿರೀಕ್ಷಿಸಬಹುದು. ಚಿನ್ನ, ಧಾನ್ಯ, ರತ್ನ, ವಿವಿಧ ವಾಹನಗಳು ಮತ್ತೆ ಬೇರೆಲ್ಲವೂ ಕೂಡ ರಾಜನಿಗೆ ಪ್ರಜೆಗಳಿಂದಲೇ ಪ್ರಾಪ್ತವಾಗುತ್ತದೆ.”

ಅದನ್ನು ಕೇಳಿದ ಗರುಡನು ಅವರ ದುಃಖದಿಂದ ದುಃಖಿತನಾಗಿ ಕೋಪಗೊಂಡು ಚಿಂತಿಸಿದನು – “ಈ ಪಕ್ಷಿಗಳು ಸತ್ಯವನ್ನೇ ಹೇಳುತ್ತಿವೆ, ಇಂದೇ ಹೋಗಿ ಆ ಸಮುದ್ರವನ್ನು ಒಣಗಿಸಿಬಿಡಬೇಕು.” ಹೀಗೆ ಯೋಚಿಸುತ್ತಿದ್ದಾಗ ವಿಷ್ಣುವಿನ ದೂತನೊಬ್ಬನು ಬಂದು – “ಎಲೈ ಗರುಡನೇ, ಭಗವಾನ್ ನಾರಾಯಣನು ಕಳಿಸಿದ್ದಾನೆ. ದೇವಕಾರ್ಯದ ಮೇಲೆ ಭಗವಂತನು ಅಮರಾವತಿಗೆ ಹೋಗಬೇಕು. ಆದ್ದರಿಂದ ನೀನು ಬೇಗನೆ ಬರಬೇಕು” ಎಂದು ತಿಳಿಸಿದನು. ಅದನ್ನು ಕೇಳಿದ ಗರುಡನು ಸ್ವಾಭಿಮಾನದಿಂದ ಹೇಳಿದನು – “ಎಲೈ ದೂತನೇ, ನನ್ನಂತಹ ಸಾಮಾನ್ಯ ಸೇವಕನಿಂದ ಭಗವಂತನಿಗೇನು ಪ್ರಯೋಜನ ? ನನ್ನ ಸ್ಥಾನದಲ್ಲಿ ಬೇರೆ ಯಾರನ್ನಾದರೂ ವಾಹನವನ್ನಾಗಿ ಮಾಡಿಕೊಳ್ಳಲಿ. ಭಗವಂತನಿಗೆ ನನ್ನ ನಮಸ್ಕಾರಗಳನ್ನು ತಿಳಿಸು. ಕೃಷಿಗೆ ಯೋಗ್ಯವಲ್ಲದ ಭೂಮಿಯಲ್ಲಿ ಉಳುವುದು ಹೇಗೆ ವ್ಯರ್ಥವೋ ಹಾಗೆ ಒಬ್ಬನ ಗುಣಗಳನ್ನು ಅರಿಯಲಾರದವನನ್ನು ಪಂಡಿತನು ಆಶ್ರಯಿಸುವುದಿಲ್ಲ.” ಎಂದನು.

ದೂತ – “ಎಲೈ ವೈನತೇಯ, ಹಿಂದೆಂದೂ ಭಗವಂತನ ಬಗ್ಗೆ ನೀನು ಈ ರೀತಿ ಮಾತನಾಡಿರಲಿಲ್ಲ. ಆದ್ದರಿಂದ ಭಗವಂತನು ನಿನಗೆ ಏನು ಅಪಮಾನ ಮಾಡಿದನು ?”

ಗರುಡ – “ಭಗವಂತನ ಆಶ್ರಯಸ್ಥಾನವಾಗಿರುವ ಸಮುದ್ರವು ನಮ್ಮ ಈ ಟಿಟ್ಟಿಭ ಪಕ್ಷಿಗಳ ಮೊಟ್ಟೆಗಳನ್ನು ಅಪಹರಿಸಿದೆ. ಆದ್ದರಿಂದ ಸಮುದ್ರವನ್ನು ದಂಡಿಸದಿದ್ದರೆ ನಾನು ಭಗವಂತನ ಸೇವಕನಾಗಿರುವುದಿಲ್ಲ. ಈ ನನ್ನ ನಿಶ್ಚಯವನ್ನು ಬೇಗನೆ ಹೋಗಿ ಭಗವಂತನಿಗೆ ತಿಳಿಸು.”

ದೂತನ ಮೂಲಕ ಗರುಡನು ಪ್ರಣಯಕುಪಿತನಾಗಿದ್ದಾನೆಂದು ತಿಳಿದ ಭಗವಂತನು ಚಿಂತಿಸಿದನು – “ಗರುಡನು ಕೋಪಗೊಂಡಿರುವುದು ಸರಿಯಾಗಿಯೇ ಇದೆ. ನಾನೇ ಹೋಗಿ ಅವನನ್ನು ಸನ್ಮಾನಪೂರ್ವಕವಾಗಿ ಕರೆತರುವೆನು. ತನ್ನ ಕಲ್ಯಾಣವನ್ನು ಬಯಸುವ ಸ್ವಾಮಿಯು ಭಕ್ತಿಯುಳ್ಳ, ಶಕ್ತನಾಗಿರುವ ಮತ್ತು ಕುಲೀನನಾಗಿರುವ ಸೇವಕನನ್ನು ಅಪಮಾನಿಸಬಾರದು ಹಾಗೂ ಮಗನಂತೆ ನೋಡಿಕೊಳ್ಳಬೇಕು. ರಾಜನು ಸಂತೋಷಗೊಂಡಲ್ಲಿ ಸೇವಕನಿಗೆ ಹಣವನ್ನು ಮಾತ್ರ ನೀಡುತ್ತಾನೆ. ಆದರೆ ಸನ್ಮಾನಮಾತ್ರದಿಂದ ಸೇವಕನು ರಾಜನಿಗೆ ತನ್ನ ಪ್ರಾಣವನ್ನಾದರೂ ಕೊಟ್ಟು ಉಪಕಾರ ಮಾಡುತ್ತಾನೆ.”

ಹೀಗೆ ನಿಶ್ಚಯಿಸಿ ಭಗವಂತನು ರುಕ್ಮಪುರದಲ್ಲಿರುವ ಗರುಡನ ಬಳಿಗೆ ಹೋದನು. ಗರುಡನು ಮನೆಗೆ ಬಂದ ಭಗವಂತನನ್ನು ನೋಡಿ ನಾಚಿಕೆಯಿಂದ ತಲೆತಗ್ಗಿಸಿಕೊಂಡು ನಮಸ್ಕರಿಸಿ ಹೇಳಿದನು – “ಭಗವಂತ, ತಮಗೆ ಆಶ್ರಯಸ್ಥಾನವಾಗಿರುವ ಸಮುದ್ರವು ಉನ್ಮತ್ತನಾಗಿ ನನ್ನ ಸೇವಕನ ಮೊಟ್ಟೆಗಳನ್ನು ಅಪಹರಿಸಿ ನನಗೆ ಅವಮಾನ ಮಾಡಿದೆ. ನಿಮ್ಮ ಮೇಲಿನ ಸಂಕೋಚದಿಂದ ಇಲ್ಲಿಯವರೆಗೆ ತಡೆದಿದ್ದೇನೆ, ಇಲ್ಲದಿದ್ದರೆ ಇಂದೇ ಅದನ್ನು ಒಣಗಿದ ಸ್ಥಳವನ್ನಾಗಿ ಮಾಡಿಬಿಡುತ್ತಿದ್ದೆ. ಸ್ವಾಮಿಭಯದಿಂದ ಸ್ವಾಮಿಯ ನಾಯಿಗೆ ಯಾರೂ ಹೊಡೆಯುವುದಿಲ್ಲ. ಅಲ್ಲದೆ ಒಡೆಯನಿಗೆ ಅವಮಾನವಾಗುವ ಅಥವಾ ಮನಸ್ಸಿಗೆ ನೋವಾಗುವ ಕಾರ್ಯವನ್ನು ಪ್ರಾಣತ್ಯಾಗದ ಪ್ರಸಂಗ ಬಂದರೂ ಒಳ್ಳೆಯ ಸೇವಕನು ಮಾಡುವುದಿಲ್ಲ.”

ಅದನ್ನು ಕೇಳಿ ಭಗವಂತನು ಹೇಳಿದನು – “ಎಲೈ ಗರುಡನೇ, ಸತ್ಯವನ್ನೇ ಹೇಳಿದೆ. ಸೇವಕನು ಮಾಡಿದ ಅಪರಾಧದ ದಂಡವು ಸ್ವಾಮಿಗೇ ಸಲ್ಲುತ್ತದೆ. ಹಾಗೆಯೇ ಸೇವಕನಿಗೆ ಅಪಮಾನವಾದರೆ ಅದು ಸ್ವಾಮಿಗೆ ಅಪಮಾನವಾದಂತೆ. ಆದ್ದರಿಂದ ಬಾ, ಸಮುದ್ರದಿಂದ ಮೊಟ್ಟೆಗಳನ್ನು ತಂದು ಟಿಟ್ಟಿಭವನ್ನು ಸಂತೋಷಗೊಳಿಸೋಣ, ನಂತರ ಅಮರಾವತಿಗೆ ಹೋಗೋಣ.”

ನಂತರ ಭಗವಂತನು ಸಮುದ್ರವನ್ನು ಗದರಿಸಿ ಆಗ್ನೇಯಾಸ್ತ್ರವನ್ನು  ಹೂಡಿ ಸಮುದ್ರಕ್ಕೆ ಹೇಳಿದನು – “ಎಲೈ ದುರಾತ್ಮನೇ, ಟಿಟ್ಟಿಭ ಮೊಟ್ಟೆಗಳನ್ನು ಕೊಡು. ಇಲ್ಲದಿದ್ದರೆ ನಿನ್ನನ್ನು ನಿರ್ಜಲವಾದ ಪ್ರದೇಶವನ್ನಾಗಿ ಮಾಡಿಬಿಡುವೆನು.”

ಆಗ ಸಮುದ್ರವು ಭಯದಿಂದ ಟಿಟ್ಟಿಭ ಮೊಟ್ಟೆಗಳನ್ನು ಹಿಂದಿರುಗಿಸಿತು. ಟಿಟ್ಟಿಭವು ಅವುಗಳನ್ನು ಹೆಂಡತಿಗೆ ಕೊಟ್ಟಿತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: