1-11-2-ಮೂರು ಮೀನುಗಳ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಜಲಾಶಯದಲ್ಲಿ ಅನಾಗತವಿಧಾತಾ(ಅಪಾಯವು ಬರುವ ಮೊದಲೇ ಪರಿಹಾರವನ್ನು ಹುಡುಕುವವನು), ಪ್ರತ್ಯುಪನ್ನಮತಿ (ಅಪಾಯವು ಬಂದ ಕೂಡಲೇ ಪರಿಹಾರವನ್ನು ಹುಡುಕುವವನು)ಮತ್ತು ಯದ್ಭವಿಷ್ಯತಿ (ಆದದ್ದಾಗಲಿ ಎನ್ನುವವನು) ಎಂಬ ಮೂರು ಮೀನುಗಳು ವಾಸಿಸುತ್ತಿದ್ದವು. ಒಮ್ಮೆ ಆ ದಾರಿಯಲ್ಲಿ ಹೋಗುತ್ತಿದ್ದ ಮೀನುಗಾರರು ಸರೋವರವನ್ನು ನೋಡಿ – “ಓಹೋ! ಈ ಸರೋವರದಲ್ಲಿ ತುಂಬಾ ಮೀನುಗಳಿವೆ. ನಾವೆಂದೂ ಇದನ್ನು ನೋಡಿರಲೇ ಇಲ್ಲ. ಇಂದು ನಾವು ಮೀನುಗಳನ್ನು ಹಿಡಿದಾಗಿದೆ, ಅಲ್ಲದೆ ಸಂಜೆಯಾಗುತ್ತಿದೆ. ನಾಳೆ ಬೆಳಗ್ಗೆ ಖಂಡಿತವಾಗಿಯೂ ಬಂದು ಇಲ್ಲಿ ಮೀನುಗಳನ್ನು ಹಿಡಿಯೋಣ” ಎಂದು ಮಾತನಾಡಿಕೊಂಡರು.

ಅವರ ಆ ವಜ್ರಾಘಾತ ಸದೃಶವಾದ ಮಾತುಗಳನ್ನು ಕೇಳಿ ಅನಾಗತವಿಧಾತಾ ಮೀನು ಎಲ್ಲಾ ಮೀನುಗಳನ್ನು ಕರೆದು ಹೇಳಿತು – “ಮೀನುಗಾರರು ಹೇಳಿದ್ದನ್ನು ಕೇಳಿದಿರಾ ? ಆದ್ದರಿಂದ ಇಂದು ರಾತ್ರಿಯೇ ಬೇರೆ ಸರೋವರಕ್ಕೆ ಹೋಗೋಣ. ಬಲಶಾಲಿಯಾದ ಶತ್ರುವು ಎದುರಾದಾಗ ಅಶಕ್ತರು ಪಲಾಯನ ಮಾಡತಕ್ಕದ್ದು. ಕೋಟೆಯ ರಕ್ಷಣೆಯಿಲ್ಲದಿದ್ದಲ್ಲಿ ಅವರಿಗೆ ಪಲಾಯನವೇ ಗತಿ. ಖಂಡಿತವಾಗಿಯೂ ಬೆಳಗ್ಗೆ ಮೀನುಗಾರರು ಬಂದು ನಮ್ಮನ್ನು ನಾಶ ಮಾಡುವರು ಎಂದು ನನಗೆ ಅನಿಸುತ್ತದೆ. ಆದ್ದರಿಂದ ಇಲ್ಲಿ ಕ್ಷಣಮಾತ್ರ ಇರುವುದೂ ಸರಿಯಲ್ಲ. ಬೇರೆ ಕಡೆಗೆ ಹೋಗಿ ಸುಖವಾಗಿ ಬದುಕುವ ಸಂದರ್ಭವಿದ್ದಲ್ಲಿ, ಬುದ್ಧಿವಂತನು ತಾನು ಸ್ವದೇಶದಿಂದ ಹೊರಡುವಂತಾಯಿತು ಅಥವಾ ಕುಲವು ನಾಶವಾಯಿತು ಎಂದು ಚಿಂತಿಸುವುದಿಲ್ಲ.”

ಅದನ್ನು ಕೇಳಿದ ಪ್ರತ್ಯುಪನ್ನಮತಿ ಮೀನು – “ನೀನು ಸತ್ಯವನ್ನೇ ನುಡಿದಿರುವೆ. ನನಗೂ ಕೂಡ ಬೇರೆಡೆಗೆ ಹೋಗೋಣ ಎಂದು ಅನಿಸುತ್ತಿದೆ. ಪರದೇಶದ ಭಯದಿಂದ ಮತ್ತು ಸ್ವದೇಶದ ಮಾಯೆಯಲ್ಲಿ ಸಿಲುಕಿದ ಕಪಟಿಗಳಾದ ನಪುಂಸಕರು, ಕಾಗೆಗಳು ಮತ್ತು ಮೃಗಗಳು ಮಾತ್ರ ಸ್ವದೇಶದಲ್ಲೇ ಇದ್ದು ಸಾವನ್ನಪ್ಪುತ್ತವೆ. ಯಾರು ಎಲ್ಲಾದರೂ ಬದುಕಬಲ್ಲರೋ ಅವರು ಸ್ವದೇಶದ ಮೋಹದಿಂದ ನಾಶಹೊಂದುವುದಿಲ್ಲ. ಹೇಡಿಗಳು ಮಾತ್ರ ಅಜ್ಜನ ಬಾವಿಯೆಂದು ಹೇಳುತ್ತಾ ಉಪ್ಪುನೀರನ್ನೇ ಕುಡಿಯುತ್ತಿರುತ್ತಾರೆ.”

ಅದನ್ನು ಕೇಳಿದ ಯದ್ಭವಿಷ್ಯ ಮೀನು ನಕ್ಕು ಹೇಳಿತು – “ನೀವು ಸರಿಯಾದ ಆಲೋಚನೆಯನ್ನು ಮಾಡುತ್ತಿಲ್ಲ. ಯಾರೋ ಹೇಳಿದರೆಂದು ನಮ್ಮ ಪೂರ್ವಜರ ಈ ಸರೋವರವನ್ನು ಬಿಟ್ಟುಹೋಗುವುದು ಸರಿಯಲ್ಲ. ಆಯಸ್ಸು ಮುಗಿದಿದ್ದರೆ ಬೇರೆ ಕಡೆ ಹೋದರೂ ಸಾವು ಬಂದೇ ಬರುತ್ತದೆ. ರಕ್ಷಣೆಯಿಲ್ಲದವನು ದೈವರಕ್ಷೆಯಿದ್ದರೆ ಬದುಕುತ್ತಾನೆ, ಉತ್ತಮ ರಕ್ಷಣೆಯಿದ್ದವನು ದೈವಕೃಪೆಯಿಲ್ಲದಿದ್ದರೆ ನಾಶವಾಗುತ್ತಾನೆ. ಕಾಡಿನಲ್ಲಿ ಬಿಟ್ಟ ಅನಾಥನು ದೈವಕೃಪೆಯಿಂದ ಬದುಕುತ್ತಾನೆ, ದೈವಕೃಪೆಯಿಲ್ಲದಿದ್ದಾಗ ಏಷ್ಟೇ ಪ್ರಯತ್ನಪಟ್ಟರೂ ಮನೆಯಲ್ಲಿದ್ದರೂ ಕೂಡ ನಾಶವಾಗುತ್ತಾನೆ. ಆದ್ದರಿಂದ ನಾನು ಬರುವುದಿಲ್ಲ, ನಿಮಗೆ ತೋರಿದಂತೆ ಮಾಡಿ.”

ಅದರ ನಿಶ್ಚಯವನ್ನು ತಿಳಿದು ಅನಾಗವಿಧಾತಾ ಹಾಗೂ ಪ್ರತ್ಯುಪನ್ನಮತಿ ಮೀನುಗಳು ಇತರರೊಂದೆಗೆ ಬೇರೆಡೆಗೆ ಹೋದವು. ಬೆಳಗ್ಗೆ ಮೀನುಗಾರರು ಬಂದು ಬಲೆಯನ್ನು ಬೀಸಿ ಯದ್ಭವಿಷ್ಯ ಹಾಗೂ ಉಳಿದ ಇತರ ಮೀನುಗಳನ್ನು ಹಿಡಿದುಕೊಂಡು ಹೋದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: