1-16-ಲೋಹತಕ್ಕಡಿ ಹಾಗೂ ವ್ಯಾಪಾರಿಯ ಮಗನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಜೀರ್ಣಧನ ಎಂಬ ವ್ಯಾಪಾರಿಯ ಮಗನಿದ್ದನು. ವ್ಯಾಪಾರದಲ್ಲಿನ ನಷ್ಟದಿಂದ ಅವನು ದೇಶಾಂತರ ಹೋಗುವ ಮನಸ್ಸುಳ್ಳವನಾಗಿ ಚಿಂತಿಸಿದನು – “ಒಂದು ದೇಶದಲ್ಲಿ ಅಥವಾ ಸ್ಥಳದಲ್ಲಿ ತನ್ನ ಶ್ರಮದಿಂದ ಹಣವನ್ನು ಸಂಪಾದಿಸಿ ಭೋಗಗಳನ್ನು ಅನುಭವಿಸಿ ನಂತರ ನಷ್ಟವನ್ನು ಹೊಂದಿದಾಗ ಯಾರು ಅಲ್ಲೇ ವಾಸಿಸುವನೋ ಅವನು ಅಧಮನು. ಹಿಂದೆ ಅಹಂಕಾರದಿಂದ ಭೋಗವಿಲಾಸಗಳನ್ನು ಅನುಭವಿಸಿದ ದೇಶದಲ್ಲಿ ಯಾಚನೆ ಮಾಡಿದರೆ ಅಂತವನು ಜನರ ನಿಂದೆಗೆ ಪಾತ್ರನಾಗುತ್ತಾನೆ.”

ವ್ಯಾಪಾರಿಯ ಮನೆಯಲ್ಲಿ ಅವನ ಪೂರ್ವಜರು ಸಂಪಾದಿಸಿದ ಭಾರವಾದ ಲೋಹದ ತಕ್ಕಡಿಯಿತ್ತು. ಅದನ್ನು ಒಬ್ಬ ಶ್ರೇಷ್ಠೀಯ ಬಳಿ ಅಡವಿಟ್ಟು ದೇಶಾಂತರ ಹೋದನು. ಬಹುಕಾಲ ದೇಶಾಂತರ ಅಲೆದು ಪುನಃ ತನ್ನ ಊರಿಗೆ ಬಂದು ಆ ಶ್ರೇಷ್ಠೀಗೆ ಹೇಳಿದನು – “ಎಲೈ ಶ್ರೇಷ್ಠೀ, ನಾನು ಅಡವಿಟ್ಟ ತಕ್ಕಡಿಯನ್ನು ಕೊಡು”

ಶ್ರೇಷ್ಠೀ – “ನೀನು ಕೊಟ್ಟ ತಕ್ಕಡಿಯನ್ನು ಇಲಿಯು ತಿಂದುಬಿಟ್ಟಿತು.”

ಜೀರ್ಣಧನ – “ಆಹಾ! ಇಲಿ ತಿಂದರೆ ನಿನ್ನ ದೋಷವೇನೂ ಇಲ್ಲ. ಸಂಸಾರವೆಂದರೆ ಹೀಗೇ, ಯಾವುದೂ ಶಾಶ್ವತವಲ್ಲ. ನಾನು ಈಗ ನದಿಗೆ ಸ್ನಾನಕ್ಕೆ ಹೋಗುತ್ತೇನೆ. ನಿನ್ನ ಮಗನಾದ ಧನದೇವನನ್ನು ನನ್ನ ಸ್ನಾನದ ಪರಿಕರಗಳನ್ನು ಹಿಡಿದುಕೊಳ್ಳಲು ಜೊತೆಗೆ ಕಳಿಸಿಕೊಡು.”

ಶ್ರೇಷ್ಠೀಯು ಕಳ್ಳತನ ಮಾಡಿದ್ದದಿಂದ ಹೆದರಿ ತನ್ನ ಮಗನಿಗೆ ಹೇಳಿದನು – “ವತ್ಸ, ಈತನು ನಿನ್ನ ಚಿಕ್ಕಪ್ಪ, ಸ್ನಾನಕ್ಕಾಗಿ ನದಿಗೆ ಹೋಗುತ್ತಿದ್ದಾನೆ. ಸ್ನಾನದ ಉಪಕರಣಗಳನ್ನು ಹೊತ್ತುಕೊಂಡು ಇವನೊಂದಿಗೆ ಹೋಗು.”

ಯಾರೂ ಕೂಡ ಭಕ್ತಿಯಿಂದ ಇನ್ನೊಬ್ಬರ ಕೆಲಸವನ್ನು ಮಾಡುವುದಿಲ್ಲ. ಭಯ, ಲೋಭ ಅಥವಾ ಪ್ರಯೋಜನದ ದೃಷ್ಟಿಯಿಂದ ಮಾತ್ರ ಮಾಡುತ್ತಾರೆ. ಪ್ರಯೋಜನವಿಲ್ಲದೆ ಎಲ್ಲಿ ಅತಿಯಾದ ಆದರವು ಸಿಗುತ್ತದೆಯೋ ಅಲ್ಲಿ ಸಂದೇಹವನ್ನು ಮಾಡಬೇಕು. ಸಂದೇಹದ ಪರಿಣಾಮವು ಒಳ್ಳೆಯದೇ ಆಗುತ್ತದೆ.

ಆನಂತರ ಧನದೇವನು ಸ್ನಾನಪರಿಕರಗಳನ್ನು ಹೊತ್ತುಕೊಂಡು ಜೀರ್ಣಧನನೊಂದಿಗೆ ನದಿಗೆ ಹೊರಟನು. ಜೀರ್ಣಧನನು ಸ್ನಾನವನ್ನು ಮಾಡಿ ಆ ಹುಡುಗನನ್ನು ಒಂದು ಬೆಟ್ಟದ ಗುಹೆಯಲ್ಲಿರಿಸಿ, ಗುಹೆಯನ್ನು ದೊಡ್ಡ ಬಂಡೆಯಿಂದ ಮುಚ್ಚಿ ವಾಪಸ್ಸಾದನು.

ಆಗ ಶ್ರೇಷ್ಠೀಯು – “ಬಂದೆಯಾ ? ನಿನ್ನೊಂದಿಗೆ ಹೋದ ನನ್ನ ಮಗನೆಲ್ಲಿ ?” ಎಂದು ಕೇಳಿದಾಗ ಜೀರ್ಣಧನನು – “ನದಿದಡದಲ್ಲಿದ್ದ ಅವನನ್ನು ಗಿಡುಗವು ಎತ್ತಿಕೊಂಡುಹೋಯಿತು” ಎಂದನು.

ಶ್ರೇಷ್ಠೀ – “ಸುಳ್ಳುಗಾರ, ಏನು ಗಿಡುಗವು ಬಾಲಕನನ್ನು ಅಪಹರಿಸಲಾಗುತ್ತದೆಯೇ ? ನನ್ನ ಮಗನನ್ನು ಕೊಟ್ಟುಬಿಡು ಇಲ್ಲದಿದ್ದರೆ ರಾಜನಲ್ಲಿ ದೂರು ಕೊಡುವೆನು”

ಜೀರ್ಣಧನ – “ಸತ್ಯವಂತನೇ, ಗಿಡುಗವು ಬಾಲಕನನ್ನು ಅಪಹರಿಸಲು ಅಸಾಧ್ಯವಾದಂತೆ ಇಲಿಯು ಭಾರವಾದ ಲೋಹದ ತಕ್ಕಡಿಯನ್ನು ತಿನ್ನುವುದು ಕೂಡ ಅಸಾಧ್ಯವೇ. ಆದ್ದರಿಂದ ಮಗನು ಬೇಕೆಂದರೆ ನನ್ನ ತಕ್ಕಡಿಯನ್ನು ಕೊಡು.”

ಹೀಗೆ ಜಗಳವಾಡುತ್ತಾ ಅವರು ಧರ್ಮಾಧಿಕಾರಿಗಳ ಬಳಿಗೆ ಹೋದರು. ಅಲ್ಲಿ ಶ್ರೇಷ್ಠೀ ದೊಡ್ಡ ಧ್ವನಿಯಿಂದ – “ಅಯ್ಯೋ! ಅನ್ಯಾಯವಾಯಿತು! ಅನ್ಯಾಯವಾಯಿತು! ಈ ಕಳ್ಳ ನನ್ನ ಶಿಶುವನ್ನು ಅಪಹರಿಸಿದ್ದಾನೆ”

ಧರ್ಮಾಧಿಕಾರಿಗಳು ಜೀರ್ಣಧನನಿಗೆ ಶ್ರೇಷ್ಠೀಯ ಮಗನನ್ನು ವಾಪಸ್ಸು ಕೊಡಲು ಹೇಳಿದಾಗ ಜೀರ್ಣಧನನು – “ಏನು ಮಾಡಲಿ ? ನಾನು ನೋಡುತ್ತಿದ್ದ ಹಾಗೆ ಗಿಡುಗವೊಂದು ಬಾಲಕನನ್ನು ಹೊತ್ತುಕೊಂಡು ಹಾರಿತು” ಎಂದನು.

ಧರ್ಮಾಧಿಕಾರಿಗಳು – “ಸುಳ್ಳನ್ನು ನುಡಿಯಬೇಡ, ಗಿಡುಗವು ಬಾಲಕನನ್ನು ಎತ್ತಿಕೊಂಡು ಹೋಗುವಷ್ಟು ಸಮರ್ಥವೇ ?”

ಜೀರ್ಣಧನ – “ನನ್ನ ಮಾತನ್ನು ಕೇಳಿರಿ, ಭಾರವಾದ ಲೋಹದ ತಕ್ಕಡಿಯನ್ನು ಎಲ್ಲಿ ಇಲಿಯು ತಿನ್ನಬಲ್ಲದೋ ಅಲ್ಲಿ ಗಿಡುಗವು ಬಾಲಕನನ್ನು ಖಂಡಿತಾ ಅಪಹರಿಸಬಲ್ಲದು.”

ಧರ್ಮಾಧಿಕಾರಿಗಳು ಏನಿದು ವೃತ್ತಾಂತವೆಂದು ಕೇಳಿದಾಗ ಶ್ರೇಷ್ಠೀಯು ಎಲ್ಲವನ್ನೂ ಸಭೆಯ ಮುಂದೆ ಹೇಳಿದನು. ಅವರೆಲ್ಲರೂ ನಕ್ಕು ಅವರಿಗೆ ಬುದ್ಧಿಹೇಳಿ ಬಾಲಕ ಹಾಗೂ ತಕ್ಕಡಿಯನ್ನು ಒಬ್ಬರಿಗೊಬ್ಬರು ವಾಪಸ್ಸು ಕೊಡುವಂತೆ ಮಾಡಿದರು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: