1-3-ದಂತಿಲ – ಗೋರಂಭರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಭೂಮಂಡಲದಲ್ಲಿ ವರ್ಧಮಾನವೆಂಬ ನಗರವೊಂದಿತ್ತು. ಅಲ್ಲಿ ದಂತಿಲನೆಂಬ ಹೆಸರಿನ ಕೋಷಾಧ್ಯಕ್ಷ ಹಾಗೂ ನಗರದ ಪುರನಾಯಕನಿದ್ದನು. ಅವನು ಪುರಕಾರ್ಯವನ್ನು ಹಾಗೂ ರಾಜನ ಕಾರ್ಯವನ್ನು ಉತ್ತಮರೀತಿಯಲ್ಲಿ ನಿರ್ವಹಿಸುತ್ತಿದ್ದರಿಂದ ಪುರಜನರು ಹಾಗೂ ರಾಜನು ಆತನಲ್ಲಿ ಸಂತೋಷಗೊಂಡಿದ್ದರು. ಹೆಚ್ಚೇಕೆ ? ಅಷ್ಟು ಚತುರನನ್ನು ಅಲ್ಲಿಯವರೆಗೆ ಯಾರು ನೋಡಿರಲಿಲ್ಲ ಮತ್ತು ಕೇಳಿರಲಿಲ್ಲ. ರಾಜನಿಗೆ ಹಿತವನ್ನು ಮಾಡುವ ಅಧ್ಯಕ್ಷನನ್ನು ಜನರು ದ್ವೇಷಿಸುವರು ಮತ್ತು ಪ್ರಜೆಗಳ ಹಿತವನ್ನೇ ಮಾಡುವ ಅಧ್ಯಕ್ಷನನ್ನು ರಾಜನು ತ್ಯಜಿಸಿಬಿಡುವನು. ಹೀಗೆ ಒಂದಕ್ಕೊಂದು ವಿರುದ್ಧವಾಗಿರುವ ಪ್ರಜಾಕಾರ್ಯ ಮತ್ತು ರಾಜಕಾರ್ಯವನ್ನು ಸಮಾನಹಿತದಿಂದ ನಡೆಸಿಕೊಂಡು ಹೋಗುವವನು ಸಿಕ್ಕುವುದು ಕಷ್ಟ.

ಹೀಗೆ ನಡೆಯುತ್ತಿರಲು ಒಮ್ಮೆ ದಂತಿಲನ ಮಗಳ ವಿವಾಹವಾಯಿತು. ಆಗ ಅವನು ಸಕಲ ಪುರಜನರನ್ನು ಮತ್ತು ರಾಜನ ಸೇವಕರನ್ನು ಗೌರವಪೂರ್ವಕವಾಗಿ ಭೋಜನಕ್ಕಾಗಿ ಆಮಂತ್ರಿಸಿ ವಸ್ತ್ರಾದಿ ದಾನಗಳಿಂದ ಸತ್ಕರಿಸಿದನು. ಮದುವೆಯ ನಂತರ ರಾಜ ಹಾಗೂ ಅಂತಃಪುರದವರನ್ನು ಕರೆಸಿಕೊಂಡು ವಿಶೇಷವಾಗಿ ಸತ್ಕರಿಸಿದನು. ಆಗ ರಾಜನ ಅರಮನೆಯಲ್ಲಿ ಕಸಗುಡಿಸುವ ಗೋರಂಭನೆಂಬ ರಾಜಸೇವಕನು ತನಗೆ ಉಚಿತವಲ್ಲದ ಸ್ಥಾನದಲ್ಲಿ ಕುಳಿತ್ತಿದ್ದಕ್ಕಾಗಿ ಕತ್ತು ಹಿಡಿದು ದೂಡಲ್ಪಟ್ಟನು. ಅಪಮಾನಗೊಂಡ ಅವನು ಅಂದಿನಿಂದ ಸದಾ ನಿಟ್ಟುಸಿರು ಬಿಡುತ್ತಿದ್ದನು ಹಾಗೂ ರಾತ್ರಿಯಲ್ಲಿ ಕೂಡ ಸರಿಯಾಗಿ ನಿದ್ದೆ ಮಾಡುತ್ತಿರಲಿಲ್ಲ. “ಹೇಗೆ ರಾಜನು ಆ ಅಧ್ಯಕ್ಷನಲ್ಲಿ ವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡಲಿ ? ಅಥವಾ ಸುಮ್ಮನೆ ಹೀಗೆ ದೇಹದಂಡನೆಯಿಂದೇನು ಪ್ರಯೋಜನ ? ಆತನಿಗೆ ಅಪಕಾರ ಮಾಡುವ ಶಕ್ತಿ ನನ್ನಲ್ಲಿಲ್ಲ. ಬಾಣಲೆಯು ಕಾದಾಗ ಕಡಲೆಕಾಳುಗಳು ಪಟಪಟನೆ ಮೇಲೆದ್ದು ಬೀಳುತ್ತವೆ.ಆದರೆ ಅದರಿಂದ ಬಾಣಲೆಯು ತುಂಡಾಗುತ್ತದೆಯೇನು ? ಅದೇ ರೀತಿ ಅಪಕಾರವನ್ನು ಮಾಡಲಾಗದ ನಾಚಿಕೆಯಿಲ್ಲದವನು ಸುಮ್ಮನೆ ಕೋಪಗೊಂಡರೆ ಏನು ಬಂತು ?” ಎಂದು ಚಿಂತಿಸುತ್ತಿದ್ದನು.

ಒಂದು ದಿನ ಮುಂಜಾನೆ ರಾಜನು ಯೋಗನಿದ್ರೆಯಲ್ಲಿದ್ದಾಗ ಆತನ ಮಂಚದ ಬಳಿ ಕಸಗುಡಿಸುತ್ತಿದ್ದ ಗೋರಂಭನು ಹೇಳಿದನು – “ಓಹೋ! ದಂತಿಲನಿಗೆ ಎಂತಹ ಧೈರ್ಯ, ರಾಣಿಯನ್ನು ತಬ್ಬಿಕೊಳ್ಳುತ್ತಾನಲ್ಲ”. ಅದನ್ನು ಕೇಳಿದ ರಾಜ ತಕ್ಷಣ ಎದ್ದು ಕುಳಿತು ಅವನಿಗೆ ಹೇಳಿದನು – “ಏ ಗೋರಂಭ! ನೀನು ಹರಟುತ್ತಿರುವುದು ನಿಜವೇನು ? ಏನು ರಾಣಿಯು ದಂತಿಲನನ್ನು ಆಲಂಗಿಸಿಕೊಂಡಳೇ ?” ಗೋರಂಭ – “ದೇವ, ರಾತ್ರಿಯೆಲ್ಲಾ ಜೂಜಾಡಿ ನಿದ್ದೆಕೆಟ್ಟ ನನಗೆ ಈಗ ಬಲವಾದ ನಿದ್ರೆ ಸೆಳೆಯಿತು, ಹಾಗಾಗಿ ನಾನು ಏನು ಹೇಳಿದೆಯೆಂದು ನನಗೇ ತಿಳಿದಿಲ್ಲ.”

ರಾಜನು ಈರ್ಷ್ಯೆಯಿಂದ ಕೂಡಿದವನಾಗಿ ಹೀಗೆ ಯೋಚಿಸಿದನು – “ಇವನು ನನ್ನ ಮನೆಯಲ್ಲಿ ಎಲ್ಲಾ ಕಡೆ ತಡೆಯಿಲ್ಲದೆ ಓಡಾಡಿಕೊಂಡಿರುತ್ತಾನೆ. ದಂತಿಲನು ಕೂಡ ಹಾಗೆಯೇ. ಯಾವಾಗಲೋ ರಾಣಿ ದಂತಿಲನನ್ನು ಆಲಂಗಿಸಿಕೊಂಡದ್ದನ್ನು ಇವನು ನೋಡಿರಬಹುದು. ಮನುಷ್ಯನು ಹಗಲಿನಲ್ಲಿ ಏನನ್ನು ಇಚ್ಛಿಸುತ್ತಾನೋ, ಏನನ್ನು ನೋಡುತ್ತಾನೋ ಅಥವಾ ಏನನ್ನು ಮಾಡುತ್ತಾನೋ, ಅಭ್ಯಾಸಬಲದಿಂದ ಅದನ್ನೇ ಸ್ವಪ್ನದಲ್ಲಿ ಕೂಡ ನುಡಿಯುತ್ತಾನೆ ಅಥವಾ ಮಾಡುತ್ತಾನೆ. ಮನುಷ್ಯರ ಮನಸ್ಸಿನಲ್ಲಿ ಗೂಢವಾಗಿ ಹುದುಗಿಕೊಂಡಿರುವ ಶುಭ ಅಥವಾ ಪಾಪ ಚಿಂತನೆಯನ್ನು ರಾಜನು ಸ್ವಪ್ನವಾಕ್ಯದಿಂದ ಅಥವಾ ಮದೋನ್ಮತ್ತನಾಗಿದ್ದಾಗ ನುಡಿದ ವಾಕ್ಯಗಳಿಂದ ತಿಳಿದುಕೊಳ್ಳಬಹುದು. ಅಥವಾ ಸ್ತ್ರೀಯರು ಹೀಗೆ  ಮಾಡುವರು ಎಂಬುವುದರಲ್ಲಿ ಸಂದೇಹವೇನೂ ಇಲ್ಲ. ಒಬ್ಬೊನೊಂದಿಗೆ ಹರಟುತ್ತಾ, ಮತ್ತೊಬ್ಬನನ್ನು ವಿಲಾಸದಿಂದ ನೋಡುತ್ತಾ, ಮಗದೊಬ್ಬನನ್ನು ಹೃದಯದಲ್ಲಿ ಚಿಂತಿಸುತ್ತಿರುವ ಹೆಂಗಸರಿಗೆ ನಿಜವಾಗಲೂ ಪ್ರಿಯನಾದವನು ಯಾರೆಂದು ಹೇಳಲಾದೀತೇ ? ಪಾದರಿ ಗಿಡದ ಕೆಂಪು ಹೂವಿನಂತೆ ತುಟಿಗಳನ್ನು ಹೊಂದಿದ ಸ್ತ್ರೀಯರು ಒಬ್ಬನೊಡನೆ ಅತಿಯಾಗಿ ಹರಟುತ್ತಾ, ಅರಳಿದ ನೈದಿಲೆಯಂತ ಕಣ್ಣುಗಳಿಂದ ಮತ್ತೊಬ್ಬನನ್ನು ನೋಡುತ್ತಾ, ಮನಸ್ಸಿನಲ್ಲಿ ವಿಚಿತ್ರ ಚರಿತ್ರೆಯುಳ್ಳ ಹಾಗೂ ಐಶ್ವರ್ಯವಂತನ ಬಗ್ಗೆ ಯೋಚಿಸುತ್ತಿರುವಾಗ ಅವರಿಗೆ ನಿಜವಾಗಿಯೂ ಯಾರಲ್ಲಿ ಯಥಾರ್ಥವಾದ ಪ್ರೇಮವಿದೆಯೆಂದು ಹೇಳಲಾದೀತೇ ? ಎಷ್ಟೇ ಕಟ್ಟಿಗೆಗಳನ್ನು ಉರಿಸಿದರೂ ಹೇಗೆ ಅಗ್ನಿಗೆ ತೃಪ್ತಿಯಾಗುವುದಿಲ್ಲವೋ, ಎಷ್ಟೇ ನದಿಗಳು ಬಂದು ಸೇರಿದರೂ ಮಹಾಸಮುದ್ರವು ಹೇಗೆ ತೃಪ್ತಿಗೊಳ್ಳುವುದಿಲ್ಲವೋ, ಎಲ್ಲಾ ಪ್ರಾಣಿಗಳ ಸಾವಿನಿಂದಲೂ ಹೇಗೆ ಯಮನು ತೃಪ್ತನಾಗುವುದಿಲ್ಲವೋ, ಹಾಗೆಯೇ ಸ್ತ್ರೀಯರು ಅನೇಕ ಪುರುಷರುಗಳಿಂದಲೂ ಕೂಡ ತೃಪ್ತಿಗೊಳ್ಳಲಾರರು. ಏಕಾಂತವಾದ ಸ್ಥಾನ ಸಿಗದಿರುವುದರಿಂದ, ಉಚಿತವಾದ ಸಂದರ್ಭ ದೊರಕದೆ ಇರುವುದರಿಂದ, ಇಷ್ಟಪಟ್ಟ ಪುರುಷನು ದೊರಕದೆ ಇರುವುದರಿಂದ ಸ್ತ್ರೀಯರ ಪಾತಿವ್ರತ್ಯವು ಸಿದ್ಧಿಸುತ್ತದೆಯೇ ಹೊರತು ಬೇರಾವ ಕಾರಣಗಳಿಂದಲ್ಲ. ಯಾವ ಮೂಢನು ಮೋಹಪರವಶನಾಗಿ ತನ್ನ ಕಾಮಿನಿಯು ತನ್ನಲ್ಲಿ ಅನುರಕ್ತಳಾಗಿದ್ದಾಳೆಂದು ತಿಳಿಯುವನೋ ಆತನು ಕ್ರೀಡಾಪಕ್ಷಿಯಂತೆ (ಆಟದ ಗೊಂಬೆಯಂತೆ) ಸದಾ ಅವಳ ವಶದಲ್ಲಿರುವನು. ಅವಳ ಮಾತುಗಳನ್ನು ಪಾಲಿಸುತ್ತಾ, ಅವಳ ಯಾವುದೇ ಸಣ್ಣ ಮತ್ತು ದೊಡ್ಡ ಕೆಲಸಗಳನ್ನು ಮಾಡಿಕೊಡುತ್ತಾನೆ. ಈ ರೀತಿ ಮಾಡುವುದರಿಂದ ಲೋಕದಲ್ಲಿ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಯಾರು ತಮ್ಮನ್ನು ಪ್ರಾರ್ಥಿಸುತ್ತಾ ತಮ್ಮ ಬಳಿಯಲ್ಲಿಯೇ ಇದ್ದುಕೊಂಡು ತಮ್ಮ ಸೇವೆ ಮಾಡಿಕೊಂಡು ಇರುತ್ತಾರೋ ಅಂತವರನ್ನೇ ಸ್ತ್ರೀಯರು ಬಯಸುವರು. ಇಷ್ಟಪಟ್ಟ ಮನುಷ್ಯರು ಸಿಗದಿರುವ ಕಾರಣದಿಂದ ಹಾಗೂ ಪರಿವಾರದವರ ಭಯದಿಂದ ಸ್ತ್ರೀಯರು ಮರ್ಯಾದೆಯ ಎಲ್ಲೆಯನ್ನು ಮೀರುವುದಿಲ್ಲವೇ ಹೊರತು ಬೇರೆ ಕಾರಣಗಳಿಂದಲ್ಲ. ಅವರಿಗೆ ಯಾರೂ ಭೋಗಿಸತಕ್ಕವರಲ್ಲ ಎಂಬುದಿಲ್ಲ, ವಯಸ್ಸಿನ ಸ್ಥಿತಿಯೂ ಭೋಗಿಸದೆ ಇರಲು ಕಾರಣವಾಗುವುದಿಲ್ಲ. ರೂಪವಂತನಾಗಿರಲಿ ಅಥವಾ ಕುರೂಪನಾಗಿರಲಿ ಪುರುಷನೆಂಬ ಕಾರಣಕ್ಕೆ ಅವರು ಅವನನ್ನು ಭೋಗಿಸುತ್ತಾರೆ. ನಾರಿಯರಿಗೆ ಅನುರಕ್ತರಾದ ಪುರುಷನು ತನ್ನ ಸೀರೆಯಂತೆ ಭೋಗ್ಯವಸ್ತುವಾಗಿಬಿಡುತ್ತಾನೆ. ಸೀರೆಯ ಅಂಚು ಹೇಗೆ ಅವರ ಕಟಿಪ್ರದೇಶವನ್ನು ಉಜ್ಜುತ್ತದೆಯೋ ಹಾಗೆ ಕಾಮಾವಸ್ಥೆಯಲ್ಲಿ ಪುರುಷನ ಗುಪ್ತಾಂಗವೂ ನಾರಿಯರ ಕಟಿಪ್ರದೇಶದಲ್ಲಿ ಘರ್ಷಣೆಯನ್ನುಂಟುಮಾಡುತ್ತದೆ. ಅರಗನ್ನು ಅರೆದು ಕೆಂಪು ರಸವನ್ನು ಹೇಗೆ ನಾರಿಯರು ತಮ್ಮ ಕಾಲಿಗೆ ಹಚ್ಚಿಕೊಳ್ಳುತ್ತಾರೋ ಹಾಗೆ ಅಬಲೆಯರು ತಮ್ಮ ಮೇಲೆ ಅನುರಕ್ತರಾದ ಪುರುಷರನ್ನು ಕಾಲಬಳಿ ಇಟ್ಟುಕೊಳ್ಳುವರು.”

ಹೀಗೆ ರಾಜನು ಬಹುವಿಧದಲ್ಲಿ ರೋದಿಸಿ ಅಂದಿನಿಂದ ದಂತಿಲನು ಅರಮನೆಗೆ ಬರುವುದರ ಬಗ್ಗೆ ಅನಾಸಕ್ತನಾದನು. ಕೇವಲ ಅಷ್ಟೇ ಅಲ್ಲದೆ ಆತನು ರಾಜದ್ವಾರವನ್ನು ಪ್ರವೇಶಿಸುವುದನ್ನು ತಡೆದುಬಿಟ್ಟನು. ದಂತಿಲನು ಕೂಡ ತನ್ನ ಬಗ್ಗೆ ಒಮ್ಮೆಲೆ ರಾಜನು ಅಸಮಾಧಾನನಾದುದನ್ನು ನೋಡಿ ಹೀಗೆ ಚಿಂತಿಸಿದನು – “ಈ ಉಕ್ತಿಯು ಸರಿಯಾಗಿಯೇ ಇದೆ – ಯಾರು ತಾನೇ ಸಂಪತ್ತನ್ನು ಪಡೆದು ಗರ್ವಿತನಾಗುವುದಿಲ್ಲ ? ವಿಷಯಸುಖಗಳಲ್ಲಿ ಮುಳುಗಿರುವವನಿಗೆ ಕಷ್ಟಗಳು ಇಲ್ಲದಿರುವುದೇ ? ಸ್ತ್ರೀಯರಿಂದ ಯಾರ ಮನಸ್ಸು ತಾನೇ ಕಾಮಪೀಡಿತವಾಗುವುದಿಲ್ಲ ? ರಾಜನಿಗೆ ಯಾರಾದರು ಪ್ರಿಯನೆಂಬುವನು ಇರುವನೇನು ? ಕಾಲದ ಹಿಡಿತಕ್ಕೆ ಸಿಕ್ಕದಿರುವವನಿದ್ದಾನೆಯೇ ? ಯಾಚಕನಿಗೆ ಗೌರವವುಂಟೇ ? ಯಾವ ಮನುಷ್ಯನು ದುರ್ಜನರ ಜಾಲಕ್ಕೆ ಸಿಕ್ಕಿ ಕ್ಷೇಮದಿಂದ ಮತ್ತೆ ಬಿಡಿಸಿಕೊಂಡು ಬರುವನು ? ಅದಲ್ಲದೇ ಕಾಗೆಯಲ್ಲಿ ಶುಚಿತ್ವ, ಜೂಜಾಡುವವರಲ್ಲಿ ಸತ್ಯನುಡಿ, ಹಾವಿನಲ್ಲಿ ಕ್ಷಮಾಗುಣ, ಸ್ತ್ರೀಯರಲ್ಲಿ ಕಾಮದ ಉಪಶಾಂತಿ, ನಪುಂಸಕರಲ್ಲಿ ಧೈರ್ಯ, ಕುಡುಕರಲ್ಲಿ ತತ್ತ್ವಚಿಂತನೆ ಹಾಗೂ ರಾಜನಲ್ಲಿ ಗೆಳೆತನವನ್ನು ಯಾರಾದರೂ ಕೇಳಿದ್ದಾರೇನು ಅಥವಾ ನೋಡಿದ್ದಾರೇನು ? ಅದಲ್ಲದೇ ರಾಜನಿಗೆ ಅಥವಾ ರಾಜನ ಸಂಬಂಧಿಗಳಿಗೆ ಕನಸಿನಲ್ಲೂ ನಾನೇನು ಅನಿಷ್ಟವನ್ನು ಮಾಡಿಲ್ಲ. ಹಾಗಿದ್ದರೂ ರಾಜನು ನನ್ನಲ್ಲೇಕೆ ಅಪ್ರಸನ್ನನಾಗಿರುವನು ?”

ರಾಜಾಜ್ಞೆಯಂತೆ ದಂತಿಲನು ದ್ವಾರದಲ್ಲಿ ತಡೆಯಲ್ಪಟ್ಟದ್ದನ್ನು ಕಂಡ ಅಲ್ಲಿ ಕಸಗುಡಿಸುತ್ತಿದ್ದ ಗೋರಂಭನು ಜೋರಾಗಿ ನಕ್ಕು ದ್ವಾರಪಾಲಕರಿಗೆ ಹೀಗೆ ಹೇಳಿದನು – “ಎಲೈ ದ್ವಾರಪಾಲಕರೇ, ರಾಜನ ಅನುಗ್ರಹದಿಂದ ಅಧಿಕಾರದಲ್ಲಿರುವ ದಂತಿಲನು ತಾನೇ ದಂಡ ಅಥವಾ ಕೃಪೆತೋರಲು ಸಮರ್ಥನಿದ್ದಾನೆ. ಇವನು ನನ್ನನ್ನು ಹೇಗೆ ಕತ್ತು ಹಿಡಿದು ದಬ್ಬಿದನೋ, ಈತನನ್ನು ತಡೆದರೆ ನಿಮಗೂ ಕೂಡ  ಹಾಗೆಯೇ ಆಗುವುದು.” ಅದನ್ನು ಕೇಳಿ ದಂತಿಲನು ಚಿಂತಿಸಿದನು – “ಇದು ಖಂಡಿತವಾಗಿಯೂ ಗೋರಂಭನ ಕೆಲಸವೇ. ಉತ್ತಮಕುಲದವನಲ್ಲದಿದ್ದರೂ, ಮೂರ್ಖನಾಗಿದ್ದರೂ, ಸಂಮಾನಯೋಗ್ಯನಲ್ಲದಿದ್ದರೂ ಯಾರು ರಾಜನ ಸೇವೆಯಲ್ಲಿರುವನೋ ಅವನು ಎಲ್ಲ ಕಡೆಯೂ ಗೌರವಕ್ಕೆ ಪಾತ್ರನಾಗುತ್ತಾನೆ. ರಾಜನ ಸೇವೆಯಲ್ಲಿದ್ದವನು ನೀಚನಾಗಿರಲಿ ಅಥವಾ ಹೆದರುಪುಕ್ಕಲನಾಗಿರಲಿ, ಆತನು ಯಾರಿಂದಲೂ ಸೋಲನ್ನು ಕಾಣುವುದಿಲ್ಲ.”

ಹೀಗೆ ತನ್ನ ಪ್ರಭಾವವು ಕುಂಠಿತಗೊಂಡಾಗ ದಂತಿಲನು ಹಲವು ರೀತಿಯಲ್ಲಿ ರೋದಿಸಿ, ವ್ಯಾಕುಲಗೊಂಡ ಮನಸ್ಸಿನಿಂದ, ಉದ್ವೇಗದಿಂದ ಮನೆಗೆ ಹೋಗಿ, ಸಂಜೆಯ ವೇಳೆಗೆ ಗೋರಂಭನನ್ನು ಕರೆಸಿಕೊಂಡು ಆತನಿಗೆ ಎರಡು ವಸ್ತ್ರಗಳನ್ನು ಕೊಟ್ಟು ಸನ್ಮಾನಿಸಿ ಹೀಗೆಂದನು – “ಭದ್ರ, ಅಂದು ನಾನು ನಿನ್ನನ್ನು ದ್ವೇಷದಿಂದ ಹೊರದೂಡಿದ್ದಲ್ಲ. ಬ್ರಾಹ್ಮಣರ ಮುಂದೆ ಯೋಗ್ಯವಲ್ಲದ ಸ್ಥಾನದಲ್ಲಿ ಕುಳಿತುಕೊಂಡದ್ದಕ್ಕಾಗಿ ನೀನು ಅಪಮಾನಿತನಾದೆ, ಕ್ಷಮಿಸು.” ಗೋರಂಭನು ವಸ್ತ್ರಗಳ ಬಹುಮಾನದಿಂದ ಸ್ವರ್ಗವೇ ಸಿಕ್ಕಷ್ಟು ಸಂತೋಷದಿಂದ – “ಸ್ವಾಮೀ, ಆ ದೋಷವನ್ನು ನಾನು ಕ್ಷಮಿಸಿದ್ದೇನೆ, ಈ ಸನ್ಮಾನಕ್ಕಾಗಿ ನನ್ನ ಬುದ್ಧಿಪ್ರಭಾವದಿಂದ ತಮಗೆ ಮತ್ತೆ ರಾಜಾಶ್ರಯ ದೊರೆಯುವಂತೆ ಹೇಗೆ ಮಾಡುತ್ತೇನೆಂದು ನೋಡಿ.” ಹೀಗೆ ನುಡಿದು ಆತನು ಅತ್ಯಂತ ಸಂತೋಷದಿಂದ ಹೊರಟುಹೋದನು.

ತಕ್ಕಡಿಯು ಸ್ವಲ್ಪ ಭಾರ ಕಡಿಮೆಯಾದರೆ ಒಂದು ಕಡೆಗೆ ಮತ್ತು ಸ್ವಲ್ಪ ಭಾರ ಹೆಚ್ಚಾದರೆ ಮತ್ತೊಂದು ಕಡೆಗೆ ಹೇಗೆ ವಾಲುತ್ತದೆಯೋ ಹಾಗೆ ದುಷ್ಟರು ಸಣ್ಣ ಅಪಮಾನದಿಂದ ದುಃಖಗೊಳ್ಳುತ್ತಾರೆ ಮತ್ತು ಸಣ್ಣ ಸನ್ಮಾನದಿಂದ ಅತ್ಯಂತ ಸಂತೋಷಗೊಳ್ಳುತ್ತಾರೆ.

ಮತ್ತೊಂದು ದಿನ ಗೋರಂಭನು ರಾಜಭವನದಲ್ಲಿ ರಾಜನು ಯೋಗನಿದ್ರೆಯಲ್ಲಿದ್ದಾಗ ಬಳಿಯಲ್ಲಿ ಕಸವನ್ನು ಗುಡಿಸುತ್ತಾ ಹೀಗೆ ಹೇಳಿದನು – “ಅಯ್ಯೋ, ನಮ್ಮ ರಾಜ ಎಂತಹ ಅವಿವೇಕಿ, ಮಲವಿಸರ್ಜನೆ ಮಾಡುವಾಗ ಸೌತೆಕಾಯಿಯನ್ನು ತಿನ್ನುತ್ತಾನಲ್ಲ.” ಅದನ್ನು ಕೇಳಿದ ರಾಜ ವಿಸ್ಮಯದಿಂದ ಹೇಳಿದನು – “ಅರೆ ಗೋರಂಭ! ಏನು ಅನುಚಿತವಾದುದ್ದನ್ನು ನುಡಿಯುವೆ. ನೀನು ನಮ್ಮ ಮನೆಕೆಲಸದವನೆಂದು ನಿನ್ನನ್ನು ಕೊಲ್ಲದೇ ಬಿಟ್ಟುರುವೆ. ನಾನು ಹಾಗೆ ಮಾಡುವುದನ್ನು ನೀನೇನಾದರೂ ನೋಡಿರುವೆಯೇನು ?” ಗೋರಂಭನು ಹೇಳಿದನು – “ದೇವ, ರಾತ್ರಿಯೆಲ್ಲಾ ಜೂಜಾಡಿ ಜಾಗರಣೆ ಮಾಡಿರುವ ಕಾರಣ ಈಗ ತೀವ್ರವಾದ ನಿದ್ದೆ ಸೆಳೆಯುತ್ತಿದೆ, ಹಾಗಾಗಿ ಈಗ ಅರೆನಿದ್ರಾವಸ್ಥೆಯಲ್ಲಿ ನಾನೇನು ನುಡಿದೆನೆಂದು ನನಗೇ ತಿಳಿದಿಲ್ಲ. ನಿದ್ರಾವಶನಾದ ನನ್ನನು ಕ್ಷಮಿಸಬೇಕು”

ಇದನ್ನು ಕೇಳಿ ರಾಜನು ಚಿಂತಿಸಿದನು – “ನಾನು ನನ್ನ ಜನ್ಮದಲ್ಲೇ ಮಲವಿಸರ್ಜನೆಯ ಸಮಯದಲ್ಲಿ ಸೌತೆಕಾಯಿಯನ್ನು ತಿಂದಿಲ್ಲ. ಹಾಗಿದ್ದರೂ ಈ ಮೂಢನು ನನ್ನ ಬಗ್ಗೆ ಅಸಂಭವಾದ ಮಾತನ್ನಾಡಿರುವನು. ಹೀಗೆಯೇ ದಂತಿಲನ ಬಗ್ಗೆಯೂ ಕೂಡ ರಾಣಿಯನ್ನು ಆಲಂಗಿಸಿಕೊಂಡನೆಂದು ಹೇಳಿರಬೇಕು. ಆದ್ದರಿಂದ ನಾನು ದಂತಿಲನ ಗೌರವಹಾನಿ ಮಾಡಿದ್ದು ಸರಿಯಲ್ಲ. ದಂತಿಲನಂಥ ಪುರುಷರು ಇಂತಹ ಹೀನಕಾರ್ಯವನ್ನು ಮಾಡುವುದಿಲ್ಲ. ಆತನು ಇಲ್ಲದಿರುವುದರಿಂದ ರಾಜಕಾರ್ಯಗಳು ಹಾಗೂ ಪೌರಕಾರ್ಯಗಳು ನಿಂತುಹೋಗಿವೆ.”

ಈ ರೀತಿ ವಿಮರ್ಶಿಸಿ ದಂತಿಲನನ್ನು ಕರೆಸಿ ಅಂಗವಸ್ತ್ರ ಆಭರಣಾದಿಗಳನ್ನು ಕೊಟ್ಟು ಸನ್ಮಾನಿಸಿ ಆತನನ್ನು ಮತ್ತೆ ಅಧಿಕಾರ ಸ್ಥಾನದಲ್ಲಿ ನಿಯೋಜಿಸಿದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: