1-5-ಮಿಥ್ಯಾವಿಷ್ಣು-ನೇಕಾರ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದಾನೊಂದು ರಾಜ್ಯದಲ್ಲಿ ನೇಕಾರ ಹಾಗೂ ಬಡಗಿ ಸ್ನೇಹಿತರಾಗಿದ್ದರು. ಅವರು ಬಾಲ್ಯದಿಂದಲೇ ಸಹಚರರಾಗಿದ್ದು ಪರಸ್ಪರ ಅತೀವ ಸ್ನೇಹವುಳ್ಳವರಾಗಿ ಯಾವಾಗಲೂ ಒಟ್ಟಿಗೆ ಕಾಲಕಳೆಯುತ್ತಿದ್ದರು. ಒಮ್ಮೆ ಆ ರಾಜ್ಯದ ದೇವಸ್ಥಾನವೊಂದರಲ್ಲಿ ಯಾತ್ರಾಮಹೋತ್ಸವವು ಜರುಗಿತು. ಅಲ್ಲಿ ನಟನರ್ತಕರ ಸಮೂಹದ ಮಧ್ಯೆ ಹಾಗೂ ನಾನಾ ದೇಶಗಳಿಂದ ಬಂದ ಜನರ ಗುಂಪಿನ ಮಧ್ಯೆ ಅಲೆಯುತ್ತಿದ ಈ ಮಿತ್ರರು ಆನೆಯ ಮೇಲೆ ಕುಳಿತಿರುವ, ಸರ್ವಲಕ್ಷಣಸಂಪನ್ನಳಾದ, ಸಖಿಯರಿಂದ ಹಾಗೂ ಅಂತಃಪುರದ ನಪುಂಸಕರಿಂದ ಸುತ್ತುವರೆದ, ದೇವದರ್ಶನಕ್ಕಾಗಿ ಬಂದಿದ್ದ ರಾಜಕನ್ಯೆಯನ್ನು ನೋಡಿದರು. ಅವಳನ್ನು ನೋಡಿದ ಕೂಡಲೇ ನೇಕಾರನು ವಿಷವೇರಿದಂತೆ, ದುಷ್ಟಗ್ರಹದಿಂದ ಪೀಡಿತನಾದಂತೆ, ಮನ್ಮಥಬಾಣಗಳಿಂದ ಹೊಡೆಯಲ್ಪಟ್ಟಂತೆ ನೆಲದ ಮೇಲೆ ಬಿದ್ದನು. ಅವನನ್ನು ಆ ಅವಸ್ಥೆಯಲ್ಲಿ ನೋಡಿದ ಬಡಗಿಯು ಅವನ ದುಃಖದಿಂದ ದುಃಖಿತನಾಗಿ ಆಪ್ತಜನರ ಸಹಾಯದಿಂದ ಅವನನ್ನು ಎತ್ತಿಕೊಂಡು ತನ್ನ ಮನೆಗೆ ಬಂದನು. ಅವನಿಗೆ ವಿವಿಧ ಶೀತೋಪಚಾರ, ಚಿಕಿತ್ಸೆ, ಮಂತ್ರವಾದಿಗಳ ಉಪಚಾರ ಮುಂತಾದವುಗಳನ್ನು ಮಾಡಿಸಿದ ಮೇಲೆ ಬಹುಕಾಲದ ನಂತರ ನೇಕಾರನು ಗುಣಮುಖನಾದನು.

ಆಗ ಬಡಗಿಯು – “ಮಿತ್ರನೇ, ನೀನೇಕೆ ಒಮ್ಮೆಗೆ ಪ್ರಜ್ಞೆತಪ್ಪಿದೆ ? ಈಗ ನಿನ್ನ ಪರಿಸ್ಥಿತಿ ಹೇಗಿದೆ ?” ಎಂದು ಕೇಳಿದನು. ಅದಕ್ಕೆ ನೇಕಾರನು ಹೀಗೆ ಉತ್ತರಿಸಿದನು – “ಗೆಳೆಯ, ನನ್ನ ರಹಸ್ಯವಾದ ಆತ್ಮವೇದನೆಯನ್ನು ಹೇಳುವೆನು ಕೇಳು. ನನ್ನನ್ನು ನೀನು ಮಿತ್ರನನ್ನಾಗಿ ಪರಿಗಣಿಸುವುದಾದರೆ ಒಂದಷ್ಟು ಉರಿಯುವ ಕಟ್ಟಿಗೆಗಳನ್ನು ತರಿಸಿ ನನಗೆ ಸಾಯಲು ಅನುವು ಮಾಡಿಕೊಡು. ಅತಿಯಾದ ಸಲಿಗೆಯಿಂದ ನಿನ್ನ ಬಗ್ಗೆ ಅನುಚಿತವಾದುದ್ದನ್ನು ಮಾಡಿದ್ದರೆ, ಕ್ಷಮಿಸು.”

ಬಡಗಿಯು ಆ ಮಾತುಗಳನ್ನು ಕೇಳಿ ಕಣ್ಣೀರುಸುರಿಸುತ್ತಾ ಗದ್ಗದಿತನಾಗಿ ಹೇಳಿದನು – “ಗೆಳೆಯ, ನಿನ್ನ ದುಃಖದ ಕಾರಣವನ್ನು ತಿಳಿಸು, ಅದಕ್ಕೇನಾದರೂ ಪರಿಹಾರವಿದ್ದರೆ ಮಾಡೋಣ. ಈ ಲೋಕದ  ಬ್ರಹ್ಮಾಂಡದ ಒಳಗೆ ಔಷದಿಗಳಿಂದ, ಧನದಿಂದ, ಮಂತ್ರಪ್ರಯೋಗದಿಂದ ಅಥವಾ ಮಹಾತ್ಮರ ಬುದ್ಧಿಬಲದಿಂದ ಪರಿಹರಿಸಲಾಗದ್ದು ಏನೂ ಇಲ್ಲ. ಈ ಯಾವುದಾದರಿಂದಲಾದರೂ ಪರಿಹಾರ ಸಾಧ್ಯವಾದರೆ ಅದನ್ನು ನಾನು ಮಾಡುತ್ತೇನೆ.”

ನೇಕಾರ – “ಇದಾವುದರಿಂದಲೂ ಅಲ್ಲದೇ ಬೇರಾವ ಸಾವಿರ ಉಪಾಯಗಳಿಂದಲೂ ಕೂಡ ನನ್ನ ದುಃಖವನ್ನು ಪರಿಹರಿಸಲಸಾಧ್ಯ. ಆದ್ದರಿಂದ ನನ್ನ ಸಾವಿನ ವಿಷಯದಲ್ಲಿ ಕಾಲಹರಣ ಮಾಡಬೇಡ.”

ಬಡಗಿ – “ಮಿತ್ರನೇ, ಅಸಾಧ್ಯವಾಗಿದ್ದರೂ ದುಃಖದ ಕಾರಣವನ್ನು ತಿಳಿಸು, ಪರಿಹಾರ ಅಸಾಧ್ಯವೆಂದು ಅರಿತು ನಾನು ಕೂಡ ನಿನ್ನೊಂದಿಗೆ ಅಗ್ನಿಪ್ರವೇಶ ಮಾಡುವೆನು. ನಿನ್ನ ಅಗಲಿಕೆಯನ್ನು ಒಂದು ಕ್ಷಣವೂ ಸಹಿಸಲಾರೆನು. ಇದೇ ನನ್ನ ನಿರ್ಧಾರ.”

ನೇಕಾರ – “ಅಂದು ಉತ್ಸವದಲ್ಲಿ ಆನೆಯೇರಿ ಬಂದಿದ್ದ ಆ ರಾಜಕನ್ಯೆಯನ್ನು ನೋಡಿದ ಮೇಲೆ ಕಾಮಬಾಧೆಯಿಂದ ನನ್ನ ಈ ಪರಿಸ್ಥಿತಿಯಾಗಿದೆ. ಈ ವೇದನೆಯನ್ನು ತಡೆದುಕೊಳ್ಳಲ್ಲು ನನಗೆ ಸಾಧ್ಯವಿಲ್ಲ. ಅವಳೊಂದಿಗೆ ಸಮಾಗಮದಿಂದಾದ ರತಿಶ್ರಮದಿಂದ ಬಳಲಿ ಮತ್ತೇರಿದ ಆನೆಯ ಕುಂಭಸ್ಥಳದಂತಿರುವ, ಕುಂಕುಮದಿಂದ ಅಲಂಕೃತವಾಗಿರುವ ಅವಳ ವಕ್ಷಸ್ಥಳದಲ್ಲಿ ನನ್ನ ಎದೆಯನ್ನು ಸೇರಿಸಿ ಅವಳ ಭುಜಗಳ ಮಧ್ಯೆ ಒಂದು ಕ್ಷಣಕಾಲ ಯಾವಾಗ ವರಗಿಕೊಳ್ಳುವೆನೋ! ತೊಂಡೆಹಣ್ಣಿನಂತೆ ಕೆಂಪಗಿರುವ ಆಕೆಯ ತುಟಿಗಳನ್ನು, ಕಲಶದಂತಿರುವ ಸ್ತನಗಳನ್ನು, ಯೌವನದ ಗರ್ವವನ್ನು, ತಗ್ಗಾದ ಹೊಕ್ಕಳನ್ನು, ಸಹಜವಾಗಿ ಸುತ್ತಿಕೊಂಡಿರುವ ಗುಂಗುರು ಕೂದಲುಗಳನ್ನು, ಸಣ್ಣದಾದ ನಡುವನ್ನು ನೆನೆಸಿಕೊಂಡ ಮಾತ್ರಕ್ಕೆ ಮನಸ್ಸಿನಲ್ಲಿ ದುಃಖವುಂಟಾಗುವುದು ಸಹಜವೇ. ಆದರೆ ಆಕೆಯ ಕೆನ್ನೆಗಳು ನನ್ನನ್ನು ಮತ್ತೆ ಮತ್ತೆ ಶೋಕದಲ್ಲಿ ತಳ್ಳುತ್ತಿರುವುದು ಸರಿಯಲ್ಲ.”

ಬಡಗಿಯು ಆತನ ಈ ಕಾಮಪೂರಿತ ಮಾತುಗಳನ್ನು ಕೇಳಿ ಮಂದಹಾಸದಿಂದ ಹೀಗೆ ಹೇಳಿದನು – “ಹಾಗಿದ್ದಲ್ಲಿ ಸುದೈವದಿಂದ ನಮ್ಮ ಮನೋರಥವು ಸಿದ್ಧವಾದ ಹಾಗೆಯೇ, ಇಂದೇ ಅವಳೊಂದೆಗೆ ಸಂಭೋಗವನ್ನು ನಡೆಸು.”

ನೇಕಾರ – “ಮಿತ್ರ, ಸೈನಿಕರಿಂದ ರಕ್ಷಿಸಲ್ಪಟ್ಟ ಅವಳ ಅಂತಃಪುರಕ್ಕೆ ಕೇವಲ ಗಾಳಿಗೆ ಮಾತ್ರ ತಡೆಯಿಲ್ಲದ ಪ್ರವೇಶವಿರುವಾಗ ಅವಳೊಂದಿಗೆ ಸಮಾಗಮ ಹೇಗೆ ಸಾಧ್ಯ ? ಸುಳ್ಳು ನುಡಿಗಳಿಂದ ನನ್ನನು ಅಪಹಾಸ್ಯ ಮಾಡುವೆಯೇನು ?”

ಬಡಗಿಯು “ಮಿತ್ರ, ನನ್ನ ಬುದ್ಧಿಬಲವನ್ನು ನೋಡು” ಎಂದು ನುಡಿದು ಆ ಕ್ಷಣದಲ್ಲಿಯೇ ವರುಣವೃಕ್ಷದ ಮರದಿಂದ ಕೀಲನಿಂದ ಸಂಚರಿಸುವಂತಹ ರೆಕ್ಕೆಯುಳ್ಳ ಗರುಡನನ್ನು ಮತ್ತು ಶಂಖ, ಚಕ್ರ, ಗದೆ, ಪದ್ಮ, ಕಿರೀಟ, ಕೌಸ್ತುಭಮಣಿ ಮುಂತಾದ ವಿಷ್ಣುವಿನ ಎಲ್ಲಾ ಲಕ್ಷಣಗಳನ್ನು ನಿರ್ಮಿಸಿದನು. ನಂತರ ಗರುಡನ ಮೇಲೆ ನೇಕಾರನನ್ನು ಕುಳ್ಳರಿಸಿ, ವಿಷ್ಣುವಿನ ಎಲ್ಲಾ ಚಿನ್ಹೆಗಳನ್ನು ತೊಡಿಸಿ, ಕೀಲಿನಿಂದ ಹೇಗೆ ಗರುಡನನ್ನು ನಡೆಸುವುದೆಂದು ತೋರಿಸಿಕೊಟ್ಟು ಹೇಳಿದನು – “ಗೆಳೆಯ, ಏಕಾಕಿನಿಯಾಗಿ ಏಳು ಅಂತಸ್ತಿನ ಭವನದಲ್ಲಿರುವ ರಾಜಕನ್ಯೆಯ ಅಂತಃಪುರಕ್ಕೆ ರಾತ್ರಿ ಈ ವಿಷ್ಣುರೂಪದಲ್ಲಿ ಹೋಗಿ ಮುಗ್ಧಸ್ವಭಾವದ ಅವಳನ್ನು ನೀನು ವಾಸುದೇವನೆಂದು ನಂಬಿಸಿ ನಿನ್ನ ಸುಳ್ಳುನುಡಿಗಳಿಂದ ಅವಳನ್ನು ರಂಜಿಸಿ ವಾತ್ಸಾಯನನು ತಿಳಿಸಿರುವ ರೀತಿಯಲ್ಲಿ ಅವಳನ್ನು ಸಂಭೋಗಿಸು.

ನೇಕಾರನು ಅದರಂತೆಯೇ ಅಲ್ಲಿಗೆ ಹೋಗಿ ರಾಜಕನ್ಯೆಗೆ ಹೇಳಿದನು – “ರಾಜಪುತ್ರೀ, ಎಚ್ಚರವಾಗಿರುವೆಯೋ ಅಥವಾ ಮಲಗಿರುವೆಯೋ ? ನಾನು ನಿನಗಾಗಿ ಕ್ಷೀರಸಾಗರದಿಂದ ಲಕ್ಷ್ಮೀಯನ್ನು ಬಿಟ್ಟು ಬಂದಿರುವೆ. ಆದ್ದರಿಂದ ನನ್ನೊಂದಿಗೆ ಸಮಾಗಮ ಮಾಡು.

ಅವಳು ಗರುಡಾರೂಢನಾಗಿರುವ, ಚತುರ್ಭುಜನಾದ, ಆಯುಧವನ್ನು ಧರಿಸಿರುವ, ಕೌಸ್ತುಭಮಣಿಯಿಂದ ಅಲಂಕೃತನಾದ ಅವನನ್ನು ವಿಸ್ಮಯದಿಂದ ನೋಡಿ ಹಾಸಿಗೆಯಿಂದೆದ್ದು ಹೇಳಿದಳು – “ದೇವ, ನಾನು ಹುಳುವಿನಂತೆ ಅಪವಿತ್ರವಾದ ಮನುಷ್ಯೆ, ನೀವಾದರೋ ತ್ರೈಲೋಕ್ಯಪಾವನರು ಮತ್ತು ವಂದನೀಯರು. ಆದ್ದರಿಂದ ಈ ಸಮಾಗಮವು ಹೇಗೆ ಸರಿ ?”

ನೇಕಾರ – “ಸುಂದರಿ, ನಿಜವನ್ನೇ ನುಡಿದಿರುವೆ. ಆದರೆ ಹಿಂದೆ ಗೋಪಾಲಕರ ವಂಶದಲ್ಲಿ ರಾಧೆಯೆಂಬ ನನ್ನ ಪತ್ನಿಯಿದ್ದಳು, ಇಂದು ಅವಳೇ ನೀನಾಗಿ ಅವತರಿಸಿದ್ದಾಳೆ. ಆದ್ದರಿಂದ ನಾನು ಇಲ್ಲಿಗೆ ಬಂದಿರುವೆನು”

ರಾಜಕನ್ಯೆ – “ದೇವ, ಹಾಗಿದ್ದಲ್ಲಿ ನನ್ನ ತಂದೆಯನ್ನು ಕೇಳಿಕೋ, ಆತನು ಖಂಡಿತವಾಗಿಯೂ ನನ್ನನು ನಿನಗೆ ಕೊಡುವನು.

ನೇಕಾರ – “ಸುಂದರಿ, ನಾನು ಮನುಷ್ಯರ ದರ್ಶನಕ್ಕೆ ಸಿಕ್ಕುವುದಿಲ್ಲ, ಇನ್ನು ಮಾತನಾಡುವುದೆಲ್ಲಿಂದ ? ನೀನು ಗಾಂಧರ್ವವಿವಾಹದ ಮೂಲಕ ನಿನ್ನನ್ನು ಒಪ್ಪಿಸಿಕೋ. ಇಲ್ಲದಿದ್ದರೆ ಶಾಪವನ್ನು ಕೊಟ್ಟು ನಿನ್ನ ತಂದೆಯನ್ನು ಆತನ ಕುಲಸಮೇತ ಬೂದಿಮಾಡಿಬಿಡುವೆನು.”

ಹೀಗೆ ಹೇಳಿ ಗರುಡಯಂತ್ರದಿಂದ ಇಳಿದು ಎಡಗೈಯಿಂದ ಅವಳನ್ನು ಹಿಡಿದು, ಭಯದಿಂದ ಹಾಗೂ ಲಜ್ಜೆಯಿಂದ ನಡುಗುತ್ತಿದ್ದ ಅವಳನ್ನು ಹಾಸಿಗೆಗೆ ಕರೆದುಕೊಂಡು ಬಂದನು. ಆನಂತರ ರಾತ್ರಿಯೆಲ್ಲಾ ವಾತ್ಸಾಯನನು ತಿಳಿಸಿರುವ ವಿಧಾನಗಳಿಂದ ಅವಳನ್ನು ಭೋಗಿಸಿ ಬೆಳಗ್ಗಿನ ಜಾವ ಯಾರಿಗೂ ತಿಳಿಯದ ಹಾಗೆ ಹೊರಟುಹೋದನು. ಹೀಗೆ ನಿತ್ಯವೂ ಅವಳನ್ನು ಸಂಭೋಗಿಸುತ್ತ ಕಾಲವು ಕಳೆಯಿತು.

ಆನಂತರ ಒಮ್ಮೆ ಅಂತಃಪುರರಕ್ಷಕರು ಆಕೆಯ ಕೆಂಪಾಗಿ ಗಾಸಿಗೊಂಡಿರುವ ತುಟಿಗಳನ್ನು ನೋಡಿ ಪರಸ್ಪರ ಹೀಗೆ ಮಾತನಾಡಿಕೊಂಡರು – “ಓಹೋ! ನೋಡಿರಿ, ಈಕೆಯ ಅವಯವಗಳು ಪುರುಷನಿಂದ ಭೋಗಿಸಲ್ಪಟ್ಟಂತೆ ತೋರುತ್ತಿವೆ. ಈ ರೀತಿ ಸುರಕ್ಷಿತವಾದ ಅರಮನೆಯಲ್ಲೂ ಇಂತಹ ವ್ಯವಹಾರ ಹೇಗೆ ಸಾಧ್ಯ ? ರಾಜನಿಗೆ ತಿಳಿಸೋಣ”. ಹೀಗೆ ನಿರ್ಧರಿಸಿ ಎಲ್ಲರೂ ಒಟ್ಟಿಗೆ ರಾಜನ ಬಳಿಗೆ ಹೋಗಿ – “ದೇವ, ಇದು ಹೇಗೋ ಗೊತ್ತಿಲ್ಲ, ಆದರೆ ಸುರಕ್ಷಿತವಾದ ರಾಜಕುಮಾರಿಯ ಅಂತಃಪುರಕ್ಕೆ ಯಾರೋ ಪ್ರವೇಶಿಸುತ್ತಾನೆ, ಇನ್ನು ಏನು ಮಾಡಬೇಕೆಂದು ನೀವೇ ನಿರ್ಧರಿಸಬೇಕು” ಎಂದರು. ಇದನ್ನು ಕೇಳಿ ರಾಜನು ತುಂಬಾ ಗಾಬರಿಗೊಂಡು ಯೋಚಿಸಿದನು – “ಮಗಳು ಹುಟ್ಟಿದರೆ ತುಂಬಾ ಚಿಂತೆಯುಂಟಾಗುತ್ತದೆ.  ಯಾರಿಗೆ ಕೊಟ್ಟು ಮದುವೆ ಮಾಡಬೇಕೆಂದು ಬಹಳ ಯೋಚಿಸಬೇಕಾಗುತ್ತದೆ. ಕೊಟ್ಟಮೇಲೆ ಸುಖವಾಗಿ ಇರುತ್ತಾಳೋ ಇಲ್ಲವೋ ಎಂಬ ಚಿಂತೆ ಕಾಡುತ್ತದೆ. ಒಟ್ಟಿನಲ್ಲಿ ಕನ್ಯಾಪಿತೃಗೆ ಕಷ್ಟವೇ. ನದಿಗಳು ಹಾಗೂ ನಾರಿಯರು ಸಮಾನಸ್ಥಿತಿಯವರಾಗಿರುತ್ತಾರೆ. ನದಿಯ ಎರಡು ದಡಗಳು ಹಾಗೂ ನಾರಿಯರ ಎರಡು ಕುಲಗಳು (ತಂದೆಯ ಕುಲ ಹಾಗೂ ಗಂಡನ ಕುಲ) ಒಂದೇ ರೀತಿ ಇರುತ್ತದೆ. ನದಿಗಳು ನೀರಿನಿಂದ ದಡಗಳನ್ನು ನಾಶಪಡಿಸಿದರೆ, ನಾರಿಯರು ತಮ್ಮ ದೋಷದಿಂದ ಎರಡು ಕುಲಗಳನ್ನೂ ನಾಶಪಡಿಸುತ್ತಾರೆ. ಹೆಣ್ಣು ಹುಟ್ಟುದಾಗ ತಾಯಿಯ ಮನಸ್ಸಿಗೆ ಚಿಂತೆಯನ್ನು ತರುತ್ತಾಳೆ. ಬೆಳೆಯುತ್ತಿದ್ದಂತೆ ಕುಟುಂಬದವರಿಗೆಲ್ಲ ಚಿಂತೆಯನ್ನು ತಂದೊಡ್ಡುತ್ತಾಳೆ. ಮದುವೆಮಾಡಿಕೊಟ್ಟ ಮೇಲೂ ಕೆಟ್ಟಕೆಲಸಗಳನ್ನು ಮಾಡುತ್ತಾಳೆ. ಹಾಗಾಗಿ ಮಗಳೆಂಬ ಆಪತ್ತನ್ನು ದಾಟುವುದೇ ಕಷ್ಟ.”

ಹೀಗೆ ಹಲವು ರೀತಿಯಲ್ಲಿ ಚಿಂತಿಸಿ ರಾಣಿಗೆ ಏಕಾಂತದಲ್ಲಿ ಹೇಳಿದನು – “ದೇವೀ, ಈ ಅಂತಃಪುರರಕ್ಷಕರು ಏನು ನುಡಿಯುತ್ತಿದ್ದಾರೆಂದು ತಿಳಿದುಕೋ, ಕಾಲ ಸನ್ನಿಹಿತವಾಗಿರುವ ಯಾರ ಕೆಲಸ ಇದೆಂದು ತಿಳಿ”.  ರಾಣಿಯು ಅವನ ಮಾತನ್ನು ಕೇಳಿ ದುಃಖದಿಂದ ಕೂಡಲೇ ಮಗಳ ಅಂತಃಪುರಕ್ಕೆ ಹೋಗಿ ತುಟಿಗಳಲ್ಲಿ ಗಾಯವಾದ ಹಾಗೂ ಅವಯವಗಳಲ್ಲಿ ಉಗುರುಗಳ ಗಾಯಗಳುಳ್ಳ ಅವಳನ್ನು ನೋಡಿ ಹೇಳಿದಳು – “ಪಾಪೀ, ಕುಲಕಳಂಕಿತೇ, ಶೀಲಕಳೆದುಕೊಳ್ಳುವ ಕೆಲಸವನ್ನು ಮಾಡಿದೆಯಾ ? ಯಮನ ದೃಷ್ಟಿಗೆ ಹತ್ತಿರವಾಗಿರುವ ಯಾರು ನಿನ್ನ ಬಳಿಗೆ ಬರುತ್ತಿದ್ದಾನೆ ಎಂದು ನನಗೆ ನಿಜವನ್ನು ಹೇಳು”. ಹೀಗೆ ಕೋಪದಿಂದ ನಿಷ್ಠುರವಾದ ತಾಯಿಯ ಮಾತನ್ನು ಕೇಳಿ ಭಯದಿಂದ ಹಾಗೂ ಲಜ್ಜೆಯಿಂದ ತಲೆತಗ್ಗಿಸಿಕೊಂಡು ಹೇಳಿದಳು – “ಅಮ್ಮಾ, ಸಾಕ್ಷಾತ್ ಗರುಡಾರೂಢನಾದ ನಾರಾಯಣನೇ ರಾತ್ರಿ ನನ್ನ ಬಳಿ ಬರುತ್ತಿದ್ದಾನೆ. ನನ್ನ ಮಾತು ಸುಳ್ಳೆನಿಸಿದರೆ ರಾತ್ರಿ ಅಡಗಿಕೊಂಡಿದ್ದು ನೀನೇ ಕಣ್ಣಾರೆ ಭಗವಾನ್ ವಿಷ್ಣುವನ್ನು ನೋಡು”. ಅದನ್ನು ಕೇಳಿ ರಾಣಿಯು ನಗುತ್ತಾ ಸರ್ವಾಂಗಪುಳಕಿತಳಾಗಿ ಕೂಡಲೆ ರಾಜನ ಬಳಿ ಹೋಗಿ – “ದೇವ, ನೀವು ಬಹಳ ಭಾಗ್ಯಶಾಲಿಗಳು, ಪ್ರತಿದಿನ ರಾತ್ರಿ ಭಗವಾನ್ ನಾರಾಯಣನು ನಮ್ಮ ಮಗಳ ಬಳಿ ಬರುತ್ತಾನೆ. ಅವನು ಗಂಧರ್ವರೀತಿಯಿಂದ ಅವಳನ್ನು ವರಿಸಿದ್ದಾನೆ. ಅವನು ಮನುಷ್ಯರೊಂದಿಗೆ ಮಾತನಾಡುವುದಿಲ್ಲ, ಆದ್ದರಿಂದ ಇಂದು ರಾತ್ರಿ ನಾವು ಕಿಟಕಿಯಿಂದ ನೋಡೋಣ” ಎಂದಳು. ಅದನ್ನು ಕೇಳಿ ಹರ್ಷಗೊಂಡ ರಾಜನಿಗೆ ಅಂದಿನ ದಿನ ನೂರುವರ್ಷಗಳು ಕಳೆದಷ್ಟು ಕಷ್ಟಕರವಾಗಿ ಕಳೆಯಿತು. ರಾತ್ರಿ ಪತ್ನಿಯೊಂದಿಗೆ ಕಿಟಕಿಯ ಬಳಿ ಅಡಗಿ ಕುಳಿತು ಆಕಾಶವನ್ನು ನೋಡುತ್ತಿದ್ದ ರಾಜನಿಗೆ ಗರುಡಾರೂಢನಾಗಿ ಶಂಖ, ಚಕ್ರ, ಪದ್ಮ ಮುಂತಾದ ಸಕಲ ಚಿನ್ಹೆಗಳನ್ನುಳ್ಳ ವಿಷ್ಣುವು (ಅಂದರೆ ನೇಕಾರನು) ಇಳಿಯುವುದನ್ನು ನೋಡಿದನು. ಆಗ ರಾಜನು ತನ್ನನ್ನು ಅಮೃತಪ್ರವಾಹದಲ್ಲಿ ತೋಯಿಸಲ್ಪಟ್ಟಂತೆ ಭಾವಿಸಿಕೊಂಡು ರಾಣಿಗೆ ಹೇಳಿದನು – “ನಾರಾಯಣನೇ ನಮ್ಮ ಮಗಳನ್ನು ಸೇವಿಸುತ್ತಿರುವನು, ಇದಕ್ಕಿಂತ ಬೇರೆ ಭಾಗ್ಯ ನಮಗಿಲ್ಲ. ನಮ್ಮೆಲ್ಲಾ ಮನೋರಥವು ಫಲಿಸಿದಂತಾಯಿತು. ಈಗ ಅಳಿಯನ ಪ್ರಭಾವದಿಂದ ಸಕಲ ಭೂಮಿಯನ್ನೇ ನನ್ನ ವಶ ಮಾಡಿಕೊಳ್ಳುವೆನು.” ಹೀಗೆ ನಿಶ್ಚಯಿಸಿ ಎಲ್ಲಾ ಸಾಮಂತರಾಜರ ಸೀಮೋಲ್ಲಂಘನವನ್ನು ಮಾಡಲು ತೊಡಗಿದನು. ಆಗ ಸಾಮಂತರಾಜರೆಲ್ಲರೂ ಒಂದುಗೂಡಿ ಅವನ ಮೇಲೆ ಯುದ್ಧಕ್ಕೆ ಬಂದರು.

ಆಗ ರಾಜನು ರಾಣಿಯ ಮೂಲಕ ಮಗಳಿಗೆ ಹೀಗೆ ಹೇಳಿಸಿದನು – “ನೀನು ನಮ್ಮ ಮಗಳಾಗಿರುವಾಗ ಮತ್ತು ನಾರಾಯಣನು ನಮ್ಮ ಅಳಿಯನಾಗಿರುವಾಗ ಹೀಗೆ ರಾಜರೆಲ್ಲರೂ ನಮ್ಮ ಮೇಲೆ ಯುದ್ಧಕ್ಕೆ ಬರುವುದು ಸರಿಕಾಣುವುದಿಲ್ಲ. ಆದ್ದರಿಂದ ನೀನು ನಿನ್ನ ಗಂಡನಿಗೆ ಈ ಶತ್ರುಗಳನ್ನೆಲ್ಲಾ ಕೊಲ್ಲಲು ಹೇಳು.” ಆಗ ರಾಜಕುಮಾರಿಯು ವಿನಯಪೂರ್ವಕವಾಗಿ ರಾತ್ರಿ ನೇಕಾರನಿಗೆ ಹೇಳಿದಳು – “ಭಗವನ್, ನೀನು ಅಳಿಯನಾಗಿರುವಾಗ ನನ್ನ ತಂದೆಯು ಶತ್ರುಗಳಿಂದ ಸೋಲುವುದು ಸರಿಯಲ್ಲ. ಆದ್ದರಿಂದ ಕೃಪೆಮಾಡಿ ಎಲ್ಲಾ ಶತ್ರುಗಳನ್ನು ಕೊಂದುಬಿಡು.” ಅದಕ್ಕೆ ನೇಕಾರನು – “ಸುಂದರಿ, ನಿನ್ನ ತಂದೆಯ ಈ ಶತ್ರುಗಳು ಎಷ್ಟು ಮಾತ್ರದವರು ? ವಿಶ್ವಾಸದಿಂದಿರು, ಕ್ಷಣಮಾತ್ರದಲ್ಲಿ ಸುದರ್ಶನ ಚಕ್ರದಿಂದ ಇವರನ್ನು ಎಳ್ಳಿನಂತೆ ತುಂಡರಿಸಿಬಿಡುವೆನು. ಕಾಲಕಳೆದಂತೆ ಶುತ್ರುಗಳು ಎಲ್ಲಾ ಪ್ರದೇಶಗಳನ್ನು ಗೆದ್ದುಕೊಂಡರು ಹಾಗೂ ರಾಜನ ಪಾಲಿಗೆ ಕೋಟೆಯೊಂದೇ ಉಳಿದುಕೊಂಡಿತು. ಹಾಗಿದ್ದರೂ ಕೂಡ ರಾಜನು ವಾಸುದೇವರೂಪದಲ್ಲಿರುವವನು ನೇಕಾರನೆಂದು ತಿಳಿಯದೇ ಪ್ರತಿದಿನವೂ ಅವನಿಗೆ ಕರ್ಪೂರ, ಅಗರು, ಕಸ್ತೂರಿ ಮೊದಲಾದ ಪರಿಮಳ ವಿಶೇಷಗಳನ್ನು ಹಾಗೂ ವಸ್ತ್ರ, ಪುಷ್ಪ, ಭಕ್ಷ್ಯಗಳನ್ನು ಕಳಿಸಿಕೊಡುತ್ತಿದ್ದು ಒಮ್ಮೆ ಮಗಳ ಮೂಲಕ ಅವನಿಗೆ ಹೀಗೆ ಹೇಳಿಸಿದನು – “ನಾಳೆ ಖಂಡಿತ ನಮ್ಮ ಕೋಟೆಯು ಶತ್ರುಗಳ ವಶವಾಗುತ್ತದೆ ಏಕೆಂದರೆ ಹುಲ್ಲು, ಕಟ್ಟಿಗೆ ಮುಂತಾದವುಗಳೆಲ್ಲಾ ಮುಗಿದುಹೋಗಿದೆ. ಜನರೆಲ್ಲರೂ ಶತ್ರುಪ್ರಹಾರದಿಂದ ಜರ್ಜರಿತರಾಗಿ ಯುದ್ಧಮಾಡಲು ಶಕ್ತರಾಗಿಲ್ಲ ಹಾಗೂ ಹಲವರು ಸತ್ತುಹೋಗಿದ್ದಾರೆ. ಹಾಗಾಗಿ ಈ ಸಮಯದಲ್ಲಿ ಏನು ಸರಿಯೋ ಅದನ್ನು ತಾವು ಮಾಡಬೇಕು.” ಅದನ್ನು ಕೇಳಿ ನೇಕಾರನು ಯೋಚಿಸಿದನು – “ಕೋಟೆಯು ನಾಶವಾದರೆ ನನಗೆ ರಾಜಕುಮಾರಿಯಿಂದ ವಿಯೋಗವಾಗುತ್ತದೆ. ಆದ್ದರಿಂದ ಗರುಡಯಂತ್ರವನ್ನೇರಿ ಆಯುಧಗಳನ್ನು ಹಿಡಿದು ಆಕಾಶದಲ್ಲಿ ಶತ್ರುಗಳಿಗೆ ಕಾಣಿಸಿಕೊಳ್ಳುತ್ತೇನೆ. ಒಂದು ವೇಳೆ ನನ್ನನ್ನು ವಾಸುದೇವನೆಂದು ತಿಳಿದು ಭ್ರಾಂತ್ರರಾದಲ್ಲಿ ರಾಜನ ಸೈನಿಕರು ಅವರನ್ನು ಸೋಲಿಸಬಹುದು. ವಿಷವಿಲ್ಲದಿದ್ದರೂ ಜನರನ್ನು ಹೆದರಿಸಲು ಸರ್ಪವು ದೊಡ್ಡದಾಗಿ ಹೆಡೆಬಿಚ್ಚಿ ಬುಸುಗುಟ್ಟಬೇಕು. ಕೋಟೆಯನ್ನು ಉಳಿಸುವ ಪ್ರಯತ್ನದಲ್ಲಿ ನಾನು ಸತ್ತರೂ ಚಿಂತೆಯಿಲ್ಲ. ಗೋವುಗಳ, ಬ್ರಾಹ್ಮಣರ, ರಾಜನ, ಸ್ತ್ರೀಯ ಅಥವಾ ದೇಶದ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಿದವನಿಗೆ ಸ್ವರ್ಗ ಪ್ರಾಪ್ತಿಯಾಗುತ್ತದೆ. ಚಂದ್ರನು ಮಂಡಲದಲ್ಲಿದ್ದಾಗ (ಅಂದರೆ ಸೂರ್ಯನ ರಕ್ಷಣೆಯಲ್ಲಿದ್ದಾಗ) ಸೂರ್ಯನು ರಾಹುವಿನಿಂದ ಹಿಡಿಯಲ್ಪಟ್ಟು ಆತನೊಡನೆ ಸೆಣೆಸುತ್ತಾನೆ. ಹೀಗೆ ಶರಣಾಗತನಾದವನ ರಕ್ಷಣೆ ಮಾಡುವುದರಲ್ಲಿ ಆಪತ್ತುಗಳು ಬಂದರೆ ತೆಜಸ್ವ್ವಿಗಳಿಗೆ ಅದು ಶ್ಲಾಘನೀಯವೇ.”

ಹೀಗೆ ನಿಶ್ಚಯಿಸಿ ಬೆಳಗ್ಗೆ ಹಲ್ಲು ತೊಳೆದುಕೊಂಡು ರಾಜಕುಮಾರಿಗೆ ಹೇಳಿದನು – “ಸುಂದರಿ, ಎಲ್ಲಾ ಶತ್ರುಗಳು ನಾಶವಾಗುವವರೆಗೆ ಅನ್ನ ನೀರನ್ನು ಮುಟ್ಟುವುದಿಲ್ಲ. ಹೆಚ್ಚೇಕೆ ? ನಿನ್ನೊಂದಿಗೆ ಸಮಾಗಮವನ್ನೂ ಮಾಡುವುದಿಲ್ಲ. ನಿನ್ನ ತಂದೆಗೆ ಬೆಳಗ್ಗೆಯೇ ಸೈನ್ಯದೊಂದಿಗೆ ನಗರದ ಹೊರಗೆ ತೆರಳಿ ಯುದ್ಧಮಾಡಲು ತಿಳಿಸು. ನಾನು ಆಕಾಶದಲ್ಲಿದ್ದುಕೊಂಡೇ ಅವರೆಲ್ಲರನ್ನೂ ನಿಸ್ತೇಜರನ್ನಾಗಿ ಮಾಡುವೆನು. ಬಳಿಕ ಅವರನ್ನು ಸೈನಿಕರು ಸುಲಭವಾಗಿ ಕೊಲ್ಲಬಹುದು. ನಾನೇ ಸ್ವತಃ ಅವರನ್ನು ಕೊಂದರೆ ಅವರಿಗೆಲ್ಲಾ ವೈಕುಂಠಪ್ರಾಪ್ತಿಯಾಗುತ್ತದೆ. ಆದ್ದರಿಂದ ಓಡಿಹೋಗುತ್ತಿರುವ ಶತ್ರುಗಳನ್ನು ನಿಮ್ಮ ಸೈನಿಕರೇ ಕೊಲ್ಲಲಿ, ಆಗ ಅವರಿಗೆ ಸ್ವರ್ಗಪ್ರಾಪ್ತಿಯಾಗುವುದಿಲ್ಲ. ಆಗ ರಾಜಕನ್ಯೆಯು ತಂದೆಯ ಬಳಿಗೆ ಹೋಗಿ ಎಲ್ಲವನ್ನೂ ತಿಳಿಸಿದಳು. ರಾಜನು ಆಕೆಯ ಮಾತುಗಳಲ್ಲಿ ವಿಶ್ವಾಸವಿರಿಸಿ ಬೆಳಗ್ಗೆ ಸೈನ್ಯದೊಂದಿಗೆ ಯುದ್ಧಕ್ಕಾಗಿ ಹೊರಟನು.

ಆಗ ಭೂತಭವಿಷ್ಯದ್ವರ್ತಮಾನಗಳನ್ನು ತಿಳಿಯುವ ಭಗವಾನ್ ನಾರಯಣನು ಗರುಡನನ್ನು ಸ್ಮರಿಸಿಕೊಂಡು ಗರುಡನು ಬಂದಾಗ ಹೀಗೆ ನುಡಿದನು – “ಎಲೈ ಗರುಡ, ಮರದ ಗರುಡನ ಮೇಲೇರಿ ನನ್ನ ರೂಪವನ್ನು ಧರಿಸಿರುವ ನೇಕಾರನೊಬ್ಬನು ರಾಜಕನ್ಯೆಯನ್ನು ಕಾಮಿಸುತ್ತಿರುವನು, ಗೊತ್ತೇನು ?” ಗರುಡ – “ದೇವ, ಅವನ ಎಲ್ಲಾ ಚೇಷ್ಟೆಗಳೂ ತಿಳಿದಿದೆ, ಈಗೇನು ಮಾಡೋಣ ?” ಎಂದಾಗ ಶೀ ಭಗವಂತನು ಹೇಳಿದನು – “ಇಂದು ನೇಕಾರನು ಸಾಯುವ ನಿರ್ಧಾರ ಮಾಡಿ, ಪ್ರತಿಜ್ಞೆಯನ್ನು ಮಾಡಿ ಯುದ್ಧ ಮಾಡಲು ಹೋಗಿದ್ದಾನೆ. ಅವನು ಖಂಡಿತವಾಗಿಯೂ ಪ್ರಮುಖ ಕ್ಷತ್ರಿಯರ ಬಾಣಗಳಿಂದ ಸಾಯುತ್ತಾನೆ. ಅವನು ಸತ್ತರೆ ಕ್ಷತ್ರಿಯರೆಲ್ಲರೂ ಸೇರಿ ವಿಷ್ಣು ಹಾಗೂ ಗರುಡನನ್ನು ಕೊಂದರೆಂದು ಜನರು ಮಾತನಾಡಿಕೊಳ್ಳುತ್ತಾರೆ. ಆನಂತರ ಲೋಕವು ನಮ್ಮ ಪೂಜೆಯನ್ನು ಮಾಡುವುದಿಲ್ಲ. ಆದ್ದರಿಂದ ನೀನು ಕೂಡಲೇ ಆ ಮರದ ಗರುಡವನ್ನು ಸೇರಿಕೋ, ಚಕ್ರವು ಚಕ್ರವನ್ನು ಸೇರಲಿ, ನಾನೂ ಕೂಡ ನೇಕಾರನ ಶರೀರವನ್ನು ಪ್ರವೇಶಿಸಿ ಆತನಿಂದ ಶತ್ರುಸಂಹಾರ ಮಾಡಿಸುತ್ತೇನೆ. ಶತ್ರುಗಳ ನಾಶದಿಂದ ನಮ್ಮ ಮಹಿಮೆಯೂ ಹೆಚ್ಚುತ್ತದೆ.”

ಗರುಡನು ಹಾಗೆಯೇ ಆಗಲಿ ಎಂದಾಗ ಶ್ರೀ ಭಗವಾನ್ ನಾರಯಣನು ನೇಕಾರನ ಶರೀರವನ್ನು ಪ್ರವೇಶಿಸಿದನು. ಆನಂತರ ಭಗವಂತನ ಮಹಿಮೆಯಿಂದ ಶಂಕ, ಚಕ್ರ, ಗದೆ, ಬಿಲ್ಲುಗಳನ್ನು ಹಿಡಿದು ಆಕಾಶದಲ್ಲಿದ್ದ ಆ ನೇಕಾರನು ಸುಲಭವಾಗಿ ಕ್ಷಣಮಾತ್ರದಲ್ಲಿಯೇ ಎಲ್ಲಾ ಪ್ರಧಾನ ಕ್ಷತ್ರಿಯರನ್ನು ನಿಸ್ತೇಜರನ್ನಾಗಿ ಮಾಡಿದನು. ಆಗ ರಾಜನು ತನ್ನ ಸೈನ್ಯದೊಂದಿಗೆ ಕೂಡಿ ಶತ್ರುಗಳನ್ನೆಲ್ಲಾ ಕೊಂದು ವಿಜಯೀಯಾದನು. ತನ್ನ ಅಳಿಯ ವಿಷ್ಣುವಿನ ಪ್ರಭಾವದಿಂದ ರಾಜನು ಶತ್ರುಗಳನ್ನೆಲ್ಲಾ ಕೊಂದನೆದು ಲೋಕದಲೆಲ್ಲಾ ಪ್ರಸಿದ್ಧಿಯಾಯಿತು. ನೇಕಾರನು ಶತ್ರುಗಳೆಲ್ಲಾ ನಾಶವಾದುದ್ದನ್ನು ಕಂಡು ಸಂತೋಷದಿಂದ ಆಕಾಶದಿಂದ ಇಳಿದನು. ಆಗ ರಾಜ, ಮಂತ್ರಿಗಳು ಮತ್ತು ಪುರಜನರು ಅವನನ್ನು ನೋಡಿ ತಮ್ಮ ನಗರವಾಸಿಯಾದ ನೇಕಾರನನ್ನು ಗುರುತಿಹಿಡಿದು ಇದೇನೆಂದು ಕೇಳಲು ನೇಕಾರನು ಮೊದಲಿಂದ ಹಿಡಿದು ಎಲ್ಲಾ ವೃತ್ತಾಂತವನ್ನು ತಿಳಿಸಿದನು. ಆಗ ಶತ್ರುಗಳ ನಾಶದಿಂದ ಉಂಟಾದ ತೇಜಸ್ಸಿನಿಂದ ಹಾಗೂ ನೇಕಾರನ ಸಾಹಸದಿಂದ ಸಂತೋಷಗೊಂಡ ರಾಜನು ಪ್ರಜೆಗಳ ಸಮ್ಮುಖದಲ್ಲಿ ವಿವಾಹವಿಧಿಯಿಂದ ರಾಜಕನ್ಯೆಯನ್ನು ಅವನಿಗೆ ಸಮರ್ಪಿಸಿ ರಾಜ್ಯವನ್ನು ಕೊಟ್ಟನು. ನೇಕಾರನು ಅವಳೊಂದಿಗೆ ಪಂಚೇದ್ರಿಯಗಳಿಂದೊದಗುವ ವಿಷಯಸುಖಗಳನ್ನು ಅನುಭವಿಸುತ್ತಾ ಸುಖವಾಗಿ ಕಾಲ ಕಳೆದನು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: