1-6-ಕಾಗೆ-ಚಿನ್ನದಹಾರ-ಕೃಷ್ಣಸರ್ಪದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಪ್ರದೇಶದಲ್ಲಿ ದೊಡ್ಡ ಆಲದ ಮರವಿತ್ತು. ಅದರಲ್ಲಿ ಕಾಗೆಯ ಜೋಡಿಯೊಂದು ವಾಸವಾಗಿತ್ತು. ಅವುಗಳು ಮರಿ ಹಾಕಿದ ಸಮಯದಲ್ಲಿ ಮರದ ಪೊಟರೆಯಲ್ಲಿದ್ದ ಕೃಷ್ಣಸರ್ಪವೊಂದು ಬಂದು ಇನ್ನೂ ಹಾರಲು ಬರದ ಮರಿಗಳನ್ನು ತಿಂದುಬಿಡುತ್ತಿತ್ತು. ಅದರಿಂದ ಬೇಸೆತ್ತ ಕಾಗೆ ದಂಪತಿಗಳು ಮತ್ತೊಂದು ಮರದ ಬುಡದಲ್ಲಿ ವಾಸವಾಗಿದ್ದ ಮೆಚ್ಚಿನ ಗೆಳೆಯನಾದ ನರಿಯ ಬಳಿಗೆ ಹೋಗಿ ಹೇಳಿದವು – “ಭದ್ರ, ಹೀಗಾದರೆ ನಾವು ಏನು ಮಾಡಬೇಕು ? ಆ ದುಷ್ಟ ಕೃಷ್ಣಸರ್ಪವು ಪೊಟರೆಯಿಂದ ಹೊರಬಂದು ನಮ್ಮ ಮರಿಗಳನ್ನು ತಿಂದುಬಿಡುತ್ತದೆ. ಹಾಗಾಗಿ ಮರಿಗಳನ್ನು ಹೇಗೆ ರಕ್ಷಿಸಬೇಕೆಂದು ತಿಳಿಸು. ಯಾರ ಮನೆಯು ನದೀತೀರದಲ್ಲಿದೆಯೋ, ಯಾರ ಹೆಂಡತಿಯು ಪರಪುರುಷನ ಸಂಘ ಮಾಡೂತ್ತಾಳೋ, ಯಾರ ಮನೆಯಲ್ಲಿ ಹಾವು ನೆಲೆಸಿದೆಯೋ, ಅವರಿಗೆ ನೆಮ್ಮದಿಯೆಂಬುದು ಇದೆಯೇ ? ಸರ್ಪವಿರುವ ಮನೆಯಲ್ಲಿ ವಾಸಮಾಡುವುದರಿಂದ ಮೃತ್ಯುವು ಖಂಡಿತ. ಸರ್ಪವು ಗ್ರಾಮದ ಸೀಮೆಯಲ್ಲಿದ್ದರೂ ಅದರಿಂದಲೂ ಕೂಡ ಪ್ರಾಣಭಯವಿರುತ್ತದೆ. ನಮ್ಮ ಆಲದ ಮರದಲ್ಲಿ ಸರ್ಪವಿರುವುದರಿಂದ ನಮಗೂ ಕೂಡ ಪ್ರತಿದಿನವೂ ಪ್ರಾಣಭಯವು ಕಾಡುತ್ತಿದೆ.”

ನರಿ – “ಈ ವಿಷಯದಲ್ಲಿ ಸ್ವಲ್ಪವೂ ದುಃಖಿಸುವುದು ತರವಲ್ಲ. ಉಪಾಯದಿಂದಲ್ಲದೇ ಆ ಲೋಭಿಯನ್ನು ಕೊಲ್ಲಲು ಸಾಧ್ಯವಿಲ್ಲ. ಉಪಾಯದಿಂದ ಹೇಗೆ ಶತ್ರುಗಳನ್ನು ಗೆಲ್ಲಬಹುದೋ ಆ ರೀತಿ ಆಯುಧಗಳಿಂದ ಕೂಡ ಗೆಲ್ಲಲು ಸಾಧ್ಯವಿಲ್ಲ. ಉದಾಹರಣೆಗೆ ಸಣ್ಣ, ಮಧ್ಯಮ ಹಾಗೂ ದೊಡ್ಡ ಮೀನುಗಳನ್ನು ತಿಂದ ಬಕವೊಂದು ಅತಿಯಾಸೆಯಿಂದ ಏಡಿಯಿಂದ ಸಾವನ್ನಪ್ಪಿತು” ಎಂದು ತಿಳಿಸಿ ಬಕ ಹಾಗೂ ಏಡಿಯ ಕಥೆಯನ್ನು ಹೇಳಿತು.

ಕಥೆಯನ್ನು ಕೇಳಿದ ಕಾಗೆ – “ಭದ್ರ, ಹಾಗಾದರೆ ಆ ದುಷ್ಟ ಸರ್ಪವು ಹೇಗೆ ಸಾವನ್ನಪ್ಪುತ್ತದೆ ಎಂದು ತಿಳಿಸು” ಎಂದಾಗ ನರಿಯು – “ಯಾವುದಾದರೂ ರಾಜ್ಯದ ನಗರಕ್ಕೆ ಹೋಗಿ, ಅಲ್ಲಿ ಎಚ್ಚರದಿಂದಿಲ್ಲದ ಯಾವುದಾದರೂ ಧನಿಕನ ಅಥವಾ ರಾಜನ ಅಥವಾ ಮಂತ್ರಿಯ ಚಿನ್ನದ ಸರ ಅಥವಾ ಹಾರವನ್ನು ತೆಗೆದುಕೊಂಡು ಬಂದು ಆ ಸರ್ಪದ ಪೊಟರೆಯಲ್ಲಿ ಹಾಕಿರಿ. ಅದನ್ನು ಇಟ್ಟುಕೊಂಡಿರುವ ಸರ್ಪವು ಕೊಲ್ಲಲ್ಪಡುತ್ತದೆ.”

ಅದನ್ನು ಕೇಳಿದ ಕಾಗೆ ದಂಪತಿಗಳು ಆ ಕ್ಷಣವೇ ಸ್ವೇಚ್ಛೆಯಿಂದ ಹಾರಿಹೋದವು. ಆನಂತರ ಹೆಣ್ಣು ಕಾಗೆಯು ಸರೋವರದ ಪಕ್ಕದಲ್ಲಿದ್ದ ಬಂಡೆಯ ಮೇಲೆ ಚಿನ್ನದ ಸರಗಳನ್ನು ಹಾಗೂ ಮುಕ್ತಾಮಣಿ ಹಾರಗಳನ್ನು ತೆಗೆದಿಟ್ಟು ಜಲಕ್ರೀಡೆಯಾಡುತ್ತಿದ್ದ ಅಂತಃಪುರದ ಸ್ತ್ರೀಯರನ್ನು ನೋಡಿತು. ಅಲ್ಲಿಂದ ಚಿನ್ನದ ಸರವೊಂದನ್ನು ತೆಗೆದುಕೊಂಡು ತನ್ನ ಮನೆಯ ಕಡೆಗೆ ಹಾರಿತು. ಅದನ್ನು ನೋಡಿದ ಅಂತಃಪುರ ರಕ್ಷಕರು ಹಾಗೂ ನಪುಂಸಕರು ದೊಣ್ಣೆಗಳನ್ನು ಹಿಡಿದುಕೊಂಡು ಅದನ್ನು ಹಿಂಬಾಲಿಸಿದರು. ಕಾಗೆಯು ಸರವನ್ನು ಸರ್ಪದ ಪೊಟರೆಯೊಳಗೆ ಹಾಕಿ ದೂರದಲ್ಲಿ ಹೋಗಿ ಕುಳಿತಿತು. ಆಗ ರಾಜಪುರುಷರು ಮರವನ್ನು ಹತ್ತಿ ಪೊಟರೆಯಲ್ಲಿ ನೋಡಿದಾಗ ಸರ್ಪವು ಹೆಡೆಯನ್ನು ಬಿಚ್ಚಿ ಕುಳಿತಿತ್ತು. ಅವರು ದೊಣ್ಣೆಯಿಂದ ಅದನ್ನು ಹೊಡೆದು ಕೊಂದು, ಚಿನ್ನದ ಸರವನ್ನು ತೆಗೆದುಕೊಂಡು ತಮ್ಮ ಸ್ಥಾನಕ್ಕೆ ವಾಪಸ್ಸಾದರು. ಅಂದಿನಿಂದ ಕಾಗೆ ದಂಪತಿಗಳು ಸುಖದಿಂದ ಮರದಲ್ಲಿ ವಾಸಿಸುತ್ತಿದ್ದವು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: