1-6-1-ಬಕ ಹಾಗೂ ಏಡಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ವನಪ್ರದೇಶದಲ್ಲಿ  ನಾನಾಜಲಚರಗಳಿಗೆ ಆಶ್ರಯಸ್ಥಾನವಾಗಿದ್ದ ಸರೋವರವೊಂದಿತ್ತು. ಅಲ್ಲಿ ವಾಸವಾಗಿದ್ದ ಬಕಪಕ್ಷಿಯೊಂದು ವೃದ್ಧಾಪ್ಯದಿಂದ ಮೀನನ್ನು ಹಿಡಿಯಲು ಅಸಮರ್ಥವಾಯಿತು. ಹಸಿವಿನಿಂದ ಬಳಲಿದ ಅದು ಒಮ್ಮೆ ಸರೋವರದ ತೀರದಲ್ಲಿ ಕುಳಿತುಕೊಂಡು ಮುಕ್ತಾಮಣಿಗಳಂತೆ ಹೊಳೆಯುತ್ತಿರುವ ಕಣ್ಣೀರಿನ ಬಿಂದುಗಳನ್ನು ಭೂಮಿಗೆ ಸುರಿಸುತ್ತಾ ಅಳುತಿತ್ತು. ಆಗ ಒಂದು ಏಡಿಯು ಇತರ ಜಲಚರಗಳೊಂದಿಗೆ ಬಂದು ಅದರ ದುಃಖದಿಂದ ತಾನು ದುಃಖಗೊಂಡು ಆದರಪೂರ್ವಕವಾಗಿ ಹೇಳಿತು – “ಮಾಮ, ಏಕೆ ಇಂದು ಆಹಾರವನ್ನು ಸೇವಿಸುತ್ತಿಲ್ಲ ? ಕೇವಲ ಕಣ್ಣೀರು ಸುರಿಸುತ್ತಾ ನಿಟ್ಟುಸಿರು ಬಿಡುತ್ತಾ ಕುಳಿತಿರುವೆ ?”

ಬಕ – “ವತ್ಸ, ನೀನು ನಿಜವನ್ನು ಅರಿತುಕೊಂಡೆ. ನನಗೆ ಮತ್ಸಭಕ್ಷಣದ ಬಗ್ಗೆ ಅತೀವ ವೈರಾಗ್ಯ ಮೂಡಿರುವುದರಿಂದ ಉಪವಾಸವನ್ನು ಮಾಡುತ್ತಿದ್ದೇನೆ. ಹತ್ತಿರ ಬಂದ ಮೀನುಗಳನ್ನೂ ಕೂಡ ತಿನ್ನುವುದಿಲ್ಲ.”

ಏಡಿ – “ನಿನ್ನ ವೈರಾಗ್ಯಕ್ಕೇನು ಕಾರಣ ?”

ಬಕ – “ಮಗು, ನಾನು ಈ ಸರೋವರದಲ್ಲೇ ಹುಟ್ಟಿ ಬೆಳೆದವನು. ಇನ್ನು ಇಲ್ಲಿ ಹನ್ನೆರಡು ವರ್ಷಗಳ ಕಾಲ ಅನಾವೃಷ್ಟಿಯಾಗುವುದೆಂದು ಕೇಳಿದೆ.”

ಏಡಿ – “ಯಾರು ಹಾಗೆ ಹೇಳಿದರು ?”

ಬಕ – “ಜ್ಯೋತಿಷಿಯು ಹೇಳಿದನು.  ಶನಿಯು ಈಗ ಶಕಟಾಕಾರವಾದ ರೋಹಿಣೀಮಂಡಲವನ್ನು ಭೇದಿಸಿ, ಮಂಗಳ ಹಾಗೂ ಶುಕ್ರನ ಕಡೆಗೆ ನಡೆಯುವನು. ಸೂರ್ಯಪುತ್ರನಾದ ಶನಿಯು ರೋಹಿಣೀಮಂಡಲವನ್ನು ಭೇದಿಸಿದರೆ, ಇಂದ್ರನು ಹನ್ನೆರಡು ವರ್ಷಗಳವರೆಗೆ ಭೂಮಿಯ ಮೇಲೆ ಮಳೆ ಸುರಿಸುವುದಿಲ್ಲ ಎಂದು ವರಹಾಮಿಹಿರನೇ ಹೇಳಿರುವನು. ಶನಿಯು ರೋಹೀಣೀಮಂಡಲವನ್ನು ಭೇದಿಸಿದರೆ, ಭೂಮಿಯು ಪಾಪವನ್ನು ಮಾಡಿವಳಂತೆ ಚಿತಾಭಸ್ಮ ಹಾಗೂ ಮೂಳೆಗಳಿಂದ ಕೂಡಿದ ಕಾಪಾಲಿಕರಂತೆ ವ್ರತವನ್ನು ಮಾಡಲು ತೊಡಗುತ್ತಾಳೆ. ಸೂರ್ಯಪುತ್ರ ಶನಿ, ಮಂಗಳ ಅಥವಾ ಚಂದ್ರನು ರೋಹಿಣೀಮಂಡಲವನ್ನು ಭೇದಿಸಿದರೆ ಅದರಿಂದಾಗುವ ಅನಿಷ್ಟರೂಪದ ಸಮುದ್ರವನ್ನು ಏನೆಂದು ಹೇಳಲಿ ? ಅದರ ಪ್ರವಾಹದಲ್ಲಿ ಸಮಸ್ತ ಲೋಕವೂ ನಾಶವಾಗುತ್ತದೆ. ಚಂದ್ರನು ರೋಹೀಣೀಮಂಡಲದ ಮಧ್ಯದಲ್ಲಿ ಬಂದಾಗ ರಕ್ಷಣೆಯಿಲ್ಲದ ಜನರು ತಮ್ಮ ಶಿಶುಗಳ ಮಾಂಸವನ್ನೇ ಭಕ್ಷಣೆ ಮಾಡುತ್ತಾ ಅಲೆಯುತ್ತಾರೆ ಹಾಗೂ ಸೂರ್ಯನ ಬಿಸಿಲಿನಿಂದ ಬೆಂದ ಬಿಸಿ ನೀರಿನ ಹನಿಗಳನ್ನೇ ಕುಡಿಯುತ್ತಾರೆ.

ಈ ಸರೋವರದಲ್ಲಿ ಸ್ವಲ್ಪವೇ ನೀರು ಇದೆ. ಶೀಘ್ರದಲ್ಲೇ ಅದೂ ಕೂಡ ಒಣಗಿಹೋಗುತ್ತದೆ. ಆಗ ಯಾರೊಂದಿಗೆ ನಾನು ಆಡುತ್ತಾ ಬೆಳೆದೆನೋ ಅವರೆಲ್ಲರೂ ನೀರಿನ ಅಭಾವದಿಂದ ನಾಶವಾಗುತ್ತಾರೆ. ಅವರ ವಿಯೋಗವನ್ನು ನೋಡಲು ನಾನು ಅಸಮರ್ಥನಾಗಿದ್ದೇನೆ. ಆದ್ದರಿಂದ ಈ ಉಪವಾಸವನ್ನು ಮಾಡುತ್ತಿದ್ದೇನೆ. ಈಗ ಸಣ್ಣ ಸಣ್ಣ ಜಲಾಶಯದಲ್ಲಿರುವ ಪ್ರಾಣಿಗಳನ್ನು ಅವುಗಳ ಬಾಂಧವರು ದೊಡ್ಡ ದೊಡ್ಡ ಜಲಾಶಯಗಳಿಗೆ ಕೊಂಡೊಯ್ಯುತ್ತಿದ್ದಾರೆ. ಈ ಸರೋವರದಲ್ಲಿಯಾದರೋ ಜಲಚರಗಳು ನಿಶ್ಚಿಂತೆಯಿಂದ ಇವೆ. ಇಲ್ಲಿನ ಪ್ರಾಣಿಗಳ ನಾಮಾವಶೇಷವೂ ಇರುವುದಿಲ್ಲ ಎಂಬುದು ನನ್ನ ಹೆಚ್ಚಿನ ದುಃಖಕ್ಕೆ ಕಾರಣ.”

ಇದನ್ನೆಲ್ಲಾ ಕೇಳಿದ ಏಡಿಯು ಸರೋವರದಲ್ಲಿದ್ದ ಇತರ ಪ್ರಾಣಿಗಳಿಗೂ ಬಕಪಕ್ಷಿಯ ಮಾತನ್ನು ತಿಳಿಸಿತು. ಆಗ ಮೀನು, ಆಮೆ ಮುಂತಾದ ಜಲಚರರು ಭಯಗೊಂಡು ಬಕಪಕ್ಷಿಯ ಬಳಿಗೆ ಬಂದು – “ಮಾಮ, ನಮ್ಮ ರಕ್ಷಣೆಗೆ ಯಾವುದಾರರೂ ಉಪಾಯ ಇದೆಯೇ ?” ಎಂದು ಕೇಳಿದಾಗ ಬಕವು – “ಈ ಜಲಾಶಯದ ಹತ್ತಿರದಲ್ಲಿಯೇ ಹೆಚ್ಚು ನೀರಿನಿಂದ ತುಂಬಿದ, ಕಮಲಗಳಿಂದ ಶೋಭಿತವಾದ, ನಲ್ವತ್ತು ವರ್ಷಗಳ ಕಾಲ ಅನಾವೃಷ್ಟಿಯಾದರೂ ಒಣಗದ ಒಂದು ಸರೋವರವಿದೆ. ಯಾರು ನನ್ನ ಬೆನ್ನೇರುವರೋ ಅವರನ್ನು ಅಲ್ಲಿಗೆ ಕರೆದುಕೊಂಡು ಹೋಗಬಲ್ಲೆ.” ಎಂದಿತು. ಬಕಪಕ್ಷಿಯ ಮೇಲೆ ವಿಶ್ವಾಸಮೂಡಿ ಆ ಜಲಚರರು ತಂದೆ, ಮಾಮ, ಅಣ್ಣ ಎಂದು ಕರೆಯುತ್ತಾ ನಾ ಮೊದಲು ತಾ ಮೊದಲು ಎನ್ನುತ್ತಾ ಅದರ ಸುತ್ತ ನೆರೆದರು. ದುರಾತ್ಮನಾದ ಬಕಪಕ್ಷಿಯು ಒಂದೊಂದಾಗಿ ಅವುಗಳನ್ನು ಬೆನ್ನ ಮೇಲೆ ಕೂರಿಸಿಕೊಂಡು ಸರೋವರದ ಸಮೀಪದಲ್ಲಿದ್ದ ಬಂಡೆಯ ಮೇಲೆ ಅವುಗಳನ್ನು ಇಳಿಸಿ, ಸ್ವೇಚ್ಛೆಯಿಂದ ಅವುಗಳನ್ನು ಭಕ್ಷಿಸಿ ಮತ್ತೆ ಸರೋವರಕ್ಕೆ ಬಂದು ಸುಳ್ಳು ಸುದ್ದಿಗಳಿಂದ ಅವರನ್ನು ಸಂತೋಷಗೊಳಿಸುತ್ತಾ ತನ್ನ ಆಹಾರವನ್ನು ಸಂಪಾದಿಸುತ್ತಿತ್ತು.

ಮತ್ತೊಂದು ದಿನ ಏಡಿಯು ಬಕಪಕ್ಷಿಗೆ ಹೇಳಿತು – “ಮಾಮ, ನಿನ್ನೊಂದಿಗೆ ಮೊದಲು ಸ್ನೇಹದಿಂದ ಮಾತನಾಡಿದವನು ನಾನು, ಆದರೆ ನನ್ನನ್ನು ಬಿಟ್ಟು ಬೇರೆಯವರನ್ನೇ ಕರೆದುಕೊಂಡು ಹೋಗುತ್ತಿರುವೆಯಲ್ಲಾ ? ಇಂದು ನನ್ನ ಪ್ರಾಣರಕ್ಷಣೆಯನ್ನು ಮಾಡು.” ಅದನ್ನು ಕೇಳಿ ದುರಾತ್ಮ ಬಕವು ಚಿಂತಿಸಿತು – “ಪ್ರತಿದಿನ ಮೀನಿನ ಮಾಂಸವನ್ನು ತಿಂದು ಬೇಜಾರಾಗಿದೆ, ಇಂದು ಈ ಏಡಿಯನ್ನು ಪಲ್ಯದಂತೆ ತಿನ್ನುವೆನು.” ಹೀಗೆ ಯೋಚಿಸಿ ಅದನ್ನು ಬೆನ್ನಿನ ಮೇಲೆ ಕುಳ್ಳರಿಸಿ ಮೀನುಗಳನ್ನು ಕೊಲ್ಲುತ್ತಿದ್ದ ಬಂಡೆಯ ಬಳಿಗೆ ಹೊರಟಿತು. ಏಡಿಯು ದೂರದಿಂದಲೇ ಆ ಬಂಡೆಯ ಮೇಲೆ ಮೂಳೆಗಳ ರಾಶಿಯನ್ನು ನೋಡಿ ಅದು ಮೀನಿನ ಮೂಳೆಗಳೆಂದು ಅರಿತು ಬಕಪಕ್ಷಿಗೆ ಹೇಳಿತು – “ಮಾಮ, ಇನ್ನೆಷ್ಟು ದೂರ ? ನನ್ನ ಬಾರದಿಂದ ನೀನು ಬಳಲಿದ್ದೀಯ.” ಮಂದಬುದ್ಧಿಯುಳ್ಳ ಬಕವು ಏಡಿಯು ಜಲಚರ ಪ್ರಾಣಿ ಮತ್ತು ಭೂಮಿಯಲ್ಲಿ ಅದು ಬದುಕಲಾರದೆಂದು ತಿಳಿದು ನಗುತ್ತಾ ಹೇಳಿತು – “ಯಾವುದು ಬೇರೆ ಜಲಾಶಯ ? ಇದು ನನ್ನ ಜೀವನೋಪಾಯ. ನಿನ್ನ ಇಷ್ಟದೇವರನ್ನು ಸ್ಮರಿಸಿಕೋ. ನಿನ್ನನ್ನೂ ಕೂಡ ಈ ಬಂಡೆಯ ಮೇಲೆ ಬೀಳಿಸಿ ಭಕ್ಷಿಸುತ್ತೇನೆ.” ಎಂದಾಗ ಏಡಿಯು ಕಮಲದ ತೊಟ್ಟಿನಂತೆ ಬಿಳಿಯಾಗಿ ಹಾಗು ಮೃದುವಾಗಿರುವ ಅದರ ಕತ್ತನ್ನು ತನ್ನ ಎರಡು ಹಲ್ಲುಗಳಿಂದ ಕಚ್ಚಿ ಸಾಯಿಸಿತು.

ಆನಂತರ ಅದು ಬಕದ ಕತ್ತನ್ನು ಕಚ್ಚಿಹಿಡಿದುಕೊಂಡು ಮೆಲ್ಲಮೆಲ್ಲಗೆ ಸರೋವರನ್ನು ತಲುಪಿತು. ಜಲಚರರೆಲ್ಲರು ಏಡಿಯನ್ನು ಕುರಿತು- “ಏಡಿಯೇ ಏನು ವಾಪಸ್ಸು ಬಂದಿರುವೆ ? ಆ ಮಾಮನೂ ಬರಲಿಲ್ಲವಲ್ಲ ? ಏಕೆ ತಡ ಮಾಡಿದನೋ ? ನಾವೆಲ್ಲರೂ ಉತ್ಸಾಹದಿಂದ ಕಾಯುತ್ತಿದೇವೆ” ಎಂದು ಹೇಳಿದಾಗ ಏಡಿಯು ನಗುತ್ತಾ- “ಮೂರ್ಖರೇ, ಸುಳ್ಳುನುಡಿಯುವ ಆ ಬಕವು ಮೋಸದಿಂದ ಎಲ್ಲರನ್ನೂ ಹತ್ತಿರದಲ್ಲಿರುವ ಬಂಡೆಯ ಮೇಲೆ ಎಸೆದು ತಿಂದುಬಿಟ್ಟಿತು. ನನ್ನ ಆಯಸ್ಸು ಗಟ್ಟಿಯಿರುವುದರಿಂದ ಆ ವಿಶ್ವಾಸಘಾತಕನ ಅಭಿಪ್ರಾಯವನ್ನು ತಿಳಿದು ಅದನ್ನು ಕೊಂದು ಅದರ ಕತ್ತನ್ನು ತಂದಿರುವೆ. ನಿಮ್ಮ ಸಂಭ್ರಮವೆಲ್ಲಾ ಸಾಕು. ಇಂದಿನಿಂದ ಎಲ್ಲಾ ಜಲಚರಗಳೂ ಕ್ಷೇಮದಿಂದಿರಬಹುದು.” ಎಂದಿತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: