1-7-ಸಿಂಹ-ಮೊಲದ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಕಾಡಿನಲ್ಲಿ ಭೂಸುರಕನೆಂಬ ಸಿಂಹವು ವಾಸಿಸುತ್ತಿತ್ತು. ಅತಿಯಾದ ಪರಾಕ್ರಮದ ಕಾರಣ ನಿತ್ಯವೂ ಜಿಂಕೆ, ಮೊಲ ಮುಂತಾದ ಪ್ರಾಣಿಗಳನ್ನು ಕೊಂದರೂ ಅದು ಶಾಂತವಾಗುತ್ತಿರಲಿಲ್ಲ. ಒಂದು ದಿನ ಸಾರಂಗ, ಹಂದಿ, ಎತ್ತು, ಮೊಲ ಮುಂತಾದ ಕಾಡು ಪ್ರಾಣಿಗಳು ಅದರ ಬಳಿ ಹೋಗಿ ಹೇಳಿದವು – “ಪ್ರಭು, ಹೀಗೆ ಅನೇಕ ಪ್ರಾಣಿಗಳನ್ನು ಕೊಲ್ಲುವುದಿಂದೇನು ಪ್ರಯೋಜನ ? ನಿನಗೆ ಒಂದು ಪ್ರಾಣಿಯನ್ನು ಕೊಂದು ತಿನ್ನುವುದರಿಂದ ತೃಪ್ತಿಯಾಗುವಾಗ ನಮ್ಮೊಂದಿಗೆ ಒಂದು ನಿಯಮವನ್ನು ಮಾಡಿಕೋ. ಇಂದಿನಿಂದ ನೀನು ಕುಳಿತಲ್ಲಿಗೇ ಜಾತಿಕ್ರಮದಿಂದ ಒಂದೊಂದು ಪ್ರಾಣಿಯು ನಿನ್ನ ಆಹಾರವಾಗಿ ಬರುವುದು. ಹೀಗೆ ಮಾಡಿದರೆ ಶ್ರಮವಿಲ್ಲದೆ ನಿನ್ನ ಹಸಿವು ನೀಗುತ್ತದೆ ಹಾಗೂ ನಮ್ಮ ಸರ್ವನಾಶವೂ ತಪ್ಪುತ್ತದೆ. ಈ ರಾಜಧರ್ಮವನ್ನು ನೀನು ಅನುಸರಿಸು. ಯಾವ ಬುದ್ಧಿವಂತನು ತನ್ನ ಶಕ್ತಿಗನುಸಾರವಾಗಿ ರಸಾಯನ ಔಷಧದಂತೆ ನಿಧಾನವಾಗಿ ರಾಜ್ಯವನ್ನು ಭೋಗಿಸುವನೋ, ಅವನು ಉತ್ತಮ ಏಳಿಗೆಯನ್ನು ಕಾಣುವನು. ಸರಿಯಾದ ಕ್ರಮದಿಂದ ಉಜ್ಜಲ್ಪಟ್ಟ ಒಣಗಿದ ಕಟ್ಟಿಗೆಯು ಅಗ್ನಿಯನ್ನು ಕೊಡುತ್ತದೆ ಹಾಗೂ ವಿಧಿಪೂರ್ವಕವಾಗಿ ಮಾಡಿದ ಕೃಷಿಯಿಂದ ಒಣಗಿದ ಭೂಮಿಯಲ್ಲೂ ಫಲವನ್ನು ಕಾಣಬಹುದು. ಉತ್ತಮವಾಗಿ ಪ್ರಜೆಗಳ ಪಾಲನೆ ಮಾಡಿದಲ್ಲಿ ಸ್ವರ್ಗರೂಪದ ಕೋಶವು ವೃದ್ಧಿಯಾಗುತ್ತದೆ ಮತ್ತು ಪ್ರಜೆಗಳ ಪೀಡನೆಯಿಂದ ಧರ್ಮನಾಶ, ಪಾಪ ಹಾಗೂ ಅಪಕೀರ್ತಿಯು ಪ್ರಾಪ್ತವಾಗುತ್ತದೆ. ಗೋಪಾಲಕನು ಗೋವುಗಳನ್ನು ಪಾಲನೆ ಪೋಷಣೆ ಮಾಡುತ್ತಾ ಮೆಲ್ಲಮೆಲ್ಲನೆ ಹೇಗೆ ಹಾಲನ್ನು ಪಡೆದುಕೊಳ್ಳುವನೋ ಹಾಗೆ ರಾಜನು ತನ್ನ ಪ್ರಜೆಗಳನ್ನು ಪಾಲನೆ ಪೋಷಣೆ ಮಾಡುತ್ತಾ ನಿಧಾನವಾಗಿ ಧನವನ್ನು ಸಂಪಾದಿಸಿಕೊಂಡು ನ್ಯಾಯಮಾರ್ಗದಲ್ಲಿ ನಡೆಯಬೇಕು. ಯಾವ ರಾಜನು ತನ್ನ ಪ್ರಜೆಗಳನ್ನು ಕುರಿಗಳಂತೆ ಕೊಲ್ಲುವನೋ ಅವನಿಗೆ ಕೇವಲ ಹಿಂಸೆಮಾಡಿದ ತೃಪ್ತಿಯು ದೊರಕುವುದೇ ಹೊರತು ಎಂದಿಗೂ ಧನಲಾಭ ಮುಂತಾದ ಬೇರೆ ರೀತಿಯ ಸುಖವು ದೊರಕುವುದಿಲ್ಲ. ಹೂವಾಡಿಗನು ಹೇಗೆ ಹೂವಿನ ಮೊಗ್ಗುಗಳನ್ನು ನೀರು ಹಾಕಿ ರಕ್ಷಿಸುವನೋ, ಫಲವನ್ನು ಬಯಸುವ ರಾಜನು ಹಾಗೆಯೇ ಪ್ರಜೆಗಳನ್ನು ದಾನ ಹಾಗು ಗೌರವಪ್ರದಾನಗಳಿಂದ ಪಾಲಿಸಬೇಕು. ಪ್ರಕಾಶಿಸುತ್ತಿರುವ ದೀಪವು ತನ್ನಲ್ಲಿರುವ ಬಿಳಿಯಾದ ಬತ್ತಿಯಿಂದ ಎಣ್ಣೆಯನ್ನು ಹೀರಿಕೊಳ್ಳುವುದು ಯಾರಿಗೂ ಹೇಗೆ ತಿಳಿಯುವುದಿಲ್ಲವೋ ಹಾಗೆ ರಾಜನು ತನ್ನ ಒಳ್ಳೆಯ ಗುಣಗಳಿಂದ ಪ್ರಜೆಗಳಿಂದ ಧನ (ಕರ) ವನ್ನು ತೆಗೆದುಕೊಳ್ಳುವುದು ವಿಶೇಷವಾಗಿ ಯಾರ ಗಮನಕ್ಕೂ ಬರದಂತಿರಬೇಕು. (ಅಂದರೆ ಸ್ವಾರ್ಥಕ್ಕಾಗಿ ಯಾರನ್ನೂ ಕಷ್ಟಕ್ಕೀಡುಮಾಡಬಾರದು) ಪಾಲನೆ ಮಾಡಿದ ಗೋವುಗಳು ಕಾಲಾಂತರದಲ್ಲಿ ಹಾಲನ್ನು ಕೊಡುವಂತೆ, ನೀರು ಹಾಕಿ ಬೆಳೆಸಿದ ಬಳ್ಳಿಯು ಬೆಳೆದು ಹೂವು ಹಣ್ಣುಗಳನ್ನು ಕೊಡುವ ಹಾಗೆ, ಸರಿಯಾಗಿ ಪಾಲನೆ ಮಾಡಿದ ಪ್ರಜೆಗಳಿಂದ ಕಾಲಕ್ರಮದಲ್ಲಿ ಕರವನ್ನು ಪಡೆದುಕೊಳ್ಳಬಹುದು. ಸೂಕ್ಷ್ಮವಾದ ಮೊಳಕೆಯೊಡೆದ ಬೀಜವನ್ನು ಪ್ರಯತ್ನದಿಂದ ರಕ್ಷಿಸಿಕೊಂಡಾಗ ಅದು ಮುಂದೆ ಮರವಾಗಿ ಹೇಗೆ ಫಲವನ್ನು ಕೊಡುತ್ತದೆಯೋ ಹಾಗೆ ಸರಿಯಾಗಿ ಸಂರಕ್ಷಿಸಲ್ಪಟ್ಟ ಪ್ರಜೆಗಳಿಂದ ಫಲವನ್ನು ನಿರೀಕ್ಷಿಸಬಹುದು. ಚಿನ್ನ, ಧಾನ್ಯ, ರತ್ನ, ವಿವಿಧ ವಾಹನಗಳು ಮತ್ತೆ ಬೇರೆಲ್ಲವೂ ಕೂಡ ರಾಜನಿಗೆ ಪ್ರಜೆಗಳಿಂದಲೇ ಪ್ರಾಪ್ತವಾಗುತ್ತದೆ. ಪ್ರಜೆಗಳಿಗೆ ಹಿತವನ್ನು ಮಾಡುವ ರಾಜರು ವೃದ್ಧಿ ಹೊಂದುತ್ತಾರೆ ಹಾಗೂ ಪ್ರಜೆಗಳ ನಾಶದಿಂದ ರಾಜರೂ ಕೂಡ ನಾಶವಾಗುವರು.”

ಅವರ ಈ ಮಾತುಗಳನ್ನು ಕೇಳಿ ಭೂಸುರಕನು – “ಓಹೋ! ನೀವು ಸತ್ಯವನ್ನೇ ನುಡಿದಿರುವಿರಿ. ಒಂದು ವೇಳೆ ನಿತ್ಯವೂ ನಾನು ಕುಳಿತಲ್ಲಿ ಒಂದು ಪ್ರಾಣಿಯೂ ಬಾರದಿದ್ದಲ್ಲಿ ನಾನು ಎಲ್ಲರನ್ನೂ ತಿಂದುಬಿಡುವೆನು.” ಎಂದಿತು. ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿದ ಪ್ರಾಣಿಗಳು ನಿಶ್ಚಿಂತೆಯಿಂದ ಭಯವಿಲ್ಲದೆ ಕಾಡಿನಲ್ಲಿ ಅಲೆಯುತ್ತಿದ್ದವು. ಒಂದೊಂದು ದಿನ ಒಂದೊಂದು ಪ್ರಾಣಿ ಕ್ರಮವಾಗಿ ಸಿಂಹದ ಬಳಿಗೆ ಹೋಗುತ್ತಿತ್ತು. ವಯಸ್ಸಾದ, ವೈರಾಗ್ಯಮೂಡಿದ, ಶೋಕದಿಂದ ಕೂಡಿದ, ಅಥವಾ ಪತ್ನೀಪುತ್ರವಿಯೋಗದಿಂದ ದುಃಖವುಂಟಾದ ಯಾವುದಾದರೂ ಪ್ರಾಣಿಯು ಸಿಂಹದ ಭೋಜನವಾಗಿ ಮಧ್ಯಾಹ್ನಸಮಯದಲ್ಲಿ ತೆರಳುತ್ತಿತ್ತು.

ಹೀಗೆ ಜಾತಿಕ್ರಮದಲ್ಲಿ ತೆರಳುತ್ತಿದ್ದಾಗ ಒಮ್ಮೆ ಮೊಲದ ಸರದಿ ಬಂತು. ಅದು ಹೋಗಲು ಇಷ್ಟವಿಲ್ಲದೆ ಬೇರೆ ಪ್ರಾಣಿಗಳ ಒತ್ತಾಯಕ್ಕೆ ಮಣಿದು ನಿಧಾನವಾಗಿ ಹೋಗುತ್ತಾ ಆ ಸಿಂಹವನ್ನು ಹೇಗೆ ಕೊಲ್ಲುವುದೆಂದು ಚಿಂತಿಸುತ್ತಾ ವಿಳಂಬವಾಗಿ ವ್ಯಾಕುಲತೆದಿಂದ ಹೋಗುತ್ತಿದ್ದಾಗ ಮಾರ್ಗದಲ್ಲಿ ಬಾವಿಯೊಂದನ್ನು ಕಂಡಿತು. ಬಾವಿಯ ಬಳಿಗೆ ಹೋದಾಗ ಅದಕ್ಕೆ ಬಾವಿಯಲ್ಲಿ ತನ್ನ ಪ್ರತಿಬಿಂಬವು ಕಾಣಿಸಿತು. ಅದನ್ನು ನೋಡಿ “ಒಂದು ಉತ್ತಮವಾದ ಉಪಾಯವಿದೆ, ನಾನು ಭೂಸುರಕನನ್ನು ಕೋಪಗೊಳಿಸಿ ನನ್ನ ಬುದ್ಧಿಬಲದಿಂದ ಅದನ್ನು ಈ ಬಾವಿಯಲ್ಲಿ ಬೀಳುವಂತೆ ಮಾಡುವೆನು” ಎಂದು ಯೋಚಿಸಿತು. ಸಾಯಂಕಾಲದ ಸಮಯದಲ್ಲಿ ಭೂಸುರಕನ ಬಳಿಗೆ ಹೋಯಿತು. ಆಹಾರವು ಒದಗುವುದು ತಡವಾದ್ದರಿಂದ ಹಸಿವಿನಿಂದ ಬಳಲಿದ, ಕೋಪಗೊಂಡ ಸಿಂಹವು ತುಟಿಗಳನ್ನು ಒರೆಸಿಕೊಳ್ಳುತ್ತಾ “ಬೆಳಗ್ಗಿನ ಆಹಾರಕ್ಕಾಗಿ ಈ ವನದಲ್ಲಿ ಪ್ರಾಣಿಗಳಿಲ್ಲದಂತೆ ಮಾಡಿಬಿಡುವೆನು” ಎಂದು ಚಿಂತಿಸುತ್ತಿದ್ದಾಗ ಮೊಲವು ನಿಧಾನವಾಗಿ ಬಂದು ಸಿಂಹಕ್ಕೆ ನಮಸ್ಕರಿಸಿ ನಿಂತುಕೊಂಡಿತು.

ಕೋಪದಿಂದ ಬೆಂದುಹೋದ ಭೂಸುರಕ ಅದನ್ನು ಗದರುತ್ತಾ – “ಏ ಮೂರ್ಖ ಮೊಲವೇ,, ಮೊದಲೇ ನೀನು ಅಲ್ಪಶರೀರಿ ಮತ್ತೆ ತಡವಾಗಿ ಬಂದಿರುವೆ. ಈ ಅಪರಾಧಕ್ಕಾಗಿ ನಿನ್ನನ್ನು ಕೊಂದು ಬೆಳಗ್ಗೆ ಸಕಲಪ್ರಾಣಿಕುಲವನ್ನೇ ನಾಶಮಾಡಿಬಿಡುವೆನು.” ಎಂದು ಹೇಳಿತು.

ಮೊಲವು ವಿನಯಪೂರ್ವಕವಾಗಿ – “ಸ್ವಾಮೀ, ಇದು ನನ್ನ ಅಪರಾಧವಲ್ಲ ಹಾಗೂ ಇತರ ಪ್ರಾಣಿಗಳ ತಪ್ಪೂ ಅಲ್ಲ. ನಾನು ತಡವಾಗಿ ಬಂದ ಕಾರಣವನ್ನು ಕೇಳಿ”

ಸಿಂಹ – “ನಾನು ನಿನ್ನನ್ನು ತಿಂದುಬಿಡುವುದರೊಳಗೆ ಬೇಗನೆ ಹೇಳಿ ಮುಗಿಸು”

ಮೊಲ – “ಸ್ವಾಮೀ, ಜಾತಿಕ್ರಮದಲ್ಲಿ ಇಂದು ಆಹಾರವಾಗಿ ಬರಬೇಕಿದ್ದ ನನ್ನನ್ನು ಅಲ್ಪಶರೀರಿಯೆಂದು ಮನಗಂಡು ಪ್ರಾಣಿಗಳು ಐದು ಮೊಲಗಳನ್ನು ಕಳಿಸಿದ್ದರು. ನಾವು ಬರುತ್ತಿದ್ದಾಗ ಗುಹೆಯಿಂದ ಹೊರಬಂದ ಬೇರೊಂದು ದೊಡ್ಡ ಸಿಂಹವು – ‘ಎಲ್ಲಿಗೆ ಹೊರಟಿರುವಿರಿ, ನಿಮ್ಮ ಇಷ್ಟದೇವತೆಗಳನ್ನು ಸ್ಮರಿಸಿಕೊಳ್ಳಿ’ ಎಂದಿತು. ಆಗ ನಾನು – ‘ನಾವು ಒಪ್ಪಂದದ ರೀತ್ಯಾ ಭೂಸುರಕ ಪ್ರಭುವಿನ ಬಳಿಗೆ ಆಹಾರವಾಗಿ ಹೋಗುತ್ತಿದ್ದೇವೆ’ ಎಂದಾಗ ಅದು – ‘ಇದು ನನ್ನ ಕಾಡು, ಆದ್ದರಿಂದ ಎಲ್ಲಾ ಪ್ರಾಣಿಗಳು ನನ್ನೊಂದಿಗೆ ನಿಯಮದಂತೆ ನಡೆದುಕೊಳ್ಳಬೇಕು. ಆ ಭೂಸುರಕ ಕಳ್ಳ. ಅವನು ಇಲ್ಲಿ ರಾಜನಾದಲ್ಲಿ, ಈ ನಾಲ್ಕು ಮೊಲಗಳನ್ನು ವಿಶ್ವಾಸಕ್ಕಾಗಿ ಇಲ್ಲೇ ಬಿಟ್ಟು ನೀನು ಹೋಗಿ ಅವನನ್ನು ಕರೆದುಕೊಂಡು ಬೇಗನೆ ಬಾ. ನಮ್ಮಿಬ್ಬರಲ್ಲಿ ಯಾರು ಪರಾಕ್ರಮಿಯೋ ಅವನು ರಾಜನಾಗಿ ಈ ಮೊಲಗಳನ್ನೆಲ್ಲಾ ತಿನ್ನುವನು’ ಎಂದು ಹೇಳಿತು. ಅದರಂತೆ ನಾನು ಇಲ್ಲಿಗೆ ಬಂದಿರುವೆನು. ತಡವಾಗಿ ಬರಲು ಇದೇ ಕಾರಣ. ಈಗ ಏನು ಮಾಡಬೇಕೆಂದು ನೀವೇ ನಿರ್ಧರಿಸಿ”

ಅದನ್ನು ಕೇಳಿ ಭೂಸುರಕ – “ಭದ್ರ, ಹಾಗಿದ್ದಲ್ಲಿ ಆ ಕಳ್ಳಸಿಂಹವನ್ನು ನನಗೆ ತೋರಿಸು. ಪ್ರಾಣಿಗಳ ಮೇಲಿನ ನನ್ನ ಕೋಪವನ್ನು ಆ ಸಿಂಹದ ಮೇಲೆ ತೋರಿ ನಾನು ಶಾಂತನಾಗುವೆನು. ಯುದ್ಧದ ಉದ್ದೇಶ ಮೂರು – ಭೂಮಿ, ಮಿತ್ರ ಮತ್ತು ಹಣ. ಎಲ್ಲಿ ಇವುಗಳಲ್ಲಿ ಒಂದೂ ಇಲ್ಲವೋ ಅಂತಹ ಸಂದರ್ಭಗಳಲ್ಲಿ ಯುದ್ಧವನ್ನು ಮಾಡಬಾರದು. ಎಲ್ಲಿ ಮಹತ್ಫಲವಿಲ್ಲವೋ, ಎಲ್ಲಿ ಸೋಲಿದೆಯೋ ಅಲ್ಲಿ ಬುದ್ಧಿವಂತನು ಯುದ್ಧವನ್ನು ಆರಂಭಿಸಬಾರದು.”

ಮೊಲ – “ಸ್ವಾಮಿ, ಇದು ಸತ್ಯ, ಕ್ಷತ್ರಿಯರು ತಮ್ಮ ಭೂಮಿಯ ಕಾರಣಕ್ಕೆ ಮತ್ತು ಅಪಮಾನದ ಪ್ರತೀಕಾರಕ್ಕಾಗಿ ಯುದ್ಧವನ್ನು ಮಾಡುತ್ತಾರೆ. ಆದರೆ ಆ ಸಿಂಹವು ಕೋಟೆಯನ್ನು ಆಶ್ರಯಿಸಿರುವುದು. ಕೋಟೆಯಿಂದ ಹೊರಗೆ ಬಂದು ಅದು ನಮ್ಮನ್ನು ತಡೆದಿರುವುದು. ಕೋಟೆಯಲ್ಲಿರುವ ಶತ್ರುವನ್ನು ಸೋಲಿಸುವುದು ಕಷ್ಟ. ರಾಜನ ಸಾವಿರ ಆನೆಗಳಿಂದ ಮತ್ತು ಲಕ್ಷ ಕುದುರೆಗಳಿಂದ ಸಾಧ್ಯವಾಗದ್ದನ್ನು ಒಂದು ಕೋಟೆಯಿಂದ ಸಾಧಿಸಬಹುದು. ಕೋಟೆಯಲ್ಲಿರುವ ಒಬ್ಬ ಧನುರ್ಧರನು ನೂರು ಜನರನ್ನು ಕೊಲ್ಲಬಲ್ಲನು. ಆದ್ದರಿಂದ ನೀತಿಶಾಸ್ತ್ರ ಬಲ್ಲವರು ಕೋಟೆಯು ಪ್ರಶಂಸನೀಯವೆಂದು ತಿಳಿಸಿದ್ದಾರೆ. ಹಿಂದೆ ಹಿರಣ್ಯಕಶಿಪುವಿನಿಂದ ಭಯವುಂಟಾದಾಗ ಇಂದ್ರನು ದೇವಗುರು ಬೃಹಸ್ಪತಿಯ ಆದೇಶದಂತೆ ವಿಶ್ವಕರ್ಮನ ಸಹಾಯದಿಂದ ಕೋಟೆಯನ್ನು ನಿರ್ಮಿಸಿದನು. ಯಾರಿಗೆ ಕೋಟೆಯ ರಕ್ಷಣೆಯಿದೆಯೋ ಅಂತಹ ರಾಜನು ವಿಜಯೀಯಾಗುತ್ತಾನೆಂದು ವರವನ್ನೂ ಕೂಡ ಪಡೆದನು. ಆನಂತರ ಭೂಮಿಯಲ್ಲಿ ಸಹಸ್ರಾರು ಕೋಟೆಗಳು ನಿರ್ಮಿಸಲ್ಪಟ್ಟವು. ಹಲ್ಲಿಲ್ಲದ ಹಾವಿನಂತೆ ಅಥವಾ ಮದವಿಲ್ಲದ ಆನೆಯಂತೆ ಕೋಟೆಯಿಲ್ಲದ ರಾಜನು ಎಲ್ಲರಿಂದಲೂ ಸೋಲು ಕಾಣುತ್ತಾನೆ.”

ಅದನ್ನು ಕೇಳಿ ಭೂಸುರಕ – “ಭದ್ರ, ಆ ಕಳ್ಳ ಸಿಂಹವು ಕೋಟೆಯಲ್ಲೇ ಇರಲಿ, ನನಗದನ್ನು ತೋರಿಸು, ಅದನ್ನು ಕೊಲ್ಲುತ್ತೇನೆ. ಯಾರು ಶತ್ರುವನ್ನು ಮತ್ತು ರೋಗವನ್ನು ಹುಟ್ಟಿದೊಡನೆಯೇ ನಿವಾರಿಸಿಕೊಳ್ಳುವುದಿಲ್ಲವೋ, ಅಂತವನು ಮಹಾಬಲವಂತನಾದರೂ ಕೂಡ ವೃದ್ಧಿಗೊಂಡ ಆ ಶತ್ರು ಮತ್ತು ರೋಗದಿಂದ ನಾಶವಾಗುತ್ತಾನೆ. ಬಲ್ಲವರು ಬೆಳೆಯುತ್ತಿರುವ ಶತ್ರು ಮತ್ತು ರೋಗವು ಸಮಾನವೆಂದು ಹೇಳುತ್ತಾರೆ. ಆದ್ದರಿಂದ ಹಿತವನ್ನು ಬಯಸುವವನು ವೃದ್ಧಿಸುತ್ತಿರುವ ಶತ್ರು ಅಥವಾ ರೋಗವನ್ನು ನಿರ್ಲಕ್ಷಿಸಬಾರದು. ಮದಾಂದರಾದ ಪುರುಷರು ಎಚ್ಚರಿಕೆಯಿಲ್ಲದೆ ದುರ್ಬಲನಾದ ಶತ್ರುವನ್ನು ಉಪೇಕ್ಷಿಸಿದರೆ ಮೊದಲು ಆತನು ಬಲರಹಿತನಂತೆ ಕಂಡರೂ ಕ್ರಮೇಣ ರೋಗದಂತೆ ಬೆಳೆದು ಜಯಿಸಲಸಾಧ್ಯನಾಗುತ್ತಾನೆ. ಯಾರು ತನ್ನ ಶಕ್ತಿ, ಮಾನ ಹಾಗೂ ಸಾಹಸಗಳನ್ನು ಪರಿಶೀಲಿಸಿ ಯುದ್ಧವನ್ನು ಮಾಡುತ್ತಾನೋ ಅವನು ಏಕಾಂಗಿಯಾದರು ಪರಶುರಾಮನು ಕ್ಷತ್ರಿಯರನ್ನು ಕೊಂದಂತೆ ಹಲವರನ್ನು ಕೊಲ್ಲುವನು.”

ಮೊಲ – “ಅದು ಸರಿಯೇ, ಆದರೆ ಆ ಸಿಂಹವು ಬಲಿಷ್ಠವಾಗಿರುವಂತೆ ಕಾಣುತ್ತದೆ. ಹಾಗಾಗಿ ಅದರ ಶಕ್ತಿಯನ್ನು ಸರಿಯಾಗಿ ಅರಿಯದೆ ಯುದ್ಧಕ್ಕೆ ಹೋಗುವುದು ಸರಿಯಲ್ಲ. ಯಾರು ತನ್ನ ಹಾಗೂ ಶತ್ರುವಿನ ಶಕ್ತಿಯನ್ನು ತಿಳಿಯದೇ ಯುದ್ಧವನ್ನು ಮಾಡುವನೋ ಅವನು ಬೆಂಕಿಯಲ್ಲಿ ಪತಂಗವು ಸುಟ್ಟುಹೋಗುವಂತೆ ನಾಶವಾಗುವನು. ಯಾರು ತನಗಿಂತ ಬಲಶಾಲಿಯನ್ನು ಕೊಲ್ಲಲ್ಲು ಹೋಗುವನೋ ಅವನು ದಂತಭಗ್ನವಾದ ಆನೆಯಂತೆ ಹಿಂದಿರುಗುವನು.”

ಭೂಸುರಕ “ಎಲೈ ಮೊಲವೇ, ಈ ಮಾತಿನಿಂದೇನು ಪ್ರಯೋಜನ ? ಕೋಟೆಯಲ್ಲಿರುವ ಆ ಸಿಂಹವನ್ನು ತೋರಿಸು.” ಎಂದಾಗ ಮೊಲವು ಹಾಗೇ ಆಗಲೆಂದು ಹೇಳಿ ಮುನ್ನೆಡೆದು ಹಿಂದೆ ನೋಡಿದ್ದ ಬಾವಿಯ ಬಳಿ ಬಂದು ಹೇಳಿತು – “ಸ್ವಾಮೀ, ನಿನ್ನ ಪ್ರತಾಪವನ್ನು ಸಹಿಸಿಕೊಳ್ಳಲು ಯಾರಿಗೆ ತಾನೇ ಸಾಧ್ಯ ? ನಿನ್ನನ್ನು ನೋಡಿ ಆ ಕಳ್ಳಸಿಂಹವು ತನ್ನ ಕೋಟೆಯನ್ನು ಹೊಕ್ಕಿದೆ. ಆದ್ದರಿಂದ ಇಲ್ಲಿಗೆ ಬನ್ನಿ, ತೋರಿಸುತ್ತೇನೆ.” ಎಂದಿತು.

ಭೂಸುರಕ ತೋರಿಸೆಂದು ಹೇಳಲು ಮೊಲವು ಅದಕ್ಕೆ ಬಾವಿಯನ್ನು ತೋರಿಸಿದು. ಆ ಮೂರ್ಖ ಸಿಂಹವು ಬಾವಿಯ ನೀರಿನಲ್ಲಿ ತನ್ನ ಪ್ರತಿಬಿಂಬವನ್ನು ನೋಡಿ ಗರ್ಜಿಸಿತು. ಆಗ ಬಾವಿಯಿಂದ ಅದಕ್ಕೆ ಎರಡರಷ್ಟು ಪ್ರತಿಧ್ವನಿಯು ಹೊರಹೊಮ್ಮಿತು. ನೀರಿನ ಪ್ರತಿಬಿಂಬ ಶತ್ರುವಿನದೆಂದು ತಿಳಿದು ಅದು ಬಾವಿಗೆ ಹಾರಿ ಪ್ರಾಣ ಕಳೆದುಕೊಂಡಿತು. ಮೊಲವು ಹೀಗೆ ಎಲ್ಲಾ ಪ್ರಾಣಿಗಳಿಗೆ ಆನಂದವನ್ನುಂಟು ಮಾಡಿ ಅವುಗಳ ಪ್ರಶಂಸೆಯನ್ನು ಪಡೆದು ಸುಖವಾಗಿ ಕಾಡಿನಲ್ಲಿ ವಾಸಮಾಡುತ್ತಿತ್ತು.

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: