2-1-ಹಿರಣ್ಯಕ-ತಾಮ್ರಚೂಡನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯಲ್ಲಿ ಬರುತ್ತದೆ. ಮಿತ್ರಸಂಪ್ರಾಪ್ತಿಯ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಲಘುಪತನಕ ಕಾಗೆ ಮತ್ತು ಮಂಥರಕ ಆಮೆಗೆ ಹಿರಣ್ಯಕ ಇಲಿ ಈ ಕಥೆಯನ್ನು ಹೇಳಿದನು –

ದಕ್ಷಿಣದೇಶದಲ್ಲಿ ಮಹಿಲಾರೋಪ್ಯವೆಂಬ ನಗರವಿತ್ತು. ಅದರ ಸಮೀಪದಲ್ಲಿ ಭಗವಾನ್ ಶಂಕರನ ಮಂದಿರವೊಂದಿತ್ತು. ಅದರಲ್ಲಿ ತಾಮ್ರಚೂಡನೆಂಬ ಸನ್ಯಾಸಿ ವಾಸಿಸುತ್ತಿದ್ದನು. ಅವನು ನಗರದಲ್ಲಿ ಭಿಕ್ಷಾಟನೆಯನ್ನು ಮಾಡಿ ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದನು. ಹೆಚ್ಚು ಉಳಿದ ಭಿಕ್ಷಾನ್ನವನ್ನು ಭಿಕ್ಷಾಪಾತ್ರೆಯಲ್ಲಿಟ್ಟು ಆ ಪಾತ್ರೆಯನ್ನು ಗೋಡೆಗೆ ಸಿಕ್ಕಿಸಿದ್ದ ನಾಗರಕೋಲಿಗೆ ತಗಲಿಟ್ಟು ಮಲಗುತ್ತಿದ್ದನು. ಬೆಳಗ್ಗೆ ಆ ಅನ್ನವನ್ನು ಕಾರ್ಮಿಕರಿಗೆ ಕೊಟ್ಟು ಅವರಿಗೆ ದೇವಸ್ಥಾನವನ್ನು ತೊಳೆಯುವುದು, ಸೆಗಣಿ ಸಾರಿಸುವುದು, ರಂಗೋಲಿ ಹಾಕುವುದು ಮುಂತಾದ ಕೆಲಸಗಳನ್ನು ಮಾಡಲು ಹೇಳುತ್ತಿದ್ದನು.

ಒಂದು ದಿನ ನನ್ನ (ಅಂದರೆ ಕಥೆಯನ್ನು ಹೇಳುತ್ತಿರುವ ಹಿರಣ್ಯಕನ) ಬಾಂಧವರು ಬಂದು ಹೇಳಿದರು – “ಒಡೆಯ, ಮಂದಿರದಲ್ಲಿ ತಿನ್ನಲು ಯೋಗ್ಯವಾದ ಅನ್ನವಿರುವ ಭಿಕ್ಷಾಪಾತ್ರೆಯನ್ನು ಇಲಿಗಳ ಭಯದಿಂದ ಯಾವಗಲೂ ನಾಗರಕೋಲಿಗೆ ಸಿಕ್ಕಿಸಿ ಇಟ್ಟಿರುತ್ತಾರೆ. ಹಾಗಾಗಿ ನಮಗೆ ಅದನ್ನು ತಿನ್ನಲಾಗುತ್ತಿಲ್ಲ. ನಿಮಗೆ ಸಾಧ್ಯವಾಗದ್ದು ಯಾವುದೂ ಇಲ್ಲ. ಆದ್ದರಿಂದ ಬೇರೆ ಕಡೆ ಸುಮ್ಮನೇಕೆ ಅಲೆಯುವುದು ? ನಿಮ್ಮ ಅನುಗ್ರಹದಿಂದ ಇಂದು ಅಲ್ಲಿ ಯಥೇಷ್ಟವಾಗಿ ತಿನ್ನೊಣ.”

ಅದನ್ನು ಕೇಳಿ ನಾನು ಎಲ್ಲಾ ಇಲಿಗಳೊಂದಿಗೆ ಕೂಡಲೇ ಅಲ್ಲಿಗೆ ಹೋದೆ. ಕೋಲನ್ನು ಹತ್ತಿ ಭಿಕ್ಷಾಪಾತ್ರೆಯನ್ನು ತಲುಪಿ, ಅದರಲ್ಲಿದ್ದ ಭಕ್ಷ್ಯಗಳನ್ನು ಎಲ್ಲರಿಗೂ ಕೊಟ್ಟು ನಾನು ಕೂಡ ತಿಂದೆನು. ಎಲ್ಲರಿಗೂ ತೃಪ್ತಿಯಾಗಿ ನಮ್ಮ ಮನೆಗೆ ಹಿಂದಿರುಗಿದೆವು. ಹೀಗೆ ನಿತ್ಯವೂ ಅಲ್ಲಿದ್ದ ಅನ್ನವನ್ನು ತಿನ್ನುತ್ತಿದ್ದೆವು. ಸ್ವಾಮಿಯು ತನಗಾದಷ್ಟು ಅದನ್ನು ರಕ್ಷಿಸುತ್ತಿದ್ದ ಆದರೆ ಅವನು ನಿದ್ರೆಗೆ ಜಾರಿದಾಗ ನಾನು ಕೋಲನ್ನು ಹತ್ತಿ ನನ್ನ ಕೆಲಸವನ್ನು ಮಾಡುತ್ತಿದ್ದೆ.

ಅವನು ನನ್ನಿಂದ ಅನ್ನವನ್ನು ರಕ್ಷಿಸಲು ಮಾಹಾಪ್ರಯತ್ನವನ್ನು ಮಾಡಿದನು. ಒಂದು ಒಣಗಿದ ಬಿದಿರಿನ ಕೋಲನ್ನು ತಂದು ಮಲಗಿದ್ದಾಗಲೂ ನನ್ನನ್ನು ಹೆದರಿಸಲು ಆ ಭಿಕ್ಷಾಪಾತ್ರೆಗೆ ಹೊಡೆಯುತ್ತಿದ್ದನು. ನಾನು ಅನ್ನವನ್ನು ತಿನ್ನದೆ ಹೊಡೆತ ಬೀಳುವ ಭಯದಿಂದ ಹಿಂದೆ ಹೋಗುತ್ತಿದ್ದೆ. ಹೀಗೆ ಅವನೊಡನೆ ಜಗಳ ಮಾಡುವುದರಲ್ಲೇ ರಾತ್ರಿಯೆಲ್ಲಾ ಕಳೆಯುತ್ತಿತ್ತು.

ಒಂದು ದಿನ ಬೆಳಗ್ಗೆ ಬೃಹಸ್ಪಿಕ್ ಎಂಬ ಹೆಸರಿನ ಆತನ ಸಂನ್ಯಾಸಿ ಮಿತ್ರ ತೀರ್ಥಯಾತ್ರೆಯ ಕಾರಣದಿಂದ ಅಲೆಯುತ್ತಾ ಅತಿಥಿಯಾಗಿ ಅವನ ಮಂದಿರಕ್ಕೆ  ಬಂದನು. ಅವನನ್ನು ನೋಡಿದ ತಾಮ್ರಚೂಡನು ಎದ್ದು ಸ್ವಾಗತಿಸಿ ಅತಿಥಿ ಸತ್ಕಾರಗಳನ್ನು ಮಾಡಿದನು. ರಾತ್ರಿ ಅವರಿಬ್ಬರೂ ದರ್ಬೆಯ ಹಾಸಿನ ಮೇಲೆ ಮಲಗಿಕೊಂಡು ಧರ್ಮಕಥೆಗಳನ್ನು ಹೇಳಿಕೊಳ್ಳಲು ಪ್ರಾರಂಭಿಸಿದರು.

ಅವರ ಕಥಾಗೋಷ್ಠಿಯ ಮಧ್ಯೆ ತಾಮ್ರಚೂಡನು ಇಲಿಯನ್ನು ಹೆದರಿಸಲು ಆಗಾಗ ಬಿದಿರಿನ ಕೋಲಿನಿಂದ ಭಿಕ್ಷಾಪಾತ್ರೆಗೆ ಹೊಡೆಯುತ್ತಿದ್ದರಿಂದ ಅನ್ಯಮನಸ್ಕನಾಗಿದ್ದು ಬೃಹಸ್ಪಿಕ್ ಏನಾದರೂ ಪ್ರಶ್ನೆ ಕೇಳಿದಾಗ ಉತ್ತರಿಸದೆ ಮೌನವಾಗಿರುತ್ತಿದ್ದನು.

ಆಗ ಅತಿಥಿಯಾಗಿ ಬಂದಿದ್ದ ಬೃಹಸ್ಪಿಕ್ ಕೋಪದಿಂದ ಅವನಿಗೆ ಹೇಳಿದನು – “ಎಲೈ ತಾಮ್ರಚೂಡ, ನೀನು ನನ್ನ ಒಳ್ಳೆಯ ಮಿತ್ರನಲ್ಲವೆಂದು ಮನದಟ್ಟಾಯಿತು. ಆದ್ದರಿಂದಲೇ ನನ್ನೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ. ರಾತ್ರಿಯಾಗಿದ್ದರೂ ಕೂಡ ನಿನ್ನ ಮಂದಿರವನ್ನು ಬಿಟ್ಟು ಬೇರೆ ಮಂದಿರಕ್ಕೆ ತೆರಳುವೆನು. ಮನೆಗೆ ಬಂದವರನ್ನು ಯಾರು ಬನ್ನಿ ಬನ್ನಿ, ವಿಶ್ರಮಿಸಿ, ಆಸನವಿದು ಕುಳಿತುಕೊಳ್ಳಿ, ಬುಹುಕಾಲಾನಂತರ ನಿಮ್ಮ ದರ್ಶನವಾಯಿತು, ಏನು ಸಮಾಚಾರ ? ಏಕೆ ಸೊರಗಿಹೋಗಿದ್ದೀರಿ ? ನಿಮ್ಮನ್ನು ನೋಡಿ ಸಂತೋಷವಾಯಿತು ಎಂದು ಪ್ರೀತಿಯಿಂದ, ಆಹ್ಲಾದದಿಂದ ಆದರಿಸುವರೋ ಅಂತವರ ಮನೆಗಳಿಗೆ ಸಂದೇಹವಿಲ್ಲದೆ ಯಾವಾಗಲೂ ಹೋಗಲು ಆಗುತ್ತದೆ. ಯಾರ ಮನೆಯಲ್ಲಿ ಅತಿಥಿಯು ಬಂದಾಗ ಅತ್ತಿತ್ತ ಅಥವಾ ಕೆಳಗೆ ನೋಡುವರೋ ಅಂತವರ ಮನೆಗೆ ಹೋಗುವವರು ಕೊಂಬಿಲ್ಲದ ಎತ್ತಿಗಳಿಗೆ ಸಮ. ಎಲ್ಲಿ ಅತಿಥಿಗಳು ಬಂದಾಗ ಎದ್ದು ಸ್ವಾಗತಿಸುವುದಿಲ್ಲವೋ, ಹಿತವಾದ ಮಾತುಗಳನ್ನಾಡುವುದಿಲ್ಲವೋ, ಗುಣದೋಷಾದಿ ವಿಷಯಗಳ ಬಗ್ಗೆ ವಾರ್ತಾಲಾಪ ಮಾಡುವುದಿಲ್ಲವೋ, ಅಂಥ ಮನೆಗೆ ಯಾರೂ ಹೋಗುವುದಿಲ್ಲ. ಒಂದು ಮಂದಿರವನ್ನು ಪಡೆದಿರುವ ಅಹಂಕಾರದಿಂದ ನೀನು ನನ್ನ ಸ್ನೇಹವನ್ನು ತ್ಯಜಿಸಿದ್ದೀಯೆ. ಆದರೆ ಈ ಮಠಾಧಿಪತ್ಯದ ಕೆಲಸವು ನಿನಗೆ ನರಕವನ್ನು ತಂದುಕೊಡುತ್ತದೆ ಎಂಬುದನ್ನು ನೀನು ತಿಳಿದಿಲ್ಲ. ಏಕೆಂದರೆ ಹೀಗೊಂದು ಉಕ್ತಿಯಿದೆ – ‘ನರಕಕ್ಕೆ ಹೋಗುವ ಮನಸ್ಸಿದ್ದರೆ ಒಂದು ವರ್ಷ ಪೌರೋಹಿತ್ಯವನ್ನು ಮಾಡು. ಅಥವಾ ಕೇವಲ ಮೂರು ದಿನಗಳು ಮಠದ/ದೇವಸ್ಥಾನದ ಅಧಿಪತಿಯಾಗು.’ ಆದ್ದರಿಂದ ಮೂರ್ಖನೇ, ಮಠಾಧಿಪತ್ಯ ಸಿಕ್ಕಿದೆ ಎಂಬುದು ನೀನು ದುಃಖಿಸಬೇಕಾದ ವಿಚಾರ, ಬದಲಿಗೆ ನೀನು ಅಹಂಕಾರಿಯಾಗಿರುವೆ. ಆದ್ದರಿಂದ ನಾನು ನಿನ್ನ ಮಂದಿರವನ್ನು ರಾತ್ರಿಯೇ ಬಿಟ್ಟು ಹೊರಡುವೆನು.”

ಅದನ್ನು ಕೇಳಿ ಭಯದಿಂದ ಕೂಡಿದ ಮನಸ್ಸುಳ್ಳವನಾಗಿ ತಾಮ್ರಚೂಡನು ಅವನಿಗೆ ಹೇಳಿದನು – “ಪೂಜ್ಯನೇ, ಹಾಗೆ ಹೇಳಬೇಡ. ನಿನ್ನಂಥ ಮಿತ್ರ ನನಗೆ ಬೇರೊಬ್ಬನಿಲ್ಲ. ನಾನು ವಾರ್ತಾಲಾಪದ ವೇಳೆಯಲ್ಲಿ ಸುಮ್ಮನೆ ಇದ್ದುದಕ್ಕೆ ಕಾರಣವನ್ನು ಕೇಳು. ಈ ಒಂದು ದುರಾತ್ಮನಾದ ಇಲಿಯು ಎತ್ತರದಲ್ಲಿ ಇಟ್ಟಿದ್ದರೂ ಭಿಕ್ಷಾಪಾತ್ರೆಯನ್ನು ತಲುಪಿ ಅಲ್ಲಿರುವ ಭಿಕ್ಷಾನ್ನವನ್ನು ತಿನ್ನುತ್ತದೆ. ಭಿಕ್ಷಾನ್ನವಿಲ್ಲದೆ ಮಂದಿರವನ್ನು ತೊಳೆಯುವ ಕೆಲಸವೂ ಆಗುತ್ತಿಲ್ಲ. ಆ ಇಲಿಯನ್ನು ಬೆದರಿಸಲು ಬಿದಿರಿನ ಕೋಲಿನಿಂದ ಭಿಕ್ಷಾಪಾತ್ರೆಗೆ ಮತ್ತೆ ಮತ್ತೆ ಹೊಡೆಯುತ್ತೇನೆ. ಬೇರೆ ಕಾರಣವಿಲ್ಲ. ಕುತೂಹಲದ ವಿಷಯವೇನೆಂದರೆ ಹಾರುವುದರಲ್ಲಿ ಬೆಕ್ಕಾಗಲಿ ಅಥವಾ ಮಂಗವಾಗಲಿ ಈ ದುಷ್ಟ ಇಲಿಗೆ ಸಮವಲ್ಲ.”

ಬೃಹಸ್ಪಿಕ್ – “ಅದರ ಬಿಲವು ಎಲ್ಲಿದೆಯೆಂದು ತಿಳಿದಿದೆಯೇ ?”

ತಾಮ್ರಚೂಡ – “ಪೂಜ್ಯನೇ, ಸರಿಯಾಗಿ ತಿಳಿದಿಲ್ಲ.”

ಬೃಹಸ್ಪಿಕ್ – “ಖಂಡಿತವಾಗಿಯೂ ನಿಧಿಯ ಮೇಲೆ ಅದರ ಬಿಲವಿರಬಹುದು. ನಿಧಿಯ ಉಷ್ಣತೆಯ ಕಾರಣದಿಂದಲೇ ಅದು ಅಷ್ಟು ಎತ್ತರಕ್ಕೆ ಜಿಗಿಯಬಲ್ಲದು. ಧನನ ಕಾರಣದಿಂದ ಉಂಟಾದ ಉಷ್ಣತೆಯು ಕೂಡ ಶರೀರಧಾರಿಗಳ ತೇಜಸ್ಸನ್ನು ಹೆಚ್ಚಿಸುತ್ತದೆ. ಇನ್ನು ತ್ಯಾಗ ಮುಂತಾದ ಕರ್ಮಗಳಿಂದ ಕೂಡಿದ ಆ ಧನದಿಂದ ಉಂಟಾಗುವ ಭೋಗದ ಬಗ್ಗೆ ಹೆಚ್ಚು ಹೇಳುವುದೇನಿದೆ ? ಅಲ್ಲದೆ ಶಾಂಡಿಲಿಯು (ಶಂಡಿಲ ಗೋತ್ರೋತ್ಪನ್ನಳು) ವಿನಾ ಕರಣ ಸಿಪ್ಪೆ ಬಿಡಿಸಿದ ಎಳ್ಳನ್ನು ಸಿಪ್ಪೆ ಬಿಡಿಸದ ಎಳ್ಳಿನೊಂದಿಗೆ ಬದಲಿಸಿಕೊಳ್ಳುವುದಿಲ್ಲ.

ತಾಮ್ರಚೂಡನು ಶಾಂಡಿಲಿಯು ಎಳ್ಳನ್ನು ಬದಲಿಸುವುದರ ಬಗ್ಗೆ ತಿಳಿಸೆಂದು ಕೇಳಲು, ಬೃಹಸ್ಪಿಕ್ ಎಳ್ಳು ಮಾರುವ ಶಾಂಡಿಲಿಯ ಕಥೆಯನ್ನು ಹೇಳಿದನು.

ಬೃಹಸ್ಪಿಕ್ – “ಆದ್ದರಿಂದಲೇ ನಾನು ಹೇಳುವುದು ‘ಶಾಂಡಿಲಿಯು (ಶಂಡಿಲ ಗೋತ್ರೋತ್ಪನ್ನಳು) ವಿನಾ ಕಾರಣ…’ ಎಂದು.”

ಕಥೆಯನ್ನು ಮುಗಿಸಿದ ಬೃಹಸ್ಪಿಕ್ ಮತ್ತೆ ಹೇಳಿದನು – “ನಿನಗೆ ಆ ಇಲಿಯು ಸಂಚರಿಸುವ ಮಾರ್ಗವು ತಿಳಿದಿದೆಯೇ ?”

ತಾಮ್ರಚೂಡ – “ತಿಳಿದಿದೆ. ಅದು ಒಂದೇ ಬರುವುದಿಲ್ಲ, ಅಸಂಖ್ಯ ಪರಿವಾರದೊಂದಿಗೆ ಬರುತ್ತದೆ. ನಾನು ನೋಡುತ್ತಿದ್ದರೂ ತಿರುಗಾಡುತ್ತಾ ಇತರ ಇಲಿಗಳೊಂದಿಗೆ ಬರುತ್ತದೆ ಮತ್ತು ಹೋಗುತ್ತದೆ.”

ಬೃಹಸ್ಪಿಕ್ ಗುದ್ದಲಿಗಾಗಿ ಕೇಳಿದಾಗ ತಾಮ್ರಚೂಡನು ಒಂದು ಲೋಹದಿಂದ ಮಾಡಿದ ಗುದ್ದಲಿಯನ್ನು ಕೊಟ್ಟನು.

ಬೃಹಸ್ಪಿಕ್ – “ನಾಳೆ ಬೆಳಗ್ಗೆ ಉಷಾಕಾಲದಲ್ಲಿ ನೀನು ನನ್ನೊಂದಿಗಿರು. ಇನ್ನೂ ಜನರು ನಡೆದಾಡುವುದಕ್ಕೆ ಮುಂಚೆಯೇ ಅದರ ಹೆಜ್ಜೆಗುರುತುಗಳನ್ನು ಹಿಂಬಾಲಿಸಿಕೊಂಡು ಹೋಗೋಣ.”

ನಾನು (ಅಂದರೆ ಈ ಕಥೆಯನ್ನು ಹೇಳುತ್ತಿರುವ ಹಿರಣ್ಯಕ ಇಲಿ) ಆ ಮಾತುಗಳನ್ನು ಕೇಳಿ ಚಿಂತಿಸಿದೆನು – “ಅಯ್ಯೋ! ಈ ಅಭಿಪ್ರಾಯವನ್ನುಳ್ಳ ಇವನ ಮಾತುಗಳನ್ನು ಕೇಳಿ ನಾನು ನಾಶಹೊಂದುವೆನು ಎಂದು ಅನಿಸುತ್ತಿದೆ. ಇವನು ನಿಧಿಯ ಬಗ್ಗೆ ತಿಳಿದಂತೆ ನಮ್ಮ ಬಿಲವನ್ನೂ ತಿಳಿದಿದ್ದಾನೆ. ಇವನ ಮಾತಿನಿಂದ ಹಾಗೆಯೇ ಅನಿಸುತ್ತಿದೆ. ಕೇವಲ ಕೈಯಳತೆಯಿಂದ ಹೇಗೆ ನಿಪುಣರು (ಸೂಕ್ಷ್ಮವಾದ) ಪಲಪ್ರಮಾಣವನ್ನು(*) ತಿಳಿಯುತ್ತಾರೋ ಹಾಗೆ ಬುದ್ಧಿವಂತರು ಒಬ್ಬನನ್ನು ಒಮ್ಮೆ ನೋಡಿದ ಕೂಡಲೆ ಅವರ ಸತ್ವವನ್ನು ತಿಳಿದುಕೊಂಡುಬಿಡುತ್ತಾರೆ. (* 1 ಪಲ = 4 ಕರ್ಷಗಳ ತೂಕ, 1 ಕರ್ಷ = 16 ಆದ್ಯಮಾಷಕಗಳ ತೂಕ, 1 ಆದ್ಯಮಾಷಕ = 5 ಗುಲಗಂಜಿಗಳ ತೂಕ – ಶಬ್ದಾರ್ಥಕೌಸ್ತುಭ ಕನ್ನಡ ಸಂಸ್ಕೃತ ಶಬ್ದಕೋಶದಿಂದ). ಇನ್ನೂ ರೆಕ್ಕೆಗಳು ಮೂಡದಿರುವ ನವಿಲಿನ ಮರಿಯ ವಿಶಿಷ್ಟವಾದ ಸರೋವರದ ಕಡೆಗಿನ ನಡಿಗೆ ‘ಇದು ನವಿಲೇ’ ಎಂದು ಹೇಗೆ ಸೂಚಿಸುತ್ತದೆಯೋ ಹಾಗೆ ಮನುಷ್ಯನ ಇಚ್ಛೆ/ಅಭಿಲಾಷೆಯೇ ಪೂರ್ವಜನ್ಮದ ಕರ್ಮರೂಪದ ಶುಭಾಶುಭ ಭವಿಷ್ಯದ ಸೂಚನೆಯನ್ನು ನೀಡುತ್ತದೆ. ಆದ್ದರಿಂದ ಭಯಗೊಂಡ ನಾನು ಸಪರಿವಾರನಾಗಿ ಬಿಲದ ದಾರಿಯನ್ನು ಬಿಟ್ಟು ಬೇರೆ ಮಾರ್ಗದಲ್ಲಿ ಹೋಗಲು ಆರಂಭಿಸಿದೆನು. ಹೀಗೆ ಪರಿವಾರದೊಂದಿಗೆ ಹೋಗುತ್ತಿದ್ದಾಗ ದೊಡ್ಡ ಬೆಕ್ಕೊಂದು ಎದುರಾಯಿತು. ಅದು ಇಲಿಗಳ ಗುಂಪನ್ನು ನೋಡಿ ಕೂಡಲೇ ಅದರ ಮಧ್ಯಕ್ಕೆ ನೆಗೆಯಿತು. ಆಗ ಬದುಕುಳಿದ ಇಲಿಗಳು ನೇರಮಾರ್ಗವನ್ನು ಅನುಸರಿಸದ ನನ್ನನ್ನು ನಿಂದಿಸಿ ಗಾಯಗೊಂಡ ತಮ್ಮ ರಕ್ತದಿಂದ ಭೂಮಿಯನ್ನು ತೋಯಿಸುತ್ತಾ ಅದೇ ಬಿಲವನ್ನು ಹೊಕ್ಕರು. ಅಥವಾ ಈ ಮಾತು ಈ ಸಂದರ್ಭಕ್ಕೆ ಯೋಗ್ಯವಾಗಿದೆ – ಬಂಧನದ ಪಾಶವನ್ನು ಕಡಿದುಕೊಂಡು, ಕೂಟಯಂತ್ರದಿಂದ (ಪ್ರಾಣಿಗಳ ಬಂಧನಕ್ಕೆ ಉಪಯೋಗಿಸುವ ಯಂತ್ರದಿಂದ) ತಪ್ಪಿಸಿಕೊಂಡು, ಬಲೆಯನ್ನು ಪ್ರಯತ್ನದಿಂದ ತುಂಡರಿಸಿ, ಸುತ್ತಲೂ ಅಗ್ನಿಯ ಜ್ವಾಲೆಗಳ ಸಮೂಹವಿರುವ ವನಪ್ರದೇಶದಿಂದ ದೂರ ಸರಿದು, ಬೇಟೆಗಾರನ ಬಿಲ್ಲಿಗೆ ಸಿಗದ ವೇಗದಿಂದ ಹಾರಿ ನೆಗೆದು ಓಡುತ್ತಾ ಜಿಂಕೆಯೊಂದು ಬಾವಿಯೊಳಗೆ ಬಿದ್ದು ಹೋಯಿತು. ಹೀಗೆ ವಿಧಿಯು ಪ್ರತಿಕೂಲವಾಗಿದ್ದಾಗ ಪುರುಷಪ್ರಯತ್ನ ಏನು ತಾನೆ ಮಾಡಬಲ್ಲದು ?

ನಾನೊಬ್ಬನೇ ಬೇರೆಡೆಗೆ ಹೋದೆನು. ಉಳಿದವರೆಲ್ಲರೂ ಮೌಢ್ಯದಿಂದ ಅದೇ ಬಿಲವನ್ನು ಹೊಕ್ಕರು. ಆನಂತರ ಆ ಸಂನ್ಯಾಸಿಯು ರಕ್ತದ ಹನಿಗಳು ಬಿದ್ದ ಮಾರ್ಗವನ್ನು ಅನುಸರಿಸುತ್ತಾ ಬಿಲವನ್ನು ತಲುಪಿದನು. ಗುದ್ದಲಿಯಿಂದ ಅಗೆಯಲಾರಂಭಿಸಿದನು. ನಾನು ಯಾವ ನಿಧಿಯ ಮೇಲೆ ವಾಸಿಸುತ್ತಿದ್ದೆನೋ ಮತ್ತು ಯಾವ ನಿಧಿಯ ಉಷ್ಣತೆಯಿಂದ ದುರ್ಗಮ ಸ್ಥಳಗಳನ್ನೂ ತಲುಪುತ್ತಿದ್ದೆನೋ ಆ ನಿಧಿಯನ್ನು ಅವನು ಪಡೆದುಕೊಂಡನು. ಆಗ ಸಂತೋಷಗೊಂಡ ಸಂನ್ಯಾಸಿಯು ತಾಮ್ರಚೂಡನಿಗೆ ಹೇಳಿದನು – “ಪೂಜ್ಯನೆ, ಇನ್ನು ಮುಂದೆ ನೀನು ನಿಶ್ಚಿಂತೆಯಿಂದ ಮಲಗಬಹುದು. ಈ ನಿಧಿಯ ಉಷ್ಣತೆಯಿಂದಲೇ ಇಲಿಗಳು ನಿನ್ನ ನಿದ್ದೆಯನ್ನು ಕೆಡಿಸುತ್ತಿದ್ದವು.” ಹೀಗೆ ನುಡಿದು ಆ ನಿಧಿಯನ್ನು ತೆಗೆದುಕೊಂಡು ಇಬ್ಬರೂ ದೇವಾಲಯಕ್ಕೆ ಹಿಂದಿರುಗಿದರು. ಬಿಲದ ಬಳಿಗೆ ಬಂದಾಗ ನನಗೆ ಆ ಸೌಂದರ್ಯ ಕಳೆದುಕೊಂಡ ಮತ್ತು ದುಃಖಕರವಾದ ಬಿಲವನ್ನು ನೋಡಲಾಗಲಿಲ್ಲ. “ಏನು ಮಾಡಲಿ ? ಎಲ್ಲಿಗೆ ಹೋಗಲಿ ? ನನ್ನ ಮನಸ್ಸಿಗೆ ಹೇಗೆ ಶಾಂತಿಯು ದೊರಕುವುದು ?” ಎಂದೆಲ್ಲಾ ಯೋಚಿಸುತ್ತಾ ತುಂಬಾ ಕಷ್ಟದಿಂದ ಆ ದಿನವನ್ನು ಕಳೆದೆನು.

ಸೂರ್ಯನು ಮುಳುಗಿದ ಮೇಲೆ ಉದ್ವಿಗ್ನನಾಗಿ ನಿರುತ್ಸಾಹದಿಂದ ಪರಿವಾರದೊಂದಿಗೆ ಆ ಮಂದಿರವನ್ನು ಪ್ರವೇಶಿಸಿದೆನು. ಆಗ ನಮ್ಮ ಪರಿವಾರದ ಶಬ್ದವನ್ನು ಕೇಳಿದ ತಾಮ್ರಚೂಡನು ಮತ್ತೆ ಭಿಕ್ಷಾಪಾತ್ರೆಯನ್ನು ಕೋಲಿನಿಂದ ಹೊಡೆಯಲು ಪ್ರಾರಂಭಿಸಿದನು.

ಆಗ ಬೃಹಸ್ಪಿಕ್ – “ಮಿತ್ರನೇ, ಏಕೆ ಇಂದೂ ಕೂಡ ನಿಶ್ಚಿಂತೆಯಿಂದ ನಿದ್ರೆಮಾಡುವುದಿಲ್ಲವೇ “ ಎಂದು ಕೇಳಿದನು.

ತಾಮ್ರಚೂಡ – ಪೂಜ್ಯನೆ, ಆ ದುರಾತ್ಮ ಇಲಿಯು ಪರಿವಾರ ಸಮೇತವಾಗಿ ಮತ್ತೆ ಬಂದಿದೆ. ಅದರ ಭಯದಿಂದ ಒಣಗಿದ ಕೋಲಿನಿಂದ ಭಿಕ್ಷಾಪಾತ್ರೆಯನ್ನು ಹೊಡೆಯುತ್ತಿದ್ದೇನೆ.”

ಬೃಹಸ್ಪಿಕ್ ನಕ್ಕು ನುಡಿದನು – “ಮಿತ್ರ, ಹೆದರಬೇಡ. ನಿಧಿಯ ಜೊತೆಗೆ ಆ ಇಲಿಯ ಜಿಗಿಯುವ ಶಕ್ತಿಯೂ ಹೊರಟುಹೋಯಿತು. ಎಲ್ಲಾ ಪ್ರಾಣಿಗಳಿಗೂ ಇದೇ ಸ್ಥಿತಿಯಾಗುತ್ತದೆ. ಸದಾ ಉತ್ಸಾಹಿಯಾಗಿರುವುದು, ಬೇರೆಯವರನ್ನು ಪರಾಭವಗೊಳಿಸುವುದು ಮತ್ತು ಕಠೋರವಾದ ಮಾತುಗಳನ್ನಾಡುವುದು – ಮನುಷ್ಯನಿಗೆ ಇದೆಲ್ಲವೂ ಧನದಿಂದ ಬಂದ ಬಲ.”

ಅದನ್ನೆಲ್ಲಾ ಕೇಳಿಸಿಕೊಂಡ ನಾನು ಕೋಪದಿಂದ ವಿಶೇಷವಾದ ಪ್ರಯತ್ನದಿಂದ ಭಿಕ್ಷಾಪಾತ್ರೆಯನ್ನು ತಲುಪಲು ಜಿಗಿದರೂ ತಲುಪಲಾಗದೆ ನೆಲಕ್ಕೆ ಬಿದ್ದೆನು. ಬಿದ್ದ ಶಬ್ದವನ್ನು ಕೇಳಿ ನನ್ನ ಶತ್ರುವು ನಕ್ಕು ತಾಮ್ರಚೂಡನಿಗೆ ಹೇಳಿದನು – “ಓಹೋ, ಕುತೂಹಲವನ್ನು ನೋಡು! ಧನದಿಂದಲೇ ಎಲ್ಲರೂ ಬಲವಂತರಾಗುತ್ತಾರೆ ಮತ್ತು ಹಣವಿದ್ದವನೇ ಪಂಡಿತನು. ಧನವಿಲ್ಲದ ಈ ಇಲಿಯನ್ನು ನೋಡು, ಈಗ ಇದು ಇತರ ಇಲಿಗಳಿಗೆ ಸಮನಾಗಿ ಬಿಟ್ಟತು.. ಆದ್ದರಿಂದ ನೀನು ನಿಶ್ಚಿಂತೆಯಿಂದ ಮಲಗು. ಇದರ ನೆಗೆಯುವುದಕ್ಕೆ ಯಾವುದು ಸಾಧನವಾಗಿತ್ತೋ ಅದು ನಮ್ಮ ಪಾಲಾಗಿದೆ. ಧನವಿಲ್ಲದ ಮನುಷ್ಯನು ಹಲ್ಲಿಲ್ಲದ ಹಾವಿನಂತೆ ಮತ್ತು ಮದವಿಲ್ಲದ ಆನೆಯಂತೆ ಹೆಸರಿಗೆ ಮಾತ್ರ ಪುರುಷನು.”

ಅದನ್ನು ಕೇಳಿ ನಾನು ಮನಸ್ಸಿನಲ್ಲಿಯೇ ಚಿಂತಿಸಿದೆನು – “ಈ ನನ್ನ ಶತ್ರುವು ಸತ್ಯವನ್ನೇ ನುಡಿದಿರುವನು. ನನಗೆ ಈಗ ಬೆರಳಿನ ಉದ್ದದಷ್ಟೂ ನೆಗೆಯಲು ಶಕ್ತಿಯಿಲ್ಲ. ಧನವಿಲ್ಲದ ಪುರುಷನ ಜೀವನಕ್ಕೆ ಧಿಕ್ಕಾರವಿರಲಿ. ಧನವಿಲ್ಲದ ಮನುಷ್ಯನು ಅಲ್ಪ ಬುದ್ಧಿಯವನಾಗಿರುತ್ತಾನೆ. ಬೇಸಿಗೆಯಲ್ಲಿ ಸರೋವರವು ಹೇಗೆ ಒಣಗಿಹೋಗುವುದೋ ಹಾಗೆ ಅವನ ಎಲ್ಲಾ ಕೆಲಸಗಳೂ ಸಿದ್ಧಿಸದೆ ನಾಶವಾಗುತ್ತವೆ. ಧಾನ್ಯವಿಲ್ಲದ ಬತ್ತದಂತೆ ಮತ್ತು ಅರಣ್ಯದಲ್ಲಿ ಬೆಳೆದ (ತಿನ್ನಲ್ಲು ಯೋಗ್ಯವಲ್ಲದ) ಎಳ್ಳಿನಂತೆ ಹಣವಿಲ್ಲದವರು ಹೆಸರಿಗೆ ಮಾತ್ರ ಮನುಷ್ಯರು, ಅವರ ಯಾವ ಕಾರ್ಯಗಳೂ ಸಾಧಸುವುದಿಲ್ಲ. ಬಡವನು ಒಳ್ಳೆಯವನಾದರೂ ಆತನ ಇತರ ಗುಣಗಳು ಪ್ರಕಾಶಗೊಳ್ಳುವುದೇ ಇಲ್ಲ. ಸಂಪತ್ಲಕ್ಷ್ಮೀ ಮನುಷ್ಯನಲ್ಲಿನ ಗುಣಗಳನ್ನು ಸೂರ್ಯನಂತೆ ಪ್ರಕಾಶ ಪಡಿಸುತ್ತಾಳೆ. ಧನಿಕನು ಧನವನ್ನು ಕಳೆದುಕೊಂಡು ದರಿದ್ರನಾಗಿ ಹೇಗೆ ತೊಂದರೆಗೊಳಗಾಗುತ್ತಾನೋ ಹಾಗೆ ಜನ್ಮತಃ ಬಡವನಾದವನು ಅಷ್ಟಾಗಿ ಕಷ್ಟಪಡುವುದಿಲ್ಲ. ಎಲ್ಲೆಡೆ ಬೆಂಕಿಯಿಂದ ಸುಟ್ಟು ಒಣಗಿಹೋದ, ಕೀಟಗಳಿಂದ ತಿನ್ನಲ್ಪಟ್ಟ, ಚೌಳುಮಣ್ಣಿನಲ್ಲಿ (ಉಪ್ಪಿನಾಂಶವಿರುವ ಮಣ್ಣು) ನಿಂತಿರುವ ಮರದ ಬಾಳೇ ಯಾಚಕನ ಬಾಳಿಗಿಂತ ಉತ್ತಮವು. ನಿಷ್ಪ್ರಭಾವದಿಂದ ಕೂಡಿದ ದಾರಿದ್ರ್ಯವು ಎಲ್ಲೆಡೆ ಸಂದೇಹವನ್ನೇ ಉಂಟುಮಾಡುತ್ತದೆ. ಉಪಕಾರವನ್ನು ಮಾಡಲು ಬಂದ ನಿರ್ಧನನಾದವನನ್ನು ಜನರು ತ್ಯಜಿಸಿ ಹೋಗುತ್ತಾರೆ. ಹಣವಿಲ್ಲದವರ ಮನೋರಥಗಳು ಮತ್ತೆ ಮತ್ತೆ ಮೇಲೇರಿ ವಿಧವೆಯ ಸ್ತನಗಳಂತೆ ಹೃದಯದಲ್ಲೇ ಉಳಿದುಕೊಂಡು ನಿಷ್ಫಲವಾಗಿಬಿಡುತ್ತವೆ. ನಿತ್ಯವೂ ದುರ್ಗತಿಯೆಂಬ ಕತ್ತಲಿನಿಂದ ಆವೃತನಾದ ವ್ಯಕ್ತಿಯು ಪ್ರಕಾಶಮಾನವಾದ ದಿನದ ಬೆಳಕಿನಲ್ಲಿ ಎದುರಿಗೆ ನಿಂತಿದ್ದರೂ ಯಾರ ಗಮನಕ್ಕೂ ಬರುವುದಿಲ್ಲ.”

ಹೀಗೆ ದುಃಖಿಸಿ, ಉತ್ಸಾಹವನ್ನು ಕಳೆದುಕೊಂಡು, ಧನದ ರಾಶಿಯನ್ನು ದಿಂಬಿನಂತೆ ಮಾಡಿ ಮಲಗಿರುವುದನ್ನು ನೋಡಿ, ನನ್ನ ಶ್ರಮವೆಲ್ಲಾ ವ್ಯರ್ಥವೆಂದು ಮನಗಂಡು ಬೆಳಗ್ಗಿನ ಸಮಯದಲ್ಲಿ ಮನೆಗೆ ಹೊರಟೆನು. ಹೊರಡುವಾಗ ನನ್ನ ಸೇವಕರು ಪರಸ್ಪರ ಹೀಗೆ ಮಾತನಾಡಿಕೊಂಡರು – “ನಮ್ಮ ಹೊಟ್ಟೆ ತುಂಬಿಸುವುದರಲ್ಲಿ ಇವನು ಅಸಮರ್ಥನು. ಇವನ ಹಿಂದೆ ಹೋದರೆ ಬೆಕ್ಕು ಮುಂತಾದವುಗಳಿಂದ ತೊಂದರೆ. ಆದ್ದರಿಂದ ಇವನ ಸೇವೆ ಮಾಡುವುದರಿಂದೇನು ಪ್ರಯೊಜನ ? ಯಾರ ಬಳಿ ಇರುವುದರಿಂದ ಏನೂ ಲಾಭವಿಲ್ಲವೋ, ಕೇವಲ ಆಪತ್ತುಗಳೇ ಎದುರಾಗುತ್ತವೆಯೋ ಅಂತಹ ಒಡೆಯನನ್ನು ವಿಶೇಷವಾಗಿ ಆತನ ಅನುಯಾಯಿಗಳೂ ತ್ಯಜಿಸಿಬಿಡಬೇಕು.”

ದಾರಿಯಲ್ಲಿ ಈ ರೀತಿಯ ಅವರ ಮಾತುಗಳನ್ನು ಕೇಳಿಸಿಕೊಂಡು ನನ್ನ ಬಿಲವನ್ನು ಹೊಕ್ಕೆನು. ನಿರ್ಧನನಾದ ನನ್ನ ಮುಂದೆ ಪರಿಜನರಲ್ಲಿ ಯಾವನೊಬ್ಬನೂ ಬರಲಿಲ್ಲವೋ ಆಗ ಹೀಗೆ ಚಿಂತಿಸಿದೆನು – “ದಾರಿದ್ರ್ಯಕ್ಕೆ ಧಿಕ್ಕಾರವಿರಲಿ!”

ನಾನು ಈ ಚಿಂತೆಯಲ್ಲಿದ್ದಾಗ ನನ್ನ ಸೇವಕರು ನನ್ನ ಶತ್ರುಗಳ ಸೇವಕರಾಗಿಬಿಟ್ಟರು. ಅವರೆಲ್ಲಾ ನಾನು ಏಕಾಂಗಿಯಾಗಿರುವುದನ್ನು ಕಂಡು ಅಪಹಾಸ್ಯ ಮಾಡುತ್ತಿದ್ದರು. ಆಗ ಒಂಟಿಯಿದ್ದ ನಾನು ಯೋಗನಿದ್ರೆಯಲ್ಲಿದ್ದಾಗ ಹೀಗೆ ಚಿಂತಿಸಿದೆನು – “ಆ ಕೆಟ್ಟ ತಪಸ್ವಿಯ ಬಳಿಗೆ ಹೋಗಿ ಅವನು ಧನದ ಪೆಟ್ಟಿಗೆಯನ್ನು ತಲೆಯ ಕೆಳಗೆ ಇಟ್ಟು ನಿದ್ರೆ ಮಾಡಿದ್ದಾಗ ಮೆಲ್ಲಗೆ ಅದನ್ನು ಕೊರೆದು ಹಣವನ್ನೆಲ್ಲಾ ನನ್ನ ಬಿಲಕ್ಕೆ ತರುವೆನು. ಮತ್ತೆ ಪಡೆದ ಹಣದ ಮಹಿಮೆಯಿಂದ ಹಿಂದಿನಂತೆ ಇಲಿಗಳ ರಾಜನಾಗುವೆನು. ಉತ್ತಮಕುಲದ ವಿಧವೆಯರಂತೆ ನಿರ್ಧನರು ಕೇವಲ ತಮ್ಮ ನೂರಾರು ಮನೋರಥಗಳು ಫಲಿಸದೆ ಬೇಸರಹೊಂದುವರೇ ಹೊರತು ಆಸೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಕಾರ್ಯೋನ್ಮುಖರಾಗುವುದಿಲ್ಲ. ಜೀವಿಗಳಿಗೆ ದಾರಿದ್ರ್ಯವು ಅತ್ಯಂತ ಅಪಮಾನಕರ ಹಾಗೂ ದುಃಖಕರವಾಗಿರುತ್ತದೆ. ಬಡವನಾದವನನ್ನು ಅವನ ಸ್ವಂತದವರೇ ಬದುಕಿದ್ದರೂ ಸತ್ತಂತೆ ಪರಿಗಣಿಸುತ್ತಾರೆ. ದುರ್ಗತಿಯಿಂದ ಕಲುಷಿತಗೊಂಡವನು (ಅಂದರೆ ದರಿದ್ರನು) ಸದಾ ದೈನ್ಯತೆ ಹಾಗೂ ಸೋಲಿಗೆ ಪಾತ್ರನಾಗುತ್ತಾನೆ ಮತ್ತು ಆಪತ್ತುಗಳಿಗೆ ಆಶ್ರಯಸ್ಥಾನನಾಗಿರುತ್ತಾನೆ (ಅಂದರೆ ಯಾವಾಗಲೂ ತೊಂದರೆಗಳಿಗೆ ಸಿಲುಕುತ್ತಾನೆ ಎಂದರ್ಥ). ಹಣವಿಲ್ಲದವನ ಬಾಂಧವರು ಆತನೊಂದಿಗೆ ಸಂಬಂಧವಿರುವುದರ ಬಗ್ಗೆ ನಾಚಿಕೆ ಪಟ್ಟುಕೊಳ್ಳುತ್ತಾರೆ ಹಾಗೂ ಆ ಸಂಬಂಧವನ್ನು ಗೌಪ್ಯವಾಗಿಡುತ್ತಾರೆ.  ಆತನ ಮಿತ್ರರೂ ಕೂಡ ಶತ್ರುಗಳಾಗುತ್ತಾರೆ. ಜೀವಿಗಳಿಗೆ ಈ ದಾರಿದ್ರ್ಯವು ಸಣ್ಣತನದ ಮೂರ್ತರೂಪವಿದ್ದಂತೆ, ವಿಪತ್ತುಗಳ ವಾಸಸ್ಥಾನವಿದ್ದಂತೆ ಮತ್ತು ಮರಣದ ಇನ್ನೊಂದು ರೂಪವಿದ್ದಂತೆ. ಆಡಿನ ಕಾಲ್ನಡಿಗೆಯಿಂದ ಎದ್ದ ಧೂಳಿನಂತೆ, ಕಸಗುಡಿಸುವಾಗ ಎದ್ದ ಧೂಳಿನಂತೆ ಅಥವಾ ಮಿಂಚುಹುಳವು ಕತ್ತಲೆಯನ್ನು ತ್ಯಜಿಸುವಂತೆ ಜನರು ಬಡವರಿಂದ ದೂರ ಸರಿಯುವರು. ಶೌಚಕಾರ್ಯಕ್ಕೆ ಉಪಯೋಗಿಸಿ ಉಳಿದ ಮೃದುಮಣ್ಣಿನಿಂದ ಕೂಡ ಪ್ರಯೋಜನವಿದೆ ಆದರೆ ಹಣವಿಲ್ಲದ ಜನರಿಂದ ಏನೂ ಕೂಡ ಉಪಯೋಗವಿಲ್ಲ. ಧನವಿಲ್ಲದವನು ಏನಾದರು ಕೊಡಲು ಧನಿಕನ ಮನೆಗೆ ಬಂದರೂ ‘ಇವನು ಯಾಚಕನು’ ಎಂದು ತಿಳಿಯುತ್ತಾರೆ. ಇಂಥ ದಾರಿದ್ರ್ಯಕ್ಕೆ ಧಿಕ್ಕಾರವಿರಲಿ. ಆದ್ದರಿಂದ ಈ ಸಂನ್ಯಾಸಿಯ ಬಳಿಯಿಂದ ಹಣವನ್ನು ಮತ್ತೆ ಪಡೆಯುವಾಗ ನಾನು ಸತ್ತರೂ ಅದು ಒಳ್ಳೆಯದೇ.ತನ್ನ ಹಣವನ್ನು ದೋಚುವಾಗ ಯಾರು ಅದನ್ನು ರಕ್ಷಿಸದೆ ತನ್ನ ಪ್ರಾಣವನ್ನು ರಕ್ಷಿಸಿಕೊಳ್ಳುತ್ತಾನೋ ಅಂತವನು ಕೊಟ್ಟ ತರ್ಪಣವನ್ನು ಪಿತೃಗಳು ತೆಗೆದುಕೊಳ್ಳುವುದಿಲ್ಲ. ಯಾರು ಗೋವುಗಳನ್ನು, ಬ್ರಾಹ್ಮಣರನ್ನು, ಸ್ತ್ರೀಯರನ್ನು ಅಥವಾ ತನ್ನ ಸಂಪತ್ತನ್ನು ರಕ್ಷಿಸುವಾಗ ಪ್ರಾಣವನ್ನು ಕಳೆದುಕೊಳ್ಳುತ್ತಾರೋ ಅವರಿಗೆ ಅಕ್ಷಯ ಲೋಕಗಳು ಪ್ರಾಪ್ತವಾಗುತ್ತವೆ.”

ಹೀಗೆ ನಿಶ್ಚಯಿಸಿ ರಾತ್ರಿ ಸಂನ್ಯಾಸಿಯು ನಿದ್ದೆ ಮಾಡುತ್ತಿದ್ದಾಗ ಅಲ್ಲಿಗೆ ಹೋಗಿ ಹಣದ ಪೆಟ್ಟಿಗೆಯನ್ನು ಕೊರೆಯುವಾಗ ಆ ದುಷ್ಟನು ಎದ್ದುಬಿಟ್ಟನು. ಆಗ ಒಣಗಿದ ಬಿದಿರಿನ ಕೋಲಿನಿಂದ ನನ್ನ ತಲೆಗೆ ಬೀಸಿದಾಗ ಆಯಸ್ಸು ಗಟ್ಟಿಯಿದ್ದ ನಾನು ಸಾಯದೆ ಹೇಗೋ ತಪ್ಪಿಸಿಕೊಂಡು ಬಂದೆ. ಮನುಷ್ಯನು ತನಗೆ ಪ್ರಾಪ್ತವಿದ್ದಷ್ಟು ಹಣವನ್ನು ಮಾತ್ರ ಪಡೆಯುತ್ತಾನೆ. ದೇವರಿಗೂ ಕೂಡ ಅದನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ನಾನು ದುಃಖಿಸುವುದಿಲ್ಲ ಅಥವಾ ಆಶ್ಚರ್ಯ ಪಡುವುದಿಲ್ಲ. ನನ್ನದು ಯಾವುದಿದೆಯೋ ಅದೆಂದಿಗೂ ಪರರದಾಗುವುದಿಲ್ಲ. ಅದು ಹೇಗೆ ಎಂದು ಕಾಗೆ (ಲಘುಪತನಕ) ಮತ್ತು ಆಮೆ (ಮಂಥರಕ) ಕೇಳಿದಾಗ, ಹಿರಣ್ಯಕನು ವ್ಯಾಪಾರಿ ಪುತ್ರನ ಕಥೆಯನ್ನು ಹೇಳಿದನು.

ಮಾತನ್ನು ಮುಂದುವರೆಸುತ್ತಾ ಹಿರಣ್ಯಕನು – “ಆದ್ದರಿಂದಲೇ ನಾನು ಮನುಷ್ಯನು ತನಗೆ ಪ್ರಾಪ್ತವಿದ್ದಷ್ಟು ಹಣವನ್ನು ಮಾತ್ರ ಪಡೆಯುತ್ತಾನೆ ಎಂದು ಹೇಳುವುದು.”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: