2-2-1-ಎತ್ತಿನ ವೃಷಣಗಳನ್ನು ಅನುಸರಿಸಿದ ನರಿಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯಲ್ಲಿ ಬರುತ್ತದೆ. ಮಿತ್ರಸಂಪ್ರಾಪ್ತಿಯ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಪ್ರದೇಶದಲ್ಲಿ ತೀಕ್ಷ್ಣವಿಷಾಣ (ಹರಿತವಾದ ಕೊಂಬುಗಳುಳ್ಳ ಎಂದರ್ಥ) ಎಂಬ ದೊಡ್ಡ ಎತ್ತು ವಾಸಿಸುತ್ತಿತ್ತು. ಅತಿಯಾದ ಮದದ ಕಾರಣದಿಂದ ತನ್ನ ಗುಂಪಿನಿಂದ ಬೇರೆಯಾದ ಅದು ನದೀತೀರವನ್ನು ತನ್ನ ಕೊಂಬಿನಿಂದ ಕೆಡವುತ್ತಾ,  ಪಚ್ಚೆಹುಲ್ಲುಗಳನ್ನು ಸ್ವೇಚ್ಛೆಯಿಂದ ಮೇಯುತ್ತಾ ಅರಣ್ಯವನ್ನು ತಲುಪಿತು.

ಆ ವನದಲ್ಲಿ ಪ್ರಲೋಭಕನೆಂಬ ನರಿಯು ವಾಸಿಸುತ್ತಿತ್ತು. ಅದು ಒಮ್ಮೆ ತನ್ನ ಹೆಂಡತಿಯೊಂದಿಗೆ ನದೀತೀರದಲ್ಲಿ ಸುಖದಿಂದ ಕುಳಿತ್ತಿತ್ತು. ಆಗ ತೀಕ್ಷ್ಣವಿಷಾಣ ಎತ್ತು ನೀರು ಕುಡಿಯಲು ಅದೇ ತೀರಕ್ಕೆ ಬಂದು ಇಳಿಯಿತು. ಆಗ ಅದರ ತೂಗಾಡುತ್ತಿರುವ ವೃಷಣಗಳನ್ನು ನೋಡಿದ ಹೆಣ್ಣು ನರಿಯು ತನ್ನ ಗಂಡನಿಗೆ ಹೇಳಿತು – “ಸ್ವಾಮಿ, ತೂಗಾಡುತ್ತಿರುವ ಎತ್ತಿನ ಮಾಂಸಪಿಂಡಗಳನ್ನು ನೋಡು. ಈ ಕ್ಷಣವೇ ಒಂದು ಪೆಟ್ಟಿನಿಂದ ಬಿದ್ದು ಬಿಡುವಂತೆ ನಿಂತಿವೆ. ಆದ್ದರಿಂದ ನೀನು ಇದನ್ನು ಹಿಂಬಾಲಿಸಲು ಆರಂಭಿಸು”

ಗಂಡು ನರಿಯು ಹೇಳಿತು – “ಪ್ರಿಯೆ, ಇವುಗಳು ಬೀಳುತ್ತವೆಯೋ ಇಲ್ಲವೋ ಎಂದು ಹೇಳಲು ಬರುವುದಿಲ್ಲ. ಆದ್ದರಿಂದ ವ್ಯರ್ಥ ಪ್ರಯತ್ನಕ್ಕೆ ಏಕೆ ನನ್ನನ್ನು ಹೂಡುತ್ತಿರುವೆ ? ಇದು ಇಲಿಗಳು ಓಡಾಡುವ ಮಾರ್ಗ. ನೀರಿಗಾಗಿ ಬಂದ ಇಲಿಗಳನ್ನು ನಿನ್ನೊಂದಿಗೆ ತಿನ್ನುತ್ತೇನೆ. ಅಲ್ಲದೆ ನಿನ್ನನ್ನು ಬಿಟ್ಟು ಎತ್ತಿನ ಹಿಂದೆ ಹೋದರೆ ಬೇರೆ ಯಾರಾದರೂ ಈ ಸ್ಥಳವನ್ನು ಆಶ್ರಯಿಸುತ್ತಾರೆ. ಆದ್ದರಿಂದ ಹೀಗೆ ಮಾಡುವುದು ಸರಿಯಲ್ಲ. ಯಾರು ಸ್ಥಿರವಾದುದನ್ನು ಬಿಟ್ಟು ಸ್ಥಿರವಲ್ಲದುದರ ಹಿಂದೆ ಹೋಗುತ್ತಾರೋ, ಅವರು ಅಸ್ಥಿರವಾದುದನ್ನು ಕಳೆದುಕೊಳ್ಳುವುದು ನಿಶ್ಚಿತ, ಅಲ್ಲದೆ ಅವರ ಸ್ಥಿರವಾದ ವಸ್ತುಗಳೂ ನಾಶಹೊಂದುತ್ತವೆ.”

ಹೆಣ್ಣು ನರಿ – “ನೀನೊಬ್ಬ ಹೇಡಿ, ಪ್ರಾಪ್ತವಾದಷ್ಟರಿಂದಲೇ ತೃಪ್ತನಾಗಿರುವೆ. ಸಣ್ಣ ನದಿಯೊಂದು ಅಲ್ಪವೃಷ್ಟಿಯಾದರೂ ಕೂಡ ಬೇಗನೆ ತುಂಬಿಕೊಳ್ಳುವುದು, ಇಲಿಯ ಬೊಗಸೆ ಸಣ್ಣದಿರುವುದು, ಹಾಗೆಯೇ ಉದ್ಯೋಗಶೀಲನಲ್ಲದವನು ಅಲ್ಪದರಲ್ಲಿಯೇ ಸಂತೃಪ್ತಿಯನ್ನು ಕಾಣುತ್ತಾನೆ. ಆದ್ದರಿಂದ ಪುರುಷನಾದವನು ಸದಾ ಉತ್ಸಾಹಿಯಾಗಿರಬೇಕು. ಎಲ್ಲಿ ಉತ್ಸಾಹದಿಂದ ಕಾರ್ಯಾರಂಭವಾಗುತ್ತದೆಯೋ, ಎಲ್ಲಿ ಆಲಸ್ಯವಿರುವುದಿಲ್ಲವೋ ಮತ್ತು ಎಲ್ಲಿ ನೀತಿ ಹಾಗೂ ಪೌರುಷವು ಒಂದುಗೂಡಿರುತ್ತವೆಯೋ ಅಲ್ಲಿ ಸಂಪತ್ತು ಸ್ಥಿರವಾಗಿ ನೆಲೆಸುತ್ತದೆ. ಎಲ್ಲವೂ ದೈವಾಧೀನವೆಂದು ಯೋಚಿಸಿ ತನ್ನ ಪರಿಶ್ರಮವನ್ನು ಬಿಡಬಾರದು. ಪ್ರರಿಶ್ರಮವಿಲ್ಲದೆ ಎಳ್ಳಿನಿಂದ ಎಣ್ಣೆಯು ಬರುವುದೇ ? ಅಲ್ಪದಿಂದಲೇ ಸಂತೋಷಗೊಳ್ಳುವ ಭಾಗ್ಯಹೀನರಾದ ಮೂರ್ಖರು ಪಡೆದುಕೊಂಡ ಸಂಪತ್ತನ್ನೂ ಕೂಡ ಕಳೆದುಕೊಳ್ಳುತ್ತಾರೆ. ನೀನು ಈ ವೃಷಣಗಳು ಬೀಳುತ್ತವೆಯೋ ಇಲ್ಲವೋ ಎಂದು ಅನುಮಾನಿಸುವುದು ಕೂಡ ಯುಕ್ತವಲ್ಲ. ಏಕೆಂದರೆ ದೃಢನಿಶ್ಚಯ ಮಾಡಿದವರು ವಂದನೀಯರು ಮತ್ತು ಅವರ ಮಾಹಾಭಿಲಾಷೆಯು ಪ್ರಶಂಸನೀಯವಾದುದು. ಚಾತಕಪಕ್ಷಿಯ ನಿಶ್ಚಯವಾದರೂ ಎಂತಹುದು ? ಇಂದ್ರನೇ ಅದಕ್ಕೆ ನೀರನ್ನು ನೀಡುವುದಿಲ್ಲವೇ ? (ಚಾತಕ ಪಕ್ಷಿಯು ಮಳೆಯ ನೀರನ್ನಲ್ಲದೆ ಬೇರೆ ನೀರನ್ನು ಕುಡಿಯೆನೆಂಬ ನಿಶ್ಚಯದಿಂದ ಮಳೆಗಾಗಿ ಕಾಯುತ್ತದೆ ಎಂದು ಪ್ರತೀತಿ) ಅಲ್ಲೆದೆ ಇಲಿಯ ಮಾಂಸದಲ್ಲಿ ನನಗೆ ರುಚಿಯಿಲ್ಲದಂತಾಗಿದೆ. ಈ ಮಾಂಸಪಿಂಡಗಳು ಯಾವಾಗಲಾದರೂ ಬೀಳುವಂತೆ ತೋರುತ್ತದೆ. ಆದ್ದರಿಂದ ನೀನು ಬೇರೆಯೇನೂ ಚಿಂತಿಸದೆ ಎತ್ತನ್ನು ಹಿಂಬಾಲಿಸಬೇಕು.”

ಅದನ್ನು ಕೇಳಿ ಗಂಡು ನರಿಯು ಇಲಿಗಳು ದೊರೆಯುವ ಸ್ಥಾನವನ್ನು ಬಿಟ್ಟು ತೀಕ್ಷ್ಣವಿಷಾಣ ಎತ್ತನ್ನು ಅನುಸರಿಸಲು ತೊಡಗಿತು. ಎಲ್ಲಿಯವರೆಗೆ ಪುರುಷನು ಸ್ತ್ರೀಯ ವಾಕ್ಯಗಳೆಂಬ ಅಂಕುಶದಿಂದ ತಡೆಯಲ್ಪಡುವುದಿಲ್ಲವೋ ಅಲ್ಲಿಯವರೆಗೆ ಎಲ್ಲಾ ಕಾರ್ಯಗಳಲ್ಲಿ ಅವನು ಸ್ವತಂತ್ರನಾಗಿರುತ್ತಾನೆ. ಸ್ತ್ರೀ ವಾಕ್ಯದಿಂದ ಪ್ರೇರಿತನಾದ ಮನುಷ್ಯನು ಮಾಡಬಾರದ ಕೆಲಸವನ್ನು ಯೋಗ್ಯವೆಂದು ತಿಳಿಯುತ್ತಾನೆ, ಹೋಗಬಾರದ ಸ್ಥಳವನ್ನು ಪ್ರಶಸ್ತವೆಂದು ಕಾಣುತ್ತಾನೆ ಹಾಗೂ ತಿನ್ನಬಾರದದ್ದನ್ನು ತಿನ್ನಲು ಯೋಗ್ಯವೆಂದು ತಿಳಿಯುತ್ತಾನೆ.

ಹೀಗೆ ಆ ನರಿಯು ತನ್ನ ಹೆಂಡತಿಯೊಂದಿಗೆ ಎತ್ತಿನ ಹಿಂದೆ ಅಲೆಯುತ್ತಾ ಬಹಳ ಕಾಲವನ್ನು ಕಳೆಯಿತು. ಎತ್ತಿನ ವೃಷಣಗಳು ಬೀಳಲೇ ಇಲ್ಲ. ಹೀಗೆ ವೃಥಾ ಅಲೆಯುತ್ತಾ ಹದಿನೈದು ವರ್ಷಗಳ ನಂತರ ನರಿಯು ತನ್ನ ಹೆಂಡತಿಗೆ ಹೀಗೆ ಹೇಳಿತು – “ಭದ್ರೆ, ಸಡಿಲಾಗಿರುವ ಮತ್ತು ದಪ್ಪವಾಗಿರುವ ವೃಷಣಗಳು ಬೀಳುತ್ತವೆಯೋ ಇಲ್ಲವೋ ಎಂದು ಹದಿನೈದು ವರ್ಷಗಳು ಕಾದೆನು. ಇನ್ನು ಮುಂದೆಯೂ ಅವು ಬೀಳುವುದಿಲ್ಲ. ಆದ್ದರಿಂದ ನಮ್ಮ ಸ್ವಸ್ಥಾನಕ್ಕೆ ಹೋಗೋಣ”

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: