4-3-ಯುಧಿಷ್ಠಿರ ಕುಂಬಾರನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದಲ್ಲಿ ಬರುತ್ತದೆ. ಲಬ್ಧಪ್ರಣಾಶದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಒಬ್ಬ ಕುಂಬಾರನು ವಾಸಿಸುತ್ತಿದ್ದನು. ಅವನೊಮ್ಮೆ ಮದ್ಯಪಾನದ ವಶದಿಂದ ವೇಗವಾಗಿ ಓಡುತ್ತಿದ್ದಾಗ ತುಂಡಾದ ಮಡಕೆಯ ಚೂಪಾದ ಭಾಗದ ಮೇಲೆ ಹಣೆಯು ತಾಗುವಂತೆ ಬಿದ್ದನು. ಹಣೆಯು ಗಾಯವಾಗಿ ಸುರಿದ ರಕ್ತದಿಂದ ಮೈಯೆಲ್ಲಾ ರಕ್ತಮಯವಾದ ಅವನು ಕಷ್ಟದಿಂದ ಎದ್ದು ತನ್ನ ಮನೆಗೆ ತೆರಳಿದನು. ಅಪಥ್ಯವಾದುದನ್ನು ತಿಂದದ್ದರಿಂದ ಅವನ ಗಾಯ ಜೋರಾಗಿ ಕೊನೆಗೆ ಕಷ್ಟದಿಂದ ಗುಣವಾಯಿತು.

ಒಮ್ಮೆ ದೇಶದಲ್ಲಿ ಕ್ಷ್ಮಾಮವುಂಟಾಗಲು, ಹಸಿವಿನಿಂದ ಬಳಲಿದ ಆ ಕುಂಬಾರನು ಕೆಲವು ರಾಜಸೇವಕರ ಜೊತೆಗೆ ಬೇರೆ ದೇಶಕ್ಕೆ ಹೋಗಿ ಒಬ್ಬ ರಾಜನ ಸೇವಕನಾದನು. ರಾಜನು ಅವನ ಹಣೆಯಲ್ಲಿದ್ದ ದೊಡ್ಡದಾದ ಗಾಯದ ಚಿನ್ಹೆಯನ್ನು ನೋಡಿ ಚಿಂತಿಸಿದನು – “ಹಣೆಯಲ್ಲಿ ಯುದ್ಧದ ಸಮಯದಲ್ಲಿ ಆದ ಗಾಯವನ್ನು ನೋಡಿದರೆ ಇವನು ನಿಶ್ಚಯವಾಗಿಯೂ ವೀರಪುರುಷನು”. ಹೀಗೆ ನಿಶ್ಚಯಿಸಿ ರಾಜನು ಅವನಿಗೆ ರಾಜಪುರುಷರ ಮಧ್ಯೆ ಅವನನ್ನು ವಿಶೇಷವಾದ ಅನುಗ್ರಹದಿಂದ ನೋಡುತ್ತಿದ್ದನು. ಆ ರಾಜಪುರುಷರೂ ಕೂಡ ಅವನೊಬ್ಬನಿಗೆ ಆಗುವ ಅನುಗ್ರಹವನ್ನು ನೋಡಿ ಅಸೂಯೆಗೊಂಡರೂ ರಾಜನ ಭಯದಿಂದ ಏನು ಹೇಳುತ್ತಿರಲಿಲ್ಲ.

ಒಮ್ಮೆ ರಾಜನಿಗೆ ಯುದ್ಧದ ಸಮಯವು ಬಂದಾಗ, ವೀರ ಯೋಧರ ಪರೀಕ್ಷೆಯು ನಡೆಯುತ್ತಿರಲು, ಆನೆಗಳನ್ನು ಮತ್ತು ಅಶ್ವಗಳನ್ನು ಸಿದ್ಧಗೊಳಿಸುತ್ತಿರಲು, ಯೋಧರು ಸಿದ್ಧವಾಗುತ್ತಿರಲು, ರಾಜನು ಆ ಕುಂಬಾರನನ್ನು ಏಕಾಂತದಲ್ಲಿ ಕೇಳಿದನು – “ಎಲೈ ರಾಜಪುತ್ರನೇ, ನಿನ್ನ ಹೆಸರೇನು ? ನಿನ್ನ ಜಾತಿ ಯಾವುದು ? ಯಾವ ಸಂಗ್ರಾಮದಲ್ಲಿನ ಏಟಿನಿಂದ ನಿನ್ನ ಹಣೆಯಲ್ಲಿ ಈ ಗಾಯವಾಯಿತು ?”

ಕುಂಬಾರ – “ಇದು ಶಸ್ತ್ರಪ್ರಹಾರದ ಪೆಟ್ಟಲ್ಲ. ನನ್ನ ಹೆಸರು ಯುಧಿಷ್ಠಿರ. ನಾನು ಜಾತಿಯಿಂದ ಕುಂಬಾರ. ನನ್ನ ಮನೆಯಲ್ಲಿ ಅನೇಕ ಮಡಕೆಯ ತುಂಡುಗಳಿದ್ದವು. ಒಮ್ಮೆ ಮದ್ಯಪಾನವನ್ನು ಮಾಡಿ ಓಡುತ್ತಾ ಬಂದಾಗ ಅವುಗಳ ಮೇಲೆ ಬಿದ್ದೆ. ಅದರಿಂದ ಪೆಟ್ಟಾದ ಗಾಯದಿಂದ ಈ ರೀತಿಯ ಭೀಷಣವಾದ ಗಾಯವಾಗಿದೆ”

ಅದನ್ನು ಕೇಳಿದ ರಾಜನು ನಾಚಿಕೆಯಿಂದ ಹೇಳಿದನು – “ಅಯ್ಯೋ, ರಾಜಪುರುಷರ ಜೊತೆಗೆ ಬಂದ ಕುಂಬಾರನಿಂದ ನಾನು ಮೋಸಹೋದೆ. ಹಾಗಾಗಿ ಇವನ ಕುತ್ತಿಗೆಯನ್ನು ಹಿಡಿದು ಹೊರಗೆ ಕಳಿಸಿರಿ”

ಹಾಗೆಯೇ ಮಾಡಿದಾಗ ಕುಂಬಾರನು ಹೇಳಿದನು – “ದೇವ, ಹೀಗೆ ಮಾಡಬೇಡ, ಯುದ್ಧದಲ್ಲಿ ನನ್ನ ಕೈಚಳಕವನ್ನು ನೋಡು”

ರಾಜ – “ನೀನು ಸಕಲಗುಣ ಸಂಪನ್ನನು, ಆದರೂ ಈಗ ಹೊರಡು. ಹೀಗೊಂದು ಉಕ್ತಿಯಿದೆ – ಮಗನೇ, ನೀನು ಶೂರನು, ವಿದ್ಯೆಯನ್ನು ಕಲಿತವನು ಮತ್ತು ಸುಂದರನಾಗಿರುವೆ. ಆದರೆ ನೀನು ಯಾವ ಕುಲದಲ್ಲಿ ಹುಟ್ಟಿರುವೆಯೋ, ಅಲ್ಲಿ ಆನೆಯನ್ನು ಕೊಲ್ಲುವುದಿಲ್ಲ”

ಕುಂಬಾರನು ಅದೇನೆಂದು ಕೇಳಲು ರಾಜನು ಸಿಂಹ – ನರಿಯ ಮರಿಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿ ಮಾತನ್ನು ಮುಂದುವರೆಸುತ್ತಾ ರಾಜನು – “ಆದ್ದರಿಂದ ನೀನು ಕುಂಬಾರನೆಂದು ಈ ರಾಜಪುತ್ರರು ತಿಳಿಯುವ ಮೊದಲೇ ಇಲ್ಲಿಂದ ಹೊರಟುಹೋಗು. ಇಲ್ಲದಿದ್ದರೆ ಅವರಿಂದ ಅಪಹಾಸ್ಯಗೊಂಡು ಸಾಯುವೆ.”

ಕುಂಬಾರನು ಅದನ್ನು ಕೇಳಿ ಬೇಗನೆ ಹೊರಟುಹೋದನು.

 

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: