4-7-ರೈತನ ಹೆಂಡತಿ, ನರಿ ಮತ್ತು ವಂಚಕನ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದಲ್ಲಿ ಬರುತ್ತದೆ. ಲಬ್ಧಪ್ರಣಾಶದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ರೈತ ದಂಪತಿ ವಾಸಿಸುತ್ತಿದ್ದರು. ಗಂಡನಿಗೆ ವಯಸ್ಸಾದ್ದರಿಂದ ರೈತನ ಹೆಂಡತಿಯು ಸದಾ ಅನ್ಯಮನಸ್ಕಳಾಗಿ ಯಾವಾಗಲೂ ಮನೆಯಲ್ಲಿ ನಿಲ್ಲದೆ ಕೇವಲ ಪರಪುರುಷರನ್ನು ಹುಡುಕುತ್ತಾ ಅಲೆಯುತ್ತಿದ್ದಳು. ಒಮ್ಮೆ ಬೇರೆಯವರ ದುಡ್ಡನ್ನು ಕದಿಯುವ ವಂಚಕನೊಬ್ಬನು ಅವಳನ್ನು ಗಮನಿಸಿ ಏಕಾಂತದಲ್ಲಿ ಹೇಳಿದನು – “ಸುಭಗೆ, ನನ್ನ ಹೆಂಡತಿ ಸತ್ತಿರುವಳು. ನಿನ್ನನ್ನು ನೋಡಿ ನಾನು ಕಾಮಪರವಶನಾಗಿದ್ದೇನೆ. ಆದ್ದರಿಂದ ನನಗೆ ಸಂಭೋಗದ ದಕ್ಷಿಣೆಯನ್ನು ಕೊಡು”

ರೈತನ ಹೆಂಡತಿ – “ಎಲೈ ಸುಭಗನೇ, ಹಾಗಿದ್ದಲ್ಲಿ ನನ್ನ ಪತಿಯ ಬಳಿ ಬೇಕಾದಷ್ಟು ಹಣವಿದೆ. ವೃದ್ಧಾಪ್ಯದಿಂದ ಅವನಿಗೆ ಸರಿಯಾಗಿ ನಡೆಯಲೂ ಆಗುವುದಿಲ್ಲ. ನಾನು ಆ ಹಣವನ್ನೆಲ್ಲಾ ತೆಗೆದುಕೊಂಡು ಬರುವೆನು. ಆನಂತರ ನಿನ್ನೊಂದಿಗೆ ಬೇರೆ ಕಡೆಗೆ ಹೋಗಿ ಇಚ್ಛೆಬಂದಷ್ಟು ರತಿಸುಖವನ್ನು ಅನುಭವಿಸುವೆನು”

ವಂಚಕ – “ಈ ಉಪಾಯವು ನನಗೂ ಇಷ್ಟವಾಯಿತು. ಬೆಳಗಿನ ಜಾವದಲ್ಲಿ ಇಲ್ಲಿಗೇ ಬೇಗನೆ ಬಾ. ಯಾವುದಾದರೂ ಒಳ್ಳೆಯ ಊರಿಗೆ ಹೋಗಿ ನಿನ್ನೊಂದಿಗೆ ಈ ಮನುಷ್ಯಜನ್ಮವನ್ನು ಸಾರ್ಥಕ ಪಡಿಸಿಕೊಳ್ಳುತ್ತೇನೆ.”

ಅವಳು ಹಾಗೆಯೇ ಆಗಲೆಂದು ಪ್ರತಿಜ್ಞೆಮಾಡಿ, ನಗುಮುಖದಿಂದ ಮನೆಗೆ ಹೋಗಿ, ರಾತ್ರಿ ಗಂಡನು ಮಲಗಿದ್ದಾಗ ಹಣವನ್ನೆಲ್ಲಾ ತೆಗೆದುಕೊಂಡು ಬೆಳಗಾಗುವಷ್ಟರಲ್ಲಿ ವಂಚಕನು ಹೇಳಿದ ಸ್ಥಾನಕ್ಕೆ ಬಂದಳು. ವಂಚಕನು ಅವಳನ್ನು ಮುಂದಿರಿಸಿಕೊಂಡು ದಕ್ಷಿಣದಿಕ್ಕನ್ನು ಅನುಸರಿಸಿ ಬೇಗನೆ ಹೊರಟನು. ಹೀಗೆ ಎರಡು ಯೋಜನೆಗಳು ನಡೆದಾಗ ಒಂದು ನದಿಯು ಎದುರಾಯಿತು.

ನದಿಯನ್ನು ನೋಡಿದ ವಂಚಕನು ಚಿಂತಿಸಿದನು – “ಯೌವನದ ಕೊನೆಯಲ್ಲಿರುವ ಇವಳಿಂದ ನಾನೇನು ಮಾಡಲಿ ? ಒಂದುವೇಳೆ ಇವಳನ್ನು ಯಾರಾದರೂ ಹುಡುಕಿಕೊಂಡು ಬಂದರೆ ಮಹಾ ಅನರ್ಥವಾಗುತ್ತದೆ. ಆದ್ದರಿಂದ ಕೇವಲ ಇವಳ ಧನವನ್ನು ತೆಗೆದುಕೊಂಡು ಹೋಗುವೆನು.”

ಹೀಗೆ ನಿಶ್ಚಯಿಸಿ ಅವಳಿಗೆ ಹೇಳಿದನು – “ಪ್ರಿಯೆ, ದಾಟಲು ಕಷ್ಟವಾದ ಮಹಾನದಿಯಿದು. ಆದ್ದರಿಂದ ನಾನು ಹಣವನ್ನು ಮಾತ್ರ ತೆಗೆದುಕೊಂಡು ಆ ದಡದಲ್ಲಿಟ್ಟು ಬರುವೆನು. ನಂತರ ನಿನ್ನೊಬ್ಬಳನ್ನು ಸುಲಭವಾಗಿ ಹೆಗಲಿನಲ್ಲಿರಿಸಿಕೊಂಡು ಈಜುತ್ತೇನೆ.”

ರೈತ ಪತ್ನಿಯು – “ಸುಭಗನೇ, ಹಾಗೆಯೇ ಮಾಡು” ಎಂದು ಹೇಳಿ ಎಲ್ಲಾ ಹಣವನ್ನು ಅವನಿಗೆ ಕೊಟ್ಟಳು.

ಆಗ ವಂಚಕನು ಹೇಳಿದನು – “ನೀನು ಕೆಳಗೆ ಉಟ್ಟಿರುವ ಹಾಗೂ ಉತ್ತರೀಯದ ಬಟ್ಟೆಗಯನ್ನು ಕೂಡ ಕೊಡು, ಆಮೇಲೆ ನೀನು ನಿರ್ಭಯದಿಂದ ನೀರಿನಲ್ಲಿ ಈಜಬಹುದು.”

ಅವಳು ಹಾಗೆ ಮಾಡಿದಾಗ ಅವನು ಹಣದೊಂದಿಗೆ ಎರಡು ಬಟ್ಟೆಗಳನ್ನೂ ತೆಗೆದುಕೊಂಡು ನದಿಯನ್ನು ದಾಟಿ ತಾನು ಮೊದಲೇ ಯೋಚಿಸಿದಂತೆ ಹೊರಟುಹೋದನು. ಅವಳು ಎರಡು ಕೈಗಳನ್ನೂ ಕುತ್ತಿಗೆಯ ಬಳಿ ಇಟ್ಟುಕೊಂಡು ಕಾತುರತೆಯಿಂದ ನದಿಯ ದಡದಲ್ಲಿ ಕುಳಿತ್ತಿದ್ದಾಗ ಬಾಯಲ್ಲಿ ಮಾಂಸದ ತುಂಡನ್ನು ಹಿಡಿದುಕೊಂಡ ಒಂದು ಹೆಣ್ಣು ನರಿಯು ಅಲ್ಲಿಗೆ ಬಂತು. ನದೀತೀರದಲ್ಲಿ ದೊಡ್ಡ ಮೀನೊಂದು ನೀರಿನಿಂದ ಹೊರಬಿದ್ದು ದಡದಲ್ಲಿ ಕುಳಿತಿತ್ತು. ಅದನ್ನು ನೋಡಿ ಮಾಂಸದ ತುಂಡನ್ನು ಬಿಟ್ಟು ಅದು ಮೀನಿನ ಕಡೆಗೆ ಓಡಿತು. ಆಗ ಆಕಾಶದಿಂದ ಇಳಿದ ಹದ್ದು ಮಾಂಸದ ತುಂಡನ್ನು ತೆಗೆದುಕೊಂಡು ಹಾರಿಹೋಯಿತು. ಮೀನೂ ಕೂಡ ನರಿಯನ್ನು ನೋಡಿ ನದಿಗಿಳಿಯಿತು. ನರಿಯ ಶ್ರಮವು ವ್ಯರ್ಥವಾಗಿ ಅದು ಹದ್ದನ್ನು ನೋಡುತ್ತಿದ್ದಾಗ ನಗ್ನಳಾಗಿದ್ದ ರೈತನ ಪತ್ನಿಯು ನಗುತ್ತಾ ಹೇಳಿದಳು – “ಹದ್ದು ಮಾಂಸವನ್ನು ಅಪಹರಿಸಿತು, ಮೀನು ನೀರಿಗೆ ಹೋಯಿತು. ಮಾಂಸ ಹಾಗೂ ಮೀನು, ಇವೆರಡನ್ನೂ ಕಳೆದುಕೊಂಡ ಹೆಣ್ಣು ನರಿಯೇ, ಎನನ್ನು ನೋಡುತ್ತಿರುವೆ ?”

ಅದನ್ನು ಕೇಳಿದ ನರಿಯು ಪತಿಯನ್ನು, ಧನವನ್ನು ಮತ್ತು ಪ್ರಿಯನನ್ನೂ ಕಳೆದುಕೊಂಡ ಅವಳನ್ನು ನೋಡಿ ಹಾಸ್ಯಮಾಡುತ್ತಾ ಹೀಗೆ ಹೇಳಿತು – “ನನ್ನಲ್ಲಿರುವ ಬುದ್ಧಿಗಿಂತ ಎರಡರಷ್ಟು ಬುದ್ಧಿ ನಿನ್ನಲ್ಲಿದೆ. ನಿನ್ನ ಪ್ರಿಯನೂ ಉಳಿಯಲಿಲ್ಲ, ನಿನ್ನ ಗಂಡನೂ ಉಳಿಯಲಿಲ್ಲ. ಎಲೈ ನಗ್ನಳೇ, ಏನನ್ನು ನೋಡುತ್ತಿರುವೆ ?”

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: