4-8-ಘಂಟಾಧಾರಿ ಒಂಟೆಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದಲ್ಲಿ ಬರುತ್ತದೆ. ಲಬ್ಧಪ್ರಣಾಶದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ನಗರದಲ್ಲಿ ಉಜ್ಜ್ವಲಕ ಎಂಬ ಬಡಗಿಯು (ಮರಗೆಲಸದವನು) ವಾಸಿಸುತ್ತಿದ್ದನು. ಅವನು ಕಡುಬಡತನದಿಂದ ನೊಂದು ಚಿಂತಿಸಿದನು – “ಅಯ್ಯೋ, ನಮ್ಮ ಮನೆಯಲ್ಲಿನ ಬಡತನಕ್ಕೆ ಧಿಕ್ಕಾರವಿರಲಿ. ಎಲ್ಲರೂ ತಮ್ಮ ತಮ್ಮ ಕೆಲಸದಲ್ಲಿಯೇ ನಿರತರಾಗಿರುತ್ತಾರೆ. ನನ್ನ ಮರಗೆಲಸದ ವ್ಯಾಪಾರ ಈ ನಗರದಲ್ಲಿ ನಡೆಯುವುದಿಲ್ಲ. ಇಲ್ಲಿ ಎಲ್ಲರಿಗೂ ಪ್ರಾಚೀನವಾದ ನಾಲ್ಕಾರು ಕೋಣೆಗಳಿರುವ ಮನೆಗಳಿವೆ, ನನಗಾದರೋ ಒಂದೂ ಇಲ್ಲ. ಹಾಗಾಗಿ ಈ ಮರಗೆಲಸದ ವೃತ್ತಿಯಿಂದೇನು ಪ್ರಯೋಜನ ?” ಹೀಗೆ ಯೋಚಿಸಿದ ಅವನು ಊರನ್ನು ಬಿಟ್ಟು ಹೊರಟನು.

ಅವನು ಕಾಡಿನಲ್ಲಿ ಹೋಗುತ್ತಿದ್ದಾಗ  ಗುಹೆಯ ಆಕಾರದಲ್ಲಿರುವ ಘನಾರಣ್ಯದಲ್ಲಿ ಸೂರ್ಯಾಸ್ತದ ಸಮಯದಲ್ಲಿ ತನ್ನ ಗುಂಪಿನಿಂದ ಬೇರಾದ, ಪ್ರಸವವೇದನೆಯಿಂದ ಬಳಲುತ್ತಿದ್ದ ಒಂಟೆಯನ್ನು ನೋಡಿದನು. ಮರಿಯ ಜೊತೆಗೆ ಆ ಒಂಟೆಯನ್ನು ಕರೆದುಕೊಂಡು ತನ್ನ ಮನೆಯ ಕಡೆಗೆ ಹೊರಟನು. ಮನೆಗೆ ಬಂದು ಆ ಒಂಟೆಯನ್ನು ಹಗ್ಗದಿಂದ ಕಟ್ಟಿಹಾಕಿದನು. ನಂತರ ಹರಿತವಾದ ಕೊಡಲಿಯನ್ನು ತೆಗೆದುಕೊಂಡು ಒಂಟೆಗಾಗಿ ಎಳೆಯ ಸೊಪ್ಪುಗಳನ್ನು ತರಲು ಪರ್ವತಪ್ರದೇಶಕ್ಕೆ ಹೋದನು. ಅಲ್ಲಿ ಹೊಸದಾಗಿ ಬೆಳೆದ ಕೋಮಲವಾದ ತುಂಬಾ ಚಿಗುರುಗಳನ್ನು ಕಿತ್ತು ತಲೆಯ ಮೇಲೆ ಹೊತ್ತುಕೊಂಡು ಬಂದು ಅದರ ಮುಂದೆ ಹಾಕಿದನು. ಒಂಟೆಯು ಅದನ್ನು ಮೆಲ್ಲಮೆಲ್ಲನೆ ತಿಂದಿತು. ದಿನ ಕಳೆದಂತೆ ಹಗಲಿರುಳು ಎಳೆಯ ಸೊಪ್ಪುಗಳನ್ನು ತಿನ್ನುವುದರಿಂದ ಅದು ಬಲಿಷ್ಠವಾಯಿತು. ಅದರ ಮರಿಯೂ ಕೂಡ ದೊಡ್ಡ ಒಂಟೆಯಾಗಿ ಬೆಳೆಯಿತು. ಬಡಗಿಯು ನಿತ್ಯವೂ ಒಂಟೆಯ ಹಾಲನ್ನು ಕರೆದು ತನ್ನ ಪರಿವಾರವನ್ನು ಸಾಕುತ್ತಿದ್ದನು. ಅವನು ಒಂಟೆಯ ಮರಿಯ ಕುತ್ತಿಗೆಗೆ ಪ್ರೀತಿಯಿಂದ ಘಂಟೆಯೊಂದನ್ನು ಕಟ್ಟಿದ್ದನು.

ನಂತರ ಅವನು ಚಿಂತಿಸಿದನು – “ಬೇರೆ ಕಠಿಣವಾದ ಕೆಲಸಗಳನ್ನು ಮಾಡುವುದಿಂದೇನು ಪ್ರಯೋಜನ ? ಏಕೆಂದರೆ ಈ ಒಂಟೆಯ ಪರಿಪಾಲನೆಯಿಂದಲೇ ನನ್ನ ಕುಟುಂಬಕ್ಕೆ ಒಳ್ಳೆಯದಾಗಿದೆ, ಹಾಗಾಗಿ ಬೇರೆ ವ್ಯಾಪಾರದಿಂದೇನು ಪ್ರಯೋಜನ ?” ಹೀಗೆ ಯೋಚಿಸಿ ಮನೆಗೆ ಬಂದು ಹೆಂಡತಿಗೆ ಹೇಳಿದನು – “ಭದ್ರೆ, ಈ ವ್ಯಾಪಾರವು ಸರಿಯಾಗಿದೆ. ನಿನಿಗೆ ಒಪ್ಪಿಗೆಯಿದ್ದಲ್ಲಿ ನಾನು ಯಾರಾದರೂ ಧನಿಕನಿಂದ ಹಣವನ್ನು ತಂದು ಗುರ್ಜರದೇಶಕ್ಕೆ ಹೋಗಿ ಒಂಟೆಯ ಮರಿಗಳನ್ನು ತರುವೆನು. ಅಲ್ಲಿಯವರೆಗೆ ನೀನು ಈ ಎರಡು ಒಂಟೆಗಳನ್ನು ಪ್ರಯತ್ನಪೂರ್ವಕವಾಗಿ ರಕ್ಷಿಸಬೇಕು, ನಾನು ಹೋಗಿ ಬೇರೆ ಹೆಣ್ಣು ಒಂಟೆಗಳನ್ನು ತರುವೆನು”. ಹಾಗೇ ಮಾಡಲಾಗಿ, ಕೆಲವೇ ವರ್ಷಗಳಲ್ಲಿ ಅವನ ಬಳಿ ಅನೇಕ ಒಂಟೆಗಳು ಹಾಗೂ ಒಂಟೆಯ ಮರಿಗಳು ಆದವು. ಅವನು ದೊಡ್ಡ ಒಂಟೆಯ ಗುಂಪನ್ನೇ ಹೊಂದಿದನು ಮತ್ತು ಅದರ ರಕ್ಷಣೆಗಾಗಿ ಕಾವಲುಗಾರನನ್ನೂ ನೇಮಿಸಿದನು. ಅವನಿಗೆ ವೇತನದ ರೂಪದಲ್ಲಿ ವರ್ಷಕ್ಕೊಂದು ಒಂಟೆಯ ಮರಿಯನ್ನು ಕೊಡುತ್ತಿದ್ದನು. ಅಲ್ಲದೆ ಹಗಲಿರುಳೂ ಕುಡಿಯಲು ಅವನಿಗೆ ಒಂಟೆಯ ಹಾಲಿನ ವ್ಯವಸ್ಥೆಯನ್ನು ಮಾಡಿದನು. ಹೀಗೆ ಆ ಬಡಗಿಯು ಒಂಟೆ ಮತ್ತು ಮರಿಗಳ ವ್ಯಾಪಾರವನ್ನು ಮಾಡಿಕೊಂಡು ಸುಖವಾಗಿ ಇದ್ದನು.

ಒಂಟೆಯ ಮರಿಗಳೆಲ್ಲವೂ ಮೇಯಲು ನಗರದ ಉಪವನಕ್ಕೆ ಹೋಗುತ್ತಿದ್ದವು. ಅಲ್ಲಿ ಕೋಮಲವಾದ ಲತೆಗಳನ್ನು ತಿಂದು ದೊಡ್ಡ ಸರೋವರದಲ್ಲಿ ನೀರು ಕುಡಿದು, ಸಾಯಂಕಾಲದ ಸಮಯಕ್ಕೆ ಮೆಲ್ಲಮೆಲ್ಲಗೆ ಆನಂದದಿಂದ ಮನೆಗೆ ಬರುತ್ತಿದ್ದವು. ಅವನು ಮೊದಲು ಸಾಕಿದ ಒಂಟೆಯು ಗರ್ವದಿಂದ ನಿಧಾನವಾಗಿ ಬಂದು ಇತರರನ್ನು ಸೇರುತ್ತಿತ್ತು. ಆಗ ಇತರ ಒಂಟೆಗಳು – “ಮಂದಮತಿಯಾದ ಈ ಒಂಟೆಯು ಗುಂಪಿನಿಂದ ಹಿಂದೆಬಿದ್ದು ಘಂಟಾಶಬ್ದವನ್ನು ಮಾಡುತ್ತಾ ಬರುತ್ತದೆ. ಯಾವುದಾರೂ ಕ್ರೂರಪ್ರಾಣಿಯ ಬಾಯಿಗೆ ಸಿಕ್ಕಿದರೆ ಖಂಡಿತವಾಗಿಯೂ ಸಾವನ್ನಪ್ಪುತ್ತದೆ.”

ಒಮ್ಮೆ ಒಂಟೆಗಳು ಮತ್ತೆ ಮತ್ತೆ ಹೇಳಿದರೂ ಆ ಒಂಟೆಯು ಅವರ ಮಾತಿಗೆ ಕಿವಿಗೊಡದೆ ಅತಿಯಾದ ಮದದಿಂದ ಘಂಟೆಯ ಶಬ್ದವನ್ನು ಮಾಡುತ್ತಾ ಕಾಡನ್ನು ಪ್ರವೇಶಿಸಿತು. ಹೀಗೆ ಅದು ಕಾಡಿನಲ್ಲಿ ಅಲೆಯುತ್ತಿದ್ದಾಗ ಅಲ್ಲಿದ್ದ ಸಿಂಹವೊಂದು ಘಂಟಾಶಬ್ದವು ಬಂದ ಕಡೆ ನೋಡಿದಾಗ ಅಲ್ಲೊಂದು ಒಂಟೆಗಳ ಗುಂಪು ಹೋಗುವುದನ್ನು ನೋಡಿತು. ಘಂಟಾಧಾರಿ ಒಂಟೆಯು ಎಂದಿನಂತೆ ಗುಂಪಿನಿಂದ ಹಿಂದೆಬಿದ್ದು ಮೇಯುತ್ತಿದ್ದಾಗ ಇತರ ಒಂಟೆಗಳು ನೀರನ್ನು ಕುಡಿದು ಮನೆಯ ಕಡೆಗೆ ಹೊರಟುಹೋದವು. ಘಂಟಾಧಾರಿ ಒಂಟೆಯು ಕಾಡಿನಿಂದ ಹೊರಬಂದು ನೋಡಿದಾಗ ಅದಕ್ಕೆ ಇತರ ಒಂಟೆಗಳು ಹೋದ ದಾರಿಯು ತಿಳಿಯಲಿಲ್ಲ. ಹೀಗೆ ಗುಂಪಿನಿಂದ ಬೇರಾದ ಅದು ದೊಡ್ಡ ಶಬ್ದವನ್ನು ಮಾಡುತ್ತಾ ಮೆಲ್ಲಮೆಲ್ಲಗೆ ಸ್ವಲ್ಪ ದೂರ ತೆರಳಿದಾಗ, ಆ ಶಬ್ದವನ್ನು ಅನುಸರಿಸುತ್ತಿದ್ದ ಸಿಂಹವು ಆಕ್ರಮಣವನ್ನು ಮಾಡಲು ಒಂಟೆಯ ಮಾರ್ಗದ ಮುಂದೆ ಬಂದು ಸಜ್ಜಾಗಿ ನಿಂತುಕೊಂಡಿತು. ಒಂಟೆಯು ಸಮೀಪಕ್ಕೆ ಬಂದಾಗ ಸಿಂಹವು ಅದರ ಮೇಲೆ ಹಾರಿ ಕುತ್ತಿಗೆಯನ್ನು ಸೀಳಿ ಸಾಯಿಸಿತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: