4-9-ನರಿ, ಸಿಂಹ, ಹುಲಿ ಮತ್ತು ಚಿರತೆಯ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದಲ್ಲಿ ಬರುತ್ತದೆ. ಲಬ್ಧಪ್ರಣಾಶದ ಸೂತ್ರ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ವನಪ್ರದೇಶದಲ್ಲಿ ಮಹಾಚತುರಕ ಎಂಬ ನರಿಯಿತ್ತು. ಅದು ಒಮ್ಮೆ ಅರಣ್ಯದಲ್ಲಿ ತಾನಾಗೆ ಸತ್ತ ಆನೆಯನ್ನು ಕಂಡಿತು. ನರಿಯು ಅದರ ಸುತ್ತಲೂ ಸುತ್ತಿದರೂ ಅದರ ದಪ್ಪವಾದ ಚರ್ಮವನ್ನು ಅದಕ್ಕೆ ತುಂಡುಮಾಡಲಾಗಲಿಲ್ಲ. ಅಷ್ಟರಲ್ಲಿ ಅಲೆಯುತ್ತಿದ್ದ ಸಿಂಹವೊಂದು ಅಲ್ಲಿಗೇ ಬಂತು. ಸಿಂಹವನ್ನು ನೋಡಿ ನರಿಯು ತಲೆಯನ್ನು ಭೂತಲದಲ್ಲಿರಿಸಿ (ಅಂದರೆ ನಮಸ್ಕರಿಸಿ), ಕೈಜೋಡಿಸಿಕೊಂಡು ವಿನಯಪೂರ್ವಕವಾಗಿ ಹೇಳಿತು – “ಸ್ವಾಮಿ, ನಾನು ನಿಮ್ಮ ಸಿಪಾಯಿ, ಈ ಆನೆಯನ್ನು ನಿಮಗೋಸ್ಕರವೇ ರಕ್ಷಿಸುತ್ತಿದ್ದೇನೆ, ಇದನ್ನು ತಿನ್ನಿರಿ”

ನಮಸ್ಕರಿಸುತ್ತಿದ್ದ ಅದನ್ನು ನೋಡಿದ ಸಿಂಹವು ಹೇಳಿತು – “ನಾನು ಬೇರೆಯವರು ಕೊಂದ ಪ್ರಾಣಿಯನ್ನು ಎಂದೂ ತಿನ್ನುವುದಿಲ್ಲ. ಕಾಡಿನಲ್ಲಿ ಮಾಂಸಾಹಾರಿಗಳಾದ ಸಿಂಹಗಳು ಹಸಿದಿದ್ದರೂ ಹುಲ್ಲನ್ನು ತಿನ್ನುವುದಿಲ್ಲ. ಹಾಗೆಯೇ ಉತ್ತಮ ಕುಲಜಾತರು ಕಷ್ಟ ಬಂದರೂ ನೀತಿಮಾರ್ಗವನ್ನು ಉಲ್ಲಂಘಿಸುವುದಿಲ್ಲ. ಹಾಗಾಗಿ ಈ ಆನೆಯನ್ನು ನಾನು ನಿನಗೇ ಅನುಗ್ರಹಿಸುತ್ತೇನೆ”

ಅದನ್ನು ಕೇಳಿ ಆನಂದದಿಂದ ನರಿ ಹೇಳಿತು – “ತನ್ನ ಸೇವಕರಲ್ಲಿ ಸ್ವಾಮಿಯ ಈ ವ್ಯವಹಾರವು ಯೋಗ್ಯವಾಗಿಯೇ ಇದೆ. ಬೆಂಕಿಯಲ್ಲಿ ಉರಿದರೂ ಶಂಖವು ಹೇಗೆ ತನ್ನ ಬಿಳಿಬಣ್ಣವನ್ನು ಬಿಡುವುದಿಲ್ಲವೋ ಹಾಗೆ ವಿಪತ್ತಿನಲ್ಲೂ ಕೂಡ ಮಾಹಾಗುಣವಂತರು ತಮ್ಮ ಶುದ್ಧಸ್ವಭಾವವನ್ನು ಬಿಡುವುದಿಲ್ಲ.”

ಸಿಂಹವು ಹೋದನಂತರ ಒಂದು ಹುಲಿಯು ಬಂತು. ಅದನ್ನು ನೋಡಿದ ನರಿಯು ಚಿಂತಿಸಿತು – “ಒಬ್ಬ ದುಷ್ಟನನ್ನು ಸಾಮೋಪಾಯದಿಂದ ದೂರಮಾಡಿದೆ, ಈಗ ಇವನನ್ನು ಹೇಗೆ ದೂರಮಾಡಲಿ ? ಇವನು ನಿಜವಾಗಿಯೂ ಶೂರನು.  ಆದ್ದರಿಂದ ಭೇದೋಪಾಯದಿಂದಲ್ಲದೆ ಇವನನ್ನು ದೂರಮಾಡುವುದು ಸಾಧ್ಯವಿಲ್ಲ. ಎಲ್ಲಿ ಸಾಮದಿಂದ ಅಥವಾ ದಾನದಿಂದ ಕಾರ್ಯ ಸಾಧಿಸಲು ಆಗುವುದಿಲ್ಲವೋ ಅಲ್ಲಿ ಶತ್ರುಗಳನ್ನು ವಶಮಾಡಬಲ್ಲ ಭೇದೋಪಾಯವನ್ನು ಬಳಸತಕ್ಕದ್ದೆಂದು ಹೇಳಿದ್ದಾರೆ. ಅಲ್ಲದೆ ಸರ್ವಗುಣಸಂಪನ್ನನೂ ಕೂಡ ಭೇದಕ್ಕೆ ವಶವಾಗುತ್ತಾನೆ. ಚಿಪ್ಪಿನ ಒಳಗಿರುವ, ಸ್ವತಂತ್ರವಾಗಿರುವ, ವೃತ್ತಾಕಾರವಾಗಿರುವ, ಸುಂದರವಾಗಿರುವ ಮುಕ್ತಾಮಣಿಯು ಭೇದದಿಂದ ಬಂಧನಕ್ಕೊಳಗಾಗುತ್ತದೆ, ಅಂದರೆ ಚಿಪ್ಪು ಒಡೆದಾಗ ಹಾರದಲ್ಲಿ ಪೋಣಿಸಲ್ಪಡುತ್ತದೆ. ಹಾಗೆಯೇ ದುರ್ಗದಲ್ಲಿರುವ, ಸ್ವತಂತ್ರವಾಗಿರುವ, ಸಚ್ಚಾರಿತ್ರ್ಯವುಳ್ಳ, ಶೋಭಿಸುವ ಮನುಷ್ಯನೂ ಭೇದದಿಂದ ಬಂಧನವನ್ನು ಹೊಂದುತ್ತಾನೆ.”

ಹೀಗೆ ಯೋಚಿಸಿ ಹುಲಿಯ ಮುಂದೆ ಬಂದು ಗರ್ವದಿಂದ ಕತ್ತೆತ್ತಿ ಸಂಭ್ರಮದಿಂದ ಹೇಳಿತು – “ಮಾಮ, ಇಲ್ಲಿ ಸಾವಿನ ಮುಖವನ್ನು ಪ್ರವೇಶಿಸಲು ಏಕೆ ಬಂದಿರುವೆ ? ಈ ಆನೆಯನ್ನು ಸಿಂಹವು ಕೊಂದಿದೆ. ಅದು ಇದನ್ನು ನೋಡಿಕೊಳ್ಳಲು ನನಗೆ ಹೇಳಿ ಸ್ನಾನಕ್ಕಾಗಿ ನದಿಗೆ ಹೋಗಿದೆ. ಅದು ಹೋಗುವಾಗ ನನಗೆ ಹೀಗೆ ಹೇಳಿಹೋಗಿದೆ – ‘ಇಲ್ಲಿಗೆ ಯಾವುದಾರದೂ ಹುಲಿಯು ಬಂದಲ್ಲಿ ನನಗೆ ಗೌಪ್ಯವಾಗಿ ಬಂದು ತಿಳಿಸು, ನಾನು ಈ ಕಾಡಿನಲ್ಲಿ ಹುಲಿಗಳಿರದಂತೆ ಮಾಡುವೆನು. ಏಕೆಂದರೆ ಹಿಂದೊಮ್ಮೆ ನಾನು ಕೊಂದ ಆನೆಯನ್ನು ಹುಲಿಯೊಂದು ಯಾರಿಗೂ ತಿಳಿಯದಂತೆ ತಿಂದು ಎಂಜಲು ಮಾಡಿತ್ತು. ಆ ದಿನದಿಂದ ಹುಲಿಗಳ ಮೇಲೆ ನನಗೆ ಸಿಟ್ಟಿದೆ’”

ಅದನ್ನು ಕೇಳಿದ ಹುಲಿಯು ಭಯದಿಂದ ಹೇಳಿತು – “ಎಲೈ ಅಳಿಯನೇ, ನನ್ನ ಪ್ರಾಣವನ್ನು ಉಳಿಸು. ಬಹುಕಾಲದ ನಂತರ ಇಲ್ಲಿಗೆ ಬಂದಿರುವ ನನ್ನ ವಿಷಯವನ್ನು ಅವನಿಗೆ ಹೇಳಬೇಡ” ಹೀಗೆ ಹೇಳಿ ಬೇಗನೆ ಅಲ್ಲಿಂದ ಓಡಿಹೋಯಿತು.

ಹುಲಿಯು ಹೋದ ಮೇಲೆ ಅಲ್ಲಿಗೆ ಒಂದು ಚಿರತೆಯು ಬಂತು. ಅದನ್ನು ನೋಡಿದ ನರಿಯು ಚಿಂತಿಸಿತು – “ಈ ಚಿರತೆಯು ಗಟ್ಟಿಯಾದ ಹಲ್ಲುಳ್ಳವನು. ಆದ್ದರಿಂದ ನಾನು ಇವನು ಆನೆಯ ಚರ್ಮವನ್ನು ಛೇದಿಸುವಂತೆ ಮಾಡುವೆನು.”

ಹೀಗೆ ನಿಶ್ಚಯಿಸಿ ನರಿಯು ಹೇಳಿತು – “ಎಲೈ ಅಳಿಯನೇ, ಏನು ತುಂಬಾ ದಿನ ಕಾಣಲೇ ಇಲ್ಲ ? ಹಸಿದಂತೆ ಕಾಣುವೆ. ನನ್ನ ಅತಿಥಿಯಾಗಿ ಬಂದಿರುವೆ. ಅಲ್ಲದೆ ಊಟದ ಸಮಯಕ್ಕೆ ಬಂದವನು ಅತಿಥಿಯೆಂದು ಹೇಳಿದ್ದಾರೆ. ಈ ಆನೆಯನ್ನು ಸಿಂಹವು ಕೊಂದಿದೆ. ನಾನು ಅದರ ಆದೇಶದಂತೆ ಇದನ್ನು ರಕ್ಷಿಸುತ್ತಿದ್ದೇನೆ. ಆದರೂ ಸಿಂಹವು ಬರುವುದರೊಳಗೆ ನೀನು ಸ್ವಲ್ಪ ಆನೆಯ ಮಾಂಸವನ್ನು ತಿಂದು ತೃಪ್ತನಾಗಿ ಬೇಗನೆ ಹೊರಡು”

ಚಿರತೆ – “ಮಾಮ, ಹಾಗಿದ್ದರೆ ಈ ಮಾಂಸಭಕ್ಷಣದ ಕೆಲಸವು ನನಗೆ ಬೇಡ. ಏಕೆಂದರೆ ಜೀವವೊಂದಿದ್ದರೆ ನೂರು ಏಳಿಗೆಗಳನ್ನು ಕಾಣಬಹುದು. ತನ್ನ ಅಭ್ಯುದಯವನ್ನು ಬಯಸುವ ಮನುಷ್ಯನು ತನಗೆ ತಿನ್ನಲು ಸಾಧ್ಯವಾದ, ತಿಂದರೆ ಜೀರ್ಣವಾಗುವ ಹಾಗೂ ಜೀರ್ಣವಾಗಿ ದೇಹಕ್ಕೆ ಹಿತವನ್ನುಂಟುಮಾಡುವ ಆಹಾರವನ್ನಲ್ಲದೆ ಬೇರೆಯದನ್ನು ತಿನ್ನಬಾರದು ಎಂಬ ಉಕ್ತಿಯಿದೆ. ಎಂದಿಗೂ ಜೀರ್ಣವಾಗುವ ಆಹರವನ್ನೇ ತಿನ್ನಬೇಕು, ಆದ್ದರಿಂದ ನಾನು ಇಲ್ಲಿಂದ ಹೊರಡುವೆನು”

ನರಿ – “ಎಲೈ ಅಂಜುಬುರುಕನೇ, ನಿಶ್ಚಿಂತೆಯಿಂದ ತಿನ್ನು, ಸಿಂಹವು ದೂರದಿಂದ ಬರುವಾಗಲೇ ನಿನಗೆ ಸೂಚಿಸುವೆನು”

ಹಾಗೆಯೇ ಮಾಡಲು ಚಿರತೆಯು ಚರ್ಮವನ್ನು ತುಂಡರಿಸಿದ್ದನ್ನು ನೋಡಿದ ನರಿಯು – “ಎಲೈ ಅಳಿಯನೇ, ಸಿಂಹವು ಬರುತ್ತಿದೆ, ಹೊರಟುಹೋಗು”

ಅದನ್ನು ಕೇಳಿದ ಚಿರತೆಯು ದೂರ ಹೋಯಿತು. ನರಿಯು ಚರ್ಮವನ್ನು ಭೇದಿಸಿದ ಬದಿಯಿಂದ ಸ್ವಲ್ಪ ಮಾಂಸವನ್ನು ಭಕ್ಷಿಸುವ ಹೊತ್ತಿಗೆ ಅತಿ ಕೋಪದಿಂದ ಕೂಡಿದ ಮತ್ತೊಂದು ನರಿಯು ಅಲ್ಲಿಗೆ ಬಂತು. ತನಗೆ ಸಮಬಲನಾದ ಆ ನರಿಯನ್ನು ನೋಡಿ ಅದು ಈ ಶ್ಲೋಕವನ್ನು ಹೇಳಿಕೊಂಡಿತು – “ಉತ್ತಮವಾದವನನ್ನು ಸಾಮೋಪಾಯದಿಂದ, ಶೂರನನ್ನು ಭೇದೋಪಾಯದಿಂದ, ನೀಚನನ್ನು ಸ್ವಲ್ಪ ದಾನಾದಿಗಳನ್ನು ಕೊಡುವುದರಿಂದ ಹಾಗೂ ಸಮಬಲನನ್ನು ಪರಾಕ್ರಮದಿಂದ ಜಯಿಸಬೇಕು.”

ನಂತರ ಅದನ್ನು ಸಮೀಪಿಸಿ ತನ್ನ ಹಲ್ಲುಗಳಿಂದ ಕಚ್ಚಿ ಅದು ದಿಕ್ಕುಪಾಲಾಗಿ ಓಡಿಹೋಗುವಂತೆ ಮಾಡಿ ಸುಖದಿಂದ ಬಹು ದಿನಗಳವರೆಗೆ ಆನೆಯ ಮಾಂಸವನ್ನು ತಿನ್ನುತ್ತಿತ್ತು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: