ಮರಳಿ ಸೈಕಲ್ ಕಡೆಗೆ (Back to cycle)

March 16, 2013

ವಿದ್ಯಾರ್ಥಿಯಾಗಿದ್ದಾಗ 9 ವರ್ಷ ಸತತವಾಗಿ ಸೈಕಲ್ ತುಳಿದ ಮೇಲೆ ಬೈಕ್ ಹಾಗೂ ಮತ್ತೆ ಕಾರಿಗೆ “ತೇರ್ಗಡೆ” ಹೊಂದಿ ಹಲವಾರು ವರ್ಷಗಳ ನಂತರ ಈಗ ಮತ್ತೆ ಸೈಕಲ್ ತುಳಿಯುವ ಅವಕಾಶ ಒದಗಿದೆ. ಇನ್ನೂ ವಾಹನ ದಟ್ಟಣೆಯಿರದ ಬೆಂಗಳೂರಿನ ಹೊರವಲಯದ ವಸತಿಪ್ರದೇಶವೊಂದರಲ್ಲಿ ನೆಲೆಸಿರುವುದರಿಂದ, ನಮ್ಮ layout ನಲ್ಲೇ cycling ಗೆ ವಿಫುಲ ಅವಕಾಶವಿದೆ. ಹೀಗಾಗಿ ನಮ್ಮ ಅಗತ್ಯಗಳನ್ನು ಪೂರೈಸುವ ಸೈಕಲ್ ಗಾಗಿ ಹುಡುಕಾಟ ಪ್ರಾರಂಭವಾಯಿತು. 25 ವರ್ಷಗಳ ಹಿಂದೆ ಸೈಕಲ್ ಕೊಳ್ಳುವಾಗ ಈಗಿರುವಷ್ಟು options ಇರದ ಕಾರಣ ತಲೆಬಿಸಿ ಇರಲಿಲ್ಲ. ಇದು ಕೊಳ್ಳುವವರ ಕಾಲ(buyer’s market),, ಹಾಗಾಗಿ ನಮ್ಮ ಅಗತ್ಯಕ್ಕೆ ಅನುಗುಣವಾಗಿ ಅನೇಕ ಆಯ್ಕೆಗಳು ಲಭ್ಯ. ಬೆಟ್ಟದ ಹಾದಿಗಳಲ್ಲಿ ಓಡಿಸಬಹುದಾದ ಸೈಕಲ್ ನಿಂದ (Mountain Terrain Bike – MTB) ಹಿಡಿದು, ಕೇವಲ ಸಿಟಿರಸ್ತೆಗಳಿಗಾಗಿ ವಿಶೇಷವಾಗಿ ರಚಿಸಲ್ಪಟ್ಟ ಸೈಕಲ್ ಗಳು (Road or City bikes) ದೊರೆಯುತ್ತಿವೆ. ಭಾರತೀಯ ಹಾಗೂ ವಿದೇಶದ ಹತ್ತು ಹಲವು ಸೈಕಲ್ ಗಳ ಬೆಲೆಗಳನ್ನು ಕೇಳಿದಾಗ ಕೇವಲ ಸೈಕಲ್ ಗೆ ಇಷ್ಟೊಂದು ಬೆಲೆಯೆ ಏಂದು ದಿಗ್ಭ್ರಮೆಯಾದರೆ ಅಶ್ಚರ್ಯವಿಲ್ಲ. “ಕೇವಲ” ಪದಪ್ರಯೋಗಕ್ಕಾಗಿ ಕ್ಷಮಿಸಿ, ತೀರ ಇತ್ತಿಚಿನವರೆಗೆ ಸೈಕಲ್ ಕೇವಲವೇ ಆಗಿತ್ತೆಂದು ನನ್ನ ಅನಿಸಿಕೆ. ಯಾವಾಗ ಸೈಕಲ್ ತನ್ನನ್ನು ಬೈಕ್ (bike) ಎಂದು ಕರೆಸಿಕೊಳ್ಳ ತೊಡಗಿತೋ, ಅದರ ಬೆಲೆಯೂ ಹೆಚ್ಚಿ, ಪರಿಸರಸ್ನೇಹಿಯಾದ ಸೈಕಲ್ ಗೆ ಕೊನೆಗೂ ತನಗೆ ದೊರಕಬೇಕಾದ ಮರ್ಯಾದೆಯು ದೊರಕತೊಡಗಿದೆ!

ನಿರೇಕ್ಷೆಗಿಂತ ಹೆಚ್ಚು  ಹಣ ತೆತ್ತು ಕೊಳ್ಳಲಿರುವ ಸೈಕಲ್ ನಿಂದ ನಮಗೆ ಹೆಚ್ಚಿನ ನಿರೀಕ್ಷೆಗಳಿರುವುದು ಸಹಜವಲ್ಲವೆ ? ಸೈಕಲ್ ನಿಂದ ಅಲ್ಲ-ಅಲ್ಲ, ಬೈಕ್ ನಿಂದ ನಮ್ಮ requirements ಹೀಗಿದ್ದವು:

– ಅಭ್ಯಾಸ ತಪ್ಪಿಹೋಗಿರುವ, ಸಾಕಷ್ಟು ವ್ಯಾಯಾಮವಿಲ್ಲದೆ ಜಡಹಿಡಿದಿರುವ ನಮಗೂ ಕನಿಷ್ಠ ಪ್ರಯತ್ನದಲ್ಲಿ ಓಡಿಸಲಾಗುವ gear-ಸೈಕಲ್ ಬೇಕೇಬೇಕು.

– ಬೆಂಗಳೂರಿನ ಹೊಂಡಗಳಲ್ಲಿ ನಮ್ಮ ಬೆನ್ನು ಮುರಿಯದಿರಲು shock absorbers ಬೇಕು.
– ನಾನು ಹಾಗೂ ನನ್ನ ಮಡದಿ ಇಬ್ಬರೂ ಉಪಯೋಗಿಸುವಂತ ಲಿಂಗಭೇದವಿಲ್ಲದ (unisex) ಸೈಕಲ್ ಆಗಿರಬೇಕು.
– ಹೆಚ್ಚಾಗಿ ಮನೆಯ ಸುತ್ತಮುತ್ತಲೇ ಓಡಿಸುವ ಆದರೆ ಕೆಲವೊಮ್ಮೆ off-roading ಮಾಡಬಹುದಾದ hybrid ಸೈಕಲ್ ಬೇಕು.
– ಹಗುರವಾಗಿ ಸುಲಭವಾಗಿ ಎತ್ತಿಕೊಂಡು ನಡೆಯುವಂತಿರಬೇಕು.
– ನಮ್ಮಿಬ್ಬರ ಎತ್ತರಕ್ಕೂ ಸರಿಹೊಂದುವಂತೆ seat ಮತ್ತು handle bar ಗಳನ್ನು ಸುಲಭವಾಗಿ adjust ಮಾಡುವಂತಿರಬೇಕು.
– ಜೇಬಿಗೂ ಆದಷ್ಟು ಹಗುರವಾಗಿರಬೇಕು.

IMG_3663

ಮೇಲಿನ ಎಲ್ಲವನ್ನೂ ಪೂರೈಸಿದ  btwin ಕಂಪೆನಿಯ Original 5  ಎಂಬ ಸೈಕಲನ್ನು ಡಿಕ್ಯಾತ್ಲಾನಲ್ಲಿ ಕೊಂಡೆವು. ಕೊಂಡದ್ದಾಯಿತು ಹಾಗೂ ಮನೆಯ ಸುತ್ತಮುತ್ತೆಲೆಲ್ಲಾ ಓಡಿಸಿದ್ದೂ ಅಯಿತು. ಮೊನ್ನೆಯಷ್ಟೆ ಆಫೀಸಿನ ಅರ್ಧ ದೂರದಷ್ಟು ಸೈಕಲ್ ನಲ್ಲಿ ಹೋಗುವ ಅವಕಾಶ ಒದಗಿಬಂತು. ಸರಿ ಅತ್ಯುಸ್ತಾಹದಿಂದಲೇ ಬೆಳಗ್ಗೆ 7.30ಕ್ಕೆ ಹೊರಟು, 2 ಕಿ ಮಿ ಕ್ರಮಿಸಿ ಕಡಿದಾದ ರಸ್ತೆಯಲ್ಲಿ ಒಡಿಸುವಾಗ, ಇನ್ನುಳಿದ 8 ಕಿ ಮಿ ನನ್ನಿಂದ ಸಾಧ್ಯವೇ ಎನಿಸಿ, ವಾಪಸ್ಸು ತೆರಳಿ ಕಾರಿನಲ್ಲಿ ಹೋಗಿಬಿಡಲೇ ಎಂಬ ಯೋಚನೆ ಬಾರದಿರಲಿಲ್ಲ. ಹೊರಟದ್ದಾಯಿತು, ಇನ್ನೇನಿದ್ದರು ಮುನ್ನಡಯಲೇ ಬೇಕೆಂಬ ಹಠದಿಂದ ನಿಧನವಾಗಿ ತುಳಿಯುತ್ತಾ ಮುನ್ನಡೆದು ಬನ್ನೇರುಘಟ್ಟ ರಸ್ತೆ ಸೇರಿಕೊಂಡೆ. ಅಷ್ಟು ಬೆಳಗ್ಗೆಯೇ ಅಷ್ಟೊಂದು ವಾಹನಗಳ ಮಧ್ಯೆ ಚಲಿಸಿದಾಗ, ಕವಚವನ್ನು ಮರೆತು ಯುದ್ಧಕ್ಕೆ ಬಂದ ಸೈನಿಕನಂತೆ ಭಾಸವಾಯಿತು. ಕಾರಿನದೇ ಹೆಚ್ಚು ಬಳಕೆಯಿರುವ ಯಾರಿಗಾದರೂ ಒಮ್ಮೆಗೆ ದ್ವಿಚಕ್ರವಾಹನ ಓಡಿಸುವಾಗ ತನ್ನ ಮೇಲೇ ಹರಿದುಹೋಗುವ ಹಾಗೆ ಇತರ ವಾಹನಗಳು ಚಲಿಸುತ್ತಿವೆಯೋ ಎನಿಸುವುದು ಸಹಜ. ಆದರೆ, ರಸ್ತೆಯ pecking order ನಲ್ಲಿ ಅತ್ಯಂತ ಕೆಳಗಿರುವ ಸೈಕಲ್ ಸವಾರನಿಗೆ ಇದು ವಿಶೇಷವಾಗಿ ಅನಿಸುತ್ತದೆ. BMTC ಬಸ್ಸೊಂದು “ಎಲೈ ಯ:ಕಶ್ಚಿತ್ ಸೈಕಲ್ ಸವಾರನೇ, foot pathಗೆ ತೊಲಗು, ಇಲ್ಲದಿದ್ದರೆ ನಿನ್ನ ಸಾವು ಖಚಿತ” ಎನ್ನುವ ಹಾಗೆ horn ಮಾಡಿದಾಗ, ಸೈಕಲನ್ನು ರೋಡಿನಿಂದ ಕೆಳಗಿಳಿಸದಿರಲು ಧೈರ್ಯ ಬರಲಿಲ್ಲ. ಸೈಕಲ್ ನಲ್ಲಿ ಬಲಗನ್ನಡಿ (Right rear view miror) ಬೇಕೇಬೇಕು, ಆದರೆ ಯುದ್ಧದಲ್ಲಿ ರೊಚ್ಚಿಗೆದ್ದ ಕುದುರೆಗಳು  ಓಡುವಂತೆ ಎಲ್ಲೆಂದರಲ್ಲಿ ನುಗ್ಗಿಬರುವ ದ್ವಿ/ತ್ರಿ/ಚತುಷ್ ಚಕ್ರವಾಹನಗಳ ದಾಳಿಯಿಂದ ತಪ್ಪಿಸಿಕೊಳ್ಳಲು, ಎಡಗನ್ನಡಿಯೂ (Left rear view miror) ಇದ್ದರೆ ಒಳಿತು ಎನಿಸಿತು. ಸಂಜೆ ಕತ್ತಲಾಗುವ ಮುಂಚೆ ಮನೆ ಸೇರಿದಾಗ, ಬೆಂಗಳೂರಿನ ನಿತ್ಯ ರಸ್ತೆ ಕಾಳಗದಲ್ಲಿ ಹಾನಿಗೊಳಗಾಗದೆ ಬಂದೆನಲ್ಲ ಅನ್ನಿಸಿದ್ದು ಉತ್ಪ್ರೇಕ್ಷೆಯಲ್ಲ.

ಇಷ್ಟೆಲ್ಲಾ ಇದ್ದರೂ, ಸೈಕಲ್ ನಲ್ಲಿ ಹೋಗುವ ಮಜ ಸೈಕಲ್ ಸವಾರನಿಗೇ ಗೊತ್ತು. “ಓಹೋ, ಎಂತಹ ಸುಪರ್ ಸೈಕಲ್” ಎನ್ನುತ್ತಿರುವ ಶಾಲಾಮಕ್ಕಳ ಮುಗ್ಧನೋಟ, “ಇದ್ಯಾವ ಗ್ರಹದಿಂದ ಬಂದ ಜೀವಿ” ಎನ್ನುತ್ತಿರುವ ಜನರ ಬೆರಗು ನೋಟ, ಹತ್ತಾರು ವರ್ಷಗಳಿಂದ ಸಾಮಾನ್ಯ ಸೈಕಲ್ ತುಳಿಯುತ್ತಿರುವ ಸಾಮಾನ್ಯ ಜನರ “ಈ ಸೈಕಲ್ ಗೆ helmet ಬೇರೆ” ಎನ್ನುತ್ತಿರುವ ನೋಟ, ಸೈಕಲ್ ಸವಾರನಿಗೆ ಮರ್ಯಾದೆ ಕೊಟ್ಟು, right-of-way ಬಿಟ್ಟುಕೊಡುವ ಹೃದಯವಂತರ ನೋಟ – ಇವೆಲ್ಲವೂ ಅನುಭವಿಸಿಯೇ ತಿಳಿಯಬೇಕು. ಕೊನೆಗೆ ಕಾರಿನಲ್ಲಿ ಕುಳಿತು ಬೋರುಬಂದಿರುವ 5 ವರ್ಷದ ಮಗು ಸೈಕಲ್ ನಲ್ಲಿ doubles ಕುಳಿತು round ಹೊಡೆಯುವಾಗ ಪಡುವ ಖುಷಿಯನ್ನು ಸವಿಯಲು ಒಂದು ಸೈಕಲ್ ಬೇಡವೆ ?

ಕೊನೆಯ ಮಾತು (ಸ್ನೇಹಿತ ಸೈಕಲ್ ಸವಾರನಿಂದ ಬಂದದ್ದು): ಭೂದೇವಿಯ ನೆನೆದು “ಹೊಗೆ-ರೂಪದ ಕಾರ್ಬನ್ ತ್ಯಾಜ್ಯ ಹೊರಹೊಮ್ಮಿಸಿದ್ದಕ್ಕಿಂತ ಜಾಸ್ತಿ ಸ್ವೀಕರಿಸಿದೆ” ಅನ್ನುವ ತೃಪ್ತಿಕರವಾದ ಭಾವನೆ ಮನಃ ಪಟಲದಲ್ಲಿ ಸುಳಿಯದಿರಲಿಲ್ಲ!