ಸುಬ್ರಹ್ಮಣ್ಯದಲ್ಲಿ ಉರುಳು ಸೇವೆ ಮಾಡುವವರ ಬವಣೆ

November 25, 2009

ಶಿರಾಡಿ ಘಾಟಿಯಲ್ಲಿ ಚಾರಣ ಮುಗಿಸಿ ಗುಂಡ್ಯದಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಷಷ್ಠಿಯ ಹಿಂದಿನ ದಿನ ಬರುತ್ತಿದೆವು. ಸುಬ್ರಹ್ಮಣ್ಯಕ್ಕೆ 2 km ಇರುವಾಗ ವಾಹನ ದಟ್ಟಣೆ ಹೆಚ್ಚಾಗಿ bus ನಿಂತೇ ಹೋಯಿತು. ಎಷ್ಟು ಹೊತ್ತಾದರೂ traffic clear ಆಗದಿದ್ದಾಗ, ಈ ಸಾದಾ ರಸ್ತೆಯಲ್ಲೂ ಒಂದು ಚಾರಣವಾಗಿಬಿಡಲಿ ಎಂದು ಬಸ್ ನಿಂದ ಇಳಿದು ನಡೆಯುತ್ತಾ ಸಾಗಿದಾಗ jam ಏಕಾಗಿದೆ ಎಂದು ಸ್ಪಷ್ಟವಾಯಿತು. ಕುಮಾರಧಾರದಲ್ಲಿ ಮಿಂದ ಭಕ್ತರು ದೇವಸ್ಥಾನದ ಕಡೆಗೆ ಉರುಳು ಸೇವೆ ಮಾಡುತ್ತಿದ್ದರು. ಇದೊಂದು ವಾರ್ಷಿಕ ಕಾರ್ಯಕ್ರಮವಾದರೂ, ದೇವಸ್ಥಾನದವರಾಗಲೀ, ಪೋಲಿಸ್ ನವರಾಗಲಿ ಹೆಚ್ಚೇನು ವ್ಯವಸ್ಥೆ ಮಾಡಿಕೊಂಡಂತೆ ಕಾಣಲ್ಲಿಲ. ಇದ್ದ ಒಂದೇ ವ್ಯವಸ್ಥೆ  ಎಂದರೆ,  ಭಕ್ತರು ಯಾವ ಬದಿಯಲ್ಲಿ ಉರುಳು ಹಾಕುತ್ತಿದ್ದರೋ ಆ ಬದಿಯ ವಾಹನ ಸಂಚಾರವನ್ನು ನಿಲ್ಲಿಸಲಾಗುತ್ತಿತ್ತು. ಯಾರ ನಿರ್ವಹಣೆಯೂ  ಇಲ್ಲದ ಕಾರಣ ಭಕ್ತರು ಎರಡು ಬದಿಯಲ್ಲೂ  ಉರುಳು ಹಾಕುತ್ತಿದ್ದರಿಂದ, ಅಲ್ಲಲ್ಲಿ ಎರಡು ಬದಿಯೂ ವಾಹನವನ್ನು ನಿಲ್ಲಿಸಲಾಗಿತ್ತು. ಇದೇನಿದು, ಇವರಿಂದ ಅನ್ಯರಿಗೆಲ್ಲಾ ಎಷ್ಟೊಂದು ತೊಂದರೆ ಎಂದೊಮ್ಮೆ  ಅನಿಸಿದರೂ, ನಂತರ ಇವರ ಕಷ್ಟ ಯಾರಿಗೂ ಬೇಡ ಅನಿಸಿತು.

  • ನದಿಯಿಂದ ದೇವಸ್ಥಾನ ಸಾಕಷ್ಟು ದೂರದಲ್ಲಿದೆ (2 km ಇರಬಹುದು)
  • ಉರುಳು ಹಾಕುವವರಿಗೆ ದಾರಿಯಲ್ಲಿ ಕಾದಿರಿಸಿದ ಜಾಗದ ವ್ಯವಸ್ಥೆ ಯಿಲ್ಲ. ಅಲ್ಲದೆ ದಾರಿಯೂ ಅಷ್ಟೇನು ವಿಸ್ತಾರವಿಲ್ಲ.
  • ವಾಹನಗಳೂ ಅಲ್ಲೇ ಸಂಚರಿಸುವುದರಿಂದ, ಉರುಳುವವರ ತಲೆ ಕೈ ಕಾಲು ವಾಹನದಡಿ ಬಂದರೂ ಆಶ್ಚರ್ಯವಿಲ್ಲ.
  • ಕಂಡಕಂಡಲ್ಲಿ ಉಗುಳಿರುವುದರಿಂದ, ಉರುಳು ಹಾಕುವವರು ಉಗುಳ ಮೇಲೆ ಉರುಳದೆ ವಿಧಿಯಿಲ್ಲ.
  • ಉರುಳುವಾಗ ಅನೇಕರು ವಾಂತಿ ಮಾಡುತ್ತಿದ್ದರು. ಅದನ್ನು ಅಲ್ಲೇ ಸ್ವಚ್ಛ ಮಾಡುವವರಿಲ್ಲದೆ, ಭಕ್ತರಿಗೆ ಅತ್ಯಂತ ಕಷ್ಟ ಆಗುತ್ತಿತ್ತು.

ದೇವಸ್ಥಾನ ತಲುಪಿದಾಗ, ಸ್ಥಳದ greatness ಬಗ್ಗೆ ಧ್ವನಿ ವರ್ಧಕದಲ್ಲಿ ಹೀಗೆ ಪ್ರಸಾರವಾಗುತ್ತಿತ್ತು – “… ದಿನಕ್ಕೆ ಸಾವಿರಾರು ಭಕ್ತರು ಬರುತ್ತಾರೆ… ಸಚಿನ್ ತೆಂಡೂಲ್ಕರ್ ಬಂದಿದ್ದರು… ಈ ಮಂತ್ರಿ ಮಹೋದಯರೂ ಬಂದಿದ್ದರು….”. ಇಷ್ಟೆಲ್ಲಾ ದೊಡ್ಡ ದೇವಸ್ಥಾನದಲ್ಲಿ, ಉರುಳು ಸೇವೆ ಮಾಡುವ ಭಕ್ತರಿಗೆ, ಇಷ್ಟೊಂದು ಕನಿಷ್ಠ ವ್ಯವಸ್ಥೆ ಯೇ ಎಂದು ಆಶ್ಚರ್ಯ ಆಗದೆ ಇರಲ್ಲಿಲ್ಲ. ಸಾಮಾನ್ಯವಾಗಿ ಜೀವನದಲ್ಲಿ ತೊಂದರೆಗಳಿರುವವರು ಉರುಳು ಸೇವೆ ಮಾಡುತ್ತಾರೆ, ಅಷ್ಟು  ಕಷ್ಟ ಸಹಿಸಿದವರಿಗೆ ಇದೇನು ಮಹಾ ಕಷ್ಟ ಏಂಬ ಧೋರಣೆಯೇ ?


ಹೆಸರಲ್ಲೇನಿದೆ ?

November 19, 2009

ಗೆಳೆಯನೊಬ್ಬನ ಮಗನ ನಾಮಕರಣ ಮುಗಿದಿತ್ತು. ಏನು ಹೆಸರಿಟ್ಟೆ ಎಂದು ಕೇಳಿದಾಗ ‘ಅಭಿ’ ಎಂದ. ಸರಿ, ಪೂರ್ತಿ ಹೆಸರೇನೆಂದೆ. ‘ಅಭಿ’ ಎಂದೇ ಹೇಳಿದ. ಅಭಿ ಎನ್ನುವುದು ಕೇವಲ ಉಪಸರ್ಗ (prefix), ಪೂರ್ಣ ಪದವಲ್ಲ ಏಂಬ ಅರಿವಿದೆಯೇ ಎಂದಾಗ, ಗೊತ್ತು, ಆದರೆ ಎರಡಕ್ಷರದ ಕರೆಯಲು ಸುಲಭವಾದ ಹೆಸರಿದು ಎಂದ. ಅಲ್ಲವೇ ಮತ್ತೆ ? ಸುಲಭವಾಗಿ ಕರೆಯಲಾಗುವ, ಕರೆದಾಗ ಓಗೊಡುವ ಹೆಸರಿದ್ದರೆ ಸಾಕಲ್ಲವೇ ? ಹೆಸರಿಗೆ ಒಂದು ಅರ್ಥವಿರುವುದು ಅಷ್ಟು  ಮಹತ್ವವೇ ? ಇತ್ತೀಚಿನವರೆಗೆ ಸುಮಾರಾಗಿ ಅರ್ಥಪೂರ್ಣವಾದ ಹೆಸರೇ ಇಡಲಾಗುತ್ತಿತ್ತು. ಈಗಿನ trend ಬದಲಾಗಿದೆ. ಇಷ್ಟೊಂದು ಜನರಿಗೆ ಭಿನ್ನವಾದ ಅರ್ಥಪೂರ್ಣವಾದ ಹೆಸರು ಎಲ್ಲಿಂದ ತರೋಣ ? ಉಪಸರ್ಗವೂ ಕಾಲಕ್ರಮೇಣ ಮುಖ್ಯಪದವಾಗಿ ಬದಲಾಗುತ್ತದೇನೋ! ಭಾಷೆಯು ಬೆಳೆಯಬೇಕಲ್ಲವೇ ?


ಪುರಂದರ ವಿಢಲ!

November 11, 2009

ಮೊನ್ನೆ ಅಮೃತವರ್ಷಿಣಿ (FM 100.1) channel ನಲ್ಲಿ ತಮಿಳು ಮೂಲದವರೊಬ್ಬರ ಕರ್ನಾಟಕ ಶಾಸ್ತ್ರೀಯ ಗಾಯನ ಪ್ರಸಾರವಾಗುತಿತ್ತು. ಇನ್ನೇನು channel ಬದಲಿಸಬೇಕೆನ್ನುವಷ್ಟರಲ್ಲಿ ದಾಸರ ಪದವೊಂದು ಶುರುವಾಯಿತು. ಸರಿ ಇದೊಂದನ್ನು ಕೇಳಿ ಬಿಡೋಣ ಎಂದು ಕೇಳುತ್ತಾ ಹೋದೆ. “ವೇಂಕಟಾಚಲ ನಿಲಯಂ ವೈಕುಂಠ ಪುರವಾಸಂ” ಎಂದು ಪ್ರಾರಂಭವಾಗುವ ಕೀರ್ತನೆಯದು. ಬಹುತೇಕ ತಮಿಳರ ಕನ್ನಡ/ಸಂಸ್ಕೃತ ಶಾಸ್ತ್ರೀಯ ಗಾಯನದಲ್ಲಿ ಅನೇಕ ತಪ್ಪುಗಳಿರುತ್ತವೆ ಎಂದು ಅನ್ಯರು ಹೇಳಿದ್ದು ಕೇಳಿದ್ದೆ, ಅದರ ಅನುಭವ ಈಗ ಆಗತೊಡಗಿತು. “ವೈಕುಂಡ ಪುರವಾಸಂ” ಎಂದು ಶುರುವಾದ ಪದ್ಯ “ಪುರಂದರ ವಿಢಲ” ಎಂದು ಕೊನೆಗೊಂಡಾಗ ಶಾಸ್ತ್ರೀಯ ಸಂಗೀತವನ್ನು ಹೀಗೂ ಹಾಡುತ್ತಾರಾ/ಹಾಡಬಹುದ ಎಂದು ಆಶ್ಚರ್ಯ ಹಾಗೊ ಸ್ವಲ್ಪ ಬೇಸರವೂ ಆಯಿತು.

ಜೊತೆಗೆ ದಾಸರ ಮತ್ತೊಂದು ಪದದ ನೆನಪಾಯಿತು – “ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯ”. ಇದನ್ನು ಮೇಲೆ ತಿಳಿಸಿದ ಮಹನೀಯರು ಹಾಡಿದರೆ ಹೇಗಿರಬಹುದು ಎಂದು ಯೋಚಿಸಿದಾಗ ನಗು ಬಂತು – “ದಾರಿ ಯಾವುದಯ್ಯ ವೈಕುಂಡಕೆ ದಾರಿ ತೋರಿಸಯ್ಯ” ಎಂದು ದಾರಿ ಕೇಳಿದವನ ಪಾಡು ಏನೆಂದು! ದಾಸರ ಈ ಜಟಿಲ ಪ್ರಶ್ನೆಗೆ ಉತ್ತರ ದೊರೆಯಲು ಅನೇಕ ಜನ್ಮಗಳು ಬೇಕಗಿರುವಾಗ, ಹೀಗೆ ಪ್ರಶ್ನೆಯನ್ನೇ ಸರಿ ಕೇಳದಿದ್ದರೆ ಏನು ಅವಸ್ಥೆ ಎಂದು!


ಷ ಕಾರದ ಉಚ್ಚಾರ ಅಸ್ಟು ಕಸ್ಟವೇ ?

November 7, 2009

ಈ ನಡುವೆ FM ರೇಡಿಯೋದಲ್ಲಿ ಕನ್ನಡ ಪದಗಳ ತಪ್ಪು  ಉಚ್ಚಾರಣೆ ಸಾಮಾನ್ಯವಾಗುತ್ತಾ ಬರುತ್ತಿದೆ. ಅಲ್ಪ ಪ್ರಾಣ ಮತ್ತು ಮಹಾ ಪ್ರಾಣಗಳನ್ನು ಸರಿಯಾಗಿ ಬಳಸುವುದು ಸ್ವಲ್ಪ  ಪ್ರಯಾಸಕರವೇ ಎನ್ನಬಹುದು (ಇಂಥ vs ಇಂತ ಇತ್ಯಾದಿ). ಆದರೆ ಕಷ್ಟ, ಇಷ್ಟ, ಎಷ್ಟು , ಅಷ್ಟು, ಮುಂತಾದ ಪದಗಳನ್ನು ಕಸ್ಟ, ಇಸ್ಟ, ಎಸ್ಟು, ಅಸ್ಟು ಎಂದು ಉಚ್ಚರಿಸುವುದು  ಸರ್ವೇಸಾಮಾನ್ಯವಾಗಿ ಹೋಗಿದೆ.  ಇತರೆ channel ಗಳಲ್ಲಿ ಹೋಗಲಿ ಆದರೆ ಕನ್ನಡವನ್ನು ಮುತುವರ್ಜಿ ಇಂದ ಬಳಸುವ channel ಗಳಲ್ಲೂ ಇದನ್ನು ಕೇಳಿದಾಗ ಷ ಕಾರವನ್ನು  ಉಚ್ಚರಿಸುವುದು ಅಷ್ಟೊಂದು ಕಷ್ಟವೇ ಅನಿಸುತ್ತದೆ. ಅಥವಾ ಇಲ್ಲಿ ಷ ಕಾರವಿದೆಯೆಂದೇ ನಮ್ಮ ಕೆಲ FM ಬಂಧುಗಳಿಗೆ ತಿಳಿಯದೆ ? ಸಾಮಾನ್ಯವಾಗಿ ಭಾಷೆಯು ಬದಲಾವಣೆಗಳನ್ನು ಕಾಣುತ್ತಾ ಮಾರ್ಪಾಡಾಗುತ್ತ  ಬೆಳೆಯುತ್ತದೆಂದು ಕೇಳಿದ್ದೇನೆ. ಇದನ್ನು ಬೆಳವಣಿಗೆ ಎನ್ನಬಹುದೇ ?