1-15-ಧರ್ಮಬುದ್ಧಿ ಮತ್ತು ಪಾಪಬುದ್ಧಿ ಕಥೆ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

[ಈ ಕಥೆಯು ಪಂಚತಂತ್ರದ ಮೊದಲನೆಯ ತಂತ್ರವಾದ ಮಿತ್ರಭೇದದಲ್ಲಿ ಬರುತ್ತದೆ. ಮಿತ್ರಭೇದದ ಸಂಪೂರ್ಣ ಕಥೆಯನ್ನು ಇಲ್ಲಿ ಓದಬಹುದು ಹಾಗೂ ಪಂಚತಂತ್ರದ ಮುಖಪುಟವನ್ನು ಇಲ್ಲಿ ನೋಡಬಹುದು]

ಒಂದು ಸ್ಥಳದಲ್ಲಿ ಧರ್ಮಬುದ್ಧಿ ಮತ್ತು ಪಾಪಬುದ್ಧಿಯೆಂಬ ಮಿತ್ರರು ವಾಸಿಸುತ್ತಿದ್ದರು. ಒಮ್ಮೆ ಪಾಪಬುದ್ಧಿಯು ಹೀಗೆ ಯೋಚಿಸಿದನು – ನಾನು ಮೂರ್ಖನು ಹಾಗೂ ದರಿದ್ರನೂ ಕೂಡ. ಆದ್ದರಿಂದ ಈ ಧರ್ಮಬುದ್ಧಿಯನ್ನು ಕರೆದುಕೊಂಡು ದೇಶಾಂತರ ಹೋಗಿ ಇವನ ಸಹಾಯದಿಂದ ಧನ ಸಂಪಾದನೆ ಮಾಡಿ ಇವನನ್ನೂ ವಂಚಿಸಿ ಸುಖವಾಗಿರುತ್ತೇನೆ.” ಆನಂತರ ಒಂದು ದಿನ ಪಾಪಬುದ್ಧಿಯು ಧರ್ಮಬುದ್ಧಿಗೆ ಹೇಳಿದನು – “ಎಲೈ ಮಿತ್ರನೇ, ವೃದ್ಧಾಪ್ಯದಲ್ಲಿ ನೀನು ಮಾಡಿದ ಯಾವ ಕೆಲಸವನ್ನು ನೆನಪಿಸಿಕೊಳ್ಳುತ್ತೀಯಾ ? ಬೇರೆ ದೇಶವನ್ನು ನೋಡದೆ, ಮಕ್ಕಳಿಗೆ ಯಾವ ಸಮಾಚಾರವನ್ನು ಹೇಳುವೆ ? ಭೂಮಂಡಲದಲ್ಲಿ ಅಲೆಯುತ್ತಾ ಬೇರೆ ಬೇರೆ ದೇಶಗಳ ವೇಷಭಾಷಾದಿಗಳನ್ನು ತಿಳಿದುಕೊಳ್ಳದವನ ಬಾಳು ವ್ಯರ್ಥ. ಮಾನವನು ಭೂಮಿಯಲ್ಲಿ ದೇಶದಿಂದ ದೇಶಕ್ಕೆ ಹೋಗದಿದ್ದರೆ ಅವನು ಸರಿಯಾದ ವಿದ್ಯೆ, ಧನ ಅಥವಾ ಕಲೆಯನ್ನು ಪಡೆಯುವುದಿಲ್ಲ.”

ಅವನ ಮಾತನ್ನು ಕೇಳಿದ ಧರ್ಮಬುದ್ಧಿಯು ಸಂತೋಷಗೊಂಡು ಪಾಪಬುದ್ಧಿಯೊಡನೆ ಹಿರಿಯರ ಆಶೀರ್ವಾದವನ್ನು ಪಡೆದು ಶುಭದಿನದಂದು ದೇಶಾಂತರ ಹೊರಟನು. ಹೀಗೆ ಅಲೆಯುತ್ತಿದ್ದಾಗ ಧರ್ಮಬುದ್ಧಿಯ ಪ್ರಭಾವದಿಂದ ಪಾಪಬುದ್ಧಿಯು ಹೇರಳವಾಗಿ ಹಣವನ್ನು ಸಂಪಾದಿಸಿದನು. ಆನಂತರ ಅವರಿಬ್ಬರೂ ಬೇಕಾದಷ್ಟು ಹಣವನ್ನು ಗಳಿಸಿ ಸಂತೋಷಗೊಂಡು ಉತ್ಸಾಹದಿಂದ ತಮ್ಮ ಮನೆಯ ಕಡೆಗೆ ಹೊರಟರು. ವಿದೇಶದಲ್ಲಿದ್ದುಕೊಂಡು ವಿದ್ಯೆ, ಹಣ ಮತ್ತು ಕಲೆಯನ್ನು ಸಂಪಾದಿಸಿಕೊಂಡು ಸ್ವದೇಶಕ್ಕೆ ಮರಳುವಾಗ ಕಾಲುಯೋಜನೆ ದಾರಿಯು ಶತಯೋಜನೆಯಂತೆ ಭಾಸವಾಗುತ್ತದೆ.

ತಮ್ಮ ದೇಶದ ಸಮೀಪಕ್ಕೆ ಬಂದಾಗ ಪಾಪಬುದ್ಧಿಯು ಧರ್ಮಬುದ್ಧಿಗೆ ಹೇಳಿದನು – “ಭದ್ರ, ಈ ಎಲ್ಲಾ ಹಣವನ್ನು ಮನೆಗೆ ಒಯ್ಯುವುದು ತರವಲ್ಲ. ಕುಟುಂಬದವರು ಮತ್ತು ಬಂಧುಗಳು ಕೇಳಿದಾಗ ಕೊಡಬೇಕಾಗುತ್ತದೆ. ಆದ್ದರಿಂದ ಇಲ್ಲೇ ಕಾಡಿನಲ್ಲಿ ನೆಲದಲ್ಲಿ ಹೂತಿಟ್ಟು ಸ್ವಲ್ಪವನ್ನು ಮಾತ್ರ ತೆಗೆದುಕೊಂಡು ಮನೆಗೆ ಹೋಗೋಣ. ಮುಂದೆ ಅವಶ್ಯಕತೆ ಬಂದಾಗ ಇಲ್ಲಿಗೆ ಬಂದು ಬೇಕಾದಷ್ಟನ್ನು ತೆಗೆದುಕೊಂಡು ಹೋಗೋಣ. ಬುದ್ಧಿವಂತನು ಹಣವೂ ಸ್ವಲ್ಪವಾದರೂ ಕೂಡ ಅದನ್ನು ಯಾರಿಗೂ ತೋರಿಸಬಾರದು. ಏಕೆಂದರೆ ಹಣದಿಂದ ಮುನಿಯ ಮನಸ್ಸೂ ಕೂಡ ಚಂಚಲವಾಗುತ್ತದೆ. ಆಮಿಷವನ್ನು ನೀರಿನಲ್ಲಿ ಮೀನುಗಳು ಹೇಗೆ ಭಕ್ಷಿಸುತ್ತವೆಯೋ, ಭೂವಿಯಲ್ಲಿ ಪ್ರಾಣಿಗಳು ಹೇಗೆ ಭಕ್ಷಿಸುತ್ತವೆಯೋ ಮತ್ತು ಆಕಾಶದಲ್ಲಿ ಪಕ್ಷಿಗಳು ಹೇಗೆ ಭಕ್ಷಿಸುತ್ತವೆಯೋ ಹಾಗೆ ಹಣವಂತನನ್ನು ಎಲ್ಲೆಡೆಯೂ ಪೀಡಿಸುತ್ತಾರೆ.”

ಧರ್ಮಬುದ್ಧಿಯು ಅದಕ್ಕೆ ಒಪ್ಪಿದಾಗ ಅವರು ಹಾಗೆಯೇ ಮಾಡಿ ಇಬ್ಬರೂ ಮನೆಗೆ ಹೋಗಿ ಸಂತೋಷದಿಂದ ಇದ್ದರು. ಮತ್ತೊಂದು ದಿನ ಪಾಪಬುದ್ಧಿಯು ರಾತ್ರಿ ಕಾಡಿಗೆ ತೆರಳಿ ಆ ಎಲ್ಲಾ ಹಣವನ್ನೂ ತೆಗೆದುಕೊಂಡು, ಗುಂಡಿಯನ್ನು ಮುಚ್ಚಿ ತನ್ನ ಮನೆಗೆ ಬಂದನು. ಮತ್ತೊಂದು ದಿನ ಧರ್ಮಬುದ್ಧಿಯನ್ನು ಕಂಡು ಹೇಳಿದನು – “ಗೆಳೆಯ, ದೊಡ್ಡಕುಟುಂಬದವರಾದ ನಾವು ದುಡ್ಡಿನ ಅಭಾವದಿಂದ ಕಷ್ಟಪಡುತ್ತಿದ್ದೇವೆ. ಆದ್ದರಿಂದ ಅಡಗಿಸಿಟ್ಟ ಸ್ಥಳಕ್ಕೆ ಹೋಗಿ ಸ್ವಲ್ಪ ಹಣವನ್ನು ತೆಗೆದುಕೊಂಡು ಬರೋಣ”

ಹಾಗೆಯೇ ಆಗಲೆಂದು ಅವರು ಅಡಗಿಸಿಟ್ಟ ಸ್ಥಳದಲ್ಲಿ ಅಗೆದು ನೋಡಿದಾಗ ಖಾಲಿ ಪಾತ್ರೆ ಮಾತ್ರ ಇತ್ತು.  ಆಗ ಪಾಪಬುದ್ಧಿಯು ತಲೆ ಚಚ್ಚಿಕೊಳ್ಳುತ್ತಾ ಹೇಳಿದನು – “ಧರ್ಮಬುದ್ಧಿ, ನೀನೇ ಈ ಹಣವನ್ನು ಕದ್ದು ಹೊಂಡವನ್ನು ಮತ್ತೆ ಹಿಂದಿನಂತೆ ಮುಚ್ಚಿರುವೆ. ನನ್ನ ಅರ್ಧ ಹಣವನ್ನು ಕೊಟ್ಟುಬಿಡು, ಇಲ್ಲದಿದ್ದರೆ ಧರ್ಮಾಧಿಕಾರಿಗಳಿಗೆ ದೂರು ನೀಡುವೆನು”

ಧರ್ಮಬುದ್ಧಿ – “ಏ ದುರಾತ್ಮನೇ, ಹೀಗೆ ಹೇಳಬೇಡ. ನಾನು ಧರ್ಮಬುದ್ಧಿಯುಳ್ಳವನು, ಕಳ್ಳತನ ಮಾಡುವವನಲ್ಲ. ಧರ್ಮಬುದ್ಧಿಯುಳ್ಳವರು ಪರಸ್ತ್ರೀಯರನ್ನು ತಾಯಿಯಂತೆಯೂ, ಬೇರೆಯವರ ಧನವನ್ನು ಮಣ್ಣಿನಂತೆಯೂ ಮತ್ತು ಎಲ್ಲರನ್ನೂ ತನ್ನಂತೆಯೂ ನೋಡುತ್ತಾರೆ.”

ಹೀಗೆ ಅವರಿಬ್ಬರೂ ವಾದ ಮಾಡುತ್ತಾ ಧರ್ಮಾಧಿಕಾರಿಗಳ ಬಳಿಗೆ ಹೋಗಿ ಒಬ್ಬರ ಮೇಲೊಬ್ಬರು ದೋಷಾರೋಪಣೆ ಮಾಡಿದರು. ಧರ್ಮಾಧಿಕಾರಿಗಳು ಅವರಿಬ್ಬರಿಗೂ ಶಪಥಮಾರ್ಗವನ್ನು ಸೂಚಿಸಿದಾಗ ಪಾಪಬುದ್ಧಿಯು – “ಇದು ಸರಿಯಾದ ನ್ಯಾಯವೆಂದು ನನಗೆ ತೋರುತ್ತಿಲ್ಲ. ವಿವಾದವುಂಟಾದಾಗ ಮೊದಲು ಕಾಗದಪತ್ರಗಳನ್ನು ಹುಡುಕಬೇಕು, ಅದಿಲ್ಲದಿದ್ದರೆ ಸಾಕ್ಷಿಗಳನ್ನು ಮತ್ತು ಅದೂ ಇಲ್ಲದಿದ್ದಾಗ ಮಾತ್ರ ಆಣೆಯನ್ನು ಮಾಡಿಸಬೇಕು ಎಂದು ಪಂಡಿತರು ಹೇಳಿದ್ದಾರೆ. ಈ ವಿಷಯದಲ್ಲಿ ನನಗೆ ವೃಕ್ಷದೇವತೆಗಳು ಸಾಕ್ಷಿಯಾಗಿ ನಿಲ್ಲುವರು. ಅವರು ನಮ್ಮಲ್ಲಿ ಯಾರು ಕಳ್ಳ ಮತ್ತೆ ಯಾರು ಒಳ್ಳೆಯವನೆಂದು ತಿಳಿಸುವರು.” ಎಂದನು.

ಆಗ ಧರ್ಮಾಧಿಕಾರಿಗಳು – “ನೀನು ಹೇಳುವುದು ಸರಿ. ವಿವಾದದಲ್ಲಿ ಸಾಕ್ಷಿಯಾಗಿ ಒಬ್ಬ ಚಂಡಾಲನೇ ಇದ್ದರೂ ಅಂತಹ ಸಂದರ್ಭದಲ್ಲಿ ಶಪಥಮಾರ್ಗವನ್ನು ಉಪಯೋಗಿಸಬಾರದು. ಇನ್ನು ದೇವತೆಗಳೇ ಸಾಕ್ಷಿಯಾಗಿದ್ದಾಗ ಬೇರೆ ಹೇಳುವುದೇನಿದೆ. ನಮಗೂ ಈ ವಿಷಯದಲ್ಲಿ ತುಂಬಾ ಕುತೂಹಲವಿದೆ. ಬೆಳಗ್ಗೆ ನೀವು ನಮ್ಮ ಜೊತೆ ಆ ಕಾಡಿನ ಸ್ಥಳಕ್ಕೆ ಹೋಗತಕ್ಕದ್ದು.”

ಈ ಮಧ್ಯದಲ್ಲಿ ಪಾಪಬುದ್ಧಿಯು ಮನೆಗೆ ಹೋಗಿ ತನ್ನ ತಂದೆಗೆ – “ಅಪ್ಪ, ನಾನು ಧರ್ಮಬುದ್ಧಿಯ ತುಂಬಾ ಹಣವನ್ನು ಕದ್ದಿರುವೆನು. ಅದು ನಮ್ಮದಾಗುವುದು ನಿನ್ನ ಮಾತಿನ ಮೇಲೆ ನಿಂತಿದೆ. ಇಲ್ಲದಿದ್ದರೆ ನಮ್ಮ ಪ್ರಾಣಗಳೊಂದಿಗೆ ಅದೂ ಹೊರಟುಹೋಗುವುದು.” ಎಂದನು.

ಆತನ ತಂದೆ – “ಮಗನೇ, ಏನು ಹೇಳುವುದರಿಂದ ಆ ಹಣ ನಮ್ಮದಾಗುವುದೆಂದು ಬೇಗ ತಿಳಿಸು.” ಎಂದನು.

ಪಾಪಬುದ್ಧಿ – “ಅಪ್ಪ, ಆ ಸ್ಥಳದಲ್ಲಿ ಒಂದು ದೊಡ್ಡ ಶಮೀವೃಕ್ಷವಿದೆ. ಅದರಲ್ಲೊಂದು ದೊಡ್ಡ ಪೊಟರೆಯಿದೆ. ನೀನು ಈಗಲೇ ಅದರೊಳಗೆ ಹೋಗಿ ಕುಳಿತುಕೋ. ಬೆಳಗ್ಗೆ ನಾನು ವನದೇವತೆಯರಿಗೆ ಸತ್ಯವನ್ನು ನುಡಿಯಲು ಕೇಳುವೆನು. ಆಗ ನೀನು ಧರ್ಮಬುದ್ಧಿಯೇ ಕಳ್ಳನೆಂದು ಹೇಳಬೇಕು”

ಅವನ ತಂದೆಯು ಹಾಗೆಯೇ ಮಾಡಿದ ಮೇಲೆ ಬೆಳಗ್ಗೆ ಪಾಪಬುದ್ಧಿಯು ಸ್ನಾನವನ್ನು ಮುಗಿಸಿ ಧರ್ಮಬುದ್ಧಿ ಹಾಗೂ ಧರ್ಮಾಧಿಕಾರಿಗಳೊಂದಿಗೆ ಶಮೀವೃಕ್ಷದ ಬಳಿಗೆ ಬಂದು ಜೋರಾಗಿ ಹೇಳಿದನು – “ಸೂರ್ಯ, ಚಂದ್ರ, ವಾಯು, ಅಗ್ನಿ, ಆಕಾಶ, ಭೂಮಿ, ನೀರು, ಹೃದಯ, ಯಮ, ದಿನ, ರಾತ್ರಿ, ಎರಡು ಸಂಧ್ಯಾಕಾಲಗಳು, ಧರ್ಮ ಇವೆಲ್ಲವೂ ಮನುಷ್ಯನ  ಆಚಾರವನ್ನು ಬಲ್ಲವು. ವನದೇವತೆಯೇ, ನಮ್ಮಿಬ್ಬರಲ್ಲಿ ಯಾರು ಕಳ್ಳನೆಂದು ತಿಳಿಸು”. ಆಗ ಶಮೀವೃಕ್ಷದ ಪೊಟರೆಯಲ್ಲಿದ್ದ ಪಾಪಬುದ್ಧಿಯ ತಂದೆ – “ಕೇಳಿರಿ, ಧರ್ಮಬುದ್ಧಿಯೇ ಈ ಹಣವನ್ನು ಕದ್ದಿರುವನು.” ಅದನ್ನು ಕೇಳಿದ ರಾಜಪುರುಷರು ವಿಸ್ಮಯದಿಂದ ಅರಳಿದ ಕಣ್ಣುಳ್ಳವರಾಗಿ ಧರ್ಮಬುದ್ಧಿಯ ತಪ್ಪಿಗೆ ಶಾಸ್ತ್ರೋಕ್ತವಾದ ಶಿಕ್ಷೆಯ ವಿಚಾರಮಾಡುತ್ತಿದ್ದಾಗ ಧರ್ಮಬುದ್ಧಿಯು ಆ ಪೊಟರೆಗೆ ಒಣಗಿದ ಎಲೆ ಮುಂತಾದವುಗಳನ್ನು ಹಾಕಿ ಬೆಂಕಿಯನ್ನು ಹೊತ್ತಿಸಿದನು. ಪೊಟರೆಯಲ್ಲಿ ಬೆಂಕಿಯು ಉರಿಯುತ್ತಿರಲು ಅದರಿಂದ ಅರ್ಧ ಬೆಂದ ದೇಹವುಳ್ಳ, ಕಣ್ಣುಗಳು ಸಿಡಿದುಹೋಗಿ ಕರುಣಾಜನಕವಾಗಿ ರೋದಿಸುತ್ತಾ ಪಾಪಬುದ್ಧಿಯ ತಂದೆ ಹೊರಗೆ ಬಂದನು. ಜನರೆಲ್ಲರೂ ಇದೇನೆಂದು ಕೇಳಲು ಆತನು “ಇದೆಲ್ಲವೂ ಪಾಪಬುದ್ಧಿಯ ಕೆಲಸ” ಎಂದು ಹೇಳಿ ಸತ್ತುಬಿದ್ದನು. ಆಗ ರಾಜಪುರುಷರು ಪಾಪಬುದ್ಧಿಯನ್ನು ಶಮೀವೃಕ್ಷದ ಕೊಂಬೆಗೆ ಕಟ್ಟಿಹಾಕಿ ಧರ್ಮಬುದ್ಧಿಯನ್ನು ಹೊಗಳುತ್ತಾ – “ಬುದ್ಧಿವಂತನು ಉಪಾಯವನ್ನು ಮತ್ತು ಅಪಾಯದ ಬಗ್ಗೆಯೂ ಚಿಂತಿಸಬೇಕು. ಇಲ್ಲದಿದ್ದರೆ ಮೂರ್ಖಬಕವು ನೋಡುತ್ತಿದ್ದ ಹಾಗೆ ಮುಂಗುಸಿಯು ಎಲ್ಲಾ ಬಕಗಳನ್ನು ತಿಂದ ಹಾಗೆ ಆಗುತ್ತದೆ” ಎಂದು ಹೇಳಿ ಮೂರ್ಖಬಕ ಹಾಗೂ ಮುಂಗುಸಿಯ ಕಥೆಯನ್ನು ಹೇಳಿದರು.

Leave a comment