ಪಂಚತಂತ್ರ – ಕಾಕೋಲೂಕೀಯ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

Panchatantra Book

[ಪಂಚತಂತ್ರ ಮುಖಪುಟ, ತಂತ್ರ 1. ಮಿತ್ರಭೇದ, ತಂತ್ರ 2. ಮಿತ್ರಸಂಪ್ರಾಪ್ತಿ, ತಂತ್ರ 3. ಕಾಕೋಲೂಕೀಯ, ತಂತ್ರ 4. ಲಬ್ಧಪ್ರಣಾಶ, ತಂತ್ರ 5. ಅಪರೀಕ್ಷಿತಕಾರಕ]

ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯದ ಮೊದಲನೆಯ ನುಡಿ ಹೀಗಿದೆ – “ಹಿಂದೆ ವಿರೋಧವನ್ನು ಮಾಡಿದ್ದ ಶತ್ರು ಈಗ ಮಿತ್ರನಾದರೂ ಕೂಡ ಅವನನ್ನು ಸಂಪೂರ್ಣವಾಗಿ ನಂಬಬಾರದು. ಕಾಗೆಯು ಹಾಕಿದ ಅಗ್ನಿಯಿಂದ ಗೂಬೆಗಳು ಇದ್ದ ಗುಹೆಯು ಸುಟ್ಟುಹೋಯಿತು.”

panchatantra-kakolukiya-wm

ಸ್ಥಿರಜೀವಿಯ ಉಪಾಯದಂತೆ ಕಾಗೆಗಳು ಉರಿಯುತ್ತಿರುವ ಕಡ್ಡಿಗಳಿಂದ ಗೂಬೆಗಳ ಗುಹೆಗೆ ಬೆಂಕಿಯಿಟ್ಟು ಅವುಗಳನ್ನು ನಾಶಮಾಡುತ್ತಿರುವುದು. ಚಿತ್ರ – Kum. Drashti Piyusha Patel

ಕಾಗೆ ಹಾಗೂ ಗೂಬೆಯ ಕಥೆಯು ಹೀಗೆ ಕೇಳಿಬರುತ್ತದೆ – ದಕ್ಷಿಣದೇಶದಲ್ಲಿ ಮಹಿಲಾರೋಪ್ಯವೆಂಬ ಹೆಸರಿನ ನಗರವೊಂದಿದೆ. ಅದರ ಸಮೀಪದಲ್ಲಿ ಅನೇಕ ಶಾಖೆಗಳಿಂದ ಹಾಗೂ ಘನವಾದ ಎಲೆ ಸಮೂಹದಿಂದ ಕೂಡಿದ ಆಲದ ಮರವು ಇತ್ತು. ಅದರಲ್ಲಿ ಅನೇಕ ಕಾಗೆಗಳ ಪರಿವಾರದಿಂದ ಕೂಡಿದ ಮೇಘವರ್ಣ ಎಂದ ಕಾಗೆಗಳ ರಾಜನು ವಾಸಿಸುತ್ತಿದ್ದನು. ಅಲ್ಲಿ ಅವನು ದುರ್ಗವನ್ನು ರಚಿಸಿಕೊಂಡು ತನ್ನ ಪರಿವಾರ ಜನರೊಂದಿಗೆ ಕಾಲವನ್ನು ಕಳೆಯುತ್ತಿದ್ದನು. ಇದಲ್ಲದೆ ಅರಿಮರ್ದನ ಎಂಬ ಗೂಬೆಗಳ ರಾಜನು ತನ್ನ ಅಸಂಖ್ಯ ಪರಿವಾರಜನರೊಡನೆ ಬೆಟ್ಟದ ಗುಹೆಯನ್ನು ದುರ್ಗವನ್ನಾಗಿ ಆಶ್ರಯಿಸಿ ವಾಸಿಸುತ್ತಿದ್ದನು. ಅವನು ಸದಾ ರಾತ್ರಿ ಆ ಆಲದಮರದ ಬಳಿ ಬಂದು ತಿರುಗಾಡುತ್ತಿದ್ದನು. ಹಿಂದಿನ ವೈರತ್ವದ ಕಾರಣ ಯಾವುದಾದರೂ ಕಾಗೆಯು ಸಿಕ್ಕಿದಲ್ಲಿ ಅದನ್ನು ಕೊಂದು ಹೋಗುತ್ತಿದ್ದನು. ಹೀಗೆ ಪ್ರತಿದಿನ ಬಂದು ಆಕ್ರಮಣಮಾಡುವುದರಿಂದ ನಿಧಾನವಾಗಿ ಆ ಆಲದ ಮರದ ಸುತ್ತಲೂ ಕಾಗೆಗಳಿಲ್ಲದಂತೆ ಮಾಡಿದನು. ಹೀಗೆ ಆಗುವುದು ಸ್ವಾಭಾವಿಕವೇ ಏಕೆಂದರೆ – ಆಲಸ್ಯದಿಂದ ಕೂಡಿದ ಯಾರು ಸ್ವೇಚ್ಛೆಯಿಂದ ಹರಡುತ್ತಿರುವ (ವೃದ್ಧಿಗೊಳ್ಳುತ್ತಿರುವ) ಶತ್ರುವನ್ನು ಅಥವಾ ರೋಗವನ್ನು ನಿರ್ಲಕ್ಷಿಸುವನೋ, ಅವನು ನಿಧಾನವಾಗಿ ಅದರಿಂದಲೇ (ಶತ್ರು ಅಥವಾ ರೋಗದಿಂದಲೇ) ನಾಶಹೊಂದುವನು. ಯಾರು ಶತ್ರು ಅಥವಾ ರೋಗವನ್ನು ಹುಟ್ಟಿದ ಕೂಡಲೆ ಶಮನ ಮಾಡುವುದಿಲ್ಲವೋ ಅವನು ಬಲವಂತನಾಗಿದ್ದರೂ ಕೂಡ ನಂತರ ಶತ್ರು ಅಥವಾ ರೋಗದಿಂದ ಕೊಲ್ಲಲ್ಪಡುತ್ತಾನೆ.

ಸಚಿವರೊಡನೆ ಮೇಘವರ್ಣನ ಸಮಾಲೋಚನೆ

ಒಂದು ದಿನ ಕಾಗೆಗಳ ರಾಜ ತನ್ನ ಎಲ್ಲಾ ಸಚಿವರನ್ನು ಕರೆದು ಹೇಳಿದನು – “ಎಲೈ ಸಚಿವರೆ, ನಮ್ಮ ಶತ್ರು ಪ್ರಬಲನು, ಉದ್ಯೋಗಶಾಲಿಯು ಮತ್ತು ಸಮಯ ಪ್ರಜ್ಞೆಯುಳ್ಳವನು. ನಿತ್ಯವೂ ಆತ ರಾತ್ರಿ ಬಂದು ನಮ್ಮ ಪಕ್ಷದವರನ್ನು ಕೊಲ್ಲುತ್ತಾನೆ. ಇದಕ್ಕೆ ಹೇಗೆ ಪ್ರತೀಕಾರವನ್ನು ಮಾಡುವುದು ? ನಾವು ರಾತ್ರಿಯಲ್ಲಿ ನೋಡಲಾರೆವು ಮತ್ತು ಆತನ ಬೆಳಗಿನ ದುರ್ಗ ಸ್ಥಳವು ನಮಗೆ ತಿಳಿದಿಲ್ಲ, ಹಾಗಾಗಿ ಬೆಳಗ್ಗೆ ಹೋಗಿ ಆಕ್ರಮಣವನ್ನು ಮಾಡಲು ಸಾಧ್ಯವಿಲ್ಲ. ಆದ್ದರಿಂದ ನೀವು ಈ ವಿಷಯದಲ್ಲಿ ಸಂಧಿ, ವಿಗ್ರಹ, ಯಾನ, ಆಸನ, ಸಂಶ್ರಯ ಮತ್ತು ದ್ವೈಧೀಭಾವ ಮುಂತಾದ ವಿಧಾನಗಳಲ್ಲಿ ಯಾವುದನ್ನು ಬಳಸಬೇಕೆಂದು ವಿಚಾರ ಮಾಡಿ ಬೇಗನೆ ನನಗೆ ತಿಳಿಸಿ.”

ಆಗ ಅವರು ಹೇಳಿದರು – “ದೇವ ಈ ಪ್ರಶ್ನೆಯನ್ನು ಮಾಡಿ ನೀವು ಸರಿಯಾದುದನ್ನೇ ಕೇಳಿದ್ದೀರಿ. ಕೇಳದಿದ್ದರೂ ಸಚಿವರು ಈ ವಿಷಯದಲ್ಲಿ ಏನಾದರೂ ಹೇಳಬೇಕು. ಮತ್ತೆ ಸಲಹೆಯನ್ನು ಕೇಳಿದಾಗಲಂತೂ ಪ್ರಿಯವಾಗಿರಲಿ ಅಥವಾ ಅಪ್ರಿಯವಾಗಿರಲಿ, ಸತ್ಯವಾದ ಮತ್ತು ಹಿತವಾದ ಮಾತನ್ನು ಹೇಳಲೇ ಬೇಕು. ಯಾರು ಕೇಳಿದಾಗ ಅಂತಿಮವಾಗಿ ಸುಖವನ್ನು ಉಂಟುಮಾಡುವ ಹಿತವಚನವನ್ನು ಹೇಳುವುದಿಲ್ಲವೋ ಅಂಥ ಪ್ರಿಯವನ್ನು ನುಡಿಯುವ ಮಂತ್ರಿ ಶತ್ರುವಿದ್ದಂತೆ. ಆದ್ದರಿಂದ ಎಲೈ ರಾಜನೇ, ಏಕಾಂತವಾದ ಪ್ರದೇಶವನ್ನು ತಲುಪಿ ಮಂತ್ರಾಲೋಚನೆಯನ್ನು ಮಾಡಿ ಶತ್ರುತ್ವದ ಕಾರಣ ಹಾಗು ಅದರ ನಿಗ್ರಹವನ್ನು ಯೋಚಿಸಬಹುದು.”

ಆನಂತರ ಮೇಘವರ್ಣನು ಕುಲಕ್ರಮಕ್ಕನುಗುಣವಾಗಿ ಉಜ್ಜೀವಿ, ಸಂಜೀವಿ, ಅನುಜೀವಿ, ಪ್ರಜೀವಿ ಮತ್ತು ಜಿರಂಜೀವಿ ಎಂಬ ಐದು ಸಚಿವರನ್ನು ಪ್ರತ್ಯೇಕವಾಗಿ ಪ್ರಶ್ನಿಸಲು ತೊಡಗಿದನು.

ಮೊದಲು ಉಜೀವಿಯನ್ನು ಕೇಳಿದನು – “ಭದ್ರ, ಈ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ನಿಮ್ಮ ಅಭಿಪ್ರಾಯ ?”

ಉಜ್ಜೀವಿಯಿಂದ ಸಂಧಿಯ ಸಲಹೆ

ಉಜ್ಜೀವಿ – “ರಾಜನೇ, ಬಲಿಷ್ಠರೊಂದಿಗೆ ಯುದ್ಧವನ್ನು ಮಾಡಬಾರದು. ಅವನು (ಅಂದರೆ ಅರಿಮರ್ದನ) ಬಲವಂತನು ಹಾಗೂ ಉಚಿತವಾದ ಸಮಯದಲ್ಲಿ ಪ್ರಹಾರವನ್ನು ಮಾಡುತ್ತಾನೆ. ಆದ್ದರಿಂದ ಅವನೊಂದಿಗೆ ಸಂಧಿಯನ್ನು ಮಾಡಬೇಕು. ಏಕೆಂದರೆ – ಯಾರು ಬಲಿಷ್ಠನಾದ ಶತ್ರುವಿನಲ್ಲಿ ತಗ್ಗಿ ನಡೆದು ಕಾಲ ಕೂಡಿಬಂದಾಗ ಪ್ರಹಾರವನ್ನು ಮಾಡುವನೋ ಅವನ ಸಂಪತ್ತು ಎಂದಿಗೂ ತಗ್ಗಿನೆಡೆಗೇ ಹರಿಯುತ್ತಾ, ವಿರುದ್ಧವಾಗಿ ಹರಿಯದ ನದಿಯಂತೆ ಅವನನ್ನು ಬಿಟ್ಟು ಹೋಗುವುದಿಲ್ಲ. ಶತ್ರುವು ಸತ್ಯಸಂಧನು, ಧಾರ್ಮಿಕನು, ಸಜ್ಜನನು, ಸಹೋದರರೊಂದಿಗೆ ಇರುವವನು, ಬಲಿಷ್ಠನು ಮತ್ತು ಅನೇಕ ಬಾರಿ ವಿಜಯಿಯಾದವನು ಆಗಿದ್ದಲ್ಲಿ, ಅವನೊಂದಿಗೆ ಸಂಧಿಯನ್ನೇ ಮಾಡಿಕೊಳ್ಳತಕ್ಕದ್ದು. ಒಂದುವೇಳೆ ಪ್ರಾಣಹೋಗುವ ಸಂಶಯವಿದ್ದಾಗ ದುಷ್ಟನೊಂದಿಗೂ ಕೂಡ ಸಂಧಿಯನ್ನು ಮಾಡಿಕೊಳ್ಳಬಹುದು ಏಕೆಂದರೆ ಪ್ರಾಣವುಳಿದರೆ ಸಕಲ ರಾಜ್ಯವೂ ರಕ್ಷಿಸಲ್ಪಟ್ಟಂತೆ.

ಅನೇಕ ಯುದ್ಧಗಳಲ್ಲಿ ಗೆದ್ದವನೊಂದಿಗಂತೂ ವಿಶೇಷವಾಗಿ ಸಂಧಿಯನ್ನೇ ಮಾಡಿಕೊಳ್ಳಬೇಕು ಏಕೆಂದರೆ – ಅಂತವನಲ್ಲಿ ಸಂಧಿಯನ್ನು ಮಾಡಿಕೊಂಡರೆ ತನ್ನ ಇತರ ಶತ್ರುಗಳು ಬೇಗನೆ ವಶಕ್ಕೆ ಬಂದುಬಿಡುವರು. ಯುದ್ಧದಲ್ಲಿ ಜಯವು ದೊರೆಯುವುದರ ಬಗ್ಗೆ ಸಂದೇಹವಿದ್ದಲ್ಲಿ, ಸಮಬಲನೊಂದಿಗೂ ಕೂಡ ಸಂಧಿಯನ್ನು ಮಾಡತಕ್ಕದ್ದು. ಏಕೆಂದರೆ ಸಂದೇಹದಿಂದ ಕೂಡಿದ ಕಾರ್ಯವನ್ನು ಮಾಡಬಾರದೆಂದು ಬೃಹಸ್ಪತಿಯೇ ಹೇಳಿದ್ದಾನೆ. ಸಮಬಲರೊಂದಿಗೆ ಯುದ್ಧದಲ್ಲೂ ಜಯವು ನಿಶ್ಚಯವಲ್ಲ, ಆದ್ದರಿಂದ ಮೊದಲು ಸಾಮ, ಭೇದ ಮತ್ತು ದಂಡೋಪಾಯಗಳನ್ನು ಬಳಸಿ ನಂತರ ಯುದ್ಧಮಾರ್ಗವನ್ನು ಹಿಡಿಯಬೇಕು. ತನ್ನ ಬಲದ ಅಭಿಮಾನದಿಂದ ಅಂಧನಾಗಿ ಸಮಾನ ಬಲದವನೊಂದಿಗೆ ಸಂಧಿ ಮಾಡಿಕೊಳ್ಳದ ರಾಜನು, ಒಣಗಿರದ(ಪಕ್ವವಾಗಿರದ) ಮಡಕೆಗಳು ಒಂದಕ್ಕೊಂದು ತಗಲಿ ಹೇಗೆ ಒಡೆದು ಹೋಗುತ್ತವೆಯೋ ಹಾಗೆ ತನ್ನ ಶತ್ರುವಿನೊಂದಿಗೆ ತಾನೂ ಕೂಡ ನಾಶವಾಗುತ್ತಾನೆ. ಶಕ್ತಿಶಾಲಿಯೊಂದಿಗಿನ ಯುದ್ಧವು ಅಶಕ್ತನಿಗೆ ಮೃತ್ಯುವಿದ್ದಂತೆ. ಶಕ್ತ-ಅಶಕ್ತರ ಯುದ್ಧದಲ್ಲಿ ಬಲವಂತನು ಕಲ್ಲಿನ ಮಡಕೆಯಂತೆ ಭಗ್ನವಾಗದೆ ಇದ್ದು, ಅಶಕ್ತನು ಮಣ್ಣಿನ ಮಡಕೆಯಂತೆ ಭಗ್ನವಾಗುತ್ತಾನೆ. ಭೂಮಿ, ಮೈತ್ರಿ ಮತ್ತು ಧನ – ಈ ಮೂರು ಯುದ್ಧದಿಂದ ದೊರಕಬಹುದಾದ ಫಲಗಳು. ಎಲ್ಲಿ ಇದು ಯಾವುದೂ ಇಲ್ಲವೋ ಅಲ್ಲಿ ಯುದ್ಧವನ್ನು ಮಾಡಬಾರದು. ಸಿಂಹವು ಕಲ್ಲಿನ ತುಂಡುಗಳಿಂದ ಕೂಡಿದ ಇಲಿಯ ಬಿಲವನ್ನು ತೋಡಿದರೆ ಅದರ ಫಲ ಕೇವಲ (ಗಾತ್ರದಿಂದ ಸಣ್ಣದಾದ) ಇಲಿ ಅಥವಾ ಭಗ್ನವಾದ ಉಗುರುಗಳು. ಎಲ್ಲಿ ಯುದ್ಧದ ಫಲ ಕೇವಲ ಯುದ್ಧದ ಹೊರತು ಬೇರೇನಿಲ್ಲವೋ (ಅಂದರೆ ಭೂಮಿ, ಮೈತ್ರಿ ಅಥವಾ ಧನ – ಈ ಯಾವುದೂ ಸಿಗುವುದಿಲ್ಲವೋ), ಅಂತಹ ಯುದ್ಧವನ್ನು ತಾನಾಗಿಯೇ ಎಂದೂ ಪ್ರಾರಂಭಿಸಬಾರದು. ಬಲಿಷ್ಠನಾದ ಶತ್ರು ಯುದ್ಧಕ್ಕೆ ಬಂದಾಗ ಅಕ್ಷಯವಾದ ಸಂಪತ್ತನ್ನು ಇಚ್ಛಿಸುವವನು ವೈತಸೀ ವೃತ್ತಿಯನ್ನು (ನಮ್ರತೆಯನ್ನು) ಆಶ್ರಯಿಸಬೇಕೇ ಹೊರತು ಭುಜಂಗ ವೃತ್ತಿಯನ್ನಲ್ಲ (ಉದ್ದಟತನವನ್ನಲ್ಲ) [ವೇತಸ ಅಂದರೆ ಜೊಂಡುಹುಲ್ಲು. ನದಿಯ ದಡದಲ್ಲಿ ಬೆಳೆಯುವ ಅದು ಪ್ರವಾಹದ ಸಮಯದಲ್ಲಿ ನಮ್ರತೆಯಿಂದ ಬಗ್ಗಿ ತನ್ನನ್ನು ತಾನು ಕಾಪಾಡಿಕೊಳ್ಳುತ್ತದೆ. ಭುಜಂಗ ಅಂದರೆ ಸರ್ಪ, ಹೆಡೆಯನ್ನು ಬಿಚ್ಚಿ ಆಕ್ರಮಣವನ್ನು ಮಾಡುತ್ತದೆ.] ವೈತಸೀ ವೃತ್ತಿಯನ್ನು ಆಚರಿಸುವವನು ಮಹತ್ತರವಾದ ಸಂಪತ್ತನ್ನು ಗಳಿಸುತ್ತಾನೆ, ಆದರೆ ಭುಜಂಗ ವೃತ್ತಿಯನ್ನು ಆಚರಿಸುವವನು ಕೇವಲ ಮೃತ್ಯುವನ್ನು ಪಡೆಯುತ್ತಾನೆ. ಆಮೆಯು ಹೇಗೆ ದೇಹವನ್ನು ತನ್ನ ಚಿಪ್ಪಿನೊಳಗೆ ಸಂಕುಚಿತಗೊಳಿಸಿಕೊಂಡು ತನ್ನ ಮೇಲೆ ಆಗುವ ಪ್ರಹಾರವನ್ನು ಸಹಿಸುತ್ತದೆಯೋ, ಹಾಗೆ ಸಹಿಸಿಕೊಂಡು, ಬುದ್ಧಿವಂತನು ಸರಿಯಾದ ಸಮಯದಲ್ಲಿ ಕೃಷ್ಣಸರ್ಪದಂತೆ ಎದ್ದು ನಿಲ್ಲಬೇಕು. ಯುದ್ಧದಲ್ಲಿ ಆಸಕ್ತಿಯನ್ನು ತೋರದೆ, ಸಾಮೋಪಾಯದಿಂದ ಶಮನ ಮಾಡಬೇಕು. ಯುದ್ಧದಲ್ಲಿನ ಗೆಲುವು ಅನಿಶ್ಚಯವಾದ್ದರಿಂದ ಯುದ್ಧದಲ್ಲಿ ಅತ್ಯುತ್ಸಾಹವನ್ನು ತೋರಬಾರದು. ಬಲಿಷ್ಠನಾದ ಶತ್ರುವಿನೊಂದಿಗೆ ಯುದ್ಧವನ್ನು ಮಾಡಬೇಕು ಎಂದು ಹೇಳಿದ ನಿದರ್ಶನ ಎಲ್ಲೂ ಇಲ್ಲ. ಮೋಡವು ಬಲಶಾಲಿಯಾದ ವಾಯುವಿನ ದಿಕ್ಕಿಗೆ ವಿರುದ್ಧವಾಗಿ ನಡೆಯುವುದಿಲ್ಲ.”

ಹೀಗೆ ಉಜ್ಜೀವಿಯು ಸಾಮೋಪಾಯದಿಂದ ಸಂಧಿಯನ್ನು ಮಾಡುವುದರ ವಿಚಾರವಾಗಿ ತಿಳಿಸಿದನು. ಅದನ್ನು ಕೇಳಿದ ಮೇಘವರ್ಣನು ಸಂಜೀವಿಗೆ ಹೇಳಿದನು – “ಭದ್ರ, ನಿನ್ನ ಅಭಿಪ್ರಾಯವನ್ನು ಕೂಡ ಕೇಳಲಿಚ್ಛಿಸುವೆನು”

ಸಂಜೀವಿಯಿಂದ ಯುದ್ಧದ ಸಲಹೆ

ಸಂಜೀವಿ – “ದೇವ, ಶತ್ರುವಿನೊಂದಿಗೆ ಸಂಧಿಯನ್ನು ಮಾಡಬೇಕೆಂದು ನನಗೆ ಅನಿಸುತ್ತಿಲ್ಲ. ಉತ್ತಮವಾದ ರೀತಿಯಲ್ಲಿ ಮಾಡಿಕೊಂಡ ಸಂಧಿಯಿಂದಲೂ ಕೂಡ ಶತ್ರುವಿನೊಂದಿಗೆ ಕೂಡಬಾರದು. ಏಕೆಂದರೆ ನೀರು ಬಿಸಿಯಾದ ಮಾತ್ರಕ್ಕೆ ಬೆಂಕಿನ್ನು ಆರಿಸದೇ ಇರುವುದೇ ? ಅಲ್ಲದೆ ಅವನು (ಅರಿಮರ್ದನ ಗೂಬೆರಾಜ) ಕ್ರೂರ, ಲೋಭಿ ಹಾಗೂ ಅಧಾರ್ಮಿಕ. ಆದ್ದರಿಂದ ಅವನೊಂದಿಗೆ ಸಂಧಿಯನ್ನು ಮಾಡಲೇಬಾರದು. ಸತ್ಯ ಹಾಗೂ ಧರ್ಮವನ್ನು ಬಿಟ್ಟವರೊಂದಿಗೆ ಎಂದಿಗೂ ಸಂಧಿಯನ್ನು ಮಾಡಿಕೊಳ್ಳಬಾರದು. ಅಂತಹ ದುಷ್ಟರೊಂದಿಗೆ ಉತ್ತಮ ರೀತಿಯಲ್ಲಿ ಮಾಡಿಕೊಂಡ ಸಂಧಿಯೂ ಕೂಡ ಶೀಘ್ರದಲ್ಲೇ ವಿಕಾರ ಹೊಂದುತ್ತದೆ.  ಆದ್ದರಿಂದ ಅವನೊಂದಿಗೆ ಯುದ್ಧವನ್ನು ಮಾಡಬೇಕೆಂದು ನನ್ನ ಅಭಿಪ್ರಾಯ. ಕ್ರೂರಿಯಾದ, ಲೋಭಿಯಾದ, ಆಲಸಿಯಾದ, ಸತ್ಯನುಡಿಯದ, ಜಾಗರೂಕನಲ್ಲದ, ಹೆದರುವ, ಅಸ್ಥಿರನಾದ, ಮೂಢನಾದ, ಯುದ್ಧದಲ್ಲಿ ಉತ್ಸಾಹವಿಲ್ಲದ ಶತ್ರುವನ್ನು ಸುಲಭವಾಗಿ ನಾಶಮಾಡಬಹುದು. ಅಲ್ಲದೆ ನಾವು ಅವನಿಂದ ಸೋತಿದ್ದೇವೆ. ಈಗ ಸಂಧಾನದ ಮಾತನ್ನಾಡಿದರೆ ಅವನು ಅತ್ಯಂತ ಕೋಪಗೊಳ್ಳುವನು. (ಸಾಮ, ದಾನ, ಭೇದ ಹಾಗೂ ದಂಡ/ಯುದ್ಧದಲ್ಲಿ) ನಾಲ್ಕನೆಯ ಉಪಾಯವಾದ ಯುದ್ಧದಿಂದ ಕಾರ್ಯಸಾಧ್ಯವಿದ್ದಲ್ಲಿ, ಯಾವ ಬುದ್ಧಿವಂತನು ತಾನೆ ಶಾಂತಿಮಾರ್ಗವನ್ನು ಅನುಸರಿಸುವನು ? ಉಷ್ಣೋಪಚಾರದಿಂದ ಕಡಿಮೆಮಾಡಬೇಕಾದ ಆಮಜ್ವರವನ್ನು (ಅಜೀರ್ಣಜ್ವರ) ನೀರಿನ ಸ್ನಾನದ ಮೂಲಕ ಕಡಿಮೆಮಾಡುತ್ತಾರೆಯೇ ? ಶಾಂತಿಯ ಮಾತುಗಳು ಕೋಪಗೊಂಡ ಶತ್ರುವನ್ನು ಸಮಾಧಾನ ಪಡಿಸುವುದಿರಲಿ, ಬದಲಿಗೆ ಆತನನ್ನು ಇನ್ನೂ ಕೆರಳಿಸುತ್ತದೆ. ಬಿಸಿ ತುಪ್ಪಕ್ಕೆ ನೀರಿನ ಹನಿಗಳು ಬಿದ್ದರೆ ತುಪ್ಪ ಇನ್ನೂ ಸಿಡಿಯುತ್ತದೆ.

ಉಜ್ಜೀವಿಯು ಶತ್ರುವು ಬಲಿಷ್ಠನೆಂದು ಹೇಳುತ್ತಾನೆ. ಆದರೆ ಅದೂ ಸರಿಯಾದ ಕಾರಣವಲ್ಲ. ತನಗಿಂತ ಗಾತ್ರದಲ್ಲಿ ದೊಡ್ಡದಾದ ಮತ್ತಗಜದ ತಲೆಯ ಮೇಲೆ ಸಿಂಹವು ಕಾಲಿರಿಸುತ್ತದೆ. ಹೇಗೆ ಸಿಂಹವು ಆನೆಯನ್ನು ಕೊಂದು ಸಾಮ್ರಾಜ್ಯವನ್ನು ಪಡೆಯುತ್ತದೆಯೋ ಹಾಗೆ ಉತ್ಸಾಹದಿಂದ ಕೂಡಿದವನು ಅಶಕ್ತನಾದರೂ ಕೂಡ ಶಕ್ತನಾದ ಶತ್ರುವನ್ನು ಕೊಲ್ಲಬಲ್ಲನು. ಬಲದಿಂದ ಶತ್ರುವನ್ನು ಕೊಲ್ಲಲಾಗದಿದ್ದರೆ, ಭೀಮನು ಸ್ತ್ರೀರೂಪವನ್ನು ಧರಿಸಿ (ಸೈರಂಧ್ರಿ) ಹೇಗೆ ಕೀಚಕನನ್ನು ಕೊಂದನೋ ಹಾಗೆ ಕಪಟದಿಂದ ಶತ್ರುವನ್ನು ಕೊಲ್ಲಬೇಕು. ಯಮನಂತೆ ಕಠೋರವಾಗಿ ದಂಡಿಸುವಂಥ ರಾಜನ ವಶದಲ್ಲಿ ಶತ್ರುಗಳು ಇರುತ್ತಾರೆ. ದಯಾಳುವಾದ ರಾಜನನ್ನು ಶತ್ರುಗಳು ತೃಣಸಮಾನನಂತೆ ಕಾಣುತ್ತಾರೆ. ಯಾರು ತನ್ನ ತೇಜಸ್ಸಿನಿಂದ ತೇಜಸ್ವೀ ಪುರುಷರನ್ನು ಶಮನಗೊಳಿಸಲಾರನೋ (ಅಂದರೆ ತನ್ನ ಪ್ರತಾಪದಿಂದ ಪ್ರತಾಪಿಗಳನ್ನು ಸೋಲಿಸಲಾರನೋ), ಕೇವಲ ತಾಯಿಯ ಯೌವನವನ್ನು ನಾಶಮಾಡುವ ಅಂತವನ ಜನ್ಮದಿಂದೇನು ಪ್ರಯೋಜನ ? ವೈರಿಗಳ ರಕ್ತವೆಂಬ ಕುಂಕುಮದಿಂದ ಲೇಪಿಸಲ್ಪಡದ ಲಕ್ಷ್ಮಿಯು (ಸಂಪತ್ತು) ಕಮನೀಯವಾದರೂ ವೀರರಲ್ಲಿ ಅದು ಪ್ರೀತಿಯನ್ನು ಉಂಟುಮಾಡಲಾರದು. ಯಾವ ಭೂಪಾಲನ ಭೂಮಿಯು ವೈರಿಗಳ ರಕ್ತದಿಂದ ಹಾಗೂ ಶತ್ರು ಸ್ತ್ರೀ ಕಣ್ಣೀರಿನಿಂದ ತೋಯಿಸಲ್ಪಡುವುದಿಲ್ಲವೋ ಅಂಥ ರಾಜನ ಜೀವನವು ಶ್ಲಾಘ್ಯವೇ ?”

ಹೀಗೆ ಸಂಜೀವಿಯು ಯುದ್ಧವನ್ನು ಹೂಡಬೇಕೆಂದು ವಿಜ್ಞಾಪಿಸಿಕೊಂಡನು. ಅದನ್ನು ಕೇಳಿದ ಮೇಘವರ್ಣನು ಅನುಜೀವಿಯನ್ನು ಕೇಳಿದನು – “ಭದ್ರ, ನೀನೂ ಕೂಡ ನಿನ್ನ ಅಭಿಪ್ರಾಯವನ್ನು ತಿಳಿಸು”

ಅನುಜೀವಿಯಿಂದ ಯಾನದ ಸಲಹೆ

ಅನುಜೀವಿ – “ದೇವ, ಅರಿಮರ್ದನನು ದುಷ್ಟನು, ಬಲಿಷ್ಠನು ಹಾಗೂ ಶಿಷ್ಟಾಚಾರವಿಲ್ಲದವನು. ಅವನೊಂದಿಗೆ ಸಂಧಿ ಅಥವಾ ಯುದ್ಧವನ್ನು ಮಾಡುವುದು ಯೋಗ್ಯವಲ್ಲ, ಕೇವಲ ಯಾನವೇ (ಪ್ರಯಾಣ/ಪಲಾಯನ) ಉಚಿತವು. ಅತ್ಯಂತ ಬಲಶಾಲಿಯಾದ, ದುಷ್ಟನಾದ ಮತ್ತು ಶಿಷ್ಟಾಚಾರ ರಹಿತನಾದವನ ಜೊತೆ ಸಂಧಿ ಅಥವಾ ಯುದ್ಧವನ್ನು ಮಾಡಲೇಬಾರದು, ಅಲ್ಲಿ ಯಾನವೇ ಪ್ರಶಸ್ತವಾದುದು. ಯಾನವು ಎರಡು ರೀತಿಯದು – ಶತ್ರುವಿನ ಭಯದಿಂದ ರಕ್ಷಿಸಿಕೊಳ್ಳಲು ಪಲಾಯನ ಮಾಡುವುದು ಒಂದು ಬಗೆ ಮತ್ತು ಕಾಲಾಂತರದಲ್ಲಿ ಶತ್ರುವನ್ನು ಮಣಿಸಲು ಇಂದು ತನ್ನ ಸ್ಥಾನದಿಂದ ದೂರ ಹೋಗುವುದು ಮತ್ತೊಂದು ಬಗೆ. ಜಯವನ್ನಿಚ್ಛಿಸಿ ಯಾನವನ್ನು ಮಾಡಿದ ರಾಜನಿಗೆ ಕಾರ್ತೀಕ ಅಥವಾ ಚೈತ್ರ ಮಾಸದಲ್ಲಿ ಶತ್ರುವಿನ ಮೇಲೆ ಆಕ್ರಮಣ ಮಾಡುವುದು ಪ್ರಶಸ್ತವು ಹಾಗೂ ಬೇರೆ ಮಾಸಗಳು ಪ್ರಶಸ್ತವಲ್ಲವೆಂದು ಹೇಳಲ್ಪಟ್ಟಿದೆ. ಯಾವುದಾದರೂ ವ್ಯಸನದಲ್ಲಿ ಸಿಲುಕಿದ ಅಥವಾ ಯಾವುದಾದರೂ ದೌರ್ಬಲ್ಯಕ್ಕೆ ತುತ್ತಾದ ಶತ್ರುವಿನ ಮೇಲೆ ಆಕ್ರಮಣವನ್ನು ಎಲ್ಲಾ ಕಾಲದಲ್ಲಿಯೂ ಮಾಡಬಹುದೆಂದು ಹೇಳಲ್ಪಟ್ಟಿದೆ. ಶೂರರಿಂದ, ಆಪ್ತರಿಂದ ಹಾಗೂ ಮಹಾ ಬಲಶಾಲಿಗಳಿಂದ ಸ್ವಸ್ಥಾನವನ್ನು ಸುದೃಢವಾಗಿಸಿ ನಂತರ ತನ್ನ ಗೂಢಾಚಾರರು ಮೊದಲೇ ಹೋಗಿ ನೆಲೆನಿಂತಿರುವ ಪರದೇಶಕ್ಕೆ ಹೋಗಬೇಕು. ಧಾನ್ಯಾದಿಗಳು ಒಳಗೆ ಬರುವ ಮಾರ್ಗವನ್ನು ತಿಳಿಯದೆ, ಆಪ್ತರ ಬಲವನ್ನು ತಿಳಿಯದೆ, ನೀರು ಸಸ್ಯಾದಿಗಳ ಸ್ಥಿತಿಗತಿಗಳನ್ನು ತಿಳಿದುಕೊಳ್ಳದೆ ಯಾರು ಪರರಾಷ್ಟ್ರಕ್ಕೆ ಹೋಗುವನೋ ಅವನು ಮತ್ತೆ ತನ್ನ ಸ್ವರಾಷ್ಟ್ರಕ್ಕೆ ಬರಲಾರ. ಅಂದರೆ ಸಾಧಕ ಬಾಧಕಗಳನ್ನು ಅರಿಯದೇ ತನ್ನ ದೇಶವನ್ನು ಬಿಟ್ಟು ಹೊರಟ ರಾಜನು ಪರಾಭವಗೊಳ್ಳುವುದರಿಂದ ತನ್ನ ದೇಶಕ್ಕೆ ಮತ್ತೆ ಹಿಂದಿರುಗಲಾರ. ಆದ್ದರಿಂದ ಈಗ ನಿರ್ಗಮನವೇ ಉಚಿತವಾದ ಮಾರ್ಗ. ಬಲಿಷ್ಠ ಹಾಗೂ ಪಾಪಿಷ್ಟರಾದ ಶತ್ರುವಿನೊಂದಿಗೆ ಸಂಧಾನ ಅಥವಾ ಯುದ್ಧವನ್ನು ಮಾಡಬಾರದು. ಬುದ್ಧಿವಂತರಾದವರು ಕಾರ್ಯದ ಲಾಭವನ್ನು ಅಪೇಕ್ಷಿಸಿ ನಿರ್ಗಮನವನ್ನೇ ಮಾಡುತ್ತಾರೆ. ಟಗರು ಪುನಃ ಪ್ರಹಾರವನ್ನು ಮಡಲೆಂದೇ ಹಿಂದೆ ಸರಿಯುತ್ತದೆ ಹಾಗೂ ಸಿಂಹವು ಕೋಪದಿಂದ ತನ್ನ ದೇಹವನ್ನು ಸಂಕುಚಿತಗೊಳಿಸುವುದು ಮತ್ತೆ ತನ್ನ ಬೇಟೆಯ ಮೇಲೆ ಹಾರಲೆಂದು. ಹಾಗೆಯೇ ತಮ್ಮ ಹೃದಯದಲ್ಲಿ ಶತ್ರುತ್ವವು ನಲೆಗೊಂಡವರು ರಹಸ್ಯ ಮಂತ್ರಾಲೋಚನೆಗಳಿಂದ ಉಪಾಯವನ್ನು ಮಾಡುತ್ತಾ ಕಾಲವನ್ನು ಸಹಿಸುತ್ತಾರೆ. ಯಾರು ಬಲಶಾಲಿಯಾದ ಶತ್ರುವನ್ನು ನೋಡಿ ದೇಶತ್ಯಾಗವನ್ನು ಮಾಡುತ್ತಾರೋ ಅವನು ಯುಧಿಷ್ಠಿರನಂತೆ ಅಭಿವೃದ್ಧಿಹೊಂದಿ ರಾಜ್ಯವನ್ನು ಪಡೆಯುತ್ತಾನೆ. ಯಾವ ದುರ್ಬಲನು ಅಹಂಕಾರದಿಂದ ಬಲಶಾಲಿಯಾದ ಶತ್ರುವಿನೊಂದಿಗೆ ಯುದ್ಧವನ್ನು ಮಾಡುತ್ತಾನೋ ಅವನು ಶತ್ರುವಿನ ಮನೋರಥವನ್ನು ಪೂರೈಸುವುದಲ್ಲದೆ ತನ್ನ ಹಾಗೂ ತನ್ನ ಕುಲದ ನಾಶಕ್ಕೆ ಕಾರಣನಾಗುತ್ತಾನೆ. ಆದ್ದರಿಂದ ಬಲಶಾಲಿಯಾದ ಶತ್ರುವಿನ ಆಕ್ರಮಣಕ್ಕೆ ಒಳಗಾಗಿರುವ ನಾವು ಈಗ ಪಲಾಯನ ಮಾಡುವ ಸಮಯವೇ ಹೊರತು ಸಂಧಿ ಅಥವಾ ಯುದ್ಧದ ಸಮಯವಲ್ಲ.”

ಹೀಗೆ ಅನುಜೀವಿಯು ನಿರ್ಗಮನದ ಸಲಹೆಯನ್ನು ಕೊಟ್ಟನು. ಅವನ ಮಾತುಗಳನ್ನು ಕೇಳಿದ ರಾಜನು ಪ್ರಜೀವಿಗೆ ಹೇಳಿದನು – “ಭದ್ರ, ನೀನೂ ಕೂಡ ನಿನ್ನ ಅಭಿಪ್ರಾಯವನ್ನು ಹೇಳು”

ಪ್ರಜೀವಿಯಿಂದ ಆಸನದ ಸಲಹೆ

ಪ್ರಜೀವಿ – “ದೇವ, ನನಗೆ ಸಂಧಿ, ಯುದ್ಧ ಅಥವಾ ಯಾನ – ಈ ಮೂರು ಉಪಾಯಗಳೂ ಸರಿಯಲ್ಲವೆಂದು ತೋರುತ್ತಿದೆ. ಆಸನದ (ತನ್ನ ಸ್ಥಾನವನ್ನು ತ್ಯಜಿಸದೆ ಅಲ್ಲೇ ಇರುವುದು) ಉಪಾಯವೇ ಸರಿಯೆಂದೆನಿಸುತ್ತಿದೆ. ಮೊಸಳೆಯು ಸ್ವಸ್ಥಾನವಾದ ನೀರಿನಲ್ಲಿದ್ದಾಗ ಆನೆಯನ್ನು ಕೂಡ ಎಳೆಯಬಲ್ಲದು. ಆದರೆ ತನ್ನ ಸ್ಥಾನವನ್ನು ಬಿಟ್ಟರೆ ನಾಯಿಯಿಂದ ಕೂಡ ಸೋಲನ್ನು ಕಾಣುತ್ತದೆ. ಬಲಶಾಲಿಯಿಂದ ಆಕ್ರಮಣಕ್ಕೆ ಒಳಗಾದಾಗ ರಾಜನು ಪ್ರಯತ್ನಪೂರ್ವಕವಾಗಿ ತನ್ನ ದುರ್ಗದಲ್ಲೇ (ಕೋಟೆ) ಇರಬೇಕು. ಅಲ್ಲಿದ್ದುಕೊಂಡೇ ತನ್ನನ್ನು ಬಿಡಿಸಿಕೊಳ್ಳುವುದಕ್ಕೆ ಮಿತ್ರರನ್ನು ಕರೆಸಿಕೊಳ್ಳಬೇಕು. ಯಾರು ಶತ್ರುವಿನ ಆಗಮನವನ್ನು ಕೇಳಿ ಭಯದಿಂದ ತನ್ನ ಸ್ಥಾನವನ್ನು ತ್ಯಜಿಸುವನೋ ಅವನು ಮತ್ತೆ ತನ್ನ ರಾಜ್ಯಕ್ಕೆ ಪ್ರವೇಶವನ್ನು ಮಾಡಲಾರ. ಹಲ್ಲಿಲ್ಲದ ಸರ್ಪ, ಮದವಿಲ್ಲದ ಆನೆ ಮತ್ತು ತನ್ನ ಸ್ಥಾನದಿಂದ ಹೊರಬಂದ ರಾಜ – ಈ ಮೂವರು ಎಲ್ಲರಿಂದಲೂ ಸೋಲಿಗೊಳಗಾಗುತ್ತಾರೆ. ತನ್ನ ಸ್ಥಾನದಲ್ಲಿ ಇರುವ ಒಬ್ಬ ಮನುಷ್ಯನು ಬಲಷ್ಠರಾದ ನೂರು ಶತ್ರುಗಳನ್ನು ಯುದ್ಧದಲ್ಲಿ ಎದುರಿಸಲು ಶಕ್ತನಾಗಿರುತ್ತಾನೆ. ಆದ್ದರಿಂದ ಸ್ವಸ್ಥಾನವನ್ನು ಬಿಟ್ಟುಹೋಗಬಾರದು. ಕೋಟೆಯನ್ನು ಧಾನ್ಯಾದಿಗಳಿಂದ ಮತ್ತು ಆಪ್ತರಿಂದ ಸುದೃಢ ಪಡಿಸಿ, ಕೋಟೆಯ ಪ್ರಾಕಾರವನ್ನು ಕಂದಕಗಳಿಂದ ರಕ್ಷಿಸಿ, ಶಸ್ತ್ರಾದಿಗಳಿಂದ ತುಂಬಿಸಿ ಕೋಟೆಯಲ್ಲಿ ಇರಬೇಕು. ಹೀಗೆ ಯುದ್ಧದ ನಿರ್ಧಾರವನ್ನು ಮಾಡಿ ಕೋಟೆಯ ಮಧ್ಯದಲ್ಲಿ ನಿಲ್ಲಬೇಕು. ಜೀವವುಳಿದರೆ ಸಕಲ ಭೂಮಿಯು ಪ್ರಾಪ್ತವಾಗುತ್ತದೆ ಅಥವಾ ಮಡಿದರೆ ಸ್ವರ್ಗ ಪ್ರಾಪ್ತವಾಗುತ್ತದೆ. ಹೇಗೆ ಒಂದು ಸ್ಥಳದಲ್ಲಿ ಒಟ್ಟಿಗೆ ಬೆಳೆದು ನಿಂತ ಲತೆಗಳು ಪ್ರತಿಕೂಲವಾದ ಗಾಳಿಗೂ ನಾಶವಾಗುವುದಿಲ್ಲವೋ, ಹಾಗೆ ಅಶಕ್ತನಾಗಿದ್ದರೂ ಒಂದು ಸ್ಥಾನವನ್ನು ಆಶ್ರಯಿಸಿ ನಿಂತಾಗ ಬಲಶಾಲಿಯಿಂದ ಕೂಡ ಬಂಧಿಸಲ್ಪಡಲಾರನು. ಏಕಾಂಗಿಯಾದ ದೊಡ್ಡ ಮರವು ಬಲಿಷ್ಠವಾಗಿ ಹಾಗೂ ಚೆನ್ನಾಗಿ ಬೆಳೆದು ನಿಂತಿದ್ದರೂ ಅನಿರೀಕ್ಷಿತವಾಗಿ ಬಂದ ಗಾಳಿಯಿಂದ ಬುಡಮೇಲಾಗುತ್ತದೆ. ಆದರೆ ಮರಗಳು ಒಂದು ಪ್ರದೇಶದಲ್ಲಿ ಒಟ್ಟಿಗೆ ಬೆಳೆದು ನಿಂತಾಗ ಅವುಗಳು ಒಂದೇ ಕಡೆ ಇರುವ ಕಾರಣ ವೇಗವಾದ ಗಾಳಿಯಿಂದಲೂ ಕೂಡ ನಾಶವಾಗುವುದಿಲ್ಲ. ಹಾಗಯೇ ಶೂರನಾದವನು ಏಕಾಂಗಿಯಾಗಿ ಇದ್ದರೆ ಶತ್ರುಗಳು ಅವನನ್ನು ಸೋಲಿಸಲು ಸಾಧ್ಯ ಎಂದು ತಿಳಿಯುತ್ತಾರೆ ಮತ್ತು ಆತನನ್ನು ಹಿಂಸಿಸುತ್ತಾರೆ ಕೂಡ.”

ಹೀಗೆ ಪ್ರಜೀವಿಯು ಸ್ವಸ್ಥಾನದಲ್ಲಿ ಇರಬೇಕೆಂದು ಸಲಹೆಯನ್ನು ನೀಡಿದನು. ಅದನ್ನು ಕೇಳಿದ ರಾಜನು ಜಿರಂಜೀವಿಗೆ ಹೇಳಿದನು – “ಭದ್ರ, ನೀನೂ ಕೂಡ ನಿನ್ನ ಅಭಿಪ್ರಾಯವನ್ನು ಹೇಳು”

ಚಿರಂಜೀವಿಯಿಂದ ಸಂಶ್ರಯದ ಸಲಹೆ

ಚಿರಂಜೀವಿ – “ದೇವ, ಆರು ಗುಣಗಳಲ್ಲಿ (ಸಂಧಿ, ವಿಗ್ರಹ/ಯುದ್ಧ, ಯಾನ, ಆಸನ, ದ್ವೈಧೀಭಾವ ಮತ್ತು ಸಂಶ್ರಯ) ನನಗೆ ಸಂಶ್ರಯವೇ (ದುರ್ಬಲನಾದ ರಾಜನು ಬಲವಂತನ ಆಶ್ರಯ ಪಡೆಯುವುದು) ಸರಿಯೆಂದು ಕಾಣುತ್ತದೆ. ಆದ್ದರಿಂದ ಸಂಶ್ರಯವನ್ನೇ ಅನುಷ್ಠಾನಗೊಳಿಸಬೇಕು. ಸಮರ್ಥನಾದ ಹಾಗೂ ತೇಜಸ್ವಿಯಾದವನು ಇತರರ ಸಹಾಯವಿಲ್ಲದಿದ್ದರೆ ಏನು ತಾನೆ ಮಾಡಬಲ್ಲನು ? ವಾಯುವಿಲ್ಲದಿದ್ದರೆ ಉರಿಯುತ್ತಿರುವ ಬೆಂಕಿಯು ತಾನಾಗಿಯೇ ನಂದಿ ಹೋಗುವುದಿಲ್ಲವೇ ? ಮನುಷ್ಯರಿಗೆ ಸಂಘವು ಶ್ರೇಯಸ್ಕರವಾದುದು, ವಿಶೇಷವಾಗಿ ಸ್ವಜಾತಿಯವರೊಂದಿಗೆ ಮಾಡುವ ಸಂಘವು. ಹೊಟ್ಟಿನ ಜೊತೆಗಿದ್ದರೆ ಮಾತ್ರ ಅಕ್ಕಿಯು ಮೊಳಕೆಯೊಡೆಯುತ್ತದೆಯೇ ಹೊರತು ಹೊಟ್ಟಿನಿಂದ ಬೇರೆಯಾದರೆ ಮೊಳಕೆಯೊಡೆಯುವುದಿಲ್ಲ. ಆದ್ದರಿಂದ ನೀನು ಇಲ್ಲಿಯೇ ಇದ್ದುಕೊಂಡು ಆಪತ್ತಿಗೆ ಪ್ರತೀಕಾರವನ್ನು ಮಾಡಬಲ್ಲ ಯಾರಾದರೂ ಸಮರ್ಥನನ್ನು ಆಶ್ರಯಿಸಬೇಕು. ಒಂದು ವೇಳೆ ನೀನು ಸ್ವಸ್ಥಾನವನ್ನು ಬಿಟ್ಟು ಬೇರೆಡೆಗೆ ಹೋದರೆ ಆಗ ಯಾರೂ ಬಾಯಿಮಾತಿನ ಸಹಾಯವನ್ನೂ ಮಾಡಲಾರರು. ವನವನ್ನು ಸುಡುವುದರಲ್ಲಿ ಅಗ್ನಿಗೆ ವಾಯುವು ಗೆಳೆಯನಾಗಿ ಸಹಾಯವನ್ನು ಮಾಡುತ್ತಾನೆ. ಆದರೆ ಅದೇ ವಾಯು ದೀಪವನ್ನು ಕೂಡ ಆರಿಸುತ್ತಾನೆ. ಹಾಗಾಗಿ ದುರ್ಬಲರಿಗೆ ಯಾರು ತಾನೆ ಸ್ನೇಹಿತರಾಗುತ್ತಾರೆ ?

ಬಲಶಾಲಿಯ ಆಶ್ರಯವನ್ನೇ ತೆಗೆದುಕೊಳ್ಳಬೇಕೆಂಬ ನಿಯಮವೇನೂ ಇಲ್ಲ. ಹಲವು ದುರ್ಬಲರ ಆಶ್ರಯವು ರಕ್ಷಣೆಯನ್ನೇ ಕೊಡುತ್ತದೆ. ದುರ್ಬಲವಾದ ಬಿದಿರು ಇತರ ಬಿದಿರುಗಳ ಜೊತೆಗೆ ಇರುವುದರಿಂದ ಹೇಗೆ ನಾಶವಾಗುವುದಿಲ್ಲವೋ ಹಾಗೆ ದುರ್ಬಲನಾದರೂ ಸಂಘಟಿತನಾದ ರಾಜನು ನಾಶವನ್ನು ಹೊಂದುವುದಿಲ್ಲ. ಹೀಗಿದ್ದಾಗ ಉತ್ತಮರ ಆಶ್ರಯವು ದೊರಕಿದರೆ ಬೇರೆ ಹೇಳುವುದೇನಿದೆ ? ಮಹಾಪುರುಷರ ಸಂಪರ್ಕದಿಂದ ಯಾರಿಗೆ ತಾನೆ ಲಾಭವಾಗುವುದಿಲ್ಲ ? ಕಮಲದಳದ ಮೇಲಿರುವ ಕಾರಣದಿಂದ ನೀರಿನ ಹನಿಯು ಮುಕ್ತಾಮಣಿಯಂತೆ ಶೋಭಿಸುತ್ತದೆ. ಸಂಶ್ರಯವಿಲ್ಲದೆ ಶತ್ರುವಿನ ಪ್ರತೀಕಾರವಾಗುವುದಿಲ್ಲ. ಆದ್ದರಿಂದ ಆಶ್ರಯವನ್ನು ಗಳಿಸಬೇಕೆಂದು ನನ್ನ ಅಭಿಪ್ರಾಯ.” ಹೀಗೆ ಚಿರಂಜೀವಿಯು ಸಲಹೆಯನ್ನು ಕೊಟ್ಟನು.

ಹೀಗೆ ಎಲ್ಲರಿಂದ ಸಲಹೆಯನ್ನು ಪಡೆದ ಮೇಘವರ್ಣನು ಕುಲಕ್ರಮದಲ್ಲಿ ಬಂದ, ದೂರದರ್ಶಿಯಾದ, ಸಕಲ ನೀತಿಶಾಸ್ತ್ರದಲ್ಲಿ ಪಾರಂಗತನಾದ ಸ್ಥಿರಜೀವಿ ಎಂಬ ತನ್ನ ತಂದೆಯ ವೃದ್ಧ ಸಚಿವನಿಗೆ ನಮಿಸಿ ಹೇಳಿದನು – “ತಂದೆ, ನೀನು ಇಲ್ಲಿ ಉಪಸ್ಥಿತನಿದ್ದರೂ ಈ ಎಲ್ಲಾ ಸಚಿವರ ಅಭಿಪ್ರಾಯವನ್ನು ಕೇಳಿದ್ದು ಅವರನ್ನು ಪರೀಕ್ಷಿಸಲೆಂದು ಹಾಗೂ ಇದೆಲ್ಲವನ್ನೂ ಕೇಳಿದ ನೀನು ಉಚಿತವಾದ ಸಲಹೆಯನ್ನು ನನಗೆ ಆದೇಶಿಸಲೆಂದು. ಆದ್ದರಿಂದ ಯಾವುದು ಯೋಗ್ಯವೋ ಅದನ್ನು ನನಗೆ ಆದೇಶಿಸು.”

ಸ್ಥಿರಜೀವಿಯಿಂದ ದ್ವೈಧೀಭಾವದ ಸಲಹೆ

ಸ್ಥಿರಜೀವಿ – “ವತ್ಸ, ಎಲ್ಲಾ ಸಚಿವರು ನೀತಿಶಾಸ್ತ್ರವನ್ನು ಆಧರಿಸಿ ಸಲಹೆಯನ್ನು ನೀಡಿದ್ದಾರೆ. ಅವೆಲ್ಲವನ್ನು ಕಾಲಕ್ಕೆ ಸರಿಯಾಗಿ ಉಪಯೋಗಿಸಬಹುದು. ಆದರೆ ಈಗ ದ್ವೈಧೀಭಾವವನ್ನು (ವಿಶ್ವಾಸವನ್ನು ತೋರಿಸುತ್ತಲೇ ಅವಿಶ್ವಾಸದಿಂದಿರುವುದು) ಅನುಸರಿಸುವ ಸಮಯ. ಬಲಶಾಲಿಯಾದ ಶತ್ರುವಿನೊಂದಿಗೆ ಸಂಧಿ ಅಥವಾ ಯುದ್ಧವನ್ನು ಮಾಡಿದರೂ ದ್ವೈಧೀಭಾವವನ್ನು ಆಶ್ರಯಿಸಿ ಅವನಲ್ಲಿ ವಿಶ್ವಾಸವನ್ನು ಇಡದೆಯೇ ಇರಬೇಕು. ಆನಂತರ ಸ್ವಯಂ ಅವಿಶ್ವಾಸದಿಂದ ಇದ್ದು ಶತ್ರುವಿಗೆ ಲೋಭವನ್ನು ತೋರಿಸುತ್ತಾ ವಿಶ್ವಾಸಗಳಿಸಿ ಸುಲಭವಾಗಿ ನಾಶಮಾಡಬಹುದು. ಬೆಲ್ಲವು ಕಫವನ್ನು ಒಮ್ಮೆ ಹೆಚ್ಚಿಸಿ ನಂತರ ಸುಲಭವಾಗಿ ಹೇಗೆ ಅದನ್ನು ನಾಶಮಾಡುತ್ತದೆಯೋ ಹಾಗೆ ತಿಳಿದವನು ಶತ್ರುವನ್ನು ಮೊದಲೊಮ್ಮೆ  ವೃದ್ಧಿಗೊಳಿಸುತ್ತಾನೆ. ದೇವರ, ಬ್ರಾಹ್ಮಣನ, ತನ್ನ ಹಾಗೂ ತನ್ನ ಗುರುವಿನ ಕಾರ್ಯದಲ್ಲಿ ಏಕಭಾವದಿಂದಿರಬೇಕು. ಉಳಿದೆಲ್ಲರ ಕಾರ್ಯಗಳಲ್ಲಿ ದ್ವೈಧೀಭಾವವನ್ನು ಅನುಸರಿಸಬೇಕು. ಏಕಭಾವವು ಯತಿಗಳ ಅಥವಾ ಶುದ್ಧಸ್ವರೂಪವಿರುವವರ ವಿಷಯದಲ್ಲಿ ಪ್ರಶಸ್ತವಾದುದು. ಧನಲೋಭವುಳ್ಳ ಜನರ ವಿಷಯದಲ್ಲಿ ಅದು ಸರಿಯಲ್ಲ, ವಿಶೇಷವಾಗಿ ರಾಜರ ವಿಷಯದಲ್ಲಿ ಏಕಭಾವವು ಎಂದೂ ಸರಿಯಲ್ಲ. ದ್ವೈಧೀಭಾವವನ್ನು ಆಶ್ರಯಿಸಿದರೆ ನೀವು ಸ್ವಸ್ಥಾನದಲ್ಲೇ ವಾಸಿಸುವಂತಾಗುವುದು ಹಾಗೂ ಲೋಭಪರವಶನಾದ ಶತ್ರುವನ್ನು ಹೊರದೂಡಬಹುದು. ಶತ್ರುವಿನಲ್ಲಿ ಏನಾದರೂ ದೌರ್ಬಲ್ಯವು ಕಂಡಲ್ಲಿ ಆಗ ಹೋಗಿ ಅವನನ್ನು ಕೊಲ್ಲಬಹುದು.

ಮೇಘವರ್ಣ – “ನಾನು ಅವನ (ಅರಿಮರ್ದನ ಗೂಬೆರಾಜನ) ವಾಸಸ್ಥಾನವನ್ನು ತಿಳಿದಿಲ್ಲ, ಆದ್ದರಿಂದ ಅವನ ದೌರ್ಬಲ್ಯವೇನೆಂದು ಹೇಗೆ ತಿಳಿಯಲಿ ?”

ಸ್ಥಿರಜೀವಿ – “ವತ್ಸ, ನಾನು ಗೂಢಾಚಾರರ ಸಹಾಯದಿಂದ ಕೇವಲ ಅವನ ವಾಸಸ್ಥಾನವನ್ನಷ್ಟೇ ಅಲ್ಲ ಅವನ ದೌರ್ಬಲ್ಯವನ್ನೂ ಹೊರಗೆಳೆಯುವೆನು. ಗೋವುಗಳು ಗಂಧದಿಂದ (ವಾಸನೆಯಿಂದ) ಗ್ರಹಿಸುತ್ತವೆ, ಬ್ರಾಹ್ಮಣರು ವೇದಗಳಿಂದ ತಿಳಿದುಕೊಳ್ಳುತ್ತಾರೆ, ರಾಜರು ಗೂಢಾಚಾರರ ಮೂಲಕ ತಿಳಿದುಕೊಳ್ಳುತ್ತಾರೆ ಹಾಗೂ ಇತರರು ತಮ್ಮ ಕಣ್ಣುಗಳಿಂದ ತಿಳಿದುಕೊಳ್ಳುತ್ತಾರೆ. ಯಾವ ರಾಜನು ತನ್ನ ಪಕ್ಷದಲ್ಲಿ ಯಾವ ತೀರ್ಥಗಳು ಇವೆ ಹಾಗೂ ವಿಶೇಷವಾಗಿ ಶತ್ರುಪಕ್ಷದಲ್ಲಿ ಯಾವ ತೀರ್ಥಗಳು ಇವೆ ಎಂದು ಆಪ್ತರ ಹಾಗೂ ಗುಪ್ತಚರರ ಮೂಲಕ ತಿಳಿದುಕೊಳ್ಳುವನೋ ಅವನು ದುರ್ಗತಿಯನ್ನು ಹೊಂದುವುದಿಲ್ಲ. (ಇಲ್ಲಿ ತೀರ್ಥವೆಂದರೆ ರಾಜನಿಂದ ನಿಯುಕ್ತವಾದ ಮಂತ್ರಿ ಮೊದಲಾದ ಅಷ್ಟಾದಶ ಸ್ಥಾನಗಳು/ಪದವಿಗಳು)”

ಮೇಘವರ್ಣ – “ತಾತ, ಯಾವುದನ್ನು ತೀರ್ಥವೆಂದು ಕರೆಯುತ್ತಾರೆ ? ಎಷ್ಟು ಸಂಖ್ಯೆಯ ತೀರ್ಥಗಳು ಇವೆ ? ಗುಪ್ತಚರರು ಹೇಗಿರಬೇಕು ? ಇವೆಲ್ಲವನ್ನೂ ತಿಳಿಸು”

ಸ್ಥಿರಜೀವಿ – “ಈ ವಿಷಯವನ್ನು ಭಗವಾನ್ ನಾರದನು ಯುಧಿಷ್ಠಿರನಿಗೆ ಹೇಳಿದ್ದನು. ಶತ್ರುಪಕ್ಷದಲ್ಲಿ 18 ತೀರ್ಥಗಳು, ಸ್ವಪಕ್ಷದಲ್ಲಿ 15 ತೀರ್ಥಗಳು ಇರುತ್ತವೆ. ಮೂರು ಮೂರು ಗುಪ್ತಚರರ ಮೂಲಕ ಶತ್ರುಪಕ್ಷದ ಹಾಗೂ ಸ್ವಪಕ್ಷದ ತೀರ್ಥಗಳನ್ನು ತಿಳಿಯಬೇಕು. ಇದನ್ನು ತಿಳಿದಾಗ ಸ್ವಪಕ್ಷ ಹಾಗೂ ಶತ್ರುಪಕ್ಷವು ರಾಜನ ವಶದಲ್ಲಿ ಇರುತ್ತದೆ.

ತೀರ್ಥವೆಂದರೆ ರಾಜನಿಂದ ನಿಯುಕ್ತರಾದ ಪುರುಷರು ಅಥವಾ ಅವರ ಸ್ಥಾನ/ಪದವಿಯೆಂದು ತಿಳಿಯಬೇಕು. ಈ ತೀರ್ಥ ಸ್ಥಾನದವರು ಕಪಟಿಗಳಾದರೆ ಅದರಿಂದ ರಾಜನಿಗೆ ಹಾನಿಯಾಗುತ್ತದೆ. ಅವರು ಉತ್ತಮರಿದ್ದಲ್ಲಿ, ರಾಜನ ಅಭಿವೃದ್ಧಿಯಾಗುತ್ತದೆ. ಶತ್ರುಪಕ್ಷದಲ್ಲಿ ಇರುವ 18 ತೀರ್ಥಸ್ಥಾನಗಳು ಹೀಗಿವೆ: 1. ಮಂತ್ರಿ, 2. ಪುರೋಹಿತ, 3. ಸೇನಾಪತಿ, 4. ಯುವರಾಜ, 5. ದ್ವಾರಪಾಲಕ, 6. ಅಂತಃಪುರ ರಕ್ಷಕ, 7. ಶಾಸನಕರ್ತಾ, 8. ತೆರಿಗೆ ಆದಿಗಳನ್ನು ಸಂಗ್ರಹಿಸುವವನು, 9. ರಾಜನ ಸನ್ನಿಧಿಯಲ್ಲಿರುವ ಪ್ರಧಾನ ಪುರುಷ, 10. ರಾಜಾಜ್ಞೆಯ ಪ್ರಚಾರಕ, 11. ಅಶ್ವಸೇನಾಧ್ಯಕ್ಷ, 12. ಗಜಾಧ್ಯಕ್ಷ, 13. ಪರ್ಷದಧ್ಯಕ್ಷ, 14. ಬಲಾಧ್ಯಕ್ಷ, 15. ಕೋಶಾಧ್ಯಕ್ಷ, 16. ದುರ್ಗಪಾಲ, 17. ಸೀಮೆಯ ಪಾಲಕ, 18. ಪ್ರಿಯಭೃತ್ಯ. ಇವರುಗಳ ಮಧ್ಯೆ ಭೇದವನ್ನು ಉಂಟುಮಾಡುವುದರಿಂದ ಶತ್ರುವು ಬೇಗನೆ ವಶಕ್ಕೆ ಬರುತ್ತಾನೆ.

ಸ್ವಪಕ್ಷದಲ್ಲಿರುವ 15 ಸ್ಥಾನಗಳು – 1. ರಾಜಪತ್ನಿ, 2. ರಾಜಮಾತೆ, 3. ಅಂತಃಪುರ ರಕ್ಷಕ, 4. ಮಾಲಿ, 5. ಶಯ್ಯಾಪಾಲಕ, 6. ಗುಪ್ತಚರರ ಅಧ್ಯಕ್ಷ, 7. ಜ್ಯೋತಿಷಿ, 8. ವೈದ್ಯ, 9. ನೀರು ಮುಂತಾದ ಪಾನೀಯವನ್ನು ತರುವವನು, 10. ತಾಂಬೂಲವನ್ನು ಒದಗಿಸುವವನು, 11. ಆಚಾರ್ಯ (ಗುರು), 12. ಅಂಗರಕ್ಷಕ, 13. ಆಸನಾಧ್ಯಕ್ಷ, 14. ಛತ್ರಧರ, 15. ವೇಶ್ಯೆ, ಇವರ ಮಧ್ಯೆ ಶತ್ರುವು ಭೇದವನ್ನು ಉಂಟುಮಾಡಿದರೆ ತನ್ನ ಪಕ್ಷದ ನಾಶವಾಗುತ್ತದೆ.

ಕಾರ್ಯಕುಶಲರಾದ ಗುಪ್ತಚರರು ಈ ತೀರ್ಥಗಳಲ್ಲಿ ಪಾದವನ್ನು ಸ್ಥಾಪಿಸಿ ನೀರಿನಲ್ಲಿ ತಲಪ್ರದೇಶವನ್ನು ತಿಳಿದುಕೊಳ್ಳುವ ಹಾಗೆ ಬಲಶಾಲಿಯಾದ ಶತ್ರುವಿನ ಬಗ್ಗೆ ತಿಳಿದುಕೊಳ್ಳಲಿ.”

ಹೀಗೆ ಹೇಳಿದ ಮಂತ್ರಿಯ ಮಾತುಗಳನ್ನು ಕೇಳಿದ ನಂತರ ಮೇಘವರ್ಣನು ಹೇಳಿದನು – “ತಾತ, ಯಾವ ಕಾರಣದಿಂದ ಕಾಗೆಗಳ ಹಾಗೂ ಗೂಬೆಗಳ ಮಧ್ಯೆ ಹೀಗೆ ಯಾವಾಗಲೂ ಒಬ್ಬರು ಮತ್ತೊಬ್ಬರನ್ನು ಕೊಲ್ಲುವಷ್ಟು ವೈರತ್ವವು ಇದೆ ?”

ಅದಕ್ಕೆ ಉತ್ತರವಾಗಿ ಸ್ಥಿರಜೀವಿಯು ಕಾಗೆ – ಗೂಬೆಗಳ ವೈರತ್ವದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸುತ್ತಾ ಸ್ಥಿರಜೀವಿಯು – “ಅಂದಿನಿಂದ ನಮಗೂ ಹಾಗೂ ಗೂಬೆಗಳಿಗೂ ವಂಶಪರಂಪರಾಗತವಾದ ವೈರತ್ವವಿದೆ” ಎಂದನು.

ಮೇಘವರ್ಣ – “ತಂದೆ, ಹಾಗಿದ್ದರೆ ನಾವು ಏನು ಮಾಡಬೇಕು ?”

ಸ್ಥಿರಜೀವಿ – “ಹೀಗಿದ್ದರೂ ಕೂಡ ಸಂಧಿ, ವಿಗ್ರಹಾದಿ ಆರು ಗುಣಗಳಿಂದ ಹೊರತಾದ ಛಲವೆಂಬ ಉಪಾಯವಿದೆ. ನಾನು ಸ್ವತಃ ಅದನ್ನು ಅನುಸರಿಸಿ ಶತ್ರುವಿಗೆ ವಿಜಯವನ್ನು ಗಳಿಸಿಕೊಟ್ಟು ನಂತರ ಶತ್ರುಗಳನ್ನು ಮೋಸಗೊಳಿಸಿ ಕೊಲ್ಲುವೆನು. ಬ್ರಾಹ್ಮಣನನ್ನು ಧೂರ್ತರು ಹೇಗೆ ವಂಚಿಸಿ ಆಡನ್ನು ಪಡೆದುಕೊಂಡರೋ ಹಾಗೆ ಅತಿಶಯ ಬುದ್ಧಿವಂತರು, ಸುಜ್ಞಾನಿಗಳು ಮತ್ತು ಅತ್ಯಂತ ಬಲಶಾಲಿಗಳಾದವರು ಅನ್ಯರನ್ನು ವಂಚಿಸಲು ಶಕ್ತರು.

ಮೇಘವರ್ಣನು ಅದು ಹೇಗೆಂದು ಕೇಳಲು, ಸ್ಥಿರಜೀವಿಯು ಮೂವರು ಧೂರ್ತರು, ಬ್ರಾಹ್ಮಣ ಹಾಗೂ ಆಡಿನ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸ್ಥಿರಜೀವಿಯು – “ಆದ್ದರಿಂದಲೇ ನಾನು ಅತಿಶಯ ಬುದ್ಧಿವಂತರು… ಇತ್ಯಾದಿಯಾಗಿ ಹೇಳಿದ್ದು. ಹೊಸದಾಗಿ ನಿಯುಕ್ತರಾದ ಸೇವಕನ ವಿನಯವಾದ ಮಾತುಗಳಿಂದ, ಅತಿಥಿಗಳ ಆಕರ್ಷಕ ಮಾತುಕಥೆಗಳಿಂದ, ಕಾಮಿನಿಯರ ಅಳುವಿನಿಂದ ಮತ್ತು ಧೂರ್ತರ ಮಾತುಗಳಿಂದ ವಂಚನೆಗೊಳಗಾಗದವರು ಇಲ್ಲವಷ್ಟೆ.  ಅಲ್ಲದೆ ಅನೇಕ ದುರ್ಬಲರೊಂದಿಗೆ ವಿರೋಧವನ್ನು ಕಟ್ಟಿಕೊಳ್ಳಬಾರದು. ಅನೇಕ ಜನರ ವಿರೋಧವನ್ನು ಕಟ್ಟಿಕೊಳ್ಳಬಾರದು, ಅವರನ್ನು ಸೋಲಿಸುವುದು ಕಷ್ಟ. ಇರುವೆಗಳು ಬುಸುಗುಟ್ಟುತ್ತಿರುವ ಮಹಾಸರ್ಪವನ್ನೂ ತಿನ್ನಬಲ್ಲವು.”

ಮೇಘವರ್ಣನು ಅದು ಹೇಗೆಂದು ಕೇಳಲು ಸ್ಥಿರಜೀವಿಯು ಇರುವೆ ಹಾಗೂ ಸರ್ಪದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸ್ಥಿರಜೀವಿಯು – “ಆದ್ದರಿಂದಲೇ ನಾನು ಅನೇಕರೊಂದಿಗೆ ವಿರೋಧವನ್ನು ಕಟ್ಟಿಕೊಳ್ಳಬಾರದೆಂದು ಹೇಳುವುದು. ಈ ವಿಷಯದಲ್ಲಿ ನನಗೆ ಸ್ವಲ್ಪ ಹೇಳುವುದಿದೆ. ಅದನ್ನು ಅರ್ಥಮಾಡಿಕೊಂಡು ಹೇಳಿದ ಹಾಗೆ ಮಾಡು.”

ಮೇಘವರ್ಣ – “ಹಾಗಾದರೆ ಆದೇಶಿಸು, ನಿನ್ನ ಆಜ್ಞೆಯನ್ನು ಉಲ್ಲಂಘಿಸುವುದಿಲ್ಲ.”

ಸ್ಥಿರಜೀವಿ – “ಹಾಗಾದರೆ ಕೇಳು. ನಾನು ನಾಲ್ಕು ಸಾಮಾದಿ ಉಪಾಯಗಳನ್ನು ಹೊರತಾಗಿ ಐದನೆಯ ಉಪಾಯವನ್ನು ನಿರೂಪಿಸಿದೆನಷ್ಟೆ. ಈಗ ನನ್ನನ್ನು ಶತ್ರುಪಕ್ಷದವನಂತೆ ಪರಿಗಣಿಸಿ ಅವರ ಗೂಢಾಚಾರರಿಗೆ ನಂಬೆಕೆ ಬರುವಂತೆ ನನಗೆ ರಕ್ತ ಬರುವಂತೆ ಹೊಡೆದು ಈ ಆಲದ ಮರದ ಕೆಳಗೆ ಎಸೆದು ಋಷ್ಯಮೂಕ ಪರ್ವತಕ್ಕೆ ಹೋಗು. ಅಲ್ಲಿ ನಿನ್ನ ಪರಿವಾರದವರೊಂದಿಗೆ ಇರು. ನಾನು ಉತ್ತಮ ಉಪಾಯದಿಂದ ಸಮಸ್ತ ಶತ್ರುಗಳ ನಂಬಿಕೆಯನ್ನು ಗಳಿಸಿ, ಅವರು ನನಗೆ ಅನುಕೂಲಕರವಾಗಿರುವಂತೆ ಮಾಡಿ, ಅವರ ದುರ್ಗದ ಒಳಹೊರಗನ್ನು ಅರಿತುಕೊಂಡು, ದಿನದ ಸಮಯದಲ್ಲಿ ಅವರು ಅಂಧರಾಗಿದ್ದಾಗ ಅವರನ್ನು ಕೊಲ್ಲುವೆನು. ಬೇರೆ ವಿಧಾನದಿಂದ ನಮಗೆ ಗೆಲುವು ಸಾಧ್ಯವಿಲ್ಲವೆಂದು ನಾನು ಸರಿಯಾಗಿ ಅರಿತುಕೊಂಡಿದ್ದೇನೆ. ಏಕೆಂದರೆ ತಪ್ಪಿಸಿಕೊಳ್ಳಲು ಮಾರ್ಗಗಳಿಲ್ಲದ ಈ ಕೋಟೆಯು ನಮ್ಮ ಹತ್ಯೆಗೆ ಕಾರಣವಾಗುವುದು. ಪಲಾಯನ ಮಾಡಲು ಮಾರ್ಗಗಳಿರುವ ದುರ್ಗವನ್ನು ನೀತಿಶಾಸ್ತ್ರಜ್ಞರು ನಿಜವಾದ ದುರ್ಗವೆಂದು ಹೇಳುತ್ತಾರೆ. ಅದಿಲ್ಲದಿದ್ದರೆ ಅದು ಕೇವಲ ದುರ್ಗರೂಪದಲ್ಲಿರುವ ಕಾರಾಗೃಹದಂತೆ. ನನಗೆ ಹೊಡೆಯಬೇಕೆಂದು ನನ್ನ ಮೇಲೆ ಕೃಪೆಯನ್ನು ತೋರಬೇಡ. ಯುದ್ಧ ಸಮಯ ಬಂದಾಗ ರಾಜನು ತನ್ನ ಪ್ರಾಣಕ್ಕೆ ಸಮನಾಗಿ ಪ್ರಿಯರಾದ, ಲಾಲಿಸಿ ಪಾಲಿಸಿದ ಭೃತ್ಯರನ್ನು ಕೂಡ (ಅಗ್ನಿಗೆ ಹಾಕುವ) ಒಣಗಿದ ಇಂಧನದಂತೆ (ಕಟ್ಟಿಗೆಯಂತೆ) ನೋಡಬೇಕು. ಮುಂದೆ ಒಂದು ದಿನ ಶತ್ರುಗಳೊಂದಿಗೆ ಯುದ್ಧ ಸಂಭವವಿದೆ ಎಂಬ ಕಾರಣದಿಂದಲೇ ರಾಜನು ಸೇವಕರನ್ನು ಸದಾ ತನ್ನ ಪ್ರಾಣದಂತೆ ರಕ್ಷಿಸಬೇಕು ಹಾಗೂ ತನ್ನವರಂತೆ ಪೋಷಿಸಬೇಕು. ಆದ್ದರಿಂದ ನೀನು ಈ ವಿಷಯದಲ್ಲಿ ನನ್ನನ್ನು ತಡೆಯಬಾರದು.”

ಹೀಗೆ ಹೇಳಿದ ಅವನು ಮೇಘವರ್ಣನೊಂದಿಗೆ ಮಿಥ್ಯಾಕಲಹವನ್ನು ಮಾಡಲಾರಂಭಿಸಿದನು. ರಾಜನೊಂದಿಗೆ ಶಿಷ್ಟಾಚಾರವನ್ನು ಮೀರಿ ಮಾತನಾಡುತ್ತಿರುವ ಸ್ಥಿರಜೀವಿಯನ್ನು ನೋಡಿದ ಸೇವಕರು ಅವನನ್ನು ಕೊಲ್ಲಲು ಹೊರಟಾಗ ಮೇಘವರ್ಣನು – ”ನೀವುಗಳು ಹಿಂದಿರುಗಿ, ಶತ್ರುಗಳ ಪಕ್ಷಪಾತಿಯಾತ ಈ ದುರಾತ್ಮನನ್ನು ನಾನೇ ಸ್ವಯಂ ನಿಗ್ರಹಿಸುವೆನು.”

ಹೀಗೆ ನುಡಿದು ಮೇಘವರ್ಣನು ಸ್ಥಿರಜೀವಿಯ ಮೇಲೇರಿ, ಮೆಲ್ಲಗೆ ಕೊಕ್ಕುಗಳಿಂದ ಕುಕ್ಕಿ, ಅವನನ್ನು ರಕ್ತಸಿಕ್ತನನ್ನಾಗಿ ಮಾಡಿ ಅವನು ಉಪದೇಶಿಸಿದಂತೆ ಋಷ್ಯಮೂಕಪರ್ವತಕ್ಕೆ ಸಪರಿವಾರವಾಗಿ ತೆರಳಿದನು.

ಈ ಮಧ್ಯೆ ಶತ್ರುಪಕ್ಷದ ಗೂಢಾಚಾರಿಣಿಯಾಗಿ ನಿಯುಕ್ತಳಾದ ಕೃಕಾಲಿಕೆಯು ಮೇಘವರ್ಣನಿಗೆ ತನ್ನ ಅಮಾತ್ಯನೊಂದಿಗಾದ ಕಲಹವನ್ನು ಗೂಬೆಗಳ ರಾಜನಿಗೆ ಬಂದು ನಿವೇದಿಸಿದಳು.- “ನಿನ್ನ ಶತ್ರು ಈಗ ಭಯಗೊಂಡು ಪರಿವಾರದೊಂದಿಗೆ ಎಲ್ಲಿಗೋ ಪಲಾಯನ ಮಾಡಿರುವನು”

ಅದನ್ನು ಕೇಳಿದ ಗೂಬೆಗಳ ರಾಜ ಸೂರ್ಯಾಸ್ತದ ಸಮಯದಲ್ಲಿ ತನ್ನ ಅಮಾತ್ಯರೊಂದಿಗೆ ಹಾಗೂ ಪರಿವಾರದೊಂದಿಗೆ ಕಾಗೆಗಳನ್ನು ಕೊಲ್ಲಲು ಹೊರಟನು. ಮತ್ತೆ ಹೇಳಿದನು – “ಬೇಗ ಬೇಗ ಹೊರಡಿ, ಶತ್ರು ಭೀತನಾಗಿ ಪಲಾಯನ ಮಾಡುತ್ತಿರುವುದು ನಮ್ಮ ಭಾಗ್ಯ. ಶತ್ರುವು ಸ್ವಸ್ಥಾನವನ್ನು ತ್ಯಜಿಸುವುದು ಅವನ ದೌರ್ಬಲ್ಯಕ್ಕೆ ಕಾರಣ, ಮತ್ತೆ ಹೊಸಜಾಗವನ್ನು ಆಶ್ರಯಿಸುವುದು ದೌರ್ಬಲ್ಯಕ್ಕೆ ಮತ್ತೊಂದು ಕಾರಣ. ಹೀಗಿರುವಾಗ ಸೇವಕರನ್ನು ಉಚಿತವಾದ ಸ್ಥಾನದಲ್ಲಿ ನಿಯೋಜಿಸುವುದರಲ್ಲಿ ಮಗ್ನನಾದ ರಾಜನು ಸುಲಭವಾಗಿ ವಶಕ್ಕೆ ಸಿಕ್ಕುತ್ತಾನೆ.”

ಹೀಗೆ ನುಡಿದ ಅರಿಮರ್ದನನು ಎಲ್ಲರೊಂದಿಗೆ ಕಾಗೆಗಳ ಆಲದ ಮರದ ಕೆಳಗೆ ಸುತ್ತಲೂ ಮುತ್ತಿಗೆ ಹಾಕಿ ನಿಂತನು. ಒಂದು ಕಾಗೆಯೂ ಕಾಣಿಸದಿದ್ದಾಗ ಸ್ತುತಿಪಾಠಕರಿಂದ ಸ್ತುತಿಸಲ್ಪಡುತ್ತಿದ್ದ, ಸಂತೋಷಗೊಂಡ, ಮರದ ರೆಂಬೆಯ ಮೇಲೆ ಕುಳಿತುಕೊಂಡ ಅರಿಮರ್ದನನು ತನ್ನ ಪರಿವಾರದವರಿಗೆ ಹೇಳಿದನು – “ಕಾಗೆಗಳು ಯಾವ ದಾರಿಯಿಂದ ಪಲಾಯನವನ್ನು ಮಾಡಿದವೆಂದು ತಿಳಿದುಕೊಳ್ಳಿ. ಅವರು ಬೇರೊಂದು ದುರ್ಗವನ್ನು ಆಶ್ರಯಿಸುವ ಮೊದಲೇ ಅವರ ಬೆನ್ನಟ್ಟಿ ಕೊಂದುಬಿಡುವೆನು. ಗೆಲ್ಲಬೇಕೆಂಬ ಹಂಬಲದಿಂದ ಕೇವಲ ಬೇಲಿಯನ್ನು ಆಶ್ರಯಿಸಿ ನಿಂತ ಶತ್ರುಗಳನ್ನು ಕೂಡ ಕೊಲ್ಲುವುದು ಕಷ್ಟ, ಇನ್ನು ಸಕಲ ಸಾಮಾಗ್ರಿಗಳೊಂದಿಗೆ ಕೋಟೆಯನ್ನು ಆಶ್ರಯಿಸಿದರೆ ಹೇಳುವುದೇನಿದೆ ?”

ಅರಿಮರ್ದನನು ಹೀಗೆ ಹೇಳಿದಾಗ ಸ್ಥಿರಜೀವಿಯು ಚಿಂತಿಸಿದನು – “ಈ ನಮ್ಮ ಶತ್ರುಗಳು ನಮ್ಮವರ ಬಗ್ಗೆ ತಿಳಿಯದೆ, ಬಂದ ದಾರಿಯಲ್ಲೇ ಹಿಂದಿರುಗಿದರೆ ನಾನು ಏನೂ ಮಾಡಿದಂತೆ ಆಗುವುದಿಲ್ಲ. ಕಾರ್ಯವನ್ನು ಆರಂಭಿಸದೇ ಇರುವುದೇ ಮೊದಲನೆಯ ಬುದ್ಧಿವಂತಿಕೆ. ಆರಂಭಿಸಿದ ಕಾರ್ಯವನ್ನು ಸಂಪೂರ್ಣ ಮಾಡುವುದು ಎರಡನೆಯ ಬುದ್ಧಿವಂತಿಕೆ. ಆದ್ದರಿಂದ ಕಾರ್ಯವನ್ನು ಅರ್ಧದಲ್ಲಿ ಬಿಡುವುದಕ್ಕಿಂತ ಅದನ್ನು ಆರಂಭಿಸದಿರುವುದೇ ಉತ್ತಮ. ಹಾಗಾಗಿ ನಾನು ಈಗ ಶಬ್ದವನ್ನು ಮಾಡಿ ನನ್ನ ಇರುವಿಕೆಯನ್ನು ತೋರಿಸಿಕೊಳ್ಳುತ್ತೇನೆ.”

ಹೀಗೆ ಯೋಚಿಸಿದ ಸ್ಥಿರಜೀವಿಯು ಮೆಲ್ಲನೆ ಶಬ್ದವನ್ನು ಮಾಡಿದನು. ಅದನ್ನು ಕೇಳಿದ ಎಲ್ಲಾ ಗೂಬೆಗಳೂ ಅವನನ್ನು ಕೊಲ್ಲಲು ಹೋದರು. ಆಗ ಸ್ಥಿರಜೀವಿ – “ನಾನು ಸ್ಥಿರಜೀವಿಯೆಂಬ ಮೇಘವರ್ಣನ ಮಂತ್ರಿ. ಮೇಘವರ್ಣನೇ ನನಗೆ ಈ ಅವಸ್ಥೆಯನ್ನು ಮಾಡಿದ್ದಾನೆಂದು ನಿಮ್ಮ ಸ್ವಾಮಿಗೆ ತಿಳಿಸಿ, ಅವನೊಂದಿಗೆ ತುಂಬಾ ಮಾತನಾಡುವುದಿದೆ.”

ಗೂಬೆಗಳಿಂದ ಇದನ್ನು ತಿಳಿದ ಗೂಬೆಗಳ ರಾಜ ವಿಸ್ಮಯದಿಂದ ಆ ಕ್ಷಣವೇ ಮೈಯೆಲ್ಲ ಗಾಯವಾದ ಅವನ ಬಳಿಗೆ ಹೋಗಿ – “ನೀನೇಕೆ ಈ ಪರಿಸ್ಥಿತಿಯನ್ನು ತಲುಪಿದೆ ? ಹೇಳು” ಎಂದನು.

ಸ್ಥಿರಜೀವಿ – “ಸ್ವಾಮಿ, ನನ್ನ ಈ ಅವಸ್ಥೆಗೆ ಕಾರಣವನ್ನು ಕೇಳು. ನೆನ್ನೆ ನೀವುಗಳು ಕೊಂದ ಅನೇಕ ಕಾಗೆಗಳನ್ನು ನೋಡಿ ಶೋಕ ಹಾಗೂ ಕೋಪದಿಂದ ಆ ದುರಾತ್ಮನಾದ ಮೇಘವರ್ಣನು ನಿಮ್ಮ ಮೇಲೆ ಯುದ್ಧವನ್ನು ಮಾಡಲು ಹೋಗುವನಿದ್ದನು. ಆಗ ನಾನು ಬಲಶಾಲಿಗಳಾದ ನಿಮ್ಮೊಂದಿಗೆ ಬಲಹೀನರಾದ ನಾವು ಯುದ್ಧ ಮಾಡುವುದು ಸರಿಯಲ್ಲವೆಂದು ಹೇಳಿದೆ. ತನ್ನ ಏಳಿಗೆಯನ್ನು ಬಯಸುವ ಬಲಹೀನನು ಬಲವಂತನೊಂದಿಗೆ ಮನಸ್ಸಿನಿಂದಲೂ ಕೂಡ ವಿರೋಧವನ್ನು ಬಯಸಬಾರದು. ಹಾಗೆ ಬಯಸಿದರೆ ಅವನು ಬೆಂಕಿಯಲ್ಲಿ ಬೀಳುವ ಪತಂಗದಂತೆ ನಾಶವಾಗುತ್ತಾನೆ. ಆದ್ದರಿಂದ ಬಲವಂತನಿಗೆ ದಾನಾದಿಗಳನ್ನು ಕೊಟ್ಟು ಸಂಧಿಯನ್ನು ಮಾಡಿಕೊಳ್ಳುವುದೇ ಉತ್ತಮ. ಬಲವಂತನಾದ ಶತ್ರುವನ್ನು ಕಂಡು ಬುದ್ಧಿವಂತನು ತನ್ನ ಸರ್ವಸ್ವವನ್ನು ಕೊಟ್ಟಾದರೂ ಪ್ರಾಣವನ್ನು ರಕ್ಷಿಸಿಕೊಳ್ಳಬೇಕು. ಏಕೆಂದರೆ ಉಳಿಸಿಕೊಂಡ ಪ್ರಾಣದಿಂದ ಮತ್ತೊಮ್ಮೆ ಸಂಪತ್ತನ್ನು ಪಡೆಯಬಹುದು. ಈ ನನ್ನ ಉಪದೇಶವನ್ನು ಕೇಳಿ ಆ ದುಷ್ಟನಾದ ಮೇಘವರ್ಣನು ನಾನು ಶತ್ರುಜನ ಪಕ್ಷಪಾತಿಯೆಂದು ತಿಳಿದು ನನಗೆ ಈ ಅವಸ್ಥೆಯನ್ನು ಮಾಡಿದ್ದಾನೆ. ಈಗ ನನಗೆ ನಿನ್ನ ಪಾದಗಳೇ ಶರಣು. ಹೆಚ್ಚು ವಿಜ್ಞಾಪಿಸಿಕೊಳ್ಳುವುದೇನಿದೆ ? ನಾನು ಮತ್ತೆ ಚಲಿಸಲು ಸಮರ್ಥನಾದಾಗ ನಿನ್ನನ್ನು ಕಾಗೆಗಳ ಆಶ್ರಯಸ್ಥಾನಕ್ಕೆ ಕರೆದುಕೊಂಡು ಹೋಗಿ ಅವರನ್ನೆಲ್ಲಾ ನಾಶಮಾಡುವೆನು.”

ಮಂತ್ರಿಗಳೊಂದಿಗೆ ಅರಿಮರ್ದನನ ಸಮಾಲೋಚನೆ

ಅದನ್ನು ಕೇಳಿದ ಅರಿಮರ್ದನನು ತನ್ನ ವಂಶಪರಂಪರೆಯಿಂದ ಬಂದ ಮಂತ್ರಿಗಳೊಂದಿಗೆ ಸಮಾಲೋಚಿಸಿದನು. ಅವನಿಗೆ ರಕ್ತಾಕ್ಷ, ಕ್ರೂರಾಕ್ಷ, ದೀಪ್ತಾಕ್ಷ, ವಕ್ರನಾಸ ಮತ್ತು ಪ್ರಾಕಾರಕರ್ಣ ಎಂಬ ಐದು ಮಂತ್ರಿಗಳು ಇದ್ದರು.

ಮೊದಲಿಗೆ ರಕ್ತಾಕ್ಷನನ್ನು ಕೇಳಿದನು – ಭದ್ರ, ನನ್ನ ಶತ್ರುವಿನ ಮಂತ್ರಿಯು ನನ್ನ ಕೈಗೆ ಸಿಕ್ಕಿದ್ದಾನೆ, ಅವನಿಗೆ ಏನು ಮಾಡೋಣ ?”

ರಕ್ತಾಕ್ಷನ ಸಲಹೆ

ರಕ್ತಾಕ್ಷ – “ದೇವ, ಇದರಲ್ಲಿ ಚಿಂತಿಸುವುದೇನಿದೆ ? ವಿಚಾರವನ್ನು ಮಾಡದೇ ಇವನನ್ನು ಕೊಂದುಬಿಡಬೇಕು. ಏಕೆಂದರೆ ದುರ್ಬಲನಾದ ಶತ್ರುವನ್ನು ಅವನು ಬಲಿಷ್ಠನಾಗುವುದಕ್ಕೆ ಮುನ್ನವೇ ಕೊಲ್ಲಬೇಕು. ಪೌರುಷ ಮತ್ತು ಬಲವನ್ನು ಪಡೆದುಕೊಂಡ ಮೇಲೆ ಅವನು ದುರ್ಜಯನಾಗುತ್ತಾನೆ. ಅಲ್ಲದೇ ತಾನಾಗಿಯೇ ಬಂದ ಲಕ್ಷ್ಮಿಯನ್ನು ತ್ಯಜಿಸಿದರೆ ಅವಳು ಶಾಪವನ್ನು ಕೊಡುತ್ತಾಳೆಂದು ಲೋಕದಲ್ಲಿ ಪ್ರತೀತಿ. ಅನುಕೂಲಕರವಾದ ಕಾಲವನ್ನು ನಿರೀಕ್ಷಿಸುತ್ತಿರುವ ಮನುಷ್ಯನಿಗೆ ಅಂತಹ ಸಮಯವು ಒಮ್ಮೆ ಬರುತ್ತದೆ. ಆಗ ಮಾಡಬೇಕಾದ ಕಾರ್ಯವನ್ನು ಮಾಡದಿದ್ದರೆ ಆ ಸಮಯವು ಮತ್ತೆ ಬರುವುದಿಲ್ಲ. ಹೀಗೆ ಕಥೆಯೊಂದರಲ್ಲಿ ಕೇಳಿಬರುತ್ತದೆ – ಬೆಳಗುತ್ತಿರುವ ಚಿತೆಯನ್ನು ನೋಡು ಹಾಗೂ ಗಾಯಗೊಂಡ ನನ್ನ ಹೆಡೆಯನ್ನು ನೋಡು. ಒಮ್ಮೆ ಮುರಿದು ಮತ್ತೆ ಹೊಂದಿಸಲ್ಪಟ್ಟ ಪ್ರೀತಿಯು ಸ್ನೇಹದಿಂದ ವರ್ಧಿಸುವುದಿಲ್ಲ.

ಅದೇನೆಂದು ಅರಿಮರ್ದನನು ಕೇಳಲು ರಕ್ತಾಕ್ಷನು ಬ್ರಾಹ್ಮಣ ಹಾಗೂ ಸರ್ಪದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ರಕ್ತಾಕ್ಷನು – “ಆದ್ದರಿಂದಲೇ ನಾನು ಹೇಳುವುದು ಉರಿಯುವ ಚಿತೆಯನ್ನು ನೋಡು… ಎಂದು”

ಮುಂದುವರೆಸುತ್ತಾ ರಕ್ತಾಕ್ಷನು – “ಆದ್ದರಿಂದ ಇವನನ್ನು (ಸ್ಥಿರಜೀವಿ ಕಾಗೆ) ಕೊಂದರೆ ಅನಾಯಾಸದಿಂದ ನಿನ್ನ ರಾಜ್ಯದ ಕಂಟಕವು ಕಳೆಯುತ್ತದೆ.

ಈ ಮಾತುಗಳನ್ನು ಕೇಳಿದ ಅರಿಮರ್ದನನು ಕ್ರೂರಾಕ್ಷನಿಗೆ ಹೇಳಿದನು – “ಭದ್ರ, ನಿನ್ನ ಅಭಿಪ್ರಾಯವೇನು?”

ಕ್ರೂರಾಕ್ಷನ ಸಲಹೆ

ಕ್ರೂರಾಕ್ಷ – “ರಕ್ತಾಕ್ಷನು ನಿರ್ದಯವಾದುದನ್ನು ಹೇಳಿರುವನು. ಏಕೆಂದರೆ ಶರಣಾಗತರನ್ನು ಕೊಲ್ಲುವುದಿಲ್ಲ. ಕಥೆಯಲ್ಲಿ ಕೇಳಿಬರುವ ಇದೊಂದು ಮಾತು ಸರಿಯಾಗಿಯೇ ಇದೆ – ರಕ್ಷಣೆಯನ್ನು ಬೇಡಿಬಂದ ಶತ್ರುವನ್ನು ಪಾರಿವಾಳವು ಯಥೋಚಿತವಾಗಿ ಸನ್ಮಾನಿಸಿ ತನ್ನ ಮಾಂಸದಿಂದಲೇ ತೃಪ್ತಪಡಿಸಿತು.”

ಅರಿಮರ್ದನನು ಅದೇನೆಂದು ಕೇಳಲು ಕ್ರೂರಾಕ್ಷನು ಪಾರಿವಾಳ ಮತ್ತು ಬೇಟೆಗಾರನ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಕ್ರೂರಾಕ್ಷನು – “ಆದ್ದರಿಂದಲೇ ನಾನು ರಕ್ಷಣೆಯನ್ನು ಬೇಡಿಬಂದ ಶತ್ರುವನ್ನು ಪಾರಿವಾಳವು … ಎಂಬುದಾಗಿ ಹೇಳಿದ್ದು”

ಇದನ್ನು ಕೇಳಿದ ಅರಿಮರ್ದನನು ದೀಪ್ತಾಕ್ಷನನ್ನು ಕೇಳಿದನು – “ಈ ಪರಿಸ್ಥಿತಿಯಲ್ಲಿ ನಿನ್ನ ಅಭಿಪ್ರಾಯವೇನು ?

ದೀಪ್ತಾಕ್ಷನ ಸಲಹೆ

ದೀಪ್ತಾಕ್ಷ – “ದೇವ, ಇವನನ್ನು (ಅಂದರೆ ಸ್ಥಿರಜೀವಿ ಕಾಗೆಯನ್ನು) ಕೊಲ್ಲಬಾರದು. ಏಕೆಂದರೆ ಕಥೆಯೊಂದರಲ್ಲಿ ಈ ಮಾತು ಬರುತ್ತದೆ – ಯಾರು ನನ್ನನ್ನು ಯಾವಾಗಲೂ ಉದ್ವಿಗ್ನಗೊಳಿಸುತ್ತಾಳೋ ಅವಳು ಇಂದು ನನ್ನನ್ನು ಆಲಿಂಗಿಸಿಕೊಳ್ಳುತ್ತಿದಾಳೆ. ಎಲೈ ಮಂಗಳಕರನೇ, ನನ್ನಲ್ಲಿರುವುದನ್ನೆಲ್ಲಾ ಅಪಹರಿಸು. ಅದನ್ನು ಕೇಳಿದ ಕಳ್ಳನು – ನಿನ್ನ ಮನೆಯಲ್ಲಿ ಕದಿಯುವುದಕ್ಕೇನೂ ಇಲ್ಲ, ಇದ್ದಾಗ ಬರುವೆನು ಮತ್ತು ಅವಳು ನಿನ್ನನ್ನು ಆಲಿಂಗಿಸಿಕೊಳ್ಳದಿದ್ದರೆ ಬರುವೆನು.”

ಅರಿಮರ್ದನ – “ಅವಳು ಯಾರನ್ನು ಅಲಿಂಗಿಸಿಕೊಳ್ಳುವುದಿಲ್ಲ ? ಯಾರವನು ಕಳ್ಳ ? ಇದನ್ನು ವಿಸ್ತಾರವಾಗಿ ಕೇಳಬಯಸುವೆನು”

ಆಗ ದೀಪ್ತಾಕ್ಷನು ಕಳ್ಳ ಹಾಗೂ ವೃದ್ಧ ವ್ಯಾಪಾರಿಯ ವಧುವಿನ ಕಥೆಯನ್ನು ಹೇಳಿದನು.

ದೇಪ್ತಾಕ್ಷನು ಮುಂದುವರೆಸುತ್ತಾ – “ಉಪಕಾರ ಮಾಡುವ ಕಳ್ಳರಿಂದ ಕೂಡ ಒಳಿತನ್ನು ನಿರೀಕ್ಷಿಸುತ್ತೇವೆ, ಇನ್ನು ಶರಣಾಗರಾದವರ ಬಗ್ಗೆ ಹೇಳುವುದೇನು ? ಅಲ್ಲದೆ ಅವರಿಂದ ಅವಮಾನಿತನಾದ ಇವನು (ಸ್ಥಿರಜೀವಿ) ನಮ್ಮ ಲಾಭಕ್ಕಾಗಿ ಒದಗುವನು. ಕಾಗೆಗಳ ಬಲಹೀನತೆಯ ಬಗ್ಗೆ ಆತನಿಂದ ತಿಳಿಯುವುದಕ್ಕೆ ಹಾಗೂ ಇನ್ನೂ ಇತರ ಕಾರಣಗಳಿಂದ ಆತನನ್ನು ಕೊಲ್ಲಬಾರದು.”

ಇದನ್ನು ಕೇಳಿದ ಅರಿಮರ್ದನನು ಸಚಿವನಾದ ವಕ್ರನಾಸನನ್ನು ಕೇಳಿದನು – “ಪರಿಸ್ಥಿತಿ ಹೀಗಿರಲು ಏನು ಮಾಡಬೇಕು ?”

ವಕ್ರನಾಸನ ಸಲಹೆ

ವಕ್ರನಾಸ – “ದೇವ, ಇವನನ್ನು ಕೊಲ್ಲಬಾರದು. ಏಕೆಂದರೆ ಪರಸ್ಪರ ಕಚ್ಚಾಡುತ್ತಿರುವ ಶತ್ರುಗಳಿಂದ ನಮಗೆ ಲಾಭವೇ. ಕಳ್ಳನು ಪ್ರಾಣಗಳನ್ನು ಕೊಟ್ಟನು ಮತ್ತು ರಾಕ್ಷಸನು ಜೋಡಿ ಹಸುವನ್ನು ಕೊಟ್ಟನು.

ಅರಿಮರ್ದನನು ಅದು ಹೇಗೆಂದು ಕೇಳಲು ವಕ್ರನಾಸನು ಬ್ರಾಹ್ಮಣ, ಕಳ್ಳ ಹಾಗೂ ಬ್ರಹ್ಮರಾಕ್ಷಸನ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ವಕ್ರಸೇನನು – “ಆದ್ದರಿಂದಲೇ ನಾನು ಹೇಳುವುದು ಪರಸ್ಪರ ಕಚ್ಚಾಡುತ್ತಿರುವ ಶತ್ರುಗಳಿಂದ ನಮಗೆ ಲಾಭವೇ ಇತ್ಯಾದಿ ಎಂದು”

ವಕ್ರಸೇನನ ಮಾತನ್ನು ಕೇಳಿ ಅರಿಮರ್ದನನು ಮತ್ತೆ ಪ್ರಾಕಾರಕರ್ಣನನ್ನು ಕೇಳಿದನು – “ಇದರಲ್ಲಿ ನಿನ್ನ ಅಭಿಪ್ರಾಯವೇನೆಂದು ತಿಳಿಸು”

ಪ್ರಾಕಾರಕರ್ಣನ ಸಲಹೆ

ಪ್ರಾಕಾರಕರ್ಣ – “ಇವನನ್ನು ಕೊಲ್ಲಬಾರದು ಏಕೆಂದರೆ ರಕ್ಷಿಸಲ್ಪಟ್ಟ ಇವನೊಂದಿಗೆ ಪರಸ್ಪರ ಪ್ರೀತಿಯಿಂದ ಸುಖವಾಗಿ ಕಾಲವು ಕಳೆಯುತ್ತದೆ. ಪರಸ್ಪರ ರಹಸ್ಯಗಳನ್ನು ರಕ್ಷಿಸಿಕೊಳ್ಳದ ಜೀವಿಗಳು ಹುತ್ತದ ಬಿಲದಲ್ಲಿದ್ದ ಹಾವಿನಂತೆ ನಾಶವಾಗಿಹೋಗುವರು.

ಅರಿಮರ್ದನನು ಅದು ಹೇಗೆಂದು ಕೇಳಲು ಪ್ರಾಕಾರಕರ್ಣನು ಹುತ್ತದಲ್ಲಿದ್ದ ಸರ್ಪದ ಕಥೆಯನ್ನು ಹೇಳಿದನು.

ಪ್ರಾಕಾರಕರ್ಣನು ಕಥೆಯನ್ನು ಮುಗಿಸಿ – “ಆದ್ದರಿಂದಲೇ ನಾನು ಹೇಳುವುದು ಪರಸ್ಪರ ರಹಸ್ಯಗಳನ್ನು… ಇತ್ಯಾದಿ ಎಂದು” ಎಂದನು.

ಸ್ಥಿರಜೀವಿಯನ್ನು ಕೊಲ್ಲುವಂತೆ ರಕ್ತಾಕ್ಷನ ಮರುಸಲಹೆ

ಅದನ್ನು ಕೇಳಿ ಅರಿಮರ್ದನನೂ ಕೂಡ ಅದನ್ನೇ (ಸ್ಥಿರಜೀವಿಯನ್ನು ಕೊಲ್ಲುವುದು ಸರಿಯಲ್ಲವೆಂದು) ಸಮರ್ಥಿಸಿಕೊಂಡನು. ಹಾಗೆಯೇ ಮಾಡಿದಾಗ ರಕ್ತಾಕ್ಷನು ತನ್ನಲ್ಲೇ ನಕ್ಕು ಮತ್ತೆ ಹೇಳಿದನು – “ಕಷ್ಟ! ಅನ್ಯಾಯವಾಗಿ ನೀವು ಸ್ವಾಮಿಯನ್ನು ನಾಶಮಾಡಿದಿರಿ. ಏಕೆಂದರೆ ಎಲ್ಲಿ ಯೋಗ್ಯವಲ್ಲದವರನ್ನು ಪೂಜಿಸುತ್ತಾರೋ, ಎಲ್ಲಿ ಪೂಜಿಸಲ್ಪಡಬೇಕಾದವರನ್ನು ಅವಮಾನಿಸುತ್ತಾರೋ ಅಲ್ಲಿ ದುರ್ಭಿಕ್ಷೆ, ಸಾವು ಮತ್ತು ಭಯ – ಈ ಮೂರು ಉಂಟಾಗುತ್ತವೆ. ಬಡಗಿಯು ಕುಲಟೆಯಾದ ತನ್ನ ಹೆಂಡತಿಯನ್ನು ತಲೆಯ ಮೇಲೆ ಹೊತ್ತಂತೆ, ಪ್ರತ್ಯಕ್ಷವಾಗಿ ಪಾಪವನ್ನು ಮಾಡಿದರೂ ಮೂರ್ಖನು ಸವಿನುಡಿಗಳಿಂದ ಶಾಂತನಾಗುತ್ತಾನೆ.

ಅದು ಏನೆಂದು ಮಂತ್ರಿಗಳು ಕೇಳಲು ರಕ್ತಾಕ್ಷನು ಬಡಗಿಯ ಹೆಂಡತಿಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ರಕ್ತಾಕ್ಷನು – “ಆದ್ದರಿಂದಲೇ ನಾನು ಪ್ರತ್ಯಕ್ಷವಾಗಿ ಪಾಪವನ್ನು ಮಾಡಿದರೂ ಮುಂತಾಗಿ ಹೇಳಿದ್ದು” ಎಂದನು.

ಮುಂದುವರೆಸುತ್ತಾ ರಕ್ತಾಕ್ಷನು – “(ಈ ಸ್ಥಿರಜೀವಿ ಕಾಗೆಯಿಂದ) ನಾವು ಎಲ್ಲರೂ ಬುಡಸಮೇತ ನಾಶವಾಗಿ ಹೋಗುವೆವು. ಈ ಉಕ್ತಿಯು ಸರಿಯಾಗಿಯೇ ಇದೆ – ಯಾರು ಹಿತವಾಕ್ಯವನ್ನು ಬಿಟ್ಟು ಅದಕ್ಕೆ ವಿರುದ್ಧವಾದ ಉಪದೇಶವನ್ನು ನೀಡುವರೋ ಅವರನ್ನು ಮಿತ್ರರೂಪದಲ್ಲಿರುವ ಶತ್ರುಗಳೆಂದು ತಿಳಿದವರು ಪರಿಗಣಿಸುತ್ತಾರೆ. ದೇಶಕಾಲಕ್ಕೆ ವಿರುದ್ಧವಾದ ಉಪದೇಶವನ್ನು ನೀಡುವ ಹಾಗೂ ಬುದ್ಧಿವಂತರಲ್ಲದ ಮಂತ್ರಿಗಳನ್ನು ಹೊಂದಿದ ರಾಜರು ಉತ್ತಮರಾದರೂ ಮತ್ತು ಶ್ರೀಮಂತರಾದರೂ ಸೂರ್ಯೋದಯದ ಸಮಯದಲ್ಲಿ ಕತ್ತಲು ಹೇಗೆ ನಾಶವಾಗುತ್ತದೋ ಹಾಗೆ ನಾಶವಾಗುತ್ತಾರೆ.”

ರಕ್ತಾಕ್ಷನ ಮಾತುಗಳನ್ನು ಅನಾದರಿಸಿ ಅವರೆಲ್ಲರೂ ಸ್ಥಿರಜೀವಿಯನ್ನು ಎತ್ತಿಕೊಂಡು ತಮ್ಮ ಕೋಟೆಗೆ ಹೊಗಲು ತೊಡಗಿದರು. ಹಾಗೆ ಕರೆದುಕೊಂಡು ಹೋಗಲ್ಪಟ್ಟ ಸ್ಥಿರಜೀವಿಯು ಹೇಳಿದನು – “ಏನೂ ಮಾಡಲು ಆಗದ ಈ ಸ್ಥಿತಿಯಲ್ಲಿರುವ ನನ್ನನ್ನು ಕರೆದುಕೊಂಡು ಹೋಗುವುದರಿಂದ ಏನು ಪ್ರಯೋಜನ ? ಆದ್ದರಿಂದ ಉರಿಯುತ್ತಿರುವ ಅಗ್ನಿಯನ್ನು ಪ್ರವೇಶಿಸಲಿಚ್ಛಿಸುವೆನು, ಅಗ್ನಿಯನ್ನು ಕೊಟ್ಟು ನನ್ನನ್ನು ಉದ್ಧರಿಸಿ”

ಆಗ ರಕ್ತಾಕ್ಷನು ಸ್ಥಿರಜೀವಿಯ ಒಳಭಾವವನ್ನು ಅರಿತು ಹೇಳಿದನು – “ಏಕೆ ಬೆಂಕಿಯಲ್ಲಿ ಬೀಳಲು ಇಚ್ಛಿಸುವೆ?”

ಸ್ಥಿರಜೀವಿ – “ನಿಮ್ಮ ಸಲುವಾಗಿ ಮೇಘವರ್ಣನಿಂದ (ಕಾಗೆಗಳ ರಾಜನಿಂದ) ಈ ಸ್ಥಿತಿಯನ್ನು ಹೊಂದಿರುವೆನು. ಆದ್ದರಿಂದ ಅದಕ್ಕೆ ಪ್ರತೀಕಾರವನ್ನು ಮಾಡಲು ಮುಂದಿನ ಜನ್ಮದಲ್ಲಿ ಗೂಬೆಯಾಗಲು ಇಚ್ಛಿಸುವೆನು”

ಅದನ್ನು ಕೇಳಿದ ರಾಜನೀತಿಯಲ್ಲಿ ಕುಶಲನಾದ ರಕ್ತಾಕ್ಷನು ಹೇಳಿದನು – “ಭದ್ರ, ನೀನೊಬ್ಬ ವಂಚಕ,  ಸುಳ್ಳಾಡುವುದಲ್ಲಿ ಚತುರನು. ನೀನು ಗೂಬೆಯ ಯೋನಿಯಲ್ಲಿ ಹುಟ್ಟಿದರೂ ಕಾಗೆಯ ಜನ್ಮವೇ ಉತ್ತಮವೆಂದು ತಿಳಿಯುವೆ. ಹೀಗೆ ಒಂದು ಉಲ್ಲೇಖವಿದೆ – ಸೂರ್ಯ, ಮೇಘ, ವಾಯು, ಪರ್ವತ ಮುಂತಾದವುಗಳನ್ನು ಗಂಡನಾಗಿ ಪಡೆಯುವ ಅವಕಾಶವಿದ್ದರೂ ಅವರನ್ನೆಲ್ಲಾ ತ್ಯಜಿಸಿ ಕೊನೆಗೆ ಇಲಿಯು ತನ್ನ ಸ್ವಜಾತಿಯವನನ್ನೇ ಗಂಡನನ್ನಾಗಿ ಪಡೆಯಿತು, ಸ್ವಜಾತಿಯನ್ನು ಬಿಡುವುದು ಸುಲಭವಲ್ಲ.

ಆಗ ಮಂತ್ರಿಗಳು ಅದು ಹೇಗೆಂದು ಕೇಳಲು ರಕ್ತಾಕ್ಷನು ಇಲಿಯ ಮದುವೆಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ರಕ್ತಾಕ್ಷನು – “ಆದ್ದರಿಂದಲೇ ನಾನು ಸ್ವಜಾತಿಯನ್ನು ಬಿಡುವುದು ಸುಲಭವಲ್ಲ ಎಂಬುದಾಗಿ ಹೇಳಿದ್ದು”

ಇಷ್ಟಾದರೂ ರಕ್ತಾಕ್ಷನ ಮಾತುಗಳನ್ನು ಕೇಳದೆ ತಮ್ಮ ವಂಶದ ವಿನಾಶಕ್ಕಾಗಿಯೇ ಅವರು ಸ್ಥಿರಜೀವಿಯನ್ನು ತಮ್ಮ ದುರ್ಗಕ್ಕೆ ಕೊಂಡ್ಯೊದರು. ಕರೆದುಕೊಂಡು ಹೋಗುವುದನ್ನು ಕಂಡು ತನ್ನೊಳಗೇ ನಕ್ಕು ಸ್ಥಿರಜೀವಿ ಯೋಚಿಸಿದನು – “ನನ್ನನ್ನು ಕೊಲ್ಲಬೇಕೆಂದು ಹೇಳಿದ ಸ್ವಾಮಿಯ ಹಿತಚಿಂತಕನಾದ ಇವನೊಬ್ಬನೇ ಇಲ್ಲಿ ನೀತಿಶಾಸ್ತ್ರವನ್ನು ತಿಳಿದವನು. ಅವನ ಮಾತನ್ನು ಕೇಳಿದರೆ ಇವರಿಗೆ ಸ್ವಲ್ಪ ಅನರ್ಥವೂ ಕೂಡ ಆಗುವುದಿಲ್ಲ.”

ಆನಂತರ ತನ್ನ ದುರ್ಗದ್ವಾರವನ್ನು ತಲುಪಿದ ಅರಿಮರ್ದನನು ಹೇಳಿದನು – “ನಮ್ಮ ಹಿತೈಷಿಯಾದ ಸ್ಥಿರಜೀವಿಗೆ ಅವನಿಗಿಷ್ಟವಾಗುವ ವಾಸಸ್ಥಾನವನ್ನು ಕೊಡಿ”

ಅದನ್ನು ಕೇಳಿದ ಸ್ಥಿರಜೀವಿಯು ಚಿಂತಿಸಿದನು – “ನಾನು ಇವರನ್ನು ಕೊಲ್ಲುವ ಉಪಾಯವನ್ನು ಮಾಡಬೇಕು. ಇವರ ಮಧ್ಯದಲ್ಲೇ ಇದ್ದುಕೊಂಡು ಅದನ್ನು ಮಾಡಲು ಸಾಧ್ಯವಿಲ್ಲ. ನನ್ನ ಇಂಗಿತವನ್ನು ತಿಳಿದು ಇವರು ಎಚ್ಚರಗೊಳ್ಳಬಹುದು. ಆದ್ದರಿಂದ ದುರ್ಗದ ಬಾಗಿಲಲ್ಲೇ ಇದ್ದುಕೊಂಡು ನನ್ನ ಅಭಿಪ್ರಾಯವನ್ನು ಸಾಧಿಸುವೆನು”

ಹೀಗೆ ನಿಶ್ಚಯಿಸಿ ಗೂಬೆಗಳ ರಾಜನಿಗೆ ಹೇಳಿದನು – “ದೇವ, ಸ್ವಾಮಿಗಳು ನುಡಿದದ್ದು ಸರಿಯಾಗಿಯೇ ಇದೆ. ಆದರೆ ನಾನೂ ಕೂಡ ನೀತಿಶಾಸ್ತ್ರಜ್ಞನು. ನಿಮ್ಮ ಶತ್ರುಜಾತಿಯವನಾದ ನಾನು ನಿಮ್ಮಲ್ಲಿ ಪ್ರೀತಿಯುಳ್ಳವನು ಮತ್ತು ದೋಷರಹಿತನಾದರೂ ಕೂಡ ದುರ್ಗಮಧ್ಯದಲ್ಲಿ ವಾಸಮಾಡಲು ಅರ್ಹನಲ್ಲ. ಆದ್ದರಿಂದ ನಾನು ದುರ್ಗದ್ವಾರದಲ್ಲಿದ್ದುಕೊಂಡು ಪ್ರತಿದಿನ ನಿಮ್ಮ ಪಾದದ ಧೂಳಿನಿಂದ ನನ್ನ ಶರೀರವನ್ನು ಪವಿತ್ರಗೊಳಿಸಿಕೊಂಡು ತಮ್ಮ ಸೇವೆಯನ್ನು ಮಾಡಿಕೊಂಡಿರುವೆನು”

ಹಾಗೆಯೇ ಆಗಲೆಂದು ಅರಿಮರ್ದನನು ಒಪ್ಪಿದಾಗ, ಗೂಬೆಗಳ ರಾಜನ ಸೇವಕರು ತಮಗೆ ಇಷ್ಟಬಂದಷ್ಟು ಆಹಾರವನ್ನು ಸೇವಿಸುತ್ತಾ ರಾಜನ ಆದೇಶದಂತೆ ಉತ್ತಮವಾದ ಮಾಂಸಾಹಾರವನ್ನು ಸ್ಥಿರಜೀವಿಗೂ ಒದಗಿಸುತ್ತಿದ್ದರು. ಕೆಲವು ದಿನಗಳು ಕಳೆದ ಮೇಲೆ ಸ್ಥಿರಜೀವಿಯು ನವಿಲಿನಂತೆ ಬಲಿಷ್ಠನಾದನು.

ಹೀಗೆ ರಾಜನು ಸ್ಥಿರಜೀವಿಯನ್ನು ಪೋಷಿಸುವುದನ್ನು ನೋಡಿ ವಿಸ್ಮಯಗೊಂಡ ರಕ್ತಾಕ್ಷನು ಮಂತ್ರಿಗಳಿಗೆ ಹಾಗೂ ರಾಜನಿಗೆ ಹೇಳಿದನು – “ಅಯ್ಯೋ, ನಿನ್ನ ಮಂತ್ರಿಜನರು ಮೂರ್ಖರು, ನೀನೂ ಕೂಡ ಹಾಗೆಯೇ ಎಂದು ತಿಳಿಯುತ್ತೇನೆ. ಒಂದು ಉಕ್ತಿಯಿದೆ – ಮೊದಲು ನಾನು ಮೂರ್ಖ, ಎರಡನೆಯದಾಗಿ ಬೇಡನು ಮೂರ್ಖನು, ನಂತರ ರಾಜ ಮತ್ತು ಮಂತ್ರಿ ಮೂರ್ಖರು, ನಾವೆಲ್ಲರೂ ಮೂರ್ಖರ ಗುಂಪಿದ್ದಂತೆ

ಅವರೆಲ್ಲರು ಅದೇನೆಂದು ಕೇಳಲು ರಕ್ತಾಕ್ಷನು ಚಿನ್ನದ ಹಿಕ್ಕೆಯನ್ನು ಹಾಕುವ ಪಕ್ಷಿ, ರಾಜ ಹಾಗೂ ಮಂತ್ರಿಯ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ರಕ್ತಾಕ್ಷನು – “ಆದ್ದರಿಂದಲೇ ನಾನು ಮೊದಲು ನಾನು ಮೂರ್ಖ ಮುಂತಾಗಿ ಹೇಳಿದ್ದು”

ಆದರೆ ಮತ್ತೆ ಅರಿಮರ್ದನ ಹಾಗೂ ಅವನ ಮಂತ್ರಿಗಳು ದುರಾದೃಷ್ಟದಿಂದ ರಕ್ತಾಕ್ಷನ ಹಿತನುಡಿಗಳನ್ನು ಕೇಳದೆ ಮತ್ತೆ ಸ್ಥಿರಜೀವಿಗೆ ತುಂಬಾ ಮಾಂಸ ಮತ್ತು ವಿವಿಧ ಆಹಾರಗಳನ್ನು ಕೊಟ್ಟು ಸಾಕಿದರು. ಆಗ ರಕ್ತಾಕ್ಷನು ತನ್ನ ಅನುಯಾಯಿಗಳನ್ನು ಕರೆದು ಹೇಳಿದನು – “ಇಲ್ಲಿಯವರೆಗೆ ಮಾತ್ರ ನಮ್ಮ ರಾಜನ ದುರ್ಗವು ಕ್ಷೇಮವಾಗಿತ್ತು. ವಂಶಪರಂಪರೆಯಿಂದ ಬಂದ ಮಂತ್ರಿಯೊಬ್ಬನು ಏನು ಉಪದೇಶ ಮಾಡಬೇಕೋ ಅದನ್ನು ಮಾಡಿದ್ದೇನೆ. ನಾವು ಈಗ ಬೇರೆ ಪರ್ವತದಲ್ಲಿರುವ ದುರ್ಗವನ್ನು ಆಶ್ರಯಿಸೋಣ. ಏಕೆಂದರೆ – ಆಪತ್ತು ಬರುವ ಮೊದಲೇ ಅದನ್ನು ಯೋಚಿಸಿ ಕಾರ್ಯಕೈಗೊಳ್ಳುವವನು ಪ್ರಶಂಸಗೆ ಒಳಗಾಗುತ್ತಾನೆ. ಹಾಗೆ ಮಾಡದವನ ಪರಿಸ್ಥಿತಿ ಶೋಚನೀಯವಾಗುತ್ತದೆ. ನಾನು ಈ ಕಾಡಿನಲ್ಲಿದ್ದು ಮುಪ್ಪು ಬಂತು ಆದರೆ ಬಿಲವು ಮಾತನಾಡುವುದನ್ನು ಎಂದೂ ಕೇಳಿಲ್ಲ.

ಅನುಯಾಯಿಗಳು ಅದೇನೆಂದು ಕೇಳಲು ರಕ್ತಾಕ್ಷನು ಸಿಂಹ, ನರಿ ಮತ್ತು ಗುಹೆಯ ಕಥೆಯನ್ನು ಹೇಳಿದನು.

ಮಾತನ್ನು ಮುಂದುವರೆಸುತ್ತಾ ರಕ್ತಾಕ್ಷನು – “ಇದನ್ನು ತಿಳಿದುಕೊಂಡು ನೀವೆಲ್ಲರೂ ನನ್ನಂದಿಗೆ ಹೊರಡಬೇಕು.” ಹೀಗೆ ಹೇಳಿ ರಕ್ತಾಕ್ಷನು ತನ್ನ ಅನುಯಾಯಿ ಪರಿಜನರೊಂದಿಗೆ ದೂರ ದೇಶಕ್ಕೆ ಹೋದನು.

ಸ್ಥಿರಜೀವಿಯಿಂದ ಗೂಬೆಗಳ ಸಂಪೂರ್ಣ ನಾಶ

ರಕ್ತಾಕ್ಷನು ತೆರಳಿದ ಮೇಲೆ ಸ್ಥಿರಜೀವಿಯು ಸಂತೋಷಗೊಂಡು ಚಿಂತಿಸಿದನು – “ರಕ್ತಾಕ್ಷನು ಹೋಗಿದ್ದು ನಮಗೆ ಒಳ್ಳೆಯದಾಯಿತು. ಅವನಾದರೋ ದೂರದರ್ಶಿ ಹಾಗೂ ಇವರೆಲ್ಲರೂ ಮೂಢರು. ಇನ್ನು ಇವರನ್ನು ಸುಲಭವಾಗಿ ಕೊಲ್ಲಬಹುದು. ಏಕೆಂದರೆ ಕುಲಕ್ರಮದಲ್ಲಿ ಬಂದ ದೂರದರ್ಶಿಗಳಾದ ಮಂತ್ರಿಗಳನ್ನುಳ್ಳ ರಾಜನು ನಿಶ್ಚಯವಾಗಿ ಬೇಗನೆ ವಿನಾಶವನ್ನು ಹೊಂದುವುದಿಲ್ಲ. ಒಳ್ಳೆಯ ನೀತಿಯನ್ನು ಬಿಟ್ಟು ಪ್ರತಿಕೂಲವಾದ ನೀತಿಯನ್ನು ಉಪದೇಶಿಸುವ ಮಂತ್ರಿಗಳು ನಿಜವಾಗಿಯೂ ರಾಜನ ಶತ್ರುಗಳಿದ್ದಂತೆ.”

ಹೀಗೆ ಚಿಂತಿಸಿ ಸ್ಥಿರಜೀವಿಯು ಗೂಬೆಗಳ ಗುಹೆಯನ್ನು ಸುಡಲು ಪ್ರತಿದಿನ ತನ್ನ ಗೂಡಿಗೆ ಒಂದೊಂದು ಮರದ ಕಡ್ಡಿಯನ್ನು ತಂದು ಸೇರಿಸುತ್ತಿದ್ದನು. ಇವನು ನಮ್ಮನ್ನು ಸುಡಲು ತನ್ನ ಗೂಡನ್ನು ದೊಡ್ಡದು ಮಾಡಿಕೊಳ್ಳುತ್ತಿದ್ದಾನೆ ಎಂದು ಮೂರ್ಖ ಗೂಬೆಗಳಿಗೆ ತಿಳಿಯಲಿಲ್ಲ. ಅದೃಷ್ಟವು ಪ್ರತಿಕೂಲವಾಗಿದ್ದಾಗ ಮನುಷ್ಯನು ಮಿತ್ರನನ್ನು ಶತ್ರುವಾಗಿಸಿಕೊಳ್ಳುತ್ತಾನೆ, ಮಿತ್ರನನ್ನು ದ್ವೇಷಿಸಿ ಹಿಂಸಿಸುತ್ತಾನೆ, ಶುಭವನ್ನು ಅಶುಭವೆಂದು ತಿಳಿಯುತ್ತಾನೆ ಹಾಗೂ ಪಾಪವನ್ನು ಮಂಗಳಕರವೆಂದು ಭಾವಿಸುತ್ತಾನೆ.

ಗೂಡಿಗಾಗಿ ಎಂದು ಕೂಡಿಟ್ಟ ಕಡ್ಡಿಗಳು ತುಂಬಾ ಆದಾಗ, ಒಂದು ದಿನ ಸೂರ್ಯೋದಯವಾದ ಮೇಲೆ, ಗೂಬೆಗಳಿಗೆ ಕಣ್ಣು ಕಾಣಿಸದಿದ್ದಾಗ, ಸ್ಥಿರಜೀವಿಯು ಬೇಗನ ಮೇಘವರ್ಣನ ಬಳಿಗೆ ಹೋಗಿ ಹೇಳಿದನು – “ಸ್ವಾಮೀ, ಶತ್ರುವಿನ ಗುಹೆಯನ್ನು ಕೊಲ್ಲಲು ಉಪಾಯವನ್ನು ಮಾಡಿರುವೆನು. ಎಲ್ಲರೂ ಬಂದು ಒಂದೊಂದು ಉರಿಯುತ್ತಿರುವ ಕಡ್ಡಿಯನ್ನು ಹಿಡಿದುಕೊಂಡು ಗುಹೆಯ ದ್ವಾರದಲ್ಲಿರುವ ಗೂಡಿಗೆ ಹಾಕಿ. ಇದರಿಂದ ಕುಂಭೀಪಾಕ ನರಕವು ಪ್ರಾಪ್ತವಾದಾಗ ಆಗುವ ದುಃಖದಂತೆ ದುಃಖಿಸುತ್ತಾ ಅವರೆಲ್ಲರೂ ಸಾಯುವರು. (ಕುಂಭೀಪಾಕ – ಪಾಪಾತ್ಮರನ್ನು ಆವಿಯಲ್ಲಿ ಮಡಕೆಯಂತೆ ಬೇಯುಸುವ ಒಂದು ನರಕ – ಶಬ್ದಾರ್ಥ ಕೌಸ್ತುಭ)”

ಅದನ್ನು ಕೇಳಿ ಹರ್ಷಗೊಂಡ ಮೇಘವರ್ಣನು – “ತಂದೆ, ನಿನ್ನ ಸಮಾಚಾರವನ್ನು ತಿಳಿಸು, ಬಹಳ ಕಾಲದ ನಂತರ ಸಿಗುತ್ತಿರುವೆ”

ಸ್ಥಿರಜೀವಿ – “ವತ್ಸ, ಇದು ಸಮಾಚಾರವನ್ನು ಹೇಳುವ ಕಾಲವಲ್ಲ. ಒಂದು ವೇಳೆ ನಾನಿಲ್ಲಿಗೆ ಬಂದಿರುವುದನ್ನು ಶತ್ರುವಿನ ಗೂಢಾಚಾರನು ಅವರಿಗೆ ತಿಳಿಸಿದರೆ, ಆ ಕುರುಡನು (ಅರಿಮರ್ದನ ಗೂಬೆ) ಬೇರೆಡೆಗೆ ಹೋಗಿಬಿಡುವನು. ಆದ್ದರಿಂದ ತ್ವರೆಮಾಡು. ಶೀಘ್ರವಾಗಿ ಮಾಡಬೇಕಾದ ಕೆಲಸದಲ್ಲಿ ಯಾರು ವಿಳಂಬವನ್ನು ಮಾಡುವರೋ, ದೇವತೆಗಳು ಅವನಲ್ಲಿ ಸಿಟ್ಟುಗೊಂಡು ಆ ಕೆಲಸಕ್ಕೆ ನಿಶ್ಚಯವಾಗಿ ವಿಘ್ನವನ್ನುಂಟುಮಾಡುವರು. ಶೀಘ್ರವಾಗಿ ಮಾಡಬೇಕಾದ ಯಾವ ಕಾರ್ಯಗಳಿದೆಯೋ, ವಿಶೇಷವಾಗಿ ಫಲವನ್ನು ಕೊಡಲು ಸಿದ್ಧವಾಗಿರುವ ಕಾರ್ಯವನ್ನು ಬೇಗನೆ ಮಾಡದಿದ್ದರೆ ಅದರ ಫಲಸಾರವನ್ನು ಕಾಲವು ಪಡೆದುಕೊಳ್ಳುತ್ತದೆ. ಆದ್ದರಿಂದ ಶತ್ರುಗಳನ್ನೆಲ್ಲಾ ಕೊಂದು ಮರಳಿ ಬರುವಾಗ ಎಲ್ಲವನ್ನೂ ಸವಿಸ್ತಾರವಾಗಿ ಹೇಳುವೆನು.”

ಆ ಮಾತನ್ನು ಕೇಳಿ ಅರಿಮರ್ದನನು ತನ್ನ ಜೊತೆಗಾರರೊಂದಿಗೆ ಒಂದೊಂದು ಉರಿಯುತ್ತಿರುವ ಕಡ್ಡಿಯನ್ನು ಕೊಕ್ಕಿನಲ್ಲಿ ಹಿಡಿದುಕೊಂಡು ಗೂಬೆಗಳ ಗುಹೆಯ ದ್ವಾರವನ್ನು ತಲುಪಿ ಸ್ಥಿರಜೀವಿಯ ಗೂಡಿಗೆ ಎಸೆದರು. ಆಗ ಆ ಎಲ್ಲಾ ಹಗಲು ಕುರುಡರು (ಗೂಬೆಗಳು) ರಕ್ತಾಕ್ಷನ ಮಾತನ್ನು ನೆನೆಸಿಕೊಳ್ಳುತ್ತಾ ಗುಹೆಯ ದ್ವಾರದಿಂದ ಹೊರಗೆ ಬರಲಾರದೆ ಬೆಂಕಿಯಲ್ಲಿ ಮಡಕೆಯು ಸುಡುವಂತೆ ಸುಟ್ಟು ಸತ್ತುಹೋದರು. ಹೀಗೆ ಶತ್ರುಗಳನ್ನು ಬುಡಸಮೇತ ನಾಶಮಾಡಿ ಮೇಘವರ್ಣನು ಮತ್ತೆ ತನ್ನ ಹಿಂದಿದ ಆಶ್ರಯಸ್ಥಾನವಾದ ಆಲದಮರಕ್ಕೆ ಬಂದನು. ಅಲ್ಲಿ ಸಿಂಹಾಸನದಲ್ಲಿ ಕುಳಿತು ಸಂತೋಷದಿಂದ ಸ್ಥಿರಜೀವಿಯನ್ನು ಕೇಳಿದನು – “ತಂದೆ, ನೀನು ಶತ್ರುಗಳ ಮಧ್ಯೆ ಈವರೆಗೆ ಹೇಗೆ ಕಾಲವನ್ನು ಕಳೆದೆ ಎಂಬ ಕುತೂಹಲ ನಮಗಿದೆ, ಅದರ ಬಗ್ಗೆ ತಿಳಿಸು. ಏಕೆಂದರೆ ಶತ್ರುಗಳ ಮಧ್ಯೆ ಇದ್ದು ಒಂದು ಕ್ಷಣ ಕಾಲ ಕಳೆಯುವುದಕ್ಕಿಂತ ಉರಿಯುತ್ತಿರುವ ಬೆಂಕಿಯಲ್ಲಿ ಬೀಳುವುದೇ ಉತ್ತಮವು.”

ಅದನ್ನು ಕೇಳಿದ ಸ್ಥಿರಜೀವಿ – “ಭದ್ರ, ಮುಂದೆ ಒದಗುವ ಫಲದ ಇಚ್ಛೆಯಿಂದ ಸೇವಕನು ಕಷ್ಟವನ್ನು ಕಷ್ಟವೆಂದು ತಿಳಿಯುವುದಿಲ್ಲ. ಭಯವು ಪ್ರಾಪ್ತವಾದಾಗ ಯಾವ ಯಾವ ಮಾರ್ಗಗಳು ಹಿತಕಾರಿಯಾಗಿವೆಯೋ, ಅವುಗಳು ಉತ್ತಮ ಅಥವಾ ನೀಚ ಮಾರ್ಗಗಳೇ ಆಗಲಿ, ಅವೆಲ್ಲವನ್ನೂ ನಿಪುಣತೆಯಿಂದ ಮತ್ತು ಚತುರತೆಯಿಂದ ಅಳವಡಿಸಿಕೊಳ್ಳಬೇಕು. ಆನೆಯ ಸೊಂಡಿಲಿನಂತಿರುವ, ಧನುಸ್ಸನ್ನು ಹಿಡಿಯಲು ಯೋಗ್ಯವಾದ, ಮಾಹಾಕಾರ್ಯಗಳನ್ನು ಸಾಧಿಸಲು ಶಕ್ತವಾದ ತನ್ನ ಕೈಗಳಲ್ಲಿ ಕಿರೀಟಿಯು (ಅರ್ಜುನನು) ಕಪಟವೇಷಧಾರಿಯಾಗಿ ಸ್ತ್ರೀಯರು ತೊಡುವ ಕಂಕಣಗಳನ್ನು ತೊಡಲಿಲ್ಲವೇ ? ಬುದ್ಧಿವಂತನು ಶಕ್ತನಾದರೂ ಸರಿಯಾದ ಕಾಲದ ನಿರೀಕ್ಷೆಯಲ್ಲಿ ದುರ್ವಚನಗಳನ್ನು ನುಡಿಯುವ ನೀಚ ಹಾಗೂ ಪಾಪಿ ಜನರ ಮಧ್ಯೆ ವಾಸಿಸತಕ್ಕದ್ದು. ಅತಿಬಲನಾದ ಭೀಮನು ಸೌಟನ್ನು ಹಿಡಿದುಕೊಂಡು ಹೊಗೆಯ ಮಾಲಿನ್ಯದ ಕಷ್ಟವನ್ನು ಅನುಭವಿಸುತ್ತಾ ಮತ್ಸನಗರದಲ್ಲಿ ಕಾಲವನ್ನು ಕಳೆಯಲ್ಲಿಲ್ಲವೇ ? ಕಷ್ಟವು ಬಂದೊದಗಿದಾಗ ಬುದ್ಧಿವಂತನು ಸರಿಯಾದ ಸಮಯದ ನಿರೀಕ್ಷೆಯಲ್ಲಿ ಒಳ್ಳೆಯ ಅಥವಾ ಕೆಟ್ಟ ಕೆಲಸವನ್ನು ಕಣ್ಣು ಮುಚ್ಚಿಕೊಂಡು ಮಾಡಬೇಕು. ಗಾಂಢೀವಿ ಧನುಸ್ಸನ್ನು ಎಳೆಯುವುದರಿಂದ ಕಠಿಣವಾದ ಹಸ್ತಗಳುಳ್ಳ ಸವ್ಯಚಾಚಿಯಾದ ಅರ್ಜುನನು ಡಾಬನ್ನು ಕಟ್ಟಿಕೊಂಡು ನಾಟ್ಯವಿಲಾಸವನ್ನು ಮಾಡಲಿಲ್ಲವೇ ? ಬಲ ಮತ್ತು ಉತ್ಸಾಹವನ್ನುಳ್ಳ, ಸಿದ್ಧಿಯನ್ನು ಬಯಸುವ ಬುದ್ಧಿವಂತ ಮನುಷ್ಯನು, ದೈವವು ಪ್ರತಿಕೂಲವಾಗಿದ್ದಾಗ ತನ್ನ ತೇಜಸ್ಸನ್ನು ಅಡಗಿಸಿಕೊಂಡು ಸ್ಥೈರ್ಯವನ್ನು ಆಶ್ರಯಿಸಬೇಕು. ಇಂದ್ರ, ಕುಬೇರ ಮತ್ತು ಯಮನಂತಿರುವ ತಮ್ಮಂದಿರನ್ನುಳ್ಳ ಶ್ರೀಮಾನ್ ಯುಧಿಷ್ಠಿರನು ಕಷ್ಟಕಾಲ ಬಂದಾಗ ಒಂದು ವರ್ಷದ ಕಾಲ ತ್ರಿದಂಡವನ್ನು ಹೊರಲಿಲ್ಲವೇ ? (ತ್ರಿದಂಡ – ವಾಕ್, ಮನಸ್ಸು ಮತ್ತು ದೇಹಕ್ಕಾಗುವ ಮೂರು ವಿಧವಾದ ದುಃಖ) (ಅಥವಾ ವಿರಾಟರಾಜನಿಗೆ ಶ್ವೇತಛತ್ರವನ್ನು ಹೊರಲಿಲ್ಲವೇ ಎಂಬ ಸರಳವಾದ ಅರ್ಥ) ರೂಪವಂತರಾದ, ಬಲವಂತರಾದ ಕುಂತೀಪುತ್ರರಾದ ನಕುಲ-ಸಹದೇವರನ್ನು ವಿರಾಟರಾಜನು ಗೋರಕ್ಷಣೆಗೆ ಕಳಿಸಲಿಲ್ಲವೇ ? ಅಪ್ರತಿಮವಾದ ರೂಪಯೌವನವುಳ್ಳ, ಉತ್ತಮಕುಲದಲ್ಲಿ ಹುಟ್ಟಿದ, ಲಕ್ಷ್ಮಿಯಂತೆ ಕಾಂತಿಯನ್ನುಳ್ಳ ದ್ರೌಪದಿಯು, ಕಾಲವಶದಿಂದ ಬಂದ ಆಪತ್ತಿನ ಸಮಯದಲ್ಲಿ ಮತ್ಸರಾಜಭವನದಲ್ಲಿರುವ ಯುವತಿಯರ ಗರ್ವದಿಂದ ಹಾಗೂ ಆಕ್ಷೇಪದಿಂದ ಕೂಡಿದ ಅಜ್ಞೆಗಳನ್ನು ಕೇಳುತ್ತಾ, ಸೈರಂಧ್ರೀ ಎಂದು ಕರೆಸಿಕೊಳ್ಳುತ್ತಾ ಗಂಧವನ್ನು ಅರೆಯಲಿಲ್ಲವೇ ?”

ಮೇಘವರ್ಣ – “ಶತ್ರುವಿನೊಂದಿಗೆ ವಾಸಿಸುವುದು ಕತ್ತಿಯ ಅಂಚಿನಲ್ಲಿ ನಡೆದಂತೆ ಎಂದು ಅನಿಸುತ್ತದೆ.”

ಸ್ಥಿರಜೀವಿ – “ಅದು ಸರಿಯೇ, ಆದರೆ ಆ ರೀತಿಯ ಮೂರ್ಖರ ಗುಂಪನ್ನು ನಾನೆಲ್ಲಿಯೂ ನೊಡಿಲ್ಲ ಮತ್ತು ರಕ್ತಾಕ್ಷನಂಥ ಮಹಾಬುದ್ಧಿವಂತ, ನಾನಾಶಾಸ್ತ್ರಕೋವಿದ ಮತ್ತು ಮೇಧಾವಿಯನ್ನು ಕೂಡ ನೋಡಿಲ್ಲ. ಏಕೆಂದರೆ ಅವನು ನನ್ನ ಮನಸ್ಸನ್ನು ಅರಿತಿದ್ದನು. ಉಳಿದ ಮಂತ್ರಿಗಳೆಲ್ಲಾ ಮಹಾಮೂರ್ಖರು ಮತ್ತು ನೀತಿಶಾಸ್ತ್ರವನ್ನು ತಿಳಿಯದ ಹೆಸರಿಗೆ ಮಾತ್ರ ಮಂತ್ರಿಗಳು. ಶತ್ರುಪಕ್ಷದಿಂದ ಬಂದ ಸೇವಕನು ಅವರ ಸಂಘದ ಕಾರಣ ದುಷ್ಟನಾಗಿರುತ್ತಾನೆ ಮತ್ತು ಆತನು ಗುಪ್ತಚರನಾಗಿರುವ ಸಂಭವವಿರುವುದರಿಂದ ನಿತ್ಯವೂ ಭಯಕ್ಕೆ ಕಾರಣನಾಗಿರುತ್ತಾನೆ ಎಂಬುದನ್ನು ಉಳಿದ ಮಂತ್ರಿಗಳು ತಿಳಿಯಲಿಲ್ಲ. ಶತ್ರುಪಕ್ಷದಿಂದ ಬಂದು ಸೇರಿದವರು, ತಮ್ಮ ಶತ್ರುಗಳು ಕುಳಿತ್ತಿದ್ದಾಗ, ಮಲಗಿದ್ದಾಗ, ಪ್ರಯಾಣದಲ್ಲಿದ್ದಾಗ ಅಥವಾ ಭೋಜನಾದಿಗಳಲ್ಲಿ ಮಗ್ನರಾಗಿದ್ದಾಗ ದಾಳಿಮಾಡುತ್ತಾರೆ. ಆದ್ದರಿಂದ ಧರ್ಮಾರ್ಥಕಾಮಕ್ಕೆ ಆಶ್ರಯವಾಗಿರುವ ತನ್ನ ದೇಹವನ್ನು ಬುದ್ಧಿವಂತನು ಎಲ್ಲಾ ಪ್ರಯತ್ನಗಳಿಂದ ಮತ್ತು ಆದರದಿಂದ ರಕ್ಷಿಸಿಕೊಳ್ಳಬೇಕು. ಎಚ್ಚರ ತಪ್ಪಿದರೆ ಅವನು ನಾಶವಾಗಿ ಹೋಗುತ್ತಾನೆ.

ಇವೆಲ್ಲಾ ಸರಿಯಾದ ಮಾತುಗಳೇ – ಅಪತ್ಯಭೋಜನ ಮಾಡುವ ಯಾರನ್ನು ತಾನೆ ರೋಗಗಳು ಕಾಡದಿರುತ್ತವೆ ? ಯಾವ ದುರ್ಮಂತ್ರಿಗಳಿಗೆ ತಾನೆ ದುರ್ನೀತಿಯಿಂದುಂಟಾದ ದೋಷವು ತಟ್ಟುವುದಿಲ್ಲ ? ಸಂಪತ್ತು ಯಾರಲ್ಲಿ ತಾನೆ ದರ್ಪವನ್ನುಂಟುಮಾಡುವುದಿಲ್ಲ ? ಮೃತ್ಯುವು ಯಾರಿಗೆ ತಾನೆ ಬಾರದಿರುವುದಿಲ್ಲ ? ಸ್ತ್ರೀಸಂಬಂಧವಾದ ವಿಷಯಗಳು ಯಾರನ್ನು ತಾನೆ ಪೀಡಿಸುವುದಿಲ್ಲ ? ಲೋಭಿಯ ಯಶಸ್ಸು ನಾಶವಾಗುತ್ತದೆ. ಹಾಗೆಯೇ ಕಪಟಿಯ ಮೈತ್ರಿ,  ಕ್ರಿಯಾಹೀನನ ಕುಲ, ಧನವನ್ನೇ ಬಯಸುವವನ ಧರ್ಮ, ದುರ್ವ್ಯಸನಿಗಳ ವಿದ್ಯೆ, ಜಿಪುಣನ ಸುಖ ಮತ್ತು ದುಷ್ಟ ಮಂತ್ರಿಯನ್ನುಳ್ಳ ರಾಜನ ರಾಜ್ಯವು ನಾಶವಾಗುತ್ತವೆ.

ಆದ್ದರಿಂದ ರಾಜನೇ, ನಾನು ಕತ್ತಿಯ ಅಲಗಿನ ಮೇಲೆ ನಡೆದಂಥ ಕಾರ್ಯವನ್ನು ಮಾಡಿದೆ ಎಂದು ನೀನು ಹೇಳಿದೆ, ಅದು ಯಥಾರ್ಥವಾದುದೇ. ಬುದ್ಧಿವಂತನು ಅಪಮಾನವನ್ನು ಪುರಸ್ಕರಿಸಿ, ತನ್ನ ಗೌರವ ಪತ್ರಿಷ್ಠೆಗಳನ್ನು ಕಡೆಗಣಿಸಿ ಸ್ವಾರ್ಥವನ್ನು ಸಾಧಿಸಿಕೊಳ್ಳಬೇಕು. ಸ್ವಾರ್ಥವನ್ನು ಬಿಡುವುದು ಮೂರ್ಖತನವೇ ಸರಿ.  ಸಮಯ ಬಂದಾಗ ಬುದ್ಧಿವಂತನು ಶತ್ರುವನ್ನು ಹೆಗಲ ಮೇಲಾದರೂ ಹೊರಬೇಕು. ಕೃಷ್ಣಸರ್ಪವೊಂದು ಕಪ್ಪೆಗಳನ್ನು ಹೊತ್ತು ಅವುಗಳನ್ನು ನಾಶಮಾಡಿತು.”

ಮೆಘವರ್ಣನು ಅದೇನೆಂದು ಕೇಳಲು ಸ್ಥಿರಜೀವಿಯು ಕಪ್ಪೆ ಮತ್ತು ಕೃಷ್ಣಸರ್ಪದ ಕಥೆಯನ್ನು ಹೇಳಿದನು.

ಕಥೆಯನ್ನು ಮುಗಿಸಿದ ಸ್ಥಿರಜೀವಿಯು – “ಆದ್ದರಿಂದಲೇ ನಾನು ಶತ್ರುವನ್ನು ಹೆಗಲ ಮೇಲಾದರೂ ಹೊರಬೇಕು… ಎಂದು ಹೇಳಿದ್ದು.” ಎಂದನು.

ಸ್ಥಿರಜೀವಿಯು ಮುಂದುವರೆಸುತ್ತಾ – “ರಾಜನೇ, ಹೇಗೆ ಮಂದವಿಷ ಕೃಷ್ಣಸರ್ಪವು ಬುದ್ಧಿಬಲದಿಂದ ಕಪ್ಪೆಗಳನ್ನು ನಾಶಮಾಡಿತೋ ಹಾಗೆ ನಾನು ಎಲ್ಲಾ ವೈರಿಗಳನ್ನು ನಾಶಮಾಡಿದೆ. ಕಾಡಿನಲ್ಲಿ ಪ್ರಜ್ವಲಿಸುತ್ತಿರುವ ಅಗ್ನಿಯು ಮರಗಳ ಮೂಲವನ್ನು ಸುಡುವುದಿಲ್ಲ. ಆದರೆ ಮಂದವಾಗಿ ಬೀಸುತ್ತಿರುವ ಶೀತಲ ವಾಯುವು ಮರಗಳನ್ನು ಬುಡಸಮೇತ ಕಿತ್ತುಹಾಕುತ್ತದೆ.”

ಮೇಘವರ್ಣ – “ತಂದೆ, ಅದು ಸತ್ಯವಾದ ನುಡಿಯೇ. ಮಹಾತ್ಮರಾದವರು ಮಾಹಾ ಆಪತ್ತು ಬಂದರೂ ಪ್ರಾರಂಭಮಾಡಿದ ಕಾರ್ಯವನ್ನು ಬಿಡುವುದಿಲ್ಲ. ನೀತಿಶಾಸ್ತ್ರವನ್ನೇ ಅಲಂಕಾರವಾಗಿ ಧರಿಸಿರುವ ಮಹಾತ್ಮರ ದೊಡ್ಡ ಗುಣವೇನೆಂದರೆ ಅವರು ಅತಿಕಷ್ಟವಾದ ತೊಂದರೆಯು ಬಂದರೂ ಆರಂಭಿಸಿದ ಕಾರ್ಯವನ್ನು ಬಿಡುವುದಿಲ್ಲ. ನೀಚರು ವಿಘ್ನದ ಭಯದಿಂದ ಕಾರ್ಯವನ್ನು ಆರಂಭಿಸುವುದೇ ಇಲ್ಲ. ಮಧ್ಯಮರು ಕಾರ್ಯವನ್ನು ಆರಂಭಿಸಿ ವಿಘ್ನವೊದಗಿದಾಗ ಸುಮ್ಮನಾಗುತ್ತಾರೆ. ಆದರೆ ಉತ್ತವರು ಮತ್ತೆ ಮತ್ತೆ ವಿಘ್ನಗಳು ಬಂದರೂ ಆರಂಭಿಸಿದ ಕಾರ್ಯವನ್ನು ಬಿಡುವುದಿಲ್ಲ. ಶತ್ರುಗಳನ್ನು ಬುಡಸಮೇತ ನಾಶಮಾಡಿ ನನ್ನ ರಾಜ್ಯಕ್ಕೆ ಕಂಟಕವಿಲ್ಲದಂತೆ ಮಾಡಿದೆ. ಅಥವಾ ನೀತಿಶಾಸ್ತ್ರಜ್ಞರು ಹೀಗೆ ಮಾಡುತ್ತಾರೆ ಎಂಬುದು ಸರಿಯೇ. ಋಣವನ್ನು, ಅಗ್ನಿಯನ್ನು, ಶತ್ರುವನ್ನು ಮತ್ತು ರೋಗವನ್ನು ಯಾವ ಬುದ್ಧಿವಂತನು ಶೇಷವಿಲ್ಲದಂತೆ (ಅಂದರೆ ಸಂಪೂರ್ಣವಾಗಿ ಇಲ್ಲದಂತೆ) ಮಾಡುತ್ತಾನೋ, ಅವನು ಎಂದಿಗೂ ದುಃಖಿಸುವುದಿಲ್ಲ.”

ಸ್ಥಿರಜೀವಿಯಿಂದ ಮೇಘವರ್ಣನಿಗೆ ರಾಜನೀತಿಯ ಉಪದೇಶ

ಸ್ಥಿರಜೀವಿ – “ದೇವ, ಆರಂಭಿಸಿದ ನಿನ್ನ ಎಲ್ಲಾ ಕೆಲಸಗಳೂ ಸಿದ್ಧಿಸುವುದರಿಂದ ನೀನೇ ಭಾಗ್ಯವಂತ. ಕೇವಲ ಶೌರ್ಯದಿಂದ ಮಾತ್ರ ಕೆಲಸವು ಸಿದ್ಧಿಸುವುದಿಲ್ಲ, ಬದಲಾಗಿ ಬುದ್ಧಿಯಿಂದ ಕೈಗೊಂಡ ಕೆಲಸವು ಫಲಿಸುತ್ತದೆ. ಶಸ್ತ್ರದಿಂದ ಕೊಂದ ಶತ್ರುಗಳು ಸತ್ತಂತಲ್ಲ, ಬದಲಾಗಿ ಬುದ್ಧಿಯಿಂದ ಕೊಂದ ಶತ್ರುಗಳು ನಿಜವಾಗಿಯೂ ಸತ್ತಂತೆ. ಶಸ್ತ್ರವು ಕೇವಲ ಪುರುಷನ ಶರೀರವೊಂದನ್ನು ಮಾತ್ರ ನಾಶಮಾಡುತ್ತದೆ ಆದರೆ ಬುದ್ಧಿಯು ಅವನ ಕುಲ, ವೈಭವ ಮತ್ತು ಯಶಸ್ಸನ್ನು ನಾಶಮಾಡುತ್ತದೆ. ಆದ್ದರಿಂದ ಬುದ್ಧಿ ಹಾಗೂ ಪುರುಷಪ್ರಯತ್ನದಿಂದ ಕೂಡಿದವನ ಕಾರ್ಯವು ಪ್ರಯತ್ನವಿಲ್ಲದೇ ಸಿದ್ಧಿಸುತ್ತದೆ. ಭಾಗ್ಯವು ಅನುಕೂಲವಗಿದ್ದವನ ಬುದ್ಧಿಯು ಕಾರ್ಯಾರಂಭದಲ್ಲಿ ತೊಡಗುತ್ತದೆ, ಸ್ಮರಣಶಕ್ತಿ ದೃಢವಾಗುತ್ತದೆ, ಮನೋರಥಗಳು ತಾವೇ ಫಲಿಸುತ್ತವೆ, ವಿಚಾರಗಳು ವ್ಯರ್ಥವಾಗುವುದಿಲ್ಲ, ತರ್ಕವಿಚಾರಶಕ್ತಿಯು ಬೆಳೆಯುತ್ತದೆ, ಮನಸ್ಸು ಉನ್ನತಿಯನ್ನು ಬಯಸುತ್ತದೆ ಮತ್ತು ಶ್ಲಾಘನೀಯ ಕಾರ್ಯಗಳನ್ನು ಮಾಡಲು ಮನಸ್ಸು ಹಾತೊರೆಯುತ್ತದೆ.

ನೀತಿ, ತ್ಯಾಗ ಹಾಗೂ ಶೌರ್ಯದಿಂದ ಕೂಡಿದ ಮನುಷ್ಯನಿಗೆ ರಾಜ್ಯವು ಲಭಿಸುತ್ತದೆ. ತ್ಯಾಗಿಗಳ, ವೀರರ ಹಾಗೂ ವಿದ್ವಾಂಸರ ಸಂಪರ್ಕದಲ್ಲಿ ಆಸಕ್ತಿಯಿರುವವರು ಗುಣವಂತರಾಗಿರುತ್ತಾರೆ. ಗುಣವಂತನಿಗೆ ಧನಲಾಭವಾಗುತ್ತದೆ, ಧನದಿಂದ ಸಂಪತ್ತು, ಸಂಪತ್ತಿನಿಂದ ಆಜ್ಮಾಪಿಸುವ/ಅಪ್ಪಣೆಮಾಡುವ (ಅಂದರೆ ಆಳ್ವೆ ನಡೆಸುವ ಎಂದರ್ಥ)  ಪ್ರಬುದ್ಧತೆ ಮತ್ತು ಆಜ್ನಾಗುಣದಿಂದ ರಾಜ್ಯವು ಪ್ರಾಪ್ತವಾಗುತ್ತದೆ.”

ಮೇಘವರ್ಣ – “ನೀತಿಶಾಸ್ತ್ರಗಳು ನಿಶ್ಚಯವಾಗಿಯು ಫಲವನ್ನು ಕೊಡುತ್ತವೆ. ನೀನು ನೀತಿಶಾಸ್ತ್ರವನ್ನು ಅನುಸರಿಸಿ, ಆಶ್ರಯವನ್ನು ಪಡೆದು, ಅರಿಮರ್ದನನನ್ನು ಸಂಪೂರ್ಣವಾಗಿ ನಾಶಮಾಡಿದೆ.”

ಸ್ಥಿರಜೀವಿ – “ದಂಡ ಮುಂತಾದ ಉಗ್ರವಾದ ಉಪಾಯದಿಂದ ಫಲ ಸಿಗಬಹುದಾದರೂ, ಮೊದಲು ಆಶ್ರಯ ಉಪಾಯವನ್ನು ಅನುಸರಿಸುವುದು ಯೋಗ್ಯವೆನ್ನುತ್ತಾರೆ. ಕಾಡಿನಲ್ಲಿರುವ ಶ್ರೇಷ್ಠವಾದ ಮತ್ತು ಎತ್ತರವಾದ ಮರವನ್ನು ಕಡಿಯುವ ಮೊದಲು ಕಾಡಿನ ದೇವತೆಗೆ ಪ್ರಾರ್ಥನೆಯನ್ನು ಸಲ್ಲಿಸುತ್ತಾರೆ.

ಸ್ವಾಮಿ, ಮುಂದೆ ಸಾಧ್ಯವಾಗದ ಕಾರ್ಯದ ಬಗ್ಗೆ ಅಥವಾ ಕಷ್ಟವನ್ನು ತಂದೊಡ್ಡುವ ಕಾರ್ಯದ ಬಗ್ಗೆ ಮಾತನಾಡಿ ತಾನೆ ಏನು ಪ್ರಯೋಜನ ? ಸ್ಥಿರತೆಯಿಲ್ಲದ, ಉದ್ಯಮಶೀಲರಲ್ಲದ ಹಾಗೂ ಮತ್ತೆ ಮತ್ತೆ ದೋಷವನ್ನೇ ಕಾಣುವ ಜನರ ಮಾತು ಫಲಪ್ರಾಪ್ತಿಯ ಕಾಲದಲ್ಲಿ ಸುಳ್ಳಾದಾಗ ಅವರು ಲೋಕದ ನಿಂದೆಗೆ ಪಾತ್ರರಾಗುತ್ತಾರೆ.

ಸಣ್ಣ ಕೆಲಸದಲ್ಲಿಯೂ ಕೂಡ ಬುದ್ಧಿವಂತನು ಅನಾದರವನ್ನು ಮಾಡಬಾರದು. ಇದು ಸಣ್ಣ ಕೆಲಸ, ಯತ್ನವಿಲ್ಲದೆಯೇ ಮಾಡುವೆನು ಎಂದು ಅನಾದರವನ್ನು ತೋರುತ್ತಾ ಕೆಲಸವನ್ನು ಉಪೇಕ್ಷಿಸುತ್ತಾ ಎಚ್ಚರವಿಲ್ಲದೆ ನಡೆಯುವ ಜನರು ವಿಪತ್ತಿನಿಂದ ಸುಲಭವಾಗಿ ದೊರಕುವ ಪಶ್ಚಾತ್ತಾಪ ದುಃಖವನ್ನು ಪಡೆಯುತ್ತಾರೆ.

ಶತ್ರುವನ್ನು ಗೆದ್ದ ನನ್ನ ಪ್ರಭುವಿಗೆ ಇಂದು ಹಿಂದಿನಂತೆ ನಿದ್ರೆಯ ಸುಖವು ದೊರಕುತ್ತದೆ. ಮನೆಯಲ್ಲಿ ಹಾವು ಇಲ್ಲದಿದ್ದಾಗ, ಅಥವಾ ಮನೆಗೆ ನುಗ್ಗಿದ ಹಾವನ್ನು ಕೊಂದಾಗ ಸುಖವಾಗಿ ನಿದ್ರಿಸಬಹುದು. ಮನೆಯಲ್ಲಿ ಕಾಣಿಸಿಕೊಂಡ ಹಾವು ಮತ್ತೆ ಅದೃಶ್ಯವಾದಾಗ ಸುಖವಾದ ನಿದ್ದೆಯು ಬರಲು ಸಾಧ್ಯವಿಲ್ಲ. ವಿಪುಲವಾದ ಪರಿಶ್ರಮದಿಂದ ಸಾಧ್ಯವಾಗುವ, ಮಹತ್ತರವಾದ, ಪ್ರೀತಿಪಾತ್ರರ ಆಶೀರ್ವಾದದ ಅಪೇಕ್ಷೆಯುಳ್ಳ, ನೀತಿ, ಸಾಹಸ, ಧೈರ್ಯ ಮುಂತಾದವುಗಳಿಂದ ಸಾಧಿಸಬಲ್ಲ ಕಾರ್ಯಗಳನ್ನು ಎಲ್ಲಿಯವರೆಗೆ ಮುಗಿಸುವುದಿಲ್ಲವೋ, ಅಲ್ಲಿಯವರೆಗೆ ಮಾನ, ಗರ್ವ ಮತ್ತು ಪರಾಕ್ರಮವನ್ನು ಬಯಸುವ ವ್ಯಕ್ತಿಗಳಿಗೆ ಹೃದಯದಲ್ಲಿ ಶಾಂತಿ ಹಾಗೂ ವಿಶ್ರಾಂತಿ ಹೇಗೆ ತಾನೆ ಸಿಗುವುದು ? ಈಗ ಆರಂಭಿಸಿದ ಕಾರ್ಯವು ಸಮಾಪ್ತವಾಗಿರುವುದರಿಂದ ನನ್ನ ಮನಸ್ಸಿಗೆ ವಿಶ್ರಾಂತಿ. ಈಗ ರಾಜ್ಯಕ್ಕೆ ಬಂದ ಕಂಟಕವು ದೂರವಾದ್ದರಿಂದ ನೀನು ಪ್ರಜಾಪಾಲನೆಯಲ್ಲಿ ತೊಡಗಿ, ವಂಶಕ್ರಮದಲ್ಲಿ ಬಂದ ಪುತ್ರರು, ಶ್ವೇತಛತ್ರ ಹಾಗೂ ಸಂಪತ್ತಿನಿಂದ ಕೂಡಿದ ರಾಜ್ಯವನ್ನು ಧೀರ್ಘಕಾಲ ಅನುಭವಿಸು.

ಅಲ್ಲದೆ ಯಾವ ರಾಜನು ಪ್ರಜೆಗಳ ರಕ್ಷಣೆಯನ್ನು ಮಾಡದೆ ಪ್ರಜೆಗಳನ್ನು ಸುಖದಲ್ಲಿರಿಸುವುದಿಲ್ಲವೋ ಅಂತವನ ರಾಜ್ಯವು/ಆಡಳಿತವು ಆಡಿನ ಕುತ್ತಿಗೆಯಲ್ಲಿ ಜೋಲಾಡುವ ಮಾಂಸಖಂಡದಂತೆ ನಿಷ್ಪ್ರಯೋಜಕ. ಯಾವ ರಾಜನಿಗೆ ಗುಣಗಳಲ್ಲಿ ಅನುರಾಗವಿದೆಯೋ, ವ್ಯಸನಗಳಲ್ಲಿ ಅನಾದರವಿದೆಯೋ ಮತ್ತು ಒಳ್ಳೆಯ ಸೇವಕರಲ್ಲಿ ಪ್ರೀತಿಯಿದೆಯೋ, ಅವನು ಬೀಸುತ್ತಿರುವ ಚಾಮರವನ್ನೇ ವಸ್ತ್ರವನ್ನಾಗುಳ್ಳ ಹಾಗೂ ಶ್ವೇತಛತ್ರವನ್ನೇ ಆಭರಣವಾಗುಳ್ಳ ರಾಜಶ್ರೀಯನ್ನು ಚಿರಕಾಲ ಅನುಭವಿಸುತ್ತಾನೆ.

ರಾಜ್ಯವು ದಕ್ಕಿತು ಎಂದು ಐಶ್ವರ್ಯದ ಮದದಿಂದ ನೀನು ವ್ಯವಹರಿಸಬಾರದು ಏಕೆಂದರೆ ರಾಜನ ಸಂಪತ್ತು ಚಂಚಲವಾಗಿರುತ್ತದೆ. ರಾಜ್ಯಲಕ್ಷ್ಮ್ನಿಯನ್ನು ಪಡೆಯುವುದು ಬಿದಿರುನ್ನು ಏರುವಂತೆ ಕಷ್ಟಕರವು, ಬಿದಿರಿನಿಂದ ಜಾರುವಂತೆ ಯಾವಾಗಲಾದರೂ ಅವಳು ಕಳೆದುಹೋಗಬಹುದು. ನೂರುಪ್ರಯತ್ನಗಳಿಂದ ಅವಳನ್ನು ಹಿಡಿದುಕೊಳ್ಳುವುದು ಪಾದರಸವನ್ನು ಹಿಡಿದುಕೊಳ್ಳುವಷ್ಟು ಕಷ್ಟ. ಚೆನ್ನಾಗಿ ಆರಾಧಿಸಿದರೂ ರಾಜ್ಯಲಕ್ಷ್ಮಿಯು ಮೋಸಮಾಡುವಳು ಮತ್ತು ವಾನರಜಾತಿಯಂತೆ ಚಾಪಲ್ಯವುಳ್ಳವಳು. ಕಮಲದ ಎಲೆಯ ಮೇಲೆ ಕುಳಿತ ನೀರಿನಂತೆ ಸಂಪರ್ಕರಹಿತಳು. ವಾಯುವಿನ ವೇಗದಂತೆ ಅತಿಚಪಲಳು. ದುಷ್ಟರ ಸಂಘದಂತೆ ಅಸ್ಥಿರಳು. ಸರ್ಪದ ವಿಷದಂತೆ ಸೇವಿಸಲು ಅಯೋಗ್ಯಳು. ಸಂಧ್ಯಾಕಾಲದ ಮೇಘರಾಶಿಯಂತೆ ಸ್ವಲ್ಪಕಾಲ ಮಾತ್ರ ಉಳಿಯುವವಳು. ನೀರಿನ ಗುಳ್ಳೆಗಳಂತೆ ಕ್ಷಣಿಕಳು. ಶರೀರದ ಪ್ರಕೃತಿಯಂತೆ ಕೃತಘಳು.  ಸ್ವಪ್ನದಲ್ಲಿ ಕಂಡ ದ್ರವ್ಯರಾಶಿಯಂತೆ ಕಾಣಿಸಿ ಮಾಯವಾಗುವವಳು.

ರಾಜ್ಯಾಭಿಷೇಕವಾದಾಗಲೇ ಬುದ್ಧಿಯು ವಿಪತ್ತುಗಳ ಬಗ್ಗೆ ಚಿಂತಿಸಲಾರಂಭಿಸಬೇಕು. ಏಕೆಂದರೆ ರಾಜ್ಯಾಭಿಷೇಕದ ಸಮಯದಲ್ಲಿ ಅಭಿಷೇಕ ಮಾಡುವ ಮಡಕೆಯು ಕೇವಲ ನೀರನ್ನು ಮಾತ್ರವಲ್ಲದೆ, ಆಪತ್ತುಗಳನ್ನೂ ಕೂಡ ಸುರಿಸುತ್ತದೆ. ಆಪತ್ತುಗಳಿಗೆ ತಲುಪಲಾರದ ಜಾಗ ಎಂದು ಯಾವುದು ಕೂಡ ಇಲ್ಲ. ರಾಮನ ವನವಾಸ, ಬಲಿಯ ಬಂಧನ, ಪಾಂಡುಸುತರ ವನವಾಸ, ಯದುಗಳ ಪರಸ್ಪರ ಯುದ್ಧದಿಂದ ಮರಣ, ನಳರಾಜನ ರಾಜ್ಯನಿರ್ಗಮನ, ಬೃಹನ್ನಳೆಯಾದ ಅರ್ಜುನನ ನಾಟ್ಯ ಶಿಕ್ಷಣ, ಲಂಕೇಶ್ವರ ರಾವಣನ ಪತನ – ಇವೆಲ್ಲವನ್ನು ಯೋಚಿಸಿದರೆ ಎಲ್ಲವೂ ಕಾಲದ ಪ್ರಭಾವದಿಂದ ಉಂಟಾಗುತ್ತದೆ ಎಂದು ತಿಳಿಯುತ್ತದೆ. ಹೀಗಿದ್ದಾಗ ಯಾರು ಯಾರನ್ನು ತಾನೆ ರಕ್ಷಿಸುತ್ತಾರೆ ? ಇಂದ್ರನ ಸ್ನೇಹಿತನಾಗಿ ಸ್ವರ್ಗಕ್ಕೆ ಹೋದ ದಶರಥ ಇಂದು ಎಲ್ಲಿಗೆ ಹೋದ ? ಸಾಗರದ ಸೀಮೆಯನ್ನು ನಿರ್ಧರಿಸಿದ ಸಗರ ಮಹಾರಾಜನು ಎಲ್ಲಿಗೆ ಹೋದ ? ಅಂಗೈಯಿಂದ ಹುಟ್ಟಿದ ವೈಣ್ಯ (ಪೃಥು) ಎಲ್ಲಿಗೆ ಹೋದ ? ಸೂರ್ಯನ ಮಗನಾದ ಮನುವು ಎಲ್ಲಿಗೆ ಹೋದ ? ಇವರೆಲ್ಲರೂ ನಿಶ್ಚಯವಾಗಿ ಕಾಲಪುರುಷನ ಪ್ರಭಾವದಿಂದಲೇ ಉನ್ನತರಾಗಿ ಕಾಲದಿಂದಲೇ ಮೃತ್ಯುವಶವಾದರು.

ತ್ರಿಲೋಕ ವಿಜಯಿಯಾದ ಮಾಂಧಾತನು ಎಲ್ಲಿಗೆ ಹೋದ ? ಸತ್ಯವ್ರತ (ಭೀಷ್ಮನು) ಎಲ್ಲಿಗೆ ಹೋದ ? ದೇವತೆಗಳ ರಾಜ ನಹುಷನು ಎಲ್ಲಿಗೆ ಹೋದ ? ಉತ್ತಮ ಶಾಸ್ತ್ರಕೋವಿದನಾದ ಕೇಶವನು ಎಲ್ಲಿಗೆ ಹೋದ ? ಇವರೆಲ್ಲರನ್ನೂ ರಥ, ಆನೆಗಳೊಂದಿಗೆ ಇಂದ್ರನ ಆಸನವನ್ನೇರುವ ಯೋಗ್ಯರನ್ನಾಗಿ ಮಾಡಿದ್ದು ಮಹಾತ್ಮನಾದ ಕಾಲ ಹಾಗೂ ಕಾಲನೇ ಎಲ್ಲರನ್ನೂ ನಾಶಮಾಡಿದನು. ಅಲ್ಲದೆ ಆ ರಾಜ, ಆ ಸಚಿವರು, ಆ ಸುಂದರ ಸ್ತ್ರೀಯರು, ಆ ವನ ಉಪವನಗಳು ಎಲ್ಲಿ ಹೋದವು ? ಅವೆಲ್ಲವೂ ಕಾಲನೇ ಸೃಷ್ಟಿಸಿ  ಕಾಲನೇ ನಷ್ಟ ಮಾಡಿದನು.

ಆದ್ದರಿಂದ ಮತ್ತಗಜದ ಕಿವಿಯಂತೆ ಚಂಚಲವಾದ ರಾಜ್ಯಲಕ್ಷ್ಮಿಯನ್ನು ನ್ಯಾಯನಿಷ್ಠೆಯಿಂದ ಕೂಡಿದವನಾಗಿ ಅನುಭವಿಸು.

*** ಇಲ್ಲಿಗೆ ವಿಷ್ಣುಶರ್ಮವಿರಚಿತ ಪಂಚತಂತ್ರದ ಮೂರನೆಯ ತಂತ್ರವಾದ ಕಾಕೋಲೂಕೀಯವು ಸಂಪೂರ್ಣವಾಯಿತು ***

ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶವನ್ನು ಇಲ್ಲಿ ಓದಬಹುದು

2 Responses to ಪಂಚತಂತ್ರ – ಕಾಕೋಲೂಕೀಯ

  1. […] ಈಗಾಗಲೇ ಅನುವಾದಗೊಂಡಿರುವ ಭಾಗಗಳನ್ನು ಕೆಳಗೆ ಕೊಟ್ಟ URL ಗಳನ್ನು ಬಳಸಿ ಓದಬಹುದು: ಪಂಚತಂತ್ರದ ಮುಖಪುಟ ತಂತ್ರ 1 – ಮಿತ್ರಭೇದ ತಂತ್ರ 2 – ಮಿತ್ರಸಂಪ್ರಾಪ್ತಿ ತಂತ್ರ 3 – ಕಾಕೋಲೂಕೀಯ […]

  2. […] – ಮಿತ್ರಭೇದ ತಂತ್ರ 2 – ಮಿತ್ರಸಂಪ್ರಾಪ್ತಿ ತಂತ್ರ 3 – ಕಾಕೋಲೂಕೀಯ ತಂತ್ರ 4 – […]

Leave a comment