ಪಂಚತಂತ್ರ – ಲಬ್ಧಪ್ರಣಾಶ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

Panchatantra Book

[ಪಂಚತಂತ್ರ ಮುಖಪುಟ, ತಂತ್ರ 1. ಮಿತ್ರಭೇದ, ತಂತ್ರ 2. ಮಿತ್ರಸಂಪ್ರಾಪ್ತಿ, ತಂತ್ರ 3. ಕಾಕೋಲೂಕೀಯ, ತಂತ್ರ 4. ಲಬ್ಧಪ್ರಣಾಶ, ತಂತ್ರ 5. ಅಪರೀಕ್ಷಿತಕಾರಕ]

ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶದ ಮೊದಲನೆಯ ನುಡಿ ಹೀಗಿದೆ – “ಮಾಡಬೇಕಾದ ಕೆಲಸಗಳಲ್ಲಿ ಯಾರ ಬುದ್ಧಿಯು ಕುಂಠಿತವಾಗುವುದಿಲ್ಲವೋ ಅವನು ನೀರಿನಲ್ಲಿದ್ದ ಮಂಗವು ಪಾರಾದಂತೆ, ಕಷ್ಟದಿಂದ ಪಾರಾಗುತ್ತಾನೆ.”

panchatantra-labdhapranasha-wm

ಕರಾಲಮುಖ ಮೊಸಳೆಯು ರಕ್ತಮುಖ ಮಂಗವನ್ನು ಸುಳ್ಳು ಹೇಳಿ ನಂಬಿಸಿ ತನ್ನ ಮಡದಿಗೆ ಆಹಾರವಾಗಿ ಕೊಂಡೊಯ್ಯುತ್ತಿರುವುದು. ಚಿತ್ರ – Kum. Drashti Piyusha Patel

ಲಬ್ಧಪ್ರಣಾಶದ ಕಥೆಯು ಹೀಗೆ ಕೇಳಿಬರುತ್ತದೆ – ಒಂದು ಸಮುದ್ರದ ತೀರದಲ್ಲಿ ಸದಾ ಫಲಗಳಿಂದ ತುಂಬಿರುವ ಜಂಬೂವೃಕ್ಷವಿತ್ತು. ಅಲ್ಲಿ ರಕ್ತಮುಖ ಎಂಬ ಮಂಗವು ವಾಸಿಸುತ್ತಿತ್ತು. ಒಮ್ಮೆ ಸಮುದ್ರದಿಂದ ಹೊರಬಂದ ಕರಾಲಮುಖ ಎಂಬ ಮೊಸಳೆಯು ಆ ಮರದ ಕೆಳಗಿರುವ ಮೃದುವಾದ ಮರಳ ಮೇಲೆ ಬಂದು ಕುಳಿತುಕೊಂಡಿತು.

ಆಗ ಮೊಸಳೆಗೆ ರಕ್ತಮುಖ ವಾನರ – “ನೀನು ನನ್ನಲ್ಲಿಗೆ ಬಂದಿರುವ ಅತಿಥಿ. ನಾನು ಕೊಡುವ ಅಮೃತಕ್ಕೆ ಸಮನಾದ ಈ  ಜಂಬೂಫಲಗಳನ್ನು ತಿನ್ನು. ವೈಶ್ವದೇವಬಲಿಯ (ಒಂದು ಯಜ್ಞವಿಶೇಷ) ಕೊನೆಗೆ ಬಂದ ಅತಿಥಿಯು ಪ್ರಿಯನಾಗಿರಲಿ, ದ್ವೇಷಿಸುವವನಾಗಿರಲಿ, ಮೂರ್ಖನಾಗಿರಲಿ ಅಥವಾ ಪಂಡಿತನಾಗಿರಲಿ, ಅವನು ಸ್ವರ್ಗದ ಮಾರ್ಗವನ್ನು ತೋರತಕ್ಕವನೆಂದು ಭಾವಿಸಬೇಕು. ವೈಶ್ವದೇವಬಲಿ ಯಜ್ಞದ ಕೊನೆಯಲ್ಲಿ ಮತ್ತು ಶ್ರಾದ್ಧದಲ್ಲಿ ಬಂದ ಅತಿಥಿಯ ವೇದ ಶಾಖೆ, ಕುಲ, ಗೋತ್ರ ಅಥವಾ ವಿದ್ಯೆಯನ್ನು ಕೇಳಬಾರದೆಂದು ಮನು ತಿಳಿಸಿದ್ದಾನೆ. ವೈಶ್ವದೇವಬಲಿ ಯಜ್ಞದ ಕೊನೆಯಲ್ಲಿ ಶ್ರಮಪಟ್ಟು ದೂರದಿಂದ ಬಂದ ಅತಿಥಿಯನ್ನು ಯಾರು ಸತ್ಕರಿಸುವನೋ ಅವನಿಗೆ ಉತ್ತಮ ಗತಿಯು ಪ್ರಾಪ್ತವಾಗುತ್ತದೆ. ಅತಿಥಿಯು ಸತ್ಕರಿಸಲ್ಪಡದೆ ನಿಟ್ಟುಸಿರನ್ನು ಬಿಟ್ಟಿಕೊಂಡು ಮನೆಯಿಂದ ಹೊರಟರೆ, ಅಂಥ ಮನೆಯನ್ನು ಪಿತೃಗಳೊಂದಿಗೆ ದೇವತೆಗಳೂ ಬಿಟ್ಟು ಹೋಗುತ್ತಾರೆ.”

ಹೀಗೆ ಹೇಳಿ ರಕ್ತಮುಖ ವಾನರ ಮೊಸಳೆಗೆ ಜಂಬೂಫಲಗಳನ್ನು ಕೊಟ್ಟಿತು. ಕರಾಲಮುಖ ಮೊಸಳೆ ಅವುಗಳನ್ನು ತಿಂದು ರಕ್ತಮುಖನೊಂದಿಗೆ ಗೋಷ್ಠಿಸುಖವನ್ನು ಅನುಭವಿಸಿ ನಂತರ ತನ್ನ ಮನೆಗೆ ಹಿಂದಿರುಗಿತು. ಹೀಗೆ ನಿತ್ಯವೂ ಅವರು ಜಂಬೂವೃಕ್ಷದ ನೆರಳಿನಲ್ಲಿ ವಿವಿಧ ಶಾಸ್ತ್ರಗಳ ಗೋಷ್ಠಿಯನ್ನು ಮಾಡುತ್ತಾ ಕಾಲವನ್ನು ಸುಖವಾಗಿ ಕಳೆಯುತ್ತಿದ್ದರು. ಮೊಸಳೆಯು ತಿಂದುಳಿದ ಜಂಬೂಫಲಗಳನ್ನು ಮನೆಗೆ ಹೋಗಿ ಹೆಂಡತಿಗೆ ಕೊಡುತಿತ್ತು.

ಹೀಗೆ ಒಂದು ದಿನ ಅದರ ಹೆಂಡತಿ ಕೇಳಿದಳು – “ನಾಥ, ನಿನಗೆ ಎಲ್ಲಿಂದ ಈ ರೀತಿಯ ಅಮೃತಫಲಗಳು ಸಿಗುತ್ತವೆ ?”

ಕರಾಲಮುಖ – “ಭದ್ರೆ, ನನ್ನ ಪರಮ ಸ್ನೇಹಿತನಾದ ರಕ್ತಮುಖನೆಂಬ ವಾನರನಿದ್ದಾನೆ. ಅವನು ಪ್ರೀತಿಯಿಂದ ಈ ಫಲಗಳನ್ನು ಕೊಡುತ್ತಾನೆ.”

ಆಗ ಅವಳು ಹೇಳಿದಳು – “ಯಾರು ಅಮೃತಕ್ಕೆ ಸಮಾನವಾದ ಇಂತಹ ಫಲಗಳನ್ನು ತಿನ್ನುವನೋ, ಅವನ ಹೃದಯವೂ ಅಮೃತಮಯವಾಗಿರುತ್ತದೆ. ನಿನಗೆ ನಾನು ಹೆಂಡತಿಯಾಗಿ ಇರಬೇಕೆಂದರೆ, ಅವನ ಹೃದಯವನ್ನು ನನಗೆ ತಂದುಕೊಡು. ಅದನ್ನು ತಿಂದು ಮುಪ್ಪು ಹಾಗೂ ಸಾವುಗಳಿಲ್ಲದೆ ನಿನ್ನೊಂದಿಗೆ ಸುಖಗಳನ್ನು ಅನುಭವಿಸುವೆನು.

ಕರಾಲಮುಖ – “ಭದ್ರೆ, ಹಾಗೆ ನುಡಿಯಬೇಡ, ಏಕೆಂದರೆ ನಾನು ಅವನನ್ನು ಸೋದರನೆಂದು ಅಂಗೀಕರಿಸಿದ್ದೇನೆ, ಅಲ್ಲದೆ ಅವನು ನನಗೆ ಹಣ್ಣುಗಳನ್ನು ಕೊಡುವವನು. ಆದ್ದರಿಂದ ಅವನನ್ನು ಕೊಲ್ಲಲು ಸಾಧ್ಯವಿಲ್ಲ, ನಿನ್ನ ಅರ್ಥವಿಲ್ಲದ ಹಠವನ್ನು ಬಿಡು. ಅಲ್ಲದೆ ತಿಳಿದವರು ಹೀಗೆ ಹೇಳುತ್ತಾರೆ – ಒಬ್ಬನನ್ನು ತಾಯಿಯು ಹುಟ್ಟಿಸುತ್ತಾಳೆ, ಮತ್ತೊಬ್ಬ ಮಾತಿನಿಂದ ಹುಟ್ಟಿಕೊಳ್ಳುತ್ತಾನೆ (ಅಂದರೆ ನೀನು ನನ್ನ ಸೋದರನಂತೆ ಎಂದು ಮಾತಿನ ಮೂಲಕ ಅಂಗೀಕರಿಸಿದ್ದರಿಂದ ಹುಟ್ಟಿಕೊಂಡವನು). ಇವರಿಬ್ಬರಲ್ಲಿ ಮಾತಿನಲ್ಲಿ ಹುಟ್ಟಿದವನು ಸೋದರನಿಗಿಂತ ಶ್ರೇಷ್ಠ.

ಆಗ ಹೆಂಡತಿ – “ನೀನು ಎಂದೂ ನಾನು ಹೇಳಿದ ಮಾತನ್ನು ಪಾಲಿಸದೇ ಇರಲಿಲ್ಲ. ಅವಳು ಖಂಡಿತವಾಗಿಯೂ ವಾನರಳೇ ಇರಬೇಕು. ಆದ್ದರಿಂದಲೇ ನೀನು ಅವಳಲ್ಲಿ ಅನುರಕ್ತನಾಗಿ ದಿನವೂ ಅಲ್ಲಿಗೆ ಹೋಗುತ್ತಿರುವೆ. ನಿನ್ನನ್ನು ನಾನು ಸರಿಯಾಗಿ ತಿಳಿದುಕೊಂಡೆ. ನೀನು ನನ್ನೊಂದಿಗೆ ಪ್ರೇಮಪೂರ್ವಕವಾದ ಮಾತುಗಳನ್ನು ಆಡುವುದಿಲ್ಲ, ನಾನು ಬಯಸಿದ್ದನ್ನು ನೀಡುವುದಿಲ್ಲ ಮತ್ತು ಪ್ರಾಯಶಃ ರಾತ್ರಿ ಮಲಗಿದ್ದಾಗ ಉರಿಯುತ್ತಿರುವ ಬೆಂಕಿಯಂತಹ ಉಸಿರನ್ನು ಬಿಡುವೆ. ಕುತ್ತಿಗೆಯನ್ನು ಹಿಡಿದುಕೊಂಡು ತಬ್ಬಿಕೊಂಡರೂ ಉತ್ಸಾಹವನ್ನು ತೋರುವುದಿಲ್ಲ ಹಾಗೂ ಚುಂಬಿಸುವುದೂ ಇಲ್ಲ. ಆದ್ದರಿಂದ ಎಲೈ ಮೋಸಗಾರನೇ, ನಿನ್ನ ಹೃದಯದಲ್ಲಿ ನಾನಲ್ಲದೆ ಬೇರೆ ಯಾರೋ ಇರುವಳು.”

ಆಗ ಅವಳ ಗಂಡ ಆಕೆಗೆ ಕಾಲು ಹಿಡಿದು ನಮಸ್ಕರಿಸಿ, ಅವಳನ್ನು ತೊಡೆಯ ಮೇಲೆ ಕೂರಿಸಿಕೊಂಡು ಅತ್ಯಂತ ಕೋಪಗೊಂಡಿದ್ದ ಆಕೆಗೆ ದೈನ್ಯದಿಂದ ಹೇಳಿದನು – “ನಿನ್ನ ಕಾಲುಗಳಿಗೆ ಬಿದ್ದುರುವೆ, ನಿನ್ನ ಸೇವಕನಾಗಿರುವೆ, ಹೇ ಕೋಪಶೀಲೇ, ಪ್ರಾಣವಲ್ಲಭೇ, ಏಕೆ ಕೋಪಮಾಡುವೆ ?”

ಅವಳು ಆ ಮಾತುಗಳನ್ನು ಕೇಳಿ ಕಣ್ಣುಗಳಲ್ಲಿ ನೀರು ತುಂಬಿಕೊಂಡು ನುಡಿದಳು – “ಎಲೈ ಧೂರ್ತ, ನೂರಾರು ಆಸೆಗಳುಳ್ಳ ಅವಳು ಕಪಟ ಭಾವದಿಂದ ನಿನ್ನನ್ನು ರಮಿಸುತ್ತಾ ನಿನ್ನ ಮನಸ್ಸಿನಲ್ಲಿ ನೆಲೆಸಿರುವಳು. ನನಗೆ ಇಲ್ಲಿ ಏನೂ ಸ್ಥಾನವಿಲ್ಲ, ಆದ್ದರಿಂದ ಕಾಲಿಗೆ ಬೀಳುವ ನಾಟಕದಿಂದೇನು ಪ್ರಯೋಜನ ? ಅಲ್ಲದೆ ಅವಳು ನಿನಗೆ ಪ್ರೀತಿಪಾತ್ರಳಲ್ಲದಿದ್ದರೆ, ನಾನು ಹೇಳಿದರೂ ಕೂಡ ಏಕೆ ಅವಳನ್ನು ಕೊಲ್ಲುವುದಿಲ್ಲ ? ಅವನು ವಾನರನೇ ಆಗಿದ್ದಲ್ಲಿ, ಅವನೊಂದಿಗೆ ನಿನಗೆ ಎಂತಹ ಸ್ನೇಹ ? ಹೆಚ್ಚೇನು ಹೇಳುವುದು ? ಅವನ ಹೃದಯವನ್ನು ನಾನು ತಿನ್ನದಿದ್ದರೆ, ಉಪವಾಸವನ್ನು ಮಾಡಿ ಸತ್ತುಹೋಗುವೆನು.”

ಹೀಗೆ ಅವಳ ನಿಶ್ಚಯವನ್ನು ಕೇಳಿ ಚಿಂತೆಯಿಂದ ವ್ಯಾಕುಲಗೊಂಡ ಮನಸ್ಸುಳ್ಳ ಮೊಸಳೆಯು – “ಅಯ್ಯೋ, ಈ ಹೇಳಿಕೆ ಸರಿಯಾಗಿಯೇ ಇದೆ – ವಜ್ರಲೇಪ, ಮೂರ್ಖ, ನಾರಿಯರು, ಮೊಸಳೆ, ಮೀನು, ನೀಲಿಬಣ್ಣ ಹಾಗೂ ಮದ್ಯಪಾನ – ಇವುಗಳು ಒಮ್ಮೆ ಹಿಡಿದುಕೊಂಡರೆ, ಎಂದಿಗೂ ಬಿಡುವುದಿಲ್ಲ. ಆದ್ದರಿಂದ ಏನು ಮಾಡಲಿ ? ಅವನನ್ನು ಹೇಗೆ ಕೊಲ್ಲಲು ಸಾಧ್ಯ ?”

ಹೀಗೆ ಯೋಚಿಸಿ ಮೊಸಳೆಯು ಮಂಗದ ಬಳಿಗೆ ಬಂತು. ಮಂಗವು ತಡವಾಗಿ ಬಂದ ಹಾಗೂ ಉದ್ವೇಗದಿಂದ ಕೂಡಿದ ಅದನ್ನು ನೋಡಿ ಹೇಳಿತು – “ಎಲೈ ಮಿತ್ರ, ಏನು ಇಂದು ತಡವಾಗಿ ಬಂದಿರುವೆ ? ಏಕೆ ಉತ್ಸಾಹದಿಂದ ಮಾತನಾಡುತ್ತಿಲ್ಲ ? ಮತ್ತೆ ಸುಭಾಷಿತಗಳನ್ನೂ ಕೂಡ ಹೇಳುತ್ತಿಲ್ಲ ?”

ಮೊಸಳೆ – “ಮಿತ್ರ, ಇಂದು ನಿನ್ನ ಅತ್ತಿಗೆ (ಅಂದರೆ ನನ್ನ ಹೆಂಡತಿ) ಕಠೋರವಾದ ಮಾತುಗಳಿಂದ ಹೀಗೆ ಹೇಳಿದ್ದಾಳೆ – ‘ಎಲೈ ಕೃತಘ್ನ, ನಿನ್ನ ಮುಖವನ್ನು ತೋರಿಸಬೇಡ, ಪ್ರತಿದಿನವೂ ಮಿತ್ರನನ್ನು ಅವಲಂಬಿಸಿ ಬುದುಕುತ್ತೀಯೆ, ಆದರೆ ಆತನಿಗೆ ಪ್ರತ್ಯುಪಕಾರ ಮತ್ತು ಮನೆಗೆ ಕರೆತರುವುದನ್ನು ಮಾಡುವುದಿಲ್ಲ. ಆದ್ದರಿಂದ ನಿನಗೆ ಪ್ರಾಯಶ್ಚಿತ್ತ ಕೂಡ ಇಲ್ಲ. ಬ್ರಹ್ಮಹತ್ಯೆಗೆ, ಮದ್ಯಪಾನಕ್ಕೆ, ಕಳ್ಳತನಕ್ಕೆ, ವ್ರತಭಂಗಕ್ಕೆ ಮತ್ತು ಮೋಸಕ್ಕೆ ತಿಳಿದವರು ಪ್ರಾಯಶ್ಚಿತ್ತವನ್ನು ಹೇಳಿದ್ದಾರೆ ಆದರೆ ಕೃತಘ್ನತೆಗೆ ಪ್ರಾಯಶ್ಚಿತ್ತವಿಲ್ಲ. ಆದ್ದರಿಂದ ಇಂದು ಪ್ರತ್ಯುಪಕಾರ ಮಾಡುವ ಸಲುವಾಗಿ ನಿನ್ನ ಸೋದರನನ್ನು ಕರೆದುಕೊಂದು ಮನೆಗೆ ಬಾ. ಇಲ್ಲದಿದ್ದರೆ ನಿನ್ನನ್ನು ನಾನು ಮತ್ತೆ ಪರಲೋಕದಲ್ಲಿಯೇ ನೋಡುವುದು’.

ನಾನು ತಡವಾಗಿ ಏಕೆ ಬಂದೆನೆಂದು ನೀನು ಕೇಳಿದೆ. ಆಕೆಯೊಂದಿಗೆ ನಿನ್ನ ವಿಷಯದಲ್ಲಿ ಜಗಳ ಮಾಡುತ್ತಾ ಸಮಯ ಕಳೆದುಹೋಯಿತು. ಆದ್ದರಿಂದ ನನ್ನ ಮನೆಗೆ ಬಾ. ನಿನ್ನ ಅತ್ತಿಗೆ ಮಂಟಪವನ್ನು ನಿರ್ಮಿಸಿ, ಯೋಗ್ಯವಾದ ವಸ್ತ್ರಾಭರಣಗಳಿಂದ ಅಲಂಕರಿಸಿಕೊಂಡು, ಬಾಗಿಲಿಗೆ ಮಾಲೆಯನ್ನು ಕಟ್ಟಿ ನೀನು ಬರುವುದನ್ನು ಕಾತುರತೆಯಿಂದ ಕಾಯುತ್ತಿದ್ದಾಳೆ. “

ಮಂಗ – “ಎಲೈ ಮಿತ್ರ, ನನ್ನ ಅತ್ತಿಗೆ ಸರಿಯಾದುದನ್ನೇ ಹೇಳಿದ್ದಾಳೆ. ನೇಕಾರನು ವಸ್ತ್ರನಿರ್ಮಾಣ ಮಾಡುವಾಗ ವಸ್ತ್ರವನ್ನು ಹೇಗೆ ತನ್ನೆಡೆಗೆ ಎಳೆಯುತ್ತಾನೋ ಹಾಗೆ ತನ್ನ ಮಿತ್ರನ ಧನಾದಿಗಳನ್ನು ತನ್ನ ಬಳಿಗೆ ಎಳೆದುಕೊಳ್ಳುವ ಲೋಭಿಯನ್ನು ತ್ಯಜಿಸಬೇಕು. ಪ್ರೀತಿಯ ಆರು ಲಕ್ಷಣಗಳಿವೆ – ಕೊಡುವುದು, ತೆಗೆದುಕೊಳ್ಳುವುದು, ರಹಸ್ಯವನ್ನು ಹೇಳುವುದು ಮತ್ತು ಕೇಳುವುದು, ತಿನ್ನುವುದು ಹಾಗೂ ತಿನ್ನಿಸುವುದು.

ಆದರೆ ನಾವು ಕಾಡಿನಲ್ಲಿ ಇರುವವರು, ನಿಮ್ಮ ಮನೆಯಾದರೋ ನೀರಿನಲ್ಲಿದೆ. ಆದ್ದರಿಂದ ನಾನು ಹೇಗೆ ತಾನೆ ಬರಲು ಸಾಧ್ಯ ? ಆದ್ದರಿಂದ ನಿನ್ನ ಹೆಂಡತಿಯನ್ನೂ ಕೂಡ ಇಲ್ಲಿಗೆ ಕರೆದುಕೊಂಡು ಬಾ, ಅವಳಿಗೆ ನಮಸ್ಕರಿಸಿ ಆಶೀರ್ವಾದವನ್ನು ಪಡೆಯುವೆನು.”

ಮೊಸಳೆ – “ಸಮುದ್ರದ ಮಧ್ಯೆ ಒಂದು ರಮಣೀಯವಾದ ದ್ವೀಪದಲ್ಲಿ ನಮ್ಮ ಮನೆಯಿದೆ. ಆದ್ದರಿಂದ ನನ್ನ ಬೆನ್ನಿನಲ್ಲಿ ಕುಳಿತು ನಿರ್ಭಯದಿಂದ ಬಾ.

ವಾನರ ಅದನ್ನು ಕೇಳಿ ಆನಂದದಿಂದ – “ಭದ್ರ, ಹಾಗಿದ್ದರೆ ತಡವೇಕೆ ? ನಿನ್ನ ಬೆನ್ನಲ್ಲಿ ಕುಳಿತುಕೊಂಡೆನು, ತ್ವರೆಮಾಡು.

ಹಾಗೆ ಮಾಡಲಾಗಿ ಅಗಾಧವಾದ ಸಮುದ್ರದಲ್ಲಿ ಹೋಗುತ್ತಿದ್ದ ಮೊಸಳೆಯನ್ನು ನೋಡಿ ಭಯಗೊಂಡ ಮಂಗವು ಹೇಳಿತು – “ಸೋದರ, ಮೆಲ್ಲಮೆಲ್ಲಗೆ ಹೋಗು, ಮೇಲೇರಿ ಬರುತ್ತಿರುವ ಅಲೆಗಳು ನನ್ನನು ಮುಳುಗಿಸಿ ಬಿಡುತ್ತವೆ.”

ಅದನ್ನು ಕೇಳಿದ ಮೊಸಳೆಯು ಚಿಂತಿಸಿತು – “ಈ ಅಗಾಧವಾದ ಸಮುದ್ರಕ್ಕೆ ಬಂದು ಇವನು ನನ್ನ ವಶವಾಗಿರುವನು. ನನ್ನ ಬೆನ್ನ ಮೇಲಿರುವ ಇವನು ಒಂದು ಎಳ್ಳಿನಷ್ಟು ಕೂಡ ಚಲಿಸಲು ಅಸಮರ್ಥನು. ಆದ್ದರಿಂದ ಇವನಿಗೆ ನಿಜವನ್ನು ಹೇಳುವೆನು, ತನ್ನ ಇಷ್ಟದೇವತೆಯನ್ನು ಪ್ರಾರ್ಥಿಸಿಕೊಳ್ಳಲಿ”

ಹೀಗೆ ಯೋಚಿಸಿ ಮಂಗಕ್ಕೆ ಹೇಳಿತು – “ಮಿತ್ರ, ನನ್ನ ಹೆಂಡತಿಯ ಮಾತಿನಂತೆ ನಿನ್ನನ್ನು ನಂಬಿಸಿ ಕೊಲ್ಲಲು ಕರೆದುಕೊಂಡು ಬಂದಿರುವೆನು. ಆದ್ದರಿಂದ ನಿನ್ನ ಇಷ್ಟದೇವತೆಯನ್ನು ಸ್ಮರಿಸಿಕೋ”

ಮಂಗ – “ಸೋದರ, ನನ್ನನ್ನು ಕೊಲ್ಲವ ಉಪಾಯವನ್ನು ಮಾಡಲು ನಿನಗೆ ಅಥವಾ ನಿನ್ನ ಹೆಂಡತಿಗೆ ನಾನೇನಾದರೂ ಅಪಕಾರವನ್ನು ಮಾಡಿದೆನೆ ?”

ಮೊಸಳೆ – “ಅಮೃತಫಲದ ರಸದಿಂದ ಸ್ವಾದಿಷ್ಟವಾದ ನಿನ್ನ ಹೃದಯವನ್ನು ತಿನ್ನಲು ಅವಳಿಗೆ ಬಯಕೆಯಾಗಿದೆ, ಆದ್ದರಿಂದಲೇ ಹೀಗೆ ಮಾಡಿದೆ.”

ಆಗ ಸಮಯೋಚಿತವಾಗಿ ನಡೆಯುವ ಬುದ್ಧಿವಂತಿಕೆಯನ್ನುಳ್ಳ ಮಂಗವು ಹೇಳಿತು – “ಭದ್ರ, ಹಾಗಿದ್ದರೆ, ಇದನ್ನು ನೀನು ಅಲ್ಲೇ ನನಗೇಕೆ ಹೇಳಲಿಲ್ಲ ? ನಾನು ಯಾವಾಗಲೂ ಜಂಬೂವೃಕ್ಷದ ಪೊಟರೆಯಲ್ಲಿ ಅಡಗಿಸಿಡುವ ನನ್ನ ಹೃದಯವನ್ನು ನಿನ್ನ ಹೆಂಡತಿಗೆ ಕೊಡಲು ತೆಗೆದುಕೊಂಡು ಬರುತ್ತಿದ್ದೆ.”

ಅದನ್ನು ಕೇಳಿ ಆನಂದದಿಂದ ಮೊಸಳೆಯು ನುಡಿಯಿತು – “ಭದ್ರ, ಹಾಗಿದ್ದರೆ, ನಿನ್ನ ಹೃದಯವನ್ನು ಕೊಡು, ಅದನ್ನು ತಿಂದ ಆ ದುಷ್ಟಪತ್ನಿಯು ಉಪವಾಸದಿಂದ ಏಳುವಳು. ನಾನು ನಿನ್ನನ್ನು ಅದೇ ಜಂಬೂವೃಕ್ಷದ ಬಳಿಗೆ ಕರೆದೊಯ್ಯುವೆನು.”

ಅದು ಹೀಗೆ ಹೇಳಿ ವಾಪಸ್ಸು ತಿರುಗಿ ಜಂಬೂವೃಕ್ಷದ ಬಳಿಗೆ ಬಂತು. ಮಂಗವು ವಿವಿಧ ದೇವತೆಗಳಿಗೆ ಮನಸ್ಸಿನಲ್ಲಿಯೇ ಪೂಜೆಯನ್ನು ಸಲ್ಲಿಸುತ್ತಾ ಹೇಗೋ ತೀರವನ್ನು ತಲುಪಿತು. ಎತ್ತರವಾಗಿ ಜಿಗಿದು ಜಂಬೂವೃಕ್ಷವನ್ನೇರಿ ಚಿಂತಿಸಿತು – “ಆಹಾ! ಹೋದ ಪ್ರಾಣ ಮತ್ತೆ ಸಿಕ್ಕಂತಾಯಿತು. ವಿಶ್ವಾಸಕ್ಕೆ ಯೋಗ್ಯನಲ್ಲದವನನ್ನು ನಂಬಬಾರದು. ವಿಶ್ವಾಸಕ್ಕೆ ಯೋಗ್ಯನಾದವನನ್ನೂ ಕೂಡ ಅತಿಯಾಗಿ ನಂಬಬಾರದು. ನಂಬಿಕೆಯಿಂದುಂಟಾದ ಭಯವು ಆಮೂಲಾಗ್ರವಾಗಿ ನಾಶಮಾಡುತ್ತದೆ. ಇಂದು ನನಗೆ ಮತ್ತೆ ಪುನರ್ಜನ್ಮ ಇದ್ದಂತೆ.”

ಆಗ ಮೊಸಳೆ ಹೇಳಿತು – “ಮಿತ್ರ, ನಿನ್ನ ಹೃದಯವನ್ನು ಕೊಡು, ಅದನ್ನು ತಿಂದು ನನ್ನ ಪತ್ನಿಯು ಉಪವಾಸದಿಂದ ಏಳುವಳು.”

ಮಂಗವು ಜೋರಾಗಿ ನಕ್ಕು ಮೊಸಳೆಯನ್ನು ನಿಂದಿಸುತ್ತಾ ಹೇಳಿತು – “ಮೂರ್ಖನೆ, ನಿನಗೆ ಧಿಕ್ಕಾರ, ವಿಶ್ವಾಸಘಾತಕ, ಯಾರಿಗಾದರೂ ಎರಡು ಹೃದಯಗಳು ಇರುತ್ತವೆಯೇ ? ಈ ಕೂಡಲೆ ಜಂಬೂವೃಕ್ಷದ ಬಳಿಯಿಂದ ಹೊರಟುಹೋಗು, ಮತ್ತೆಂದೂ ಇಲ್ಲಿಗೆ ಬರಬೇಡ. ಯಾರು ಒಮ್ಮೆ ದುಷ್ಟತನವನ್ನು ತೋರಿ ಮತ್ತೆ ಮಿತ್ರನೊಡನೆ ಸೇರಲು ಬರುವನೋ, ಅವನು ಗರ್ಭವನ್ನು ಹೊತ್ತ ಹೇಸರಗತ್ತೆಯಂತೆ ಸಾವನ್ನು ಹೊಂದುವನು.”

ಅದನ್ನು ಕೇಳಿದ ಮೊಸಳೆಯು ನಾಚಿ ಚಿಂತಿಸಿತು – “ನಾನು ಮೂರ್ಖತನದಿಂದ ಇವನಿಗೆ ನನ್ನ ಮನಸ್ಸಿನ ಅಭಿಪ್ರಾಯವನ್ನು ಹೇಳಿಬಿಟ್ಟೆ. ಇವನು ಮತ್ತೆ ನನ್ನಲ್ಲಿ ವಿಶ್ವಾಸವನ್ನು ಹೊಂದುವಂತೆ ಪ್ರಯತ್ನಿಸುವೆನು.” ನಂತರ ಹೇಳಿತು – “ಮಿತ್ರ, ನಾನು ಹಾಸ್ಯಕ್ಕಾಗಿ ಹಾಗೆ ಹೇಳಿದೆ. ನಿನ್ನ ಹೃದಯದಿಂದ ನನ್ನ ಹೆಂಡತಿಗೆ ಏನೂ ಪ್ರಯೋಜನವಿಲ್ಲ. ಆದ್ದರಿಂದ ಅತಿಥಿಯಾಗಿ ನನ್ನ ಮನೆಗೆ ಬಾ, ನನ್ನ ಹೆಂಡತಿ ಕಾತುರತೆಯಿಂದ ಕಾಯುತ್ತಿದ್ದಾಳೆ.”

ವಾನರ – “ಎಲೈ ದುಷ್ಟ, ಹೋಗು, ಈಗ ನಾನು ಬರುವುದಿಲ್ಲ. ಹಸಿದವನು ಯಾವ ಪಾಪವನ್ನು ತಾನೆ ಮಾಡುವುದಿಲ್ಲ ? ದರಿದ್ರರಾದ ಮನುಷ್ಯರು ಕರುಣೆಯಿಲ್ಲದವರಾಗಿರುತ್ತಾರೆ. ಭದ್ರೆ! ಪ್ರಿಯದರ್ಶನನಿಗೆ ಹೇಳು ಗಂಗದತ್ತನು ಮತ್ತೆ ಬಾವಿಗೆ ಬರುವವನಲ್ಲ ಎಂದು”

ಮೊಸಳೆಯು ಅದೇನು ಉಕ್ತಿಯೆಂದು ಕೇಳಲು ಮಂಗವು ಗಂಗದತ್ತ ಮತ್ತು ಪ್ರಿಯದರ್ಶನ ಸರ್ಪದ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಮಂಗ ಮೊಸಳೆಗೆ ಹೇಳಿತು – “ಆದ್ದರಿಂದ ಎಲೈ ದುಷ್ಟ ಜಲಚರ, ನಾನೂ ಕೂಡ ಗಂಗದತ್ತನಂತೆ ನಿನ್ನ ಮನೆಗೆ ಎಂದೂ ಬರುವುದಿಲ್ಲ”

ಅದನ್ನು ಕೇಳಿದ ಮೊಸಳೆ – “ಎಲೈ ಮಿತ್ರ, ಇದು ಸರಿಯಲ್ಲ, ನನ್ನ ಮನೆಗೆ ಬಂದು ನನ್ನ ಮೇಲಿರುವ ಕೃತಘ್ನತೆಯ ದೋಷವನ್ನು ಅಳಿಸು. ಇಲ್ಲದಿದ್ದರೆ ಇಲ್ಲಿಯೇ ನಿನ್ನೆದುರಿಗೆ ಉಪವಾಸವನ್ನು ಮಾಡಿ ಪ್ರಾಣತ್ಯಾಗ ಮಾಡುವೆನು”

ಮಂಗ – “ಮೂಢ, ನಾನೇನು ಲಂಬಕರ್ಣನಂತೆ ಮೂರ್ಖನೆ ? ಪ್ರತ್ಯಕ್ಷವಾಗಿ ಅಪಾಯವನ್ನು ನೋಡಿ ಮತ್ತೆ ಅಲ್ಲಿಗೇ ಹೋಗಿ ಮರಣವನ್ನು ಹೊಂದುವೆನೆ ? ಮೊದಲು ಬಂದು ಸಿಂಹದ ಪರಾಕ್ರಮವನ್ನು ನೋಡಿ ಹೋದ, ಹೃದಯ ಹಾಗೂ ಕಿವಿಗಳಿಲ್ಲದ ಮೂರ್ಖ, ಮತ್ತೆ ಹಿಂದಿರುಗಿ ಬಂದನು”

ಮೊಸಳೆ – “ಭದ್ರ, ಯಾರವನು ಲಂಬಕರ್ಣ ? ಹೇಗೆ ಅಪಾಯವನ್ನು ಕಂಡೂ ಸಾವನ್ನಪಿದ ? ಅದನ್ನು ನನಗೆ ಹೇಳು”

ಉತ್ತರವಾಗಿ ಮಂಗವು ಸಿಂಹ – ಲಂಬಕರ್ಣ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಮಂಗ – “ಆದ್ದರಿಂದಲೇ ನಾನು ಮೊದಲು ಬಂದು ಸಿಂಹದ ಪರಾಕ್ರಮವನ್ನು ನೋಡಿ ಹೋದ… ಎಂಬುದಾಗಿ ಹೇಳಿದ್ದು.

ಮೂರ್ಖನೇ, ನೀನು ಕಪಟವನ್ನು ಮಾಡಿದೆ, ಆದರೆ ಯುಧಿಷ್ಠಿರನಂತೆ ಸತ್ಯವಚನವನ್ನು ಹೇಳಿ ಎಲ್ಲವನ್ನೂ ಕಳೆದುಕೊಂಡೆ. ಅಲ್ಲದೆ ಹೀಗೊಂದು ನುಡಿಯಿದೆ – ಸ್ವಾರ್ಥವನ್ನು ಬಿಟ್ಟು ಯಾವ ಅತಿಮೂಢನಾದ ಕಪಟಿಯು ಸತ್ಯವನ್ನು ನುಡಿಯುವನೋ, ಅವನು ಮತ್ತೊಬ್ಬ ಯುಧಿಷ್ಠಿರನಂತೆ ಖಂಡಿತವಾಗಿಯೂ ಸ್ವಾರ್ಥವನ್ನು ನಷ್ಟಮಾಡಿಕೊಳ್ಳುತ್ತಾನೆ.”

ಮೊಸಳೆಯು ಅದು ಹೇಗೆಂದು ಕೇಳಲು ಮಂಗವು ಯುಧಿಷ್ಠಿರ ಕುಂಬಾರನ ಕಥೆಯನ್ನು ಹೇಳಿದನು

ಕಥೆಯನ್ನು ಮುಗಿಸಿದ ಮಂಗ – “ಆದ್ದರಿಂದಲೇ ನಾನು ಸ್ವಾರ್ಥವನ್ನು ತ್ಯಜಿಸಿದ ಕಪಟಿ … ಎಂಬುದಾಗಿ ಹೇಳಿದ್ದು. ಹೆಂಗಸಿನ ಮಾತನ್ನು ಕೇಳಿ ಈ ಕಾರ್ಯವನ್ನು ಆರಂಭಿಸಿದ ಮೂರ್ಖನಾದ ನಿನಗೆ ಧಿಕ್ಕಾರ. ಹೆಂಗಸನ್ನು ಎಂದೂ ನಂಬಬಾರದು. ಹೀಗೊಂದು ಕಥೆಯಿದೆ – ಯಾವಳಿಗಾಗಿ ನನ್ನ ಕುಲವನ್ನು ಬಿಟ್ಟೆನೋ, ಅರ್ಧಜೀವನವನ್ನು ಕಳೆದುಕೊಂಡೆನೋ, ಸ್ನೇಹವಿಮುಖಳಾದ ಅವಳೇ ನನ್ನನ್ನು ತ್ಯಜಿಸುತ್ತಾಳೆ. ಹೀಗಿದ್ದಾಗ ಯಾರು ತಾನೆ ಹೆಂಗಸನ್ನು ನಂಬಲು ಸಾಧ್ಯ ?

ಮೊಸಳೆಯು ಅದೇನೆಂದು ಕೇಳಲು ಮಂಗವು ಬ್ರಾಹ್ಮಣ, ಬ್ರಾಹ್ಮಣಿ ಮತ್ತು ಹೆಳವನ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಮಂಗ – “ಆದ್ದರಿಂದಲೇ ನಾನು ಯಾವಳಿಗಾಗಿ ನನ್ನ ಕುಲವನ್ನು ಬಿಟ್ಟೆನೋ … ಎಂಬುದಾಗಿ ಹೇಳಿದ್ದು”

ಮಂಗವು ಮುಂದುವರೆಸುತ್ತಾ – “ಈ ವಿಷಯದಲ್ಲಿ ಬೇರೊಂದು ಕಥೆಯೂ ಇದೆ. ಹೆಂಗಸರು ಆಗ್ರಹಿಸಿದರೆ ಮನುಷ್ಯನು ಏನನ್ನು ತಾನೆ ಕೊಡುವುದಿಲ್ಲ ಮತ್ತು ಏನನ್ನು ತಾನೆ ಮಾಡುವುದಿಲ್ಲ ? ಕುದುರೆಯಲ್ಲವರೂ ಕುದುರೆಯಂತೆ ಕೆನೆಯುತ್ತಾರೆ ಮತ್ತು ಪರ್ವದ ದಿನವೂ ಕೂಡ ಕೇಶಮುಂಡನವನ್ನು ಮಾಡಿಕೊಳ್ಳುತ್ತಾರೆ.”

ಮೊಸಳೆಯು ಅದೇನೆಂದು ಕೇಳಲು ಮಂಗ ನಂದ – ವರರುಚಿ ಕಥೆಯನ್ನು ಹೇಳಿತು.

ಮುಂದುವರೆಸುತ್ತಾ ಮಂಗ – “ಆದ್ದರಿಂದ ದುಷ್ಟ ಮೊಸಳೆಯೇ, ನೀನೂ ಕೂಡ ನಂದ ಹಾಗೂ ವರರುಚಿಯಂತೆ ಸ್ತ್ರೀವಶನಾಗಿರುವೆ. ಹಾಗಾಗಿ ಅವಳು ಹೇಳಿದಳೆಂದು ನನ್ನನ್ನು ಕೊಲ್ಲಲು ಉಪಾಯವನ್ನು ಮಾಡಿದೆ. ಆದರೆ ನಿನ್ನ ಮಾತಿನ ದೋಷದಿಂದಲೇ ನಿನ್ನ ರಹಸ್ಯ ಹೊರಬಿತ್ತು. ಅಥವಾ ಈ ನುಡಿಗಳು ಯೋಗ್ಯವಾಗಿವೆ – ಗಿಳಿ ಮತ್ತು ಸಾರಿಕಾ ಪಕ್ಷಿಗಳು ತಮ್ಮ ವಾಗ್ದೋಷದಿಂದಲೇ (ಅಂದರೆ ಅವುಗಳು ಮಾತನಾಡುವುದರಿಂದಲೇ) ಬಂಧಿಸಲ್ಪಡುತ್ತವೆ. ಬಕವು ಮೌನವಾಗಿರುವುದರಿಂದ ಯಾರೂ ಅದನ್ನು ಹಿಡಿಯುವುದಿಲ್ಲ. ಮೌನವು ಸಕಲಾರ್ಥ ಸಾಧಕವು. ಹುಲಿಯ ಚರ್ಮವನ್ನು ಹೊದ್ದುಕೊಂಡು ಭಯಂಕರವಾಗಿ ಕಾಣುತ್ತಾ ಚೆನ್ನಾಗಿ ರಕ್ಷಿಸಲ್ಪಟ್ಟ ಕತ್ತೆಯು ಮಾತನಾಡುವುದರಿಂದ ಕೊಲ್ಲಲ್ಪಟ್ಟಿತು.

ಮೊಸಳೆಯು ಅದು ಹೇಗೆಂದು ಕೇಳಲು ಮಂಗ ವಾಚಾಳಿ ಕತ್ತೆಯ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಮಂಗ – “ಆದ್ದರಿಂದಲೇ ನಾನು ಚೆನ್ನಾಗಿ ರಕ್ಷಿಸಲ್ಪಟ್ಟಿದ್ದರೂ… ಎಂಬುದಾಗಿ ಹೇಳಿದ್ದು”

ಹೀಗೆ ಮಂಗದೊಡನೆ ಮಾತನಾಡುತ್ತಿದ್ದಾಗ ನೀರಿನಲ್ಲಿನ ಒಂದು ಪ್ರಾಣಿ ಬಂದು ಮೊಸಳೆಗೆ ಹೇಳಿತು – “ಎಲೈ ಮೊಸಳೆಯೇ, ಉಪವಾಸವನ್ನು ಮಾಡುತ್ತಿದ್ದ ನಿನ್ನ ಹೆಂಡತಿಯು ನೀನು ಇನ್ನೂ ಬರದಿರುವುದು ಪ್ರೇಮದ ತಿರಸ್ಕಾರವೆಂದು ತಿಳಿದು ಸತ್ತುಹೋದಳು”

ವಜ್ರಘಾತದಂತಿರುವ ಆ ಮಾತನ್ನು ಕೇಳಿ ಅತ್ಯಂತ ದುಃಖದಿಂದ ಪ್ರಲಾಪಿಸುತ್ತಾ ಮೊಸಳೆಯು – “ಅಯ್ಯೋ, ಅದೃಷ್ಟಹೀನನಾದ ನನಗೆ ಏನಾಗಿ ಹೋಯಿತು ? ಯಾರ ಮನೆಯಲ್ಲಿ ತಾಯಿಯಿಲ್ಲವೋ ಮತ್ತು ಪ್ರಿಯವನ್ನು ನುಡಿಯುವ ಹೆಂಡತಿಯಿಲ್ಲವೋ, ಅವನು ಕಾಡಿಗೆ ಹೋಗುವುದೇ ಸೂಕ್ತ ಏಕೆಂದರೆ ಆತನಿಗೆ ಮನೆ ಹಾಗೂ ಕಾಡು ಒಂದೇ. ಆದ್ದರಿಂದ ಎಲೈ ಮಿತ್ರನೇ, ನಾನು ನಿನಗೆ ಮಾಡಿದ ಅಪರಾಧಕ್ಕಾಗಿ ಕ್ಷಮಿಸು. ಈಗ ನನಗೆ ಪತ್ನೀವಿಯೋಗವಾದ್ದರಿಂದ ಅಗ್ನಿ ಪ್ರವೇಶವನ್ನು ಮಾಡುವೆನು.”

ಅದನ್ನು ಕೇಳಿ ಮಂಗವು ನಕ್ಕು ಹೇಳಿತು – “ನೀನು ಸ್ತ್ರೀ ವಶನಾಗಿರುವೆ ಮತ್ತು ಸ್ತ್ರೀಯಿಂದ ಸೋತಿರುವೆ ಎಂದು ನನಗೆ ಮೊದಲೇ ತಿಳಿದಿತ್ತು. ಆ ವಿಷಯದಲ್ಲಿ ಈಗ ಇನ್ನು ವಿಶ್ವಾಸವುಂಟಾಯಿತು. ಎಲೈ ಮೂಢನೇ,  ಸಂತೋಷಪಡಬೇಕಾದ ವಿಷಯದಲ್ಲಿ ದುಃಖಿಸುತ್ತಿರುವೆ. ಅಂತಹ ಹೆಂಡತಿಯು ಸತ್ತಾಗ ಉತ್ಸವವನ್ನು ಮಾಡಬೇಕು. ಯಾವ ಹೆಂಡತಿಯು ದುಷ್ಟಚರಿತ್ರೆಯನ್ನು ಹೊಂದಿರುವಳೋ ಮತ್ತು ಯಾವಾಗಲೂ ಜಗಳವನ್ನಾಡುತ್ತಿರುವಳೋ ಅವಳನ್ನು ಬುದ್ಧಿವಂತರು ಹೆಂಡತಿಯ ರೂಪದಲ್ಲಿರುವ ಭಯಂಕರವಾದ ವೃದ್ಧಾವಸ್ಥೆಯೆಂದು ತಿಳಿಯಬೇಕು. ಆದ್ದರಿಂದ ತನ್ನ ಸುಖವನ್ನು ಬಯಸುವವನು ಎಲ್ಲಾ ಸ್ತ್ರೀಯರ ಹೆಸರನ್ನೂ ಕೂಡ ತ್ಯಜಿಸಿಬಿಡಬೇಕು. ಸ್ತ್ರೀಯರ ಮನಸ್ಸಿನಲ್ಲಿರುವುದು ನಾಲಿಗೆಗೆ ಬರುವುದಿಲ್ಲ, ನಾಲಿಗೆಗೆ ಬಂದದ್ದು ಮಾತಾಗಿ ಹೊರಬರುವುದಿಲ್ಲ, ಹೊರಬಂದ ಮಾತಿನಂತೆ ಅವರು ನಡೆಯುವುದೂ ಇಲ್ಲ. ಹಾಗಾಗಿ ಸ್ತ್ರೀಯರು ವಿಚಿತ್ರ ಸ್ವಭಾವದವರು. ರಮಣೀಯರಾದ ಕಾಮಿನಿಯರ ಮೋಹವಶದಿಂದ ಯಾರು ತಾನೆ ನಾಶವಾಗುವುದಿಲ್ಲ ? ರಮಣೀಯವಾದ ದೀಪದ ಪ್ರಭೆಗೆ ಪತಂಗಗಳು ಬಿದ್ದು ನಾಶವಾಗುವಂತೆ ಎಲ್ಲರೂ ನಾಶವಾಗುತ್ತಾರೆ. ಸ್ತ್ರೀಯರು ಗುಲಗಂಜಿಯ ಬೀಜದಂತೆ ಒಳಗೆ ವಿಷ ಮತ್ತು ಹೊರಗೆ ಮನೋಹರವಾಗಿರುತ್ತಾರೆ. ಕೋಲಿನಿಂದ ಹೊಡೆದರೂ, ಶಸ್ತ್ರದಿಂದ ಗಾಯಗೊಳಿಸಿದರೂ, ದಾನವನ್ನು ಮಾಡಿದರೂ ಹಾಗೂ ಉತ್ತಮ ರೀತಿಯಲ್ಲಿ ಸ್ತುತಿಸಿದರೂ ಕೂಡ ಹೆಂಗಸರು ವಶಕ್ಕೆ ಬರುವುದಿಲ್ಲ. ಹೆಂಗಸರ ದುಷ್ಟಬುದ್ಧಿಯ ಬಗ್ಗೆ ಹೆಚ್ಚೇನು ಹೇಳುವುದು ? ಕೋಪದಿಂದ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಪುತ್ರನನ್ನೇ ಕೊಲ್ಲಬಲ್ಲರು ಎಂದು ಹೇಳಿದರೆ ಸಾಕಲ್ಲವೇ ? ಸ್ತ್ರೀಯರನ್ನು ಸರಿಯಾಗಿ ತಿಳಿಯದ ಮೂಢನು ಮಾತ್ರ ಕರ್ಕಶಸ್ವಭಾವದ ಸ್ತ್ರೀಯರಲ್ಲಿ ಸ್ನೇಹಭಾವವನ್ನು, ನಿಷ್ಠುರರಲ್ಲಿ ಕೋಮಲತೆಯನ್ನು ಹಾಗೂ ಅನುರಾಗವಿಲ್ಲದವರಲ್ಲಿ ಪ್ರೀತಿಯನ್ನು ಕಲ್ಪಿಸಿಕೊಳ್ಳುತ್ತಾನೆ.”

ಮೊಸಳೆ – “ಎಲೈ ಮಿತ್ರನೇ, ಅದು ಸರಿ, ಆದರೇನು ಮಾಡಲಿ ? ನನಗೆ ಎರಡು ರೀತಿಯ ಅನರ್ಥಗಳಾದವು. ಮೊದಲನೆಯದಾಗಿ ಹೆಂಡತಿಯು ಮೃತಳಾದ್ದರಿಂದ ನನ್ನ ಮನೆಯು ನಷ್ಟವಾಯಿತು ಮತ್ತು ಎರಡನೆಯದಾಗಿ ನಿನ್ನಂಥ ಮಿತ್ರನಲ್ಲಿ ಮನಸ್ಸು ಒಡೆಯಿತು. ಇದೆಲ್ಲವೂ ವಿಧಿವಶದಿಂದ ಹೀಗೆಯೇ ಆಗುತ್ತದೆ. ಹೀಗೊಂದು ಕಥೆಯಲ್ಲಿ ಮಾತು ಬರುತ್ತದೆ – ನನ್ನಲ್ಲಿರುವ ಬುದ್ಧಿಗಿಂತ ಎರಡರಷ್ಟು ಬುದ್ಧಿ ನಿನ್ನಲ್ಲಿದೆ. ನಿನ್ನ ಪ್ರಿಯನೂ ಉಳಿಯಲಿಲ್ಲ, ನಿನ್ನ ಗಂಡನೂ ಉಳಿಯಲಿಲ್ಲ. ಎಲೈ ನಗ್ನಳೇ, ಏನನ್ನು ನೋಡುತ್ತಿರುವೆ ?”

ಮಂಗವು ಅದೇನು ಕಥೆಯೆಂದು ಕೇಳಿದಾಗ ಮೊಸಳೆಯು ರೈತನ ಹೆಂಡತಿ, ನರಿ ಮತ್ತು ವಂಚಕನ ಕಥೆಯನ್ನು ಹೇಳಿತು.

ಹೀಗೆ ಮೊಸಳೆಯು ಕಥೆಯನ್ನು ಮುಗಿಸಲು ಮತ್ತೊಂದು ನೀರಿನಲ್ಲಿರುವ ಪ್ರಾಣಿಯು ಬಂದು ಹೇಳಿತು – “ನಿನ್ನ ಮನೆಯನ್ನು ಬೇರೊಂದು ದೊಡ್ಡ ಮೊಸಳೆಯು ಆಕ್ರಮಿಸಿಕೊಂಡಿತು”

ಅದನ್ನು ಕೇಳಿ ಅತ್ಯಂತ ದುಃಖಗೊಂಡ ಮನಸ್ಸಿನಿಂದ ಆ ದೊಡ್ಡ ಮೊಸಳೆಯನ್ನು ಮನೆಯಿಂದ ಹೊರದೂಡುವ ಉಪಾಯವನ್ನು ಚಿಂತಿಸುತ್ತಾ ಹೇಳಿತು – “ಅಯ್ಯೋ, ದುರ್ಭಾಗ್ಯನಾದ ನನ್ನನ್ನು ನೋಡು. ಮಿತ್ರನು ಮಿತ್ರನಾಗಿ ಉಳಿಯಲಿಲ್ಲ, ಪ್ರಿಯೆಯು ಕೂಡ ಸತ್ತುಹೋದಳು ಮತ್ತು ಮನೆಯನ್ನು ಬೇರೊಬ್ಬನ್ನು ಆಕ್ರಮಿಸಿದನು. ಇದಕ್ಕಿಂತ ಇನ್ನೇನು ಆಗಲು ಸಾಧ್ಯ ?

ಅಥವಾ ಈ ನುಡಿಯು ಯೋಗ್ಯವಾಗಿದೆ – ಗಾಯವಾದ ಕಡೆಯೇ ಮತ್ತೆ ಮತ್ತೆ ಏಟು ಬೀಳುತ್ತದೆ, ಆಹಾರವು ಇಲ್ಲದಿದ್ದಾಗ ಜಠರಾಗ್ನಿಯು ಚೆನ್ನಾಗಿ ಉರಿಯುತ್ತದೆ ಅಂದರೆ ಜೋರಾಗಿ ಹಸಿವಾಗುತ್ತದೆ, ತೊಂದರೆಗಳಿದ್ದಾಗ ವೈರಿಗಳು ಹುಟ್ಟಿಕೊಳ್ಳುತ್ತಾರೆ. ವಿಧಿಯು ಪ್ರತಿಕೂಲವಾಗಿದ್ದಾಗ ಮನುಷ್ಯರಿಗೆ ಹೀಗೆಲ್ಲಾ ಆಗುತ್ತದೆ. ಆದ್ದರಿಂದ ಏನು ಮಾಡಲಿ ? ಆ ಮೊಸಳೆಯೊಂದಿಗೆ ಹೋರಾಡಲೇ ? ಅಥವಾ ಸಾಮೋಪಾಯದಿಂದ ಮಾತನಾಡಿ ಹೊರಹಾಕಲೇ ? ಅಥವಾ ಭೇದ ಇಲ್ಲವೇ ದಾನ ಮಾರ್ಗಗಳನ್ನು ಅನುಸರಿಸಲೇ ? ಅಥವಾ ಈ ವಾನರಮಿತ್ರನನ್ನೇ ಕೇಳುತ್ತೇನೆ. ಯಾರು ಕೇಳಬೇಕಾದವರನ್ನು, ತನ್ನ ಹಿತೈಷಿಗಳನ್ನು ಹಾಗೂ ಗುರುಗಳನ್ನು ಕೇಳಿ ಕೆಲಸವನ್ನು ಮಾಡುವನೋ ಅವನ ಕೆಲಸದಲ್ಲಿ ಎಂದಿಗೂ ವಿಘ್ನಗಳುಂಟಾಗುವುದಿಲ್ಲ ಎಂದು ಹೇಳುತ್ತಾರೆ.”

ಹೀಗೆ ಯೋಚಿಸಿ ಮತ್ತೆ ಜಂಬೂವೃಕ್ಷದಲ್ಲಿರುವ ಕಪಿಯನ್ನು ಕೇಳಿತು – “ಎಲೈ ಮಿತ್ರನೇ, ನನ್ನ ದೌರ್ಭಾಗ್ಯವನ್ನು ನೋಡು, ನನ್ನ ಮನೆಯನ್ನು ಬಲಿಷ್ಠನಾದ ಮೊಸಳೆಯು ಆಕ್ರಮಿಸಿದೆ. ಆದ್ದರಿಂದ ನಾನು ನಿನ್ನ ಸಲಹೆಯನ್ನು ಕೇಳಲು ಬಂದಿರುವೆ. ಏನು ಮಾಡಲಿ ಎಂದು ತಿಳಿಸು. ಸಾಮಾದಿ ಉಪಾಯಗಳಲ್ಲಿ ಇಲ್ಲಿ ಯಾವುದನ್ನು ಬಳಸಬಹುದು ?”

ಮಂಗ – “ಎಲೈ ಕೃತಘ್ನನೇ, ಪಾಪಿಯೇ, ನಾನು ನಿಷೇಧ ಮಾಡಿದ ಮೇಲೂ ಮತ್ತೆ ಏಕೆ ನನ್ನನ್ನು ಅನುಸರಿಸುವೆ ? ಮೂರ್ಖನಾದ ನಿನಗೆ ಉಪದೇಶವನ್ನು ಮಾಡುವುದಿಲ್ಲ”

ಅದನ್ನು ಕೇಳಿ ಮೊಸಳೆ ಹೇಳಿತು – “ಎಲೈ ಮಿತ್ರನೇ, ಅಪರಾಧ ಮಾಡಿರುವ ನನಗೆ ಹಿಂದಿನ ಸ್ನೇಹವನ್ನು ಸ್ಮರಿಸಿಕೊಂಡು ಹಿತೋಪದೇಶವನ್ನು ಮಾಡು”

ಮಂಗ – “ನಿನಗೆ ನಾನು ಏನೂ ಹೇಳುವುದಿಲ್ಲ. ನೀನು ಹೆಂಡತಿಯ ಮಾತಿನಂತೆ ನನ್ನನ್ನು ಸಮುದ್ರದಲ್ಲಿ ಎಸೆಯಲು ಕರೆದುಕೊಂಡು ಹೋಗಿದ್ದೆ, ಅದು ಸರಿಯಲ್ಲ. ಹೆಂಡತಿಯು ಎಲ್ಲರಿಗಿಂತಲೂ ಪ್ರಿಯಳಾಗಿದ್ದರೂ ಅವಳ ಮಾತಿನ ಮೇರೆಗೆ ಯಾರೂ ಮಿತ್ರರನ್ನು ಮತ್ತು ಬಾಂಧವರನ್ನು ಸಮುದ್ರದಲ್ಲಿ ಎಸೆಯುವುದಿಲ್ಲ. ಆದ್ದರಿಂದ ಮೂರ್ಖನೇ, ನಿನ್ನ ಮೂರ್ಖತನದಿಂದಲೇ ನಿನ್ನ ನಾಶವೆಂದು ಮೊದಲೇ ನಿರ್ಧಾರವಾಗಿತ್ತು. ಸಜ್ಜನರು ಹೇಳಿದ ಮಾತನ್ನು ಅಹಂಕಾರದಿಂದ ಯಾರು ಕೇಳುವುದಿಲ್ಲವೋ ಅವರು ಶೀಘ್ರದಲ್ಲೇ ಘಂಟಾಧಾರಿಯಾದ ಒಂಟೆಯಂತೆ ನಾಶಹೊಂದುತ್ತಾರೆ.”

ಮೊಸಳೆಯು ಅದೇನೆಂದು ಕೇಳಲು ಮಂಗವು ಘಂಟಾಧಾರಿ ಒಂಟೆಯ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿದ ಮಂಗವು – “ಆದ್ದರಿಂದಲೇ ನಾನು ಸಜ್ಜನರ ಮಾತನ್ನು ಕೇಳಬೇಕೆಂದು ಹೇಳುವುದು” ಎಂದಿತು.

ಅದನ್ನು ಕೇಳಿದ ಮೊಸಳೆಯು – “ಭದ್ರ, ಜೊತೆಗೆ ಏಳು ಹೆಜ್ಜಗಳನ್ನು ಹಾಕಿದರೂ ಗೆಳೆತನ ಉಂಟಾಗುತ್ತದೆಂದು ಶಾಸ್ತ್ರಜ್ಞರು ಹೇಳಿದ್ದಾರೆ. ಹಾಗಾಗಿ ನಿನ್ನೊಂದಿಗೆ ಹಲವು ದಿನಗಳನ್ನು ಕಳೆದಿರುವ ನಮ್ಮ ಮೈತ್ರಿಯ ಆಧಾರದ ಮೇಲೆ ನಿನಗೆ ಒಂದು ಮಾತನ್ನು ಹೇಳುವೆನು ಕೇಳು. ಉಪದೇಶವನ್ನು ಕೊಡುವ ಮತ್ತು ಪರಹಿತವನ್ನು ಬಯಸುವ ಮನುಷ್ಯರಿಗೆ ಇಹಪರಲೋಕಗಳಲ್ಲಿಯೂ ಕಷ್ಟಗಳು ಬರುವುದಿಲ್ಲ. ಆದ್ದರಿಂದ ನಾನು ಸರ್ವಥಾ ಕೃತಘ್ನನಾದರೂ ಕೂಡ ಉಪದೇಶವನ್ನು ಕೊಟ್ಟು ಅನುಗ್ರಹಿಸು. ಉಪಕಾರವನ್ನು ಮಾಡಿದವರೊಂದಿಗೆ ಸದ್ವವಹಾರವನ್ನು ಮಾಡಿದರೆ ಅದರಲ್ಲೇನು ಬಂತು ? ಅಪಕಾರ ಮಾಡಿದವರಿಗೂ ಒಳ್ಳೆಯದನ್ನು ಮಾಡುವವನೇ ನಿಜವಾಗಿ ಸತ್ಪುರುಷನೆಂದು ಹೇಳುವರು”

ಅದನ್ನು ಕೇಳಿದ ಮಂಗವು ಹೇಳಿತು – “ಭದ್ರ, ಹಾಗಾದರೆ, ನಿನ್ನ ಮನೆಗೆ ಹೋಗಿ ಆ ಮೊಸಳೆಯೊಂದಿಗೆ ಯುದ್ಧವನ್ನು ಮಾಡು. ಸತ್ತರೆ ಸ್ವರ್ಗವನ್ನು ಪಡೆಯುವೆ, ಉಳಿದರೆ ಮನೆ ಹಾಗೂ ಯಶಸ್ಸನ್ನು ಪಡೆಯುವೆ. ಯುದ್ಧವನ್ನು ಮಾಡುವುದರಿಂದ ನಿನಗೆ ಎರಡೂ ಉತ್ತಮವಾದ ಪರಿಣಾಮಗಳೇ ದೊರಕುವವು. ಉತ್ತಮವಾದವನನ್ನು ಸಾಮೋಪಾಯದಿಂದ, ಶೂರನನ್ನು ಭೇದೋಪಾಯದಿಂದ, ನೀಚನನ್ನು ಸ್ವಲ್ಪ ದಾನಾದಿಗಳನ್ನು ಕೊಡುವುದರಿಂದ ಹಾಗೂ ಸಮಬಲನನ್ನು ಪರಾಕ್ರಮದಿಂದ ಜಯಿಸಬೇಕು.”

ಮೊಸಳೆಯು ಅದೇನೆಂದು ಕೇಳಲು ಮಂಗವು ನರಿ, ಸಿಂಹ, ಹುಲಿ ಮತ್ತು ಚಿರತೆಯ ಕಥೆಯನ್ನು ಹೇಳಿತು.

ಕಥೆಯನ್ನು ಮುಗಿಸಿ ಉಪದೇಶವನ್ನು ಮುಂದುವರೆಸುತ್ತಾ ಮಂಗವು – “ಹೀಗೆ ನೀನೂ ಕೂಡ ನಿನ್ನ ಜಾತಿಗೇ ಸೇರಿದ ನಿನ್ನ ಶತ್ರುವನ್ನು ಯುದ್ಧದಲ್ಲಿ ಸೋಲಿಸಿ ಅವನು ಓಡಿಹೋಗುವಂತೆ ಮಾಡು. ಇಲ್ಲದಿದ್ದರೆ ಅಲ್ಲಿ ಸ್ಥಿರವಾಗಿ ನೆಲೆಸಿದ ಅವನಿಂದ ನಿನ್ನ ನಾಶವಾಗುವುದು. ಏಕೆಂದರೆ ಹೀಗೊಂದು ಉಕ್ತಿಯಿದೆ – ಗೋವುಗಳಲ್ಲಿ ಸಂಪತ್ತು ಇರುವ ಸಂಭವವಿದೆ, ಬ್ರಾಹ್ಮಣರಲ್ಲಿ ತಪ್ಪಸ್ಸು, ಸ್ತ್ರೀಯರಲ್ಲಿ ಚಾಪಲ್ಯ ಹಾಗೂ ಸ್ವಜಾತಿಯವರಲ್ಲಿ ಭಯವಿರುವ ಸಂಭವವಿದೆ. ವಿದೇಶವು ಸಂಪ್ಭರಿತವಾಗಿದೆ, ವಿವಿಧ ರೀತಿಯ ಆಹಾರಗಳು ಲಭ್ಯವಿದೆ, ನಗರದ ಸ್ತ್ರೀಯರು ಉದಾಸೀನರು, ಆದರೆ ಒಂದೇ ಒಂದು ವಿದೇಶದ ದೋಷವೇನೆಂದರೆ ಅಲ್ಲಿ ಸ್ವಜಾತಿಯವರೇ ವಿರುದ್ಧವಾದುದನ್ನು ಮಾಡುತ್ತಾರೆ.”

ಮೊಸಳೆಯು ಅದೇನೆಂದು ಕೇಳಲು ಮಂಗವು ವಿದೇಶಕ್ಕೆ ಹೋದ ನಾಯಿಯ ಕಥೆಯನ್ನು ಹೇಳಿತು.

ಮೊಸಳೆಯು ಆ ಉಪದೇಶವನ್ನು ಕೇಳಿ, ಸಾಯಲು ಸಿದ್ಧನಾಗಿ, ಮಂಗವನ್ನು ಬೀಳ್ಗೊಂಡು ತನ್ನ ಮನೆಗೆ ಹೋಯಿತು. ಅಲ್ಲಿ ತನ್ನ ಮನೆಯನ್ನು ಕಸಿದುಕೊಂಡ ಶತ್ರುವಿನೊಂದಿಗೆ ಯುದ್ಧವನ್ನು ಮಾಡಿ ತನ್ನ ದೃಢ ಶರೀರವನ್ನು ಅವಲಂಬಿಸಿ ಅದನ್ನು ಕೊಂದು, ತನ್ನ ಮನೆಯನ್ನು ಪಡೆದು ಸುಖದಿಂದ ಚಿರಕಾಲ ಅಲ್ಲಿ ವಾಸಿಸುತ್ತಿತ್ತು.

ಹೀಗೊಂದು ಉಕ್ತಿಯು ಯೋಗ್ಯವಾಗಿದೆ – “ಪುರುಷಪ್ರಯತ್ನವಿಲ್ಲದೇ ಸಿಕ್ಕ ಸಂಪತ್ತಿನ ಭೋಗದಿಂದೇನು ಪ್ರಯೋಜನ ? ಮುದಿ ಎತ್ತು ಕೂಡ ಭಗವಂತನು ಕರುಣಿಸಿದ ಹುಲ್ಲನ್ನು ತಿನ್ನುವುದಿಲ್ಲವೇ ?”

*** ಇಲ್ಲಿಗೆ ವಿಷ್ಣುಶರ್ಮವಿರಚಿತ ಪಂಚತಂತ್ರದ ನಾಲ್ಕನೆಯ ತಂತ್ರವಾದ ಲಬ್ಧಪ್ರಣಾಶವು ಸಂಪೂರ್ಣವಾಯಿತು ***

ಪಂಚತಂತ್ರದ ಐದನೆಯ ತಂತ್ರವಾದ ಅಪರೀಕ್ಷಿತಕಾರಕವನ್ನು ಇಲ್ಲಿ ಓದಬಹುದು

Comments are closed.