ಪಂಚತಂತ್ರ – ಮಿತ್ರಸಂಪ್ರಾಪ್ತಿ

[ಪಂಚತಂತ್ರದ ಈ ಅನುವಾದವು ಈಗ ಪುಸ್ತಕ ರೂಪದಲ್ಲಿ ಲಭ್ಯವಿದೆ. ಪುಸ್ತಕವನ್ನು ಕೊಳ್ಳಲು ಇಲ್ಲಿ ನೋಡಿ]

Panchatantra Book

[ಪಂಚತಂತ್ರ ಮುಖಪುಟ, ತಂತ್ರ 1. ಮಿತ್ರಭೇದ, ತಂತ್ರ 2. ಮಿತ್ರಸಂಪ್ರಾಪ್ತಿ, ತಂತ್ರ 3. ಕಾಕೋಲೂಕೀಯ, ತಂತ್ರ 4. ಲಬ್ಧಪ್ರಣಾಶ, ತಂತ್ರ 5. ಅಪರೀಕ್ಷಿತಕಾರಕ]

ಪಂಚತಂತ್ರದ ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯ ಮೊದಲ ನುಡಿ ಹೀಗಿದೆ – “ತಿಳುವಳಿಕೆಯುಳ್ಳ ಬುದ್ಧಿವಂತರು ಯಾವುದೇ ಸಾಧನಗಳಿಲ್ಲದಿದ್ದರೂ (ಮುಂದಿನ ಕಥೆಯಲ್ಲಿ ಬರುವ ಹಾಗೆ) ಕಾಗೆ, ಇಲಿ ಹಾಗೂ ಆಮೆಯಂತೆ ಶೀಘ್ರವಾಗಿ ಕೆಲಸವನ್ನು ಸಾಧಿಸುತ್ತಾರೆ.

panchatantra-mitrasamprapti-wm

ಮಿತ್ರರು ಆಮೆಯನ್ನು ಬಿಡಿಸಲು ಮಾಡಿದ ಉಪಾಯದಂತೆ, ಬೇಡನು ತನ್ನಲ್ಲಿದ್ದ ಆಮೆಯನ್ನು ಬಿಟ್ಟು ಸತ್ತಂತೆ ಮಲಗಿದ್ದ ಜಿಂಕಿಯನ್ನು ಹಿಡಿಯಲು ಹೋಗುತ್ತಿರುವುದು- ಚಿತ್ರ – Kum. Drashti Piyusha Patel

ದಕ್ಷಿಣದೇಶದಲ್ಲಿ ಮಹಿಲಾರೋಪ್ಯವೆಂಬ ನಗರವಿದೆ. ಅದರ ಸಮೀಪದಲ್ಲೇ ಅತ್ಯಂತ ಎತ್ತರವಾದ, ವಿವಿಧ ಪಕ್ಷಿಗಳಿಗೆ ಫಲಗಳನ್ನು ನೀಡುವ, ತನ್ನ ಪೊಟರೆಗಳಲ್ಲಿ ಕೀಟಗಳಿಂದ ಆವೃತವಾದ, ದಾರಿಹೋಕರಿಗೆ ನೆರಳನ್ನು ಕೊಡುವ ಒಂದು ವಿಶಾಲವಾದ ಆಲದ ಮರವಿತ್ತು. ಯಾವ ಮರದ ನೆರಳಿನಲ್ಲಿ ಪ್ರಾಣಿಗಳು ಮಲಗುತ್ತವೆಯೋ, ಎಲೆಗಳು ಪಕ್ಷಿಸಮೂಹಗಳಿಂದ ಸುತ್ತುವರೆಯಲ್ಪಟ್ಟಿರುತ್ತವೆಯೋ, ಪೊಟರೆಗಳು ಕೀಟಗಳಿಂದ ಕೂಡಿರುತ್ತವೆಯೋ, ಕೊಂಬೆಗಳಲ್ಲಿ ಮಂಗಗಳ ಗುಂಪು ಆಶ್ರಯ ಪಡೆದಿರುತ್ತದೆಯೋ, ಪುಷ್ಪಗಳಲ್ಲಿನ ಮಧುವನ್ನು ದುಂಬಿಗಳು ನಿಸ್ಸಂದೇಹವವಾಗಿ ಹೀರುತ್ತವೆಯೋ – ಹೀಗೆ ಎಲ್ಲಾ ಅಂಗಾಂಗಳಿಂದಲೂ ಬೇರೆ ಪ್ರಾಣಿಗಳಿಗೆ ಸುಖವನ್ನುಂಟುಮಾಡುವ ಅಂತಹ ಮರವು ಪ್ರಶಂಸನೀಯವಾದುದು. ಆ ಆಲದ ಮರದಲ್ಲಿ ಲಘುಪತನಕನೆಂಬ ಕಾಗೆಯು ವಾಸಿಸುತ್ತಿತ್ತು. ಕಾಗೆಯು ಒಮ್ಮೆ ಆಹಾರವನ್ನು ಹುಡುಕಲು ನಗರಕ್ಕೆ ಹೋಗುತ್ತಿದ್ದಾಗ ಬಲೆಯನ್ನು ಕೈಯಲ್ಲಿ ಹಿಡಿದ, ತೆಳ್ಳನೆ ಶರೀರವುಳ್ಳ, (ಹೆಚ್ಚು ನಡೆದಿರುವುದರಿಂದ) ಒಡೆದ ಪಾದಗಳುಳ್ಳ, ಕೆದರಿದ ಕೂದಲುಳ್ಳ, ಯಮಕಿಂಕರನಂತಿರುವ ಮನುಷ್ಯನು ಎದುರಾದನು. ಅವನನ್ನು ನೋಡಿ ಮನಸ್ಸಿನಲ್ಲಿ ಸಂದೇಹಗೊಂಡ ಕಾಗೆಯು ಚಿಂತಿಸಿತು – “ಒಂದು ವೇಳೆ ಈ ದುರಾತ್ಮನು ನನ್ನ ಆಶ್ರಯಸ್ಥಾನವಾದ ಆಲದಮರದ ಕಡೆಗೆ ಹೋದರೆ, ಮರದಲ್ಲಿ ವಾಸವಾಗಿರುವ ಪಕ್ಷಿಗಳು ನಾಶವಾಗಬಹುದು.” ಹೀಗೆ ಹಲವು ರೀತಿಯಲ್ಲಿ ಯೋಚಿಸಿ, ಆ ಕ್ಷಣವೇ ಹಿಂದಿರುಗಿ, ಆಲದ ಮರವನ್ನು ತಲುಪಿ ಎಲ್ಲಾ ಪಕ್ಷಿಗಳನ್ನೂ ಕರೆದು – “ಎಲೈ ಪಕ್ಷಿಗಳೇ, ಒಬ್ಬ ದುರಾತ್ಮನಾದ ಬೇಟೆಗಾರನು ಬಲೆಯನ್ನು ಮತ್ತು ಅಕ್ಕಿಕಾಳನ್ನು ಹಿಡಿದುಕೊಂಡು ಬರುತ್ತಿದ್ದಾನೆ. ಅವನನ್ನು ನಂಬಲೇಬೇಡಿ. ಅವನು ಅಕ್ಕಿಯನ್ನು ಹಾಕಿ ಬಲೆಯನ್ನು ಹರಡುತ್ತಾನೆ. ಆ ಅಕ್ಕಿಯನ್ನು ನೀವೆಲ್ಲರೂ ಕಾಲಕೂಟ ವಿಷದಂತೆ ನೋಡತಕ್ಕದ್ದು.” ಹೀಗೆ ಹೇಳುತ್ತಿರಲು ಆ ಬೇಡನು ಮರದ ಕೆಳಗೆ ಬಂದು ಬಲೆಯನ್ನು ಹರಡಿ, ಅದರ ಮೇಲೆ ಲಕ್ಕಿಗಿಡದ ಹೂವಿನಂತೆ (ಬೆಳ್ಳಗೆ) ಇರುವ ಅಕ್ಕಿಕಾಳುಗಳನ್ನು ಎಸೆದು ಸ್ವಲ್ಪ ದೂರ ಹೋಗಿ ಅಡಗಿ ಕುಳಿತನು. ಮರದಲ್ಲಿದ್ದ ಪಕ್ಷಿಗಳೆಲ್ಲವೂ ಲಘುಪತನಕನ ಮಾತಿನಿಂದ ತಡೆಯಲ್ಪಟ್ಟವರಾಗಿ ಆ ಅಕ್ಕಿಯನ್ನು ಹಾಲಾಹಲ ವಿಷದ ಬೀಜಗಳಂತೆ ನೋಡುತ್ತಾ ಅಡಗಿಕೊಂಡು ಕುಳಿತ್ತಿದ್ದವು.

ಈ ಮಧ್ಯೆ ಚಿತ್ರಗ್ರೀವನೆಂಬ ಪಾರಿವಾಳಗಳ ರಾಜ ಸಾವಿರಾರು ಪಾರಿವಾರಗಳ ಜೊತೆ ಆಹಾರವನ್ನು ಹುಡುಕುತ್ತಾ ಅಕ್ಕಿಯ ಕಾಳುಗಳನ್ನು ದೂರದಿಂದಲೇ ನೋಡಿ ಲಘುಪತನಕನು ತಡೆಯುತ್ತಿದ್ದರೂ ಲಕ್ಷಿಸದೆ ಜಿಹ್ವಾಚಾಪಲ್ಯದಿಂದ ಅಕ್ಕಿಯನ್ನು ತಿನ್ನಲು ಇಳಿದು ತನ್ನ ಪರಿವಾರದೊಂದಿಗೆ ಬಲೆಯಲ್ಲಿ ಬಂಧಿತನಾದನು. ಅಥವಾ ಈ ನುಡಿಗಳು ಯೋಗ್ಯವಾಗಿಯೇ ಇವೆ – “ನಾಲಿಗೆಯ ಚಪಲತೆಗೆ ಗುರಿಯಾದ ಮೂರ್ಖರಿಗೆ ನೀರಿನಲ್ಲಿ ಮೀನುಗಳಿಗೆ ಹೇಗೋ ಹಾಗೆ ಅನಿರೀಕ್ಷಿತವಾಗಿ ಸಾವು ಬಂದೊದಗುತ್ತದೆ. ಪುಲಸ್ತ್ಯಕುಲಜಾತನಾದ ರಾವಣನಿಗೆ ಪರಸ್ತ್ರೀಹರಣದ ದೋಷವು ತಿಳಿಯಲಿಲ್ಲವೇ ? ರಾಮನಿಗೆ ಚಿನ್ನದ ಜಿಂಕೆಯು ಅಸಂಭವವು ಎಂಬುದು ತಿಳಿಯದಾಯಿತೇ ? ಯುಧಿಷ್ಠಿರನು ಜೂಜಾಡಿ ಮಹಾವಿಪತ್ತನ್ನು ತಂದುಕೊಳ್ಳಲಿಲ್ಲವೇ ? ಪ್ರಾಯಶಃ ಆಪತ್ತು ಬಂದೊದಗಿದಾಗ ಭ್ರಾಂತಿಗೊಳಗಾದವರ ಬುದ್ಧಿಯು ಕ್ಷೀಣಿಸುತ್ತದೆ. ಮಹಾತ್ಮರಾದರೂ ಕೂಡ ಯಮನ ಪಾಶದಿಂದ ಕಟ್ಟಲ್ಪಟ್ಟವರ ಹಾಗೂ ವಿಧಿವಶದಿಂದ ವಿವೇಕಭ್ರಷ್ಟರಾದವರ ಬುದ್ಧಿಯು ಸರಿಯಾದ ಮಾರ್ಗದಲ್ಲಿ ನಡೆಯುವುದಿಲ್ಲ.”

ಪಾರಿವಾಳಗಳು ಬಲೆಯಲ್ಲಿ ಸಿಕ್ಕಿಕೊಂಡದ್ದನ್ನು ನೋಡಿದ ಬೇಡನು ಸಂತೋಷಗೊಂಡು ಅವುಗಳನ್ನು ಕೊಲ್ಲಲು ದೊಣ್ಣೆಯನ್ನು ಹಿಡಿದುಕೊಂಡು ಓಡುತ್ತಾ ಬಂದನು. ಚಿತ್ರಗ್ರೀವನು ತಾನು ಹಾಗೂ ಪರಿವಾದವರು ಬಂಧಿತರಾದೆವೆಂದು ಅರಿತು ಬೇಡನು ಬರುತ್ತಿರುವುದನ್ನು ನೋಡಿ ಆ ಪಾರಿವಾಳಗಳಿಗೆ ಹೀಗೆ ಹೇಳಿದನು – “ಓಹೋ! ಹೆದರಬೇಡಿ. ಎಲ್ಲಾ ರೀತಿಯ ಆಪತ್ತುಗಳಲ್ಲಿ ಯಾರ ಬುದ್ಧಿಯು ಕ್ಷೀಣಿಸುವುದಿಲ್ಲವೋ, ಅಂತವನು ನಿಸ್ಸಂಶಯವಾಗಿ ಆ ಬುದ್ಧಿಯ ಪ್ರಭಾವದಿಂದಲೇ ಆ ವ್ಯಸನಗಳಿಂದ ಪಾರಾಗುವನು. ಉದಯಿಸುವಾಗ ಹಾಗೂ ಅಸ್ತಂಗತನಾಗುವಾಗ ಹೇಗೆ ಸೂರ್ಯನು ಒಂದೇ ರೀತಿ ಕೆಂಪಗೆ ಕಾಣಿಸುವನೋ ಹಾಗೆ ಮಹಾತ್ಮರು ಸುಖದಲ್ಲಿ ಹಾಗೂ ಕಷ್ಟದಲ್ಲಿ ಒಂದೇ ರೀತಿಯಲ್ಲಿ ಇರುವರು. ಆದ್ದರಿಂದ ನಾವೆಲ್ಲರೂ ಈ ಬಲೆಯ ಸಮೇತ ಒಟ್ಟಿಗೆ ಹಾರಿ ಬೇಡನಿಂದ ದೂರ ತೆರಳಿ ಮುಕ್ತಿಯನ್ನು ಪಡೆಯೋಣ. ಭಯಗೊಂಡು ನಾವೆಲ್ಲರೂ ಒಟ್ಟಿಗೆ ಹಾರದಿದ್ದರೆ, ಸಾವನ್ನಪ್ಪುತ್ತೇವೆ. ಸೂಕ್ಷ್ಮವಾದ ಮತ್ತು ಉದ್ದವಾದ ಹಲವು ದಾರಗಳು ಒಟ್ಟಿಗೆ ಇದ್ದಲ್ಲಿ ಅವುಗಳು ಹೆಚ್ಚಿನ ಭಾರವನ್ನು ತಡೆದುಕೊಳ್ಳುತ್ತವೆ ಎಂಬುದು ಸಜ್ಜನರಿಗೆ ಉಪಮೆಯಂತಿದೆ. (ಅಂದರೆ ಸಜ್ಜನರೂ ಕೂಡ ಒಟ್ಟುಗೂಡಿದಲ್ಲಿ ಹೆಚ್ಚಿನ ಕಾರ್ಯವನ್ನು ಸಾಧಿಸಲು ಆಗುತ್ತದೆ ಎಂದರ್ಥ)” ಪಾರಿವಾಳಗಳೆಲ್ಲವೂ ಹಾಗೆಯೇ ಮಾಡಿದಾಗ, ಬೇಡನು ಆಕಾಶದಲ್ಲಿ ಬಲೆಯೊಂದಿಗೆ ಹಾರುತ್ತಿರುವ ಅವುಗಳನ್ನು ಭೂಮಿಯಲ್ಲೇ ಹಿಂಬಾಲಿಸಿಕೊಂಡು ಓಡತೊಡಗಿದನು. ಹೀಗೆ ಮುಖವನ್ನು ಮೇಲೆ ಮಾಡಿಕೊಂಡು ಓಡುತ್ತಿದ್ದ ಅವನು ಹೀಗೊಂದು ಶ್ಲೋಕವನ್ನು ಹೇಳಿಕೊಂಡನು –  “ದುರ್ಬಲರಾದ ಪಕ್ಷಿಗಳು ಒಂದುಗೂಡಿ ಬಲೆಯನ್ನು ಎತ್ತಿಕೊಂಡು ಹೋಗುತ್ತಿವೆ. ಪರಸ್ಪರ ವಿವಾದವುಂಟಾದಲ್ಲಿ ಅವುಗಳು ಬೀಳುವುದರಲ್ಲಿ ಸಂದೇಹವಿಲ್ಲ.”

ಇದನ್ನೆಲ್ಲಾ ನೋಡುತ್ತಿದ್ದ ಲಘುಪತನಕನು ಮುಂದೇನಾಗುತ್ತದೆಂಬ ಕುತೂಹಲದಿಂದ ಆಹಾರ ಹುಡುಕುವುದನ್ನು ಬಿಟ್ಟು ಅವರನ್ನು ಹಿಂಬಾಲಿಸತೊಡಗಿದನು. ತನ್ನಿಂದ ಪಾರಿವಾಳಗಳು ಬಹು ದೂರ ಸರಿದವೆಂಬುದನ್ನು ಮನಗಂಡ ಬೇಡನು ನಿರಾಸೆಯಿಂದ ಈ ಶ್ಲೋಕವನ್ನು ಪಠಿಸಿದನು – “ಆಗಲಾರದ್ದು ಆಗುವುದೇ ಇಲ್ಲ. ಆಗಬೇಕಾದದ್ದು ಪ್ರಯತ್ನವಿಲ್ಲದೆಯೇ ಆಗುತ್ತದೆ. ಭಾಗ್ಯವಿಲ್ಲದಿದ್ದರೆ ಕೈಗೆ ಸಿಕ್ಕ ವಸ್ತುವೂ ನಾಶವಾಗಿ ಹೋಗುತ್ತದೆ. ವಿಧಿಯು ಪ್ರತಿಕೂಲವಾಗಿದ್ದಲ್ಲಿ, ಧನಲಾಭವಾದರೂ ಅದು ಇತರ ಸಂಪತ್ತನ್ನೂ ಸೇರಿಸಿಕೊಂಡು ಶಂಖನಿಧಿಯಂತೆ ನಷ್ಟವಾಗಿ ಹೋಗುತ್ತದೆ. (ನವನಿಧಿಗಳಲ್ಲಿ ಒಂದಾದ ಶಂಖನಿಧಿಯು ಕೇವಲ ತನ್ನ ಉಪಯೋಗಕ್ಕೆ ಮಾತ್ರ ಬರುವಂಥದ್ದು, ಬಂಧುಬಾಂಧವರ ಅಥವಾ ಪತ್ನೀಪುತ್ರರ ಉಪಯೋಗಕ್ಕೆ ಬರುವುದಿಲ್ಲ) ಪಕ್ಷಿಗಳ ಮಾಂಸದ ಆಸೆಯು ಹಾಗಿರಲಿ, ನನ್ನ ಕುಟುಂಬದ ಜೀವನೋಪಾಯವಾದ ಬಲೆಯೂ ಕಳೆದುಹೋಯಿತು.”

ಚಿತ್ರಗ್ರೀವನು ಬೇಡನು ಹಿಂಬಾಲಿಸುತ್ತಿಲ್ಲವೆಂಬುದನ್ನರಿತು ಆ ಪಾರಿವಾಳಗಳಿಗೆ ಹೇಳಿದನು – “ಆ ದುರಾತ್ಮ ಬೇಡನು ಹಿಂದಿರುಗಿದನು. ಆದ್ದರಿಂದ ನಾವು ನಿರ್ಭಯರಾಗಿ ಮಹಿಲಾರೋಪ್ಯ ನಗರದ ಪೂರ್ವೋತ್ತರ ಭಾಗಕ್ಕೆ ಹೋಗೋಣ. ಅಲ್ಲಿ ನನ್ನ ಮಿತ್ರನಾದ ಹಿರಣ್ಯಕನೆಂಬ ಇಲಿಯು ನಮ್ಮೆಲ್ಲರ ಬಂಧನವನ್ನು ಬಿಡಿಸುತ್ತಾನೆ. ಮನುಷ್ಯರೆಲ್ಲರಿಗೆ ಕಷ್ಟ ಒದಗಿದಾಗ ವಚನಮಾತ್ರದ ಸಹಾಯವಾದರೂ ಮಿತ್ರರಲ್ಲದೆ ಬೇರೆಯವರು ಮಾಡುವುದಿಲ್ಲ.” ಹೀಗೆ ಚಿತ್ರಗ್ರೀವನಿಂದ ಹೇಳಲ್ಪಟ್ಟ ಆ ಪಾರಿವಾಳಗಳು ಮಹಿಲಾರೋಪ್ಯ ನಗರದಲ್ಲಿರುವ ಹಿರಣ್ಯಕನ ಬಿಲವನ್ನು ತಲುಪಿದರು.

ಹಿರಣ್ಯಕನು ಸಾವಿರ ದ್ವಾರಗಳಿರುವ ಕೋಟೆಯಂತಿರುವ ಬಿಲದಲ್ಲಿ ಯಾವುದೇ ಭಯವಿಲ್ಲದೆ ಸುಖದಿಂದ ಇದ್ದನು. ಅಥವಾ ಈ ಉಕ್ತಿಗಳು ಸರಿಯಾಗಿಯೇ ಇವೆ – “ನೀತಿಶಾಸ್ತ್ರದಲ್ಲಿ ಪ್ರವೀಣರಾದವರು ಮುಂದೆ ಬರಬಹುದಾದ ಆಪತ್ತನ್ನು ಮನಗಂಡು ಇಲಿಯಂತೆ ನೂರು ದ್ವಾರವುಳ್ಳ ಕೋಟೆಯಲ್ಲಿ ವಾಸಿಸುತ್ತಾರೆ. ಹಲ್ಲಿಲ್ಲದ ಹಾವಿನಂತೆ ಅಥವಾ ಮದವಿಲ್ಲದ ಆನೆಯಂತೆ ಕೋಟೆಯಿಲ್ಲದ ರಾಜನು ಎಲ್ಲರಿಂದಲೂ ಸೋಲು ಕಾಣುತ್ತಾನೆ. ರಾಜನ ಸಾವಿರ ಆನೆಗಳಿಂದ ಮತ್ತು ಲಕ್ಷ ಕುದುರೆಗಳಿಂದ ಸಾಧ್ಯವಾಗದ್ದನ್ನು ಒಂದು ಕೋಟೆಯಿಂದ ಸಾಧಿಸಬಹುದು. ಕೋಟೆಯಲ್ಲಿರುವ ಒಬ್ಬ ಧನುರ್ಧರನು ನೂರು ಜನರನ್ನು ಕೊಲ್ಲಬಲ್ಲನು. ಆದ್ದರಿಂದ ನೀತಿಶಾಸ್ತ್ರ ಬಲ್ಲವರು ಕೋಟೆಯು ಪ್ರಶಂಸನೀಯವೆಂದು ತಿಳಿಸಿದ್ದಾರೆ”

ನಂತರ ಚಿತ್ರಗ್ರೀವನು ಬಿಲವನ್ನು ತಲುಪಿ ಜೋರು ಧ್ವನಿಯಲ್ಲಿ ಹೇಳಿದನು – “ಎಲೈ ಮಿತ್ರ ಹಿರಣ್ಯಕನೇ, ಬೇಗ ಬಾ, ನನಗೆ ಮಹಾ ವಿಪತ್ತು ಬಂದೊದಗಿದೆ”. ಅದನ್ನು ಕೇಳಿದ ಹಿರಣ್ಯಕನು ಬಿಲದಲ್ಲಿದ್ದುಕೊಂಡೇ ಹೇಳಿದನು – “ಯಾರು ನೀನು ? ಏಕೆ ಬಂದಿರುವೆ ? ಏನು ಕಾರಣ ? ನಿನ್ನ ವಿಪತ್ತು ಯಾವ ರೀತಿಯದು ಎಂಬುದನ್ನು ಹೇಳು”

ಅದನ್ನು ಕೇಳಿ ಚಿತ್ರಗ್ರೀವ – “ನಾನು ಚಿತ್ರಗ್ರೀವನಂಬ ಪಾರಿವಾಳಗಳ ರಾಜ, ನಿನ್ನ ಮಿತ್ರ. ಬೇಗನೆ ಬಾ, ದೊಡ್ಡ ಕೆಲಸವಿದೆ”

ಅದನ್ನು ಕೇಳಿ ಹರ್ಷದಿಂದ ರೋಮಾಂಚನಗೊಂಡು, ಕಳವಳವಿಲ್ಲದ ಮನಸ್ಸಿನಿಂದ ಹಿರಣ್ಯಕನು ಹೊರಗೆ ಬಂದನು. ಅಥವಾ ಈ ಉಕ್ತಿಯು ಸರಿಯಾಗಿದೆ – “ಸ್ನೇಹಸಂಪನ್ನರಾದ, ದರ್ಶನಮಾತ್ರದಿಂದ ಆನಂದವನ್ನುಂಟುಮಾಡುವ ಮಿತ್ರರು ಮಹಾತ್ಮರಾದ ಗೃಹಸ್ಥರ ಮನೆಗೆ ನಿತ್ಯವೂ ಬರುತ್ತಾರೆ (नित्यमागच्छन्ति)  (ಅಥವಾ नित्यं नागच्छन्ति ಎಂಬ ಪಾಠಭೇದದ ಪ್ರಕಾರ  – ನಿತ್ಯವೂ ಬರುವುದಿಲ್ಲ). ಸೂರ್ಯೋದಯ, ತಾಂಬೂಲ, ಮಹಾಭಾರತದ ಕಥೆ, ಪ್ರೀತಿಯ ಹೆಂಡತಿ ಮತ್ತು ಒಳ್ಳೆಯ ಮಿತ್ರ – ಇವೆಲ್ಲವೂ ನಿತ್ಯನೂತನ. ಯಾರ ಮನೆಗೆ ನಿತ್ಯವೂ ಮಿತ್ರರು ಬರುತ್ತಾರೆಯೋ, ಅಂತವನ ಮನಸ್ಸಿಗೆ ಆಗುವ ಸುಖವು ಬೇರೆ ಯಾವ ಸುಖಕ್ಕೂ ಸಮವಲ್ಲ.”

ಪರಿವಾರ ಸಮೇತನಾಗಿ ಜಾಲದಲ್ಲಿ ಬಂಧಿತನಾಗಿದ್ದ ಚಿತ್ರಗ್ರೀವನನ್ನು ನೋಡಿ ವಿಷಾದದಿಂದ ಹಿರಣ್ಯಕನು ಏನಿದೆಂದು ಕೇಳಲು ಚಿತ್ರಗ್ರೀವನು – “ಗೊತ್ತಿದ್ದರೂ ಕೇಳುತ್ತಿರುವೆಯಲ್ಲ ? ಮನುಷ್ಯನು ಯಾವ ಸ್ಥಾನದಿಂದ, ಯಾವ ಕಾರಣದಿಂದ, ಯಾವ ಕಾಲದಲ್ಲಿ, ಯಾವ ರೀತಿಯ, ಎಷ್ಟು, ಎಲ್ಲಿ ಮತ್ತು ಯಾವ ಶುಭಾಶುಭ ಕಾರ್ಯವನ್ನು ಮಾಡುತ್ತಾನೋ, ದೈವವಶದಿಂದ ಆ ಸ್ಥಾನದಿಂದ, ಆ ಕಾರಣದಿಂದ, ಆ ಕಾಲದಲ್ಲಿ, ಆ ರೀತಿಯ, ಅಷ್ಟು, ಅಲ್ಲಿ ಮತ್ತು ಅದಕ್ಕನುಗುಣವಾದ ಫಲವನ್ನು ಪಡೆಯುತ್ತಾನೆ. ನನಗೆ ನಾಲಿಗೆಯ ಚಪಲತೆಯಿಂದ ಈ ಬಂಧನ ಪ್ರಾಪ್ತವಾಗಿದೆ. ಈಗ ನೀನು ಬೇಗನೆ ಬಂಧನವನ್ನು ಬಿಡಿಸು.

ಅದನ್ನು ಕೇಳಿ ಹಿರಣ್ಯಕ – “ಇಪ್ಪತೈದು ಯೋಜನೆಗಳ ದೂರದಿಂದಲೇ ಪಕ್ಷಿಯು ಬೇಟೆಯನ್ನು ನೋಡಬಲ್ಲದು ಆದರೆ ಅದೃಷ್ಟ ಸರಿಯಿಲ್ಲದಿದ್ದರೆ ಪಕ್ಕದಲ್ಲೇ ಇರುವ ಬಲೆಯನ್ನೂ ಕೂಡ ನೋಡಲಾರದು. ಸೂರ್ಯಚಂದ್ರರಿಗಾಗುವ ಗ್ರಹಪೀಡನೆ, ಆನೆ, ಸರ್ಪ, ಪಕ್ಷಿಗಳಿಗಾಗುವ ಬಂಧನ ಹಾಗೂ ಬುದ್ಧಿವಂತರಿಗೆ ಬರುವ ಬಡತನವನ್ನು ನೋಡಿದಾಗ ವಿಧಿಯು ಬಲಶಾಲಿಯೆಂದು ನನಗೆ ಅನಿಸುತ್ತದೆ. ಆಕಾಶದಲ್ಲಿ ವಿಹಿರಿಸುವ ಪಕ್ಷಿಗಳೂ ಕೂಡ ಆಪತ್ತನ್ನು ಹೊಂದುತ್ತವೆ. ಅಗಾಧವಾದ ಸಮುದ್ರದ ನೀರಿನಲ್ಲಿರುವ ಮೀನುಗಳೂ ಕೂಡ ಗಾಳಗಳಿಂದ ಹಿಡಿಯಲ್ಪಡುತ್ತವೆ. ಹೀಗಿರುವಾಗ ಇಲ್ಲಿ ಪುಣ್ಯ ಯಾವುದು ಮತ್ತು ಪಾಪ ಯಾವುದು ? ಉತ್ತಮ ಸ್ಥಾನದಲ್ಲಿರುವ ಲಾಭವಾದರೂ ಏನು ? ಕಾಲವು ದೂರದಿಂದಲೇ ವ್ಯಸನವೆಂಬ ಕರಗಳಿಂದ ಹಿಡಿದುಕೊಳ್ಳುತ್ತದೆ.”

ಹೀಗೆ ನುಡಿದ ತನ್ನನ್ನು ಬಿಡಿಸಲು ಹೊರಟ ಹಿರಣ್ಯಕನಿಗೆ ಚಿತ್ರಗ್ರೀವನು ಹೇಳಿದನು – “ಭದ್ರ, ಹೀಗೆ ಮಾಡಬೇಡ, ಮೊದಲು ನನ್ನ ಸೇವಕರನ್ನು ಬಿಡಿಸು, ನಂತರ ನನ್ನನ್ನು ಮುಕ್ತಗೊಳಿಸು.”

ಅದನ್ನು ಕೇಳಿ ಕೋಪಗೊಂಡ ಹಿರಣ್ಯಕ – “ನೀನು ಹೇಳಿದ್ದು ಸರಿಯಿಲ್ಲ, ಏಕೆಂದರೆ ಒಡೆಯನ ನಂತರ ಸೇವಕರು.”

ಹಿರಣ್ಯಕ – “ಭದ್ರ, ಹಾಗೆ ಹೇಳಬೇಡ, ತೊಂದರೆಯಲ್ಲಿರುವ ಇವರೆಲ್ಲಾ ನನ್ನ ಆಶ್ರಯದಲ್ಲಿರುವವರು. ಅಲ್ಲದೆ ತಮ್ಮ ಕುಟುಂಬಗಳನ್ನು ಬಿಟ್ಟು ಬಂದಿರುವರು. ಅವರಿಗೆ ಇಷ್ಟಾದರೂ ಗೌರವವನ್ನು ಕೊಡದಿದ್ದರೆ ಹೇಗೆ ? ಅಲ್ಲದೆ ರಾಜನು ತನ್ನ ಸೇವಕರನ್ನು ಅತ್ಯಾದರದಿಂದ ನೋಡಿಕೊಂಡರೆ, ಹಣದ ಅಭಾವವಿದ್ದರೂ ಅವರು ರಾಜನನ್ನು ಎಂದೂ ಬಿಟ್ಟು ಹೋಗುವುದಿಲ್ಲ. ಸಂಪತ್ತಿಗೆ ವಿಶ್ವಾಸವೇ ಮೂಲ. ವಿಶ್ವಾಸವನ್ನು ತೋರಿಸುವುದರಿಂದಲೇ ಆನೆಯು ಗುಂಪಿನ ಒಡೆಯನಾಗಿರುತ್ತದೆ. ಸಿಂಹವು ಪ್ರಾಣಿಗಳ ರಾಜನಾದರೂ (ವಿಶ್ವಾಸದ ಅಭಾವದಿಂದ) ಪ್ರಾಣಿಗಳು ಅದರ ಸುತ್ತ ಇರುವುದಿಲ್ಲ. ಅಲ್ಲದೆ ಬಲೆಯನ್ನು ಕಡಿಯುತ್ತಿದ್ದಾಗ ನಿನ್ನ ಹಲ್ಲುಗಳು ತುಂಡಾದರೆ ಅಥವಾ ಆ ದುರಾತ್ಮ ಬೇಡನು ಬಂದರೆ ನಾನು ಖಂಡಿತವಾಗಿಯೂ ನರಕದಲ್ಲಿ ಬಿದ್ದಂತೆಯೆ. ಸಚ್ಚಾರಿತ್ರ್ಯವುಳ್ಳ ಸೇವಕರು ಕಷ್ಟದಲ್ಲಿದ್ದಾಗ ಚಿಂತೆಯಿಲ್ಲದೆ ಸುಖವಾಗಿ ಇರುವ ಪ್ರಭುವು ಇಹಪರದಲ್ಲಿ ಕಷ್ಟಗಳನ್ನನುಭವಿಸಿ ನರಕಕ್ಕೆ ತೆರಳುವನು.”

ಹಿರಣ್ಯಕ – “ಚಿತ್ರಗ್ರೀವ, ನನಗೆ ರಾಜಧರ್ಮ ತಿಳಿದಿದೆ. ಆದರೆ ನಿನ್ನ ಪರೀಕ್ಷೆ ಮಾಡುತ್ತಿದ್ದೆ. ಆದ್ದರಿಂದ ಮೊದಲು ಬೇರೆಲ್ಲರ ಬಂಧನವನ್ನು ಬಿಡಿಸುವೆನು. ಈ ಕಾರ್ಯರಿಂದ ನೀನು ಅನೇಕ ಪಾರಿವಾರಗಳನ್ನುಳ್ಳ ಪರಿವಾರವನ್ನು ಹೊಂದುವೆ. ಸೇವಕರಲ್ಲಿ ಸದಾ ಕರುಣೆ ಹಾಗೂ ಗುಣದೋಷಗಳ ಆಧಾರದ ಮೇಲೆ ಸರಿಯಾದ ಧನಾದಿಗಳ ವಿಭಜನೆ ಮಾಡುವ ಭೂಪಾಲನು ಮೂರು ಲೋಕಗಳನ್ನೂ ಕೂಡ ರಕ್ಷಣೆ ಮಾಡುವುದಲ್ಲಿ ಸಮರ್ಥನಾಗಿರುತ್ತಾನೆ.”

ಹೀಗೆ ಹೇಳಿ ಹಿರಣ್ಯಕನು ಎಲ್ಲರ ಬಂಧನವನ್ನು ಬಿಡಿಸಿ ಚಿತ್ರಗ್ರೀವನಿಗೆ ಹೇಳಿದನು – “ಮಿತ್ರ, ಈಗ ನಿನ್ನ ಮನೆಗೆ ಹೋಗು, ಮತ್ತೆ ಎಂದಾದರೂ ಕಷ್ಟ ಬಂದಾಗ ಮತ್ತೆ ಬಾ.” ಅವರನ್ನೆಲ್ಲಾ ಕಳಿಸಿ ತನ್ನ ಬಿಲವನ್ನು ಹೊಕ್ಕನು. ಚಿತ್ರಗ್ರೀವನು ಕೂಡ ತನ್ನ ಪರಿವಾರದೊಂದಿಗೆ ತನ್ನ ಸ್ಥಾನಕ್ಕೆ ತೆರಳಿದನು.

ಹೀಗೊಂದು ಉಕ್ತಿಯು ಸರಿಯಾಗಿಯೇ ಇದೆ – “ಮಿತ್ರರನ್ನು ಉಳ್ಳವನು ಅವರ ಸಹಾಯದಿಂದ ದುಃಸಾಧ್ಯವಾದ ಕಾರ್ಯಗಳನ್ನೂ ಸಾಧಿಸುವನು. ಆದ್ದರಿಂದ ತನಗೆ ಸಮಾನರಾದ ಮಿತ್ರರನ್ನು ಸಂಪಾದಿಸಬೇಕು”.

ಲಘುಪತನಕ ಕಾಗೆಯು, ಚಿತ್ರಗ್ರೀವನ ಬಂಧನ ಮತ್ತು ಮುಕ್ತಿ – ಈ ಎಲ್ಲವನ್ನೂ ನೋಡಿ ವಿಸ್ಮಯಗೊಂಡು ಯೋಚಿಸಿದನು – “ಈ ಹಿರಣ್ಯಕನ ಬುದ್ಧಿ, ಶಕ್ತಿ ಮತ್ತು ಕೋಟೆಯು ಎಂಥ ಅದ್ಭುತವಾಗಿದೆ! ಪಕ್ಷಿಗಳ ಬಂಧನದ ಮುಕ್ತಿಗೆ ಇದೇ ದಾರಿಯೆಂದು ಕಾಣುತ್ತದೆ. ನನಗೆ ಯಾರಲ್ಲೂ ವಿಶ್ವಾಸವಿಲ್ಲ ಮತ್ತು ನಾನು ಚಂಚಲ ಸ್ವಭಾವದವನು. ಹಾಗಿದ್ದರೂ ಈತನೊಡನೆ ಸ್ನೇಹವನ್ನು ಮಾಡಬೇಕು. ಎಲ್ಲವನ್ನು ಹೊಂದಿದ್ದರೂ ಕೂಡ ಬುದ್ಧಿವಂತರು ಸ್ನೇಹಿತರನ್ನು ಸಂಪಾದಿಸಬೇಕು. ನದಿಗಳ ಒಡೆಯನಾದ ಸಮುದ್ರವು ಸಂಪೂರ್ಣವಾಗಿದ್ದರೂ ಚಂದ್ರೋದಯವನ್ನು ಅಪೇಕ್ಷಿಸುತ್ತದೆ. ಹೀಗೆ ನಿಶ್ಚಯಿಸಿ ಮರದಿಂದ ಇಳಿದು ಬಿಲದ ದ್ವಾರಕ್ಕೆ ತೆರಳಿ ಚಿತ್ರಗ್ರೀವನ ಧ್ವನಿಯಿಂದ “ಎಲೈ ಹಿರಣ್ಯಕ, ಬಾ ಬಾ” ಎಂದು ಹಿರಣ್ಯಕನನ್ನು ಕರೆದನು .

ಆ ಕೂಗನ್ನು ಕೇಳಿ ಹಿರಣ್ಯಕನು “ಬೇರೊಂದು ಪಾರಿವಾಳವು ಇನ್ನು ಬಂಧನಮುಕ್ತವಾಗಿಲ್ಲವೆಂದು ಕಾಣುತ್ತದೆ, ಆದಕ್ಕಾಗಿ ನನ್ನನು ಕರೆಯುತ್ತಿದೆ” ಎಂದು ಚಿಂತಿಸಿ “ಯಾರು ನೀನು ?” ಎಂದು ಕೇಳಿದನು.

ಆಗ ಲಘುಪತನಕ – “ನಾನು ಲಘುಪತನಕನೆಂಬ ಕಾಗೆ”

ಅದನ್ನು ಕೇಳಿ ವಿಶೇಷವಾಗಿ ತನ್ನ ಬಿಲದಲ್ಲಿ ಅಡಗಿಕೊಂಡೇ ಹಿರಣ್ಯಕನು ನುಡಿದನು – “ಎಲೈ ಕಾಗೆಯೇ, ಬೇಗೆ ಈ ಜಾಗದಿಂದ ಹೊರಟುಹೋಗು.”

ಕಾಗೆ – “ನಾನು ಒಂದು ದೊಡ್ಡ ಕೆಲಸದ ಮೇಲೆ ನಿನ್ನ ಬಳಿಗೆ ಬಂದಿರುವೆ. ಆದ್ದರಿಂದ ನಿನ್ನ ದರ್ಶನವನ್ನೂ ನೀಡುವುದಿಲ್ಲವೇ ?”

ಹಿರಣ್ಯಕ – “ನಿನ್ನನ್ನು ನೋಡುವುದರಿಂದ ನನಗೇನು ಪ್ರಯೋಜನವೂ ಇಲ್ಲ”

ಲಘುಪತನಕ – “ನೀನು ಚಿತ್ರಗ್ರೀವನ ಬಂಧನವನ್ನು ಬಿಡಿಸಿದ್ದನ್ನು ನೋಡಿದೆ. ನಿನ್ನ ಮೇಲೆ ನನಗೆ ತುಂಬಾ ಪ್ರೀತಿಯುಂಟಾಗಿದೆ. ನನಗೂ ಎಂದಾದರೂ ಬಂಧನವು ಉಂಟಾದರೆ ನಿನ್ನಿಂದ ಬಂಧನಮುಕ್ತಿಯಾಗುತ್ತದೆ. ಆದ್ದರಿಂದ ನನ್ನೊಂದಿಗೆ ಸ್ನೇಹವನ್ನು ಮಾಡು.”

ಹಿರಣ್ಯಕ – “ಓಹೋ! ನೀನು ಆಹಾರವಾಗಿ ತಿನ್ನುವಂಥ ಪ್ರಾಣಿ ನಾನು, ಹಾಗಾಗಿ ನಿನ್ನೊಂದಿಗೆ ಎಂತಹ ಸ್ನೇಹ ? ಆದ್ದರಿಂದ ಹೊರಟುಹೋಗು. ಪರಸ್ಪರ ವಿರೋಧ ಭಾವವಿರುವವರಲ್ಲಿ ಎಂತಹ ಮೈತ್ರಿ ? ಹಣದಲ್ಲಿ ಹಾಗೂ ಕುಲದಲ್ಲಿ ಸಮಾನರಾದವರ ಮಧ್ಯೆ ಸ್ನೇಹ ಅಥವ ಜಗಳ ಇರುತ್ತದೆಯೇ ಹೊರತು ಅಸಮಾನರ ಮಧ್ಯೆಯಲ್ಲ. ಅಲ್ಲದೆ ಯಾವ ದುರ್ಬುದ್ಧಿಯುಳ್ಳ ಮೂರ್ಖನು ತನಗಿಂತ ಕೆಳಗಿನವರೊಂದಿಗೆ ಅಥವಾ ತನ್ನ ಮೇಲ್ಮಟ್ಟದವರೊಂದಿಗೆ ಸ್ನೇಹವನ್ನು ಮಾಡುವನೋ, ಅವನು ಜನರ ಅಪಹಾಸ್ಯಕ್ಕೆ ಒಳಗಾಗುತ್ತಾನೆ. ಆದ್ದರಿಂದ ಹೊರಟುಹೋಗು.”

ಕಾಗೆ – “ಎಲೈ ಹಿರಣ್ಯಕ, ನಾನು ನಿನ್ನ ಬಿಲದ್ವಾರದಲ್ಲಿ ಕುಳಿತಿರುವೆನು. ನೀನು ನನ್ನೊಂದಿಗೆ ಸ್ನೇಹವನ್ನು ಮಾಡದಿದ್ದರೆ ನಾನು ನಿನ್ನ ಎದುರಿಗೇ ಪ್ರಾಣತ್ಯಾಗವನ್ನು ಮಾಡುವೆನು. ಇಂದಿನಿಂದ ನನಗೆ ಉಪವಾಸವಿರಲಿ.”

ಹಿರಣ್ಯಕ – “ವೈರಿಯಾದ ನಿನ್ನೊಂದಿಗೆ ಹೇಗೆ ಸ್ನೇಹವನ್ನು ಮಾಡಲಿ ? ದೃಢವಾದ ಒಪ್ಪಂದದ ಮೂಲಕವಾದರೂ ಶತ್ರುವನೊಂದಿಗೆ ಸಂಧಾನವನ್ನು ಮಾಡಬಾರದು. ತಣ್ಣಗಿರುವ ನೀರು ಬಿಸಿಯಾಗಿರುವ ಬೆಂಕಿಯನ್ನು ಆರಿಸುತ್ತದೆ. ಆದರೆ ಅದೇ ನೀರು ಬಿಸಿಯಾಗಿದ್ದರೆ ಬೆಂಕಿಯನ್ನು ಆರಿಸದೆ ಬಿಡುವುದೇ ?” (ಅಂದರೆ ಮೂಲ ಗುಣವನ್ನು ತ್ಯಜಿಸಲು ಕಷ್ಟ ಎಂದರ್ಥ)

ಕಾಗೆ – “ನಿನ್ನ ದರ್ಶನವೂ ಕೂಡ ಆಗಿಲ್ಲ, ಇನ್ನು ಶತ್ರುತ್ವ ಎಲ್ಲಿಯದು ? ಅನುಚಿತವಾದುದನ್ನು ಏಕೆ ನುಡಿಯುವೆ ?”

ಹಿರಣ್ಯಕ – “ಎರಡು ರೀತಿಯ ಹಗೆತನವಿರುತ್ತದೆ – ಸಹಜ ಮತ್ತು ಕೃತ್ರಿಮ. ನೀನಾದರೋ ನನ್ನ ಸಹಜ ವೈರಿ. ಕೃತ್ರಿಮ ಶತ್ರುತ್ವವಾದರೋ ಉಪಕಾರ, ಸಂಧಿ ಮುಂತಾದ ಉಪಾಯಗಳಿಂದ ಬೇಗನೆ ಶಮನವಾಗುತ್ತದೆ. ಆದರೆ ಸಹಜ ಶತ್ರುತ್ವವು ಪ್ರಾಣಾರ್ಪಣೆ ಮಾಡುವವರೆಗೆ ಕಡಿಮೆಯಾಗುವುದಿಲ್ಲ.”

ಕಾಗೆ – “ಎರಡು ವಿಧದ ಶತ್ರುತ್ವವದ ಬಗ್ಗೆ ತಿಳಿದುಕೊಳ್ಳಲು ಬಯಸುವೆನು, ಹೇಳು”

ಹಿರಣ್ಯಕ – “ಕೃತ್ರಿಮ ಶತ್ರುತ್ವವು ಯಾವುದಾದರೋ ಕಾರಣದಿಂದ ಉಂಟಾಗುತ್ತದೆ. ಅದಕ್ಕೆ ಸೂಕ್ತವಾದ ಉಪಾಯ ಮಾಡುವುದರಿಂದ ಕಳೆದು ಹೋಗುತ್ತದೆ. ಸಹಜ ಅಥವಾ ಸ್ವಾಭಾವಿಕ ಶತ್ರುತ್ವವು ಯಾವ ರೀತಿಯಿಂದಲೂ ಕಡಿಮೆಯಾಗುವುದಿಲ್ಲ. ಹಾವು – ಮುಂಗುಸಿಗಳ, ಸಸ್ಯಾಹಾರಿ – ಮಾಂಸಾಹಾರಿ ಪ್ರಾಣಿಗಳ, ನೀರು – ಬೆಂಕಿಯ, ದೇವ – ದಾನವರ, ನಾಯಿ – ಬೆಕ್ಕಿನ, ಶ್ರೀಮಂತ – ಬಡವರ, ಸವತಿಯರ, ಆನೆ – ಸಿಂಹದ, ಬೇಟೆಗಾರ – ಜಿಂಕೆಗಳ, ಆಚಾರವಂತ – ಆಚಾರವಿಲ್ಲದವನ, ಕಾಗೆ – ಗೂಬೆಯ, ಮೂರ್ಖ – ಪಂಡಿತರ, ಪತಿವ್ರತೆ – ಸೂಳೆಯರ, ಸಜ್ಜನ – ದುರ್ಜನರ ಮಧ್ಯೆಯಿರುವ ಹಗೆತನವು ನಿರಂತರವಾಗಿರುತ್ತದೆ. ಇವರಲ್ಲಿ ಯಾರು ಯಾರನ್ನೂ ಕೊಂದಿಲ್ಲದಿದ್ದರೂ ಈ ರೀತಿಯ ಶತ್ರುತ್ವವು ಪ್ರಾಣಗಳನ್ನು ಕಾಡುತ್ತದೆ  (ಸಹಜ ಶತ್ರುತ್ವವಿರುವ ಕಾರಣ) .”

ಕಾಗೆ – “ಕಾರಣವಿಲ್ಲದ ಶತ್ರುತ್ವವಿದು. ನನ್ನ ಮಾತನ್ನು ಕೇಳು. ಕಾರಣವಿರುವುದರಿಂದ ಮೈತ್ರಿ ಅಥವಾ ಶತ್ರುತ್ವ ಉಂಟಾಗುತ್ತದೆ. ಆದ್ದರಿಂದ ಬುದ್ಧಿವಂತರು ಮೈತ್ರಿಯನ್ನು ಮಾಡಬೇಕೇ ಹೊರತು ಹಗೆತನವನ್ನಲ್ಲ. ಆದ್ದರಿಂದ ಮಿತ್ರಧರ್ಮವನ್ನು ಹೊಂದಲು ನನ್ನೊಂದಿಗೆ ಸೇರು”

ಹಿರಣ್ಯಕ – “ನಿನ್ನೊಂದಿಗೆ ನಾನು ಹೇಗೆ ಸೇರುವುದು ? ನೀತಿಸಾರವನ್ನು ಕೇಳು – ಒಬ್ಬ ನಿಜವಾಗಿಯೂ ದುಷ್ಟನೆಂದು ತಿಳಿದೂ ಕೂಡ ಅವನೊಂದಿಗೆ ಸಂಧಿಯನ್ನು ಮಾಡಿದರೆ, ಗರ್ಭವನ್ನು ಹೊತ್ತ ಹೇಸರುಗತ್ತೆಯಂತೆ ಸಾವನ್ನಪ್ಪಬೇಕಾಗುತ್ತದೆ. ಅಥವಾ ನಾನು ಗುಣವಂತ, ಹಾಗಾಗಿ ನನ್ನೊಂದಿಗೆ (ಯಾರೂ) ಹಗೆತನವನ್ನು ಮಾಡುವುದಿಲ್ಲ ಎಂದು ತಿಳಿಯುವುದೂ ಸರಿಯಲ್ಲ. ವ್ಯಾಕರಣ ಶಾಸ್ತ್ರದ ಕರ್ತೃವಾದ ಪಾಣಿನಿಯ ಪ್ರಿಯವಾದ ಪ್ರಾಣವನ್ನು ಸಿಂಹವು ತೆಗೆದುಕೊಂಡಿತು. ಮೀಮಾಂಸ ಶಾಸ್ತ್ರವನ್ನು ರಚಿಸಿದ ಜೈಮಿನಿ ಮುನಿಯನ್ನು ಆನೆಯೊಂದು ಕೊಂದುಹಾಕಿತು. ಛಂದಸ್ಸಿನ ಜ್ಞಾನನಿಧಿಯನ್ನು ಕೊಟ್ಟ ಪಿಂಗಲನನ್ನು ಸಮುದ್ರದ ತೀರದಲ್ಲಿ ಮೊಸಳೆಯೊಂದು ಕೊಂದಿತು. ಮನಸ್ಸಿಗೆ ಅಜ್ಞಾನವು ಕವಿದಿರುವ, ಅತಿಕೋಪಿಷ್ಟರಾದ ಪಶುಗಳಿಗೆ ಗುಣಗಳಿಂದ ಏನು ತಾನೇ ಪ್ರಯೋಜನ ?”

ಕಾಗೆ – “ಅದು ಸರಿ, ಆದರೂ ನಾನು ಹೇಳುವುದನ್ನು ಕೇಳು. ಸಾಮಾನ್ಯ ಜನರ  ಮೈತ್ರಿಯು ಉಪಕಾರ ಮಾಡುವುದರಿಂದ, ಪಶುಪಕ್ಷಿಗಳ ಮೈತ್ರಿ ಯಾವುದಾದರೂ ಕಾರಣವಿರುವುದರಿಂದ, ಮೂರ್ಖರ ಮೈತ್ರಿ ಭಯ ಮತ್ತು ಲೋಭದಿಂದ ಆಗುತ್ತದೆ. ಆದರೆ ಸಜ್ಜನರ ಮೈತ್ರಿ ದರ್ಶನಮಾತ್ರದಿಂದ ಆಗುತ್ತದೆ. ದುರ್ಜನರ ಮೈತ್ರಿ ಮಣ್ಣಿನ ಮಡಿಕೆಯಂತೆ ಸುಲಭದಲ್ಲಿ ಕಡಿದುಹೋಗುತ್ತದೆ ಮತ್ತು ಮೈತ್ರಿ ಒಮ್ಮೆ ತುಂಡಾದರೆ ಮತ್ತೆ ಸರಿಹೊಂದುವುದು ಕಷ್ಟಕರವು. ಆದರೆ ಸಜ್ಜನರ ಮೈತ್ರಿ ಚಿನ್ನದ ಮಡಿಕೆಯಿದ್ದಂತೆ. ತುಂಡಾಗುವುದು ಅತ್ಯಂತ ಕಷ್ಟ ಮತ್ತು ತುಂಡಾದರೆ ಮತ್ತೆ ಸುಲಭವಾಗಿ ಒಂದಾಗಿಸಲು ಸಾಧ್ಯ. ಕಬ್ಬಿನ ಕೋಲಿನಲ್ಲಿ ಮೇಲಿರುವ ಗಂಟುಗಳಿಗಿಂತ ಕೆಳಗಿರುವ ಗಂಟುಗಳಲ್ಲಿ ಹೇಗೆ ಸಿಹಿಯು ಹೆಚ್ಚಿರುತ್ತದೆಯೋ, ಹಾಗೆ ಸಜ್ಜನರ ಮೈತ್ರಿ ಕಾಲಕಳೆದಂತೆ ಪಕ್ವವಾಗುತ್ತದೆ. ದುರ್ಜನರ ಮೈತ್ರಿ ಇದಕ್ಕೆ ವಿರುದ್ಧವಾಗಿರುತ್ತದೆ ಅಂದರೆ ಕಾಲ ಕಳೆದಂತೆ ಸ್ನೇಹವು ಕಡಿಮೆಯಾಗುತ್ತದೆ. ಸಜ್ಜನರ ಸ್ನೇಹವು ಮಧ್ಯಾಹ್ನದ ನೆರಳಿನಂತೆ ಮೊದಲು ಸಣ್ಣದಿದ್ದು ನಂತರ ದೊಡ್ಡದಾಗುತ್ತದೆ. ದುಷ್ಟರ ಸ್ನೇಹವು ಬೆಳಗಿನ ನೆರಳಿನಂತೆ ಮೊದಲು ದೊಡ್ಡದಿದ್ದು ಕ್ರಮೇಣ ಸಣ್ಣದಾಗುತ್ತದೆ. ಆದ್ದರಿಂದ ನಾನು ಖಂಡಿತವಾಗಿಯೂ ಸಜ್ಜನನಾಗಿರುವೆನು. ಅಲ್ಲದೆ ಶಪಥಾದಿಗಳಿಂದ ನಿನ್ನ ಭಯವನ್ನು ದೂರ ಮಾಡುವೆನು.”

ಹಿರಣ್ಯಕ – “ನಿನ್ನ ಶಪಥದ ಮೇಲೆ ನನಗೆ ನಂಬಿಕೆಯಿಲ್ಲ. ಶಪಥ ಮಾಡಿ ಸಂಧಿಯನ್ನು ಮಾಡಿದ್ದರೂ ಶತ್ರುವನ್ನು ನಂಬಬಾರದು. ಇಂದ್ರನು ವೃತ್ರಾಸುರನನ್ನು ಶಪಥ ಮಾಡಿ ನಂಬಿಸಿ ಕೊಂದನು. ಶತ್ರುವಿನಲ್ಲಿ ವಿಶ್ವಾಸವನ್ನು ಮೂಡಿಸದಿದ್ದರೆ ದೇವತೆಗಳಿಗೂ ಕೂಡ ಅವರನ್ನು ಸೋಲಿಸಲಾಗದು. ಕಶ್ಯಪಪತ್ನಿ ದಿತಿಗೆ ಇಂದ್ರನು ವಿಶ್ವಾಸ ಮೂಡಿಸಿ, ಅವಳ ಗರ್ಭವನ್ನು ಬಗೆದನು. ಯಾರು ತನ್ನ ಸುಖ ಹಾಗೂ ಏಳಿಗೆಯನ್ನು ಬಯಸುತ್ತಾನೋ, ಅವನು ಬೃಹಸ್ಪತಿಯನ್ನೂ ನಂಬಬಾರದು. ನೌಕೆಯಲ್ಲಿರುವ ಸಣ್ಣ ತೂತಿನಿಂದ ಒಳಹೊಗ್ಗುವ ನೀರು ನಿಧಾನವಾಗಿ ತುಂಬಿ ಹೇಗೆ ನೌಕೆಯನ್ನೇ ಮುಳುಗಿಸುತ್ತದೆಯೋ ಹಾಗೆ ಸಣ್ಣ ಅವಕಾಶ ಒದಗಿದರೂ ಶತ್ರುವು ಒಳಹೊಕ್ಕು ನಾಶಮಾಡುವನು. ವಿಶ್ವಾಸಕ್ಕೆ ಯೋಗ್ಯನಲ್ಲದವನನ್ನು ನಂಬಬಾರದು. ವಿಶ್ವಾಸಕ್ಕೆ ಯೋಗ್ಯನಾದವನನ್ನೂ ಕೂಡ ಅತಿಯಾಗಿ ನಂಬಬಾರದು. ನಂಬಿಕೆಯಿಂದುಂಟಾದ ಭಯವು ಆಮೂಲಾಗ್ರವಾಗಿ ನಾಶಮಾಡುತ್ತದೆ. ದುರ್ಬಲನೇ ಆದರೂ ಮತ್ತೊಬ್ಬರಲ್ಲಿ ವಿಶ್ವಾಸವಿಡದವನನ್ನು ಬಲವಂತನೂ ಕೂಡ ಕೊಲ್ಲಲಾಗುವುದಿಲ್ಲ. ಬಲವಂತನೇ ಆದರೂ ಮತ್ತೊಬ್ಬರನ್ನು ನಂಬುವವನನ್ನು ಬಲಹೀನನು ಕೂಡ ಬೇಗನೆ ಕೊಲ್ಲಬಲ್ಲನು. ನೀತಿಶಾಸ್ತ್ರದಲ್ಲಿ ಮೂರು ಕಾರ್ಯಸಾಧನೆಯ ಉಪಾಯಗಳನ್ನು ತಿಳಿಸಿರುವರು – ೧. ವಿಷ್ಣುಗುಪ್ತನ (ಅಂದರೆ ಚಾಣಕ್ಯನ) ಪ್ರಕಾರ ಒಳ್ಳೆಯ ಕೆಲಸಗಳನ್ನು ಮಾಡುವುದು, ೨. ಭೃಗುನಂದನ ಶುಕ್ರಾಚಾರ್ಯನ ಪ್ರಕಾರ ಮಿತ್ರರನ್ನು ಗಳಿಸುವುದು ಮತ್ತು ೩. ಬೃಹಸ್ಪತಿಯ ಪ್ರಕಾರ (ಶತ್ರುವಿನಲ್ಲಿ) ವಿಶ್ವಾಸವಿಡದಿರುವುದು. ಮಹಾಸಂಪತ್ತನ್ನು ಗಳಿಸಿದ ಯಾರು ಶತ್ರುವನ್ನು ಅಥವಾ ತನ್ನಲ್ಲಿ ಅನುರಾಗವಿಲ್ಲದ ಪತ್ನಿಯನ್ನು ನಂಬುವನೋ ಅವನ ಜೀವನವು ಅಂತ್ಯವಾಯಿತೆಂದೇ ಅರ್ಥ.”

ಈ ಮಾತುಗಳನ್ನು ಕೇಳಿದ ಲಘುಪತನಕ ನಿರುತ್ತರನಾಗಿ ಚಿಂತಿಸಿದನು – “ಓಹೋ! ನೀತಿ ವಿಷಯದಲ್ಲಿ ಈತನ ಬುದ್ಧಿಯು ಪ್ರೌಢವಾಗಿದೆ. ಆದ್ದರಿಂದಲೇ ಇವನೊಂದಿಗೆ ಸ್ನೇಹವನ್ನು ಬಯಸುವೆನು”. ನಂತರ ಹಿರಣ್ಯಕನಿಗೆ ಹೇಳಿದನು – “ಏಳು ಹೆಜ್ಜೆಗಳು ಜೊತೆಗೆ ಹಾಕುವುದರಿಂದ ಸ್ನೇಹವು ಉಂಟಾಗುತ್ತದೆ ಎಂದು ತಿಳಿದವರು ಹೇಳುತ್ತಾರೆ. ಆದ್ದರಿಂದ (ನನ್ನೊಂದಿಗೆ ಇಷ್ಟು ಮಾತನಾಡಿದ್ದರಿಂದ) ನೀನು ನನ್ನ ಮಿತ್ರನಾಗಿಹೋದೆ. ಆದ್ದರಿಂದ ನನ್ನ ಮಾತನ್ನು ಕೇಳು. ಒಂದು ವೇಳೆ ನನ್ನನ್ನು ನಂಬದೇ ಹೋದರೆ, ಬಿಲದಲ್ಲಿದ್ದುಕೊಂಡೇ ನನ್ನೊಂದಿಗೆ ನಿತ್ಯವೂ ಗುಣದೋಷಗಳ ಬಗ್ಗೆ ಮಾತುಕತೆ, ಸುಭಾಷಿತ ಗೋಷ್ಠಿ, ಕಥೆ ಮುಂತಾದ ವಾರ್ತಾಲಾಪವನ್ನು ಮಾಡು.”

ಅದನ್ನು ಕೇಳಿ ಹಿರಣ್ಯಕನು “ಲಘುಪತನಕನು ಮಾತಿನಲ್ಲಿ ಚತುರನು ಮತ್ತು ಸತ್ಯವಂತನಂತೆ ಕಾಣುತ್ತಾನೆ. ಆದ್ದರಿಂದ ಇವನೊಂದಿಗೆ ಸ್ನೇಹ ಮಾಡುವುದು ಯೋಗ್ಯವೆಂದು ಕಾಣುತ್ತದೆ.” ಎಂದು ಯೋಚಿಸಿ ಹೀಗೆ ನುಡಿದನು – “ಹಾಗೆಯೇ ಆಗಲಿ, ಆದರೆ ನೀನು ಎಂದಿಗೂ ನನ್ನ ಬಿಲದಲ್ಲಿ ಕಾಲಿಡಕೂಡದು. ವ್ಯಭಿಚಾರಿಯ ಕೈಗಳು ಮೊದಲು ಭಯದಿಂದ ಮೆಲ್ಲಮೆಲ್ಲನೆ ಸ್ತ್ರೀಯನ್ನು ಸ್ಪರ್ಶಿಸಿ ನಂತರ ಸಲಿಗೆ ಬೆಳೆದ ಮೇಲೆ ವೇಗವಾಗಿ ಅವಳ ಮೇಲೆ ಹೇಗೆ ಹರಿದಾಡುತ್ತವೆಯೋ ಹಾಗೆ ಶತ್ರುವು ಮೊದಲು ಮೆಲ್ಲನೆ ಬಂದು ನಂತರ ವೇಗದಿಂದ ಆವರಿಸಿಕೊಂಡು ಬಿಡುವನು.”

ಹಾಗೆಯೇ ಆಗಲೆಂದು ಕಾಗೆಯು ಒಪ್ಪಿತು. ಅಂದಿನಿಂದ ಅವರಿಬ್ಬರೂ ಸುಭಾಷಿತ ಗೋಷ್ಠಿಯ ಸುಖವನ್ನು ಅನುಭವಿಸುತ್ತಿದ್ದರು. ಒಬ್ಬರಿಗೊಬ್ಬರು ಉಪಕಾರವನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದರು. ಲಘುಪತನಕ ಮಾಂಸದ ತುಂಡುಗಳನ್ನು, ಬಲಿಕಾರ್ಯದಲ್ಲಿ ಉಳಿದ ಪದಾರ್ಥಗಳನ್ನು ಹಾಗೂ ಇತರ ಪಾಕವಿಶೇಷಗಳನ್ನು ಪ್ರೀತಿಯಿಂದ ಹಿರಣ್ಯಕನಿಗೆ ತಂದು ಕೊಡುತ್ತಿದ್ದನು. ಹಿರಣ್ಯಕನೂ ಅಕ್ಕಿ ಮುಂತಾದ ಭಕ್ಷ್ಯವಿಶೇಷಗಳನ್ನು ರಾತ್ರಿ ಸಂಗ್ರಹಿಸಿ ಹಗಲು ಬಂದ ಲಘುಪತನಕನಿಗೆ ಕೊಡುತ್ತಿದ್ದನು. ಅಥವಾ ಈ ಪರಸ್ಪರ ಕೊಂಡು-ಕೊಳ್ಳುವ ಕಾರ್ಯವು ಇಬ್ಬರಿಗೂ ಯೋಗ್ಯವಾಗಿಯೇ ಇತ್ತು, ಏಕೆಂದರೆ –

ಪ್ರೀತಿಯ ಆರು ಲಕ್ಷಣಗಳಿವೆ – ಕೊಡುವುದು, ತೆಗೆದುಕೊಳ್ಳುವುದು, ರಹಸ್ಯವನ್ನು ಹೇಳುವುದು ಮತ್ತು ಕೇಳುವುದು, ತಿನ್ನುವುದು ಹಾಗೂ ತಿನ್ನಿಸುವುದು. ಉಪಕಾರವನ್ನು ಮಾಡದೆ ಎಂದೂ ಯಾರಲ್ಲೂ ಪ್ರೀತಿಯು ಮೂಡುವುದಿಲ್ಲ. ದೇವತೆಗಳೂ ಕೂಡ ತಮಗೆ ಪೂಜಾದಾನಗಳು ಸಂದಾಯವಾದರೆ ಮಾತ್ರ ಭಕ್ತರ ಇಷ್ಟಗಳನ್ನು ಪೂರೈಸುತ್ತಾರೆ. ಹಾಲು ಕಡಿಮೆಯಾದ ತಾಯಿಯನ್ನು ಮಗುವು ಹೇಗೆ ಬಿಟ್ಟುಹೋಗುತ್ತದೆಯೋ ಹಾಗೆ ಎಲ್ಲಿಯವರೆಗೆ ಕೊಡುವಂಥದ್ದು ಇರುತ್ತದೆಯೋ ಅಲ್ಲಿಯವರೆಗೆ ಲೋಕದಲ್ಲಿ ಪ್ರೀತಿಯಿರುತ್ತದೆ. ಕ್ಷಣದಲ್ಲಿ ವಿಶ್ವಾಸವನ್ನು ಮೂಡಿಸುವ ದಾನದ ಮಹಿಮೆಯನ್ನು ನೋಡು! ದಾನದ ಪ್ರಭಾವದಿಂದ ವೈರಿಯೂ ತಕ್ಷಣ ಮಿತ್ರನಾಗುತ್ತಾನೆ. ಬುದ್ಧಿಯಿರದ ಪಶುವಿಗೂ ಕೂಡ ದಾನವೆಂದರೆ ತನ್ನ ಮರಿಗಿಂತ ಪ್ರಿಯವಾದುದೆಂದು ಕಾಣುತ್ತದೆ, ಏಕೆಂದರೆ ಕರುವಿದ್ದರೂ ಕೂಡ ಹಸು ತನಗೆ ಎಳ್ಳು ಹಿಂಡಿಯನ್ನು ಕೊಟ್ಟ ಯಜಮಾನನಿಗೆ ದಿನವೂ ನಿಶ್ಚಯವಾಗಿ ಹಾಲನ್ನು ಕೊಡುತ್ತದೆ. ಹೆಚ್ಚೇಕೆ ? ನಿರಂತರ ಪ್ರೀತಿಯಿಂದ ಕೂಡಿದ ಇಲಿ ಹಾಗೂ ಕಾಗೆಯ ಅಸಹಜ ಮೈತ್ರಿಯು ಉಗುರು ಬೆರಳಿನ-ಮಾಂಸಕ್ಕೆ ಹೇಗೆ ಕೂಡಿಕೊಂಡಿರುತ್ತದೆಯೋ ಹಾಗೆ ದುರ್ಭೇದ್ಯವಾಯಿತು. ಕಾಲ ಕಳೆದಂತೆ ಇಲಿಯು ಕಾಗೆಯ ಉಪಕಾರಗಳಿಂದ ಸಂತೋಷಗೊಂಡು, ಕಾಗೆಯಲ್ಲಿ ಸಂಪೂರ್ಣ ವಿಶ್ವಾಸವನ್ನು ಹೊಂದಿ, ಅದರ ರೆಕ್ಕೆಗಳ ಮಧ್ಯೆ  ಪ್ರವೇಶಿಸಿ ಕುಳಿತು ಗೋಷ್ಠಿಯನ್ನು ಮಾಡುತ್ತಿತ್ತು.

ಮತ್ತೊಂದು ದಿನ ಕಾಗೆಯು ಕಣ್ಣಿನಲ್ಲಿ ನೀರು ತುಂಬಿಕೊಂಡು ಇಲಿಯ ಬಳಿ ಬಂದು ಅಳುತ್ತಾ ಹೇಳಿತು – “ಭದ್ರ ಹಿರಣ್ಯಕ, ನನಗೆ ಈಗ ಈ ದೇಶದ ಮೇಲೆ ವೈರಾಗ್ಯ ಮೂಡಿದೆ. ಹಾಗಾಗಿ ಬೇರೆಡೆಗೆ ಹೋಗುವೆನು.”

ಹಿರಣ್ಯಕ – “ಭದ್ರ, ನಿನ್ನ ವೈರಾಗ್ಯಕ್ಕೇನು ಕಾರಣ ?”

ಲಘುಪತನಕ – “ಭದ್ರ, ಕೇಳು. ಈ ದೇಶದಲ್ಲಿ ಭೀಕರ ಅನಾವೃಷ್ಟಿಯಿಂದ ಕ್ಷಾಮ ಉಂಟಾಗಿದೆ. ಕ್ಷಾಮದ ಕಾರಣದಿಂದ ಜನರು ಯಾರೂ ಕೂಡ ಸ್ವಲ್ಪ ಬಲಿಯನ್ನೂ (ಅಕ್ಕಿ ಮುಂತಾದವುಗಳನ್ನು) ನನಗೆ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಮನೆಮನೆಗಳಲ್ಲಿ ಹಸಿದ ಜನರು ಪಕ್ಷಿಗಳ ಬಂಧನಕ್ಕೆ ಬಲೆಯನ್ನು ಸಿದ್ಧಪಡಿಸಿಕೊಂಡಿದ್ದಾರೆ (ಪಕ್ಷಿಮಾಂಸ ಭೋಜನಕ್ಕಾಗಿ). ಆಯುಷ್ಯ ಗಟ್ಟಿಯಿರುವ ನಾನು ಇನ್ನೂ ಬಲೆಗೆ ಬಿದ್ದಿಲ್ಲ. ಇದೇ ವೈರಾಗ್ಯದ ಕಾರಣ. ಹೀಗಾಗಿ ವಿದೇಶಕ್ಕೆ ಹೋಗಬೇಕಲ್ಲಾ ಎಂದು ಅಳುತ್ತಿದ್ದೇನೆ.”

ಹಿರಣ್ಯಕ “ಹಾಗಾದರೆ ಎಲ್ಲಿಗೆ ಹೊರಟಿರುವೆ ?”  ಎಂದು ಕೇಳಿದಾಗ ಲಘುಪತನಕ – “ದಕ್ಷಿಣ ದೇಶದಲ್ಲಿ ಗಹನವಾದ ವನದಲ್ಲಿ ಮಹಾಸರೋವರವಿದೆ. ಅಲ್ಲಿ ನಿನಗಿಂತಲೂ ಹೆಚ್ಚಿನ ಮಿತ್ರನಾದ ಮಂಥರಕನೆಂಬ ಆಮೆ ಇದ್ದಾನೆ. ಅವನು ನನಗೆ ಮೀನಿನ ಮಾಂಸದ ತುಂಡುಗಳನ್ನು ಕೊಡುವನು. ಅದನ್ನು ತಿನ್ನುತ್ತಾ ಅವನೊಂದಿಗೆ ಸುಭಾಷಿತ ಗೋಷ್ಠಿಯ ಸುಖವನ್ನು ಅನುಭವಿಸುತ್ತಾ ಸುಖವಾಗಿ ಕಾಲ ಕಳೆಯುವೆನು. ಇಲ್ಲಿ ಬಲೆಯಲ್ಲಿ ಸಿಕ್ಕಿ ಪಕ್ಷಿಗಳು ನಾಶ ಹೊಂದುವುದನ್ನು ನೋಡಲಾರೆನು. ಅನಾವೃಷ್ಟಿಯಾಗಿ ದೇಶದಲ್ಲಿ ಸಸ್ಯಾದಿಗಳು ನಾಶಹೊಂದಿದಾಗ ದೇಶ ಅಥವಾ ಕುಲದ ನಷ್ಟವಾಯಿತೆಂದು ಯೋಚಿಸದೆ ದೇಶವನ್ನು ಬಿಟ್ಟು ತೆರಳುವವರೇ ಧನ್ಯರು. ಸಾಮರ್ಥ್ಯವಿರುವವನಿಗೆ ಭಾರವೆಂಬುದು ಯಾವುದೂ ಇಲ್ಲ, ಉದ್ಯೋಗಶೀಲನಾದವನಿಗೆ ತಲುಪಲಾಗದ್ದು ಅಥವಾ ಪಡೆಯಲಾಗದ್ದು ಏನೂ ಇಲ್ಲ, ಒಳ್ಳೆಯ ವಿದ್ಯಾವಂತನಿಗೆ ಯಾವ ಸ್ಥಳವೂ ಪರದೇಶವಲ್ಲ ಹಾಗೂ ಹಿತವನ್ನು ನುಡಿಯುವವರಿಗೆ ಅನ್ಯರೆಂಬುವವರೇ ಇಲ್ಲ. ವಿದ್ವತ್ತು ಹಾಗೂ ರಾಜತ್ವ ಎಂದಿಗೂ ಸಮಾನವಲ್ಲ. ರಾಜನು ತನ್ನ ದೇಶದಲ್ಲಿ ಮಾತ್ರ ಪೂಜ್ಯನು ಆದರೆ ವಿದ್ವಾಂಸನು ಎಲ್ಲೆಡೆಯೂ ಪೂಜ್ಯನು.”

ಹಿರಣ್ಯಕ – “ಹಾಗಿದ್ದರೆ ನಿನ್ನೊಂದಿಗೆ ನಾನೂ ಕೂಡ ಹೊರಡುತ್ತೇನೆ, ಏಕೆಂದರೆ ನನಗೂ ಕೂಡ ಮಾಹಾದುಃಖವು ಬಂದೊದಗಿದೆ.”

ಕಾಗೆ – “ಮಿತ್ರ, ನಿನಗೆಂತಹ ದುಃಖ ? ಅದನ್ನು ತಿಳಿಸು”

ಹಿರಣ್ಯಕ – “ಈ ವಿಷಯದಲ್ಲಿ ತುಂಬಾ ಹೇಳುವುದಿದೆ. ಅಲ್ಲಿಗೇ ಹೋಗಿ ಎಲ್ಲವನ್ನೂ ವಿಸ್ತಾರವಾಗಿ ಹೇಳುವೆನು.”

ಕಾಗೆ – “ನಾನಾದರೋ ಆಕಾಶದಲ್ಲಿ ಹೋಗುತ್ತೇನೆ, ನೀನು ಹೇಗೆ ಬರುವೆ ?”

ಹಿರಣ್ಯಕ – “ನನ್ನ ಪ್ರಾಣವನ್ನು ರಕ್ಷಿಸಲು ಇಚ್ಛೆಯಿದ್ದಲ್ಲಿ ನನ್ನನ್ನು ನಿನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಅಲ್ಲಿಗೆ ಹೋಗು, ನನಗೆ ಬೇರೆ ಗತಿಯಿಲ್ಲ.”

ಅದನ್ನು ಕೇಳಿ ಆನಂದದಿಂದ ಕಾಗೆ – “ಹಾಗಿದ್ದರೆ ನಾನೇ ಧನ್ಯನು, ನಿನ್ನೊಂದಿಗೆ ಕೂಡ ಅಲ್ಲಿ ಕಾಲವನ್ನು ಕಳೆಯುವೆನು. ನನಗೆ ಸಂಪಾತ ಮುಂತಾದ ಎಂಟು ರೀತಿಯ ಹಾರುವ ಬಗೆ ತಿಳಿದಿದೆ. ನನ್ನ ಬೆನ್ನನ್ನು ಏರು. ಸುಲಭವಾಗಿ ನಿನ್ನನ್ನು ಆ ಸರೋವರಕ್ಕೆ ತಲುಪಿಸುವೆನು.”

ಹಿರಣ್ಯಕ – “ವಿವಿಧ ರೀತಿಯಲ್ಲಿ ಹಾರುವುದರ ಬಗ್ಗೆ ತಿಳಿಯಲು ಇಚ್ಛಿಸುವೆನು”

ಕಾಗೆ – “ಸಂಪಾತ (ರೆಕ್ಕೆಗಳ ಸಹಾಯವಿಲ್ಲದೆ ಸಮಭಾವದಲ್ಲಿ ಹಾರುವುದು), ವಿಪಾತ (ಅಥವಾ ವಿಪ್ರಪಾತ – ರೆಕ್ಕೆಯನ್ನು ಬಡಿದು ಹಾರುವುದು), ಮಹಾಪಾತ (ಬಹು ಮೇಲಕ್ಕೇರಿ ಇಳಿಯುವುದು), ನಿಪಾತ (ತಲೆಯನ್ನು ಕೆಳಗೆ ಮಾಡಿ ಹಾರುವುದು), ವಕ್ರ (ಡೊಂಕಾಗಿ ಹಾರುವುದು), ತಿರ್ಯಕ್ (ಅಡ್ದರೀತಿಯಲ್ಲಿ ಹಾರುವುದು), ಊರ್ಧ್ವ (ಎತ್ತರದಲ್ಲಿ ಹಾರುವುದು) ಮತ್ತು ಲಘು (ತೀವ್ರಗತಿಯಲ್ಲಿ ಹಾರುವುದು) ಎಂಬ ಎಂಟು ಹಾರುವ ವಿಧಾನಗಳು”

ಅದನ್ನು ಕೇಳಿ ಹಿರಣ್ಯಕನು ತಕ್ಷಣವೇ ಲಘುಪತನಕ ಮೇಲೇರಿ ಕುಳಿತನು. ಲಘುಪತನಕ ಮೆಲ್ಲಮೆಲ್ಲನೆ ಸಂಪಾತ ವಿಧಾನದಲ್ಲಿ ಹಾರಿಕೊಂಡು ಹೋಗಿ ಆ ಸರೋವರವನ್ನು ತಲುಪಿದನು.

ಇಲಿಯನ್ನು ಕುಳಿಸಿಕೊಂಡು ಬರುತ್ತಿರುವ ಕಾಗೆಯನ್ನು ದೂರದಿಂದಲೇ ನೋಡಿದ ದೇಶಕಾಲಗಳ ಜ್ಞಾನವುಳ್ಳ ಮಂಥರಕನು “ಇದೊಂದು ಅಸಮಾನ್ಯವಾದ ಕಾಗೆ” ಎಂದು ತಿಳಿದು ಕೂಡಲೆ ನೀರಿನೊಳಗೆ ಹೋದನು.

ಲಘುಪತನಕ ಹಿರಣ್ಯಕನನ್ನು ತೀರದಲ್ಲಿದ್ದ ಮರದಲ್ಲಿನ ಪೊಟರೆಯಲ್ಲಿ ಇಳಿಸಿ ಮರದ ಕೊಂಬೆಯನ್ನೇರಿ ಜೋರಾಗಿ ಹೇಳಿದನು – “ಎಲೈ ಮಂಥರಕ, ಬಾ, ಬಾ, ನಾನು ಲಘುಪತನಕನೆಂಬ ನಿನ್ನ ಕಾಗೆ ಮಿತ್ರ ಬಹುಕಾಲದ ನಂತರ ನಿನ್ನನ್ನು ನೋಡುವ ಉತ್ಸಹದಿಂದ ಬಂದಿರುವೆನು. ಆದ್ದರಿಂದ ಬಂದು ನನ್ನನ್ನು ಆಲಿಂಗಿಸು. ಕರ್ಪೂರದಿಂದ ಕೂಡಿದ ಚಂದನದಿಂದ ಅಥವಾ ಹಿಮಬಿಂದುಗಳಿಂದ ಏನು ತಾನೇ ಪ್ರಯೋಜನ ? ಅವೆಲ್ಲವೂ ಮಿತ್ರನ ಶರೀರವನ್ನು ಆಲಿಂಗಿಸುವಾಗ ಆಗುವ ತಂಪಿನ ಹದಿನಾರನೆಯ ಅಂಶಕ್ಕೂ ಸಮಾನವಲ್ಲ. ‘ಮಿತ್ರ’ ಎಂಬ ಎರಡಕ್ಷರದ ಅಮೃತವನ್ನು ಯಾರು ಸೃಷ್ಟಿಸಿದರೋ ? ಇದು ಕಷ್ಟಗಳಿಗೆ ಪರಿಹಾರವು ಹಾಗೂ ಶೋಕಸಂತಾಪಗಳಿಗೆ ಔಷಧಿಯಿದ್ದಂತೆ.”

ಆ ಮಾತುಗಳನ್ನು ಕೇಳಿ ಇವನು ನನ್ನ ಮಿತ್ರನೇ ಎಂದು ಸರಿಯಾಗಿ ಅರಿತುಕೊಂಡು ಬೇಗನೆ ನೀರಿನಿಂದ ಹೊರಬಂದು ರೋಮಾಂಚನಗೊಂಡ, ಕಣ್ಣುಗಳಲ್ಲಿ ಆನಂದಬಾಷ್ಪವನ್ನು ತುಂಬಿಕೊಂಡ ಮಂಥರಕನು ಹೇಳಿದನು – “ಬಾ ಮಿತ್ರ, ನನ್ನನ್ನು ಆಲಿಂಗಿಸು. ತುಂಬಾ ಸಮಯದ ನಂತರ ನೋಡಿದ್ದರಿಂದ ನೀನು ಯಾರೆಂದು ಸರಿಯಾಗಿ ತಿಳಿಯಲಿಲ್ಲ. ಆದ್ದರಿಂದ ನೀರಿನ ಒಳಗೆ ಹೋದೆ. ಏಕೆಂದರೆ ಯಾರ ಪರಾಕ್ರಮದ ಅರಿವಿಲ್ಲವೋ, ಯಾರ ಕುಲಗೋತ್ರಾದಿಗಳು ತಿಳಿದಿಲ್ಲವೋ ಅವರೊಂದಿಗೆ ಸೇರಬಾರದೆಂದು ಬೃಹಸ್ಪತಿಯೇ ಹೇಳಿದ್ದಾನೆ.”

ಹೀಗೆ ಹೇಳಲು ಲಘುಪತನಕನು ಮರದಿಂದ ಇಳಿದು ಅವನನ್ನು ಆಲಿಂಗಿಸಿಕೊಂಡನು. ಈ ಸಂದರ್ಭಕ್ಕೆ ಉಚಿತವಾದ ಉಕ್ತಿಯೊಂದಿದೆ – ಶರೀರವನ್ನು ಶುದ್ಧಮಾಡುವ ಅಮೃತದ ಪ್ರವಾಹದಿಂದ ಏನು ತಾನೇ ಪ್ರಯೋಜನ ? ಬಹುಕಾಲದ ನಂತರ ಮಿತ್ರನನ್ನು ಆಲಿಂಗಿಸಿಕೊಳ್ಳುವ ಸುಖವು ಯಾವುದಕ್ಕೂ ಸಮವಲ್ಲ.”

ಹೀಗೆ ಪರಸ್ಪರ ಆಲಿಂಗಿಸಿಕೊಂಡು ಶರೀರವೆಲ್ಲಾ ರೋಮಾಂಚನಗೊಂಡ ಅವರಿಬ್ಬರು ಮರದ ಕೆಳಗೆ ಕುಳಿತುಕೊಂಡು ತಮ್ಮ ತಮ್ಮ ಸಮಾಚಾರವನ್ನು ಹೇಳಿಕೊಂಡರು. ಹಿರಣ್ಯಕನೂ ಕೂಡ ಮಂಥರಕನಿಗೆ ನಮಸ್ಕಾರ ಮಾಡಿ ಲಘುಪತನಕನ ಪಕ್ಕದಲ್ಲಿ ಕುಳಿತುಕೊಂಡನು.

ಅವನನ್ನು ನೋಡಿದ ಮಂಥರಕನು – “ಯಾರೀ ಮೂಷಕನು ? ತಿನ್ನಲು ಯೋಗ್ಯವಾದ ಇವನನ್ನು ಬೆನ್ನ ಮೇಲೆ ಕೂರಿಸಿಕೊಂಡು ಬಂದಿರುವೆ ? ಇದಕ್ಕೆ ದೊಡ್ಡ ಕಾರಣವೇ ಇರಬೇಕು.”

ಲಘುಪತನಕ – “ಇವನು ಹಿರಣ್ಯಕನೆಂಬ ಇಲಿ. ನನ್ನ ಪ್ರಾಣಸಮಾನ ಮಿತ್ರ. ಹೆಚ್ಚೇನು ಹೇಳುವುದು ? ಮಳೆಯಲ್ಲಿ ನೀರಿನ ಧಾರೆಗಳು, ಆಕಾಶದಲ್ಲಿ ನಕ್ಷತ್ರಗಳು ಹಾಗೂ ಭೂಮಿಯಲ್ಲಿ ಧೂಳಿನ ಕಣಗಳು ಹೇಗೆ ಅಸಂಖ್ಯವಾಗಿರುತ್ತವೆಯೋ ಹಾಗೆ ಈ ಮಹಾತ್ಮನಲ್ಲಿ ಸಂಖ್ಯೆಯ ಮಿತಿಗೆ ಬಾರದಷ್ಟು ಗುಣಗಳಿವೆ. ಆದರೆ ಈಗ ಇವನು ವೈರಾಗ್ಯವನ್ನು ಹೊಂದಿ ನಿನ್ನಲ್ಲಿಗೆ ಬಂದಿರುವನು.”

ಮಂಥರಕ – “ಇವನ ವೈರಾಗ್ಯಕ್ಕೆ ಏನು ಕಾರಣ ?”

ಕಾಗೆ – “ಆಗಲೇ ಅದನ್ನು ಕೇಳಿದೆ, ಆದರೆ ತುಂಬಾ ಹೇಳುವುದಿದೆ ಆದ್ದರಿಂದ ಇಲ್ಲಿಗೆ ಬಂದು ಹೇಳುವೆನೆಂದು ತಿಳಿಸಿರುವನು. ಹಾಗೆಯೇ ಆಗಲೆಂದು ನಾನು ಏನನ್ನೂ ಹೇಳಲಿಲ್ಲ. ಎಲೈ ಭದ್ರ ಹಿರಣ್ಯಕ, ಈಗ ನಮ್ಮಿಬ್ಬರಿಗೂ ನಿನ್ನ ವೈರಾಗ್ಯದ ಕಾರಣವನ್ನು ತಿಳಿಸು”.

ಅದಕ್ಕೆ ಉತ್ತರವಾಗಿ ಹಿರಣ್ಯಕನು ಹಿರಣ್ಯಕ – ತಾಮ್ರಚೂಡನ ಕಥೆಯನ್ನು ಹೇಳಿದನು.

ಹಿರಣ್ಯಕ –  “ಹೀಗೆ ಎಲ್ಲಾ ಸುಖದುಃಖವನ್ನು ಅನುಭವಿಸಿ ಅತ್ಯಂತ ವಿಷಾದವುಳ್ಳವನಾಗಿ ಈ ಲಘುಪತನಕ ಕಾಗೆ ಜೊತೆ ನಿನ್ನ (ಮಂಥರಕ ಆಮೆ) ಬಳಿಗೆ ಬಂದಿರುವೆನು. ಇದೇ ನನ್ನ ವೈರಾಗ್ಯಕ್ಕೆ ಕಾರಣ.”

ಮಂಥರಕ ಹೇಳಿದನು – “ಭದ್ರ, ನಿಸ್ಸಂದೇಹವಾಗಿ ಇವನು (ಲಘುಪತನಕ) ನಿನ್ನ ಮಿತ್ರನೇ ಸರಿ. ಏಕೆಂದರೆ ಹಸಿದಿದ್ದರೂ ಮತ್ತು ನೀನು ಆತನ ಸಹಜ ಶತ್ರುವಾಗಿ ಆಹಾರದ ಸ್ಥಾನದಲ್ಲಿದ್ದರೂ ತನ್ನ ಬೆನ್ನ ಮೇಲೆ ಕೂರಿಸಿಕೊಂಡು, ಮಾರ್ಗದಲ್ಲೆಲ್ಲೂ ತಿನ್ನದೆ ಕರೆದುಕೊಂಡು ಬಂದಿದ್ದಾನೆ. ದುಡ್ಡಿನ ವಿಷಯದಲ್ಲಿ ಯಾರ ಮನಸ್ಸು ಎಂದೂ ವಿಕಾರಗೊಳ್ಳುವುದಿಲ್ಲವೋ, ಎಂದೆಂದಿಗೂ ಮಿತ್ರನಾಗೇ ಉಳಿಯುವ ಉತ್ತಮನನ್ನು ಮಿತ್ರನನ್ನಾಗಿ ಮಾಡಿಕೊಳ್ಳಬೇಕು. ಪಂಡಿತರು ಹೋಮಾಗ್ನಿಯು ಹೋಮಕಾರ್ಯಕ್ಕೆ ಸೂಕ್ತವಾಗಿದೆಯೇ ಎಂದು ಹೇಗೆ ವಿಶೇಷವಾಗಿ ಪರೀಕ್ಷಿಸುತ್ತಾರೋ ಹಾಗೆ ಬುದ್ಧಿವಂತರು ಮೇಲೆ ಹೇಳಿದ ಲಕ್ಷಣಗಳು ಮಿತ್ರನಲ್ಲಿ ಇದೆಯೇ ಎಂದು ಪರೀಕ್ಷಿಸಬೇಕು. ಆಪತ್ಕಾಲದಲ್ಲಿ ಮಿತ್ರನಾಗಿ ಉಳಿಯುವವನೇ ನಿಜವಾದ ಮಿತ್ರ. ಏಳಿಗೆಯ ಸಮಯದಲ್ಲಿ ದುರ್ಜನರೂ ಕೂಡ ಮಿತ್ರರಾಗುತ್ತಾರೆ. ಆದ್ದರಿಂದ ನನಗೂ ಕೂಡ ಇಂದು ಇವನ ವಿಷಯದಲ್ಲಿ ವಿಶ್ವಾಸ ಮೂಡಿದೆ. ಏಕೆಂದರೆ ಮಾಂಸಾಹಾರಿಯಾದ ಕಾಗೆಗಳೊಂದಿಗೆ ಜಲಚರ ಪ್ರಾಣಿಗಳ ಮೈತ್ರಿ ನೀತಿಗೆ ವಿರುದ್ಧವಾಗಿದೆ. ಯಾರು ಯಾರಿಗೂ ಯಾವಾಗಲೂ ಮಿತ್ರನಾಗೇ ಉಳಿಯುವುದಿಲ್ಲ ಅಥವಾ ಶತ್ರುವಾಗೇ ಇರುವುದಿಲ್ಲ. ಮಿತ್ರನ ಕಾರಣದಿಂದ ಕಾರ್ಯವು ನಾಶವಾದಲ್ಲಿ ಆಗ ಮಿತ್ರನೇ ಶತ್ರುವಾಗಿಬಿಡುವುದನ್ನು ಕಾಣುತ್ತೇವೆ. ಆದ್ದರಿಂದ ನಿನಗೆ ಸ್ವಾಗತ. ಈ ಸರೋವರದ ತೀರವನ್ನು ನಿನ್ನದೇ ಮನೆಯೆಂದುಕೊಂಡು ಇರು.

ಹಣದ ನಷ್ಟ ಮತ್ತು ವಿದೇಶ ವಾಸದ ವಿಷಯದಲ್ಲಿ ದುಃಖಿಸಬೇಡ. ಏಕೆಂದರೆ ಮೇಘದ ನೆರಳು, ದುರ್ಜನರ ಪ್ರೀತಿ, ಬೆಂದ ಅನ್ನ, ಸ್ತ್ರೀಯರು, ಯೌವನ ಮತ್ತು ಧನ – ಇವೆಲ್ಲಾ ಸ್ವಲ್ಪ ಕಾಲ ಮಾತ್ರ ಅನುಭವಿಸಲು ಬರುತ್ತವೆ. ಆದ್ದರಿಂದಲೇ ವಿವೇಕಿಗಳು ಹಣದ ಅಭಿಲಾಷೆಯನ್ನು ಮಾಡುವುದಿಲ್ಲ. ಸರಿಯಾಗಿ ಕೂಡಿಡಲ್ಪಟ್ಟ, ಜೀವಕ್ಕಿಂತ ಹೆಚ್ಚಾಗಿ ರಕ್ಷಿಸಲ್ಪಟ್ಟ ಮತ್ತು ತನ್ನ ಸ್ವಂತಕ್ಕಾಗಿಯೂ ಕೂಡ ಉಪಯೋಗಿಸಲ್ಪಡದ ಕ್ರೂರವಾದ ಹಣವು, ಮನುಷ್ಯನು ಯಮನ ಬಳಿಗೆ ಹೋಗುವಾಗ ಐದು ಹೆಜ್ಜೆ ಕೂಡ ಜೊತೆಗೆ ಬರುವುದಿಲ್ಲ. ಆಮಿಷವನ್ನು ನೀರಿನಲ್ಲಿ ಮೀನುಗಳು ಹೇಗೆ ಭಕ್ಷಿಸುತ್ತವೆಯೋ, ಭೂವಿಯಲ್ಲಿ ಪ್ರಾಣಿಗಳು ಹೇಗೆ ಭಕ್ಷಿಸುತ್ತವೆಯೋ ಮತ್ತು ಆಕಾಶದಲ್ಲಿ ಪಕ್ಷಿಗಳು ಹೇಗೆ ಭಕ್ಷಿಸುತ್ತವೆಯೋ ಹಾಗೆ ಹಣವಂತನನ್ನು ಎಲ್ಲೆಡೆಯೂ ಪೀಡಿಸುತ್ತಾರೆ. ನಿರ್ದೋಷಿಯಾದರೂ ಧನವಂತನನ್ನು ರಾಜನು ದೋಷಿಯನ್ನಾಗಿ ಮಾಡುತ್ತಾನೆ (ಆತನ ಹಣವನ್ನು ಪಡೆಯುವುದಕ್ಕಾಗಿ). ದರಿದ್ರನು ದೋಷಿಯಾದರೂ ಅವನು ಎಲ್ಲೆಡೆ ತೊಂದರೆಗಳಿಂದ ತಪ್ಪಿಸಿಕೊಳ್ಳುತ್ತಾನೆ. ಧನಸಂಪಾದನೆ ಮಾಡುವುದರಲ್ಲಿ ದುಃಖ ಮತ್ತು ಸಂಪಾದನೆ ಮಾಡಿದ್ದನ್ನು ರಕ್ಷಿಸಿಕೊಳ್ಳುವುದರಲ್ಲಿಯೂ ದುಃಖ. ಸಂಪಾದನೆ ಹಾಗೂ ವ್ಯಯ ಎರಡು ಸಮಯದಲ್ಲೂ ದುಃಖವುಂಟಾಗುತ್ತದೆ. ಹೀಗೆ ಕಷ್ಟವನ್ನೇ ತಂದೊಡ್ಡುವ ಹಣದ ಬಗ್ಗೆ ಧಿಕ್ಕಾರವಿರಲಿ. ಮೂಢ ಮನುಷ್ಯನು ಹಣವನ್ನು ಗಳಿಸಲು ಪಡುವ ಕಷ್ಟದಲ್ಲಿ ನೂರನೆಯ ಭಾಗದಷ್ಟು ಕಷ್ಟವನ್ನು ಮೋಕ್ಷವನ್ನು ಪಡೆಯಲು ಪಟ್ಟರೆ, ಆತನಿಗೆ ಮೋಕ್ಷವು ಪ್ರಾಪ್ತವಾಗುತ್ತದೆ.

ಅಲ್ಲದೆ ವಿದೇಶವಾಸದಿಂದಲೂ ಕೂಡ ನೀನು ವೈರಾಗ್ಯವನ್ನು ತಂದುಕೊಳ್ಳಬಾರದು. ಏಕೆಂದರೆ ಧೈರ್ಯವಂತನಾದವನಿಗೆ ಸ್ವದೇಶ ಎಂದರೆ ಯಾವುದು ಮತ್ತು ವಿದೇಶವೆಂದರೆ ಯಾವುದು ? (ಅಂದರೆ ಎಲ್ಲ ಒಂದೇ ಎಂಬರ್ಥ) ಅವನು ತಾನು ಇರುವ ದೇಶವನ್ನು ತನ್ನ ಭುಜಗಳ ಪ್ರತಾಪದಿಂದ ತನ್ನದಾಗಿ ಮಾಡಿಕೊಳ್ಳುವನು. ಸಿಂಹವು ಯಾವ ಅರಣ್ಯವನ್ನು ಪ್ರವೇಶಿಸಿದರೂ ತನ್ನ ಹಲ್ಲು, ಉಗುರು ಹಾಗು ಬಾಲದ ಪ್ರಹಾರದಿಂದ ಅಲ್ಲಿರುವ ಆನೆಗಳನ್ನು ಕೊಂದು ಅವುಗಳ ರಕ್ತದಿಂದ ತನ್ನ ಹಸಿವನ್ನು ನೀಗಿಸಿಕೊಳ್ಳುತ್ತದೆ. ಹಣವಿಲ್ಲದವನು ಬೇರೆ ದೇಶಕ್ಕೆ ಹೋದರೂ ಬುದ್ಧಿವಂತನಾಗಿದ್ದರೆ ಸ್ವಲ್ಪವೂ ತೊಂದರೆಗೊಳಗಾಗುವುದಿಲ್ಲ. ಸಾಮರ್ಥ್ಯವಿರುವವನಿಗೆ ಭಾರವೆಂಬುದು ಯಾವುದೂ ಇಲ್ಲ, ಉದ್ಯೋಗಶೀಲನಾದವನಿಗೆ ತಲುಪಲಾಗದ್ದು ಅಥವಾ ಪಡೆಯಲಾಗದ್ದು ಏನೂ ಇಲ್ಲ, ಒಳ್ಳೆಯ ವಿದ್ಯಾವಂತನಿಗೆ ಯಾವ ಸ್ಥಳವೂ ಪರದೇಶವಲ್ಲ ಹಾಗೂ ಹಿತವನ್ನು ನುಡಿಯುವವರಿಗೆ ಅನ್ಯರೆಂಬುವವರೇ ಇಲ್ಲ. ನೀನು ಬುದ್ಧಿವಂತನು, ಸಾಮಾನ್ಯ ಜನರಂತೆ ಅಲ್ಲ. ಉತ್ಸ್ಸಾಹಪೂರ್ಣನಾದ, ತಡಮಾಡದೆ ಕೆಲಸಮಾಡುವವನ, ಕಾರ್ಯವಿಧಾನವನ್ನು ಬಲ್ಲವನ, ವ್ಯಸನಗಳಲ್ಲಿ ಆಸಕ್ತಿಯಿಲ್ಲದ, ಶೂರನ, ಕೃತಜ್ಞನ, ಸ್ಥಿರವಾದ ಮೈತ್ರಿಯನ್ನು ಮಾಡುವವನ ಮನೆಯಲ್ಲಿ ವಾಸಿಸಲು ಲಕ್ಷ್ಮೀಯು ಸ್ವಯಂ ಹುಡುಕಿಕೊಂಡು ಬರುತ್ತಾಳೆ.

ಅಲ್ಲದೆ ಗಳಿಸಿದ ಹಣವು ಕರ್ಮದ ಫಲದಿಂದ ಕಳೆದುಹೋಗುತ್ತದೆ. ಇಲ್ಲಿಯವರೆಗೆ ಆ ಹಣವು ನಿನ್ನದಾಗಿತ್ತು. ನಮ್ಮದಲ್ಲದ್ದನ್ನು ಒಂದು ಗಳಿಗೆಯೂ ನಾವು ಅನುಭವಿಸಲು ಆಗದು. ತಾನಾಗಿಯೇ ಬಂದಿದ್ದರೂ ಕೂಡ ವಿಧಿಯ ಕಾರಣದಿಂದ ಕಳೆದುಹೋಗುತ್ತದೆ. ಧನವನ್ನು ಸಂಪಾದಿಸಿದರೂ ಮನುಷ್ಯನು ಅದನ್ನು ಅನುಭವಿಸಲು ಸಾಧ್ಯವಾಗುವುದಿಲ್ಲ. ಮೂಢ ಸೋಮಿಲಕನು ಮಾಹಾರಣ್ಯವನ್ನು ತಲುಪಿ ಸಂಪಾದಿಸಿದ ಹಣವನ್ನು ಕಳೆದುಕೊಂಡನು.”

ಹಿರಣ್ಯಕನು ಅದು ಹೇಗೆಂದು ಕೇಳಲು ಮಂಥರಕನು ಮಂದಭಾಗ್ಯ ಸೋಮಿಲಕನ ಕಥೆಯನ್ನು ಹೇಳಿದನು.

ಹೀಗೆ ಕಥೆಯನ್ನು ಮುಗಿಸಿದ ಮಂಥರಕನು – “ಭದ್ರ ಹಿರಣ್ಯಕನೇ, ಇದನ್ನು ತಿಳಿದ ನೀನು ಧನದ ವಿಷಯದಲ್ಲಿ ದುಃಖವನ್ನು ಮಾಡಬೇಡ. ಇದ್ದೂ ಉಪಯೋಗಕ್ಕೆ ಬರದ ಹಣವನ್ನು ಇಲ್ಲವೆಂದೇ ತಿಳಿಯತಕ್ಕದ್ದು. ಮನೆಯ ನೆಲದಲ್ಲಿ ಹುಗಿದಿಟ್ಟ ಧನದಿಂದ ಧನಿಕನೆಂದೆನಿಸಿದರೆ, ಆ ಹಣದಿಂದ ನಾವೆಲ್ಲರೂ ಕೂಡ ಧನಿಕರಾದಂತೆಯೇ ಅಲ್ಲವೇ ? (ಭೋಗಕ್ಕೆ ಸಲ್ಲದ ಹಣಕ್ಕೆ ನಮ್ಮದು ಅಥವಾ ಪರರದು ಎಂಬ ಭೇದವಿಲ್ಲ ಎಂಬ ಭಾವ) ತನ್ನೊಳಗಿರುವ ಹೆಚ್ಚಿನ ನೀರನ್ನು ಹೊರಗೆ ಹರಿಸುವುದರಿಂದ ಹೇಗೆ ಕೊಳವು ರಕ್ಷಣೆಗೊಳ್ಳುತ್ತದೆಯೋ ಹಾಗೆ ಸಂಪಾದಿಸಿದ ಹಣವು ದಾನ ಮಾಡುವುದರಿಂದ ರಕ್ಷಿಸಲ್ಪಡುತ್ತದೆ.  ಧನವನ್ನು ಕೂಡಿಡದೆ ದಾನ ಮಾಡಬೇಕು ಮತ್ತು ಅನುಭವಿಸಬೇಕು, ಇಲ್ಲದಿದ್ದರೆ ಜೇನುನೊಣಗಳು ಜೇನನ್ನು ಕೂಡಿಟ್ಟು ಕೊನೆಯಲ್ಲಿ ಕಳೆದುಕೊಂಡಂತೆ ಆಗುತ್ತದೆ. ಹಣಕ್ಕೆ ದಾನ, ಭೋಗ ಮತ್ತು ನಾಶ ಎಂಬ ಮೂರು ರೀತಿಯ ಗತಿಗಳಿವೆ. ಯಾರು ದಾನ ಮಾಡುವುದಿಲ್ಲವೋ ಮತ್ತು ಧನವನ್ನು ಉಪಯೋಗಿಸುವುದೂ ಇಲ್ಲವೋ ಅವರ ಹಣಕ್ಕೆ ಮೂರನೆಯ ಗತಿಯು ಪ್ರಾಪ್ತವಾಗುತ್ತದೆ, ಅಂದರೆ ನಾಶವಾಗುತ್ತದೆ.

ಆದ್ದರಿಂದ ವಿವಕಿಗಳು ಕೇವಲ ಕೂಡಿಡುವುದಕ್ಕೆ ಧನಾರ್ಜನೆಯನ್ನು ಮಾಡಬಾರದು, ಅದು ದುಃಖಕ್ಕೆ ಕಾರಣವಾಗುತ್ತದೆ. ಧನಾದಿ ಭೋಗ್ಯವಸ್ತುಗಳಿಂದ ಸುಖವನ್ನು ಪಡೆಯಲು ಬಯಸುವವರು, ಬಿಸಿಲಿನಿಂದ ಬಳಲಿ ತಂಪಿಗಾಗಿ ಬೆಂಕಿಯನ್ನು ಅವಲಂಭಿಸಿದಂತೆ ಮೂರ್ಖರು. ಹಾವುಗಳು ಗಾಳಿಯನ್ನು ಆಹರವನ್ನಾಗಿ ಕುಡಿಯುತ್ತವೆ ಆದರೆ ಅವುಗಳು ದುರ್ಬಲರಲ್ಲ. ಆನೆಗಳು ಒಣಗಿದ ಹುಲ್ಲನ್ನು ತಿಂದು ಬಲಿಷ್ಠವಾಗುತ್ತವೆ. ಗೆಡ್ಡೆಗೆಣಸುಗಳನ್ನು ತಿಂದು ಮುನಿಶ್ರೇಷ್ಠರು ಕಾಲವನ್ನು ಕಳೆಯುತ್ತಾರೆ. ಆದ್ದರಿಂದ ಸಂತೋಷವೇ ಮನುಷ್ಯನ ದೊಡ್ಡ ಸಂಪತ್ತು. ಸಂತೋಷವೆಂಬ ಅಮೃತಪಾನವನ್ನು ಮಾಡಿದ ಶಾಂತಚಿತ್ತರಿಗೆ ಯಾವ ಸುಖವು ದೊರಕುವುದೋ ಅದು ಧನಲೋಭದಿಂದ ಅಲ್ಲಿಂದಿಲ್ಲಿಗೆ ಓಡಾಡುತ್ತಿರುವವರಿಗೆ ಹೇಗೆ ತಾನೆ ದೊರಕುವುದು ? ಅಮೃತದಂತಿರುವ ಸಂತೋಷವನ್ನು ಕುಡಿಯುತ್ತಿರುವವರಿಗೆ ಪರಮಾನಂದವು ಪ್ರಾಪ್ತವಾಗುತ್ತದೆ. ಅಸಂತೋಷದಿಂದಿರುವ ಪುರುಷರು ನಿರಂತರವಾಗಿ ದುಃಖವನ್ನು ಅನುಭವಿಸುತ್ತಾರೆ. ಮೋಡಗಳು ಸೂರ್ಯನನ್ನು ಮುಚ್ಚಿದ್ದಾಗ ಹೇಗೆ ಸೂರ್ಯನ ಕಿರಣಗಳೆಲ್ಲವೂ ಮುಚ್ಚಿಹೋಗುತ್ತವೆಯೋ ಹಾಗೆ ಮನಸ್ಸನ್ನು ನಿಯಂತ್ರಿಸಿದರೆ ಎಲ್ಲಾ ಇಂದ್ರಿಯಗಳೂ ನಿಯಂತ್ರಣಕ್ಕೆ ಬರುತ್ತವೆ. ಆಸೆಗಳನ್ನು ದೂರ ಮಾಡುವುದೇ ಆರೋಗ್ಯಕರ/ಸುಖಕರ ಎಂದು ಶಾಂತಚಿತ್ತರಾದ ಮಹರ್ಷಿಗಳು ಹೇಳಿದ್ದಾರೆ. ಅಗ್ನಿಯ ಸೇವನೆಯಿಂದ ಹೇಗೆ ಬಾಯಾರಿಕೆಯು ನೀಗುವುದಿಲ್ಲವೋ ಹಾಗೆ ಧನದಿಂದ ಆಸೆಯು ನೀಗುವುದಿಲ್ಲ. ಹಣಕ್ಕಾಗಿ ಜನರು ಏನನ್ನು ತಾನೆ ಮಾಡುವುದಿಲ್ಲ ? ಅನಿಂದ್ಯರನ್ನೂ ನಿಂದಿಸುತ್ತಾರೆ ಮತ್ತು ಅಯೋಗ್ಯರನ್ನೂ ಹೆಚ್ಚಾಗಿ ಸ್ತುತಿಸುತ್ತಾರೆ. ಧರ್ಮಾಚರಣೆಗಾಗಿ ಧನವನ್ನು ಅಪೇಕ್ಷಿಸುವುದರ ಬದಲು ಹಣವನ್ನು ಅಪೇಕ್ಸಿಸದಿರುವುದೇ ಮೇಲು ಏಕೆಂದರೆ ಕೆಸರನ್ನು ಮುಟ್ಟಿ ಕೈ ತೊಳೆದುಕೊಳ್ಳುವುದಕ್ಕಿಂತ ದೂರದಿಂದಲೇ ಕೆಸರನ್ನು ಮುಟ್ಟದಿರುವುದೇ ಲೇಸು. ಜಗತ್ತಿನಲ್ಲಿ ದಾನಕ್ಕೆ ಸಮನಾದ ನಿಧಿಯಿಲ್ಲ, ಲೋಭಕ್ಕೆ ಸಮನಾದ ವೈರಿಯಿಲ್ಲ, ಶೀಲಕ್ಕೆ ಸಮನಾದ ಆಭರಣವಿಲ್ಲ ಮತ್ತು ಸಂತೋಷಕ್ಕೆ ಸಮನಾದ ಧನವಿಲ್ಲ. ವಯಸ್ಸಾದ ಎತ್ತನ್ನು ಹೊಂದಿದ ಶಿವನು ಪರಮೇಶ್ವರನೆಂದು ಕರೆಸಿಕೊಳ್ಳುತ್ತಾನೆ. ಏಕೆಂದರೆ ಧನವಿಲ್ಲದಿರುವುದು ದಾರಿದ್ರ್ಯದ ಪರಮ ಗತಿಯಲ್ಲ, ಬದಲಿಗೆ ಮಾನವಿಲ್ಲದಿರುವು ದಾರಿದ್ರ್ಯದ ಪರಮ ಗತಿ. ಉತ್ತಮ ಪುರುಷನು ಬಿದ್ದರೆ ಚೆಂಡಿನಂತೆ ಮತ್ತೆ ಮೇಲೇರುತ್ತಾನೆ. ಆದರೆ ಮೂರ್ಖನು ಬಿದ್ದರೆ ಮಣ್ಣಿನ ಹೆಂಟೆಯಂತೆ ಬೀಳುತ್ತಾನೆ. ಆದ್ದರಿಂದ ಇದೆಲ್ಲವನ್ನೂ ತಿಳಿದು ನೀನು ಸಂತೋಷಗೊಳ್ಳಬೇಕು.”

ಮಂಥರಕನ ಮಾತನ್ನು ಕೇಳಿದ ಲಘುಪತನಕನು ಹೇಳಿದನು – “ಮಂಥರಕನು ಹೇಳುತ್ತಿರುವುದನ್ನು ನೀನು ಮನಸ್ಸಿನಲ್ಲಿಡಬೇಕು. ಯಾವಾಗಲೂ ಪ್ರಿಯವಾದುದನ್ನು ನುಡಿಯುವವರು ತುಂಬಾ ಜನ ಸಿಗುತ್ತಾರೆ ಆದರೆ ಅಪ್ರಿಯವಾದ ಮತ್ತು ಹಿತವಾದ ಮಾತನ್ನಾಡುವವರು ಸಿಗುವುದು ಕಷ್ಟ. ಮನುಷ್ಯರಲ್ಲಿ ಅಪ್ರಿಯವಾದ ಮತ್ತು ಹಿತವಾದ ಮಾತನ್ನು ಆಡುವವರೇ ನಿಜವಾದ ಮಿತ್ರರು, ಉಳಿದವರೆಲ್ಲರೂ ಕೇವಲ ಹೆಸರಿಗಷ್ಟೇ ಮಿತ್ರರು.”

ಹೀಗೆ ಅವರೆಲ್ಲರೂ ಮಾತನಾಡುತ್ತಿರಲು ಬೇಟೆಗಾರನಿಂದ ಹೆದರಿದ ಚಿತ್ರಾಂಗನೆಂಬ ಜಿಂಕೆಯೊಂದು ಅದೇ ಸರೋವರವನ್ನು ಪ್ರವೇಶಿಸಿತು. ಅದು ರಭಸದಿಂದ ಬಂದದ್ದನ್ನು ಕಂಡು ಲಘುಪತನಕನು ಮರವನ್ನೇರಿ ಕುಳಿತನು. ಹಿರಣ್ಯಕನು ಜಂಬುಹುಲ್ಲಿನ ಗುಂಪನ್ನು ಹೊಕ್ಕನು. ಮಂಥರಕನು ನೀರಿನೊಳಗೆ ಹೋದನು.

ಆಗ ಲಘುಪತನಕನು ಜಿಂಕೆಯನ್ನು ಸರಿಯಾಗಿ ಪರೀಕ್ಷಿಸಿ ಮಂಥರಕನಿಗೆ ಹೇಳಿದನು – “ಬಾ ಮಿತ್ರ ಮಂಥರಕ, ಈ ಜಿಂಕೆಯು ಬಾಯಾರಿಕೆಯಿಂದ ಸರೋವರವನ್ನು ಪ್ರವೇಶಿಸಿದೆ, ಮನುಷ್ಯನ ಭಯದಿಂದಲ್ಲ.”

ಅದನ್ನು ಕೇಳಿದ ಮಂಥರಕನು ದೇಶಕಾಲಕ್ಕನುಗುಣವಾದ ಮಾತನ್ನು ಹೇಳಿದನು – “ಎಲೈ ಲಘುಪತನಕ, ದೀರ್ಘವಾಗಿ ಉಸಿರಾಡುತ್ತಾ, ಭಯದಿಂದ ಹಿಂದೆ ನೋಡುತ್ತಿರುವ ಇದನ್ನು ನೋಡಿದರೆ ಬಾಯಾರಿಕೆಯಿಂದ ಬಂದವನಂತೆ ಕಾಣುವುದಿಲ್ಲ. ಬದಲಾಗಿ ಬೇಟೆಗಾರನಿಂದ ಹೆದರಿ ಬಂದಂತಿದೆ. ಆದ್ದರಿಂದ ಇವನ ಹಿಂದೆ ಬೇಟೆಗಾರನು ಬರುತ್ತಿರುವನೇ ಇಲ್ಲವೇ ಎಂದು ತಿಳಿದುಕೋ. ಹೆದರಿದ ಮನುಷ್ಯನು ಮತ್ತೆ ಮತ್ತೆ ಜೋರಾಗಿ ಉಸಿರಾಡುತ್ತಾನೆ ಮತ್ತು ಎಲ್ಲಾ ದಿಕ್ಕುಗಳನ್ನೂ ನೋಡುತ್ತಾನೆ. ಆದರೆ ಎಲ್ಲಿಯೂ ಶಾಂತಿಯನ್ನು ಪಡೆಯುವುದಿಲ್ಲ.”

ಅದನು ಕೇಳಿ ಚಿತ್ರಾಂಗನು ಹೇಳಿದನು – “ಎಲೈ ಮಂಥರಕ, ನನ್ನ ಭಯದ ಕಾರಣವನ್ನು ನೀನು ಸರಿಯಾಗಿಯೇ ಅರಿತುಕೊಂಡೆ. ನಾನು ಬೇಟೆಗಾರನ ಬಾಣದಿಂದ ತಪ್ಪಿಸಿಕೊಂಡು ಕಷ್ಟದಿಂದ ಇಲ್ಲಿಗೆ ಬಂದಿರುವೆ. ನನ್ನ ಗುಂಪು ಆ ಬೇಟೆಗಾರರಿಂದ ಕೊಲ್ಲಲ್ಪಡುತ್ತದೆ. ಆದ್ದರಿಂದ ಶರಣಾಗತನಾಗಿ ಬಂದ ನನಗೆ ಬೇಟೆಗಾರನು ಬರಲಾರದ ಸ್ಥಳವಿದ್ದರೆ ತೋರಿಸು.”

ಅದನ್ನು ಕೇಳಿ ಮಂಥರಕನು ಹೇಳಿದನು – “ಎಲೈ ಚಿತ್ರಾಂಗ, ನೀತಿ ಶಾಸ್ತ್ರವನ್ನು ಕೇಳು – ಶತ್ರುದರ್ಶನವಾದಾಗ ಮುಕ್ತಿಗಾಗಿ ಎರಡು ಮಾರ್ಗಗಳು ಹೇಳಲ್ಪಟ್ಟಿವೆ. ಒಂದು ಹಸ್ತಗಳ ಚಲನೆ (ಅಂದರೆ ಯುದ್ಧ) ಮತ್ತು ಎರಡನೆಯದು ಪಾದಗಳ ವೇಗ (ಅಂದರೆ ಪಲಾಯನ). ಆದ್ದರಿಂದ ಬೇಟೆಗಾರರು ಇಲ್ಲಿಗೆ ಬರುವ ಮೊದಲೇ ಘನಾರಣ್ಯಕ್ಕೆ ಹೋಗು.”

ಈ ಮಧ್ಯೆ ಲಘುಪತನಕನು ಬೇಗನೆ ಬಂದು ಹೇಳಿದನು – “ಆ ಬೇಟೆಗಾರರು ತುಂಬಾ ಮಾಂಸವನ್ನು ಹೊತ್ತುಕೊಂಡು ತಮ್ಮ ಮನೆಯ ಕಡೆಗೆ ನಡೆದರು. ಆದ್ದರಿಂದ ಚಿತ್ರಾಂಗನೇ, ನೀನು ನಿರ್ಭಯನಾಗಿ ಕಾಡಿನಿಂದ ಹೊರಗೆ ಬಾ”

ನಂತರ ಆ ನಾಲ್ವರೂ ಮಿತ್ರಭಾವದಿಂದ ಸರೋವರದ ಬಳಿ ವೃಕ್ಷದ ನೆರಳಿನಲ್ಲಿ ಸುಭಷಿತ ಗೋಷ್ಠಿಯನ್ನು ಅನುಭವಿಸುತ್ತಾ ಸುಖದಿಂದ ಕಾಲ ಕಳೆಯುತ್ತಿದ್ದರು. ಸುಭಾಷಿತರಸಾಸ್ವಾದನೆಯಿಂದುಂಟಾದ ರೋಮಾಂಚನವೆಂಬ ಕವಚವನ್ನು ಧರಿಸಿರುವವರು ಸ್ತ್ರೀಯರ ಸಂಗಮವಿಲ್ಲದೆಯೂ ಸುಖದಿಂದ ಇರುವರು. ಸುಭಾಷಿತವೆಂಬ ದ್ರವ್ಯದ ಸಂಗ್ರಹವನ್ನು ಮಾಡದವನು ಪರಸ್ವರ ವಾರ್ತಾಲಾಪವೆಂಬ ಯಜ್ಞಕ್ಕೆ ಏನೂ ತಾನೆ ದಕ್ಷಿಣೆಯನ್ನು ಕೊಡಬಲ್ಲನು ? ಯಾರು ಒಮ್ಮೆ ನುಡಿದ ಸೂಕ್ತಿಯನ್ನು ನೆನಪಿನಲ್ಲಿಡುವುದಿಲ್ಲವೋ, ಸ್ವಯಂ ತಾನೇ ಸುಭಾಷಿತವನ್ನು ರಚಿಸಲಾರನೋ, ಯಾರ ಸಂಗ್ರಹದಲ್ಲಿ ಸುಭಾಷಿತಗಳಿಲ್ಲವೋ ಅಂತವನ ಮಾತು ಒಳ್ಳೆಯ ನುಡಿಗಳಾಗಲು ಸಾಧ್ಯವೇ ? (ಅಂದರೆ ಸುಭಾಷಿತಗಳನ್ನು ತಿಳಿಯದವನು ಮನೋಹರವಾಗಿ ಮಾತನಾಡಲಾರನೆಂದು ಅರ್ಥ)

ಹೀಗೆ ಒಮ್ಮೆ ಗೋಷ್ಠಿ ಸಮಯದಲ್ಲಿ ಚಿತ್ರಾಂಗನು ಬರಲಿಲ್ಲ. ಆಗ ಮಿಕ್ಕವರು ವ್ಯಾಕುಲಗೊಂಡು ಪರಸ್ಪರ ಮಾತನಾಡಿಕೊಂಡರು – “ಓಹೋ ಏನಿಂದು ಮಿತ್ರನು ಬರಲಿಲ್ಲ ? ಸಿಂಹದ ಬಾಯಿಗೇನಾದರೂ ಬಿದ್ದನೇ ? ಅಥವಾ ಬೇಟೆಗಾರರಿಗೆ ಸಿಕ್ಕನೇ ? ಅಥವಾ ಎಳೆಹುಲ್ಲಿನ ಆಸೆಯಿಂದ ಅಗ್ನಿಯಲ್ಲಿ ಅಥವಾ ಕಂದಕದಲ್ಲಿ ಬಿದ್ದನೇ ? ಈ ಒಂದು ಉಕ್ತಿಯು ಸೂಕ್ತವಾಗಿಯೇ ಇದೆ – ನನ್ನ ಮನೆಯ ಉದ್ಯಾನಕ್ಕೆ ಹೋದವನನ್ನೂ ಕೂಡ ಆತನನ್ನು ಪ್ರೀತಿಸಿವವರು ಮೋಹದಿಂದ ಆತನಿಗೆ ಏನು ಕೆಟ್ಟದಾಯಿತೋ ಎಂದು ಯೋಚಿಸುತ್ತಾರೆ. ಇನ್ನು ಅನೇಕ ಅಪಾಯಗಳಿಂದ ಕೂಡಿದ ಭಯಾನಕವಾದ ಅರಣ್ಯಕ್ಕೆ ಹೋದವನ ಬಗ್ಗೆ ಏನು ಹೇಳುವುದಿದೆ ?”

ಆಗ ಮಂಥರಕನು ಕಾಗೆಗೆ ಹೇಳಿದನು – “ಎಲೈ ಲಘುಪತನಕ, ನಾನು ಹಾಗೂ ಹಿರಣ್ಯಕನು ಮಂದಗತಿಯವರಾದ್ದರಿಂದ ಆತನನ್ನು ಹುಡುಕುವುದರಲ್ಲಿ ಅಶಕ್ತರಾಗಿದ್ದೇವೆ. ಆದ್ದರಿಂದ ನೀನು ಅವನೆಲ್ಲಾದರೂ ಜೀವಂತವಾಗಿರುವನೇ ಎಂದು ಅರಣ್ಯವನ್ನು ಹುಡುಕು.”

ಅದನ್ನು ಕೇಳಿದ ಲಘುಪತನಕನು ಹುಡುಕಿಕೊಂಡು ಹೋದಾಗ ಸ್ವಲ್ಪ ದೂರದಲ್ಲೇ ನೀರಿನ ಹೊಂಡದ ಬದಿಯಲ್ಲಿ ಬಲೆಯಲ್ಲಿ ಸಿಕ್ಕಿಕೊಂಡ ಚಿತ್ರಾಂಗನನ್ನು ನೋಡಿದನು. ಅವನನ್ನು ನೋಡಿ ದುಃಖದ ಮನಸ್ಸಿನಿಂದ ಏನಿದೆಂದು ಕೇಳಲು ಚಿತ್ರಾಂಗನು ಕಾಗೆಯನ್ನು ನೋಡಿ ಮತ್ತೂ ದುಃಖಗೊಂಡನು. ಪ್ರಾಯಶಃ ಪ್ರಾಣಿಗಳಲ್ಲಿ ಕಡಿಮೆಯಾದ ದುಃಖವು ಇಷ್ಟಜನರನ್ನು ನೋಡಿದಾಗ ಮತ್ತೆ ಹೆಚ್ಚಾಗುತ್ತದೆ. ಆಗ ಕಣ್ಣಲ್ಲಿ ನೀರು ತುಂಬಿದ ಚಿತ್ರಾಂಗನು ಲಘುಪತನಕನಿಗೆ ಹೇಳಿದನು – “ಮಿತ್ರನೇ, ನನ್ನ ಸಾವು ಸಮೀಪಿಸಿದೆ, ನಿನ್ನ ದರ್ಶನವಾದದ್ದು ಒಳ್ಳೆಯದಾಯಿತು. ಪ್ರಾಣತ್ಯಾಗದ ಸಮಯವು ಹತ್ತಿರ ಬಂದಾಗ ಮಿತ್ರದರ್ಶನವಾದರೆ ಅದು ಸಾಯುತ್ತಿರುವವನಿಗೂ ಹಾಗೂ ಆತನ ಮಿತ್ರನಿಗೂ ಸುಖದಾಯಕವು. ಸುಭಾಷಿತ ಗೋಷ್ಠಿಯ ಸಮಯದಲ್ಲಿ ಪ್ರೀತಿಯಿಂದ ನಾನೇನಾದರೂ ಬೇಡದ್ದನ್ನು ನುಡಿದಿದ್ದರೆ ಕ್ಷಮಿಸು. ಹಾಗೂ ಹಿರಣ್ಯಕ ಮತ್ತು ಮಂಥರಕ ರಿಗೆ ನನ್ನ ಈ ಮಾತುಗಳನ್ನು ಹೇಳು – ‘ತಿಳಿದೋ ತಿಳಿಯದೆಯೋ ನಾನೇನಾದರೂ ನುಡಿಯಬಾರದ್ದನ್ನು ನುಡಿದಿದ್ದರೆ, ನನ್ನಲ್ಲಿ ನೀವಿಬ್ಬರೂ ಪ್ರೀತಿಯನ್ನಿರಿಸಿ ಕ್ಷಮಿಸಿ’”

ಇದನ್ನು ಕೇಳಿದ ಲಘುಪತನಕ – “ಭದ್ರನೇ, ನಾವಿರುವವರೆಗೆ ನೀನು ಭಯ ಪಡಬೇಕಿಲ್ಲ. ನಾನು ಬೇಗನೆ ಹಿರಣ್ಯಕನನ್ನು ಕರೆದುಕೊಂಡು ಬರುವೆನು. ಸತ್ಪುರುಷರು ಕಷ್ಟಕಾಲದಲ್ಲಿ ದುಃಖವನ್ನು ಪಡುವುದಿಲ್ಲ. ಯಾರು ಸುಖದಲ್ಲಿ ಹಿಗ್ಗದೆ, ದುಃಖದಲ್ಲಿ ಕುಗ್ಗದೆ, ರಣರಂಗದಲ್ಲಿ ಹೇಡಿತನವನ್ನು ತೋರದೆ ಮೂರು ಲೋಕಗಳಿಗೂ ತಿಲಕಪ್ರಾಯರಾಗಿ ಇರುತ್ತಾನೋ ಅಂತಹ ಮಗನನ್ನು ತಾಯಿಯು ಹೆರುವುದು ವಿರಳ.”

ಹೀಗೆ ಲಘುಪತನಕನು ಚಿತ್ರಾಂಗನಿಗೆ ಆಶ್ವಾಸನೆಯನ್ನು ಕೊಟ್ಟು ಹಿರಣ್ಯಕ – ಮಂಥರಕರಿರುವಲ್ಲಿಗೆ ಬಂದು ಚಿತ್ರಾಂಗನು ಬಂಧಿತನಾಗಿರುವುದನ್ನು ಹೇಳಿದನು. ಚಿತ್ರಾಂಗನನ್ನು ಪಾಶದಿಂದ ಬಿಡಿಸಲು ಹಿರಣ್ಯಕನನ್ನು  ಬೆನ್ನಿನ ಮೇಲೆ ಕೂರಿಸಿಕೊಂಡು ಬೇಗನೆ ಚಿತ್ರಾಂಗನ ಬಳಿಗೆ ಬಂದನು.

ಚಿತ್ರಾಂಗನು ಇಲಿಯನ್ನು ನೋಡಿದ ಮೇಲೆ ಬದುಕುವ ಆಸೆಯು ಸ್ವಲ್ಪ ಹೆಚ್ಚಾಗಿ ಹೀಗೆ ನುಡಿದನು – “ಆಪತನ್ನು ಕಳೆದುಕೊಳ್ಳಲು ಬುದ್ಧಿವಂತರು ದೋಷವಿಲ್ಲದ ಮಿತ್ರರನ್ನು ಮಾಡಿಕೊಳ್ಳಬೇಕು. ಮಿತ್ರರಿಲ್ಲದವನು ಎಂದಿಗೂ ಆಪತ್ತಿನಿಂದ ಹೊರಬರಲಾರ.”

ಹಿರಣ್ಯಕ – “ಭದ್ರ, ನೀನು ನೀತಿಶಾಸ್ತ್ರಜ್ಞನು ಮತ್ತು ಬುದ್ಧಿವಂತನು. ಆದರೂ ಈ ಬಲೆಯಲ್ಲಿ ಹೇಗೆ ಬಿದ್ದೆ ?”

ಚಿತ್ರಾಂಗ – “ಇದು ವಾದ-ವಿವಾದ ಮಾಡುವ ಸಮಯವಲ್ಲ. ಆ ದುಷ್ಟ ಬೇಡನು ಬರುವುದರೊಳಗೆ ಈ ಬಲೆಯನ್ನು ತುಂಡರಿಸು.”

ಹಿರಣ್ಯಕ – “ನಾನು ಬಂದ ಮೇಲೂ ಬೇಟೆಗಾರನಿಗೆ ಏಕೆ ಹೆದರುವೆ ? ನಿನ್ನಂತಹ ನೀತಿ ಶಾಸ್ತ್ರಜ್ಞನೂ ಕೂಡ ಈ ಅವಸ್ಥೆಯನ್ನು ಪಡೆಯುತ್ತಾನೆಂದು ನೋಡಿದ ಮೇಲೆ ನನಗೆ ಶಾಸ್ತ್ರದ ಮೇಲೆ ಮಹಾವೈರಾಗ್ಯವುಂಟಾಗಿದೆ. ಆದ್ದರಿಂದ ಕೇಳಿದೆನು.”

ಚಿತ್ರಾಂಗ – “ಭದ್ರ, ಕರ್ಮದ ಫಲದಿಂದ ಬುದ್ಧಿಯೂ ಕೂಡ ನಾಶವಾಗುತ್ತದೆ. ಮಹಾತ್ಮರಾದರೂ ಕೂಡ ಯಮನ ಪಾಶದಿಂದ ಕಟ್ಟಲ್ಪಟ್ಟವರ ಹಾಗೂ ವಿಧಿವಶದಿಂದ ವಿವೇಕಭ್ರಷ್ಟರಾದವರ ಬುದ್ಧಿಯು ಸರಿಯಾದ ಮಾರ್ಗದಲ್ಲಿ ನಡೆಯುವುದಿಲ್ಲ. ಬ್ರಹ್ಮನು ಹಣೆಯ ಮೇಲೆ ಬರೆದ ಅಕ್ಷರಮಾಲೆಯನ್ನು ತಮ್ಮ ಬುದ್ಧಿಯಿಂದ ಪಂಡಿತರೂ ಕೂಡ ಅಳಿಸಲು ಶಕ್ತರಲ್ಲ.”

ಹೀಗೆ ಅವರು ಮಾತನಾಡುತ್ತಿರಲು, ಮಿತ್ರನ ವ್ಯಸನದಿಂದ ದುಃಖಗೊಂಡ ಮಂಥರಕನು ಮೆಲ್ಲನೆ ಅವರಿದ್ದ ಸ್ಥಳಕ್ಕೆ ಬಂದನು. ಅವನನ್ನು ನೋಡಿ ಲಘುಪತನಕನು ಹಿರಣ್ಯಕನಿಗೆ ಹೇಳಿದನು – “ಇದು ಶುಭವಲ್ಲ”

ಹಿರಣ್ಯಕ- “ಏನು ಆ ಬೇಡನು ಬಂದನೇ ?”

ಲಘುಪತನಕ – “ಆ ಬೇಡನ ವಿಷಯ ಹಾಗಿರಲಿ, ಮಂಥರಕನು ಬರುತ್ತಿದ್ದಾನೆ. ಅವನು ನೀತಿಯಂತೆ ನಡೆಯಲ್ಲಿಲ್ಲ. ಅವನ ಕಾರಣದಿಂದ ನಾವೆಲ್ಲರೂ ಖಂಡಿತ ಕೊಲ್ಲಲ್ಪಡುತ್ತೇವೆ. ಆ ಪಾಪಾತ್ಮ ಬೇಡನು ಬಂದರೆ ನಾನು ಆಕಾಶಕ್ಕೆ ಹಾರುತ್ತೇನೆ, ನೀನು ಪುನಃ ಬಿಲವನ್ನು ಪ್ರವೇಶಿಸಿ ನಿನ್ನನ್ನು ರಕ್ಷಿಸಿಕೊಳ್ಳುವೆ. ಚಿತ್ರಾಂಗನೂ ವೇಗದಿಂದ ಓಡಿಹೋಗುವನು. ಆದರೆ ಜಲಚರನಾದ ಮಂಥರಕನು ಏನು ಮಾಡುವನು ಎಂದು ಚಿಂತಿಸುತ್ತಿರುವೆನು”

ಅಷ್ಟರಲ್ಲಿ ಮಂಥರಕನು ಬಂದನು.

ಹಿರಣ್ಯಕ – “ಭದ್ರ, ನೀನು ಇಲ್ಲಿ ಬಂದು ಸರಿಯಾದುದನ್ನು ಮಾಡಿಲಿಲ್ಲ. ಆದ್ದರಿಂದ ಬೇಡನು ಬರುವುದರೊಳಗೆ ಮತ್ತೆ ವೇಗದಿಂದ ಹೊರಟುಹೋಗು”

ಮಂಥರಕ – “ಭದ್ರ, ಏನು ಮಾಡಲಿ ? ಬೆಂಕಿಯ ಉರಿಯಂತಿರುವ ಮಿತ್ರನಿಗಾದ ದುಃಖವನ್ನು ತಡೆಯಲಾರದೆ ಬಂದಿರುವೆನು. ಮಿತ್ರರೊಂದಿಗೆ ಮಿಲನಮೆಂಬ ಮಹೌಷಧಿಯಿಲ್ಲದಿದ್ದರೆ ಪ್ರಿಯಜನರ ವಿಯೋಗದ ಅಥವಾ ಧನವಿಯೋಗದ ದುಃಖವನ್ನು ಯಾರಿಂದ ತಾನೆ ಸಹಿಸಲು ಸಾಧ್ಯ ? ನಿಮ್ಮಂಥವರ ವಿಯೋಗಕ್ಕಿಂತ ಪ್ರಾಣತ್ಯಾಗವೇ ಒಳ್ಳೆಯದು. ಜನ್ಮಾಂತರದಲ್ಲಿ ಪ್ರಾಣವನ್ನು ಮತ್ತೆ ಪಡೆಯಬಹುದು ಆದರೆ ನಿಮ್ಮಂಥ ಮಿತ್ರರನ್ನು ಮತ್ತೆ ಪಡೆಯಲಾಗುವುದಿಲ್ಲ.”

ಹೀಗೆ ಅವನು ನುಡಿಯುತ್ತಿದಾಗ ಕಿವಿಯವರೆಗೆ ಬಿಲ್ಲಿನ ತಂತಿಯನ್ನು ಎಳೆದು ಹಿಡಿದಿರುವ ಬೇಡನು ಬಂದನು. ಅವನನ್ನು ನೋಡಿದ ಹಿರಣ್ಯಕನು ಗಟ್ಟಿಯಾದ ಹಗ್ಗದಿಂದ ಮಾಡಿದ್ದ ಬಲೆಯನ್ನು ತುಂಡರಿಸಿದನು.

ಆಗ ಚಿತ್ರಾಂಗನು ಹಿಂದೆ ನೋಡುತ್ತಾ ವೇಗವಾಗಿ ಓಡಿ ಹೋದನು. ಲಘುಪತನಕ ವೃಕ್ಷವನ್ನೇರಿದನು. ಹಿರಣ್ಯಕನು ಸಮೀಪದಲ್ಲಿರುವ ಬಿಲವನ್ನು ಹೊಕ್ಕನು.

ಆಗ ಜಿಂಕೆಯು ಓಡಿ ಹೋದ್ದರಿಂದ ತನ್ನ ಶ್ರಮವು ವ್ಯರ್ಥವಾದ ದುಃಖದಲ್ಲಿದ್ದ ಬೇಡನು ಮೆಲ್ಲಮೆಲ್ಲನೆ ಹೋಗುತ್ತಿರುವ ಆಮೆಯನ್ನು ನೋಡಿದನು ಮತ್ತು ಹೀಗೆ ಚಿಂತಿಸಿದನು – “ದೇವರು ಆ ಜಿಂಕೆಯನ್ನು ಕೊಡದಿದ್ದರೂ ಈ ಆಮೆಯನ್ನು ಕೊಟ್ಟಿರುವನು. ಇದರ ಮಾಂಸದಿಂದ ನನ್ನ ಕುಟುಂಬದ ಹಸಿವು ನೀಗುವುದು.

ಹೀಗೆ ಯೋಚಿಸಿ ಅವನು ಆಮೆಯನ್ನು ದರ್ಬೆಯಿಂದ ಬಾಣಕ್ಕೆ ಕಟ್ಟಿ ಬಾಣವನ್ನು ಹೆಗಲಿಗೆ ಹಾಕಿಕೊಂಡು ಮನೆಯ ಕಡೆಗೆ ನಡೆಯತೊಡಗಿದನು.

ಮಂಥರಕನನ್ನು ಬೇಡನು ಹೊತ್ತುಕೊಂಡು ಹೋಗುತ್ತಿರುವುದನ್ನು ನೋಡಿ ದುಃಖದಿಂದ ಹಿರಣ್ಯಕನು ಹೀಗೆ ರೋದಿಸಿದನು – “ಅಯ್ಯೋ, ಕಷ್ಟವು ಬಂದೊದಗಿತು. ಸಮುದ್ರವನ್ನು ದಾಟುವಷ್ಟು ಕಷ್ಟವಾದ ಒಂದು ದುಃಖವು ಕಳೆದಕೂಡಲೇ ಮತ್ತೊಂದು ದುಃಖವು ಬಂದೊದಗಿತು. ಕಷ್ಟಕಾಲದಲ್ಲಿ ಅನೇಕ ರೀತಿಯ ತೊಂದರೆಗಳು ಬರುತ್ತವೆ. ಸಮವಾದ ಮಾರ್ಗದಲ್ಲಿ ಮನುಷ್ಯನು ಎಡವುವವರೆಗೆ ಸುಖವಾಗಿ ನಡೆಯುತ್ತಾನೆ. ಒಮ್ಮೆ ಎಡವಿದರೆ ಹೆಜ್ಜೆ ಹೆಜ್ಜೆಗೂ ತೊಂದರೆಗಳೇ ಬರುತ್ತವೆ. ನಮ್ರತೆಯಿಂದ ಕೂಡಿದ, ಗುಣಗಳುಳ್ಳ ಮತ್ತು ಕಷ್ಟದಲ್ಲಿ ಕುಗ್ಗದ ಶುದ್ಧವಂಶದಲ್ಲಿ ಹುಟ್ಟಿದ ಧನಸ್ಸು, ಮಿತ್ರ ಮತ್ತು ಹೆಂಡತಿ ಸಿಗುವುದು ಕಷ್ಟ. ಮನುಷ್ಯರಿಗೆ ಯಾವಾಗಲೂ ಮಿತ್ರರಲ್ಲಿ ಯಾವ ರೀತಿಯ ವಿಶ್ವಾಸ ಇರುತ್ತದೆಯೋ ಅಂಥ ವಿಶ್ವಾಸ ತಾಯಿಯಲ್ಲಿ, ಹೆಂಡತಿಯರಲ್ಲಿ, ಸೋದರನಲ್ಲಿ ಅಥವಾ ಮಗನಲ್ಲೂ ಇರುವುದಿಲ್ಲ. ದೇವರು ನನ್ನ ಧನವನ್ನು ನಾಶಮಾಡಿದನು, ಆಗಬಹುದು ಆದರೆ ಜೀವನಮಾರ್ಗದಲ್ಲಿ ದಣಿದ ನನಗೆ ವಿಶ್ರಾಂತಿಯನ್ನು ಕೊಟ್ಟ ಮಿತ್ರನನ್ನು ಏಕೆ ಅಪಹರಿಸಿದನೋ ? ಅಲ್ಲದೆ ಮಂಥರಕನಂತ ಇನ್ನೊಬ್ಬ ಮಿತ್ರನಿರಲು ಸಾಧ್ಯವಿಲ್ಲ. ಮೈತ್ರಿಯ ಫಲವು ಮೂರು – ಧನವಿಲ್ಲದಿದ್ದಾಗ ಮಿತ್ರನು ಉಪಸ್ಥಿತಿನಿದ್ದು ಆಗುವ ಮಹಾಲಾಭ, ರಹಸ್ಯಗಳ ಕಥನ ಮತ್ತು ವಿಪತ್ತಿನಿಂದ ರಕ್ಷಣೆ. ಇವನ ನಂತರ ನನಗಾರು ಮಿತ್ರರಿಲ್ಲ. ಅಯ್ಯೋ ವಿಧಿಯು ಹೀಗೆ ಕಷ್ಟವೆಂಬ ಬಾಣಗಳನ್ನು ಏಕೆ ಸುರಿಸುತ್ತದೆಯೋ ? ಮೊದಲು ಧನನಾಶ, ನಂತರ ಪರಿವಾರದವರ ತ್ಯಾಗ, ನಂತರ ದೇಶ ತ್ಯಾಗ ಮತ್ತು ಈಗ ಮಿತ್ರವಿಯೋಗ. ಅಥವಾ ಎಲ್ಲಾ ಪ್ರಾಣಿಗಳ ಲಕ್ಷಣವೂ ಹೀಗೆಯೇ ಏನೋ ಮತ್ತು ಇದೇ ಜೀವನ ಧರ್ಮವೇನೋ. ಹೇಗೆ ಯಾವಾಗಲೂ ಜೀವಿಗಳ ದೇಹಕ್ಕೆ ನಾಶದ ಅಪಾಯವು ಹತ್ತಿರವೇ ಇರುತ್ತದೆಯೋ, ಸಂಪತ್ತಿಗೂ ಕೂಡ ಹಾಗೆಯೇ. ದೇಹದಂತೆ ಸಂಪತ್ತು ಕೂಡ ಕ್ಷಣದಲ್ಲೇ ನಾಶವಾಗುವಂತಹುದು, ಬರುತ್ತದೆ ಮತ್ತು ಕಳೆದುಹೋಗುತ್ತದೆ. ಗಾಯವಾದ ಕಡೆಯೇ ಮತ್ತೆ ಮತ್ತೆ ಪೆಟ್ಟು ಬೀಳುತ್ತದೆ, ಹಣವಿಲ್ಲದುರುವಾಗ ಹಸಿವು ಅಧಿಕವಾಗಿರುತ್ತದೆ, ಆಪತ್ಕಾಲದಲ್ಲಿ ವೈರಿಗಳು ವಿಜೃಂಭಿಸುತ್ತಾರೆ ಹಾಗೂ ದುಃಖದ ಸಮಯದಲ್ಲಿ ಅನೇಕ ಅನರ್ಥಗಳು ಸಂಭವಿಸುತ್ತವೆ. ಅಯ್ಯೋ ಯಾರೋ ಹೀಗೆ ಸರಿಯಾಗಿಯೇ ನುಡಿದಿದ್ದಾರೆ – ಭಯದಿಂದ ರಕ್ಷಿಸುವ ಮತ್ತು ಪ್ರೀತಿ ವಿಶ್ವಾಸಕ್ಕೆ ಪಾತ್ರವಾದ ಈ ‘ಮಿತ್ರ’ ಎಂಬ ಎರಡಕ್ಷರದ ರತ್ನವನ್ನು ಯಾರು ತಾನೆ ಸೃಷ್ಟಿಸಿದರೋ ?”

ಅಷ್ಟರಲ್ಲಿ ಆಕ್ರಂದನವನ್ನು ಮಾಡುತ್ತಾ ಚಿತ್ರಾಂಗ ಮತ್ತು ಲಘುಪತನಕ ಅಲ್ಲಿಗೆ ಬಂದರು.

ಆಗ ಹಿರಣ್ಯಕನು ಹೇಳಿದನು – “ಸುಮ್ಮನೆ ದುಃಖಿಸುವುದರಿಂದೇನು ಪ್ರಯೋಜನ ? ಮಂಥರಕನು ನಮ್ಮ ದೃಷ್ಟಿಯಿಂದ ದೂರ ಹೋಗುವುದರೊಳಗೆ ಅವನನ್ನು ಬಿಡಿಸುವ ಉಪಾಯವನ್ನು ಮಾಡೋಣ. ಆಪತ್ತು ಬಂದಾಗ ಕೇವಲ ಮೋಹದಿಂದ ವಿಲಾಪಿಸಿದರೆ ಅದು ದುಃಖವನ್ನು ಹೆಚ್ಚುಸುತ್ತದೆಯೇ ಹೊರತು ಅದರಿಂದ ಆಪತ್ತಿನ ಪರಿಹಾರವಾಗುವುದಿಲ್ಲ. ಶೋಕವನ್ನು ಬಿಟ್ಟು ಆಪತ್ತನ್ನು ಹೋಗಲಾಡಿಸಲು ಪ್ರಯತ್ನಶೀಲನಾಗುವುದು ಆಪತ್ತಿಗೆ ಇರುವ ಒಂದೇ ಮದ್ದು ಎಂದು ನೀತಿಶಾಸ್ತಜ್ಞರು ಹೇಳಿದ್ದಾರೆ. ಹಿಂದೆ ಗಳಿಸಿದ ಲಾಭದ ರಕ್ಷಣೆಗೆ, ಮುಂದೆ ಗಳಿಸಬಹುದಾದ ಲಾಭದ ಪ್ರಯತ್ನಕ್ಕೆ ಹಾಗೂ ಈಗ ಬಂದಿರುವ ಆಪತ್ತಿನ ನಿವಾರಣೆಗೆ ಮಾಡಿದ ಮಂತ್ರಾಲೋಚನೆಯೇ ನಿಜವಾದ ಮಂತ್ರಾಲೋಚನೆ ಎಂದೆನಿಸುತ್ತದೆ.”

ಅದನ್ನು ಕೇಳಿ ಕಾಗೆ ಹೇಳಿತು – “ಹಾಗಿದ್ದರೆ, ನಾನು ಹೇಳುವಂತೆ ಮಾಡಿ. ಈ ಚಿತ್ರಾಂಗನು ಬೇಡನ ದಾರಿಯಲ್ಲಿ ಹೋಗಿ ಯಾವುದಾದರೂ ನೀರಿನ ಹೊಂಡದ ಬಳಿ ಸತ್ತಂತೆ ಬಿದ್ದುಕೊಳ್ಳಲಿ. ನಾನು ಅವನ ತಲೆಯ ಮೇಲೆ ಕುಳಿತು ಮೆಲ್ಲಗೆ ನನ್ನ ಕೊಕ್ಕಿನಿಂದ ಚುಚ್ಚುತ್ತಿರುವೆನು. ಅದನ್ನು ನೋಡಿದ ದುಷ್ಟ ಬೇಡನು ಜಿಂಕೆಯು ಸತ್ತಿದೆಯೆಂದು ಮಂಥರಕನನ್ನು ಬಿಟ್ಟು ಓಡಿ ಬರುವನು. ಆಗ ನೀನು ಬೇಗನೆ ಮಂಥರಕನಿಗೆ ಕಟ್ಟಿದ ದರ್ಬೆಯ ಗಂಟನ್ನು ತುಂಡರಿಸು. ಆಗ ಅವನು ನೀರಿನ ಹೊಂಡವನ್ನು ಸೇರುವನು.”

ಚಿತ್ರಾಂಗ – “ನೀನು ಹೇಳಿದ ಉಪಾಯ ಸರಿಯಾಗಿದೆ. ಖಂಡಿತವಾಗಿಯೂ ಮಂಥರಕನು ಮುಕ್ತನಾದನೆಂದೇ ತಿಳಿಯಬಹುದು. ಕಾರ್ಯಾರಂಭಕ್ಕೆ ಮುನ್ನ ತೋರಿಸುವ ಉತ್ಸಾಹವೇ ಕಾರ್ಯವು ಸಿದ್ಧಿಸುತ್ತದೆಯೋ ಅಥವಾ ಇಲ್ಲವೋ ಎಂಬುದನ್ನು ತಿಳಿಸುತ್ತದೆ. ಇದನ್ನು ಬುದ್ಧಿವಂತರು ಬಲ್ಲರೇ ಹೊರತು ಬೇರೆಯವರು ತಿಳಿದಿಲ್ಲ. ಆದ್ದರಿಂದ ಹಾಗೆಯೇ ಮಾಡೋಣ.”

ಹಾಗೆಯೇ ಮಾಡಿದಾಗ ಬೇಡನು ಬರುತ್ತಿದ್ದ ಮಾರ್ಗದಲ್ಲಿದ್ದ ನೀರಿನ ಹೊಂಡದ ತೀರದಲ್ಲಿ ಚಿತ್ರಾಂಗನು ಬಿದ್ದುರುವುದನ್ನು ಮತ್ತು ಅದರ ಮೇಲೆ ಕಾಗೆಯು ಕುಳಿತಿರುವುದನ್ನು ನೋಡಿದನು. ಅದನ್ನು ನೋಡಿ ಹರ್ಷದಿಂದ ಚಿಂತಿಸಿದನು – “ಖಂಡಿತವಾಗಿಯೂ ಈ ದೀನವಾದ ಜಿಂಕೆಯು ಬಲೆಯಲ್ಲಿ ಬಂಧಿಸಲ್ಪಟ್ಟ ನೋವಿನಿಂದ ಸ್ವಲ್ಪ ಪ್ರಾಣವನ್ನು ಇನ್ನೂ ಉಳಿಸಿಕೊಂಡು ಬಲೆಯನ್ನು ತುಂಡರಿಸಿಕೊಂಡು ಹೇಗೋ ಇಲ್ಲಿಯವರೆಗೆ ಬಂದು ಸತ್ತುಹೋಗಿದೆ. ಸರಿಯಾಗಿ ಕಟ್ಟಲ್ಪಟ್ಟ ಈ ಆಮೆಯು ನನ್ನ ವಶದಲ್ಲಿದೆ, ಜೊತೆಗೆ ಈ ಜಿಂಕೆಯನ್ನು ಈಗ ಹಿಡಿದುಕೊಳ್ಳುವೆನು.” ಹೀಗೆ ಯೋಚಿಸಿ ಆಮೆಯನ್ನು ನೆಲದ ಮೇಲಿಟ್ಟು ಜಿಂಕೆಯ ಬಳಿಗೆ ಓಡಿದನು.

ಈ ಮಧ್ಯೆ ಹಿರಣ್ಯಕನು ತನ್ನ ವಜ್ರಸದೃಶವಾದ ಹಲ್ಲಿನಿಂದ ದರ್ಬೆಯನ್ನು ತುಂಡರಿಸಿದನು. ಮಂಥರಕನು ಹುಲ್ಲುಗಳ ಮಧ್ಯದಿಂದ ತೆರಳಿ ಸಮೀಪದಲ್ಲಿದ್ದ ನೀರಿನ ಹೊಂಡವನ್ನು ಪ್ರವೇಶಿಸಿದನು. ಚಿತ್ರಾಂಗನು ಬೇಡನು ತಲುಪುವ ಮೊದಲೇ ಅಲ್ಲಿಂದ ಎದ್ದು ಕಾಗೆಯೊಂದಿಗೆ ಓಡಿಹೋದನು. ಆಗ ನಾಚಿಕೆ ಹಾಗೂ ದುಃಖದಿಂದ ಬೇಡನು ಹಿಂದಿರುಗಿ ಬಂದು ನೋಡಿದಾಗ ಅಲ್ಲಿ ಆಮೆಯೂ ಇರಲಿಲ್ಲ. ಅವನು ಅಲ್ಲಿ ಕುಳಿತು ಈ ಶ್ಲೋಕವನ್ನು ಪಠಿಸಿದನು –

“ಎಲೈ ವಿಧಿಯೇ, ದೊಡ್ಡದಾದ ಜಿಂಕೆಯು ಪ್ರಾಪ್ತವಾಯಿತು. ಅದು ಬಂಧಿಸಲ್ಪಟ್ಟರೂ ನಿನ್ನಿಂದ ಅಪಹರಿಸಲ್ಪಟ್ಟಿತು. ಆಮೆಯೊಂದು ಒದಗಿತು ಆದರೆ ನಿನ್ನ ಆದೇಶದಂತೆ ಅದೂ ಕೂಡ ನಾಶವಾಗಿ ಹೋಯಿತು. ಮಡದಿ-ಮಕ್ಕಳಿನಿಂದ ದೂರನಾದ ನಾನು ಹಸಿವಿನಿಂದ ಈ ಅಡವಿಯಲ್ಲಿ ಅಲೆಯುತ್ತಿದ್ದೇನೆ. ಇನ್ನೇನಾದರೂ ಮಾಡುವುದಿದ್ದರೆ ಅದನ್ನೂ ಮಾಡಿಬಿಡು, ಅದನ್ನೂ ನಾನು ಸಹಿಸಲೇ ಬೇಕಲ್ಲವೇ”

ಹೀಗೆ ಬಹುವಿಧದಲ್ಲಿ ರೋದಿಸಿ ತನ್ನ ಮನೆಗೆ ತೆರಳಿದನು. ಬೇಡನು ದೂರ ಸರಿಯಲು ಕಾಗೆ, ಆಮೆ, ಜಿಂಕೆ ಮತ್ತು ಕಾಗೆ ಎಲ್ಲರೂ ಪರಮಾನಂದದಿಂದ ಪರಸ್ಪರ ಆಲಿಂಗಿಸಿಕೊಂಡು ತಮಗೆ ಪುನರ್ಜನ್ಮವಾದಂತೆ ಭಾವಿಸಿಕೊಂಡು ಅದೇ ಸರೋವರವನ್ನು ತಲುಪಿ ತುಂಬಾ ಸಂತೋಷದಿಂದ ಸುಭಾಷಿತ ಕಥಾಗೋಷ್ಠಿಗಳನ್ನು ಮಾಡುತ್ತಾ ಕಾಲವನ್ನು ಕಳೆಯುತ್ತಿದ್ದರು.

ಹೀಗೆ ಅರಿತುಕೊಂಡು ವಿವೇಕಿಗಳು ಮಿತ್ರರನ್ನು ಸಂಪಾದಿಸಬೇಕು. ಮಿತ್ರರೊಂದಿಗೆ ಕಪಟದ ವ್ಯವಹಾರವನ್ನು ಮಾಡಬಾರದು. ಏಕೆಂದರೆ ಯಾರು ಮಿತ್ರರನ್ನು ಗಳಿಸಿಕೊಂಡು ಅವರೊಂದಿಗೆ ಕಪಟತನದಿಂದ ವರ್ತಿಸುವುದಿಲ್ಲವೋ ಅವರು ಎಂದಿಗೂ ಪರಾಭವವನ್ನು ಹೊಂದುವುದಿಲ್ಲ.

*** ಇಲ್ಲಿಗೆ ವಿಷ್ಣುಶರ್ಮವಿರಚಿತ ಪಂಚತಂತ್ರದ ಎರಡನೆಯ ತಂತ್ರವಾದ ಮಿತ್ರಸಂಪ್ರಾಪ್ತಿಯು ಸಂಪೂರ್ಣವಾಯಿತು ***

ಪಂಚತಂತ್ರ ಮೂರನೆಯ ತಂತ್ರವಾದ ಕಾಕೋಲೂಕೀಯವನ್ನು ಇಲ್ಲಿ ಓದಬಹುದು

Leave a comment